ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮತ್ತೆ ಮನಸಾಗಿದೆ

ಕವಿತಾ ಹೆಗಡೆ
ಇತ್ತೀಚಿನ ಬರಹಗಳು: ಕವಿತಾ ಹೆಗಡೆ (ಎಲ್ಲವನ್ನು ಓದಿ)

ಇರುಳು ಕಳೆದು ತಮವು ಸರಿದು
ಕವಿದ ಮೋಡ ಹರಿದು ಸುರಿದು
ಮತ್ತೆ ಮಳೆಯಾಗಿದೆ

ಮುನಿಸು ಮರೆತು ಆಸೆ ಚಿಗಿತು
ಮೊದಲ ಪ್ರೇಮ ತಂದ ಪುಳಕ
ಮತ್ತೆ ನೆನಪಾಗಿದೆ

ನೀನು ಸುರಿದ ಒಲವ ಧಾರೆ
ಸಾಟಿಯಿರದ ಮಧುರ ಸರಸ
ಮತ್ತೆ ಬೇಕಾಗಿದೆ

ನಿನ್ನ ವಿನಃ ಕಳೆದ ಬದುಕು
ಬರಡು ಎನಿಸಿ ಮನವ ಒಲಿಸಿ
ಮತ್ತೆ ಬದಲಾಗೆಂದಿದೆ

ಒಂದು ವಿರಸ ಇತ್ತ ವಿರಹ
ಕಳೆದು ಪುನಃ ನಿನ್ನ ಒಲವ
ಮತ್ತೆ ಕೊಡು ಎಂದಿದೆ

ನಿನ್ನ ಎದೆಯ ಗೂಡಿನಲ್ಲಿ
ಸದಾ ನಾನೇ ರಾಣಿಯಾಗಿ
ಮೆರೆವ ಆಸೆ ಮೂಡಿದೆ
ಕನಸು ಬಲವಾಗಿದೆ
ಮತ್ತೆ ಮನಸಾಗಿದೆ