ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಜಯ ಸಾಲ್ಯಾನ್

ಜಯ ಸಾಲ್ಯಾನ್‌ ಕಲಾವಿದರಾಗಿ, ಕಲಾ ಶಿಕ್ಷಕರಾಗಿ, ಮಾರ್ಗದರ್ಶಕರಾಗಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರು ಮುಂಬಯಿಯಲ್ಲಿ ಅರಳಿದ ಪ್ರತಿಭೆ. ಅನೇಕ ಕಷ್ಟನಷ್ಟಗಳ ನಡುವೆ ಏಕಲವ್ಯನಂತೆ ಕಲಾಕ್ಷೇತ್ರದಲ್ಲಿ ಮೇಲೇರಿದವರು ಜಯ ಸಾಲ್ಯಾನ್‌. ಜಯ ಅವರದು ಬಹುಮುಖ ಪ್ರತಿಭೆ. ರೇಖಾ ಚಿತ್ರ, ವ್ಯಂಗ್ಯ ಚಿತ್ರ, ಭಿತ್ತಿ ಚಿತ್ರ ಮೊದಲಾದ ಚಿತ್ರ ಪ್ರಕಾರಗಳಲ್ಲಿ ಅವರು ಸೈ ಎನಿಸಿಕೊಂಡಿದ್ದಾರೆ. ಮುಂಬಯಿಯ ಪ್ರತಿಷ್ಠಿತ ಜೆ.ಜೆ. ಸ್ಕೂಲ್‌ ಆಫ್‌ ಆರ್ಟ್ಸ್‌ನಿಂದ ಪದವಿ ಪಡೆದ ಅವರು ದೇಶದ ಬೇರೆ ಬೇರೆ ಕಲಾ ಮಹಾವಿದ್ಯಾಲಯಗಳ ಅತಿಥಿ ಉಪನ್ಯಾಸಕರಾಗಿ ಅನೇಕ ಶಿಬಿರಗಳನ್ನು, ಕಮ್ಮಟಗಳನ್ನು ನಡೆಸಿಕೊಟ್ಟಿದ್ದಾರೆ. ಪ್ರಸ್ತುತ ಐ.ಟಿ.ಎಂ. ವಿಶ್ವವಿದ್ಯಾಲಯ ಅನಿಮೇಷನ್‌ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವ ಸಾಲ್ಯಾನ್‌ ಅವರಿಗೆ ಕನ್ನಡ, ತುಳು ಸಾಹಿತ್ಯ ಸಂಸ್ಕೃತಿಯ ಬಗೆಗೆ ವಿಶೇಷವಾದ ಅಭಿಮಾನ. ಇತ್ತೀಚೆಗಷ್ಟೇ ಮುಂಬಯಿ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುವ ಅವರು ಕಲಾ ವಿಷಯದ ಕುರಿತು ಡಾಕ್ಟರೇಟ್‌ ಪದವಿ ಗಳಿಸಿಕೊಳ್ಳಬೇಕೆಂಬ ಹಂಬಲ ಹೊತ್ತು ಕಾರ್ಯೋನ್ಮುಖರಾಗಿದ್ದಾರೆ.