ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಇಂದು ಇಲ್ಲದಿದ್ದರೂ ಇಂದು…

ಪ್ರೇಮಶೇಖರ
ಇತ್ತೀಚಿನ ಬರಹಗಳು: ಪ್ರೇಮಶೇಖರ (ಎಲ್ಲವನ್ನು ಓದಿ)

ಚಂದ್ರ
ನಿಲ್ಲದ ರಾತ್ರಿ
ಯಾಗಸದ ತುಂಬ
ನಿದ್ದೆಗಣ್ಣಿನ ಗರತಿಯರ
ಸೋಬಾನೆ ಪದದ
ಅಮವಾಸ್ಯೆಯಂತೆ
ಇಂದು.

ಇಂದು
ನಾಳೆ ಹುಟ್ಬಹುದೆಂದು
ಕಾದು ಕೂತ ಗರತಿ
ಯ ಎದೆ
ತುಂಬ ಕಲ್ಲು
ಕರಗುವ ಹೊತ್ತಿನ ಕನಸು
ಗಳ ಕೋಲ,
ಕಣ್ಣ
ವೆಗಳು ಅಲ್ಲೋಲಕಲ್ಲೋಲ.

ಹೋಗಲಿ ಬಿಡು ಬಾ ಪಕ್ಕ
ಕೂರು,
ನನಗೊಂದು ಕಥೆ ಹೇಳು-
ನಿನ್ನ ಕಾಲ್ಗೆಜ್ಜೆ
ಜರಿಲಂಗದ್ದು ಮೇಲೆದ್ದ
ಪೋನಿಟೈಲಿನದು ಕುಂಟೋ
ಬಿಲ್ಲೆ ಮೇಲೆಬ್ಬಿಸಿದ
ಹೆಬ್ಬೆರಳಿನುಗುರಿನದು
ಇಡಿಯಾಗಿ ಅಡಗಿ
ಸಲು ಮತ್ತೆಮತ್ತೆ
ಹೆಣಗಿ ಸೋಲುತ್ತಿದ್ದ ದಾವಣಿ
ಯ ನೂರೊಂದು ಲಾವಣಿ
ಮೆಡಿ
ಕಲ್ಲಂಗಡಿ ಬಟ್ಟೆಯಂ
ಗಡಿಗಳಲ್ಲಿ ಸಣ್ಣದನಿ
ಯಲಿ ಪಿಸುಗಿದ್ದು ಏನಾದರೂ
ಸರಿ ನಿನ್ನದಾಗಿದ್ದ
ರೆ ಸಾಕು.
ಕವಿತೆಯಾಗಿ
ಸಬಹುದೇ ನೋಡುತ್ತೇನೆ.
ಅಷ್ಟರಲ್ಲಿ ಕೆಂಪು
ಗಟ್ಟಬಹುದು ಮೂಡಣದಲ್ಲಿ,

ಆಮೇಲೆ ಇದ್ದೇ ಇದೆ
ಚಹಾ
ಪಾತ್
ರೆ
ಗೀತ್
ರೆ
ಜತೆಗೆ ಹೊಗೆ
ಹಾರ್ನು ಕಲ
ಬೆರಕೆ ಮೂದಲಿಕೆ ಲಸಿಕೆ
ಬಿಸಿ ಡಾಮರು
ಕಣ್ಣು
ಮೂಗು
ಬಾಯಿ
ಚಡಪಡಿಕೆ,
ಗುರು
ತಾಗದ ನೀ
ರಡಿಕೆ

ಎಲ್ಲ ಹಾದು
ಮರಳಿ ಮನೆಗೆ
ಬರುವುದಿದ್ದೇ ಇದೆ,
ನನ್ನಲ್ಲಿ ಕ
ವನವೂ ನಿನ್ನಲ್ಲಿ ಸರ
ಕೂ
ಇರುತ್ತದೆ ಕೊಟ್ಟು
ಕೊಳ್ಳಲು ಇಂದು
ಇಲ್ಲದ ಅಮಾವಾಸ್ಯೆ ಕತ್ತಲ
ನು ಎದೆಬಾಗಿಲಲ್ಲೇ
ತಡೆದು ನಿಲ್ಲಿಸಲು ನೀ
ಕಿರುನಗೆ ಹೊಮ್ಮಿಸಲು ನಾ
ಕಟ್ಟಿದ ಕವನ
ಮಾಲೆಗೆ ಎದೆಮುಡಿ
ಯೊಡ್ಡಲು.

ಸಾಕಲ್ಲವೇ ಸಖೀ ಇಷ್ಟು
ಇಂದು?