ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕವಿಗಳು ಕಂಡ ಸಂಭ್ರಮದ ಯುಗಾದಿ.

ರಾಜೇಶ್ವರಿ ವಿಶ್ವನಾಥ್
ಇತ್ತೀಚಿನ ಬರಹಗಳು: ರಾಜೇಶ್ವರಿ ವಿಶ್ವನಾಥ್ (ಎಲ್ಲವನ್ನು ಓದಿ)

      ಚೈತ್ರ ಮಾಸ ಬಂತಂದರೆ ಇಡೀ ವಾತಾವರಣವೇ ಬದಲಾಗಿ ಹೊಸತನದಿಂದ ತುಂಬಿ ತುಳುಕುತ್ತದೆ. ಬಿಸಿಲಿನ ತಾಪ ಹೆಚ್ಚಾದರೂ, ಬೀಸುವ ತಂಗಾಳಿ ಹಾಯ್ ಎನಿಸುವಂತೆ ಮಾಡುತ್ತದೆ. ಚೈತ್ರ ಬರುವ ಹೊತ್ತು ಕವಿಗಳಿಗಂತೂ ಚೈತ್ರಾಗಮನವನ್ನು ಕವನಗಳ ಮೂಲಕವೇ ಸಂಭ್ರಮಿಸಿದ್ದಾರೆ. ಕವಿ ಮನಕ್ಕೆ ವಸಂತ ತರುವ ಸಂಭ್ರಮ ಹೇಳತೀರದು. ಕವಿಗಳ ಕಂಡ ಚೈತ್ರದ ಸೊಬಗೆ ಸೊಗಸು.

         ಈ ಚೈತ್ರ ಮಾಸದ ಮೊದಲ ಹಬ್ಬವೇ ಯುಗಾದಿ ಹಬ್ಬ.ಈ ಯುಗಾದಿಯನ್ನು ಸಂತೋಷ ಸಂಭ್ರಮದಿಂದ ಸ್ವಾಗತಿಸಲು ಇಡೀ ಪ್ರಕೃತಿ ಸಜ್ಜಾಗಿರುತ್ತದೆ. ಎಲ್ಲೆಡೆ ಕಂಗೊಳಿಸುತ್ತಿರುವ ಚಿಗುರು ಹೊಸ ಚೈತನ್ಯವನ್ನು ಪ್ರತಿಬಿಂಬಿಸುವ ಹೊತ್ತಿನಲ್ಲಿಯೇ ಬಣ್ಣ ಬಣ್ಣದ ಹೂಗಳಿಂದ ಅಲಂಕಾರಗೊಂಡು ಮರಗಿಡಗಳು ಕಣ್ಣಿಗೆ ಸೊಬಗನ್ನು ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ  ಮಾವು ಬೇವು ಚಿಗುರಿ, ಆ ಚಿಗುರಿಗೆ ಮನಸೋತ ಕೋಗಿಲೆ ಹಾಡಲು ವಸಂತ ನಲಿಯಲೇಬೇಕು. ಇದು ಪ್ರಕೃತಿಯ ಸಹಜ ಧರ್ಮ.

        ಈ ಯುಗಾದಿ ಹಬ್ಬ ಹಿಂದು ಧರ್ಮದವರಿಗೆ ಅಮೃತಗಳಿಗೆಯೂ  ಹೌದು. ಹೊಸ ಚೈತನ್ಯವನ್ನು ಮನ ಮನಗಳಲ್ಲಿ ಮೂಡಿಸುವ,ನೋವು ನಲಿವುಗಳಿಗೆ ವಿರಾಮ ಹೇಳುವ ಈ ಹಬ್ಬದ ಆಗಮನವನ್ನು ಪ್ರಕೃತಿಯೇ ಅಲಂಕೃತಳಾಗುತ್ತಾಳೆ. ಈ ಪ್ರಕೃತಿಯ ಸೊಬಗನ್ನು ವರ್ಣಿಸಲು ಕವಿಗಳಿಗೆ  ಎಲ್ಲಿಲ್ಲದ ಹಿಗ್ಗು. ಯುಗಾದಿಯ ಒಬ್ಬಟ್ಟಿನ ಸವಿಯಂತೆ ಈ ಕಾವ್ಯ ಸಂಭ್ರಮವನ್ನು ಸವಿಯೋಣ ಬನ್ನಿ.ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಮರಗಳ ತುಂಬಾ ಹೂಗಳು ಶೋಭಿಸುದನ್ನು ಕಂಡಾಗ 

   “ಮೈತುಂಬಾ  ಹೂ ಮುಡಿದು ಹುಚ್ಚಾದ ಮರ ಚೈತ್ರದಲ್ಲಿ ಬೇಸರವೇ ಇಲ್ಲ ಈ ನಿಸರ್ಗಕ್ಕೆ, ಸದಾ ಹೊಚ್ಚ ಹೊಸದಾಗಿ ಹೊಮ್ಮುವುದಕ್ಕೆ,”ಎಂದು ಬಣ್ಣಿಸಿದ್ದಾರೆ. 

     ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳ ಪರಂಪರೆಯೇ  ಇದೆ. ಈ ಹಬ್ಬಗಳಲ್ಲಿ ಮೊದಲನೆಯದೆ ಈ ಯುಗಾದಿ.ಮೂರುವರೆ ಮೂರ್ತದ ಪೈಕಿ ಯುಗಾದಿ ಒಂದು ಶುಭ ಮುಹೂರ್ತವಾಗಿದೆ. ಈ ಹಬ್ಬ ಹಳೆಯ ಹೊಸತನ್ನು ಸೇರಿಸುವ ಕೊಂಡಿ. ಪಾಲ್ಗುಳ ಬಹುಳ ಅಮಾವಾಸ್ಯೆಯ ದಿನ ಹಳೆಯ  ವರ್ಷಕ್ಕೆ ವಿದಾಯ ಹೇಳಿ, ಮಾರನೇ ದಿನ ಚೈತ್ರ ಮಾಸದ ಶುಕ್ಲ ಪ್ರತಿಪದೆಯಂದು ಯುಗಾದಿಯಂದು ಹೊಸ ವರ್ಷದ ಸಂತದ ಕ್ಷಣಗಳನ್ನು ನೆನೆಸಿಕೊಳ್ಳುತ್ತಾ ಭವಿಷ್ಯದ ಸುಖಕ್ಕಾಗಿ ಆಚರಿಸುತ್ತಾರೆ. ಈ ಹಿನ್ನೆಲೆಯಲ್ಲಿಯೇ ಪ್ರೇಮಕವಿ ಕೆ ಎಸ್ ನರಸಿಂಹಸ್ವಾಮಿಯವರು ನಾವು ಕಂಡ ಯುಗಾದಿಯ ಸಂಭ್ರಮವನ್ನು ತಮ್ಮ ಕಾವ್ಯ ವೊಂದರಲ್ಲಿ

    “ಬನಬನದಲ್ಲಿ ಅಚ್ಚಾಗಿದೆ ಹೊಸ ವರ್ಷದ ಹೆಸರು ಪಲ್ಲವಿಯು ಗರಿಗೆದರಿದೆ ಗೀತವು”ಹಾಗೆ ಮತ್ತೊಂದು ಕವನ “ಹೆಜ್ಜೆಗೊಂದು ಹೊಸ ಯುಗಾದಿ ಚೆಲವು ನಮ್ಮ ಜೀವನ ಪಯಣವೆಲ್ಲ ಪಾವನ”

ಎಂದು ಯುಗಾದಿ ಮಹಿಮೆಯನ್ನು ಹೊಗಳಿದ್ದಾರೆ. 

           ಕವಿ ವಿಶ್ವೇಶ್ವರರು ತಮ್ಮ ಕವನದಲ್ಲಿ 

” ಚೈತ್ರ ಬರುವುದು ಮಾತ್ರ ನಿನ್ನ ನೆನಪು ಅರಳಿದ ಹಾಗೆ…. ಮಾಗಿ ಎಲೆ ಉದುರಿ ಹೊಸ ಚಿಗುರು ಮಲ್ಲಿಗೆ ಸಂಪಿಗೆಯ ಗಾಳಿ ಸುಳಿದು ದೇಗುಲದ ಚಂದನದ ಘಮವನ್ನು ನೆನಪಿಸುವಂತಹ ಬರುವ ಚೈತ್ರ”. 

 ಚೈತ್ರದೊಂದಿಗ ಸಂಭ್ರಮ ತಾನಾಗಿ ಮೈವತ್ತೆಂತಿದೆ.

     ಹಾದಿಯುದ್ದಕ್ಕೂ ಹೊಂಗೆ ಮರಗಳ ಹೂವು ಚೆಲ್ಲಿದ ಹಾದಿ… ಕೆಳಗೆ ಕಣ್ಣಾಡಿಸಿದರೆ ಬಿದ್ದ ನಾಜೂಕಿನ ಹೂಗಳು… ಮೇಲೆ ಕಣ್ಣಿತ್ತಿದ್ದರೆ  ನಳ ನಳಿಸುವ ಹಸಿರು ಎಲೆಗಳ ಮುಚ್ಚುವಂತೆ ರಾಶಿಗಳ ರಾಶಿ. ಮೇಲೂ ವರ್ಣ ಕೆಳಗೂ ಬಣ್ಣ ಚೈತ್ರದ ಸೊಬಗು ಅದು.

      ಹೊಸ ವರ್ಷವೂ ಬಹುದೆಂದಿಗೆ ?ಮಹಾಪುರುಷ ತರುವಂದಿಗೆ“. ಪು.ತಿ. ನರಸಿಂಹಾಚಾರ್ ಕವನದಲ್ಲಿ ಹೇಳಿದ್ದಾರೆ.

      “ಯುಗಾದಿಯ ತೆರೆಗಳೇಳತ್ತಿವೆ, ಬೀಳುತ್ತಿವೆ.. ಹೊಸ ಹೊಸ ಪ್ರತಿ ವರ್ಷವೂ”.

    ಪ್ರತಿ ವರ್ಷ ಹೊಸತೇನೂ ಇಲ್ಲವೆಂದರಿತದ್ದರೂ ಹೊಸತೆಂದು ಭಾವಿಸುವುದು ಕಳೆದುಕೊಂಡ ನೋವು ಮರೆಯಲು, ಪಡೆದುಕೊಂಡ ಖುಷಿಯು ಅನುಭವಿಸಲು… ಚೈತ್ರ ಬರುವುದು.

ಎಂಬುದು ಗೋಪಾಲಕೃಷ್ಣ ಅಡಿಗರ ಕವನ.

      ಯುಗಾದಿ  ಹಬ್ಬದಂದು ರೈತರು  ಎತ್ತುಗಳನ್ನು ಚೆನ್ನಾಗಿ ತೊಳೆದು ಅಲಂಕರಿಸಿ,ಹಾಗೆ ಉಳುಮೆಗೆ ಉಪಯೋಗಿಸುವ ನೇಗಿಲು ಮುಂತಾದ ಸಾಮಾನುಗಳನ್ನು ಪೂಜಿಸಿ, ಬೆಳೆದ ಪೈರನ್ನು ಕಣದಲ್ಲಿ ಹಾಕಿ ಪೂಜಿಸಿ, ಆ ದಿನ ಉಳಿಮೆಯ ಶಾಸ್ತ್ರ ಮಾಡುತ್ತಾರೆ.

 ಕೆ.ಎಸ್. ನಿಸಾರ್ ಅಹಮದ್ ರವರು” ಬೆವರ ಹೀರಿ ಬೆಳೆದ ಪೈರು ಕಣಕಣದಲ್ಲಿ ಹೊನ್ನ ತೇರು ಕಣಜ ತುಂಬಿ ತುಳುಕಿ ಹಿಗ್ಗಿ ನಾಡಿ ಗೂಗಿ ಬಂತು ಸುಗ್ಗಿ “. 

ಎಂದು ಸುಂದರವಾಗಿ ಬಣ್ಣಿಸಿದ್ದಾರೆ. ಹಾಗೆ

      ” ಹೊಸ ಬಟ್ಟೆಯ ತೊಟ್ಟು ಚೈತ್ರ ಜಲದರ್ಪಣ ಮಗ್ನ ನೇತ್ರ ಮುಗಿಲಿನ ಪಂಚಾಂಗ ತೆರೆಸಿ ಕುಳಿತಿಹ ಫಲ ತಿಳಿಯ ಬಯಸಿ “

 ಎಂದು ಯುಗಾದಿಯ ಆಚರಣೆ ಬಗ್ಗೆ ತಿಳಿಸಿದ್ದಾರೆ.

      ಈ ಯುಗಾದಿ ಹಬ್ಬದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು  ರಂಗವಲ್ಲಿ ಇಟ್ಟು,ಮಾವು ಬೇವು ತೋರಣಗಳಿಂದ ಸಿಂಗರಿಸಿ, ಅಭ್ಯಂಗನ ಸ್ಥಾನ ಮಾಡಿ, ದೇವರಿಗೆ ಪೂಜೆ ಮಾಡಿ,ಬೇವು ಬೆಲ್ಲಗಳ ನೈವೇದ್ಯ ಮಾಡಿ ಪ್ರಸಾದ ರೂಪದಲ್ಲಿ ಸ್ವೀಕರಿಸಿ, ಪಂಚಾಂಗ ಶ್ರವಣ ಮಾಡುತ್ತಾರೆ.

       ಪ್ರತಿಯೊಂದು ಹಬ್ಬವೂ ನಮ್ಮ ಬದುಕಿನ ದಿವ್ಯ ಸಂದೇಶವನ್ನೇ ನೀಡುತ್ತದೆ. ಯುಗಾದಿ ಹಬ್ಬದಂದು ದೇವರಿಗೆ ಅರ್ಪಿಸುವ  ಬೇವು ಬೆಲ್ಲ ದೈವೀಗುಣ ಮೈಗೂಡಿಸಿಕೊಳ್ಳುತ್ತ(ಬೆಲ್ಲ) ಪ್ರಕೃತಿಗಾಗಿ ಹಂಬಲಿಸುತ್ತ(ಬೇವು) ತಾಳ್ಮೆ ಗೆಡದೆ ಮುನ್ನಡೆಯುವವರಿಗೆ ತನ್ನ ಕೃಪಾ ಪ್ರಸಾದದ ಸವಿ ಕಟ್ಟಿಟ್ಟಿದ್ದು ಎಂಬ ದೇವರ ದಿವ್ಯ ಸಂದೇಶವನ್ನೇ ಬಿಂಬಿಸುತ್ತದೆ.

            ಮಹಾಕವಿ ಕುವೆಂಪುರವರು ತಮ್ಮ ಯುಗಾದಿ ಕವನದಲ್ಲಿ ಬೇವು ಬೆಲ್ಲಗಳ ಸಂಗಮದ ಬಗ್ಗೆ ತುಂಬಾ ಸುಂದರವಾಗಿ ಹೀಗೆ ಹೇಳುತ್ತಾರೆ. 

 “ಮಾವಿನ ಬೇವಿನ ತೋರಣ ಕಟ್ಟು, ಬೇವು ಬೆಲ್ಲಗಳ ನೊಟ್ಟಿಗೆ ಕುಟ್ಟು, ಜೀವನವೆಲ್ಲ ಬೇವುಬೆಲ್ಲ ಎರಡು ಸವಿದವನೇ ಕವಿಮಲ್ಲ”.

ಹಾಗೆ ಹೊಸ ಬಟ್ಟೆ ತೊಟ್ಟು ಹೋಳಿಗೆ ಹೂರಣ ತಿಂದ ಮಾತ್ರಕ್ಕೆ ಯುಗಾದಿಯ ಆಶಯ ಪೂರ್ಣವಾಗುವುದಿಲ್ಲ. ಮಾನವನೊಳಗೆ ಸೇರಿರುವ ದ್ವೇಷ, ಮತ್ಸರಗಳು ತೊಲಗಬೇಕು.  ಪ್ರೀತಿ ,ಸ್ನೇಹಗಳು ಮೂಡಬೇಕು.

  ” ತೊಲಗಲಿ ದುಃಖ,ತೊಲಗಲಿ ಮತ್ಸರ ಪ್ರೇಮಕ್ಕೆ ಮೀಸಲು ನವ ಸಂವತ್ಸರ”.

 ಎಂದು ಸುಂದರವಾಗಿ ವರ್ಣಿಸಿದ್ದಾರೆ.

   ಬೇವು ಬೆಲ್ಲ ಸ್ವೀಕರಿಸುವಾಗ ಈ ಶ್ಲೋಕವನ್ನು ಹೇಳುತ್ತಾರೆ.

” ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯಚ

 ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ “.

 ಈ ಶ್ಲೋಕದ ಅರ್ಥ ನೂರು ವರ್ಷಗಳ ಆಯಸ್ಸು, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿ ರೋಗ ನಿವಾರಣೆಗಾಗಿ ಬೇವು-ಬೆಲ್ಲ ಸೇವನೆ ಮಾಡುತ್ತೇನೆ ಎಂದು ಅರ್ಥ. ಬೇವು-ಬೆಲ್ಲವನ್ನು ಪ್ರಸಾದ ರೂಪದಲ್ಲಿ ಎಲ್ಲರಿಗೂ ಕೊಟ್ಟು ಶುಭಾಶಯ ಹೇಳುತ್ತಾರೆ.

Good Earth - Mangoes of Ugadi The festival of Ugadi marks the beginning of  a new year on the Hindu calendar. The term Ugadi is an amalgamation of two  words: 'yug' meaning '

       ಬೇವು ಬೆಲ್ಲ ನಮ್ಮ ಬದುಕಿನ ಸಿಹಿ ಕಹಿಗಳ ಪ್ರತೀಕ. ನೋವು ನಲಿವನ್ನು ಸಮಚಿತ್ತದಿಂದ ಸ್ವೀಕರಿಸಬೇಕೆಂಬ ಭಾವ ಇದರಲ್ಲಿದೆ.  ಬೇವು  ಕಹಿಯ ಸಂಕೇತವಾದರೆ,ಬೆಲ್ಲ ಸಿಹಿಯ ಸಂಕೇತ.ಪ್ರತಿಯೊಬ್ಬರ ಜೀವನದಲ್ಲಿಯೂ ಕೇವಲ ಸಿಹಿಯೊಂದೇ ಅಂದರೆ ಸುಖವೇ ಬರುವುದು ಸಾಧ್ಯವಿಲ್ಲ. ಆಗಾಗ್ಗೆ ಕಹಿ ಅಂದರೆ ಕಷ್ಟಗಳು ಬರುತ್ತಿರುತ್ತವೆ. ಆಗ ನಾವು ಜೀವನದಲ್ಲಿ ನಿರಾಶೆ ಹೊಂದುಬಾರದು ಎನ್ನುವುದರ ಸೂಚಕವಾಗಿ ಬೇವು-ಬೆಲ್ಲ ಎರಡನ್ನೂ ಸೇವಿಸಬೇಕು. 

     ಇವೆರಡೂ ಸುಖ ದುಃಖದ ಪ್ರತೀಕ.ಸುಖ ಬಂದಾಗ ಹಿಗ್ಗದೆ, ದುಃಖ ಬಂದಾಗ ಕುಗ್ಗದೆ ಎರಡನ್ನೂ ನಮ್ಮ ಜೀವನದಲ್ಲಿ ಸಮನಾಗಿ ಸ್ವೀಕರಿಸಬೇಕು ಎಂಬುದೇ ಇದರ ಅರ್ಥ.

      ” ಜನ ಜೀವನದಲ್ಲಿ ಬೆರೆತಿರುವ ವಿರಸವೆಂಬ ವಿಷಯವನ್ನು ಕಳೆದು, ಸೌಹಾರ್ದತೆಯನ್ನು ಯುಗಾದಿ ನೆಲೆಗೊಳಿಸಲಿ. 

ಎನ್ನುತ್ತಾರೆ ಕವಿಗಳು.

      ಡಾ!! ಕೆ.ಪರೀಫಾರವರು ಯುಗಾದಿಯನ್ನು ಪುಟ್ಟಮಗುವಿನಂತೆ ಬಾ ಯುಗಾದಿ ಎಂಬ ತಮ್ಮ ಕವನದಲ್ಲಿ ಸುಂದರವಾಗಿ ಕರೆದಿದ್ದಾರೆ. 

  ಬರುವುದಾದರೆ ಬಾ ಯುಗಾದಿ

 ಮೆಲ್ಲಗೆ ನನ್ನ ಕೈ ಬೆರಳು ಹಿಡಿದು 

ನಡೆವ ಪುಟ್ಟ ಮಗುವಿನಂತೆ 

ನಡೆದು ಬಾ ಹೊಸ ವರ್ಷವೇ

 ಅಬ್ಬರಿಸಿ ಗದ್ದರಿಸಿದಿರು ನನಗೆ

 ಬರುವುದೇ  ಅದರ ಮೆಲ್ಲಗೆ ಬಾ 

ಮಾವು ಬೇವಿನ ಉದುರದಂತೆ 

ಹೂ ನಡಿಗೆಯ ಮಗುವಿನಂತೆ

 ನಡೆದು ಬಾ ಯುಗಾದಿಯೇ.

ಎಂದು ಪ್ರೀತಿಯಿಂದ ಕರೆದಿದ್ದಾರೆ. 

      ಜೆ .ಪಿ. ರಾಜರತ್ನಂ ಅವರು ಜೀವನದ ಸುಖ ದುಃಖದ ಬಗ್ಗೆ ಹೀಗೆ ಹೇಳಿದ್ದಾರೆ. 

    ಲೋಕದಲ್ಲಿ ಸೂರ್ಯ-ಚಂದ್ರರಿದ್ದಂತೆ, ಅವರಿಗೆ ಉದಯಾಸ್ತಗಳಿದ್ದಂತೆ, ಅದರಿಂದಾಗುವ ಹಗಲು ರಾತ್ರಿಗಳಿದ್ದಂತೆ. ಬೆಳಕು ಕತ್ತಲೆಗಳಂತೆ.

      ಮನುಷ್ಯರ ಬದುಕಿನಲ್ಲಿಯೂ ಸುಖ, ದುಃಖಗಳು ಯಾವ ಕಾಲಕ್ಕೂ ಇರುವುದೇ ಇವು  ಒಂದನ್ನು ಬಿಟ್ಟು ಒಂದು ಇಲ್ಲ.ಒಂದಾದ ಮೇಲೆ ಒಂದು ಉಂಟು.

     ಎರಡು ಜೊತೆ ಜೊತೆಯಲ್ಲಿಲ್ಲ. ಇರುವುದು ಉಂಟು ಎಂಬ ಅರಿವು ಯಾವಾಗ ನಮಗೆ ಆಗುತ್ತದೋ ಅಂದೇ ನಮಗೆ ನಿಜವಾದ ಯುಗಾದಿ!         

     ಡಾ! ದ.ರಾ.ಬೇಂದ್ರೆ ಅವರ 

“ಹೊಂಗೆ ಹೂವ ತೊಂಗಲಲ್ಲಿ ಬೃಂಗದ ಸಂಗೀತ ಕೇಳಿ” 

ಎಂದು ಪ್ರಕೃತಿಯ ಬಗ್ಗೆ ಸೊಗಸಾಗಿ ವರ್ಣಿಸಿದ್ದಾರೆ. ಹಾಗೆ ಮುಖ್ಯವಾಗಿ ಯುಗಾದಿ ಆಚರಣೆಯೊಂದಿಗೆ ಅವಿಭಾಜ್ಯ ಅಂಗವಾಗಿ ಹೆಣೆದುಕೊಂಡಿದೆ ಬೇಂದ್ರೆಯವರ ಕವಿತೆ. 

     ” ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ…..”.

  ಎಂಬ ಈ ಕವಿತೆ ಭಾವಗೀತೆ, ಭಕ್ತಿಗೀತೆ, ಚಿತ್ರಗೀತೆ, ನಾಡಗೀತೆ ಎಲ್ಲವೂ ಆಗಿದೆ. ಯುಗಾದಿ ಮಹತ್ವವನ್ನು ಸಾರುವ ಬೇಂದ್ರೆಯವರ ಈ ಕವಿತೆ ಅಂದು ಪಂಚಾಂಗ ಶ್ರಾವಣದಷ್ಟೇ ಕಡ್ಡಾಯವೆನಿಸಿದೆ. ಬೇಂದ್ರೆ ಅವರ ಕವನ “ಯುಗ ಯುಗಾದಿ” ಯುಗಾದಿಗೆ ಯುಗಾದಿನೇ ಸಾಟಿ. ಎಂದು ಹರ್ಷಘೋಷದೊಂದಿಗೆ ಆರಂಭವಾಗುತ್ತದೆ.

     ಕವಿಗಳು ರಸವತ್ತಾಗಿ ತಮ್ಮ ಕವನದಲ್ಲಿ ಯುಗಾದಿ ಬಗ್ಗೆ ಸುಂದರವಾಗಿ ವರ್ಣಿಸಿದ ಅವರಿಗೆ ನಮನಗಳನ್ನು ಸಲ್ಲಿಸೋಣ. 

     ಅಂತೂ ಯುಗಾದಿ ಸೃಷ್ಟಿಯ ಸಂಕೇತ.ಸೃಷ್ಟಿ ಹೊಸತನ್ನು ಪ್ರತಿನಿಧಿಸುತ್ತದೆ.ನಾವು ದ್ವೇಷ,ಅಸೂಹೆಗಳನ್ನು ಬಿಟ್ಟು ಪ್ರೀತಿ, ಸ್ನೇಹದಿಂದ ಇದ್ದು ಪ್ರಕೃತಿಯನ್ನು ಕಾಪಾಡಿಕೊಂಡು ಈ ಯುಗಾದಿಯನ್ನು ಸಂತೋಷ ಸಂಭ್ರಮದಿಂದ ಆಚರಿಸೋಣ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.

_____________________________________________________