ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಂತ:ಸ್ಪಂದನ ೧೧

ಶಶಿಧರ್ ಕೃಷ್ಣ
ಇತ್ತೀಚಿನ ಬರಹಗಳು: ಶಶಿಧರ್ ಕೃಷ್ಣ (ಎಲ್ಲವನ್ನು ಓದಿ)

ಒಮ್ಮೆ ಕುಂಡಲಿನಿ ಶಕ್ತಿಯ ಹರಿವಿನ ಅರಿವು.. ನಮ್ಮ ಪ್ರಜ್ಞೆಗೆ ಬಂದು, ಕ್ರಮವಾಗಿ ಚಕ್ರಗಳಲ್ಲಿ ಹರಿಯುವಾಗ, ಸಾಧಕರು ಅವರ ಕರ್ಮಗಳ ನಿರ್ವಹಣೆಗೆ, ಗುರು ಇರುವುದು ಅವಶ್ಯ ಎಂದು ನೋಡಿದ್ದು ಆಯಿತು. ಇವೆಲ್ಲ ವಿಷಯಗಳು ಹೇಗೆ ಈ ಬ್ರಹ್ಮಾಂಡ ನಮ್ಮ ಒಂದು ಭಾಗ ಆಗಿರುತ್ತದೆ ಎನ್ನುವುದರ ಬಗ್ಗೆ ಆಗಿತ್ತು.

ಈಗ, ನಾವು ಹೇಗೆ ಬ್ರಹ್ಮಾಂಡದ ಒಂದು ಭಾಗವಾಗಿರುತ್ತೇವೆ ಎಂಬುದರ ಬಗ್ಗೆ ನೋಡೋಣ.

ಸತಿದೇವಿಯನ್ನು ಕಳೆದುಕೊಂಡ ಶಿವ, ಅವಳು ಮತ್ತೆ ತನಗೆ ಸಿಗುವವರೆಗೆ ಕಣ್ಣು ಬಿಡುವುದಿಲ್ಲ ತಾನು ಎಂದು ಕುಳಿತವ, ಒಂದು ಮಹಾ ಉನ್ಮತ ಸ್ಥಿತಿಯಲ್ಲಿ ಉಳಿದನು, ಮತ್ತು ತನ್ನ ಕಾಮವನ್ನು, ಅಂದರೆ ಕಾಮನೆಗಳನ್ನು ತನ್ನೊಳಗೆ ದಹಿಸಿಕೊಂಡ, ಹಾಗಾಗಿ ಅವನ ಒಳಗಿನಿಂದ ಬೂದಿ ಬಂದಿತು.

ಮದುವೆಯ ಪರಿಕಲ್ಪನೆ ಇದೇ ಆಗಿದೆ, ಯಾವುದೇ ಕ್ಷೇತ್ರದಲ್ಲಿ ಒಬ್ಬರು ಸಾಧನೆ ಮಾಡಬೇಕು ಎಂದರೆ, ಮಾನವ ದೇಹಕ್ಕೆ ಕೆಲವು ಮೀತಿಗಳು ಅಡ್ಡ ಬರುತ್ತವೆ, ಅವನ್ನು ತೊಡೆಯಲು ಸಹಾಯಕ ಆಗುವುದು ಅವರ ಕಾಮ, ಅರ್ಥಾತ್ ಬಯಕೆಗಳು.. ಇದನ್ನು ಸುಡುವುದರ ಮೂಲಕ, ಇದರಿಂದ ಮಾನವರು, ಅವರವರ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಈ ಸಂಗತಿಗೆ ಪೂರಕವಾಗಿ ಬರುವುದು ಅವರವರ ಸಂಗಾತಿ ಆಗಿರುವವರು.

ಕಣ್ಣು ಮುಚ್ಚಿ ಉಳಿದ ಶಿವನಿಗೆ, ಇಬ್ಬರು ಆಗಬೇಕು ಎನಿಸುತ್ತದೆ, ಆಗ ಲಿಂಗದ ಮೇಲೆ ಮಧ್ಯದಲ್ಲಿ ನಮ್ಮ ನೆತ್ತಿಯ ಮೇಲೆ ಇರುವ ಬ್ರಹ್ಮರಂಧ್ರ ದಂತೆ ಒಂದು ಬಿಂದು ಹುಟ್ಟುತ್ತದೆ ಅದಕ್ಕೆ ಮೇಲ್ಮುಖವಾಗಿ ನಾಲ್ಕು ತ್ರಿಭುಜಗಳು ಹಾಗೂ ಕೆಳಮುಖವಾಗಿ, ಐದು ತ್ರಿಭುಜಗಳಾಗಿ ಅವು ಒಂದಕ್ಕೊಂದು ಸಂಧಿಸಿ, ಒಟ್ಟು ನಲವತ್ಮೂರು ತ್ರಿಭುಜಗಳು ಆಗುತ್ತದೆ. (ಬಿಂದು ಇರುವ ಮೂಲತ್ರಿಕೋಣ, ನಂತರ ಎಂಟು ತ್ರಿಭುಜಗಳು ಇರುವ ಒಂದು ಸುತ್ತು, ಇದಾದ ಮೇಲೆ ಹತ್ತು ತ್ರಿಭುಜಗಳು ಇರುವ ಎರಡು ‌ಸುತ್ತಿನ ತ್ರಿಭುಜಗಳು, ಹಾಗು ಹದಿನಾಲ್ಕು ತ್ರಿಭುಜಗಳು ಇರುವ ಒಂದು ಸುತ್ತಿನ ತ್ರಿಭುಜಗಳು)

ಇವಕ್ಕೆ ಅಷ್ಟ ನಾಗದಳಗಳು ಮತ್ತು ಅವಕ್ಕೆ ಷೋಡಶ ಅಂದರೆ ಹದಿನಾರು ಪುಷ್ಪ ದಳಗಳು ಸೇರುತ್ತವೆ, ನಂತರ ತ್ರಿ ವೃತ್ತ ಪರಧಿ, ನಂತರ ಕವಚಗಳು ಮೂರು ಇವನ್ನು ಭೂಪೂರ ಎನ್ನುವರು. ಇವಕ್ಕೆ ನಾಲ್ಕು ಬಾಗಿಲುಗಳು (ಧರ್ಮ, ಅರ್ಥ, ಕಾಮ, ಮೋಕ್ಷ) ಹೀಗೆ ಹುಟ್ಟುವುದು ಯಂತ್ರಗಳ ರಾಜ ಎನಿಸಿರುವ “ಶ್ರೀ ಚಕ್ರ”

ಇದು ಮೊದಲಿಗೆ, ರಾಜಸಿಕವಾಗಿ ಉಗ್ರ ರೂಪದಲ್ಲಿ ಇರುತ್ತದೆ ಅದನ್ನು ಮೀನಾಕ್ಷಿ ದೇವಿಯ ಜೊತೆಗೆ ಪಗಡೆ ಆಡಿ, ಉಗ್ರ ಬೀಜ ಮಂತ್ರಗಳನ್ನು ತೆಗೆದು ದೇವಿಯನ್ನು ಬಿಂದುವಿನಲ್ಲಿ ಬಂಧಿಸಿ ಶ್ರೀ ಚಕ್ರವನ್ನು, ಶ್ರೀ ಶಂಕರಾಚಾರ್ಯರು ಸ್ವಾತಿಕ ಯಂತ್ರವನ್ನಾಗಿಸಿದರು.

ಇದರಲ್ಲಿ ಭೂಪೂರ/ಕವಚ ಮೊದಲನೆಯದು ಸೂರ್ಯಲೋಕ, ಮಧ್ಯೆ ಇರುವುದು ಆಕಾಶಕಾಯ ಮೂರನೇಯದು ಭೂಲೋಕ *1

ಭೂಪೂರದ ನಂತರ ಮೂರು ವೃತ್ತಗಳ ಮುನ್ನ ಇರುವ ಜಾಗ ತ್ರೈಲೋಕ ಮೋಹನಚಕ್ರ*2

ನಂತರದ ಮೂರು ವೃತ್ತಗಳು, ಇವುಗಳಲ್ಲಿ ಒಂದು ಸ್ಥೂಲ ಶರೀರ, ಇನ್ನೊಂದು ಸೂಕ್ಷ್ಮ ಶರೀರ, ಮೂರನೇಯದು ಕಾರಣೀಭೂತ ಶರೀರ ( ಇದನ್ನು ದಳಗಳ ಕಡೆಯಿಂದ ಕ್ರಮವಾಗಿ ಹೇಳಲಾಗಿದೆ) *3

ಅಷ್ಟ ನಾಗದಳಗಳು, ಪುಷ್ಪಗಳಲ್ಲಿ ದಳಗಳು ಇರುವಂತೆ ಹದಿನಾರು ಪುಷ್ಪದಳಗಳು ಇರುತ್ತವೆ, ಇದು ಒಂದು ಎರಡಾಗಿ, ಎರುಡು ನಾಲ್ಕಾಗುವ ಜಾಮಿತಿಯನ್ನು ಹೇಳುತ್ತಿವೆ. *4

ನಂತರದ ಹದಿನಾಲ್ಕು ತ್ರಿಭುಜಗಳು, ಹದಿನಾಲ್ಕು ಮನ್ವಂತರ ಗಳನ್ನು ಪ್ರತಿನಿಧಿಸುತ್ತದೆ *5

ಆಮೇಲಿನ ಹತ್ತು ತ್ರಿಭುಗಳು ದಶಾವತಾರದ ಪ್ರತೀಕ *6

ನಂತರದ ಹತ್ತು ತ್ರಿಭುಜಗಳು ದಶ ದಿಕ್ಕುಗಳ ಪ್ರತಿನಿಧಿ *7

ಉಳಿವ ಒಂಭತ್ತು ತ್ರಿಕೋನಗಳು*8
ನವಗ್ರಹಗಳ ಸಂಕೇತ, ಉಳಿದ ಬಿಂದುವು *9 ಮಹಾ ತ್ರಿಪುರ ಸುಂದರಿ ಅಮ್ಮನವರು ಇರುವ ಜಾಗ.

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಗಂಡಿನ ಇಪ್ಪತ್ತೊಂದುವರೆ ಅಂಶ,ಹಾಗೂ ಹೆಣ್ಣಿನ ಇಪ್ಪತ್ತೊಂದು ವರೆ ಅಂಶ, ಎರಡು ‌ಸೇರಿ ನಲವತ್ತು ಮೂರು ಆಗಿ, ಮಗು ಹುಟ್ಟುವಂತೆ ಶಿವ ಮತ್ತು ಶಕ್ತಿ ಸೇರಿ ಸ್ಕಂದ ಹುಟ್ಟಿದ ಜಾಗ ಎನ್ನುವರು, ಇದನ್ನು ಬಿಂದು ಅಥವಾ ಯೋನಿ ಎಂದರೆ ಅದು ಕೂಡ ಸರಿ.

ಹೀಗೆ ಇಡಿ ಸೃಷ್ಟಿ ರಹಸ್ಯ ತನ್ನಲ್ಲಿ ಇರಿಸಿಕೊಂಡಿರುವ ಶ್ರೀ ಚಕ್ರ ದೇವಿಯ ಮೂಲ ಸ್ವರೂಪ ಕೂಡ.

*1 ಕೆಂಪು ಬಣ್ಣದ ಕವಚಗಳು (ಭೂಪೂರ)
*2 ಕೇಸರಿ ಬಣ್ಣದ ಜಾಗ (ತ್ರೈಲೋಕ ಮೋಹನಚಕ್ರ)
*3 ಮೂರು ವೃತ್ತಗಳು, ಕೇಸರಿ ಬಣ್ಣ ಮತ್ತು ಅದೇ ಬಣ್ಣದ ದಳಗಳ ನಡುವಿನ ಜಾಗಗಳು (ತ್ರಿ ವೃತ್ತ ಪರಧಿ)
*4 ಕೇಸರಿ ಬಣ್ಣದ ಹದಿನಾರು ಪುಷ್ಪ ದಳಗಳು ಹಾಗೂ ಹಳದಿ ಬಣ್ಣದ ಎಂಟು ನಾಗದಳಗಳು
*5 ಗಾಡ ಹಸಿರು ಬಣ್ಣದ ಹದಿನಾಲ್ಕು ತ್ರಿಭುಜಗಳು
*6 ಗಿಳಿ ಹಸಿರು ಬಣ್ಣದ ಹತ್ತು ತ್ರಿಭುಜಗಳು
*7 ಗಾಡ ನೀಲಿ ಬಣ್ಣದ ದಶ ತ್ರಿಭುಜಗಳು
*8 ತಿಳಿ ನೀಲಿ ಬಣ್ಣದ ತ್ರಿಭುಜಗಳು (ಎಂಟು) ಹಾಗೂ ಗುಲಾಬಿ ಬಣ್ಣದ (ಒಂದು) ಒಟ್ಟು ಒಂಬತ್ತು ತ್ರಿಭುಜಗಳು
*9 ಕೆಂಪು ಬಣ್ಣದ ಬಿಂದು