ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಂಬಿಗ.. ದಡ ಹಾಯಿಸು …!

ಎಚ್ಚಾರೆಲ್

(ಭೌತವಿಜ್ಞಾನದ ಪ್ರಾಧ್ಯಾಪಕ, ಎಚ್. ಆರ್. ರಾಮಕೃಷ್ಣರಾವ್ ಅವರ ಆತ್ಮಕತೆ,ಪುಟ : ೧೯೬)
ನಿರೂಪಣೆ : ಕಲ್ಗುಂಡಿ ನವೀನ್
ಸಂಪಾದಕರು : ಡಾ. ವೈ. ಸಿ. ಕಮಲ, ಸುಮಂಗಲಾ, ಎಸ್. ಮುಮ್ಮಿಗಟ್ಟಿ
ಉದಯಭಾನು ಕಲಾಸಂಘ
ಉದಯಭಾನು ಉನ್ನತ ಅಧ್ಯಯನ ಕೇಂದ್ರ
ವಿಜ್ಞಾನ-ತಂತ್ರಜ್ಞಾನ ಅಧ್ಯಯನಾಂಗ
ಬೆಂಗಳೂರು -೫೬೦ ೦೧೯

ಪ್ರೊ. ಎಚ್. ಆರ್. ರಾಮಕೃಷ್ಣರಾಯರು

ಕೃತಜ್ಞತೆ : ಪ್ರೊ. ಎಚ್. ಆರ್. ರಾಮಕೃಷ್ಣರಾಯರ ‘ಅಂಬಿಗ ದಡ ಹಾಯಿಸು’ ಎನ್ನುವ ಅವರ ಆತ್ಮಕತೆಯಿಂದ ಆಧರಿಸಿದ ಅವರು ಕೆಲಸಮಾಡುತ್ತಿದ್ದ ಕ್ರೈಸ್ಟ್ ಕಾಲೇಜಿನ ಕೆಲವು ಮಹತ್ವದ ಪ್ರಸಂಗಗಳನ್ನು ಇಲ್ಲಿ ದಾಖಲಿಸಲು ಇಚ್ಛಿಸುತ್ತೇನೆ.

ಎಚ್ಚಾರೆಲ್ (ಕ್ರೈಸ್ಟ್ ಕಾಲೇಜ್ ಕನ್ನಡ ಸಂಘದ ಪ್ರಕಟಣೆಗಳ ಹಲವಾರು ಪುಸ್ತಕಗಳನ್ನು ಓದಿ ಬಲ್ಲ ಪ್ರಿಯ ಓದುಗನೊಬ್ಬ)

೯. ‘ಕ್ರೈಸ್ಟ್ ಕಾಲೇಜ್ ಕನ್ನಡ ಸಂಘ’ :

ಮೊದಲ ಪ್ರಯೋಗಗಳ ಮೆರವಣಿಗೆ :

ಕೆಲವೇ ವಿದ್ಯಾರ್ಥಿಗಳೊಂದಿಗೆ ಕ್ರೈಸ್ಟ್ ಕಾಲೇಜ್ ಕನ್ನಡ ಸಂಘ ಆರಂಭವಾಯಿತು. ನಾನು ಇದರ ಉಪಾಧ್ಯಕ್ಷನಾದೆ. ರಾಜು ಕಾರ್ಯದರ್ಶಿಗಳು. ಅನೇಕ ಕಾರ್ಯಕ್ರಮಗಳನ್ನು ಮಾಡಿದೆವು. ರಾಜು ಅವರ ಮಿತ್ರ ಆಗ ಎಂ. ಎ ಮಾಡುತ್ತಿದ್ದ, ಎಚ್. ಎಸ್ ರಾಘವೇಂದ್ರ ರಾವ್ ಅವರೊಡನೆ ಸೇರಿ, ಅನೇಕ ಯೋಜನೆಗಳನ್ನು ಹಾಕುತ್ತಿದ್ದರು.

ಹೀಗೆ ನಡೆಯುತ್ತಿದ್ದಾಗ ಒಮ್ಮೆ ನನಗೆ ಒಂದು ಆಲೋಚನೆ ಬಂದಿತು. ಕನ್ನಡ ಪಠ್ಯದಲ್ಲಿರುವ ಅನೇಕ ಪದ್ಯ-ಗದ್ಯಗಳ ಲೇಖಕರನ್ನೇ ಕಾಲೇಜಿಗೆ ಕರೆಸಿ ಅವರು ಬರೆದ ಆ ಕಾವ್ಯ-ಗದ್ಯ ಭಾಗವನ್ನು ಅವರಿಂದಲೇ ಏಕೆ ಪಾಠಮಾಡಿಸಬಾರದು ಎಂದು ! ಮೊದಲಿಗೆ ಗೋಪಾಲಕೃಷ್ಣ ಅಡಿಗರನ್ನು ಕರೆಸಿದೆವು. ಬಹಳ ಸಂತೋಷವಾಗಿ ಬಂದರು. ತಮ್ಮ ಕಾಲೇಜಿನ ದಿನಗಳನ್ನು ನೆನೆಸಿಕೊಂಡು ಪಾಠ ಮಾಡಿದರು. ಕಾರ್ಯಕ್ರಮ ಅದ್ಭುತವಾದ ಯಶಸ್ಸನ್ನು ಕಂಡಿತು. ಇದು ಮುಂದುವರೆಯಲು ಪ್ರೋತ್ಸಾಹ ನೀಡಿತು. ಬೆಂಗಳೂರಿನಲ್ಲಿ ಅಂದು ಇದ್ದ ಬಹುಶಃ ಎಲ್ಲಾ ಸಾಹಿತಿಗಳು ಕ್ರೈಸ್ಟ್ ಕಾಲೇಜಿಗೆ ಬಂದು ಪಾಠ ಮಾಡಿದರು. ಇಂತಹ ಕಾರ್ಯಕ್ರಮ ಯಾವ ಕಾಲೇಜಿನಲ್ಲೂ ನಡೆದೇ ಇರಲಿಲ್ಲ. ಬಂದ ಸಾಹಿತಿಗಳ ಪರಿಚಯವನ್ನು ಪ್ರಿನ್ಸಿಪಾಲ್ ಅವರಿಗೆ ಮಾಡಿಸುತ್ತಿದ್ದೆ. ಈ ಎಲ್ಲಾ ಸಾಹಿತಿಗಳ ವೈಯಕ್ತಿಕ ಪರಿಚಯ ಲಾಭ ನನಗಾಯಿತು.

ಕ್ರೈಸ್ತ ಕಾಲೇಜುಗಳಲ್ಲಿ ಕ್ರಿಸ್ಮಸ್ ಸಂದರ್ಭದಲ್ಲಿ ‘ಕ್ರಿಬ್’ ಎಂಬ ಆಚರಣೆಯನ್ನು ಮಾಡುತ್ತಾರೆ. ಎಸು ಕ್ರಿಸ್ತನು ಹುಟ್ಟಿದ ಸಂದರ್ಭದ ಪುನಃರಚನೆ ಹಾಗೂ ಆ ಸಂದರ್ಭದ ವಿವರಣೆ ಇಲ್ಲಿನ ಮುಖ್ಯ ಆಚರಣೆ. ನಮ್ಮ ಕಾಲೇಜಿನಲ್ಲಿ ಇದನ್ನು ಬಹಳ ಸಂಭ್ರಮ ಮತ್ತು ಸಡಗರದಿಂದ ಆಚರಿಸುತ್ತಿದ್ದರು. ಸಹಜವಾಗಿಯೇ, ಅಲ್ಲಿನ ಎಲ್ಲ ವಿವರಣೆಗಳು ಇಂಗ್ಲೀಷಿನಲ್ಲಿರುತ್ತಿತ್ತು. ಈ ಬಾರಿ ಕನ್ನಡದಲ್ಲಿ ಏಕೆ ಮಾಡಬಾರದೆಂಬ ಆಲೋಚನೆ ಬಂದಿತು. ಹೋಗಿ ಪ್ರಿನ್ಸಿಪಾಲರನ್ನು ಕೇಳಿದೆ. “ಇದರ ಸಂಪೂರ್ಣ ಜವಾಬ್ದಾರಿ ನೀವು ತೆಗೆದುಕೊಳ್ಳುತ್ತೀರಾ” ಎಂದರು” “ಅಗತ್ಯವಾಗಿ” ಎಂದು ಹೇಳಿ ಹೊರಬಂದೆ. ಮುಂದೆ ಎಚ್. ಎಸ್. ರಾಘವೇಂದ್ರ ರಾಯರ ಸಹಾಯದಿಂದ ಹಸ್ತಪ್ರತಿ ಸಿದ್ಧಪಡಿಸಿ, ಧ್ವನಿಮುದ್ರಣವನ್ನೂ ಮಾಡಿದೆವು. ಕ್ರಿಸ್ಮಸ್ ಸಂದರ್ಭದಲ್ಲಿ ಅಲ್ಲಿ ಇದನ್ನು ಪ್ರಸಾರ ಮಾಡಲಾಯಿತು. ಇಂಗ್ಲಿಷ್ ಬಾರದ ಅದೆಷ್ಟೋ ಮಂದಿ ಅಲ್ಲಿಗೆ ಬರುತ್ತಿದ್ದರು. ಅವರಿಗೆಲ್ಲ ಇದರಿಂದ ಪ್ರಯೋಜನವಾಯಿತು. ಮುಂದೆ ಉಪನ್ಯಾಸಕರ ಮನೆಯವರು ಸಹ ಇಂತಹ ಕಾರ್ಯಕ್ರಮಗಳಿಗೆ ಬರುವುದು ಎಂದಾಯಿತು. ನಮ್ಮ ಮನೆಯವರು ರಾಜು ಅವರ ಮನೆಯವರು (ಇಷ್ಟು ಹೊತ್ತಿಗೆ ಅವರಿಗೆ ಮದುವೆಯಾಗಿತ್ತು) ಎಲ್ಲರೂ ಬರುತ್ತಿದ್ದರು.

‘ಪುಸ್ತಕ ಪ್ರಕಟಣೆ’ :

ಇಷ್ಟಾದ ಮೇಲೆ ‘ಕನ್ನಡ ಸಂಘ’ ದಿಂದ ಪುಸ್ತಕಗಳ ಪ್ರಕಟಣೆಯಾಗಬೇಕೆಂದು ತೀರ್ಮಾನವಾಯಿತು. ಸಂಘ ಆರಂಭವಾದಾಗಲೇ ನಮಗೆ ನಾವೇ ಅನೇಕ ನಿಯಮಗಳನ್ನು ಹಾಕಿಕೊಂಡಿದ್ದೆವು. ಸಂಘದ ಚಟುವಟಿಕೆ ಕಾಲೇಜು ನಮಗೆ ವಹಿಸಿದ ಕೆಲಸಗಳಾದಮೇಲೆ ಮಾತ್ರ ಹಾಗೂ ಅದಕ್ಕೆ ಯಾವ ಬಗೆಯ ಧಕ್ಕೆಯೂ ಉಂಟಾಗತಕ್ಕದ್ದಲ್ಲ, ನಮ್ಮ ಸ್ವಂತ ಬರವಣಿಗೆಯನ್ನು ಯಾವ ಕಾರಣಕ್ಕೂ ಸಂಘದಿಂದ ಪ್ರಕಟಿಸತಕ್ಕದ್ದಲ್ಲ. ಕಾಲೇಜಿನಿಂದ ಯಾವ ಧನ ಸಹಾಯದ ನಿರೀಕ್ಷೆ ಮಾಡುವುದಿಲ್ಲ. ಹೀಗೆ ಅನೇಕ ನಿಯಮಗಳನ್ನು ಹಾಕಿಕೊಂಡು ಚಾಚು ತಪ್ಪದಂತೆ ಪಾಲಿಸಿಕೊಂಡು ಬಂದೆವು. ಈಗ ಪುಸ್ತಕ ಪ್ರಕಟಣೆ ಎಂದರೆ ಅದು ಇತರರದ್ದೇ ಆಗಿರಬೇಕು. ಹಾಗಾಗಿ, ನಾವು ಮೊತ್ತ ಮೊದಲು ಕೈಗೆತ್ತಿಕೊಂಡ ಪುಸ್ತಕ, ಕಾ. ವೆಂ. ರಾಜಗೋಪಾಲರ “ನದಿಯಮೇಲಿನ ಗಾಳಿ.” ಶ್ರೀಯುತರು ಆಗ ಎಂ. ಇ. ಎಸ್. ಕಾಲೇಜಿನ ಕನ್ನಡ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈ ಪುಸ್ತಕದ ಸಂಪಾದನೆ, ನಾಕಾರು ಬಾರಿ ಕರಡು ತಿದ್ದುವುದು ಎಲ್ಲ ಕೆಲಸಗಳೂ ನನ್ನವೇ. ಆಗ ಶೇಷನಾರಾಯಣರ ಮುದ್ರಣಾಲಯ ನಮ್ಮ ಮನೆ ಬಳಿಯೇ ಇತ್ತು. ಪುಸ್ತಕದ ಕಾರ್ಯಗಳೆಲ್ಲಾ ಅಲ್ಲಿಯೇ. ಹಾಗಾಗಿ ಅದು ನನಗೆ ಅನುಕೂಲಕರವಾಗಿಯೂ ಇತ್ತು. ಇದರಿಂದ ನಾನು ಪುಸ್ತಕದ ಪ್ರಕಟಣೆಯಕಾರ್ಯದಲ್ಲಿ ನಿಪುಣನಾದೆ. ಯಾವುದೊಂದು ಸಣ್ಣ ಮುದ್ರಣ ದೋಷವೂ ಉಳಿಯದಂತೆ ಕರಡು ತಿದ್ದುತ್ತಿದ್ದೆ. “ನೀವು ಕನ್ನಡ ಅಧ್ಯಾಪಕರಾಗಿರಬೇಕಾಗಿತ್ತು” ಎಂದು ರಾಜು ಹಾಸ್ಯ ಮಾಡುತ್ತಿದ್ದರು. ನೂರಾರು ಪುಸ್ತಕಗಳನ್ನು ಪ್ರಕಟಿಸುವ ಕನ್ನಡ ಸಂಘ (ವರ್ಷ ೨೦೦೮ ರಲ್ಲಿ ಕ್ರೈಸ್ಟ್ ಕನ್ನಡ ಸಂಘವೆಂದು ಹೆಸರಿಸಲಾಯಿತು) ಕರ್ನಾಟಕ ರಾಜ್ಯ ಕೇಂದ್ರೀಯ ಸಾಹಿತ್ಯ ಅಕೆಡೆಮಿ ಪ್ರಶಸ್ತಿ ಮತ್ತು ಇನ್ನೂ ಹಲವಾರು ಪ್ರಶಸ್ತಿ ಗೌರವಗಳನ್ನು ತನ್ನ ಮುಡಿಗೆ ಸೇರಿಸಿಕೊಂಡಿದೆ.

‘ಕ್ರಿಸ್ತಾಂಜಲಿ’ :

ಕನ್ನಡದಲ್ಲಿ ಎಸು ಕ್ರಿಸ್ತನಬಗ್ಗೆ ಅನೇಕ ಕವನಗಳಿವೆ. ಅವನ್ನೆಲ್ಲ ಸಂಕಲಿಸಿ, ಇಂದಿನ ಕವಿಗಳಿಂದಲೂ ಹೊಸ ಕವಿತೆಗಳನ್ನು ಬರೆಸಿ,ಒಂದು ಪುಸ್ತಕ ಪ್ರಕಟಿಸಬೇಕೆಂದು ಯೋಚಿಸಿ ಆ ಕೆಲಸ ಪೂರೈಸಿದೆವು. ಹೊಸದಾಗಿ ಕವನ ಬರೆದವರಲ್ಲಿ ಶಿವಮೊಗ್ಗದ ಸಾಹಿತಿ, ‘ನಾ. ಡಿಸೋಜ’ ಒಬ್ಬರು. ಪ್ರತಿಬಾರಿ ನಾವೇ ಸಂಪಾದಕರು ಯಾಕೆ (ನಮ್ಮ ಪಾಲಿನ ಕೆಲಸವಿದ್ದೇ ಇರುತ್ತದೆ) ಬೇರೆ ಬೇರೆ ಕಾಲೇಜು, ವಿಶ್ವವಿದ್ಯಾಲಯಗಳನ್ನು ಸಂಪರ್ಕಿಸೋಣ. ಸಂಪಾದಕತ್ವ ವಹಿಸಬಲ್ಲ ಯಾರನ್ನಾದರೂ ಶಿಫಾರಿಸು ಮಾಡಿ ಎಂದು ‘ಡಾ. ಜಿ. ಎಸ್. ಶಿವರುದ್ರಪ್ಪ’ನವರನ್ನು ಕೇಳಿದೆವು. ಅವರು ಆಗ ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಅವರು ವಿದ್ಯಾರ್ಥಿಗಳಾಗಿದ್ದ ‘ನರಹಳ್ಳಿ ಬಾಲಸುಬ್ರಹ್ಮಣ್ಯ’ ಮತ್ತು ‘ಲಕ್ಷ್ಮಣ ಕೊಡಸೆ’ ಅವರ ಹೆಸರು ಹೇಳಿದರು. ಕ್ರಿಸ್ತಾಂಜಲಿಗೆ ಈ ಇಬ್ಬರದ್ದೇ ಸಂಪಾದಕತ್ವ.

ಕ್ರಿಸ್ತಾಂಜಲಿ ಪ್ರಕಟವಾಯಿತು. ಸಾಕಷ್ಟು ಪ್ರಸಿದ್ಧವೂ ಆಯಿತು. ಪ್ರತಿಭಾನುವಾರ ನಾನೂ, ರಾಜು ಚರ್ಚುಗಳ ಮುಂದೆ ನಿಂತು ಮಾರಾಟವನ್ನೂ ಮಾಡಿದೆವು. ಇಷ್ಟೆಲ್ಲಾ ಆದನಂತರ ಒಮ್ಮೆ ಪ್ರಿನ್ಸಿ ಪಾಲರು ಕರೆದು ಒಂದು ಪತ್ರವನ್ನು ಕೊಟ್ಟು “ನೋಡಿ” ಎಂದರು. ಅದರಲ್ಲಿ “ಕ್ರಿಸ್ತಾಂಜಲಿ ಯ ಒಂದು ಕವನ ಸಮಸ್ತ ಕ್ರೈಸ್ತರ ಭಾವನೆಗಳಿಗೆ ಧಕ್ಕೆ ತರುತ್ತದೆಂದು ಕೂಡಲೇ ಪುಸ್ತಕವನ್ನು ಹಿಂತೆಗೆದುಕೊಳ್ಳದಿದ್ದರೆ ಆರ್ಚ್ ಬಿಷಪ್ ರವರಿಗೆ ದೂರು ಸಲ್ಲಿಸಲಾಗುವುದೆಂದು” ಹೇಳಲಾಗಿತ್ತು. ಒಬ್ಬ ಪಾದ್ರಿ ಆ ಪತ್ರವನ್ನು ಬರೆದಿದ್ದರು. ನಾನು “ಇದನ್ನು ಈಗತಾನೇ ನೋಡುತ್ತಿದ್ದೇನೆ. ತಪ್ಪಿದ್ದಲ್ಲಿ ಹಾಗೆ ಮಾಡೋಣ. ಮೊದಲು ವಿಚಾರಿಸುತ್ತೇನೆ” ಎಂದು ಹೇಳಿ ಬಂದೆ. ನಾನೂ ರಾಜು ಕೂತು ಯೋಚಿಸಿದೆವು. ಮೊದಲು ಸ್ವಲ್ಪ ಸಮಯ ತೆಗೆದುಕೊಳ್ಳಬೇಕಾಗಿತ್ತು. ಪ್ರಿನ್ಸಿಪಾಲರ ಬಳಿ ಹೋಗಿ ಇದರ ಲೇಖಕರನ್ನು ಸಂಪರ್ಕಿಸಿ ಅವರ ಅಭಿಪ್ರಾಯವನ್ನು ತೆಗೆದುಕೊಳ್ಳುತ್ತೇವೆ. ಅವರಿಗೆ ಹೇಳದೆ ಅವರ ಕವನವನ್ನು, ಅದೂ ನಾವೇ ಕೇಳಿ ಬರೆಸಿಕೊಂಡ ಕವನವನ್ನು ತೆಗೆದುಹಾಕುವುದು ನೈತಿಕವಾಗಿ ಸರಿಯಲ್ಲವೆಂದು ತಿಳಿಸಿದೆವು.

ಕೂಡಲೇ ನಾ. ಡಿಸೋಜರಿಗೆ ಟ್ರಂಕ್ ಕಾಲ್ ಬುಕ್ ಮಾಡಿ ಮಾತನಾಡಿದೆ. ಅವರು ಒಂದೇ ಒಂದು ಅಕ್ಷರವನ್ನು ಬದಲಿಸಲೂ ಒಪ್ಪಲಿಲ್ಲ. “ನಾನು ಬರೆದಿದ್ದರಲ್ಲಿ ಬದಲಿಸುವಂಥದ್ದೇನೂ ಇಲ್ಲ. ಉಳಿದದ್ದು ನಿಮ್ಮಿಷ್ಟ” ಎಂದು ಫೋನ್ ಇಟ್ಟು ಬಿಟ್ಟರು. ಈಗ ಪುಸ್ತಕದಿಂದ ಆ ಹಾಳೆಗಳನ್ನು ಹರಿದುಹಾಕಿದರೆ ಹೇಗೆ ಎಂಬ ವಿಚಾರ ಬಂದಿತು. ಅದು ರಾಜು ಅವರಿಗೆ ಇಷ್ಟವಾಗಲಿಲ್ಲ. ಪುಸ್ತಕವನ್ನೇ ಹಿಂತೆಗೆದುಕೊಳ್ಳೋಣ ಎಂದರು. ಇದಕ್ಕೆ ನನ್ನ ಮನಸ್ಸು ಒಪ್ಪಲಿಲ್ಲ. ಇಷ್ಟೆಲ್ಲಾ ಕಷ್ಟಪಟ್ಟು ಮಾಡಿ, ಕೊನೆಗೆ ಚರ್ಚುಗಳ ಮುಂದೆ ನಿಂತು ಮಾರಾಟಮಾಡಿದ ಪುಸ್ತಕವನ್ನು ಈಗ ಹಿಂತೆಗೆದುಕೊಳ್ಳುವುದು ಎಂದರೆ ? ಜೊತೆಗೆ ಇದು ಪುಸ್ತಕ ಸಂಸ್ಕೃತಿಯ ದೃಷ್ಟಿಯಿಂದಲೂ ಆರೋಗ್ಯ ಕರವಾದುದಲ್ಲ ಎನ್ನಿಸಿತು. ರೆಕ್ಟರ್ (ಸಂಸ್ಥೆಯ ಮುಖ್ಯಸ್ಥರು) ಅವರೊಂದಿಗೆ ಮಾತನಾಡೋಣ. ಎಂದು ಹೋಗಿ ವಿಷಯವನ್ನು ಸೂಕ್ಷ್ಮವಾಗಿ ಹೇಳಿದೆ. “ಕವನದ ಲೇಖಕರು ಒಂದು ಅಕ್ಷರದ ಬದಲಾವಣೆಗೂ ಒಪ್ಪುತ್ತಿಲ್ಲ. ಜೊತೆಗೆ ಅವರೂ ಕ್ರೈಸ್ತರು. ಪುಸ್ತಕದಲ್ಲಿನ ಹಾಳೆ ಹರಿಯುವುದು ಸುಲಭ. ಆದರೆ ಈಗಾಗಲೇ ಪುಸ್ತಕ ಅನೇಕರ ಮನೆ ತಲುಪಿಯಾಗಿದೆ. ಯಾರಿಂದಲೂ ಆಕ್ಷೇಪಣೆ ಏನೂ ಬಂದಿಲ್ಲ. ಈಗ ನಾವು ಹೀಗೆ ಮಾಡಿದರೆ ಅದೇ ಜನರ ಗಮನವನ್ನು ಸೆಳೆಯಬಹುದು. ಅದೂ ಅಲ್ಲದೆ ಈ ಪುಸ್ತಕದ ಹೊರತಾಗಿಯೂ ಚರ್ಚುಗಳಲ್ಲಿನ ವಿದ್ಯಮಾನಗಳು , ಅಲ್ಲಿನ ಪುರೋಹಿತಶಾಹಿ,ವ್ಯವಸ್ಥೆಯ ಕುರಿತಾಗಿ ಸಾಕಷ್ಟು ಪದ್ಯಗಳು ಬಂದಿವೆ. ಹಾಗಾಗಿ ‘ಸುಮ್ಮನಿದ್ದು ಬಿಡೋಣ’ ಎನಿಸುತ್ತದೆ, ಫಾದರ್” ಎಂದೆ. ಅವರೂ ” ಈ ವಿಷಯವನ್ನು ಯಾಕೆ ಅಷ್ಟು ಎಳೆಯುತ್ತೀರಿ,ಉಪೇಕ್ಷಿಸಿ” ಎಂದರು. ವಿವಾದ ಮುಗಿಯಿತು. ಅದೇನೇ ಇರಲಿ ಕ್ರಿಸ್ತಾಂಜಲಿಯನ್ನು ಜನರು ಒಪ್ಪಿಕೊಂಡರು. ಅನೇಕ ಕಡೆಗಳಿಂದ ಬಹಳ ಒಳ್ಳೆಯ ಮಾತುಗಳು ಬಂದವು. ಇಂದು ಕ್ರಿಸ್ತಾಂಜಲಿಯ ಪ್ರತಿಗಳೇ ಲಭ್ಯವಿಲ್ಲ. ಪುಸ್ತಕ ಪ್ರಕಟಣೆಯಲ್ಲಿ ನಮಗೆ ಇದು ಸಾಕಷ್ಟು ಅನುಭವ ನೀಡಿತು. ಹೀಗೆಯೇ ಕೆಲವು ಘಟನೆಗಳು ನಡೆದು ಪುಸ್ತಕಪ್ರಕಟಣೆಯಲ್ಲಿ ನಮಗೆ ವಿಭಿನ್ನ ಅನುಭವಗಳನ್ನು ನೀಡಿತು. ಎಚ್. ಏನ್. ರವರ “ತೆರೆದ ಮನ”, ಎ . ಏನ್. ಮೂರ್ತಿಯವರ ಸಮಗ್ರ ಪ್ರಬಂಧಗಳು ಇಂತಹ ಪುಸ್ತಕಗಳನ್ನು ಕ್ರೈಸ್ಟ್ ಕಾಲೇಜ್ ಕನ್ನಡ ಸಂಘ ಪ್ರಕಟಿಸಿತು.

ಸಾಹಿತಿಗಳ ಸಾಂಗತ್ಯದಲ್ಲಿ :

ಕನ್ನಡ ಸಂಘದಿಂದ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಿದ್ದೆವು. ಅವುಗಳಲ್ಲಿ ಮುಖ್ಯವಾದವು ಆ. ನ. ಕೃ ಅವರ ಸ್ಮರಣೆಯಲ್ಲಿ. “ಆ ನ.ಕೃ ಪ್ರಬಂಧ ಸ್ಪರ್ಧೆ” ಮತ್ತು ಬೇಂದ್ರೆಯವರ ಹೆಸರಿನ “ಬೇಂದ್ರೆ ಕವನ ಸ್ಪರ್ಧೆ” ಇವು ಕ್ರೈಸ್ಟ್ ಕಾಲೇಜಿಗೆ ಸೀಮಿತವಾಗಿರದೆ. ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ತೆರೆದಿತ್ತು. ಕರ್ನಾಟಕದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರು. ಸ್ಪರ್ಧೆಯ ಆಯ್ದ ಕವನಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಉಚಿತವಾಗಿ ಹಂಚುತ್ತಿದ್ದೆವು ಈ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಎಲ್ಲಿ ನಡೆಯಬೇಕು ಎಂಬ ವಿಚಾರ ಬಂದಿತು. ನಮ್ಮ ವಿದ್ಯಾರ್ಥಿಗಳಿಗೆ ನಮ್ಮ ಗಣ್ಯಮಾನ್ಯ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಪರಿಚಯವೇ ಇರಲಿಲ್ಲ. ಅದನ್ನು ಮಾಡಬೇಕು ಎಂದುಕೊಂಡೆವು. ಆದರೆ ಅನೇಕ ಸಾಹಿತಿಗಳು ಬೆಂಗಳೂರಿನಿಂದ ಹೊರಗಿದ್ದರು. ಅವರನ್ನು ಕರೆಸಿದರೆ ಅವರ ವಾಸ್ತವ್ಯ ಹಾಗೂ ಪ್ರಯಾಣದ ಖರ್ಚು ಧರಿಸಲು ಸಂಘದಿಂದ ಸಾಧ್ಯವಿರಲಿಲ್ಲ. ಜೊತೆಗೆ ಆ ಸಾಹಿತಿಗಳು ವಯೋವೃದ್ಧರೂ ಆಗಿದ್ದರು. ಕೊನೆಗೆ, ಅವರ ಮನೆಯಲ್ಲೇ ಏಕೆ ಮಾಡಬಾರದು ಎಂದು ಯೋಚಿಸಿ ಪ್ರಯತ್ನಿಸಿದೆವು. ಅದು ಇನ್ನೊಂದು ಯಶಸ್ವೀ ಕಾರ್ಯಕ್ರಮವಾಯಿತು. ಕಾರ್ಯಕ್ರಮ ಬೇಂದ್ರಯವರ ಜನ್ಮ ದಿನವಾದ ಜನವರಿ ೩೧ರಂದು ನಡೆಯುತ್ತಿತ್ತು. ವಿದ್ಯಾರ್ಥಿಗಳು ತಮ್ಮದೇ ಖರ್ಚಿನಲ್ಲಿ ಬರಬೇಕಾಗಿತ್ತು. ನಾವು ವಾಸ್ತವ್ಯ ಮತ್ತು ಊಟದ ವ್ಯವಸ್ಥೆಯನ್ನು ಮಾತ್ರ ಮಾಡುತ್ತಿದ್ದೆವು. ಅನೇಕ ವಿದ್ಯಾರ್ಥಿಗಳು ತಮ್ಮ ತಮ್ಮ ತಂದೆ ತಾಯಿಯರನ್ನೂ ಕರೆದುಕೊಂಡು ಬರುತ್ತಿದ್ದರು. ಕೆಲವು ಪೋಷಕರಂತೂ “ನೀವು ಏನೂ ಮಾಡಬೇಡಿ ಅಂತಹ ಮಹಾ ಮಹಿಮರಿಂದ ನಮ್ಮ ಮಕ್ಕಳು ಬಹುಮಾನ ಸ್ವೀಕರಿಸುವುದನ್ನು ನಾವು ನೋಡಬೇಕು” ಎಂದು ಹೇಳಿ ಬರುತ್ತಿದ್ದರು. ನಮ್ಮ ಉದ್ದೇಶ ವಿದ್ದದ್ದು ಮುಂದಿನ ಪೀಳಿಗೆಯ ಮಕ್ಕಳಿಗೆ ನಮ್ಮ ಸಾಹಿತ್ಯ ದಿಗ್ಗಜರ ಪರಿಚಯ, ಮುಖ ಪರಿಚಯವಾಗಲಿ ಎಂಬುದು.

ಮಾಸ್ತಿಯವರ ಮನೆಯಲ್ಲಿ ಕಾರ್ಯಕ್ರಮ :

ಈ ಸರಣಿಯ ಮೊದಲ ಕಾರ್ಯಕ್ರಮ ನಡೆದದ್ದು ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರ ಮನೆಯಲ್ಲಿ. ಆಗಲೇ ಅವರಿಗೆ ೮೦ ವರ್ಷಗಳಾಗಿತ್ತು. ಹೋಗಿ ಅವರಿಗೆ ಕಾರ್ಯಕ್ರಮದ ವಿವರಗಳನ್ನು ತಿಳಿಸಿದೆವು. ಸಂತೋಷವಾಗಿ ಒಪ್ಪಿಕೊಂಡರು. ಮಕ್ಕಳಿಗೆ ಕಾಫಿ, ತಿಂಡಿ ವ್ಯವಸ್ಥೆಯನ್ನು ನಾವು ಮಾಡುತ್ತೇವೆ ಎಂದೆ. ಅದಕ್ಕವರು “ನೋಡಿ ನೀವು ನಮ್ಮ ಮನೆಗೆ ಅತಿಥಿಗಳು ಎಷ್ಟು ಹೊತ್ತಿಗೆ ಬರುತ್ತೀರಿ ? ಸುಮಾರು ಎಷ್ಟು ಜನ ಬರುತ್ತೀರಿ ಎಂದು ತಿಳಿಸುವುದು ಮಾತ್ರ ನಿಮ್ಮ ಕೆಲಸ. ಉಳಿದ ಯಾವುದರಲ್ಲೂ ನೀವು ತಲೆಹಾಕಬಾರದು ! ಎಂದು ಬಿಟ್ಟರು.

ಕಾರ್ಯಕ್ರಮದ ದಿನದಂದು ಅವರ ಅರವತ್ತು ದಾಟಿದ ಇಬ್ಬರು ಅಳಿಯಂದಿರು ಸೊಂಟಕ್ಕೆ ಶಲ್ಯ ಕಟ್ಟಿಕೊಂಡು ನಮ್ಮ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮತ್ತು ನಮಗೆ ಕಾಫಿ ತಿಂಡಿಯ ಸಮಾರಾಧನೆಯನ್ನೇ ನಡೆಸಿಬಿಟ್ಟರು. ನಮಗೆ ಮಾಡಿದ ಉಪಚಾರ ಹೇಗಿತ್ತೆಂದರೆ ನಮಗೆ ನಾವೇ ಅವರ ಮನೆಯ ಯಾವುದೋ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೀವೇನೊ ಎಂಬಂತಹ ಭಾವ. ಈ ಉಪಚಾರದ ನಂತರ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ. ನಡುಮನೆಯಲ್ಲಿ ಮೂರು ಕುರ್ಚಿಗಳನ್ನು ಹಾಕಿಸಿದ್ದರು. ನೀವು ಮಾತ್ರ ಕುಳಿತುಕೊಳ್ಳಿ ಎಂದದ್ದನ್ನು ಮಾಸ್ತಿಯವರು ಕೇಳಲೇ ಇಲ್ಲ. ಎಳೆದು ತಮ್ಮ ಪಕ್ಕದಲ್ಲೇ ಕೂರಿಸಿಕೊಂಡರು. ‘ನೀವು ಉಪಾಧ್ಯಕ್ಷರು ಜೊತೆಗೆ ಪ್ರಿನ್ಸಿಪಾಲರ ಪರವಾಗಿ ಬಂದಿದ್ದೀರಿ. ನಿಮ್ಮನ್ನು ನಾನು ಪ್ರಿನ್ಸಿಪಾಲ್ ಎಂದೇ ಸಂಬೋಧಿಸುತ್ತೇನೆ.’ ಎಂದು ಬಿಟ್ಟರು. ನಾನು ಅವರ ಮೊಮ್ಮಗ ರಾಮೈಯ್ಯಂಗಾರ್ ನ ಸಹಪಾಠಿ ಎಂಬುದನ್ನು ಸೂಕ್ಷ್ಮವಾಗಿ ಅರುಹಿದೆ. (‘ಅಷ್ಟಾವಕ್ರ’ ಎಂಬ ಕಾವ್ಯನಾಮದಿಂದ ಸಾಕಷ್ಟು ಸಾಹಿತ್ಯ ರಚನೆಮಾಡಿದ್ದ ರಾಮೈಯ್ಯಂಗಾರ್ ನ ಅಂಚೆ ಇಲಾಖೆಯ ಆರ್. ಎಂ. ಎಸ್. ವಿಭಾಗದಲ್ಲಿ ಕೆಲಸದಲ್ಲಿದ್ದರು. ಮೂವತ್ತೆರಡರ ಕಿರಿಯ ವಯಸ್ಸಿನಲ್ಲೇ ತೀರಿಕೊಂಡರು) ಅದನ್ನು ಕೇಳಿ ಮಾಸ್ತಿಯವರು ಎರಡು ನಿಮಿಷ ಭಾವಾವಿಷ್ಟರಾಗಿ ಮೌನಿಯಾದರು. ಅನಂತರ ಮಕ್ಕಳನ್ನು ಉದ್ದೇಶಿಸಿ ಸೊಗಸಾಗಿ ಮಾತಾಡಿದರು. ಅವರ ಭಾಷಣವಾದನಂತರ ಸುಮಾರು ಎರಡು ತಾಸುಗಳ ಕಾಲ ಪ್ರಶ್ನೋತ್ತರ ನಡೆಯಿತು. ಮಕ್ಕಳು, ಪೋಷಕರ ಅನೇಕ ಪ್ರಶ್ನೆಗಳು ! ಸಾಮಾಜಿಕವಾದದ್ದು, ಆರ್ಥಿಕವಾದದ್ದು. ಅವರ ಸಾಹಿತ್ಯ, ಸರ್ಕಾರಿಕೆಲಸದ ಅನುಭವಗಳು ಹೀಗೆ ಅನೇಕ ವಿಷಯಗಳ ಮೇಲೆ ವಿಚಾರ ವಿನಿಮಯ ನಡೆಯಿತು. ಬಹಳ ಸಂತೋಷದಿಂದ ಪ್ರಶ್ನೆಗಳಿಗೆ ಮಾಸ್ತಿಯವರು ಉತ್ತರಿಸಿದರು. ಇದೊಂದು ಅಭೂತಪೂರ್ವ ಕಾರ್ಯಕ್ರಮವಾಯಿತು. ನ್ಯಾಷನಲ್ ಕಾಲೇಜ್, ಸೆಂಟ್ರೆಲ್ ಕಾಲೇಜು ಕರ್ನಾಟಕ ಸಂಘ, ಆಚಾರ್ಯ ಪಾಠಶಾಲ ಅಥವಾ ಸಂತ ಜೋಸೆಫರ ಕಾಲೇಜಿನಲ್ಲಾಗಲಿ ಇಂತಹ ಕಾರ್ಯಕ್ರಮ ನಡೆದಿರಲಿಲ್ಲ. ಇದು ಬಹಳ ಖುಷಿ ಕೊಟ್ಟಿತು.

ಕುವೆಂಪು ಸಾನ್ನಿಧ್ಯದಲ್ಲಿ :

ಬೇಂದ್ರೆ ಕಾವ್ಯ ಸ್ಪರ್ಧೆಯ ಬಹುಮಾನ ವಿತರಣೆಗೆ ಸೂಕ್ತ ವ್ಯಕ್ತಿಯೆಂದರೆ ಕುವೆಂಪು ಅವರೇ. ಆದರೆ ಅವರನ್ನು ಸಂಪರ್ಕಿಸುವುದು ಹೇಗೆ ? ಒಪ್ಪಿಸುವುದು ಹೇಗೆ ? ಜೊತೆಗೆ ಅನೇಕರು ಕುವೆಂಪು ಇಂತಹದಕ್ಕೆಲ್ಲ ಒಪ್ಪುವುದಿಲ್ಲ. ಯಾರಿಗೂ ಭೇಟಿ ಸಹ ಕೊಡುತ್ತಿಲ್ಲ. ಎಂದು ಹೇಳಿ ಆತಂಕ ಹುಟ್ಟಿಸಿದರು. ನಾವು ಕುವೆಂಪು ರವರ ಆಪ್ತರಾದ ಡಾ. ಪ್ರಭುಶಂಕರ ಅವರನ್ನು ಹಿಡಿದೆವು. ಅವರಿಗೆ ಎಲ್ಲಾ ವಿವರ ಕೊಟ್ಟೆವು. ಅವರು ಬಹಳ ಸಂತೋಷ ಪಟ್ಟರು. “ನಿಮಗ್ಯಾಕರಿ ? ನಾನು ಒಪ್ಪಿಸುತ್ತೀನಿ. ಜನವರಿ ೩೧ ತಾನೇ ?ನೀವು ಬರೆದುಕೊಂಡು ಬಿಡಿ. ಕಾರ್ಯಕ್ರಮ ಆಗೇ ಆಗುತ್ತದೆ”. ಎಂದುಬಿಟ್ಟರು. ಕುವೆಂಪು ಅವರನ್ನು ನಾವು ವೈಯಕ್ತಿಕವಾಗಿ ಆಹ್ವಾನಿಸಿಯೇ ಇಲ್ಲ. ಪ್ರಭುಶಂಕರ್ ಹೇಳಿದ್ದು. ನಾವು ಕೇಳಿದ್ದು. ಕುವೆಂಪು ಅವರ ಮನೆಯಲ್ಲೇ ಕಾರ್ಯಕ್ರಮ ಎಂದು ಹೇಳಿಬಿಟ್ಟಿದ್ದೇವೆ. ನಮ್ಮದು ಆತಂಕದ ಸ್ಥಿತಿ. ಕೊನೆಗೆ ಕಾಫಿ, ತಿಂಡಿ ವ್ಯವಸ್ಥೆ ಹೇಗೆ ಎಂದು ಹೇಳಿದ್ದಕ್ಕೆ ಪ್ರೊ. ಪ್ರಭುಶಂಕರರು,”ಅದೆಲ್ಲಾ ನಿಮಗ್ಯಾಕ್ರೀ ? ಬರಬೇಕು ಬನ್ನಿ.” ಎಂದುಬಿಟ್ಟರು. ಸರಿ. ನಾವು ಪುಸ್ತಕದ ಗಂಟುಗಳನ್ನು ಹೊತ್ತುಕೊಂಡು ರೈಲಿನಲ್ಲಿ ಹೋದೆವು. ಹಿಂದಿನ ದಿನ ಪ್ರಭುಶಂಕರರಿಗೆ ತಿಳಿಸಿದೆವು. ಕುವೆಂಪು ಅವರ ಕೈಯಿಂದ ಬಹುಮಾನ ಸ್ವೀಕರಿಸುವುದು ಎಂದರೆ ಮಹತ್ವದ ಸಂಗತಿಯೇ ಸರಿ. ಎಲ್ಲಿ ವಿಪರೀತ ಜನ ಸೇರಿಬಿಡುತ್ತಾರೋ ಎಂಬುದು ನನಗೆ ಇದ್ದ ಆತಂಕ. ಬಹುಮಾನ ವಿಜೇತರೇನೋ ಹತ್ತು ಹದಿನೈದು ಜನ ಅಷ್ಟೆ. ಆದರೆ ಭದ್ರಾವತಿ,ಬೆಳಗಾವಿ, ಚಿಕ್ಕೋಡಿ, ಹೀಗೆ ಅನೇಕ ಊರುಗಳಿಂದ ಬರುವವರಿದ್ದು. ಅವರು ತಮ್ಮ ಪೋಷಕರು, ಬಂಧು ಮಿತ್ರರನ್ನು ಕರೆತರುವವರಿದ್ದರು. ಆದರೆ ಒಟ್ಟು ಐವತ್ತು-ಅರವತ್ತು ಜನರಿಗಿಂತ ಹೆಚ್ಚಾಗಿರಲಿಲ್ಲ. ಕುವೆಂಪು ಅವರ ಮನೆ ‘ಉದಯರವಿ’ಯ ಮುಂದಿನ ವಿಶಾಲ ಹುಲ್ಲು ಹಾಸಿನಮೇಲೆ ಕಾರ್ಯಕ್ರಮ. ನಾನು ಕುವೆಂಪು ಅವರನ್ನು ಎಲ್ಲಿ ಕೂರಿಸುವುದು ? ಕುರ್ಚಿ ಎಲ್ಲಿ ಹಾಕುವುದು ಎಂದು ಯೋಚಿಸುವಷ್ಟರಲ್ಲಿ ಕುವೆಂಪು ಬಂದು ಮನೆಯ ಮುಂದಿನ ಕಲ್ಲು ಮೆಟ್ಟಿಲಿನಮೇಲೆ ಕುಳಿತೇ ಬಿಟ್ಟರು.

PLAY READING: Kurukshetra Burning by Kuvempu – Alliance française de  Bangalore

ಜೊತೆಗೆ “ಬನ್ನಿ ಬನ್ನಿ ನೀವಿನ್ನು ಯುವಕರು. ಕೆಳಗೆ ಕೂತರೆ ಕಾಲು ನೋಯುವುದಿಲ್ಲ” ಎಂದು ಹೇಳಿ ಪಕ್ಕದಲ್ಲಿ ಕೂರಿಸಿಕೊಂಡು ಬಿಟ್ಟರು. ನಾನು ಮುದುರಿಕೊಂಡು ಅವರ ಪಕ್ಕದಲ್ಲಿ ಕೂತೆ. ಶ್ರೀನಿವಾಸ ರಾಜು ಕಾರ್ಯದರ್ಶಿಎಂದು ಎಲ್ಲರ ನಡುವೆ ಓಡಾಡುತ್ತಿದ್ದರು. ನಾನು ಸದಾ ಹೀಗೆ ಸಂದಿಘ್ದದಲ್ಲಿ ಸಿಕ್ಕಿಕೊಳ್ಳಬೇಕಾಗುತ್ತಿತ್ತು. ನಾನು ಔಪಚಾರಿಕವಾಗಿ ಕುವೆಂಪು ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ಮಾತಾಡಬಹುದೋ ಬಾರದೋ. ಇದು ಒಂದು ಕಾರ್ಯಕ್ರಮದ ಬದಲಾಗಿ ಗೆಳೆಯರ ಮನೆಗೆ ಬಂದು ಹುಲ್ಲು ಹಾಸಿನಮೇಲೆ ಕೂತಂತಿದೆ. ಎದುರಿಗೆ ಕುವೆಂಪು ಅಂತಹ ವ್ಯಕ್ತಿ ಕೂತಿದ್ದಾರೆ. ಏನುಮಾಡಲಿ ? ಕೊನೆಗೆ ಅವರನ್ನೇ ಕೇಳಿಬಿಟ್ಟೆ. ಸರ್, ಇಂದಿನ ಕಾರ್ಯಕ್ರಮದ ವಿಶಿಷ್ಟತೆ ಬಗ್ಗೆ ಮಕ್ಕಳಿಗೆ, ಅವರ ತಂದೆ ತಾಯಿಯರಿಗೆ ಪ್ರಾಸ್ತಾವಿಕವಾಗಿ ಹೇಳಬೇಕು. ..” ಅವರು ಹೇಳಿ ..ಪರವಾಗಿಲ್ಲ ಹೇಳಿ ಎಂದರು. ನಾನು ಮಾತಾಡುತ್ತಾ “ಮೈಸೂರಿನಲ್ಲಿ ಅದೆಷ್ಟೋ ಪತ್ರಿಕೆಗಳು ಅಚ್ಚಾಗುತ್ತವೆ ನಾವು ಅವುಗಳ ವಿಳಾಸ ತಿಳಿದುಕೊಂಡು ಒಂದು ವಾರದ ಮುಂಚೆಯೇ ಪತ್ರ ಬರೆದು ಕಾರ್ಯಕ್ರಮದ ಆಹ್ವಾನ ಪತ್ರಿಕೆ ಕಳಿಸಿ ಎಲ್ಲ ಮಾಡಿದ್ದೆವು. ಒಬ್ಬ ಪತ್ರಕರ್ತನೂ ಇಲ್ಲಿ ಕಾಣುತ್ತಿಲ್ಲ . ಇದರ ಅರ್ಥ ಕಾರ್ಯಕ್ರಮ ನಾಳೆ ವರದಿಯೂ ಆಗುವುದಿಲ್ಲ. ಈ ಕಾರ್ಯಕ್ರಮ ಮಕ್ಕಳ ಜೀವನದಲ್ಲಿ ಘಟಿಕೋತ್ಸವಕ್ಕಿಂತ ಒಂದು ಒಂದು ತೂಕ ಮಿಗಿಲಾದದ್ದು. ಬಹಳ ವಿಷಾದವಾಗುತ್ತದೆ… ” ಎನ್ನುತ್ತಿರುವಾಗಲೇ ಕುವೆಂಪು “ರಾಮಕೃಷ್ಣ ರಾವ್ ಒಂದು ನಿಮಿಷ” ಎಂದು ಹೇಳಿ, “ಪತ್ರಿಕಾವಾರ್ತೆಯಲ್ಲಿ ಎರಡು ವಿಧ. ಒಂದು ಪತ್ರಿಕಾ ವಾರ್ತೆ, ಇದು ಇಂದು ಓದಿದನಂತರ ಮಾರನೆಯ ದಿನ ಮಸಾಲೆ ದೋಸೆ ತಿಂದು ಕೈವರಸಿಕೊಳ್ಳಲು ಬಳಕೆಯಾಗುವುದು. ಮತ್ತೊಂದು ಅಪತ್ರಿಕಾವಾರ್ತೆ ಎಂದು. ಇದು ಪತ್ರಿಕೆಗಳಲ್ಲಿ ಬರುವುದಿಲ್ಲ. ಆದರೆ ಇಲ್ಲಿ ಬಂದಿರುವ ಮಕ್ಕಳು ಅವರ ತಂದೆತಾಯಿಯರು ಅವರ ಬಂಧುಬಳಗಕ್ಕೆ ಅವರು ಮತ್ತೆ ಅವರ ಮಿತ್ರರಿಗೆ ಹೇಳಿ ಬೆಳಗಾವಿ, ಚಿಕ್ಕೋಡಿ, ಬೆಂಗಳೂರು, ಮೈಸೂರು ಹೀಗೆ ಎಲ್ಲೆಡೆ ಪ್ರಸಾರವಾಗುತ್ತದೆ, ಶಾಶ್ವತವಾಗಿ ಉಳಿಯುತ್ತದೆ. ನೀವು ವಿಷಾದ ಪಡಬೇಕಾಗಿಲ್ಲ ಎಂದರು. ನನಗೆ ಬಹಳ ಸಂತೋಷವಾಯಿತು. ಪತ್ರಿಕಾ ವಾರ್ತೆ ಎಂಬ ಮಾತನ್ನು ಕೇಳಿದ್ದೇನೆ ಹೊರತು ಅಪತ್ರಿಕಾವಾರ್ತೆ ಎಂಬ ಪದವನ್ನು ಕೇಳಿರಲಿಲ್ಲ. ಹೊಸಪದವೊಂದನ್ನು ಕಲಿತಂತಾಯಿತು. ಈ ನಡುವೆ ಹಲಸಿನ ಹಪ್ಪಳ ಮತ್ತು ಇನ್ನೂ ಏನೇನೋ ತಿಂಡಿಗಳ ಸಮಾರಾಧನೆಯೂ ಆಯಿತು. ಸಂಕೋಚ ಬೇಡ, ತೆಗೆದುಕೊಳ್ಳಿ ಎಂದರು ಕುವೆಂಪು. ಎಲ್ಲವೂ ಬಹಳ ಚೆನ್ನಾಗಿ ನಡೆಯಿತು. ಕುವೆಂಪು ಮಕ್ಕಳನ್ನುದ್ದೇಶಿಸಿ ಸೊಗಸಾಗಿ ಮಾತನಾಡಿದರು. ಬಹಳ ಆತ್ಮೀಯತೆಯಿಂದ ಅವರ ಪ್ರಶ್ನೆಗಳಿಗೆ ಉತ್ತರಿಸಿದರು. ಸಂತೋಷದಿಂದ ಹಿಂದಿರುಗಿದೆವು.

ಮುಂದೆ ಅನಕೃ ಪ್ರಬಂಧ ಸ್ಪರ್ಧೆಯ ಸಂದರ್ಭದಲ್ಲಿ ಸಾಲಿಗ್ರಾಮದಲ್ಲಿ ಶಿವರಾಮ ಕಾರಂತರನ್ನು ಭೇಟಿಯಾಗುವುದು ಎಂದು ಯೋಚಿಸಿದೆವು. ಮಂಗಳೂರಿಗೆ ಹೋಗಿ ಅಲ್ಲಿಂದ ಸಾಲಿಗ್ರಾಮಕ್ಕೆ ಬಂದು ಕಾರಂತರ ಮನೆ ತಲುಪಿದೆವು. ಕಾರ್ಯಕ್ರಮ ಆರಂಭವಾಯಿತು ಅಂದು ನಮ್ಮೊಂದಿಗೆ ಎಚ್. ಎಸ್. ರಾಘವೇಂದ್ರ ರಾವ್ ಬಂದಿದ್ದರು. ಬಹುಮಾನ ವಿಜೇತ ಮಕ್ಕಳನ್ನು ಪರಿಚಯಿಸಲು ಎಚ್. ಎಸ್ ಆರ್. ಅವರೇ ನಿಂತರು ನಾನು ಯಥಾಪ್ರಕಾರ ಕಾರಂತರ ಪಕ್ಕದಲ್ಲಿ ಕುಳಿತೆ. ರಾಘವೇಂದ್ರ ರಾಯರು ಮಕ್ಕಳನ್ನು ಪರಿಚಯಿಸುತ್ತಾ “ಇವರೆಲ್ಲರೂ ಉದಯೋನ್ಮುಖ ಕವಿಗಳು” ಎಂದರು. ಆಗ ಕಾರಂತರು ಅವರನ್ನು ತಡೆದು, “ಹಾಗಾದರೆ ನಾನು ಅಂತ್ಯೋನ್ಮುಖ ಕವಿಯೇ ” ಎಂದು ಕೇಳಿಬಿಟ್ಟರು. ಅವರೇ ಮುಂದುವರೆಸುತ್ತಾ, “ಯಾವುದೇ ಬರಹಗಾರ ಹಿಂದೆ ಎಷ್ಟೇ ಬರೆದಿರಲಿ ಅವನ ಹೊಸ ಕೃತಿಯ ಮಟ್ಟಿಗೆ ಅವನು ಉದಯೋನ್ಮುಖನೇ. ಒಬ್ಬ ತಾಯಿ ಎಂಟು ಮಕ್ಕಳನ್ನು ಹೆತ್ತಿದ್ದರೆ, ಆ ಎಂಟನೆಯದಕ್ಕೂ ಹೆರಿಗೆ ಬೇನೆಯನ್ನು ಅನುಭವಿಸಲೇಬೇಕು”. ಎಂದರು. ಅನಂತರ ಅಮೋಘವಾದ ಭಾಷಣ, ಅಲ್ಲಿನ ಸೊಗಸಾದ ಕಡುಬಿನ ಸತ್ಕಾರ ಎಲ್ಲವೂ ನಡೆಯಿತು. ಪ್ರಶ್ನೋತ್ತರ ಸಂದರ್ಭದಲ್ಲಿ ಒಂದು ಘಟನೆ ನಡೆಯಿತು. ಒಬ್ಬ ವಿದ್ಯಾರ್ಥಿ “ನೀವು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದಿರಿ ಎಂದು ನಾನು ಓದಿದ್ದೇನೆ. ದೇಶ ಸ್ವಾತಂತ್ರವಾದಮೇಲೆ ನಿಮಗೆ ಯಾವುದೇ ಪ್ರಶಸ್ತಿ ಸಿಗಲಿಲ್ಲ. ನಿಮಗೆ ಆ ನೋವೇನಾದರೂ ಇದೆಯೇ ? ಎಂದು ಕೇಳಿಬಿಟ್ಟ. ನಮಗೆ ಆತಂಕಕ್ಕಿಟ್ಟುಕೊಂಡಿತು. ಆದರೆ, ಕಾರಂತರು ಇದಕ್ಕೆ ಮಾರ್ಮಿಕವಾದ ಉತ್ತರ ಕೊಟ್ಟರು. “ನೋಡಿ, ಇಲ್ಲಿ ನಾವು ಬಹಿರ್ದೆಸೆಗೆ ಹೋಗುವಾಗ ಚೊಂಬು ತೆಗೆದುಕೊಂಡು ಹೋಗುತ್ತೇವೆ. ಪಕ್ಕದ ಕಣದಲ್ಲಿನ ಬಣವೆಗೆ ಬೆಂಕಿ ಹತ್ತಿಕೊಂಡಿದ್ದರೆ ನಮ್ಮ ನೈಸರ್ಗಿಕ ಕರೆಯ ಒತ್ತಡವನ್ನು ಸಹಿಸಿಕೊಂಡು ಚೊಂಬಿನಲ್ಲಿನ ನೀರನ್ನು ಬಳಸಿ ಬಣವೆಯ ಬೆಂಕಿಯನ್ನು ಆರಿಸಲು ಬಳಸುತ್ತೇವೆ. ಯಾಕೆಂದರೆ ಬೆಂಕಿ ಮುಂದುವರಿದು ನನ್ನ ಬಣವೆಯನ್ನೂ ಸುಡುತ್ತದೆ ಎಂದು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಾನು ಮಾಡಿದ್ದು ಇಷ್ಟೆ. ಇದಕ್ಕೆ ಪ್ರಶಸ್ತಿ ಕೊಡಬೇಕಿಲ್ಲ” ಎಂದರು. ಹೀಗೆ ಸಾಕಷ್ಟು ಮಾತುಕತೆಯಾಯಿತು. ಈ ದಿನ ಇಲ್ಲೇ ಇದ್ದು ಹೋಗಬಾರದೇ ಎಂದು ಕೇಳಿದ ಕಾರಂತರಿಗೆ ವಂದಿಸಿ, ಬೆಂಗಳೂರಿಗೆ ಬಂದೆವು.

ಮುಂದೆ ‘ಗಿರೀಶ್ ಕಾರ್ನಾಡ್’ (ಆಗ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿರಲಿಲ್ಲ) ಹೀಗೆ ಅನೇಕ ಸಾಹಿತಿಗಳನ್ನು ಅವರ ಮನೆಯಲ್ಲಿ ನಮ್ಮ ಕಾಲೇಜಿನ ಮಕ್ಕಳೊಂದಿಗೆ ಭೇಟಿಯಾದೆವು. ಒಮ್ಮೆ ‘ಕೊರವಂಜಿ ಖ್ಯಾತಿಯ ಡಾ. ಶಿವರಾಂ ‘ಅವರನ್ನು ಭೇಟಿಯಾಗಲು ಹೋಗಿದ್ದಾಗ ಕಾಲೇಜಿನ ಪ್ರಿನ್ಸಿಪಾಲ್ ಬಂದಿದ್ದರು. ಡಾ. ಶಿವರಾಂ ಹೇಗೂ ನನಗೆ ನನ್ನ ವಿದ್ಯಾರ್ಥಿ ದೆಸೆಯಿಂದಲೇ ಪರಿಚಿತರಾಗಿದ್ದರು. ನಾನು ಪ್ರಿನ್ಸಿಪಾಲರನ್ನು ಡಾ ಶಿವರಾಂ ಅವರಿಗೆ ಪರಿಚಯಿಸಲು ಹೋದಾಗ, ಶಿವರಾಂ, “ನೀನೇನಯ್ಯ ಪರಿಚಯ ಮಾಡೋದು ? ಎಂದು ಪ್ರಿನ್ಸಿಪಾಲರೊಂದಿಗೆ ಮಲೆಯಾಳದಲ್ಲಿ ಮಾತನಾಡತೊಡಗಿದರು. ಡಾ. ರಾಶಿಯವರ ಮನೆಯಲ್ಲಿ ನಡೆದ ಈ ಕಾರ್ಯಕ್ರಮ ಒಂದು ಅದ್ಭುತವಾದ ಕಾರ್ಯಕ್ರಮವಾಯಿತು. ನಮ್ಮ ಪ್ರಿನ್ಸಿಪಾಲರಿಗೆ ಬಹಳ ಸಂತೋಷವಾಯಿತು.

ಹೀಗೆ ಕನ್ನಡ ಸಂಘದಿಂದ ಅನೇಕ ಚಟುವಟಿಕೆಗಳನ್ನು ಮಾಡಿದೆವು. ವಿಜ್ಞಾನದ ವಿದ್ಯಾರ್ಥಿಯಾದ ನನಗೆ ಸಾಹಿತಿಗಳ ಹತ್ತಿರದ ಒಡನಾಟ ತಂದದ್ದು ಕನ್ನಡ ಸಂಘ. ನಾನು ಸಂಘಕ್ಕೆ ಮಾಡಿದೆ ಎಂದಲ್ಲ ಕನ್ನಡ ಸಂಘ ನನಗೆ ಮಾಡಿದ ಮಹದಾಶೀರ್ವಾದ ಇದು.

ಒಂದು ಅಗ್ನಿ ಪರೀಕ್ಷೆ :

ಕ್ರೈಸ್ಟ್. ಕಾಲೇಜಿನಲ್ಲಿ ನಾನು ಅತ್ಯಂತ ಹಿರಿಯ ಉಪನ್ಯಾಸಕನಾಗಿ ಅದರ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದೆ. ಅದರ ಗವರ್ನಿಂಗ್ ಕೌನ್ಸಿಲ್ ಸದಸ್ಯನಾಗಿ ಸಭೆಗಳಲ್ಲಿ ಭಾಗವಹಿಸುತ್ತಿದ್ದೆ. ಪ್ರಿನ್ಸಿ ಪಾಲರು ಇಲ್ಲದಿದ್ದರೆ ಅಧಿಕೃತವಾಗಿ ಹೇಳದಿದ್ದರೂ ವೈಸ್ ಪ್ರಿನ್ಸಿಪಾಲ್ ಕೆಲಸವನ್ನೂ ನಿರ್ವಹಿಸುತ್ತಿದ್ದೆ. ಒಮ್ಮೆ ಪರೀಕ್ಷೆಗಳು ನಡೆಯುತ್ತಿದಾಗ ಪರೀಕ್ಷೆಗಳ ಮುಖ್ಯಾಧಿಕಾರಿಯಾಗಿದ್ದ ಪ್ರಿನ್ಸಿಪಾಲರು ಅನ್ಯ ಕಾರ್ಯ ನಿಮಿತ್ತ ಹೊರಹೋಗಬೇಕಾಗಿತ್ತು. ನಾನು ಅವರ ಸ್ಥಾನದಲ್ಲಿ ಪರೀಕ್ಷಾ ಮುಖ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೆ. ಕಾಲೇಜಿನ ಸಭಾಂಗಣದಲ್ಲಿ ಪರೀಕ್ಷೆ ನಡೆಯುತ್ತಿತ್ತು ೧೨೦ ಜನ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ಅಂದು ಬಿ. ಎ ಪದವಿಯ ಇತಿಹಾಸ ವಿಷಯದ ಪರೀಕ್ಷೆ. ನಾನು ಪರಿವೀಕ್ಷಣೆಗಾಗಿ ವಿದ್ಯಾರ್ಥಿಗಳ ಮಧ್ಯೆ ಓಡಾಡುತ್ತಿದ್ದೆ. ಒಬ್ಬ ವಿದ್ಯಾರ್ಥಿ ಹೆದರಿದಂತೆ ಕಂಡಿತು. ನಾನು ಅಲ್ಲೇ ತುಸು ಹೊತ್ತು ನಿಂತೆ. ಅವನು ಎದ್ದು ನಿಂತು ನಡುಗುತ್ತಿದ್ದ. ನಾನು ಏನೆಂದು ವಿಚಾರಿಸಿದೆ. ಅವನ ಬಳಿ ಭಾರತದ ಎರಡು ಭೂಪಟಗಳಿದ್ದವು. ನಾವು ಪ್ರತಿಯೊಬ್ಬರಿಗೂ ಕೊಟ್ಟಿದ್ದೇ ಒಂದೊಂದು. ಇವನು ಪಕ್ಕದಲ್ಲಿದ್ದವನಿಂದ ತೆಗೆದುಕೊಂಡು ನಕಲು ಮಾಡುತ್ತಿದ್ದದ್ದು ತಿಳಿಯಿತು. ಬೇರೆ ವಿದ್ಯಾರ್ಥಿಯಾಗಿದ್ದಿದ್ದರೆ ಡಿಬಾರ್ ಮಾಡಿ ಕಳಿಸುತ್ತಿದ್ದೆ. ಇವನು ಬ್ರದರ್. ಒಂದು ರೀತಿಯಲ್ಲಿ ನಮಗೆ ಸಂಬಳ ಕೊಡುವವ. ನಮ್ಮ ಕಾಲೇಜಿನ ನಿರ್ವಹಣೆ ಧರ್ಮಾರಾಮ್ ಕಾಲೇಜಿನದು. ಇವನು ಅಲ್ಲಿಗೆ ಸೇರಿದವನು. ಈಗ ನಾನೇನು ಮಾಡಬೇಕು ? ಎಲ್ಲರ ಗಮನ ನನ್ನ ಮೇಲಿತ್ತು. ಅವನಿಗೆ ತನ್ನ ಉತ್ತರ ಪತ್ರಿಕೆಗಳನ್ನು ತೆಗೆದುಕೊಂಡು ನನ್ನನ್ನು ಹಿಂಬಾಲಿಸಲು ಹೇಳಿದೆ. ಗಣಿತ ಉಪನ್ಯಾಸಕರಾದ ಶಾಸ್ತ್ರಿಗಳು ನೀವು ಮಕ್ಕಳೊಂದಿಗರು. ಅವನಿಗೆ ಹೆಚ್ಚು ಶಿಕ್ಷೆ ವಿಧಿಸಬೇಡಿ , ಮತ್ತೆ ಬರೆಯುವ ಅವಕಾಶ ಕೊಡದೆ ಕಳಿಸಿ ಎಂದರು. ನಾನು ಕಾನೂನಿನ ಪ್ರಕಾರ ಏನು ಕ್ರಮ ತೆಗೆದುಕೊಳ್ಳಬೇಕೋ ಆ ಕ್ರಮ ತೆಗೆದುಕೊಂಡು ಅವನಿಂದ ಹೇಳಿಕೆ ಬರೆಸಿಕೊಂಡು ವಿಶ್ವವಿದ್ಯಾನಿಲಯಕ್ಕೆ ವರದಿಕೊಟ್ಟು ನಾಳಿನಿಂದ ಪರೀಕ್ಷೆಗಳಿಗೆ ಬರುವ ಅವಶ್ಯಕತೆ ಇಲ್ಲ ಎಂದು ಹೇಳಿಕಳಿಸಿದೆ. ಸ್ವಲ್ಪ ಹೊತ್ತಿನಲ್ಲೇ ಒಬ್ಬ ಜವಾನ ಬಂದು “ನಿಮ್ಮನ್ನು ರೆಕ್ಟರ್ ಕರೆಯುತ್ತಿದ್ದಾರೆ ಬನ್ನಿ” ಎಂದ. ನಾನು ಇಂದಿನ ಘಟನೆಯನ್ನು ಕುರಿತು ಮಾತನಾಡಲು ಆದರೆ ಬರುವುದಿಲ್ಲ ಎಂದು ಹೇಳು. ಪ್ರಿನ್ಸಿಪಾಲ್ ನಾಳೆ ಬರುತ್ತಾರೆ. ಅವರಿಗೆ ವರದಿಮಾಡಿ ನಂತರ ಬರುತ್ತೇನೆ. ಬೇರೆಯ ವಿಷಯವಾದರೆ ಪರೀಕ್ಷಾ ಕಾರ್ಯ ಮುಗಿದ ಹತ್ತು ನಿಮಿಷದಲ್ಲಿ ಅಲ್ಲಿರುತ್ತೇನೆ”. ಎಂದು ಹೇಳಲು ಹೇಳಿ ಕಳಿಸಿದೆ. ಅವರು ಕರೆಯಲಿಲ್ಲ. ನಾನು ಹೋಗಲಿಲ್ಲ. ರಾತ್ರಿ ಯಿಡೀ ಇದೇ ಯೋಚನೆಯಲ್ಲಿ ನಿದ್ದೆಯಿಲ್ಲದೆ ಕಳೆದೆ.

ಬೆಳಿಗ್ಯೆ ಕಾಲೇಜಿಗೆ ಬಂದವನೇ ಪ್ರಿನ್ಸಿಪಾಲರ ಬಳಿ ಹೋಗಿ ನಡೆದ ವಿಷಯವನ್ನು ಅವರಿಗೆ ಅರುಹಿದೆ. “ನನಗೆ ಕಾಲೇಜಿನ ಘನತೆ ಮುಖ್ಯವಾಗಿತ್ತು. ನಿಮ್ಮ ಪರವಾಗಿ ಕೆಲಸಮಾಡುತ್ತಿದ್ದೆ. ಯಾವ ತಪ್ಪಿಗೆ ಏನು ಶಿಕ್ಷೆಯೋ ಅದನ್ನು ವಿಧಿಸಿದೆ ” ಎಂದು ಹೇಳಿದೆ. ತಲೆತಗ್ಗಿಸಿಕೊಂಡು ಕೇಳುತ್ತಿದ್ದ ಅವರು ಎದ್ದು ಬಂದು, “ಭೇಷ್ ನಾನೇ ಆಗಿದ್ದರೂ ಇದನ್ನೇ ಮಾಡುತ್ತಿದ್ದೆ. ಏನೂ ಯೋಚನೆ ಮಾಡಬೇಡಿ” ಎಂದರು. ನಾನು ಧನ್ಯವಾದಗಳನ್ನರ್ಪಿಸಿದೆ. ಅವರು “ನೀವಲ್ಲ, ನಾನು ಧನ್ಯವಾದಗಳನ್ನು ಹೇಳಬೇಕು. ನಮ್ಮ ಘನತೆಯನ್ನು ಕಾಪಾಡಿದಿರಿ” ಎಂದರು. ‘ಹೃದಯ ವೈಶಾಲ್ಯ’ ಎಂದು ಕೇಳಿರುತ್ತೇವೆ. ಅಂದು ಪ್ರತ್ಯಕ್ಷ ಅನುಭವಿಸಿದೆ. ಆ ಬ್ರದರ್ ಗೆ ಕೊಟ್ಟಿದ್ದ ಅಧಿಕೃತ ಮೇಲ್ವಸ್ತ್ರವನ್ನು ಹಿಂತೆಗೆದುಕೊಂಡು ಕಳಿಸಿದರಂತೆ.


ಮಾನ್ಯ ಸಂಪಾದಕರು,
ನಸುಕು.ಡಾಟ್. ಕಾಮ್.

ನನ್ನ ಮೇಲಿನ ಲೇಖನ, ಕ್ರೈಸ್ಟ್ ಕಾಲೇಜ್ ಬೆಂಗಳೂರು, ನ ‘ಕನ್ನಡ ಸಂಘ’ ಕಟ್ಟಿ ಬೆಳೆಸುವ ಸಮಯದ ಕೆಲವು ಅನ್ಮೋಲ್ ಕ್ಷಣಗಳು, ವನ್ನು ನಿಮ್ಮ ಪತ್ರಿಕೆಯಲ್ಲಿ ಪ್ರಕಟಿಸಲು ಇಚ್ಛಿಸುತ್ತೇನೆ. ಇದರ ವಿಶೇಷತೆ ಏನೆಂದರೆ, ಬೆಂಗಳೂರಿನ ಕ್ರಿಶ್ಚಿಯನ್ ಕಾಲೇಜೊಂದರಲ್ಲಿ ರೂಪುಗೊಂಡ ಒಂದು ಕನ್ನಡ ಸಂಘ ಕನ್ನಡ ನಾಡಿನ ಅನೇಕ ಮಹಾನ್ ಲೇಖಕರ ಪುಸ್ತಕಗಳನ್ನು ಅಚ್ಚುಹಾಕಿ ಪ್ರೋತ್ಸಾಹಿಸಿದೆ. ಇದರ ಜನಪ್ರಿಯತೆ ಎಷ್ಟೆಂದರೆ ಈಗಾಗಲೇ ಸುಮಾರು ಪುಸ್ತಕಗಳು ಪ್ರಕಟಗೊಂಡಿವೆ. ಈ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಪ್ರೊ. ರಾಜು ಮತ್ತು ವಿಜ್ಞಾನದ ಪ್ರಾಧ್ಯಾಪಕರಾಗಿದ್ದ ಪ್ರೊ. ಎಚ್. ಆರ್. ರಾಮಕೃಷ್ಣ ರಾವ್, ಪ್ರೊ. ಎಚ್. ಎಸ್. ರಾಘವೇಂದ್ರ ರಾವ್, ಪ್ರೊ. ಶಾಸ್ತ್ರೀ ಮೊದಲಾದವರು. ಇವರೆಲ್ಲಾ ಕನ್ನಡ ಮಾತೆಯ ಪರಿಚಾರಕರು.

ಕ್ರೈಸ್ಟ್ ಕಾಲೇಜಿನಿಂದ ವೃತ್ತರಾದಮೇಲೆ :

ಪ್ರೊ. ಎಚ್. ಆರ್. ರಾವ್ ಕ್ರೈಸ್ಟ್ ಕಾಲೇಜಿನಿಂದ ತಮ್ಮ ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತರಾದನಂತರ ‘ಉದಯಭಾನು ಕಲಾ ಸಂಘ’ ವೆಂಬ ಸಾರ್ವಜನಿಕ ಸೇವಾ ಸಂಸ್ಥೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ವರ್ಷ ೨೦೧೦ ರಲ್ಲಿ ಪ್ರಾರಂಭವಾದ ‘ಉದಯಭಾನು ಉನ್ನತ ಅಧ್ಯಯನ ಕೇಂದ್ರದ ಗೌರವ ನಿರ್ದೇಶಕ’ರಾಗಿ ಕೆಲಸಮಾಡಿದರು. ಭೌತ ವಿಜ್ಞಾನಶಾಸ್ತ್ರದ ಹಿರಿಯ ಗೌರವ ಪ್ರಾಧ್ಯಾಪಕರಾಗಿ, ಸಂವಹನಕಾರರಾಗಿ, ಹಾಗೂ ಸಾಹಿತ್ಯಿಕ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತಮ್ಮ ಯೋಗದಾನ ಮಾಡುತ್ತಾ ಬಂದಿದ್ದಾರೆ. ‘ಉದಯಭಾನು ವಿದ್ಯಾರತ್ನ’ ಎಂಬ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

-ಎಚ್ಚಾರೆಲ್

(ಕ್ರೈಸ್ಟ್ ಕಾಲೇಜ್ ಕನ್ನಡ ಸಂಘದ ಪ್ರಕಟಣೆಗಳ ಹಲವಾರು ಪುಸ್ತಕಗಳನ್ನು ಓದಿ ಬಲ್ಲ ಪ್ರಿಯ ಓದುಗನೊಬ್ಬ)
ವಾಸ್ತವ್ಯ : ಮುಂಬಯಿ.