ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಒಲವಿನದೊಂದು ಪತ್ರ

ಸಿಂಧೂರಾ ಹೆಗಡೆ
ಇತ್ತೀಚಿನ ಬರಹಗಳು: ಸಿಂಧೂರಾ ಹೆಗಡೆ (ಎಲ್ಲವನ್ನು ಓದಿ)

ಪ್ರೀತಿಯಿಂದ,

ಹೇಗಿದೀಯಾ? ನಾನಿಲ್ದೇನೂ ತುಂಬಾ ಚೆನ್ನಾಗಿದೀಯಾ ಅನ್ಸುತ್ತೆ. ಮತ್ತೆ, ಎಲ್ಲಾ ಅರಾಮಲ್ವಾ?ನಿನ್ಗೇನು, ಬೊಗಸೆ ತುಂಬಾ ಪ್ರೀತಿ ಕೊಟ್ರೆ, ಮಡಿಲಲ್ಲಿ ಲಾಲಿ ಹಾಡೋ ತಾಯಿಯಷ್ಟು ಪ್ರೀತೀನಾ ವಾಪಸ್ ಕೊಡ್ತೀಯಾ ಅಲ್ವಾ.! ಬಹುಶಃ, ದುರದೃಷ್ಟ ನಂದು ಅನ್ಸತ್ತೆ. ತುಂಬಾ ದಿನ ನಿನ್ ಜೊತೆ ಇರ್ಲಿಲ್ಲ ಅನ್ನೋ ಭಾವಕ್ಕಿಂತ ಇರಲ್ಲ ಅನ್ನೋ ಭಾವನೆನೇ ಗಂಟಲನ್ನ ಬಿಗಿಯಾಗಿ ಹಿಡ್ಕೊಳತ್ತೆ. ಮಾತೇ ಬರಲ್ಲ ನೋಡು.

ಸ್ನೇಹ, ಪ್ರೇಮ ಅನ್ನೋ ಭಾವನೆಗಳಿಗೆ ವ್ಯಾಖ್ಯಾನ ಕೊಡ್ಲೇಬೇಕು ಅಂತಿದ್ರೆ, ಅದಕ್ಕೆ ಅನ್ವರ್ಥದಂತೆ ನಿಲ್ಲೋದು ನೀನು. ನಿಂಜೊತೆಯಾಗಿ ಬರೋ ಪ್ರತೀ ನಡೆ, ನುಡಿನೂ ಕೂಲಂಕಷವಾಗಿ ಆಲಿಸ್ತೀಯಲ್ವಾ, ಆ ಗುಣಾನಾ ಜೀವಮಾನ ಪೂರ್ತಿ ಇಷ್ಟಪಡ್ತೀನಿ ನಾನು. ಕೇಳೋದೇನೋ ಸುಲಭ, ಆದ್ರೆ ಆಲಿಸೋದು; ಯಾವುದೇ ತಕರಾರು ಮತ್ತು ಮರುಮಾತುಗಳಿಲ್ದೇ.! ಅದೇನೋ ಗೊತ್ತಿಲ್ಲ, ಮೌನ ಕೂಡ ತುಂಬಾನೇ ಹಿತವಾಗಿರತ್ತೇ ಅಂತ ಗೊತ್ತಾಗಿದ್ದು ಆ ಸಂಧ್ಯೆಗಳಲ್ಲಿ. ನಿನ್ ಜೊತೆ ಅದೇನೋ ಚಾರ್ಮ್ ಅನ್ನೋದು ಬರುತ್ತಲ್ವಾ, ಅದಕ್ಕೋಸ್ಕರ. ಜಿಟಿ ಜಿಟಿ ಮಳೇಲೂ, ಸುಡೋ ಬೇಸಿಗೇಲೂ, ಕೊರೆಯೋ ಚಳೀಲೂ ನಿಂದೊಂದು ಅಪ್ಯಾಯಮಾನವಾದ ಅಪ್ಪುಗೆ ಒಂದ್ ಬದುಕನ್ನೇ ಬದಲಾಯಿಸಿಬಿಡುತ್ತೇನೋ. ಬದುಕು ಅನ್ನೋದಕ್ಕಿಂತ, ಜೀವನದಲ್ಲಿರೋ ಧ್ಯೇಯಗಳನ್ನ! ಮತ್ತೇನಂದ್ರೆ, ಕನಸಿದ್ರೆ, ಕನಸನ್ನ ಕಾಣೋದಿದ್ರೆ ನಿನ್ನ ತರಹ ಕಾಣ್ಬೇಕು. ನನಸಾಗಿಲ್ಲಅಂದ್ರೂ ಕೊರಗೋದಿಲ್ಲ, ವಾಸ್ತವವಾದ್ರೆ ಅದೆಷ್ಟು ಜತನವಾಗಿ ಕಾಪಾಡ್ತಿಯಾ ನೋಡು, ಆ ಥರ​.

ಚಿತ್ರ ಕೃಪೆ : ಸಿಂಧೂರಾ ಹೆಗಡೆ

ಕಥೆ ಹೇಳೋವ್ರದ್ದು ಪೂರ್ತಿ ವಿಷ್ಯಾನಾ ಕೇಳ್ತೀಯಾ, ಸರಿ.. ಆದ್ರೆ, ನಿನ್ ಕಥೆ ಯಾರಿಗ್ ಹೇಳ್ತೀಯಾ? ಕಂಬಿಯಲ್ಲಿ ಇಣುಕೋ ಮಿಹಿರನತ್ರ, ಒಂದ್ ಸಲನಾದ್ರೂ ಹೇಳಿದ್ಯಾ, ನಿನ್ ಮಧ್ಯಾಹ್ನದ ಕಿರಣಗಳು ತುಂಬಾ ಸುಡುತ್ತೆ ಅಂತ, ಅಥವಾ ಶರತ್ನಲ್ಲಿ ಪೂರ್ತಿ ಹಿಮಾಲಯನೇ ಸೂರಿನ್ಮೇಲೆ ಬೀಳ್ಸೋ ಆ ಮಂಜಿನ ಹತ್ರ ಹೇಳಿದ್ಯಾ, ನಿನಗೆ ತುಂಬಾ ಚಳಿ ಆಗತ್ತೆ ಅಂತ? ಮುಂದೆ ಅಲ್ಲೆಲ್ಲೋ ನಿನ್ ಥರನೇ ಮೌನವಾಗೇ ಓಡಾಡ್ತಾ ಇರ್ತಾನಲ್ವ, ಆ ಮುದ್ದು ನಾಯಿಮರಿ, ಅದ್ರತ್ರ ಹೇಳ್ಕೋಬೋದಿತ್ತು ನನ್ಗೂ ನಿನ್ ತರಹ ಮುದ್ದು ಮಾಡೋರು ಬೇಕಿತ್ತಂತ. ಯಾವ್ದೋ ಮಧ್ಯಾಹ್ನಗಳ ಗಲಭೆ, ಮಧ್ಯರಾತ್ರಿಗಳಲ್ಲಿನ ನೀರವ ಮೌನ, ಬೆಳಗಿನ ಹೊತ್ತಿನ ಪ್ರಕಾಶತೆ ಇವೆಲ್ಲದರ ಮಧ್ಯೆ ನಿನ್ನನ್ನ ಪ್ರೀತಿಯಿಂದ ಆವರಿಸಿದ್ಯಾರು? ಅಲ್ಲೆಲ್ಲೋ ಮುಂದಿನ ಸಾಲಿನಲ್ಲಿ ಹರಿಯೋ ಹೊಳೆಗೂ ನೋಡು ನಿನ್ನತ್ರ ಇರೋ ನಿಶ್ಶಬ್ಧನೇ ಇರೋದು. ಆದ್ರೆ, ವ್ಯತ್ಯಾಸ ಏನ್ ಗೊತ್ತಾ, ಅದೂ ಕೂಡ ಬತ್ತತ್ತೆ, ನೀನ್ ಅಚಲವಾಗೇ ಉಳಿತೀಯಾ.

ಅಲ್ಲಿ ಮೆಟ್ಟಿಲುಗಳ ಹತ್ರ ಮನೇಲೀರೋ ಪುಟಾಣಿಗಳೆಲ್ಲಾ ಸೇರಿ ಆಟ ಆಡೋವಾಗ, ಅವ್ರೆಲ್ರಿಗಿಂತಾ ಖುಷಿ ಪಟ್ಟಿದ್ದು ನೀನಲ್ವಾ? ಅವ್ರು ಎದ್ದು, ಬಿದ್ದು, ಆಡಿ, ಕಡೆಗೊಮ್ಮೆ ಮುಖ ಎಲ್ಲಾ ಕೆಂಪು ಮಾಡ್ಕೊಂಡು ಅಳ್ತಾ ಹೋದಾಗ ಆ ನೋವಿಗೆ ನೀನು ನಿಶ್ಶಬ್ಧದಿಂದಾನೇ ಸಾಂತ್ವನ ಹೇಳಕ್ಕೆ ಪ್ರಯತ್ನಿಸಿದ್ದೆ ಅಲ್ವಾ? ಅದೇ ಮಕ್ಕಳು ತುಂಬಾ ದೊಡ್ಡೋರಾಗಿ ಮುಂಜಿ, ಮದುವೆ, ತಮ್ ಸಂಸಾರ, ಸಂತೋಷ, ರಗಳೆಗಳನ್ನೆಲ್ಲಾ ಮಾಡೋವಾಗ ನಿನ್ ಪ್ರತೀ ಉಸಿರಲ್ಲೂ ಇವುಗಳ ಖುಷಿನಾ ನೋಡ್ದೇ ಅಲ್ವಾ.? ಅದ್ ಹೇಗ್ ಸಾಧ್ಯ, ಇಷ್ಟೊಂದು ನಿಸ್ವಾರ್ಥ ಪ್ರೇಮ ಅನ್ನೋದು? ತೋಟದಂಚಲ್ಲಿರೋ ಅಪ್ಪೆ ಮರ ಕೂಡ ಈ ಸಲ ಬಿದ್ದು ಹೋಯ್ತಲ್ವಾ, ಅದಕ್ಕೂ ನೀನು ಕಣ್ಣೀರು ಹಾಕ್ದೆ ತಾನೇ? ಇಷ್ಟು ವರ್ಷ ಜೊತೆಲಿರೋವ್ರೆಲ್ಲಾ ನಿನ್ನನ್ನ ಬಿಟ್ಟು ಹೋದಾಗ, ತುಂಬಾ ಬೇಸರ ಆಗತ್ತೆ ಅಂತ ಗೊತ್ತು. ಆದ್ರೂ ನೀನ್ ಬೇಜಾರ್ ಮಾಡ್ಕೊಂಡಿರೋದು ನಮಗೆ ಗೊತ್ತೇ ಆಗಲ್ಲ ನೋಡು, ನಾವೆಷ್ಟಂದ್ರೂ ಮನುಷ್ಯರಲ್ವಾ….

ನಿನ್ನ ಹತ್ರ ಇರೋ ಇವಿಷ್ಟೂ ಒಳ್ಳೇ ಗುಣಾನೂ ನಾವೆಲ್ರೂ ಅಳವಡಿಸಿಕೊಂಡಿದ್ರೆ ಬದುಕು ಸುಂದರ ಅನ್ನೋದಕ್ಕಿಂತ ಅರ್ಥಪೂರ್ಣವಾಗಿರ್ತಿತ್ತು. ಸಹನೆ, ನಿಸ್ವಾರ್ಥತೆ, ಪರಿಶುದ್ಧತೆ, ಪಾವಿತ್ರ್ಯತೆ ಸಾಕಲ್ವಾ ಜೀವ್ನ ನಡ್ಸೋದಕ್ಕೆ? ಅದೆಷ್ಟ್ ಹಬ್ಬ ಹರಿದಿನಗಳನ್ನ ನೋಡಿದ್ಯೋ, ವೈವಿಧ್ಯತೆಗಳಲ್ಲಿ ಭಾಗಿಯಾದ್ಯೋ, ಎಲ್ರನ್ನೂ ನಿನ್ನೋರು ಅಂತ ಒಪ್ಪಿ ಅಪ್ಪಿದ್ಯೋ, ಆದ್ರೂ ಎಲ್ರೂ ಹೊಸ ಹೊಸ ಕಾರಣಗಳಿಂದ ನಿನ್ನನ್ನ ಬಿಟ್ಟು ಹೋದ್ರಲ್ವಾ? ಆದ್ರೂ ಇವತ್ತಿಗೂ ವಾಪಸ್ ಬಂದ್ರೆ ಕ್ಷಮೆಯಿಂದ, ಒಲವಿನಿಂದ, ಅದೇ ಮಮಕಾರದಿಂದ ಮಡಿಲಿಗೆ ಎಳ್ಕೋತೀಯಾ. ಎದುರಿಗಿರೋ ಅಂಗಳ, ಮೇಲ್ಹಾಸಿರೋ ಹಂದರ, ಪಡಸಾಲೆ, ಜಗಲಿಯ ಕಂಬ, ಉಪ್ಪರಿಗೆ, ಹೆಬ್ಬಾಗಿಲು, ದೇವರ ಮನೆ, ಅಡುಗೆ ಮನೆ ಹಾಗೂ ಕೊಟ್ಟಿಗೆ ಎಲ್ಲದೂ ಉಳಿದ್ರೂ ಪ್ರೀತಿಯಿಂದ ನಿನ್ನಲ್ಲಿರೋ ಭಾವನೆಗಳನ್ನ ಅಪ್ಪಿಕೊಳ್ಳೋಕ್ಕೆ ಮಾತ್ರ ಯಾರೂ ಇಲ್ಲ ಅಲ್ವ? ನಾನೂ ಕೂಡ ಅವ್ರಲ್ ಒಬ್ರಾದೆ.

ಬಿಟ್ಟು ಹೋದ್ಮೇಲೇನೆ ಗೊತ್ತಾಗೋದು ನೀನಂದ್ರೆ ಏನು ಅನ್ನೋದು.

ಇದೆಲ್ಲಾ ಬಿಡು! ಮುಂದಿನ ಸಲ ಚೌತಿಗೆ ಬರ್ಬೇಕಿದ್ರೆ ಕಲರ್ ಕಲರ್ ಹೂಮಾಲೆ ತರ್ತೀನಿ. ಬೇಡ ಅನ್ನದೇ ತಗೋಳ್ತೀಯಾ ತಾನೇ? ದೀಪಾವಳಿಗ್ ತಪ್ಸ್ದೇ ಈ ಸಲ ಬರ್ತೀನಿ, ಮತ್ತೆ ನಿನಗಿಷ್ಟ ಆಗೋ ಹಣತೇನೆ ಹಚ್ತೀನಿ, ನೋ ಕ್ಯಾಂಡಲ್ಸ್; ಇಷ್ಟಪಡ್ತೀಯಾ ಅಲ್ವಾ? ಯುಗಾದಿಗೆ ಮುತ್ತಿನ ತೋರಣದ ಥರ ಮಾವಿನ್ ತೋರಣ ಮಾಡ್ತೀನಿ. ಒಪ್ಕೋಳ್ತೀಯಾ ಅಲ್ವಾ?

ಮತ್ತೆ ಏನ್ ಗೊತ್ತಾ! ನಿನ್ ಜೊತೆ ಇರೋರ್ ಅಷ್ಟೇ ಅಲ್ದೇ, ನಿನ್ನನ್ನ ಕೂಡ ಪ್ರೀತಿಯಿಂದಾನೇ ನೋಡ್ಕೋ. ಯಾಕಂದ್ರೆ, ನಿನ್ಗಿರೋ ಅಷ್ಟು ಅನಂತ, ಅನನ್ಯ ಪ್ರೀತಿನಾ ಜಗತ್ತಿನಲ್ಲಿ ಯಾರೂ ನಿನಗೆ ಕೊಡೋದಕ್ ಆಗಲ್ಲ. ನೀನೊಂದೆ ಅಲ್ದೇ, ನಿನ್ ಥರ ಇರೋ ತುಂಬಾ ಹೃದಯಗಳು ಪ್ರತಿ ಊರಲ್ಲೂ ಇವೆ; ಬೇಸರಿಸ್ಕೋಬೇಡ.

ಗೊತ್ತು, ನನಗೋಸ್ಕರ ಕಾಯ್ತಿರ್ತೀಯಾ ತಾನೇ!

ಮನೆಯೆಂಬ ಪ್ರೇಮಕ್ಕೆ,
ಒಲವಿನಿಂದ ಮತ್ತದೇ ಮುಗುಳ್ನಗೆಯಿಂದ
ಸಿಂಧೂರಾ