ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕತ್ತೆಯ ಕನಸು

ಮಲಿಕಜಾನ ಶೇಖ
ಇತ್ತೀಚಿನ ಬರಹಗಳು: ಮಲಿಕಜಾನ ಶೇಖ (ಎಲ್ಲವನ್ನು ಓದಿ)

ಅದೊಂದು ಸುಂದರ ಪ್ರವಾಸಿ ತಾಣ. ದಿನಾಲು ಸಾವಿರಾರು ಪ್ರವಾಸಿಗರ ಓಡಾಟ. ಹೀಗಾಗಿ ಅಲ್ಲಿ ಇಂದಿಗೂ ಕುದುರೆ ಗಾಡಿಗಳ ಓಡಾಟ ಬಹಳ. ಪ್ರವಾಸಿಗರು ಕುದುರೆ ಗಾಡಿಗಳಲ್ಲಿಯೆ ಪ್ರವಾಸ ಮಾಡುವದನ್ನು ಇಷ್ಷ ಪಡುತ್ತಾರೆ. ಅಲ್ಲಿದ್ದ ಕೋಟೆ ಬಹು ಸುಂದರ ತಾಣ. ಆದರೆ ಆ ಕೋಟೆಯ ಗೋಡೆ ಕುಸಿದು ಬಿದ್ದಿದ್ದರಿಂದ ಅಲ್ಲಿ ಕಾಮಗಾರಿ ಚಾಲ್ತಿಯಲ್ಲಿತ್ತು.
ಭಾರವಾದ ವಸ್ತುಗಳನ್ನು ಒಯ್ಯಲು-ತರಲು ಕತ್ತೆಗಳ ಉಪಯೋಗ ಮಾಡಲಾಗುತ್ತಿತ್ತು. ಎಲ್ಲ ಕತ್ತೆಗಳು ಸುಮ್ಮನೆ ಮೈಮುರಿದು ಕೆಲಸ ಮಾಡುತ್ತಿದ್ದರೆ, ಒಂದು ಕತ್ತೆ ಮಾತ್ರ ಬಹಳ ಸೋಮಾರಿ. ದಿನಾಲು ಅಲ್ಲಿ ಬರುವ ಕುದುರೆ ಗಾಡಿಯತ್ತ ನೋಡುತ್ತ ನಿಂತುಕೊಂಡು ಅದೇನೊ ವಿಚಾರ ಮಾಡುತಿತ್ತು. ಒಂದು ತರಹ ಅದಕ್ಕೆ ತನ್ನ ಬದುಕಿನ ಮೇಲೆ ಜಿಗುಪ್ಸೆ ಉಂಟಾಗಿತ್ತು. ಅದು ‘ನಾನೇಕೆ ಆ ಕುದುರೆಗಾಡಿಯನ್ನು ಓಡಿಸಬಾರದು..’ ಎಂದು ವಿಚಾರ ಮಾಡತೊಡಗಿತು.

ಕುದುರೆಗಾಡಿಯಲ್ಲಿ ಸುಂದರವಷ್ಟೆ ಅಲ್ಲ, ಹಗುರ ಪ್ರವಾಸಿಗರು ಕೂಡುವರು. ನನಗೆ ತಿಂಡಿಯಲ್ಲಿ ಸ್ವಾದಿಷ್ಟ ಕಡಲೆ ಮತ್ತು ಇನ್ನಿತರ ಚಂದಿ ಸಿಗುತ್ತದೆ. ಈ ಕಲ್ಪನೆಯಲ್ಲಿ ಒಂದು ದಿನ ರಾತ್ರಿ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಯಿತು.

ಕುದುರೆ ಮಾರುಕಟ್ಟೆಗೆ ಹೋದರೆ ನನಗೆ ಕುದುರೆ ಮಾಲಿಕ ಖರೀದಿಸಬಹುದು ಎಂಬ ವಿಚಾರದಲ್ಲಿ ಮರುದಿನ ಮುಂಜಾನೆ ಪಟ್ಟಣದ ಕುದುರೆ ಮಾರುಕಟ್ಟೆಗೆ ಬಂತು. ಅಲ್ಲಿಗೆ ಸಾವಕಾಶ ಕಾಲಿಡುವದೆ ತಡ, ವ್ಯಾಪಾರಿಗಳು, “ಅರೇ.. ಆ ಮುರ್ಖ ಕತ್ತೆದೇನು ಇಲ್ಲಿ ಕೆಲಸ.. ಹೊಡೆಯಿರಿ ಅದಕ್ಕೆ..” ಎನ್ನುತ್ತಾ ದೊಣ್ಣೆಯಿಂದ ಹೊಡೆದು ಹೊರದಬ್ಬಿದರು.

ಒದೆ ತಿಂದ ಕತ್ತೆ ಮುಂದೇನು ಮಾಡಲಿ ಎಂಬ ವಿಚಾರದಲ್ಲಿ ಬಿತ್ತು. ಆಗ ಅದಕ್ಕೆ ತಟ್ಟನೆ ಒಂದು ಉಪಾಯ ಹೊಳೆಯಿತು. ರಾತ್ರಿ ಆಗುವದೆ ತಡ ಅದು ಮಾರುಕಟ್ಟೆ ಸಮೀಪದ ಕುದುರೆ ಲಾಯವನ್ನು ಸೇರಿತು. ಕತ್ತೆ ಬರುವದನ್ನು ನೋಡಿದ ಕುದುರೆಗಳು ಒಮ್ಮೇಲೆ ತಟ್ಟನೆ ಎದ್ದು ನಿಂತವು. ಆಗ ಕತ್ತೆ ಮೆಲ್ಲಗೆ ಧ್ವನಿಯಲ್ಲಿ, “ಕುದುರೆ ಅಣ್ಣಗಳಿರಾ, ನಾನು ಕೋಟೆಯ ಶ್ರಮದ ಕೆಲಸದಿಂದ ಬಹಳ ಬೇಸತ್ತಿದ್ದೇನೆ. ಒಂದು ಟಾಂಗಾ ಓಡಿಸಿಕೊಂಡು ಹಾಯಾಗಿ ಬದುಕಬೇಕೆಂದಿರುವೆ..” ಎಂದಿತು. ಆಗ ಹಿರಿಯ ಕುದುರೆ, “ಆಯಿತಪ್ಪಾ ಕತ್ತೆ, ಅದಕ್ಕೆ ನಾವೇನು ಮಾಡೋಣ. ಇಲ್ಲಿಗೇಕೆ ಬಂದೆ..?” ಎಂದು ಕೇಳಿತು. “ನಿನ್ನೆ ನಾನು ನಿಮ್ಮ ಮಾರುಕಟ್ಟೆಗೆ ಬಂದಿದ್ದೆ. ಅಲ್ಲಿ ನನಗೆ ಕತ್ತೆ ಎಂದು ಹೊರದಬ್ಬಿದರು. ನನಗೆ ಬಹಳ ಕೆಟ್ಟೆನಿಸಿತು. ಅದಕ್ಕೆ ನಿಮ್ಮಿಂದ ಒಂದು ಚಿಕ್ಕ ಸಹಾಯ ಬೇಕಿತ್ತು. ದಯವಿಟ್ಟು ನೀವು ನಿಮ್ಮ ಮೈಮೇಲಿನ ಎರಡೆರಡು ಕೂದಲು ಕೊಟ್ಟರೆ ಬಹಳ ಉಪಕಾರ ಆಗುತ್ತದೆ. ನಾನು ಅವುಗಳ ಒಟ್ಟಿಗೆ ಮಾಡಿ ಹಚ್ಚಿಕೊಳ್ಳುವೆ. ಆಗ ಯಾರಾದರೂ ನನ್ನನ್ನು ಖರೀದಿಸುವರು..” ಎಂದಿತು ಕತ್ತೆ.

ಈ ಮಾತು ಕೇಳಿದ ಕುದುರೆಗಳು ಒಮ್ಮೇಲೆ ಹುಂಕರಿಸಿ ಜೋರಾಗಿ ನಗುತ್ತವೆ. ನಗುತ್ತಲೆ ಬಿಳಿ ಕುದುರೆ, “ನಾವೇನು ನಿನಗೆ ನಮ್ಮ ಒಂದೆರೆಡು ಕೂದಲು ಕಿತ್ತಿ ಕೊಡುತ್ತೇವೆ. ಆದರೆ ನೀನು ನಮ್ಮಂತೆ ಓಡಬಲ್ಲಿಯಾ..” ಎಂದು ಹರಟೆ ಮಾಡಿತು. ಆಗ ಕತ್ತೆ ಉಬ್ಬಿ, “ ಓಡುವದಾ… ಅದೇನು ಮಹಾ. ಮೊದಲು ನೀವು ನನಗೆ ಟಾಂಗಾ ಮಾಲಿಕ ಖರೀದಿಸುವಂತೆ ಮಾಡಿ, ಆಮೇಲೆ ನೋಡಿ..” ಎಂದಿತು. ಮುಂದೆ ಮತ್ತೆ ಹಿರಿಯ ಕುದುರೆ, “ನೋಡು ಕತ್ತೆಯಣ್ಣಾ, ಮನುಷ್ಯ ನಿನ್ನ ರೂಪಕ್ಕೆ ಮರುಳಾಗಿ ಖರೀದಿಸದಿರಬಹುದು. ಆದರೆ ನೀನು ಕತ್ತೆ ಎಂಬುದು ಒಂದಿಲ್ಲಾ ಒಂದು ದಿನ ಗೊತ್ತಾಗುತ್ತದೆ. ಆವಾಗ ನಿನ್ನನ್ನು ಒದ್ದು ದಬ್ಬುತ್ತಾನೆ, ಆವಾಗ..? ನೋಡು ಕೊನೆಗೆ ನಿನ್ನಷ್ಟ..” ಎಂದು ಹೇಳಿತು. ಮುಂದೆ ಎಲ್ಲ ಕುದುರೆಗಳು ಸ್ವಲ್ಪ ಸ್ವಲ್ಪ ಕೂದಲುಗಳನ್ನು ಕಿತ್ತಿ ಕೊಡುತ್ತವೆ.
ಕತ್ತೆ ರಾತ್ರಿ ಇಡಿ ಕೂದಲು ಹಚ್ಚಿ ಶೃಂಗಾರ ಮಾಡಿಕೊಂಡು ಬೆಳಿಗ್ಗೆ ಮಾರುಕಟ್ಟೆಗೆ ಬರುತ್ತದೆ. ಅಲ್ಲಿ ಇದರ ರೂಪಕ್ಕೆ ಮರುಳಾದ ಟಾಂಗಾ ಮಾಲಿಕನೊಬ್ಬ ಖರೀದಿಸಿ ಮನೆಗೆ ತರುತ್ತಾನೆ. ಕತ್ತೆಗೂ ಆನಂದ, ಮಾಲಿಕನಿಗೂ ಸಂತೋಷ. ಮರುದಿನ ಕತ್ತೆಗೆ ಕಡಲೆ, ಚಂದಿ ಮತ್ತು ಹಸಿರು ಮೇವು ಹಾಕಿ ಟಾಂಗಾಗಾಡಿಗೆ ಹೂಡುತ್ತಾನೆ. ಜಿಗಿದು ಮೇಲೆ ಕುಳಿತು ‘ನಡೆ ಕುದುರೆ ನಡೆ’ ಎನ್ನುತ್ತಾನೆ. ಕತ್ತೆ ಮೊದಲು ಸ್ವಲ್ಪ ಚೆನ್ನಾಗಿ ಓಡಿತು. ಮುಂದೆ ಪ್ರವಾಸಿಗರನ್ನು ಕೂಡಿಸಿಕೊಂಡು ನಗರ ಹೊರಗಿನ ಕೋಟೆಯತ್ತ ಓಡಬೇಕಾಗುತ್ತದೆ. ಜನದಟ್ಟನೆ ಇಲ್ಲದ ಆ ದೂರದ ದಾರಿಯಲ್ಲಿ ಜೋರಾಗಿ ಓಡಬೇಕಿತ್ತು. ಆದರೆ ಇದೇಲ್ಲಿ ಓಡಬೇಕು. ಟಾಂಗಾ ಸವಾರ್ ಅದಕ್ಕೆ ಚಾಬೂಕಿನಿಂದ ಜೋರಾಗಿ ಹೊಡೆಯುತ್ತಾನೆ. ಬಿದ್ದ ಪೆಟ್ಟಿಗೆ ಜೋರು ಓಡಲುಹೋದ ಕತ್ತೆ ಕಾಲು ಜಾರಿ ಟಾಂಗಾ ತೆಗೆದುಕೊಂಡು ಬೀಳುತ್ತದೆ. ಟಾಂಗಾ ಉರುಳಿ ಮೈಮೇಲೆ ಬಿದ್ದಿದ್ದರಿಂದ ಕತ್ತೆಯ ಶೃಂಗಾರವೆಲ್ಲಾ ಕಳಚುತ್ತದೆ. ಜೊತೆಗೆ ಮುಂದಿನ ಒಂದು ಕಾಲು ಮುರಿಯುತ್ತದೆ.

ಕತ್ತೆಯ ನಿಜರೂಪ ಗೊತ್ತಾದಾಗ ಟಾಂಗಾ ಮಾಲಿಕನಿಗೆ ಸಿಟ್ಟು ಬಂದು ಹೊಡೆಯುತ್ತಾನೆ. ‘ಥೂ..! ಮೋಸನಾದೆ’ ಎಂದು ಸ್ವತಃಕ್ಕೆ ಬೈದುಕೊಳ್ಳುತ್ತಾ ಒಯ್ದು ಮತ್ತೆ ಕಲ್ಲು ಕಟಿಯುವವರಿಗೆ ಕೊಡುತ್ತಾನೆ. ಕಾಲು ಮುರಿದಿದ್ದರಿಂದ ಆತನು ಹೊರದಬ್ಬುತ್ತಾನೆ. ಆವಾಗ ಮಾತ್ರ ಕತ್ತೆಗೆ ಅರಿವಾಯಿತು, “ನಾವು ನಮ್ಮ ಯೋಗ್ಯತೆಗೆ ತಕ್ಕಂತಹ ಕನಸು ಕಾಣಬೇಕು. ಅಂತಹ ಕೆಲಸ ಮಾತ್ರ ಮಾಡಬೇಕು.”

ಕಥೆಯ ನೀತಿ: ತಮ್ಮ ಸಾಮರ್ಥ್ಯಕ್ಕೆ ಮೀರಿದ ಕನಸು ಕಾಣುವುದು ತಪ್ಪೇನಲ್ಲ ಆದರೆ ಆ ಸಾಮರ್ಥ್ಯವನ್ನು ಸಂಪಾದಿಸುವ ಕುರಿತು ಮೊದಲು ಯೋಚಿಸಬೇಕು.