ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚಿತ್ರ ಕೃಪೆ : ರೇಖಾ ಚಂದ್ರಶೇಖರ್

ಕೆಂಪು ಅಂಚೆ ಪೆಟ್ಟಿಗೆ

ರೇಖಾ ಚಂದ್ರಶೇಖರ್
ಇತ್ತೀಚಿನ ಬರಹಗಳು: ರೇಖಾ ಚಂದ್ರಶೇಖರ್ (ಎಲ್ಲವನ್ನು ಓದಿ)

ಮತ್ತೆ ಏರಲೇ ಬಾಲ್ಯವೆಂಬ ನೆನಪಿನ ಬೆಟ್ಟವ, ನೋವು ನಲಿವು ಎಂಬ ಕಲ್ಲುಮುಳ್ಳುಗಳ ಹಾದಿಯಲ್ಲಿ ಕೂಡಿಟ್ಟ ಖುಷಿಯ ಹಸಿರ ಹಾಸಿನಲಿ…

ಹ್ಞಾ.. ತೇರಿನಬೀದಿಯ ಆಂಜನೇಯ ದೇವಸ್ಥಾನದ ಹಿಂದೆ ವಸಂತ ಬುಕ್ ಬೈಂಡಿಂಗ್ ಹೌಸ್ ಮುಂದೆ, ಕೆಂಪು ಟಪಾಲಿನ ಡಬ್ಬ. ಯಾರು ಬಂದು ಪತ್ರ ಹಾಕ್ತಿದ್ರೋ ಸರಿಯಾಗಿ ಗೊತ್ತಿಲ್ಲ. ಆದ್ರೆ ಪೋಸ್ಟ್ ಮ್ಯಾನ್ ಶಂಕ್ರಣ್ಣ ಟ್ರಿಣ್ ಟ್ರಿಣ್ ಸೈಕಲ್ ಬೆಲ್ ಮಾಡಿಕೊಂಡು ಬಂದು ಬೆಳಿಗ್ಗೆ ೯ಕ್ಕೆ ಒಂದು ಸಾರಿ ಮತ್ತೆ ಸಂಜೆ ನಾಲ್ಕಕ್ಕೆ ಒಂದ್ಸಾರಿ ಟಪಾಲು ಡಬ್ಬ ತೆಗೆದು ಪತ್ರ ಗಳನ್ನ ತೆಗೆದುಕೊಂಡು ಹೆಗಲಿಗೆ ನೇತುಹಾಕ್ಕೊಂಡಿದ್ದ ಕಾಕಿ ಬಣ್ಣದ ಬ್ಯಾಗಲ್ಲಿ ತುಂಬ್ಕೊಂಡು ಮತ್ತೆ ಆ ಪುಟ್ಟ ಬೀಗನ ಭದ್ರಪಡಿಸಿ ಸೈಕಲ್ ಏರಿ ಹೋಗ್ತಿದ್ದ.

ಆಂಜನೇಯ ದೇವಸ್ಥಾನದಲ್ಲಿದ್ದ ವಾನರ ಗುಂಪಿಗೆ ಸೆಡ್ಡು ಹೊಡೆಯೋ ಥ​ರ ಆಡ್ತಿದ್ದ ವಠಾರದ ವಾನರ ಗುಂಪು ಮಾಡ್ತಾ ಇದ್ದ ಕಿತಾಪತಿಗಳಿಗೆ ವಠಾರದವರು ಎಷ್ಟು ರೋಸೋಗಿದ್ರು ಅಂದ್ರೆ, ಬೈಯ್ದು ಬೈಯ್ದು ಅಮ್ಮಂದಿರಿಗೆ ಚಾಡಿ ಹೇಳೋ ತಾಳ್ಮೆ ಕಳ್ಕೊಂಡು ಅವರೇ ಹೊಡೆಯೋಕೆ ಬರುವಷ್ಟರಲ್ಲಿ ರೋಡಿಗೆ ಪರಾರಿ. ವಠಾರದ ವಾನರ ಗುಂಪಿನ ಕುತೂಹಲನೋ ಕುಚೇಷ್ಟೇನೋ ಐದಡಿ ಎತ್ತರದಲ್ಲಿದ್ದ ಪೋಸ್ಟ್ ಡಬ್ಬಿಗೆ  ಕಲ್ಲಿನ ಮೇಲೆಕ್ಕಿ ಸಿಕ್ಕ ಕಡ್ಡಿ ಒಣತೂರೆಲೆ ತುಂಬಿ ಅಲ್ಲಿಂದ ಪರಾರಿ. ಮುಂದಿನ ಪಾಳಿಗೆ ಬಂದ ಶಂಕ್ರಣ್ಣನಿಗೆ ಉರಿಬಿಸಿಲಿನಲ್ಲಿ ಓಡಾಡಿ ಬಂದು ತಲೆ ಒಂದು ಕಡೆ ಬಿಸಿಯಾಗಿದ್ರೆ, ಟಪಾಲಿನ ಬಾಗಿಲು ತೆಗೆದ್ರೆ, ನಾಲ್ಕಾರು ಪತ್ರಗಳ ಜೊತೆ ಡಬ್ಬದ ತುಂಬಿದ್ದ ತರಗೆಲೆ ಕಡ್ಡಿಕಸ ನೋಡಿ ಪಿತ್ತನೆತ್ತಿಗೇರಿ ಆತನ ತಾಳ್ಮೆ ಕಟ್ಟೆ ಒಡೆದು “ಎಲ್ಲಿಂದ ಬಂದವೋ ಈ ಸುಡುಗಾಡು ಪಿಳ್ಳೆಗಳು” ಅಂತ ಕೂಗಾಡಿ ಹೋಗ್ತಿದ್ದ.

ಕ್ರಮೇಣ ಆ ಪಿಳ್ಳೆಗಳ ಗುಂಪು ಚದುರಿ ಬೆಳೆದವು. ಟೆಕ್ನಾಲಜಿ ಎಂಬ ಅಸುರನು ಪೋನು, ಮೊಬೈಲ್ ಭೂತಗಳನ್ನ ಕೈಗಿತ್ತು ಕೆಂಪು ಟಪಾಲಿನ ಡಬ್ಬವನ್ನ ಭಾವನೆಗಳ ತುಂಬಿ ಸಾಲು ಸಾಲು ಹಿಡಿದಿಟ್ಟ ಪತ್ರಗಳಿಂದ ಭಾಂದವ್ಯವನ್ನೇ ಕೊನೆಗಾಣಿಸಿ, ಆ ಕೆಂಪನನ್ನ ಅನಾಥನಾಗಿ ಮಾಡಿದ್ದಾನೆ.

ಹೋಗಿ ಬರಲೇ !

ಇಂತಿ ನಿಮ್ಮ 
-ಶ್ರೀ ಋತು