- ಕೆ ಟಿ ಗಟ್ಟಿಯವರ ನೆನಪಿನಲ್ಲಿ - ಫೆಬ್ರುವರಿ 28, 2024
- ದೂರ ಸಮೀಪಗಳ ನಡುವೆ… - ಜನವರಿ 26, 2024
- “The Nested Love” : ಆಂಗ್ಲ ಭಾಷೆಯ ಹತ್ತು ಕಥೆಗಳ ಸಂಕಲನ - ಫೆಬ್ರುವರಿ 10, 2021
ಕೆ ಟಿ ಗಟ್ಟಿಯವರಲ್ಲಿ ಹೆಸರು, ಸಾಧನೆ, ಕೀರ್ತಿ, ನೆನಪು, ಮನಸ್ಸು ಮುಂತಾದ ಸಂಗತಿಗಳ ಬಗ್ಗೆ ಬಹಳ ಸ್ಪಷ್ಟವಾದ ವಿಚಾರಗಳಿದ್ದವು. ಬಹುಶಃ ಸಾವು, ದೇಹ, ಅಸ್ತಿತ್ವ ಮತ್ತು ಅಪರಲೋಕದ ಭ್ರಮೆಗಳ ಕುರಿತೂ ಅವರಲ್ಲಿ ಅಂಥದೇ ಸ್ಪಷ್ಟತೆಯಿತ್ತು. ಕೇಳಿದ್ದರೆ ನಿಜಕ್ಕೂ ಕುತೂಹಲಕರ ಎನಿಸಬಹುದಾದ ಮಾತುಗಳನ್ನಾಡುತ್ತಿದ್ದರೋ ಏನೊ. ದೇಹದಾನಕ್ಕೆ ಮುಂದಾಗುವ ಹೆಚ್ಚಿನವರಲ್ಲಿ ಅಂಥ ಸ್ಪಷ್ಟತೆ ಇದ್ದೇ ಇರುತ್ತದೆ. 2016ರಲ್ಲಿ, ‘ಮಯೂರ’ಕ್ಕಾಗಿ, ಆಗಿನ ಅದರ ಸಂಪಾದಕರಾಗಿದ್ದ ಸಂದೀಪ ನಾಯಕರ ಕೋರಿಕೆ ಮೇರೆಗೆ ನಾನು ಅವರನ್ನು ಮಾತನಾಡಿಸಿದ್ದೆ. ಆ ಸುದೀರ್ಘ ಮಾತುಕತೆಯನ್ನು ಸಂದರ್ಶನದ ಮಾದರಿಯಲ್ಲಿ ಬರೆಯದೆ, ಅವರದೇ ಮಾತಿನ ಲಯದಲ್ಲಿ ಬರೆದಿದ್ದೆ. ಕೆ ಟಿ ಗಟ್ಟಿಯವರ ನೆನಪಿನಲ್ಲಿ…
ನರೇಂದ್ರ ಪೈ
ನಲವತ್ತೆಂಟು ಕಾದಂಬರಿಗಳು, ಐದು ಕಥಾಸಂಕಲನಗಳು, ಏಳು ಲೇಖನ ಸಂಗ್ರಹಗಳು, ಶಿಕ್ಷಣ, ಭಾಷಾಧ್ಯಯನ ಇತ್ಯಾದಿ ಕುರಿತಂತೆ ಹದಿಮೂರು ಕೃತಿಗಳು, ಹದಿನೆಂಟು ನಾಟಕಗಳು, ಹದಿನಾರು ಬಾನುಲಿ ನಾಟಕಗಳು, ಮುವ್ವತ್ತೆರಡು ಮಕ್ಕಳ ನಾಟಕಗಳು, ಆತ್ಮ ಚರಿತ್ರೆ, ವ್ಯಕ್ತಿಚಿತ್ರ, ತುಳು ಕೃತಿಗಳು, ಇಂಗ್ಲೀಷ್ ಕೃತಿಗಳು, ಪ್ರವಾಸ ಸಾಹಿತ್ಯ, ಕವನ ಸಂಕಲನಗಳು – ಹೀಗೆ ಕೆ ಟಿ ಗಟ್ಟಿಯವರೆಂದೇ ಜನಜನಿತರಾದ ಕೂಡ್ಲು ತಿಮ್ಮಪ್ಪ ಗಟ್ಟಿಯವರದು ಕತೆ-ಕಾದಂಬರಿಗಳಿಗೆ ಸೀಮಿತವಾದ ಲೇಖನಿಯಲ್ಲ. ಅಂತೆಯೇ ಪುತ್ತೂರು ಕರ್ನಾಟಕ ಸಂಘದವರು ಸಮರ್ಪಿಸಿದ ಅಭಿನಂದನಾ ಗ್ರಂಥದ ಹೆಸರೂ ‘ನೆಲದ ಬದುಕು’!
ಇಷ್ಟೊಂದು ವಿಪುಲವಾಗಿ ಬರೆದವರನ್ನು ಮಾತನಾಡಿಸಲು ಹೋಗುವ ಮುನ್ನ ಅವರನ್ನು ಪೂರ್ತಿಯಾಗಿ ಓದಿಕೊಳ್ಳುವ ಸವಾಲು ಇರುವಂತೆಯೇ ಆತ್ಮಚರಿತ್ರೆಯನ್ನೂ ಬರೆದವರನ್ನು ಮತ್ತೆ ಮತ್ತೆ ಪ್ರಶ್ನೆಗಳ ಮೂಲಕ ಕಾಡಿಸಿ ಪೀಡಿಸಿ ಹೊಸತೇನಾದರೂ ಆಡಿಸುವ ಸವಾಲೂ ಇತ್ತು. ಆದರೂ ಭಂಡ ಧೈರ್ಯದಿಂದಲೇ ಹೊರಟಿದ್ದೆ. ಎರಡೂವರೆ ಮೂರು ಗಂಟೆಗಳ ಕಾಲ ಗಟ್ಟಿಯವರು ಆಡಿದ ಮಾತುಗಳಿಂದ ಆಯ್ದ ಕತೆಗಳು ಇದೋ ಇಲ್ಲಿ.
ನಾನು ತುಂಬ ಓದ್ತಿದ್ದೆ. ಸಿಕ್ಕಾಪಟ್ಟೆ ಓದ್ತಿದ್ದೆ. ಮತ್ತೆ ನಾನು ಮನುಷ್ಯರನ್ನು, ಸುತ್ತಲಿನವರನ್ನು ಅಧ್ಯಯನ ಮಾಡುವುದು ಜಾಸ್ತಿ. ಅದು ಅಧ್ಯಯನವೇ ನನಗೆ. ನನ್ನ ಸ್ನೇಹಿತರಾಗಿ ಇರುವವರು, ಇಥಿಯೋಪಿಯದಲ್ಲಿ ಜೊತೆಗಿದ್ದವರೂ ನಿಜವಾಗಿ ಪಾತ್ರಗಳೇ ಆಗಿಬಿಟ್ಟಿದ್ದಾರೆ. ಜಗತ್ತನ್ನು ನೋಡುವ ರೀತಿ ಒಂದು. ಮತ್ತು ಓದು ಇನ್ನೊಂದು. ತಂದೆಯವರ ಪ್ರಭಾವ ಸ್ವಲ್ಪ ಇದೆ ನನ್ನ ಮೇಲೆ. ಅವರು ಯಾರು ಒಂದು ಪೆಟ್ಟು ಕೊಟ್ರೂ ವಾಪಾಸು ಪೆಟ್ಟು ಕೊಡುವ ಮನುಷ್ಯ ಅಲ್ಲ ಅವರು. ಸಾಧು ಸ್ವಭಾವ ಅಂತಲ್ಲ. ಅವರ ನಿಷ್ಠೆ ಹೇಗಿತ್ತು ಅಂತಂದ್ರೆ ಒಂಥರಾ ಗಾಂಧೀಜಿಯ ಹಾಗೆ. ಆದ್ರೆ ಗಾಂಧೀಜಿಯ ಹಾಗೂ ಅಲ್ಲ ಅವರು. ಸಂಸಾರವಂದಿಗ. ಅವರು ಒಳ್ಳೆಯ ಸಂಪಾದನೆ ಮಾಡ್ತಿದ್ದ ಕಾಲವಿತ್ತು. ಯಕ್ಷಗಾನ ವೇಷಧಾರಿಯಾಗಿ. ಕೊನೆಯ ಕಾಲದಲ್ಲಿ, ಅವರಿಗೆ ಅರವತ್ತು ವರ್ಷವಾದಾಗ ತುಂಬ ಬಡತನ ಬಂತು. ಆ ಬಡತನ ಹೇಗೆ ಬಂತು ಅಂದ್ರೆ ಇಂಗ್ಲೀಷರು ಹೋದ ಕೂಡ್ಲೆ ಬಂದ ಬಡತನ ಅದು. ಎಷ್ಟು ಭಯಂಕರವಾಗಿತ್ತು ಬಡತನ ಅಂತ ಹೇಳಿದ್ರೆ, ಜನ ಹೇಳ್ತಿದ್ರು, ಇಂಗ್ಲೀಷರಿದ್ರೇ ಚೆನ್ನಾಗಿತ್ತು. ಎಲ್ಲರೂ ಗೆಣಸು, ಹಲಸಿನ ಹಣ್ಣು ಎಲ್ಲ ತಿಂದುಕೊಂಡು ದಿನ ಕಳೆಯುವ ಸ್ಥಿತಿ ಬಂದಿತ್ತು. ಬಹಳ ಕಡಿಮೆ ಮಂದಿ ಮೂರು ಹೊತ್ತು ಊಟ ಮಾಡುವುದು ಸಾಧ್ಯ ಇತ್ತು ಅಷ್ಟೆ. ಹಾಗಿರುವಾಗ ನಮ್ಮದೇನು ಪ್ರತ್ಯೇಕ ಅಂತೇನೂ ಅಲ್ಲ. ನಾವು ಸಹ ಅದೇ ತರ ಇತ್ತು. ಒಂದು ದಿವಸ ಮಾತ್ರ ರಾತ್ರಿ ಮನೆಯಲ್ಲಿ ಏನೂ ಇರಲಿಲ್ಲ ತಿನ್ಲಿಕ್ಕೆ. ಆಗ ಅತ್ತಿಹಣ್ಣನ್ನು ತಂದು ತಿಂದಿದ್ದೇವೆ. ಅದನ್ನು ನೋಡಿ, ಅಷ್ಟರವರೆಗೆ ನಾನು ನನ್ನ ತಂದೆಯವರ ಕಣ್ಣಲ್ಲಿ ಕಣ್ಣೀರು ಕಂಡವನಲ್ಲ. ಅವರು ಅಳುವವರಲ್ಲ, ಅಳುವ ಸ್ವಭಾವ ಇರಲಿಲ್ಲ ಅವರಲ್ಲಿ. ಬಹಳ ಕಡಿಮೆ ಮಾತು. ಮಾತು ಮಾತ್ರ ಪ್ರತಿಯೊಂದು ಮಾತು ಕೂಡ ಒಂದು ಸುಭಾಷಿತ ಇದ್ದ ಹಾಗಿರ್ತಿತ್ತು. ಅದೆಲ್ಲವು ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರಿರಬಹುದು. ಒಂದು ಮಾತು ಕೂಡ ಪರಿಣಾಮ ಬೀರ್ತದೆ. ಆ ಮಾತು ಹಾಗೆಯೇ ಉಳಿದು ಬಿಡ್ತದೆ ಅದು. ಆ ಮಾತಿನಲ್ಲೆ ಒಂದು ವಿಶ್ವರೂಪ ಕಾಣ್ತದೆ ನಮಗೆ. ಅದನ್ನು ಮಥಿಸ್ತಾ ಇರ್ತದೆ ಮನ. ಮತ್ತೆ ಕನಕದಾಸರ ಕೀರ್ತನೆಗಳು, ಪುರಂದರದಾಸರ ಕೀರ್ತನೆಗಳು, ಎಲ್ಲಾ ಪೌರಾಣಿಕ ಗ್ರಂಥಗಳು ಮನೆಯಲ್ಲಿದ್ದವು. ಅದೆಲ್ಲ ನಾನು ಓದುವುದು. ನಾನು ಕನಕದಾಸರ ಕೀರ್ತನೆಗಳನ್ನು ಮತ್ತೆ ಮತ್ತೆ ಕೇಳ್ತಿದ್ದೆ. ಪುರಂದರದಾಸರ ಕೀರ್ತನೆಗಳಿಗಿಂತ ಕನಕದಾಸರ ಕೀರ್ತನೆಗಳು ನನಗೆ ಆಗಲೇ ಇಷ್ಟ. ಅದರ ಒಳಗೆ ಏನೋ ಒಂದುಂಟಲ್ಲ. ಆಗ ಅರ್ಥ ಆಗದಿದ್ದರೆ ತಂದೆಯವರ ಹತ್ತಿರ ಕೇಳ್ತಿದ್ದೆ. ಅವರು ಪ್ರತಿಯೊಂದಕ್ಕು ಅರ್ಥ ಹೇಳ್ತಿದ್ದರು. ಅದೊಂದು ಆನಂದದ ಕಾಲ ಅದು. ಕಲೀತಿದ್ದೆ ನಾನು. ಮನೇಲಿದ್ದಾಗಲೆಲ್ಲ ಇದೇ ಕೆಲಸ. ಅದೂ ಇದೂ ಓದುದು, ಅರ್ಥ ಕೇಳುವುದು.
ಸೋಮೇಶ್ವರ ಶತಕ ಎಲ್ಲ ಬೈಹಾರ್ಟ್ ಮಾಡ್ತಿದ್ದೆ ನಾನು. ಈಗಲೂ ನನಗೆ ಅವು ಬರ್ತವೆ. ಅರ್ಥ ಆಗದಿದ್ರೆ ಅಪ್ಪನತ್ರ ಕೇಳ್ತಿದ್ದೆ. ಆ ಶಬ್ದಗಳು, ಯಾವ ಶಬ್ದಗಳ ಅರ್ಥವನ್ನು ಕೇಳ್ತಿದ್ದೆ ಅನ್ನುವುದು ಕೂಡ ನನಗಿವತ್ತಿಗೂ ನೆನಪುಂಟು. ಅರೆಯಂ ಸೀಳ್ವೊಡೆ ಎನ್ನುವಾಗ ಅರೆ ಅಂದರೆ ಬಂಡೆ, ಎಲ್ಲ explain ಮಾಡ್ತಿದ್ರು. ಹಾಗೆ ನಾನು ಬಹಳ ಖುಶಿ ಪಡ್ತಿದ್ದೆ. ತುಂಬ ಪುಸ್ತಕಗಳಿದ್ದವು ಮನೆಯಲ್ಲಿ. ಪುರಾತನ ಗ್ರಂಥಗಳು ತುಂಬ ಇದ್ದವು. ಅರ್ಥ ಆಗಲಿ ಆಗದೆ ಇರಲಿ ಓದ್ತಿದ್ದೆ. ತಂದೆಯವರು ಮೂರನೆ ಕ್ಲಾಸ್ ತನಕ ಮಾತ್ರ ಓದಿದ್ದು. ಆದರೂ ಅವರು ತುಂಬಾ ಓದ್ತಿದ್ದರು. ಆಮೇಲೆ ನಾನು ಎಂಟನೆಯ ಕ್ಲಾಸಿನವರೆಗೆ ಪಾಠಪುಸ್ತಕಗಳಲ್ಲಿ ಬಂದಷ್ಟು ಇಂಗ್ಲೀಷ್ ಮಾತ್ರ ಕಲಿತಿದ್ದು. ಟ್ರೈನಿಂಗ್ ಸ್ಕೂಲಿನಲ್ಲಿ ಇಂಗ್ಲೀಷ್ ಬಳಸಬಾರದು ಅಂತ ನಿಯಮ ಇತ್ತು. ಇಂಗ್ಲೀಷರ ವಿರುದ್ಧ, ಗಾಂಧೀಜಿಯವರ ಪ್ರಣೀತ, ಅವರ ವಿದ್ಯಾಭ್ಯಾಸ ಕ್ರಮದಲ್ಲಿ ಇಂಗ್ಲೀಷ್ ಯಾಕೆ ಅವರಿಗೆ ಅಷ್ಟು ಕೆಟ್ಟದಾಗಿ ಕಂಡಿತು ನನಗೆ ಗೊತ್ತಿಲ್ಲ. ಎರಡು ವರ್ಷ ಇಂಗ್ಲೀಷ್ ಇಲ್ಲ.
ಆನಂತರ ನಾನು ಮನೆಗೆ ಬಂದಾಗ ಇಂಗ್ಲೀಷ್ ಕಲಿಯಬೇಕಂತ ಆಯ್ತು. ಟೀಚರ್ ಆದೆ ನಾನು, ಆಗ ಸಹ ಮನೆಗೆ ಬಂದಾಗ ಏನಾದರೂ ಕಟ್ಟಿತಂದ ಪೇಪರಿನಲ್ಲಿ ಇಂಗ್ಲೀಷ್ ಇದ್ರೆ ಅದನ್ನ ಓದ್ತಿದ್ದೆ. ಆಗ ಅಪ್ಪ ಕೇಳ್ತಿದ್ದರು, ನಿಂಗೆ ಅದು ಓದ್ಲಿಕ್ಕೆ ಬರ್ತದ. ಬರುದಿಲ್ಲ ಅಪ್ಪ, ಆದ್ರೆ ಪ್ರಯತ್ನಿಸ್ತಿದೇನೆ ಅದೇನು ಅಂತ. ಆಗ್ಲೇ ಆ ಒಂದು ಮನೋಭಾವ ಇತ್ತು. ಹಾಗೆ ಯಾರೂ ನನಗೆ ಇಂಗ್ಲೀಷ್ ಕಲಿಸಲಿಲ್ಲ. ನಾನೇ ಕಲಿತಿದ್ದು. ಹಾಗೆ ನಾನು ಒಂದೇ ಒಂದನ್ನು ದೂರ ಇಟ್ಟಿದ್ದು ಅಂದ್ರೆ ನಾನು ಮದ್ವೆ ಆಗುವುದಿಲ್ಲ. ನಂಗೆ ಎಂಎ ಆಗಿ, ಆಗುವವರೆಗೆ ನಾನು ಮದ್ವೆ ಆಗುವುದಿಲ್ಲ. ಯಾವ ರೀತಿಯಿಂದಾದ್ರೂ ನಾನು ಎಂಎ ಮಾಡ್ತೇನೆ. ಇಕನಾಮಿಕ್ಸ್ ಇರಬಹುದು, ಲಿಟ್ರೇಚರ್ ಇರ್ಬಹುದು, ಏನಾದ್ರು ಒಂದ್ವಿಷಯದಲ್ಲಿ ಮಾಡ್ತೇನೆ. ಇಂಗ್ಲೀಷ್ ಲಿಟ್ರೇಚರಿನಲ್ಲಿ ಮಾಡಿದೆ. ಅದೊಂದು ಆಸಕ್ತಿ ಉಂಟಾಯಿತು. ಹಾಗೆ ಮಾಡಿದೆ.
ಜಿಡ್ಡು ಕೃಷ್ಣಮೂರ್ತಿಯವರನ್ನು ನಾನು ಓದಿದ್ದೇನೆ. ಅವರ ಎಲ್ಲಾ ಪುಸ್ತಕಗಳು ನನ್ನಲ್ಲಿದ್ದವು. ಈಗ ಇಡ್ಲಿಕ್ಕೆ ಜಾಗ ಇಲ್ಲ ಅಂತ ಕೊಟ್ಟುಬಿಟ್ಟೆ. ಅವರ ಮಾತುಗಳು ನನಗೆ ಬೈಹಾರ್ಟ್ ಬರುತ್ತಿದ್ದವು. ಅವರ ಒಂದೊಂದು ಮಾತುಗಳು, ಬ್ಯೂಟಿಫುಲ್!
ಮೊದಲು ನಾನು ಚಿಕ್ಕ ಕತೆಗಳು, ಕವಿತೆಗಳು, ಹಾಸ್ಯಬರಹಗಳು ಇವನ್ನೆಲ್ಲ ನಾನು ತುಂಬ ಬರೆದಿದ್ದೆ. ನವಭಾರತ, ಉದಯವಾಣಿಗೆಲ್ಲ ಬರೆದಿದ್ದೆ. ಹಾಗೆ ಒಂದು ದಿವಸ ನನ್ನ ಹೆಂಡತಿ ಹೇಳಿದ್ಲು, ನೀವಿದನ್ನ ಬರೆದ್ರೆ ಇದು ಅಲ್ಲಲ್ಲಲ್ಲಿ ಹೋಗಿ ಬಿಡ್ತದೆ. ನೀವು ಕಾದಂಬರಿ ಬರೀರಿ ಅಂತ. ಸರಿ ಹೌದ, ಬರೀತೇನಂತ ಕೂತ್ಕೊಂಡು ಬರೀಲಿಕ್ಕೆ ಸುರು ಮಾಡಿದೆ. ಹಾಗೆ ಬರೆದ ಕಾದಂಬರಿ ‘ಶಬ್ದಗಳು. ಮೊದಲ ಕಾದಂಬರಿ. ಏನೋ ಹಾಗೆ ಮನಸ್ಸಾಯ್ತು. ಮನಸ್ಸಿನೊಳಗಿತ್ತೊ, ಹಾಗೆ ಅಂತ ಏನೊಂದು ಸಾಮರ್ಥ್ಯವೊ ಏನೋ ಗೊತ್ತಿಲ್ಲ ನಂಗೆ. ಅದನ್ನ ಕಂಡುಕೊಂಡೆ ನಾನು, ಬರೀತಾ ಹೋದೆ. ಬರೆದಾಯ್ತು, ನಾನು ಯಾರಿಗೂ ತೋರಿಸೋದಿಲ್ಲ. ಬರೆದಿದ್ದು ನೋಡಿ ಸಲಹೆ, ಸೂಚನೆ ಏನೂ ಕೇಳ್ತಿರಲಿಲ್ಲ. ಆದರೆ ಈ ಮೊತ್ತ ಮೊದಲ ಕಾದಂಬರಿ ಬರೆದಾಗ ನನ್ನ ಹೆಂಡ್ತಿ ಮತ್ತು ಹೆಂಡ್ತಿ ಅಕ್ಕ ಇದ್ರು. ನೋಡಿ ಅಂತ ಕೊಡ್ತಾ ಇದ್ದೆ. ಮೊತ್ತ ಮೊದಲ ಕಾದಂಬರಿಯ ಅನುಭವ ಅಷ್ಟೆ.
ಆಗ ಬರೆದಾದ ಮೇಲೆ ನಾನು ಇದನ್ನ ಏನು ಮಾಡುದು! ಪ್ರಕಾಶಕರ ಪರಿಚಯ ನನಗೆ ಏನೇನೂ ಇಲ್ಲ. ನಾನು ಸತತವಾಗಿ ಓದ್ತಾ ಇದ್ದೆ. ನನ್ನ ಓದು ಆ ರೀತಿ ನಡೆದದ್ದು. ಓದುತ್ತಾ ಬದುಕಿದವನು ನಾನು. ಆದ್ರೆ ಕಾಲೇಜಿಗೆ ಹೋಗಿಲ್ಲ. ಹಾಗೆ ಆ ಒಂದು ಪ್ರಪಂಚದಲ್ಲಿ ಬಿದ್ದು ಹೊರಗಿನ ಪ್ರಪಂಚದ ಬಗ್ಗೆ ಅಷ್ಟು ವಿಶೇಷವಾದ ಸಂಪರ್ಕ ಇರಲಿಲ್ಲ. ನಿಸರ್ಗದ ಬಗ್ಗೆ ಬಹಳ ಚೆನ್ನಾಗಿ ಗೊತ್ತಿತ್ತು, ನಾವು ಕೃಷಿಕರಾಗಿ ಬಂದವರು. ಇವತ್ತಿಗೂ ಕೂಡ ಯಾವ ಮರ, ಏನು ಗಿಡ, ಏನದರ ಗುಣ ಅಂತೆಲ್ಲ ಹೇಳಬಲ್ಲೆ. ಹೊರತು ಜನ, ಸಮಾಜದ ಸಂಪರ್ಕವಂತೂ ನನಗೆ ಇಲ್ವೇ ಇಲ್ಲ. ನಾವಿದ್ದಂಥ ಊರು ಹಳ್ಳಿ. ಹಾಗಿತ್ತು. ಜನಸಂಪರ್ಕ ಇರಲಿಲ್ಲ. ವಿದ್ಯಾವಂತರು, ಒಳ್ಳೆ ಸುಸಂಸ್ಕೃತರು ಅಂತ ಹೇಳುವಂಥ ಯಾವ ವ್ಯಕ್ತಿಗಳೂ ಸಹ ನಮ್ಮ ನೆರೆಹೊರೆಯಲ್ಲಿರಲಿಲ್ಲ. ಹಾಗಾಗಿ ನಾವು ಒಂದು ರೀತಿಯಲ್ಲಿ ಕೂಪಮಂಡೂಕಗಳಾಗಿ, ನಮ್ಮದೇ ಒಂದು ಇದರಲ್ಲಿ…ನಮ್ಮದು ಚಿಕ್ಕ ಕುಟುಂಬ. ನಾವು ಐದು ಮಂದಿ, ತಮ್ಮಂದಿರು ಮತ್ತು ತಂಗಿಯಂದಿರು ಸೇರಿ. ನಾನು ಹಿರಿಯವ. ಬಹಳ ಕಷ್ಟದಲ್ಲಿ ಮತ್ತು ಒಂದು ರೀತಿಯಲ್ಲಿ ಸಮಾಧಾನಕರವಾಗಿ ನಾವು ಜೀವಿಸುತ್ತಿದ್ದೆವು. ಕಷ್ಟ ಅಂದ್ರೆ, ಕಾಲದ್ದು. ಸ್ವಾತಂತ್ರ್ಯ, ಇಂಗ್ಲೀಷರು ಹೋದದ್ದು, ಎಲ್ಲ ಕಡೆ ಅದೆಲ್ಲ ನೀಡಿದ ಹೊಡೆತ. ಅದು ನಮಗೂ ಕಷ್ಟ ಇತ್ತು. ನಾವು ನಮ್ಮದೇ ಆದ ರೀತಿಯಲ್ಲಿ, ಇದ್ದುದರಲ್ಲಿ ಬಹಳ ಕಡಿಮೆ ಖರ್ಚಿನಲ್ಲಿ ನಾವು ಜೀವನ ಮಾಡ್ತಿದ್ದೆವು. ಹಾಗಾಗಿ ನಮ್ಗೆ ಅದೊಂದು ಕಷ್ಟವೂ ಹೌದು ಸುಖವೂ ಹೌದು ಅಂತ ಹೇಳ್ಬಹುದು. ಕಾಲ ಹಾಗಿತ್ತು ಅಷ್ಟೆ. ಮೊತ್ತ ಮೊದಲು ನಾನು ಮುವ್ವತ್ತೈದು ಕವಿತೆಗಳನ್ನ, ಕವಿತೆಗಳೆಲ್ಲ ಪ್ರಕಟವಾಗಿದ್ದವು ಪತ್ರಿಕೆಗಳಲ್ಲಿ, ಒಂದು ಸಂಕಲನ ಅಂತ ಮಾಡಿ ಬೇಂದ್ರೆಯವರಿಗೆ ಕಳಿಸಿಕೊಟ್ಟೆ. ಬೇಂದ್ರೆಯವರು ಅದನ್ನ ಓದಿ ಅದಕ್ಕೆ ಮುನ್ನುಡಿ ಬರೆದು ಕೊಡ್ತೇನೆ ಅಂತ ಹೇಳಿ ಒಂದು ಕಾಗದ ಬರೆದ್ರು. ಅದೊಂದು ನಿಜವಾಗಿಯೂ ವಿಶೇಷವೇ. ಅದೇ ಪ್ರಕಾರ ಅವರು ಬರೆದ್ರು. ಒಂದು ಐವತ್ತು ಪರ್ಸೆಂಟು ಅಥವಾ ಸ್ವಲ್ಪ ಹೆಚ್ಚೇ ಚೆನ್ನಾಗಿದೆ ಅಂತ ಹೇಳಿದ್ರು. ಅವರ ಮಾತುಗಳೆಲ್ಲ ಇವತ್ತಿಗೂ ನೆನಪಿವೆ ನನಗೆ. ಈ ಕಾವ್ಯದಲ್ಲಿ ಕವಿಗೆ ಬಹಳ ನೋವಿದೆ, ಅವನ ನೋವು ಮಾಗಿ ಸಂತಸಪ್ರದವಾದ ಕವಿತೆಗಳು ಬರಲಿ ಅವನಿಂದ ಅಂತೇನೊ ಬರೆದಿದ್ದಾರೆ. ಇನ್ನೊಂದು ಈ ಹೆಚ್ಚಿನ ಕವಿತೆಗಳಲ್ಲಿ ಸಂಸ್ಕೃತ ಪದ ರಂಜನ ಗುಂಜನ ಅಂತ ಬರೆದ್ರು. ಅದರಲ್ಲಿ ಭಾವ ಕಡಿಮೆ. ಆಗ ನನಗೆ ಹದಿನೇಳು ವರ್ಷ ಪ್ರಾಯ. ಶಬ್ದಗಳ ಇದೇ ಹೆಚ್ಚು. ಹೌದು. ಸತ್ಯಕ್ಕೂ ಹೌದದು. ಮತ್ತೆ ನನಗೆ ಆ ಕಾಲದಲ್ಲಿ ಕುವೆಂಪು ನನಗೆ ಬಹಳ, ದೈವವೇ ಆಗಿಬಿಟ್ಟಿದ್ದರು, ಆರಾಧ್ಯದೈವದ ಹಾಗೆ! ಅವರ ಓದಿನ ಹಿನ್ನೆಲೆಯಲ್ಲಿ ಬಂದಂಥ, ಭಯಂಕರ ಶಬ್ದಗಳನ್ನ ಉಪಯೋಗಿಸ್ತಿದ್ದರವರು. ಆ ಶೈಲಿ ನನ್ನನ್ನು ಆಕರ್ಷಿಸಿತ್ತು. ಇದನ್ನ ಓದಿದ ಮೇಲೆ ನನಗೆ ಬೇಡ ಇದು ಅನಿಸಿ ಬಿಟ್ಟುಬಿಟ್ಟೆ ನಾನು.
ಪ್ರಕಾಶನ ಕ್ಷೇತ್ರದ ಬಗ್ಗೆ ಏನೇನೂ ಗೊತ್ತಿಲ್ಲ. ಹಾಗೆ ನಾನು ಈಶ್ವರಯ್ಯನವರ ಹತ್ತಿರ ಹೇಳಿದೆ ನಾನು. ಹೀಗಿಗೆ, ಬರೆದಿದ್ದೇನೆ, ಏನು ಮಾಡ್ಬೇಕು ಗೊತ್ತಾಗ್ತ ಇಲ್ಲ. ಈಶ್ವರಯ್ಯ ಆಗ ಅಲ್ಲಿ ತುಷಾರದಲ್ಲಿದ್ರು. ಅವರು ಹೇಳಿದ್ರು, ಸುಧಾಕ್ಕೆ ಕಳಿಸಿಬಿಡಿ ನೀವು ಅಂತ. ಹಾಗೆ ನಾನು ಸುಧಾಕ್ಕೆ ಕಳಿಸಿದೆ. ಒಂದು ವಾರದಲ್ಲೆ ಎಂ ಬಿ ಸಿಂಗ್ ಅವರ ಉತ್ತರ ಬಂತು. ನಾವೀಗ ಅದನ್ನ ಹಾಕ್ತೇವೆ. ಆದ್ರೆ ಸ್ವಲ್ಪ ಉದ್ದ ಇದೆ. ಮತ್ತೆ ಇದ್ರಲ್ಲಿ ನಾನು stream of consciousness ಟೆಕ್ನಿಕ್ ಬಳಸಿದ್ದೇನೆ. ಅದು ನಮ್ಮ ಓದುಗರಿಗೆ ಅರ್ಥ ಆಗ್ಲಿಕ್ಕಿಲ್ಲ. ನಮ್ಮ ಓದುಗರು ಅಂದ್ರೆ ಜನಸಾಮಾನ್ಯರು. ಹೆಚ್ಚು ಪ್ರಬುದ್ಧರೆಂದು ಭಾವಿಸಬಾರದು. ಇದನ್ನ ಸ್ವಲ್ಪ ಸಣ್ಣದು ಮಾಡಿಕೊಡಿ ಅಂದ್ರು. ನಾನು ಹೇಳಿದೆ, ಸಣ್ಣದು ಮಾಡ್ಲಿಕ್ಕೆ ಸಾಧ್ಯವೆ ಇಲ್ಲ ಅದನ್ನು. ನೀವೇನು ಬೇಕಿದ್ರೆ ಮಾಡಿ, ಸಣ್ಣದು ಮಾಡ್ಲಿಕ್ಕೆ ಸಾಧ್ಯವಿಲ್ಲ ಅಂತ. ಅಲ್ಲ ಇದನ್ನ ಹಾಕ್ಲೆ ಬೇಕು ನಮಗೆ, ಬಹಳ ಚೆನ್ನಾಗಿದೆ ಕಾದಂಬರಿ. ಆದ್ರಿಂದ ನೀವು ನೋಡಿ ಒಂದ್ಸಲ, ಸ್ವಲ್ಪ ಸಣ್ಣದು ಮಾಡಿ ಅಂತ ಕಳಿಸಿದ್ರು. ಇಡಿ ಸ್ಕ್ರಿಪ್ಟ್ ಬಂತು. ನಾನದರಲ್ಲಿ ಆ stream of consciousness ಏನಿದೆ, ಚಾಪ್ಟರ್ ಚಾಪ್ಟರ್ ಬರ್ತದೆ ಅದು, ಒಂದು ಟೆಕ್ನಿಕ್‌ನಿಂದ ಬರ್ದಿದ್ದೇನೆ ನಾನದನ್ನ, ತಂತ್ರ ಉಪಯೋಗಿಸಿದ್ದೇನೆ. ಆ ಚಾಪ್ಟರ್ ಫುಲ್ ಕಟ್ ಮಾಡಿಬಿಟ್ಟೆ. ಕಟ್ ಮಾಡಿಬಿಟ್ಟು ಹಾಕಿ ಅಂತ ಹೇಳಿದೆ. ಅದು ಯಾರೊಬ್ಬರಿಗೂ ಗೊತ್ತಾಗಲಿಲ್ಲ. stream of consciousness – ಮನುಷ್ಯನ ಭಾವನೆಗಳನ್ನ ವ್ಯಕ್ತಪಡಿಸುತ್ತಾ ಹೋಗುವಂಥ ಒಂದು ಇದು. ಅದು ಸ್ವಲ್ಪ ಹೊರಗೆ ನಿಲ್ತದೆ. ಆದ್ರೆ ಅದರಲ್ಲಿ ಯಾವುದೋ ಸಂಭವಗಳಿಗೆ ಜೋಡಿಕೊಂಡಿರ್ತದೆ ಅದು. ಅದು ಉಳಿದವರಿಗೆ ಗೊತ್ತಾಗ್ಲಿಲ್ಲ. ಆದ್ರಿಂದ ಅದು ಚೆನ್ನಾಗಿ ಬಂತು. ಮುಂದೆ ಅದನ್ನ ಬಾಪ್ಕೊ ಪ್ರಕಾಶನದವರು ಪ್ರಕಟಿಸಲಿಕ್ಕೂ ಸುಧಾದವರೇ ಕಾರಣರಾದ್ರು. ಅದು ಪ್ರಕಟವಾಗುವಾಗ ನಾನು ಇಥಿಯೋಪಿಯದಲ್ಲಿದ್ದೆ. ಸುಮತೀಂದ್ರ ನಾಡಿಗರು, ಆಗ ಅಮೆರಿಕದಲ್ಲಿ ಪಿಎಚ್‌ಡಿ ಮಾಡ್ತಾ ಇದ್ರು. ಅವ್ರು ಕಾಗದ ಬರೆದು ತಿಳಿಸಿದ್ರು. ಹಾಗೆ ಅಲ್ಲಿಂದ ನಾನು ಹೇಗೂ ಎಂ ಬಿ ಸಿಂಗ್ ಇದ್ದಾರಲ್ಲ ಅಂತೇಳಿ ಸುಮಾರು ಆರೇಳು ಕಾದಂಬರಿಗಳನ್ನ ಅಲ್ಲಿ ಕೂತ್ಕೊಂಡು, ಅಲ್ಲೇ ಬರೆದಿದ್ದು. ಒಂದರನಂತ್ರ ಒಂದು ಕರ್ಮಣ್ಯೇ ವಾಧಿಕಾರಸ್ತೇ, ಅಬ್ರಾಹ್ಮಣ ಪ್ರತಿಯೊಂದು ಸಹ ಅಲ್ಲಿಂದ ಬರೆದಿದ್ದು. ಬಾಪ್ಕೊದವರೆ ಪ್ರಕಟ ಮಾಡಿದ್ದು. ಹಾಗೆ ನನಗೆ ಪ್ರಕಾಶಕರು ಯಾರು ಅಂದ್ರೆ ಸುಧಾವೇ ಪಬ್ಲಿಷರ್. ಆನಂತರ ನಾನಿಲ್ಲಿ ಬಂದ ಮೇಲಿನ ಅನುಭವಗಳನ್ನ ಹೇಳ್ಲಿಕ್ಕೋದ್ರೆ ದಿನಗಟ್ಟಲೆ ಹೇಳ್ಬೇಕಾಗ್ತದೆ. ಇಲ್ಲಿ ಬಂದ್ಮೇಲೆ ಪ್ರಕಾಶಕರೆಲ್ಲ ಸಿಕ್ಕಿದ್ರು. ಪ್ರಕಾಶನ ಮಾಡಿದ್ರು, ನಡೀತು. ಹೊಸ ಹೊಸ ಪ್ರಕಾಶಕರು, ಸ್ನೇಹಿತರು, ಹಣಕೊಡುವವರು, ಕೊಡದವರು, ಓಡಿ ಹೋಗುವವರು ಎಲ್ಲಾ ನಮೂನೆಯವರ ಸಂಪರ್ಕ ಆಯ್ತು.
‘ತರಂಗ’ ಆರಂಭ ಆದಾಗ ಗುಲ್ವಾಡಿಯವರು ಹೇಳಿದ್ರು ನಿಮ್ಮ ಕಾದಂಬರಿ ನಾವು ಮೊದಲು ಹಾಕ್ತೇವೆ ಅಂತ. ಆಗ ನಾನು ಹೇಳಿದೆ, ನನ್ನ ಕಾದಂಬರಿ ಮೊದಲು ಹಾಕುವುದು ಬೇಡ. ಅಂದ್ರೆ ಅಷ್ಟರವರೆಗೆ ಸೀರಿಯಲೈಸಿಂಗ್ ಆರಂಭವಾಗಿರಲಿಲ್ಲ. ಟಿ ಕೆ ರಾಮರಾವ್ ಅವರದ್ದೇ ಹಾಕಿ. ನನ್ನ ಕಾದಂಬರಿ ಹಾಕಿ ಅದು ಹಾಳಾಯ್ತು ಅಂತ ಆಗುವುದು ಬೇಡ ಅಂತ. ಯಾಕಂದ್ರೆ, ನನ್ನ ಕಾದಂಬರಿ ಆಗಲೇ ನಾನು ಬರೆದದ್ದು ಅದು ಪ್ರಯೋಗ ಅಂತ ಹೇಳಿದ್ದೆ ನಾನು. ಅದೊಂದು ರಾಜಕೀಯ ಕಾದಂಬರಿ ಮತ್ತದು ಸೆಟಾಯರ್ ಆಗಿರ್ತದೆ. ವ್ಯಂಗ್ಯವಾಗಿರ್ತದೆ. ಅದರಿಂದ ಓದುಗರು ಮತ್ತೆ ನಮ್ಗೆ ಓದುಗರು ಕಡಿಮೆಯಾದ್ರು ಅಂತಾಗುವುದು ಬೇಡ. ಅವ್ರದೇ ಹಾಕಿ ಅಂದೆ. ‘ಕೆಂಪುಮಣ್ಣು’ ಅಂತ ಅವರ ಕಾದಂಬರಿ ಬಂತು. ಆನಂತರ ಇದನ್ನು ಹಾಕಿದ್ರು. ಇದನ್ನು ಹಾಕಿ ಒಂದು ಎರಡು ಮೂರು ವಾರ ಆಗುವಾಗ ಓದುಗರ ಪ್ರತಿಕ್ರಿಯೆಗಳು ಬಂದ್ವು ಅವರಿಗೆ. ಎರಡು ಮೂರು ವಾರ ಆಗುವಾಗ ಓದುಗರ ಪ್ರತಿಕ್ರಿಯೆಗಳು ಬರತೊಡಗಿದವು. ಇದು ನಮಗೆ ಅರ್ಥ ಆಗ್ತಾ ಇಲ್ಲ. ಈ ಭಾಷೆ ಏನು ಅಂತ ತಿಳೀತಾ ಇಲ್ಲ ಅಂತ ಹೇಳತೊಡಗಿದರು. ನಿಮಗೆ ಗೊತ್ತಿರಬಹುದು, ತಬಾರ ಗಿಬಾರ ಅಂತೆಲ್ಲ ಬರ್ತದೆ, ಹದೇಲಿ ಅಂತ ಬರ್ತದೆ. ಉದ್ದೇಶ ಇಷ್ಟೆ, ಸತ್ಯವನ್ನೇ ಹೇಳ್ತಾ ಹೋಗುವುದು, ಆದ್ರೆ ಯಾವುದಾದರೊಂದು ರೀತಿಯಲ್ಲಿ ಫಿಕ್ಷನ್ ಆಗ್ತದೆ. ಆನಂತರ ಓದುಗರ ಪ್ರತಿಕ್ರಿಯೆ ಬಂದು ಗುಲ್ವಾಡಿಯವರು ಒಂದು ದಿವಸ, ನಾನಲ್ಲಿ ಮಣಿಪಾಲದಲ್ಲೆ ಇದ್ದೆ ಆಗ, ಅವರು ಹೇಳಿದ್ರು ಗಟ್ಟಿಯವರೆ ಹೀಗೀಗೆ ಪ್ರತಿಕ್ರಿಯೆ ಬರ್ತಾ ಉಂಟು, ನಮಗೆ ಬೇಸರ ಆಗ್ತಾ ಉಂಟು, ಅದನ್ನ ನಾವು ಏನು ಮಾಡ್ಬೇಕು, ಸ್ವಲ್ಪ ಸಂಕ್ಷಿಪ್ತ ಮಾಡ್ತೀರ. ನಾನ್ಹೇಳಿದೆ, ಸಂಕ್ಷಿಪ್ತ ಮಾಡ್ಲಿಕ್ಕೇನೂ ಸಾಧ್ಯ ಇಲ್ಲ. ನನಗೆ ಅಂಥ ಕ್ರಮವೇ ಗೊತ್ತಿಲ್ಲ. ಒಂದು ಕಾದಂಬರಿ ಒಂದ್ಸಲ ಬರೆದ್ರೆ, ನಿನ್ನ ಮಗುವಿನ ಮೂಗು ಸ್ವಲ್ಪ ಉದ್ದ ಇದೆ, ಕಟ್ ಮಾಡು ಅಂತ ಹೇಳಿದ್ರೆ, ನನ್ನಿಂದ ಆಗುವುದಿಲ್ಲ ಅದು. ಮತ್ತೆ ಅವರು ಸ್ವಲ್ಪ ನೋವನ್ನೂ ಕಾಣಿಸಿದ್ರು. ಅಲ್ಲ, ನನ್ನಿಂದಾಗಿ ಇವರ ಪತ್ರಿಕೆಗೆ ತೊಂದರೆ ಆಗ್ತದಲ್ಲಪ್ಪ! ನಿಲ್ಲಿಸಿಬಿಡಿ ಅಂತೇಳಿದ್ರೆ ನಿಲ್ಲಿಸ್ಲಿಕ್ಕೆ ಆಗುವುದಿಲ್ಲ. ಅದಾಗುವುದಿಲ್ಲ ಹೇಗಿದ್ರೂ. ದೊಡ್ಡ ರಾದ್ಧಾಂತ ಆಗ್ತದೆ ಅದು. ಆನಂತ್ರ ಅದನ್ನ ಏನ್ಮಾಡಿದೆ ಅಂತೇಳಿದ್ರೆ, ಸರಿ ಮಾಡ್ತೇನೆ ಅಂತೇಳಿ ಅದನ್ನ ತಗೊಂಡೋಗಿ ಅದ್ರಲ್ಲಿ ಒಂದು ಪಿನಾಕ ಅಂತ ಚಾಪ್ಟರ್ ಬರ್ತದೆ, ದೊಡ್ಡ ಚಾಪ್ಟರ್. ಅದೊಂದು ಸ್ವರ್ಗಲೋಕದ ಒಂದು ಕಲ್ಪನೆ ಬರ್ತದೆ, ವಿಚಿತ್ರವಾದ ಕಲ್ಪನೆ. ಅದನ್ನ, ಆ ಪೋರ್ಷನ್ ಕಟ್ ಮಾಡಿಬಿಟ್ಟೆ ನಾನು. ಅಲ್ಲಿಂದ ಒಂದು ಲಾಸ್ಟ್ ಲೈನಿಗೆ ಲಿಂಕ್ ಕೊಟ್ಟು ಈಚೆಯ ಕತೆ ಮುಂದುವರಿಸಿದೆ. ಬಂತು. ಜನಗಳಿಗೆ ಏನು ಎಂತು ಗೊತ್ತಾಗ್ಲಿಲ್ಲ. ಓದ್ತಾ ಹೋದ ಜನಗಳು ಹೇಳಿದ್ರು, ಬಹಳ ಚೆನ್ನಾಗಿದೆ, ಬಹಳ ಚೆನ್ನಾಗಿದೆ. ಅಲ್ಲಿ ಗೊತ್ತಾಗ್ಲಿಕ್ಕೆ ಸುರುವಾಯ್ತು. ಈ ತಬಾರ ಅಂದ್ರೇನು, ಆಂ? ಲಿಂಕ್ ಸಿಕ್ಕಿತು. ಹಾಗೆ ಗುಲ್ವಾಡಿಯವರು ಹೇಳ್ತಿದ್ರು ಕಾದಂಬರಿ ತಕ್ಷಣ ಟೇಕಾಫ್ ಆಗ್ಬೇಕು ಅಂತ. ಆದ್ರೆ ಹಾಗೆ ಆಗುದಿಲ್ಲ ಅದು. ಟೇಕಾಫ್ ಆಗುವುದಕ್ಕೆ ಸ್ವಲ್ಪ ಸಮಯ ಹಿಡೀತದೆ. ಹಾಗೆ ಆಮೇಲದು ತುಂಬ ಜನಪ್ರಿಯವಾಯ್ತು, ಪ್ರಸಿದ್ಧವೂ ಆಯ್ತು. ಜನ ತುಂಬ ಇಷ್ಟಪಟ್ಟರು. ಮತ್ತೆ ಪುಸ್ತಕ ಬರುವಾಗ ಇದೆಲ್ಲ ಉಳಿದವರಿಗೆ ಗೊತ್ತಾಯ್ತು ಸ್ವಲ್ಪ. ಹೀಗೀಗೆ ಆಗಿದೆ. ಅಂದ್ರೆ ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ ಅಂತಿದ್ರು. ಅವ್ರು ಪ್ರಕಟ ಮಾಡಿದ್ರು ಪುಸ್ತಕವನ್ನ. ಚೆನ್ನಾಗಿ ಮಾಡಿದ್ರು, ಬಹಳ ಚಂದ ಪುಸ್ತಕ ಮಾಡಿದ್ರು. ಅದರ ರಕ್ಷಾಪುಟದಲ್ಲಿ ಚಂದ್ರನಾಥ ಬರೆದಿದ್ದು, ಬಹಳ ಮಂದಿ ನೆನೆಸಿಕೊಳ್ತಾರೆ, ಅದ್ಭುತವಾದ ಮುಖಪುಟ. ಅವರ ಆರ್ಟ್‌ವರ್ಕ್ ಮಾಡಿದ್ರು. ನಂತರ ಅವರು ಒಂದು ವಾಕ್ಯ ಹಾಕಿದ್ರು, ‘ಇದು ಸೆನ್ಸಾರ್ ಆದಂಥ ಆವೃತ್ತಿ ಅಲ್ಲ, ಪೂರ್ಣ ಕಾದಂಬರಿ’ ಅಂತ ಬರೆದು ಬಿಟ್ರು ಅವರು. ನನಗೆ ಗೊತ್ತಿಲ್ಲದೆ ಬರೆದಿದ್ದು. ಸ್ವಲ್ಪ ಕಿರಿಕಿರಿ ಆಯ್ತು, ಮತ್ತೆ ಸರಿಯಾಯ್ತು. ಏನಾಗ್ಲಿಲ್ಲ. ಈಗ ಆ ಪುಸ್ತಕ ರೀಪ್ರಿಂಟ್ ಆಗ್ತಾ ಇದೆ. ಬಹಳ ವರ್ಷಗಳ ನಂತರ. ಎಷ್ಟೋ ಮಂದಿ ಬೆಂಗಳೂರಿನವರು ಇಲ್ಲಿ ಬಂದು ಆ ಪುಸ್ತಕವನ್ನು ಝೆರಾಕ್ಸ್ ಮಾಡಿಕೊಂಡು ಹೋಗಿದ್ದಾರೆ. ಅವ್ರು ಈಗ್ಲೂ ಹೇಳ್ತಾರೆ, ನೀವು ಆವತ್ತು ಬರೆದಿದ್ದಲ್ವ, ಇವತ್ತೂ ಹಾಗೇ ಆಗ್ತಾ ಉಂಟು. ಮೊನ್ನೆ ಯಾರೋ ಒಬ್ರು ಸತ್ತಾಗ ಜನಗಳೆಲ್ಲ ಸುಮ್ನೆ ಹೋಗ್ತಾ ಇದ್ರು….ಕಾದಂಬರಿಯಲ್ಲಿ ಅಂಥದ್ದೇ ಒಂದು ಘಟನೆ ಬರ್ತದೆ.
I was not competing with anybody. ಯಾವುದೇ ಒಂದು ಬಂಡಾಯ ಇತ್ಯಾದಿಗಳಲ್ಲಿ ನಾನು ಗುರುತಿಸಿಕೊಳ್ಳಲಿಲ್ಲ. ಯಾವುದೇ ರಾಜಕೀಯ ಪಕ್ಷದ ಪರವಾಗಲಿ ವಿರೋಧವಾಗಲಿ ಹೋಗಲಿಲ್ಲ. ನನಗೆ ಮನುಷ್ಯ ಮಾತ್ರ ಕಾಣುವುದು. ವ್ಯಕ್ತಿಯನ್ನು ವ್ಯಕ್ತಿಯಾಗಿಯೇ ನೋಡ್ತೇನೆ ನಾನು. ನಾನು ಮನುಷ್ಯನ ಒಳಹೊಕ್ಕು ನೋಡ್ತೇನೆ. ಹೊರಗಿನ ವಿವರ ನೋಡುವುದಿಲ್ಲ. ಒಳಗೆ ಹೋಗಿ ನೋಡ್ತೇನೆ. ಆಗ ನಿಮಗೆ ನಿಜವಾದ ವ್ಯಕ್ತಿ ಕಾಣ್ತಾನೆ. ಅವನ ಹೆಸರು, ಪಕ್ಷ, ಧರ್ಮ, ಮತ ಯಾವುದೂ ಕಾಣುವುದಿಲ್ಲ. ಲೇಖಕ ಹೀಗಿರಬೇಕು ಅಂತ ನನ್ನ ಭಾವನೆ. ಹಾಗೆಯೇ ಇದ್ದೇನೆ. ಕೀರ್ತಿ ಅಥವಾ ಹೆಸರು ಕೂಡ ನನ್ನ ನಾಲಗೆಯಲ್ಲಿ ಇಲ್ಲ ಅದು. ಅದು ಆಡುವವರ ಮಾತಿನಲ್ಲಿದೆ. ಅದನ್ನ ನಾನು ಹಚ್ಚಿಕೊಳ್ಳಬೇಕೆಂದೇನಿಲ್ಲ. ಬುದ್ಧನ ಹಾಗೆ. ಸ್ವೀಕರಿಸಬೇಕಂತಿಲ್ಲ. ವಿಮರ್ಶೆ ಮಾಡಿ, ಮಾಡದಿರಿ, ಬ್ರಾಹ್ಮಣ ವಿರೋಧಿ ಅಂತ ಬಹಳ ಜನ ಹೇಳ್ತಾರೆ. ನನ್ನ ಕೇಳಿದರೆ ಬ್ರಾಹ್ಮಣ ಅಂದ್ರೆ ಏನು, ಬ್ರಾಹ್ಮಣ್ಯ ಅಂದ್ರೇನು ಎಲ್ಲ ನಾವು ಮಾತನಾಡುವ. ಅದನ್ನು ಒಪ್ಪಿ ಅಥವಾ ಬಿಡಿ, ಅದು ನಿಮಗೆ ಸೇರಿದ್ದು.
ನಾನು ಕೆಲವೊಂದು ಶಬ್ದಗಳನ್ನು ಬಳಸುವುದೇ ಇಲ್ಲ. ಉದಾಹರಣೆಗೆ ಸಾಧನೆ ಎಂಬ ಶಬ್ದವನ್ನು ನಾನು ಬಳಸುವುದೇ ಇಲ್ಲ. ಯಾರದ್ದೂ ಕೂಡ ಸಾಧನೆ ಅಲ್ಲ ಅಂತ ಹೇಳುವುದು ನಾನು. ಸಾಧನೆ ಅನ್ನುವುದು ಒಂದು ಇಲ್ಲ ಎನ್ನುವ ಅರ್ಥದಲ್ಲಿ. ಅದು ಮಾತ್ರ ಅಲ್ಲ, ಕೀರ್ತಿ ಅಂತನ್ನುವುದು ಒಂದು ಇಲ್ಲ ಅಂತ ಹೇಳ್ತೇನೆ ನಾನು. ಏನಿಲ್ಲ. ಕೀರ್ತಿ ಅನ್ನುವಂಥದ್ದು ಏನದು? ಎನಲೈಸಿಸ್ ಮಾಡ್ಲಿಕ್ಕೆ ಹೋದ್ರೆ, ಎಲ್ಲಿ ಅದು ಇರುವುದು? ಹೇಳುವವನ ನಾಲಗೆಯಲ್ಲಿ, ಬರೆಯುವವನ ಬರಹದಲ್ಲಿ. ಅವನ. ಅವನ ಅಷ್ಟೆ. ಜೀವನದಲ್ಲಿ ಏನಿದೆ? ಬೈರನ್ ಹೇಳ್ತಾನೆ, ನೆರೆತ ಕೂದಲ ಮೇಲೆ ಮಲ್ಲಿಗೆಯ ಹೂ ದಂಡೆ ಅಂತ. ಇಂಗ್ಲೀಷ್ ಮಾತು ನೆನಪಾಗ್ತಾ ಇಲ್ಲ. ಹಾಗೆಯೇ ಬಹಳ ನಿರ್ವಿಕಾರವಾಗಿ, ಒಂದು ರೀತಿಯ ವಿರಕ್ತಿಯಿಂದ. ಸಾಧನೆ ಅಂತ ಹೇಳುವಂತಾದ್ದು, ನಿಜವಾಗಿ ನಾನು ಸಾಧಿಸಿದೆ – ಸಿಕ್ಕಾಪಟ್ಟೆ ಅಹಂನ ಮಾತದು. ನನ್ನ ಸಾಧನೆ. ನಿಮ್ಮ ಸಾಧನೆ ಏನಂತ ಕೇಳಿದ್ರೆ ಏನಿಲ್ಲ. ನಾನು ಬರೀತೇನೆ. ಬದುಕಿದ್ದೇನೆ. ಪ್ರಶಸ್ತಿ ಬಂದರೆ ಬರ್ತದೆ. ಬರಲಿಲ್ಲವಾ ಬಂದಿಲ್ಲ ಅಂತೇನೆ. ಅರ್ಜಿ ಹಾಕಿದ್ದೀರಾ? ಅರ್ಜಿ ಗಿರ್ಜಿ ಏನು ಹಾಕಿಲ್ಲ, ನನಗೆ ಆಸಕ್ತಿಯಿಲ್ಲ. ಪ್ರಶಸ್ತಿಯಿಂದ ಸಿಗುವ ಹಣ ನನಗೆ ಸ್ವಲ್ಪ ದಿನ ಬರಬಹುದು. ಅದರಿಂದೇನು ನನ್ನ ಬದುಕು ನಡೆಯುವುದಿಲ್ಲ. ಇನ್ನು ಹೆಸರು. ಗಟ್ಟಿಯವರು ಕೂಡ ಏನೊ ಲಾಬಿ ಮಾಡಿದಾರೆ ಅಂತ ಹೇಳಬಹುದು. ಅದು ಹೇಳಿದ್ರು ಅಂತ ಕೂಡ ಏನು ಬೇಸರ ಇಲ್ಲ. ಯಾಕಂದ್ರೆ ಲೋಕ ಇರುವುದೇ ಹಾಗೆ! ಲೋಕದ ರೀತಿ-ನೀತಿ ನಿಮಗೆ ಸಂಪೂರ್ಣ ಅರ್ಥ ಆದ ಮೇಲೆ ಆ ಕಾರಣಕ್ಕೇ ನಿಮಗೆ ದುಃಖ ಪಡ್ಲಿಕ್ಕೆ ಅಥವಾ ಸಂತೋಷ ಪಡ್ಲಿಕ್ಕೆ ಏನಿಲ್ಲ. ನಿಮ್ಮ ಸಂತೋಷವೇನಿದ್ರೂ ಅದು ನಿಮ್ಮ ಕ್ರಿಯೆಯಲ್ಲಿ, ನಿಮ್ಮ ಕೆಲಸದಲ್ಲಿ ನೀವು ಕಾಣ್ಬೇಕು.ಜನಪ್ರಿಯ ಅಂತ ಎಲ್ರೂ ಹೇಳ್ತಿದ್ರು. ಸಾಮಾನ್ಯ ಜನ ಜನಪ್ರಿಯ ಅಂತ ಹೇಳುವಾಗ ಅವರು ಇಷ್ಟಪಟ್ಟ ಲೇಖಕ ಅನ್ನುವ ಅರ್ಥದಲ್ಲಿ ಹೇಳ್ತಾರೆ. ಉಳಿದವರು ಜನಪ್ರಿಯ ಅಂತ ಹೇಳಿದ್ರೆ ಸ್ವಲ್ಪ ಬೇರೆ. ಮೌಲ್ಯ ಉಳ್ಳವ, ಬರಹಗಾರ. ಅನಂತಮೂರ್ತಿ ಅಂಥವರು, ಅವರು ಇವರು ಇದ್ದಾರೆ. ಮತ್ತೆ ಇವರು ಜನಪ್ರಿಯ ಬರಹಗಾರರು ಅಂತ ವರ್ಗೀಕರಣ ಇದೆ. ಅದಕ್ಕೆ ಕಾರಣ ಏನಾಯ್ತು ಅಂದ್ರೆ, ಮೊದಲ ಕಾದಂಬರಿಯಲ್ಲಿ, ಅದು ಬಹಳ ಪ್ರಸಿದ್ಧ ಆಗಿ ಹೋಯ್ತು. ನನ್ನ ‘ಶಬ್ದಗಳು’ ಯಾಕೆ ಕ್ಲಿಕ್ ಆಯ್ತೊ ನನಗೊತ್ತಿಲ್ಲ ಅದು. ಹಾಗಾಗಿ ಜನಪ್ರಿಯ ಕಾದಂಬರಿ ಎಂಬ ಮೊಹರು ಆಗ್ಲೇ ಬಿತ್ತು. ನನ್ನ ಎಷ್ಟೋ ಜನ ಕೇಳಿದ್ದಾರೆ. ಲಂಕೇಶ್ ಒಮ್ಮೆ ಕೇಳಿದ್ರು. ಗಟ್ಟಿಯವರೆ ನಿಮ್ಮನ್ನ ಜನಪ್ರಿಯ ಅಂತ ಹೇಳ್ತಾರೆ, ಬೇಸರ ಆಗುವುದಿಲ್ವ. ನನ್ನ ಏನಂತ ಕರೆದ್ರೂ ನನಗೆ ಬೇಸರ ಇಲ್ಲ. ನನಗೆ ಆ ಶಬ್ದದ ಅರ್ಥವೇ ಗೊತ್ತಿಲ್ಲ. ನಾನು ಬರೀತೇನೆ, ಜನರು ಅದನ್ನು ಓದ್ತಾರೆ. ಅವರು ಹೆಸರೇನಿಡ್ತಾರೆ ಅದರ ಅರ್ಥ ಏನು ಎಂಬುದರ ಅಗತ್ಯವೇ ನನಗಿಲ್ಲ. ಅವನು ಚೆನ್ನಾಗಿ ಚಪಾತಿ ಮಾಡ್ತಾನೆ ಅಂತೇಳಿದ್ರೆ ಏನು ಹೇಳಿದ ಹಾಗಾಯ್ತು. ಅಥವಾ ಚೆನ್ನಾಗಿಲ್ಲ ಅವನು ಮಾಡುವುದು ಅಂತ ಹೇಳಿದ್ರೆ ಚೆನ್ನಾಗಿಲ್ಲ ಅಷ್ಟೆ. ಬರವಣಿಗೆ ನಮ್ಮ ಒಳಗಿನಿಂದ ಬರುವಂಥಾದ್ದು. ನಮ್ಮ ಮನಸ್ಸಿನ ಒಳಗಿನಿಂದ ಬರುವಂಥಾದ್ದು. ಆನಂತರ ಒಂದು ಬಹಳ ದೊಡ್ಡ ಕ್ರಿಟಿಸಿಸಂ ಅಂದ್ರೆ ಇವರ ಕಾದಂಬರಿಗಳಲ್ಲಿ ಸೃಜನಶೀಲತೆ ಕಡಿಮೆ, ವೈಚಾರಿಕತೆ ಜಾಸ್ತಿ ಅಂತ. ಈ ಸೃಜನಶೀಲತೆ ಮತ್ತು ವೈಚಾರಿಕತೆ ನಡುವೆ ಒಂದು ಗೆರೆ ಎಳೆದುಕೊಂಡು, ಆ ಕಾಲದಲ್ಲಿ, ಸಾಹಿತ್ಯ ಅಕಾಡೆಮಿಯವರು ಎರಡು ರೀತಿಯಲ್ಲಿ ಪ್ರತ್ಯಪ್ರತ್ಯೇಕ ಪ್ರಶಸ್ತಿ ಕೊಡ್ತಿದ್ದರು. ನಾನು ಹೇಳಿದೆ ಏನದು, ಸೃಜನಶೀಲತೆ ಮತ್ತು ವೈಚಾರಿಕತೆ ನಡುವೆ ವ್ಯತ್ಯಾಸ ಏನು. ಎಲ್ಲಿ ಯಾವುದು ಹೋಗ್ತದೆ? ಸೃಜನಶೀಲತೆಯಿಲ್ಲದೆ ವೈಚಾರಿಕತೆ ಇಲ್ಲ, ವೈಚಾರಿಕತೆಯಿಲ್ಲದೆ ಸೃಜನಶೀಲತೆಯಿಲ್ಲ. ಒಮ್ಮೆ ವಿಮರ್ಶಕರು ಬರೆದಿದ್ದಾರೆ, ಯಾವುದೋ ಒಂದು ಕಾದಂಬರಿ. ವೈಚಾರಿಕತೆಯ ಭಾರ ಜಾಸ್ತಿಯಾಗಿ ಸೃಜನಶೀಲತೆ ತಗ್ಗಿದೆ ಅಂತೇನೊ ಬರೆದಿದ್ದಾರೆ. ಆನಂತರ ಒಂದು ಕಾದಂಬರಿ ಬರೆದೆ. ಅದು ಸ್ವಲ್ಪ ವಿಚಿತ್ರವಾಗಿದೆ. ಅದು ಸತ್ತ ಮೇಲಿನ ಮನುಷ್ಯನ ಪಯಣದ ಬಗ್ಗೆ ಇದೆ. ಅದು ಗುಲ್ವಾಡಿಯವರು ತರಿಸಿಕೊಂಡರು. ಇದು ಓದುಗರಿಗೆ ಅರ್ಥ ಆಗ್ಲಿಕ್ಕಿಲ್ಲ, ಏನ್ಮಾಡುದು ಅಂತ. ವಾಪಾಸ್ ಕಳಿಸಿಕೊಡಿ ಅಂದೆ. ವಾಪಾಸ್ ಕಳಿಸಿದ್ರು. ಆನಂತರ ಸುಧಾಕ್ಕೆ ಹೋಯ್ತು. ಸುಧಾದಲ್ಲಿ ಕೂಡ ಅದೇ ಸಮಸ್ಯೆಯಾಯ್ತು. ಅಲ್ಲಿಂದ ವಾಪಾಸಾಯ್ತು. ಆಮೇಲೆ ಲಂಕೇಶ್ ಕೇಳಿದ್ರು. ಒಂದು ಕಾದಂಬರಿ ಬೇಕು, ನೀವು ಚಾಪ್ಟರ್ ಚಾಪ್ಟರ್ ಬರೆದು ಕೊಡ್ತೀರಾ ಒಟ್ಟಿಗೇ ಬರೆದು ಕೊಡ್ತೀರಾ. ಒಟ್ಟಿಗೇ ಬರೆದು ಕೊಡ್ತೇನೆ ಅಂದೆ. ಒಂದು ಕಾದಂಬರಿ ಕಳಿಸ್ತೇನೆ ಅಂತ ಕಳಿಸಿದೆ. ಅವರು ಅದಕ್ಕೆ ಅದರ ಝೆರಾಕ್ಸ್, ಎಲ್ಲಾದಕ್ಕೂ ಒಂದು ಚೆಕ್ ಕಳಿಸಿ, ಸಾರಿ, ನಮಗೆ ಹಾಕ್ಲಿಕ್ಕಾಗ್ಲಿಕ್ಕಿಲ್ಲ ಅಂತ. ಸರಿ ಅಂತ ನಾನೇ ಪಬ್ಲಿಷ್ ಮಾಡಿದೆ ಅದನ್ನ. ಅದು ಮತ್ತು….ಆ ಕಾಲದಲ್ಲಿ ಪಬ್ಲಿಷರ್ಸ್ ಇಲ್ಲದಿರುವಂಥ ಒಂದು ಸ್ಥಿತಿ ಬಂದಿತ್ತು. ಯಾವಾಗ ಕೊಡ್ತೀರಿ ಅಂತ ಕೇಳುವ ಕಾಲ ಹೋಗಿ ಪಬ್ಲಿಷರೇ ಇಲ್ಲ, ನನಗೆ ಸಹ. ಮೂರು ನಾಲ್ಕು ವರ್ಷ ಆ ಒಂದು ಸ್ಥಿತಿ ಉಂಟಾಗಿತ್ತು, ಎಲ್ಲರಿಗೂ. ಆಗ ನಾನು ಅನಂತರ, ಇತಿಹಾಸದ ಮೊಗಸಾಲೆಯಲ್ಲಿ, ಪರಮಾರ್ಥ ಮತ್ತು ಮತ್ತೊಂದು ಕಾದಂಬರಿ, ನಾಲ್ಕು ಕಾದಂಬರಿಗಳನ್ನು ನಾನೇ ಇಲ್ಲಿ ಪ್ರಕಟಮಾಡಿ, ಅದು ಪ್ರಕಟ ಆಗಿ ಬಂದು ಪುಸ್ತಕ ರಾಶಿ ರಾಶಿಯಾಗಿ ಇಲ್ಲಿತ್ತು. ಏನು ಚಿಂತೆ ಮಾಡ್ಲಿಲ್ಲ. ನಾಲ್ಕು ಕಾದಂಬರಿ ಇದ್ದವು. ಆಗ ನನಗೆ ಒಂದು ಕಾಲ್ ಬಂತು. ಯಾರು ಮಾಡಿದ್ದು, ಯಾರು submit ಮಾಡಿದ್ದಾರೆ, ಏನು ಎಂತ ಅಂತ ಗೊತ್ತಿಲ್ಲ. ನಾನೂರು ಪ್ರತಿಗಳು, ಪ್ರತಿಯೊಂದು ಪುಸ್ತಕದ್ದು ಬೇಕು ನಮಗೆ ಅಂತ. ಸಾಹಿತ್ಯ ಪರಿಷತ್ತಿನಿಂದ ಕಾಲ್. ಮರುದಿವಸವೇ ಬೇಕು ಅಂತ. ನಾನೇ ಎಲ್ಲ ಕಟ್ಟಿಕೊಂಡು ಹೇಗೋ ಮಾಡಿ ಅಂತೂ ಒಪ್ಪಿಸಿದೆ. ಹಣ ಕಳಿಸಿಕೊಟ್ಟರು. ಅದಕ್ಕೆ ನನ್ನ ಪರವಾಗಿ ಅರ್ಜಿ ಹಾಕಿದವರು ಯಾರು, ಯಾರೂ ನನಗೆ ಗೊತ್ತಿಲ್ಲ. ಅದರ ನಂತರ ಉಳಿದ ಪುಸ್ತಕಗಳು ಇಲ್ಲಿ ಇದ್ವು. ಇವತ್ತು ಅವು ಯಾವುದೂ ಉಳಿದಿಲ್ಲ, ಮಾತ್ರವಲ್ಲ ಆ ಎಲ್ಲಾ ಪುಸ್ತಕಗಳು ರೀಪ್ರಿಂಟೂ ಆಗಿವೆ. ಎಲ್ಲವೂ ಸಹ ಮಾರಾಟ ಆಗಿವೆ.
ನಡೆದದ್ದರ ಬಗ್ಗೆ ಪುನರ್ ವಿಶ್ಲೇಷಣೆ ಅಥವಾ ಪುನರ್ ಮನನ ಮಾಡುವುದು – ಬಹುಮಟ್ಟಿಗೆ ಇಲ್ಲ. ಯಾಕಂತ ಹೇಳಿದ್ರೆ, ನನಗೆ ಬಿಎಡ್ ಮಾಡ್ತಿರಬೇಕಾದ್ರೆ, ಆ ಕಾಲದಲ್ಲಿ ಬಹಳ ಒತ್ತಡ ಇತ್ತು. ಆರ್ಥಿಕ ಒತ್ತಡ ಇತ್ತು. ಕೆಲವು ದಿವಸ ಸರಿಯಾಗಿ ಊಟ ಕೂಡ ಮಾಡದೆ ಉಪವಾಸ ಸಹ ಇದ್ದೆ. ಒಂದೇ ಊಟ ಮಾಡ್ತಿದ್ದ ದಿನಗಳಿದ್ದವು. ಆ ಸಂದರ್ಭದಲ್ಲಿ, ನನಗೆ ಸೈಕಾಲಜಿ ಓದಲಿಕ್ಕಿತ್ತು. ಓದ್ತಿರುವಾಗ ಒಂದು, ಏನಂತ ಹೇಳಿದ್ರೆ ನಿಮ್ಗೆ ಮನಸ್ಸಿಗೆ ಹಿತಕರವಲ್ಲದ ಯೋಚನೆಗಳು ಬರ್ತಾ ಇದ್ರೆ, ಅಥವಾ ಯಾವ ಯೋಚನೆಗಳು ನಿಮ್ಮ ಬದುಕಿಗೆ ಪೂರಕವಾಗಿಲ್ವೊ – ಇದು ನನ್ನ ವಾಕ್ಯಗಳು – ಅಂಥ ಯೋಚನೆಗಳನ್ನ, ಅದು information ಕೂಡ ಇರಬಹುದು, ಅಂಥ ಯಾವುದು, ನಿಮಗೆ ಅಗತ್ಯ ಇಲ್ಲ ಅಥವಾ ಹಾನಿಕರ, ಯಾವ್ದೇ ರೀತಿಯಲ್ಲಿ you don’t need it, ಅದನ್ನ ನೀವು ಬಿಡ್ಬೇಕು ಅಂತ. ಫಿಲ್ಟರ್ ಮಾಡ್ಬೇಕು. ಎಲ್ಲಾ ಯೋಚನೆಗಳು ತಲೆಗೆ ಬರ್ಲಿಕ್ಕೆ ಬಿಡ್ಬಾರ್ದು, ಫಿಲ್ಟರ್ ಮಾಡ್ಬೇಕು. I practiced it. ಪ್ರಾಕ್ಟೀಸ್ ಮಾಡಿ ಮಾಡಿ ಅದೇನಾಯ್ತು ಅಂತೇಳಿದ್ರೆ ಎಷ್ಟು ಬದುಕು ಇದಾಯ್ತು ಅಂತೇಳಿದ್ರೆ, ಕೆಲವನ್ನ ನಾನು wilfully ಅಥ್ವಾ wishfully, I forgot! ಬೇಕಂತಲೆ ನಾನು ಅವನ್ನ ನೆನಪಿಗೆ ತರುದಿಲ್ಲ, ಬರುವುದಿಲ್ಲ, ಇರುವುದೇ ಇಲ್ಲ. ಹಾಗೆ ಈ ವಿಷಯದ ಬಗ್ಗೆ ನಾನು ಯೋಚನೆ ಮಾಡ್ಬೇಕ? ಅಥವಾ ಇದರ ಬಗ್ಗೆ ವಿಶ್ಲೇಷಣೆ ಮಾಡ್ಬೇಕಾ? ಬೇಡ! ಮುಗಿಯಿತು. ಬೇಡ. ಆ ತರದ ಒಂದು ಅಭ್ಯಾಸವನ್ನು ಬೆಳೆಸಿಕೊಂಡಿದ್ದೇನೆ ನಾನು. ಈಗಲೂ ಹಾಗೆ. ಬರವಣಿಗೆಗೆ ಬೇಕಾದ್ದನ್ನು ಮಾಡ್ತೇನೆ.
ಮಾತು ಕತೆ ಮುಗಿಯಲಿಲ್ಲ ಬಿಡಿ. ಅದು ಹಾಗೆ ಮುಗಿಯುವುದೂ ಅಲ್ಲ. ಮತ್ತೆ ಮತ್ತೆ ಮುಂದುವರಿಯುವುದು ಇದ್ದೇ ಇರುತ್ತದೆ. ಯಶೋದಮ್ಮನ ಕೈಯಡುಗೆಯ ರುಚಿಯೊಂದಿಗೇ ಉಜಿರೆ ಬಿಟ್ಟು ಊರು ಸೇರಿಕೊಂಡ ಮೇಲೆ ಮತ್ತೆ ಮತ್ತೆ ಅವೇ ಮಾತುಗಳು ಮನದಲ್ಲಿ, ನೆನೆದಲ್ಲಿ ಕಾಡುತ್ತಲೇ ಇವೆ. ಮಳೆ ನಿಂತು ಹೋದ ಮೇಲೂ ಹನಿಯೊಂದು ಜಾರಿದಂತೆ!
1. ಕೆ ಟಿ ಗಟ್ಟಿಯವರಿಗೆ ಪ್ರಯಾಣ ಮಾಡುತ್ತ ಕತೆ, ಕಾದಂಬರಿ ಬರೆಯುವುದೆಂದರೆ ಇಷ್ಟ. ಇದಕ್ಕಾಗಿ ಅವರು ನೆವವೊಂದನ್ನು ಹುಡುಗಿ ಪ್ರಯಾಣ ಹೊರಡುವುದಿದೆ! ಮಗಳ ಬಳಿ ಒಂದು ಕವನ ಬರೀತೇನೆ ಮಗಳೆ ಎಂದು ಬೆಂಗಳೂರಲ್ಲಿ ಬಸ್ಸು ಹತ್ತಿದರೆ ಮಂಗಳೂರಿಗೆ ಬರುವಾಗ ಕವಿತೆ ಎಲ್ಲಿ ಅವಿತಿದ್ದರೂ ಅದು ಅವರೊಂದಿಗೆ ಉಜಿರೆ ತಲುಪಲೇ ಬೇಕು! ಒಂದು ಕತೆ ಬರೆಯುತ್ತೇನೆ ಎಂದು ಹೆಂಡತಿಗೆ ಹೇಳಿ, ಕತೆಯ ಒಂದು ಬೀಜವನ್ನು ಮನದಲ್ಲಿ ನೆಟ್ಟು ಬಸ್ಸೇರಿ ಕೂತರೆಂದರೆ ಮತ್ತೆ ಮನೆಸೇರಿದಾಗ ಸಸಿಯನ್ನು ತಂದರೆಂದೇ ತಿಳಿಯಿರಿ! ಆಮೇಲೆ ಪೆನ್ನು ಹಿಡಿದು ಕುಳಿತರೆ ಸಸಿ ಹೆಮ್ಮರವಾಗಿ ಬೆಳೆಯುವ ತನಕ ಅಲ್ಲಾಡದೆ ಕೂತು ಬರೆದಾರು ಇವರು! ಹೀಗೆ ಕರ್ನಾಟಕದ ಬಹುಭಾಗವನ್ನೆಲ್ಲ ಸುತ್ತಿ, ಪುಟ್ಟಪರ್ತಿ, ರಾಯಚೂರು ಎಲ್ಲ ಕಡೆ ತಿರುಗಾಡಿ ಕೊನೆಗೆ ಮಡಿಕೇರಿಯಲ್ಲಿ ಮುಗಿದ ಯಾತ್ರೆಯಲ್ಲಿ ಹುಟ್ಟಿದ ಕಾದಂಬರಿ, ‘ಅಂತರಂಗದ ಅತಿಥಿ’!!! ಏನಿಲ್ಲವೆಂದರೂ ಹೀಗೆ ಐದಾರು ಕಾದಂಬರಿ ಬರೆದಿದ್ದಾರಂತೆ ಕೆ ಟಿ ಗಟ್ಟಿ!
2. ನಾನೇ ಕೆ ಟಿ ಗಟ್ಟಿ ಎಂದು ಹೇಳಿಕೊಂಡು ಕರ್ನಾಟಕದಲ್ಲೆಲ್ಲ ಭಾಷಣ ಇತ್ಯಾದಿ ಬಿಗಿದು ಹಣ ಸಂಗ್ರಹಿಸಿದ ಒಬ್ಬ ಕೋಟಾ ಗಟ್ಟಿಯ ಬಗ್ಗೆ ನಿಮಗೆ ಗೊತ್ತೆ? ಕೆ ಟಿ ಗಟ್ಟಿಯವರಿಗೇ ಗೊತ್ತಿರಲಿಲ್ಲ ಬಿಡಿ. ಅವರಾಗ ಇಥಿಯೋಪಿಯದಲ್ಲಿ ಅವರ ಪಾಡಿಗೆ ಅವರಿದ್ದರು. ಸಾಹಿತಿಯ ಹೆಸರಿನಲ್ಲೂ ಹಣ ಹುಟ್ಟಿಸಬಲ್ಲ ಇಂಥ ಸ್ಟಾರ್‌ಗಿರಿ ಬಹುಶಃ ಕನ್ನಡದ ಇನ್ನೊಬ್ಬ ಲೇಖಕನಿಗಿದ್ದಿರಲಾರದು! ಈ ಕುಚೇಷ್ಟೆಯನ್ನೂ ಬಯಲಿಗೆಳೆದ ಹೆಗ್ಗಳಿಕೆ ಸುಧಾ ವಾರಪತ್ರಿಕೆಯದೇ.
3. ಪ್ರತಿಬಾರಿ ಟೂರಿನಿಂದ ಬರುವಾಗ ಒಂದು ಕತೆಯೋ ಕಾದಂಬರಿಯೋ ತಲೆಯೊಳಗೆ ತುಂಬಿಕೊಂಡು ಬರುತ್ತೀರಾ ಎಂದು ಕೇಳಿದರೆ ಅಯ್ಯೊ, ಅದನ್ನೇನು ಕೇಳ್ತೀರಿ, ಸೊಮರ್ಸೆಟ್ ಗೊತ್ತಲ್ಲ ನಿಮಗೆ, ರೇಜರ್ಸ್ ಎಜ್ ಕಾದಂಬರಿ ಬರೆದವ, ಅವನಿಗೆ ಗಡ್ಡ ಹೆರೆಯುವಾಗಲೇ ಐಡಿಯಾಗಳು ಬರುತ್ತಿದ್ದವಂತೆ ಗೊತ್ತಾ ಎನ್ನುತ್ತಾರೆ ಕೆ ಟಿ ಗಟ್ಟಿ! ಸೊಮರ್ ಸೆಟ್ ಬರೆದ ದ ಸಮ್ಮಿಂಗ್ ಅಪ್ ಅವರ ಫೇವರಿಟ್ ಕೃತಿ ಅದನ್ನು ಬಹಳ ಸಲ ಓದಿದ್ದೇನೆ ಎನ್ನುವ ಗಟ್ಟಿಯವರು ಅವನ ಎಲ್ಲಾ ಕೃತಿಗಳನ್ನು ಇಷ್ಟಪಡುತ್ತಾರೆ.
4. ಕೆ ಟಿ ಗಟ್ಟಿಯವರು ಮುವ್ವತ್ತು ವರ್ಷಗಳ ಹಿಂದೆ ಉಡುಪಿಯಲ್ಲಿದ್ದಾಗ ಒಂದು ಕನಸು ಕಂಡಿದ್ದರು. ಶಿಕ್ಷಣ ಮತ್ತು ಭಾಷಾ ಕಲಿಕೆಯ ಬಗ್ಗೆ ಅತೀವ ಆಸಕ್ತಿ, ಜ್ಞಾನ ಇದ್ದ, ಅಧ್ಯಾಪನ ವೃತ್ತಿಯ ಸುದೀರ್ಘ ಅನುಭವದ ಗಟ್ಟಿಯವರಿಗೆ ತಮ್ಮದೇ ಆದ ಒಂದು ಶಾಲೆ ಆರಂಭಿಸುವ ಕನಸಿತ್ತು. ಆದರೆ ಅವರ ಬಜೆಟಿಗೆ ಮೀರಿದ ಕನಸಾಗಿತ್ತದು. ಹಾಗಾಗಿ ಅದನ್ನು ಕೈಬಿಟ್ಟು ಉಜಿರೆಯಲ್ಲಿ ಮನೆ ಖರೀದಿಸಿದರು. ಅದೂ ಎಂಥ ಮನೆ! ಒಂದೆರಡು ಸಾವು, ಮಾರಣಾಂತಿಕ ಕಾಯಿಲೆ ಎಲ್ಲ ಕಂಡು ಕಂಗಾಲಾದ ಮನೆ ಮಂದಿ ಅಲ್ಲಿ ಭೂತ ಪಿಶಾಚಿಗಳಿವೆ ಎಂದು ಮಾರಲು ಹೊರಟಿದ್ದ ಮನೆ! ಗಟ್ಟಿಯವರು ಕುಟುಂಬ ಸಮೇತ ಬಂದಾಗ ಕೆಲವರು ಅವರನ್ನೂ ಹೆದರಿಸಿದ್ದರಂತೆ, ಸ್ವಲ್ಪ ಜಾಗ್ರತೆ ಮಾರಾಯರೆ, ಅಲ್ಲೆಲ್ಲ ಭೂತ ಪಿಶಾಚಿಗಳಿವೆ ಅಂತ! ನಾನು ಎಲ್ಲ ತರದ ಭೂತ ಪಿಶಾಚಿಗಳನ್ನು ನೋಡಿಯೇ ಬಂದವನು ಇಲ್ಲಿಗೆ ಎಂದು ಮುಗುಳ್ನಗುತ್ತಾರೆ ಕೆ ಟಿ ಗಟ್ಟಿ!
5. ಕೆ ಟಿ ಗಟ್ಟಿಯವರ ಕಿರಿಯ ಮಗಳು ಪ್ರಿಯಾಗೆ ಸಾಹಿತ್ಯದಲ್ಲಿ ತುಂಬ ಆಸಕ್ತಿ. ಗಟ್ಟಿಯವರ ಎಲ್ಲ ಮಕ್ಕಳೂ ಓದುವ-ಬರೆಯುವ ಹವ್ಯಾಸ ಇರುವವರೇ. ಈ ಕಿರಿಯ ಮಗಳು ಆಗಾಗ ಅಪ್ಪನ ಬಳಿ, ಅಪ್ಪ ಅಪ್ಪ ನೀವು ಕಾರಂತರನ್ನು ಮಾತನಾಡಿಸಿದ್ದೀರಾ, ಲಂಕೇಶರನ್ನು ಕಂಡಿದ್ದೀರಾ ಎಂದು ಕೇಳುತ್ತಿದ್ದಳಂತೆ. ಸರಿ, ಒಮ್ಮೆ ಕಾರಂತರು ಸಿಕ್ಕಿದಾಗ ಗಟ್ಟಿಯವರು ಅವರ ಬಳಿ ಹೋಗಿ ಪರಿಚಯಿಸಿಕೊಂಡರು. ಕಾರಂತರಿಗೆ ಮೂಡ್ ಇರಲಿಲ್ಲ. ಮುಗುಂ ಆಗಿ “ಹೂಂ, ಹೆಸರು ಕೇಳಿದ್ದೇನೆ” ಎಂದು ಮಾತುಕತೆ ಮುಗಿಸಿದರಂತೆ! ಮುಂದೊಮ್ಮೆ ಆಕಾಶವಾಣಿಯ ರೆಕಾರ್ಡಿಂಗಿಗೆ ಹೋದಾಗ ಮತ್ತೆ ಇಬ್ಬರೂ ಮುಖಾಮುಖಿಯಾದರಂತೆ. ಆಗ ಬಿಚ್ಚು ಮನಸ್ಸಿನಿಂದ ಮುಕ್ತವಾಗಿ ಹಳೆಯ ಗೆಳೆಯರಂತೆ ಹರಟಿದ್ದೇ ಹರಟಿದ್ದು! ಗಟ್ಟಿಯವರ ಪ್ರಕಾರ ಕಾರಂತರಿಗೆ ಮೂಡ್ ಇದೆ. ತಮಗೆ ಮೂಡು ಗೀಡು ಇಲ್ಲ. ಯಾವಾಗಲೂ ಒಂದೇ ತರ!
ಗಟ್ಟಿಯವರ ಆತ್ಮಕತೆ ಓದಿದ ಅನುಭವಾತು. ಕೊನೆಗೆ ಲೇಖಕರ ವಿಶ್ಲೇಷಣೆಯು ಅರಿವಿನ ಪರಿಧಿಯ ವಿಸ್ತರಣೆಗೆ ಅನುವಾಯಿತು. ನರೇಂದ್ರ ಪೈಯವರಿಗೆ ವಂದನೆಗಳು.