ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ.ಜ್ಯೋತಿ ಸತೀಶ್
ಇತ್ತೀಚಿನ ಬರಹಗಳು: ಡಾ.ಜ್ಯೋತಿ ಸತೀಶ್ (ಎಲ್ಲವನ್ನು ಓದಿ)

ಕಣ್ಣ ಮುಂದೆ ಕತ್ತಲೆ… ಯಾವುದಕ್ಕೂ ಮನಸ್ಸಾಗುತ್ತಿಲ್ಲ. ನೀರವ ಮೌನ ಆವರಿಸಿದೆ ಎಲ್ಲ ಕಡೆ. ನಾಳೆ ನಾನು ಬದುಕಿರಲಾರೆ.. ಇವತ್ತು ನನ್ನ ಜೀವನದ ಕೊನೆಯ ದಿನ ಅನ್ನೋದು ನಂಬಲಿಕ್ಕೆ ಆಗುತ್ತಿಲ್ಲ. ದೇಹದ ಪ್ರತಿಯೊಂದು ಅಂಗವನ್ನು ಮತ್ತೊಮ್ಮೆ ನೋಡುತ್ತಾ, ನಾಳೆ ದಿನ ಈ ಅಂಗಗಳೆಲ್ಲ ಬೆಂಕಿಯಲ್ಲಿ ಸುಟ್ಟು ಬೂದಿಯಾಗುತ್ತವೆಯಲ್ಲ.. ಎದೆಯಲ್ಲಿ ಡವಡವ ಎನ್ನುವ ಶಬ್ದ. ಜೀವನದಲ್ಲಿ ಸಾಧಿಸಲಿಕ್ಕೆ ಎಷ್ಟೊಂದು ಇದೆ. ಬಹುಶಃ ಇನ್ನೊಂದು ಛಾನ್ಸ್ ಸಿಕ್ಕಿದಿದ್ರೆ.. ನನ್ನ ಜೀವನದ ಗತಿಯನ್ನೇ ಬದಲಾಯಿಸುತ್ತಿದ್ದೆ ಎನ್ನುವ ಹುಮ್ಮಸ್ಸು.. ಆದ್ರೆ ಇನ್ನು ಕೋರ್ಟಿನ ನಿರ್ಣಯ ಬದಲಾಗುವಂತಿಲ್ಲ. ನಾಳೆ ನನ್ನ ಸಾವು ನಿಶ್ಚಿತ. ನನ್ನ ಸಾವಿನ ಸಮಯ ಯಾವಾಗ ಮತ್ತು ಎಷ್ಟು ಹೊತ್ತಿಗೆ ಅನ್ನೋದು ನನ್ನಂತಹ ಮರಣದಂಡನೆಗೆ ಒಳಗಾದವರಿಗೆ ಮಾತ್ರ ಗೊತ್ತಿರುತ್ತದೆ. ಇದಕ್ಕೆ ಹೆಮ್ಮೆ ಪಡಬೇಕೋ, ಅಳಬೇಕೋ ಗೊತ್ತಾಗುತ್ತಿಲ್ಲ. ಆದ್ರೆ ಕಣ್ಣಮುಂದೆ ಸಾವು ಬಂದು ನಿಂತಿರುವಾಗ, ಯಾವುದಕ್ಕೂ ಮನಸ್ಸು ಬರುತ್ತಿಲ್ಲ. ಜೀವನೋತ್ಸಾಹವಂತೂ ‘ಬೆಂಕಿ ಆರಿದ ಮೇಲೆ ಉಕ್ಕಿದ ಹಾಲು ಕೆಳಗಿಳಿಯುವಂತೆ ಕುಗ್ಗುತ್ತಾ ಹೋಗುತ್ತಿದೆ’. ಅನಾವಶ್ಯಕವಾಗಿ ಕಳೆದ ಸಮಯದ ಬಗ್ಗೆ ವ್ಯಥೆ ಪಡುವುದನ್ನು ಬಿಟ್ಟರೆ ಬೇರೇನೂ ಇಲ್ಲ. ಇನ್ನು ಏನು ಆಗಬೇಕು? ಹೇಗಿದ್ದರೂ ನಾಳೆ ನಾನು ಸಾಯುವವನು.. ನಾನು ಸತ್ತಮೇಲೆ ನನಗಾಗಿ ಯಾರೆಲ್ಲ ಕಣ್ಣೀರು ಹಾಕಬಹುದು ತಿಳಿಯುವ ಕುತೂಹಲ! “ಸಾವಿಗೆ ನಾನೆಂದೂ ಹೆದರೋದಿಲ್ಲ. ಯಾಕೆಂದ್ರೆ ನಾ ಇರೋ ತನಕ ಅದು ಬರೋದಿಲ್ಲ. ಅದು ಬಂದಾಗ ನಾನೇ ಇರೋದಿಲ್ಲ” ಎನ್ನುವ ವರಕವಿ ಬೇಂದ್ರೆಯವರ ಮಾತು, ನನ್ನ ಮನಸ್ಥಿತಿಯನ್ನು ಮತ್ತಷ್ಟು ಸದೃಢವಾಗಿಸಿದೆ.
ನೀವೆಲ್ಲ ಯೋಚಿಸಬಹುದು.. ಯಾವ ಕಾರಣಕ್ಕಾಗಿ ನನಗೆ ಈ ಮರಣದಂಡನೆ ಶಿಕ್ಷೆ ಸಿಕ್ಕಿರಬಹುದು ಅಂತ. ಮನಸ್ಸು ಹಿಮ್ಮುಖವಾಗಿ ಚಲಿಸಲಾರಂಭಿಸಿತು.

ನನ್ನ ಹೆಸರು ಆಕಾಶ. ನಮ್ಮದು ಮಧ್ಯಮವರ್ಗದ ಕುಟುಂಬ. ನಮ್ಮ ಅಮ್ಮನಿಗೆ ನಾವು ಮೂವರು ಮಕ್ಕಳು. ನಾನು ಕಿರಿಯವನು ಮನೆಯವರೆಲ್ಲರ ಮುದ್ದಿನ ಮಗ. ನಾನು ಹುಟ್ಟಿದಾಗಿನಿಂದ ನಮ್ಮ ತಂದೆ ನಮ್ಮ ತಾಯಿಯಿಂದ ದೂರವಾಗಿದ್ದರು. ನನ್ನ ಬಳಿ ಎಲ್ಲ ಖುಷಿಯಿದ್ದರೂ, ಮನಸ್ಸಿನ ಮೂಲೆಯಲ್ಲಿ ತಂದೆಯು ನಮ್ಮೊಂದಿಗಿದ್ದಿದ್ರೆ ಅನ್ನುವ ಆಸೆ ಇದ್ದಿತ್ತು. ಆದ್ರೆ ತಂದೆ ನಮ್ಮ ತಾಯಿಯಿಂದ ದೂರವಾಗಿ ನನ್ನ ತಾಯಿಯ ಗೆಳತಿಯನ್ನು ಮದುವೆಯಾಗಿ, ಸುಂದರ ಸಂಸಾರ ಮಾಡುತ್ತಿದ್ದಾರೆ ಅಂತ ಗೊತ್ತಾಯಿತು. ನಮ್ಮನ್ನೆಲ್ಲ ನಮ್ಮ ತಾಯಿ ಒಬ್ಬರೇ ಬೆಳೆಸಿ ದೊಡ್ಡದು ಮಾಡಿದ್ದಾರೆ. ಯಾವುದಕ್ಕೂ ಕಡಿಮೆ ಮಾಡಿಲ್ಲ. ತಾಯಿ ನಮ್ಮ ಮುಖವನ್ನು ನೋಡಿ ಅವರ ದುಃಖವನ್ನು ಮರೆಯುತ್ತಿದ್ದರು. ತಾಳಿಕಟ್ಟಿ ಸಪ್ತಪದಿ ತುಳಿದ ಪತಿ ಒಂದು ಕಡೆ ಮೋಸ ಮಾಡಿದರೆ, ಇನ್ನೊಂದೆಡೆ ಮೆಚ್ಚಿನ ಗೆಳತಿಯೇ ತನ್ನ ಬೆನ್ನಿಗೆ ಚೂರಿ ಇಕ್ಕಿದಳೆಂಬ ದುಃಖ. ತನ್ನಲ್ಲೇ ಏನೋ ಕಮ್ಮಿಯಿರಬೇಕೆಂದುಕೊಂಡಳೇ ಹೊರತು, ಯಾವತ್ತೂ ಪತಿಗಾಗಲಿ, ಗೆಳತಿಗಾಗಲಿ ಶಪಿಸಲಿಲ್ಲ. ಮೌನವಾಗಿ ಕಣ್ಣೀರು ಹಾಕುವುದನ್ನು ನಾನು ಕಣ್ಣಾರೆ ಕಂಡವನು. ಆವಾಗ ತಂದೆಯ ಬಗ್ಗೆ ಎಲ್ಲಿಲ್ಲದ ಕೋಪ ಬರುತ್ತಿತ್ತು. ಎದುರಿಗೆ ಸಿಕ್ಕಿದ್ರೆ ಸೀಳಿಹಾಕಿ ಬಿಡಬೇಕೆಂಬಷ್ಟು ಸಿಟ್ಟು. ಆದರೆ ಅಮ್ಮನ ಮುಖ ನೋಡಿ ಸುಮ್ಮನಾಗುತ್ತಿದ್ದೆ. ಎಲ್ಲ ಮಕ್ಕಳು ತಮ್ಮ ತಂದೆ ತಾಯಿಯೊಂದಿಗೆ ನಕ್ಕು ನಲಿಯುವುದನ್ನು ನೋಡಿ. ನಾವ್ಯಾಕೆ ಈ ಸುಖದಿಂದ ವಂಚಿತರಾಗಿದ್ದೇವೆ. ನಾವು ಮಾಡಿದ ಪಾಪವಾದ್ರೂ ಏನು? ಎಂದು ಪ್ರಲಾಪಿಸುತ್ತಿದ್ದೆವು. ಪಕ್ಕದ ಮನೆಯ ಮಕ್ಕಳು ಪ್ರತಿನಿತ್ಯ ತಮ್ಮ ತಂದೆ ತರುವ ತಿಂಡಿಗಾಗಿ ಕಾಯುತ್ತಿರುವುದನ್ನು ನೋಡಿ, ನಮಗೂ ಆಸೆಯಾಗುತ್ತಿತ್ತು. ನಮ್ಮ ತಂದೆಯೂ ನಮಗಾಗಿ ಹೀಗೆ ತಿಂಡಿ ತರುತ್ತಿದ್ದರೆ! ಆದರೆ ನಮ್ಮ ಹಣೆಬರಹದಲ್ಲಿ ಆ ಅದೃಷ್ಟವಿಲ್ಲವೆಂದು ಅಲ್ಲಿಗೆ ನಮ್ಮ ಆಸೆ ಆಕಾಂಕ್ಷೆಗಳನ್ನು ಅದುಮಿಡುತ್ತಿದ್ದೆವು.

ನಾನು ಡಿಗ್ರಿಯನ್ನು ಮುಗಿಸಿ, ಕೆಲಸಕ್ಕೆ ಸೇರಿಕೊಂಡೆ. ಹೀಗೆ ದಿನಗಳುರುಳಿದವು. ಅಣ್ಣಂದಿರಿಬ್ಬರ ಮದುವೆನೂ ಆಯಿತು. ಎಲ್ಲರೂ ತಮ್ಮ ಸಂಸಾರದೊಂದಿಗೆ ಸುಖವಾಗಿದ್ದರು. ಈ ನಡುವೆ ಅಮ್ಮ ಖಾಯಿಲೆಯಿಂದ ಹಾಸಿಗೆ ಹಿಡಿದರು. ಯಾರಿಂದಲೂ ಸೇವೆ ಮಾಡಿಸಿಕೊಳ್ಳದ ಜೀವ ಅವರದು. ಅಂತಹ ನಿರ್ಮಲ ಮನಸ್ಸು. ಮನುಷ್ಯ ತಾನು ತಿನ್ನುವ ತುತ್ತಿಗಾದರೂ ಕೆಲಸ ಮಾಡಬೇಕು. ಹೀಗೆ ಹಾಸಿಗೆ ಹಿಡಿದು ಬೇರೆಯವರಿಗೆ ಕಷ್ಟಕೊಡಬಾರದು ಎಂದು ಸದಾ ತಮ್ಮ ಸಾವಿಗಾಗಿ ಆ ದೇವರಲ್ಲಿಬೇಡಿಕೊಳ್ಳುತ್ತಿದ್ದರು. ನಮ್ಮ ತಂದೆಗೆ ವಿಷಯ ಗೊತ್ತಿದ್ದರೂ ಒಂದು ದಿನವಾದರೂ ಬಂದು ನಮ್ಮ ತಾಯಿಯ ಮುಖ ನೋಡಲು ಬರಲಿಲ್ಲ. ತಾಯಿ ಈ ಗಳಿಗೆಯಲ್ಲಾದರೂ ಅವರ ಮುಖವನ್ನೊಮ್ಮೆ ನೋಡಬೇಕೆಂದು ಜೀವಹಿಡಿದುಕೊಂಡೂ ಕಾದದ್ದೇ ಬಂತು. ಅವರ ಬರವಿಕೆಯನ್ನು ಕಾಯುತ್ತಾ ತನ್ನ ಪ್ರಾಣವನ್ನು ಬಿಟ್ಟಳು. ಅವಳ ಕೊನೆಯ ಆಸೆ ಉಳಿದೆ ಹೋಯಿತು. ಅವಳ ಅಂತ್ಯದೊಂದಿಗೆ ಇದ್ದ ಒಂದು ಕೊಂಡಿಯೂ ಕಳಚಿಹೊಯ್ತು. ತಂದೆಗೆ ಅವರ ಸ್ನೇಹಿತರಿಂದ ವಿಷಯ ಗೊತ್ತಾದರೂ, ಅಂತ್ಯಸಂಸ್ಕಾರಕ್ಕೂ ಬರಲಿಲ್ಲ ಎಂದು ತಿಳಿದು ನನ್ನ ಮನದಲ್ಲಿ ಮತ್ತಷ್ಟು ಅವರ ಬಗ್ಗೆ ದ್ವೇಷ ಬೆಳೆಯತೊಡಗಿತು. ಇದೆಲ್ಲ ಆಗಿ ವರುಷಗಳೇ ಉರುಳಿದವು.

ಮನೆಯಲ್ಲಿ ಅತ್ತಿಗೆಯಂದಿರು ತಾಯಿಯಂತೆ ನೋಡಿಕೊಂಡರು. ಆದರೂ ಮನದ ಮೂಲೆಯಲ್ಲಿ ತಾಯಿಯ ಪ್ರೀತಿಯ ಕೊರತೆ ಇದ್ದೆ ಇದ್ದಿತು.
ಅತ್ತಿಗೆಯಂದಿರು ಮದುವೆಯಾಗುವಂತೆ ಒತ್ತಾಯ ಮಾಡುತ್ತಿದ್ದರು. ನನ್ನ ಕಚೇರಿಯಲ್ಲಿ ಕೆಲಸ ಮಾಡುವ ಹುಡುಗಿಯೊಬ್ಬಳನ್ನು ಮನಸಾರೆ ಪ್ರೀತಿಸುತ್ತಿದ್ದೆ. ಅತ್ತಿಗೆಯವರಿಗೆ ಹೇಳಲಿಕ್ಕೆ ನಾಚಿಕೆ. ಮೊದಲು ಅವಳ ಪರಿವಾರದವರನ್ನು ಭೇಟಿ ಮಾಡಿದ ಮೇಲೆ, ಮನೆಯವರಿಗೆ ತಿಳಿಸಬೇಕೆಂದಿದ್ದೇನೆ. ಅವಳ ಪರಿವಾರ ಇರುವುದು ದೂರದ ನಾಸಿಕ್ ಅಲ್ಲಿ. ನಾವಿರುವುದು ಧಾರವಾಡದಲ್ಲಿ. ನಾನು ಎರಡು ದಿನದ ಮಟ್ಟಿಗೆ ರಜೆ ಹಾಕಿ ನಾಸಿಕ್‍ಗೆ ಹೋಗಿ ಆಶಾಳ ತಂದೆತಾಯಿಯರನು ಭೇಟಿಯಾಗಬೇಕೆಂದಿದ್ದೇನೆ. ಯಾರಿಗೆ ಗೊತ್ತು, ಇದು ನನ್ನ ಜೀವನಕ್ಕೆ ಹೊಸ ತಿರುವನ್ನು ನೀಡುತ್ತದೆ ಎಂದು! ಹುಮ್ಮಸ್ಸಿನಿಂದಲೇ ಅವಳ ಮನೆಗೆ ಹೋದೆ. ಅಲ್ಲಿ ನನಗಾದ ಆಘಾತ ಅಷ್ಟಿಷ್ಟಲ್ಲ. ಯಾರನ್ನು ನನ್ನ ಬಾಳ ಸಂಗಾತಿಯೆಂದು ಮನಸ್ಸಿನಲ್ಲಿ ಏನೆಲ್ಲ ಕನಸುಕಂಡಿದ್ದೇನೋ ಅವಳು ನನಗೆ ಸಂಬಂಧದಲ್ಲಿ ತಂಗಿಯಾಗಬೇಕು. ನನ್ನ ಆಸೆಗಳೆಲ್ಲ ಒಂದು ಕ್ಷಣಕ್ಕೆ ನುಚ್ಚು ನೂರಾಯಿತು. ಹುಟ್ಟಿಸಿದ ತಂದೆಯ ಮುಖ ನೋಡುತ್ತಲೇ, ನನ್ನ ತಾಯಿ ಸಾಯುವ ಕೊನೆಯ ಗಳಿಗೆಯಲ್ಲಿ ಅವರಿಗಾಗಿ ಪರಿತಪಿಸಿದ್ದು ನೆನಪಾಯ್ತು. ನನ್ನ ತಾಯಿಗೆ ಮಾಡಿದ ಮೋಸ ನೆನಪಾಗಿ ಸಿಟ್ಟು ನೆತ್ತಿಗೇರಿತು. ನಿನ್ನಿಂದಾಗಿ ನನ್ನ ತಾಯಿ ನನ್ನಿಂದ ಬಹುದೂರ ಹೋದಳು. ಈಗ ನಾನು ನನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದವಳನ್ನು ಮದುವೆಯಾಗುವಂತಿಲ್ಲ. ಅದೆಲ್ಲಿಂದ ರಕ್ಕಸಪ್ರವೃತ್ತಿ ನನ್ನಲ್ಲಿ ಮೈದಾಳಿತೋ ಗೊತ್ತಿಲ್ಲ. ಆಗ ನಾನು ನಾನಾಗಿರಲಿಲ್ಲ. ಅಪ್ಪನ ಕತ್ತನ್ನು ಹಿಸುಕಿಯೇ ಬಿಟ್ಟೆ. ಅವನು ನೋವಿನಲ್ಲಿ ಒದ್ದಾಡುವುದನ್ನು ನೋಡಿ ಮನಸ್ಸಿಗೇನೋ ಒಂದು ರೀತಿಯ ಆನಂದ ಪ್ರಾಪ್ತವಾಯಿತು. ಕ್ರಿಕೆಟ್ ಬ್ಯಾಟಿನೊಂದಿಗೆ ತಡೆಯಲು ಬಂದ ಅವರ ಹೆಂಡತಿಯನ್ನು ಕಂಡಿದ್ದೇ ತಡ, ನನ್ನ ತಾಯಿಯ ಸ್ನೇಹಕ್ಕೆ ದ್ರೋಹ ಬಗೆದ ಮಲತಾಯಿಯನ್ನು, ಅವಳೇ ತಂದ ಬ್ಯಾಟಿನಿಂದ ಅವಳ ತಲೆಗೆ ಏಟು ಹಾಕಿದೆ. ಆ ಏಟು ಎಷ್ಟೊಂದು ಬಲವಾಗಿತ್ತು ಅಂದ್ರೆ ಒಂದೇ ಏಟಿಗೆ ಮಲತಾಯಿ ಧರೆಗುರುಳಿದಳು. ರಕ್ತದ ಓಕುಳಿಯೇ ಹರಿಯಿತು. ನನ್ನ ಒಂದು ಕ್ಷಣದ ಕೋಪ ಆಶಾಳನ್ನು ಅನಾಥಳನ್ನಾಗಿ ಮಾಡಿತು. ನನ್ನ ಕೋಪ ಇಳಿದ ಮೇಲೆ ನಾನೆಂತಹ ಪಾಪ ಮಾಡಿದೆ ಎಂದು ಅರಿವಾಯಿತು. ಹುಟ್ಟಿಸಿದ ತಂದೆಯನ್ನು ನನ್ನ ಕೈಯಾರೆ ಕೊಂದುಬಿಟ್ಟೆನಲ್ಲ. ನನ್ನ ತಾಯಿ ಬದುಕಿದ್ದರೆ ಎಷ್ಟೊಂದು ನೋವಾಗುತ್ತಿತ್ತು ಅವರಿಗೆ. ಇದೆಲ್ಲಕ್ಕಿಂತ ಹೆಚ್ಚಾಗಿ ನಾನು ಮನಸಾರೆ ಪ್ರೀತಿಸುವ ಆಶಾಳಿಗೆ ಮೋಸ ಮಾಡಿದೆನೆಲ್ಲ. ಅವಳಿಟ್ಟ ಭರವಸೆಯನ್ನು ನನ್ನ ಕೈಯಾರೆ ನಾಶಮಾಡಿದೆನಲ್ಲ. ಈಗ ನನ್ನ ತಂದೆಗೂ ನನಗೂ ಯಾವ ವ್ಯತ್ಯಾಸವಿದೆ? ಅಂದು ನನ್ನ ತಂದೆ ನಮಗೆ ದ್ರೋಹ ಬಗೆದದ್ದಕ್ಕೆ ನನ್ನ ಮನಸಲ್ಲಿ ಅವರ ದ್ವೇಷ ಬೆಳೆಸಿಕೊಂಡೆ. ಇಂದು ಆಶಾಳ ಜೀವನದಲ್ಲೂ ಖಳನಾಯಕನ ಸ್ಥಾನವನ್ನು ನಾನು ಪ್ರಾಪ್ತಿಸಿಕೊಂಡೆ. ನಾನೂ ಆಶಾಳಿಂದ ಅವಳ ತಂದೆ ತಾಯಿಯರನ್ನು ಕಿತ್ತುಕೊಂಡೆ. ಹೇ! ದೇವಾ ನನ್ನಿಂದ ಎಂತಹ ಮಹಾಪರಾಧವಾಯ್ತು. ಅಮ್ಮ ಬದುಕಿದ್ದಿದ್ರೆ .. ನನ್ನ ಈ ಕೃತ್ಯದಿಂದ ಇನ್ನಷ್ಟು ನೋವನ್ನು ಅನುಭವಿಸುತ್ತಿದ್ದರು. ತನ್ನ ಸಂಸಾರವನ್ನು ನುಚ್ಚುನೂರು ಮಾಡಿದರು, ತುಟಿಪಿಟಕ್ಕೆನ್ನದೆ, ತನ್ನ ನೋವನ್ನು ಬೇರೆಯವರಿಗೆ ತೋರ್ಪಡಿಸಲಿಲ್ಲ. ದ್ರೋಹ ಬಗೆದವರಿಗೆ ಎದುರು ನುಡಿಯಲಿಲ್ಲ. ತನ್ನ ತಪ್ಪಾದರೂ ಏನಿತ್ತು? ನನ್ನ ಪ್ರೀತಿಯಲ್ಲಿ ಏನು ಕಮ್ಮಿಯಾಗಿತ್ತು ಎಂದು ಗಂಡನಲ್ಲಿ ಪ್ರಶ್ನಿಸಲಿಲ್ಲ. ಅಂತಹ ಮಹಾನ್ ತಾಯಿಯ ಮಗನಾಗಿದ್ದುಕೊಂಡು ಈ ಕೃತ್ಯ ಎಸಗಿದೆನಲ್ಲ. ಅವಳು ಕಲಿಸಿದ ಸಂಸ್ಕಾರವೆಲ್ಲ ಒಂದೇ ಕ್ಷಣಕ್ಕೆ ಗಾಳಿಗೆ ತೂರಿಬಿಟ್ಟೆನಲ್ಲ. ಒಂದು ಕ್ಷಣಕ್ಕೆ ನನ್ನ ಕಣ್ಣ ಮುಂದೆ ಕತ್ತಲಾವರಿಸಿತು. ಎಂತಹ ವ್ಯಕ್ತಿಯನ್ನು ನಾನು ಕೊಂದುಬಿಟ್ಟೆ ಅನ್ನುವ ಪಶ್ಚಾತ್ತಾಪಕ್ಕಿಂತಲೂ, ನಾನು ಇಂತಹ ಕೃತ್ಯ ಮಾಡಬಾರದಾಗಿತ್ತು!. ನನ್ನ ಹೆತ್ತೆಬ್ಬೆಗೆ ಎಷ್ಟು ದುಃಖವಾಗಿರಬೇಡ. ಭಲೇ! ಅವಳು ಇಂದು ನಮ್ಮ ನಡುವೆ ಇಲ್ಲ. ಆದರೆ ಆಕಾಶದಲ್ಲಿ ತಾರೆಯಾಗಿ ನನ್ನತ್ತ ಸದಾ ನೋಡುತ್ತಿರಬಹುದು. ನನ್ನ ಈ ಕೃತ್ಯಕ್ಕೆ ಅವಳಿಗೆಷ್ಟು ನೋವಾಗಿರಬೇಡ. ಆವೊಂದು ನೋವೇ ನನ್ನಲ್ಲಿ ಬಲವಾಗತೊಡಗಿತು. ನನ್ನಲ್ಲಿ ಪಶ್ಚಾತ್ತಾಪದ ಜ್ವಾಲಾಮುಖಿ ಪುಟಿಯ ತೊಡಗಿತು. ನಾನು ಮಾಡಿದ ಕೃತ್ಯಕ್ಕೆ ನನಗೆ ಮರಣದಂಡನೆಯೂ ಪ್ರಾಪ್ತವಾದಾಗಲೂ ನನ್ನಲ್ಲಿ ಏನು ಪರಿವರ್ತನೆ ಆಗಲಿಲ್ಲ. ಯಾರಿಗೂ ಮುಖ ತೋರಿಸಲು ನಾಚಿಕೆಯಾಗಿ, ಮನೆಯವರು ಭೇಟಿ ಮಾಡಲು ಬಂದರೂ ಅವರಿಗೆ ಸಿಗಲಿಕ್ಕೆ ಮನಸ್ಸು ಬರಲಿಲ್ಲ. ನನ್ನಂತಹವರಿಂದ ಅವರು ದೂರವುಳಿಯುವುದೇ ಲೇಸು. ಸ್ವಲ್ಪ ದಿನದಲ್ಲೇ ಮರಣದಂಡನೆಗೆ ಒಳಗಾಗುವವನು. ಇನ್ನು ಮನೆಯವರನ್ನು ನೋಡಿ ದುರ್ಬಲವಾಗಬಾರದು. ನನ್ನ ಮನಸ್ಸನ್ನು ದೃಢಮಾಡಿಕೊಂಡಿದ್ದೇನೆ. ನನ್ನ ಆಸೆಗಳೆಲ್ಲ ಬತ್ತಿಹೋಗಿದೆ. ಆದರೆ ಒಮ್ಮೆ ಆಶಾಳಲ್ಲಿ ಕ್ಷಮೆಯಾಚಿಸಬೇಕೆಂದಿದ್ದೇನೆ. ಆದರೆ ಧೈರ್ಯ ಬರಲಿಲ್ಲ. ನಾನು ಇಷ್ಟು ವರ್ಷ ನನ್ನ ಬಾಳಸಂಗಾತಿಯನ್ನಾಗಿ ಕಲ್ಪಿಸಿದವಳನ್ನು ನನ್ನ ತಂಗಿಯಾಗಿ ಹೇಗೆ ನೋಡಲಿ? ಕ್ಷಣಾರ್ಧದಲ್ಲಿ ಸಂಬಂಧಗಳು ಹೀಗೆ ಬದಲಾದರೆ, ಮನಸ್ಸನ್ನು ಹೇಗೆ ಸಮಜಾಯಿಸಲಿ? ಯಾರಲ್ಲಿ ನನ್ನ ನೋವನ್ನು ಹೇಳಿಕೊಳ್ಳಲಿ? ಯಾವ ಮುಖವಿಟ್ಟುಕೊಂಡು ಆಶಾಳಲ್ಲಿ ಹೋಗಲಿ? ನಾನು ಮಾಡಿದ ಅಪರಾಧಕ್ಕೆ ಯಾವ ಶಿಕ್ಷೆ ಕೊಟ್ಟರೂ ಕಡಿಮೆ. ನನ್ನ ಈ ಕೃತ್ಯಕ್ಕೆ ಯಾರನ್ನು ಹಳಿಯಲಿ? ನಾನು ನನ್ನ ಕೈಯಾರೆ ನನ್ನ ಜೀವನವನ್ನು ಬಲಿತೆಗೆದುಕೊಂಡು ಬಿಟ್ಟೆ. ಕೋಪದಲ್ಲಿ ಕತ್ತರಿಸಿಕೊಂಡ ಮೂಗು ಶಾಂತವಾದಾಗ ಮತ್ತೆ ಬರುತ್ತದೆಯೇ? ಎನ್ನುವ ಹಿರಿಯರ ನಾಣ್ಣುಡಿ ಈಗ ಅರ್ಥವಾಯ್ತು. ನನ್ನ ಈ ಕೋಪ ನನ್ನನ್ನು ಯಾವಾಗ ಅಧಃಪತನಕ್ಕೆ ತಳ್ಳಿತು ಅಂತ ತಿಳಿಯಲೇ ಇಲ್ಲ. ಎಲ್ಲವೂ ಕೈಮೀರಿ ಹೋದ ಮೇಲೇಯೇ ಜ್ಞಾನೋದಯವಾಯಿತು. ಎಲ್ಲವೂ ಕ್ಷಣಾರ್ಧದಲ್ಲಿ ಮುಗಿದುಹೋಯಿತು.

ಆಕಾಶನ ಮನಸ್ಥಿತಿ ಕಲ್ಲೆಸೆದ ಜೇನುಗೂಡಾಗಿತ್ತು. ನಾಳೆ ನನಗೆ ಗಲ್ಲುಶಿಕ್ಷೆ.. ನನ್ನ ಸಂಕುಚಿತ ವಿಚಾರಧಾರೆ ನನ್ನನ್ನು ಈ ಸ್ಥಿತಿಗೆ ತಂದು ನಿಲ್ಲಿಸಿತು. ಸಾವಿನ ಬಾಗಿಲಲ್ಲಿ ನಿಂತವನಿಗೆ ಬದುಕಬೇಕೆಂಬ ಸಣ್ಣ ಆಸೆಯಾಗುತ್ತಿದೆ. ಏನು ಸಾಧನೆ ಮಾಡದೆ ಹೀಗೆ ಅರ್ಧದಲ್ಲಿ ಹೋಗಲಿಕ್ಕೆ ಮನಸ್ಸಿಲ್ಲ. ಮನುಷ್ಯ ಜನ್ಮ ಒಂದೇ ಬಾರಿ ಸಿಗೋದು ಅಂತ ಕೇಳಿದ್ದೇನೆ. ಈ ಎಲ್ಲದರ ಮಧ್ಯೆ ಆಶಾಳಿಗೆ ನಾನು ಎಂತಹ ದ್ರೋಹ ಎಸಗಿದೆನಲ್ಲ ಎಂಬ ಅಪರಾಧಿಪ್ರಜ್ಞೆಯೂ ನನ್ನನ್ನು ಒಳಗೊಳಗೇ ಹಿಂಡಿ ಹಿಪ್ಪೆ ಮಾಡುತ್ತಿತ್ತು. ಸಂಜೆಯಿಂದ ರಾತ್ರಿಯಾಯಿತು. ಇದು ಯಾವುದರ ಅರಿವೇ ಇಲ್ಲ. ಊಟ ತಂದುಕೊಟ್ಟರು ಅದರತ್ತ ನೋಡುವ ಮನಸ್ಸಾಗಲಿಲ್ಲ. ಕಣ್ಣೆದುರು ಸಾವಿರುವಾಗ, ಯಾರಿಗೆ ತಾನೇ ಊಟ ಬೇಕು. ಸಾವಿನ ಮುಂದೆ ಸಕಲೈಶ್ವರ್ಯವೂ ಗೌಣವಾಗಿ ಬಿಡುತ್ತದೆ. ಕಣ್ಣೆವೆಗಳನ್ನು ಮುಚ್ಚಲು ಪ್ರಯತ್ನಿಸಿದರೂ ನಿದ್ದೆ ಹತ್ತಿರ ಸುಳಿಯಲಿಲ್ಲ. ಮನಸ್ಸಿನಲ್ಲಿರುವ ಆತಂಕ ಶಮನ ವಾದರೆ ತಾನೇ ನಿದ್ದೆ ಬರೋದು! ಮನಸ್ಸು ನಿರಂತರವಾಗಿ ಚಡಪಡಿಸುತ್ತಿತ್ತು. ಹಾಗಾಗಿ ರಾತ್ರಿಯಿಡೀ ನಿದ್ದೆಯಿಲ್ಲದೆ ಒದ್ದಾಡಬೇಕಾಯಿತು. ಬೆಳಿಗ್ಗಿನ ಜಾವ ಹಕ್ಕಿಗಳ ಚಿಲಿಪಿಲಿ ಮಧುರ ಕಲರವ, ಪ್ರಶಾಂತವಾದ ವಾತಾವರಣ, ಎಲ್ಲೆಡೆ ನಿಶ್ಯಬ್ದವೇ ಮನೆಮಾಡಿರುವಾಗ, ಜೈಲಾಧಿಕಾರಿ ಬಂದು, ತನ್ನ ಗಡಸು ಸ್ವರದಲ್ಲಿ ಸ್ನಾನ ಮಾಡಲು ಹೇಳಿದರು. ಉಪಾಹಾರ ಕೂಡ ಕೊಟ್ಟರು. ಆದರೆ ಸಾವು ಹೊಸ್ತಿಲಲ್ಲಿ ಬಂದು ನಿಂತಿರಬೇಕಾದರೆ ಉಪಾಹಾರ ಯಾರಿಗೆ ಬೇಕು?

ವಧಾಕಾರ ಮುಖಕ್ಕೆ ಕಪ್ಪುಬಟ್ಟೆ ಹಾಕಿದಾಗ, ಎದೆಯಲ್ಲಿ ಚುಳಕ್ಕನೆ ನಡುಕ ಶುರುವಾಗಹತ್ತಿತು. ಇನ್ನು ಕೆಲವೇ ಕ್ಷಣಗಳಲ್ಲಿ ನನ್ನ ಪ್ರಾಣಪಕ್ಷಿ ಹಾರಿಹೋಗಲಿದೆ. ವಧಾಕಾರ ನೇಣಿನ ಕುಣಿಕೆ ನನ್ನ ಕತ್ತನ್ನು ಆವರಿಸಿದಾಗಲೇ ಅಮ್ಮನನ್ನು ನೆನದೆ. ಆಶಾಳಿಗೆ ಬಗೆದ ದ್ರೋಹಕ್ಕೆ ಮನಸ್ಸಲ್ಲೇ ಕ್ಷಮೆಯಾಚಿಸಿದೆ. ನನ್ನ ಈ ಪಾಪ ಈ ಜನ್ಮದಲ್ಲೇ ಕೊನೆಗೊಳ್ಳಲಿ. ಮುಂದಿನ ಜನ್ಮವೇನಾದರೂ ಇದ್ದರೆ, ಆಶಾಳಿಗೆ ನನ್ನಿಂದ ಒಳ್ಳೆಯದಾಗುವಂತೆ ಮಾಡು ದೇವ ಎಂದು ಆ ಕಾಣದ ದೇವರಲ್ಲಿ ಪ್ರಾರ್ಥಿಸಿದೆ. ನೇಣು ಹಾಕುವ ಮೊದಲು ಕೊನೆಯ ಆಸೆ ಏನು ಅಂತ ಕೇಳಿದಾಗಲೂ ಬಾಯಿ ಹೊರಡಲಿಲ್ಲ. ನನ್ನ ಮನಸ್ಸಿನ ಹುಯ್ದಾಟ ಅವರಿಗೆ ಹೇಗೆ ತಾನೇ ಅರ್ಥವಾಗಬೇಕು?
‘ನನ್ನನ್ನು ಕ್ಷಮಿಸಿಬಿಡು, ಇದರಲ್ಲಿ ನನ್ನ ತಪ್ಪೇನೂ ಇಲ್ಲ. ಇದು ನನ್ನ ಅನಿವಾರ್ಯತೆ. ಇದು ನನ್ನ ಕೆಲಸ’ ಎಂದು ವಧಾಕಾರ ಕಿವಿಯಲ್ಲಿ ಉಸುರಿದ ಆ ಮಾತುಗಳು ಎದೆಯ ಜೋರಾದ ಬಡಿತದಿಂದ ಕೇಳಿಸಲೇ ಇಲ್ಲ.
ನೇಣಿನ ಕುಣಿಕೆ ಬಿಗಿಯಾಗುತ್ತಾ ಹೋದಂತೆ, ಮನಸ್ಸು ಶಾಂತವಾಗತೊಡಗಿತು. ಮೇಲೆ ಹೋಗಿ ತಾಯಿಗೆ ಸಿಕ್ಕಿ, ಅವಳಲ್ಲಿ ಕ್ಷಮೆಯಾಚಿಸಿ, ಅವಳ ಮಡಿಲಲ್ಲಿ ತಾರೆಯಾಗಿ ಪವಡಿಸುವ ಆಸೆ ಚಿಗುರಿತು. ಈ ಗಲ್ಲು ಶಿಕ್ಷೆ ಮನಸ್ಸಿನ ಎಲ್ಲ ತುಯ್ದಾಟಗಳಿಗೆ ತೆರೆಬಿದ್ದಿತು. ಮನಸ್ಸಿನ ಎಲ್ಲ ಬೇಗುದಿಗಳು ಕೊನೆಗೂ ಶಮನವಾದವು.