ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನನಗೆ ಬರೋದು ಒಂದೇ ಭಾಷೆ, ಅದು ನನ್ನದಲ್ಲ

ಚಿಂತಕ, ದಾರ್ಶನಿಕ ಜಾಕ್ವೆಸ್ ಡೆರಿಡಾ ಅವರು ಪ್ರಖ್ಯಾತ ಸ್ಯಾಕ್ಸೋಫೋನ್‌ವಾದಕ , ಸಂಯೋಜಕ ಅರ್ನೆಟ್ ಕೋಲ್‌ಮನ್ ಅವರನ್ನು ಮಾಡಿದ ಸಂದರ್ಶನ ಬಲು ಅಪರೂಪದ್ದು. ಇದನ್ನು ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿ ಗೆದ್ದವರು ಟಿ ಎಸ್. ವೇಣುಗೋಪಾಲ್ ಅವರು. ಕನ್ನಡ ಓದುಗ ಲೋಕಕ್ಕೊಂದು ಸಂಗ್ರಹ ಯೋಗ್ಯ ಸಂವಾದ ಇಲ್ಲಿದೆ..

ಈ ಸಲದ ತಿಲ್ಲಾನವನ್ನು ಕೆಲವು ಸಂದರ್ಶನಗಳನ್ನು ಇಟ್ಟುಕೊಂಡು ಮಾಡೋಣ ಅಂದುಕೊಂಡೆವು. ಹಾಗೆ ಹುಡುಕುತ್ತಿದ್ದಾಗ ಹಲವು ಸಂದರ್ಶನಗಳು ಕಣ್ಣಿಗೆ ಬಿದ್ದವು. ಚಿಂತಕ, ದಾರ್ಶನಿಕ ಜಾಕ್ವೆಸ್ ಡೆರಿಡಾ ಅವರು ಪ್ರಖ್ಯಾತ ಸ್ಯಾಕ್ಸೋಫೋನ್‌ವಾದಕ, ಸಂಯೋಜಕ ಅರ್ನೆಟ್ ಕೋಲ್‌ಮನ್ ಅವರನ್ನು ಮಾಡಿದ ಸಂದರ್ಶನ ಹಲವು ಕಾರಣಕ್ಕೆ ಮುಖ್ಯ ಅನ್ನಿಸಿತು. ಸಾಕಷ್ಟು ಚರ್ಚೆಯೂ ಆಗಿದೆ. ಆದರೆ ಅನುವಾದ ಕಷ್ಟ ಅನ್ನಿಸಿತು. ಆ ಸಂಗೀತ, ಆ ಭಾಷೆ ಅಷ್ಟೊಂದು ಪರಿಚಿತ ಅನ್ನಿಸಲಿಲ್ಲ. ಒಂದಿಷ್ಟು ಅಧ್ಯಯನ ಬೇಡಿತು. ಆದರೂ ಗಮನಿಸಲೇ ಬೇಕಾದ ಸಂದರ್ಶನ ಅನ್ನಿಸಿ ಅದರ ಬಹಪಾಲನ್ನು ಅನುವಾದಿಸಿ ಇಲ್ಲಿ ಕೊಡುತ್ತಿದ್ದೇನೆ. ಸಂಪೂರ್ಣ ಸಂದರ್ಶವನ್ನು ಕೆಲವು ದಿನಗಳಲ್ಲಿ ಪೋಸ್ಟ್ ಮಾಡುತ್ತೇನೆ. ಓದುವುದಕ್ಕೆ ಸ್ವಲ್ಪ ಕಷ್ಟ ಅನ್ನಿಸಬಹುದು. ಸ್ವಲ್ಪ ತಾಳ್ಮೆ ಬೇಡುತ್ತದೆ. ಓದಿ ನೋಡಿ. ನಮ್ಮ ಅನುವಾದದಲ್ಲೂ ಸಮಸ್ಯೆ ಇರಬಹುದು.

೧೯೯೭ರ ಜೂನ್ ತಿಂಗಳ ಕೊನೆ ಮತ್ತು ಜುಲೈ ತಿಂಗಳ ಮೊದಲ ಭಾಗದಲ್ಲಿ. ಪ್ಯಾರಿಸ್ಸಿನ ಮ್ಯೂಸಿಯಂ ಹಾಗೂ ಪ್ರದರ್ಶನ ಕಲೆಗಳ ಸಮುಚ್ಛಯವಾದ ಲಾ ವಿಲ್ಲೆಯಲ್ಲಿ ಮೂರು ಪ್ರದರ್ಶನಗಳನ್ನು ನೀಡಲು ಕೋಲ್‌ಮನ್ ಬಂದಿದ್ದರು. ಆಗ ಡೆರಿಡಾ ಅವರನ್ನು ಸಂದರ್ಶಿಸಿದರು. ಈ ಸಂದರ್ಶನದಲ್ಲಿ ಸಂಯೋಜನೆ, ಮನೋಧರ್ಮ, ಭಾಷೆ ಹಾಗೂ ಜನಾಂಗೀಯ ನೀತಿಯನ್ನು ಕುರಿತು ಅವರೊಡನೆ ಚರ್ಚಿಸಿದ್ದಾರೆ. ಇದರಲ್ಲಿ ಮೂಲದ ಭಾಷೆಯನ್ನು ಕುರಿತ ವಿಚಾರಗಳು ಮತ್ತು ಜನಾಂಗೀಯ ಪೂರ್ವಗ್ರಹಗಳನ್ನು ಕುರಿತಂತೆ ಅವರ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಶನ ನಡೆದದ್ದು ಇಂಗ್ಲಿಷಿನಲ್ಲೇ ಆದರೆ ಆದರೆ ಮೂಲ ಪ್ರತಿ ಸಿಗದೇ ಹೋಗಿದ್ದರಿಂದ ಫ್ರೆಂಚ್‌ನಲ್ಲಿ ಪ್ರಕಟವಾದ ಅನುವಾದವನ್ನು ತಿಮೊತಿ ಎಸ್ ಮರ್ಫಿ ಮತ್ತೆ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಆ ಆವೃತ್ತಿಯ ಕನ್ನಡ ಅನುವಾದ ಇದು.

ಜಾಕ್ವೆಸ್ ಡೆರಿಡಾ: ಈ ವರ್ಷ ನೀವು ನ್ಯೂಯಾರ್ಕಿನಲ್ಲಿ ಸಿವಿಲೈಸೆಷನ್ ಅನ್ನುವ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸುತ್ತಿದ್ದೀರಿ. ಅದಕ್ಕೂ ಸಂಗೀತಕ್ಕೂ ಏನು ಸಂಬಂಧ?

ಆರ್ನೆಟ್ ಕೋಲ್‌ಮನ್: ನಾನು ಒಂದು ಪರಿಕಲ್ಪನೆಯನ್ನು ಅಭಿವ್ಯಕ್ತಿಸಲು ಪ್ರಯತ್ನಿಸುತ್ತಿದ್ದೇನೆ. ಅದರ ಪ್ರಕಾರ ಒಂದನ್ನು ಮತ್ತೊಂದಾಗಿ ರೂಪಾಂತರಿಸಬಹುದು. ನಾದಕ್ಕೆ ಮಾಹಿತಿಯೊಂದಿಗೆ ಹೆಚ್ಚು ಪ್ರಜಾಸತ್ತೀಯವಾದ ಸಂಬಂಧವಿದೆ ಅಂತ ಅನ್ನಿಸುತ್ತದೆ. ಯಾಕೆಂದರೆ ಸಂಗೀತವನ್ನು ಅರ್ಥಮಾಡಿಕೊಳ್ಳುವುದಕ್ಕೆ ನಿಮಗೆ ಅಕ್ಷರಗಳು ಬೇಡ. ಈ ವರ್ಷ ನನ್ನ ತಂಡ ಫಸ್ಟ್ ಕ್ವಾರ‍್ಟೆಟ್ ಮತ್ತು ನ್ಯೂ ಯಾರ್ಕ್‌ನ ಫಿಲ್ ಹಾರ್ಮೊನಿಕ್ ತಂಡದೊಂದಿಗೆ ಒಂದು ಪ್ರಾಜೆಕ್ಟನ್ನು ಪ್ರಸ್ತುತಪಡಿಸುತ್ತಿದ್ದೇನೆ. ಈ ಯೋಜನೆಯಲ್ಲಿ ಡಾನ್ ಚೆರ್ರಿ ಬಿಟ್ಟು ಇತರ ತಂಡಗಳೂ ಇರುತ್ತವೆ. ನಾದವು ಪ್ರತಿಯೊಂದು ಬಾರಿಯೂ ಹೊಸಹುಮ್ಮಸ್ಸಿನೊಂದಿಗೆ ನವನವೀನವಾಗಿ ಹೊರಹೊಮ್ಮಲು ಸಾಧ್ಯವಾಗುವಂತಹ ಹೊಸ ಕಲ್ಪನೆಯನ್ನು ಆವಿಷ್ಕರಿಸಲು ನಾನು ಪ್ರಯತ್ನಿಸುತ್ತಿದ್ದೇನೆ.

ಡೆರಿಡಾ: ಅಲ್ಲಿ ತಾವು ಸಂಯೋಜಕರಾಗಿ ಕೆಲಸ ನಿರ್ವಹಿಸುತ್ತಿದ್ದಿರೋ ಅಥವಾ ಒಬ್ಬ ಸಂಗೀತಗಾರನಾಗಿಯೋ?

ಕೋಲ್‌ಮನ್: ಸಂಯೋಜಕನಾಗಿ. ನನ್ನನ್ನು ಜನ ಆಗಾಗ ನೀವು ಈಗಾಗಲೇ ನುಡಿಸಿದ ರಚನೆಗಳನ್ನೇ ಮತ್ತೆ ಪ್ರಸ್ತುತ ಪಡಿಸುತ್ತೀರೋ ಅಥವಾ ಹೊಸ ರಚನೆಗಳನ್ನು ಪ್ರಸ್ತುಪಡಿಸುತ್ತೀರೋ? ಎಂದು ಕೇಳುತ್ತಾರೆ,

ಡೆರಿಡಾ: ನೀವು ಎಂದು ಅದನ್ನು ಉತ್ತರಿಸುವ ಗೋಜಿಗೆ ಹೋಗಿಲ್ಲ ಅಲ್ವಾ?

ಕೋಲ್‌ಮನ್: ನೀವು ಈಗಾಗಲೇ ಮುದ್ರಿಸಿರುವ ಸಂಗೀತವನ್ನೇ ಮತ್ತೆ ಪ್ರಸ್ತುತ ಪಡಿಸಿದರೆ, ಆ ಸಂಗೀತವನ್ನು ಜೀವಂತವಾಗಿ, ಜಾರಿಯಲ್ಲಿಡಲು ಅವರನ್ನು ನೇಮಿಸಿಕೊಳ್ಳುತ್ತಿದ್ದೀರಿ ಅಂತ ಹೆಚ್ಚಿನ ಸಂಗೀತಗಾರರು ಭಾವಿಸುತ್ತಾರೆ. ತುಂಬಾ ಜನ ಸಂಗೀತಗಾರರಿಗೆ ನುಡಿಸಿರುವುದನ್ನೇ ಮತ್ತೆ ಮತ್ತೆ ನುಡಿಸುವುದಕ್ಕೆ ಅಂತಹ ಉತ್ಸಾಹವಿರುವುದಿಲ್ಲ. ಅದರಿಂದ ನಾನು ಅವರು ಇಲ್ಲಿಯವರೆಗೂ ನುಡಿಸದೇ ಇದ್ದಂತಹ ಸಂಗೀತವನ್ನು ರಚಿಸುತ್ತೇನೆ.

ಡೆರಿಡಾ: ಅವರನ್ನು ಅಚ್ಚರಿಗೊಳಿಸುತ್ತಾ ಇರಬೇಕು ಅಲ್ವಾ?

ಕೋಲ್‌ಮನ್: ಹೌದು, ಸುಮ್ಮನೆ ಬನ್ನಿ ನನ್ನ ಜೊತೆ ಜನರ ಮುಂದೆ ನುಡಿಸಿ ಅಂತ ಸುಮ್ಮನೆ ಕೇಳುವುದಕ್ಕಿಂತ ಅವರಲ್ಲಿ ಹೊಸ ಹುರುಪು ಮೂಡಿಸುವ ಪ್ರಯತ್ನ ಮಾಡಬೇಕು. ಆದರೆ ನನಗದು ತುಂಬಾ ಕಷ್ಟ. ಜಾಸ್ ಸಂಗೀತಗಾರರಿಗೆ ರಚನಕಾರರ ಬಗ್ಗೆ ಹೆಚ್ಚಿನ ಆಸಕ್ತಿ ಇರುವುದಿಲ್ಲ. ಏಕೆಂದರೆ ಅವರು ಯಾವಾಗಲೂ ರಚನಕಾರರ ರಚನೆಗಳನ್ನು ಅಥವಾ ಅವರು ಹೇಳುವುದನ್ನು ಒಡೆಯಲು ಬಯಸುತ್ತಾರೆ.

ಡೆರಿಡಾ: ನೀವು ನಾದ ಅನ್ನೋದು ಹೆಚ್ಚು ಪ್ರಜಾಸತ್ತಾತ್ಮಕ ಅನ್ನುತ್ತೀರಿ. ಒಬ್ಬ ರಚನಕಾರನಾಗಿ ಅದನ್ನು ನೀವು ಹೇಗೆ ಅರ್ಥಮಾಡಿಕೊಳ್ಳುತ್ತೀರಿ? ನೀವು ಸಂಗೀತವನ್ನು ಹೇಗಿದ್ದರೂ ಸಂಕೇತಗಳಲ್ಲೇ ಬರೆಯುವುದು.

ಕೋಲ್‌ಮನ್: ನಾನು ೧೯೭೨ರಲ್ಲಿ ಸ್ಕೈಸ್ ಆಫ್ ಅಮೆರಿಕಾ ಅನ್ನೋ ಸಿಂಫೋನಿಯನ್ನು ಬರೆದೆ. ನನ್ನ ಮಟ್ಟಿಗೆ ಅದೊಂದು ದುರಂತ. ಸಂಗೀತಲೋಕದೊಂದಿಗೆ ನನಗೆ ಅಂತಹ ಒಳ್ಳೆಯ ಸಂಬಂಧ ಇರಲಿಲ್ಲ. ಏಕೆಂದರೆ ಆಗ ನಾನು ಜಾಜ಼್‌ನಲ್ಲಿ ಮನೋಧರ್ಮಕ್ಕೆ ಸಂಬಂಧಿಸಿದಂತೆ ಜಡ್ಡುಗಟ್ಟಿ ಜಾಡಿಗೆ ಬಿದ್ದದ್ದ ಕಾರ್ಡ್‌ಗಳು, ಲಯದ ಮಾದರಿಗಳು, ನಾದಗುಣ ಇವೆಲ್ಲವನ್ನೂ ಬದಲಾಯಿಸುವುದಕ್ಕೆ ಪ್ರಯೋಗಗಳನ್ನು ಮಾಡುತ್ತಿದ್ದೆ. ಆಗ ಹೆಚ್ಚಿನವರ ಮನಸ್ಸಿನಲ್ಲಿ ನಾನು ಯಾವುದೇ ನಿಯಮವನ್ನೂ ಅನುಸರಿಸದೆ, ಹುಚ್ಚಾಪಟ್ಟೆ ಮನಸ್ಸಿಗೆ ಬಂದದ್ದನ್ನೆಲ್ಲಾ ಸ್ಯಾಕ್ಸೋಫೋನಿನಲ್ಲಿ ನುಡಿಸುತ್ತೇನೆ ಅನ್ನೋ ಭಾವನೆಯಿತ್ತು. ಆದರೆ ಅದು ನಿಜವಲ್ಲ.

ಡೆರಿಡಾ: ನೀವು ಆರೋಪಗಳನ್ನು ನಿರಂತರವಾಗಿ ವಿರೋಧಿಸುತ್ತಲೇ ಬಂದಿದ್ದೀರಿ.

ಕೋಲ್‌ಮನ್: ಹೌದು ಈ ಕ್ಷೇತ್ರಕ್ಕೆ ಹೊರಗಿನವರು ಇದು ಅಸಾಧಾರಣ ಸ್ವಾತಂತ್ರ್ಯವಿರುವ ಸಂಗೀತ ಅಂತ ಭಾವಿಸುತ್ತಾರೆ. ಆದರೆ ಅದಕ್ಕೆ ಮಿತಿಯಿದೆ ಅಂತಲೇ ನನಗೆ ತೋರುತ್ತದೆ. ಹಾಗಾಗಿಯೇ ನನಗೆ ೨೦ ವರ್ಷ ಹಿಡಿಯಿತು. ಆದರೆ ಇಂದು ನ್ಯೂಯಾರ್ಕ ಸಿಂಫೋನಿ ಆರ್ಕೆಸ್ಟ್ರಾ ಮತ್ತು ಅದರ ಕಂಡಕ್ಟರ್ ನನ್ನ ರಚನೆಯನ್ನು ಪ್ರಸ್ತುತಪಡಿಸುತ್ತಿದ್ದಾರೆ. ಒಮ್ಮೆ ನಾನು ಫಿಲ್‌ಹಾರ್ಮೋನಿಕ್‌ನ ಕೆಲವು ಸದಸ್ಯರನ್ನು ಭೇಟಿ ಮಾಡಿದ್ದಾಗ ಅವರು ಸ್ಕೋರುಗಳ ನಿರ್ವಹಣೆಯನ್ನು ನೋಡಿಕೊಳ್ಳುತ್ತಿರುವ ವ್ಯಕ್ತಿ ನಿಮ್ಮ ರಚನೆಯನ್ನೊಮ್ಮೆ ನೋಡಬೇಕು ಅನ್ನುತ್ತಿದ್ದರು ಎಂದು ತಿಳಿಸಿದರು. ಅದನ್ನು ಕೇಳಿ ನನಗೆ ನೋವಾಯಿತು. ಆಗ ನಾನವರಿಗೆ ನೋಡಿ, ನೀವು ನನಗೊಂದು ಪತ್ರ ಬರೆಯುತ್ತೀರಿ. ಅದರಲ್ಲಿ ನನಗೆ ಬೇಸರವಾಗುವಂಥದ್ದು ಏನೂ ಇಲ್ಲ ಅನ್ನೋದನ್ನು ಖಾತರಿ ಮಾಡಿಕೊಳ್ಳಲು ಅದನ್ನು ಇನ್ಯಾರೋ ಓದಬೇಕು ಅಂತ ಹೇಳಿದ ಹಾಗೆ ಆಯಿತು, ಅಂತ ಹೇಳಿದೆ. ಫಿಲ್ ಹಾರ್ಮೋನಿಕ್‌ಗೆ ಏನೂ ತೊಂದರೆ ಆಗೋದಿಲ್ಲ ಅನ್ನೋದನ್ನ ಅವರು ಖಚಿತಪಡಿಸಿಕೊಳ್ಳಬೇಕಿತ್ತು. ಆಗ ಅವರೆಂದರು, ನಮಗೆ ಎಲ್ಲಿ ಚುಕ್ಕೆ ಇದೆ ಮತ್ತು ಎಲ್ಲಿ ಪದ ಇದೆ ಎನ್ನುವುದನ್ನು ತಿಳಿದುಕೊಳ್ಳಬೇಕು ಅಷ್ಟೆ. ಅಂತ ಹೇಳಿದರು. ಅದಕ್ಕೂ ಸಂಗೀತಕ್ಕೂ, ನಾದಕ್ಕೂ ಯಾವುದೇ ಸಂಬಂಧವು ಇರಲಿಲ್ಲ. ಅದು ಕೇವಲ ಸಂಕೇತಗಳಿಗೆ ಸಂಬಂಧಿಸಿದ ವಿಷಯವಾಗಿತ್ತು. ವಾಸ್ತವವಾಗಿ ನಾನು ಕಳೆದ ಮೂವತ್ತು ವರ್ಷಗಳಿಂದ ಹಾರ್ಮೊಲೋಡಿಕ್ ಎನ್ನುವ ಹೆಸರಿನಲ್ಲಿ ರಚಿಸುತ್ತಿರುವ ಸಂಗೀತದಲ್ಲಿ ನಮ್ಮ ಸಾಹಿತ್ಯವನ್ನು ನಾವೇ ರಚಿಸಿಕೊಳ್ಳುತ್ತಿದ್ದೇವೆ. ಜನರು ಅದನ್ನು ಯಾವ ರೀತಿ ಅರ್ಥಮಾಡಿಕೊಳ್ಳಬೇಕು ಅನ್ನುವುದನ್ನು ಸ್ಪಷ್ಟವಾಗಿ ಯೋಚಿಸಿರುತ್ತೇವೆ.

ಡೆರಿಡಾ: ಸಂಗೀತವನ್ನು ಕುರಿತ ನಿಮ್ಮ ಗ್ರಹಿಕೆಯನ್ನು ನಿಮ್ಮ ಜೊತೆಗಾರರೆಲ್ಲರೂ ಒಪ್ಪಿಕೊಳ್ಳುತ್ತಾರಾ?

ಕೋಲ್‌ಮನ್: ಸಾಮಾನ್ಯವಾಗಿ ಕಂಪೋಸ್ ಮಾಡುತ್ತಿದ್ದಾಗ ಅವರಿಗೆ ವಿಶ್ಲೇಷಿಸಲು ಅವಕಾಶವಿರುತ್ತೆ. ಅವರೊಂದಿಗೆ ನುಡಿಸುತ್ತೇನೆ. ನಾನು ರಚಿಸಿರುವ ಸಂಗೀತದ ಮುದ್ರಿತ ಪ್ರತಿಯನ್ನು (ಸ್ಕೋರ್) ಅವರೊಂದಿಗೆ ಹಂಚಿಕೊಳ್ಳುತ್ತೇನೆ. ಮುಂದಿನ ರಿಹರ್ಸಲ್‌ನಲ್ಲಿ (ರಿಪಿಟೇಷನ್) ಅವರ ಅಭಿಪ್ರಾಯ ತಿಳಿದುಕೊಳ್ಳುತ್ತೇನೆ. ಅಲ್ಲಿಂದ ಮುಂದಕ್ಕೆ ಮುಂದುವರಿಯುತ್ತೇನೆ. ನನ್ನ ಶಿಷ್ಯರ ಜೊತೆಯಲ್ಲಿಯೂ ಹೀಗೇ ಮಾಡುತ್ತೇನೆ. ಯಾರು ಪದಗಳ ಮೂಲಕ, ಪದ್ಯಗಳ ಮೂಲಕ, ಅಥವಾ ಇನ್ಯಾವುದೇ ರೂಪದಲ್ಲಿ ತಮ್ಮನ್ನು ಅಭಿವ್ಯಕ್ತಿಸಿಕೊಳ್ಳಲು ಪ್ರಯತ್ನಿಸುತ್ತಾರೋ ಅವರೆಲ್ಲಾ ನನ್ನ ಪುಸ್ತಕ ಹಾರ್ಮೋಲಾಡಿಕ್ಸ್ ಬಳಸಿಕೊಂಡು, ಅದಕ್ಕೆ ಅನುಗುಣವಾಗಿ ರಚನೆಗಳನ್ನು ಮಾಡಬಹುದು, ನನ್ನಷ್ಟೇ ಉತ್ಸಾಹದಿಂದ ಮತ್ತು ಮೂಲ ಅಂಶಗಳನ್ನೇ ಬಳಸಿಕೊಂಡು ಮಾಡಬಹುದು ಅನ್ನುವುದು ನನ್ನ ನಂಬಿಕೆ.

ಡೆರಿಡಾ: ನ್ಯೂಯಾರ್ಕ್‌ನ ಪ್ರಾಜೆಕ್ಟಿಗೆ ಬೇಕಾದ್ದನ್ನು ಸಿದ್ಧಪಡಿಸುವಾಗ ಮೊದಲು ನೀವೇ ಸಂಗೀತ ರಚಿಸುತ್ತೀರಿ, ನಂತರ ಜೊತೆಯವರಿಗೆ ಕೊಟ್ಟು, ಅವರು ನೋಡಿದ ಮೇಲೆ ಅವರು ಅದನ್ನು ಒಪ್ಪಿಕೊಳ್ಳಬಹುದು ಅಥವಾ ಮೂಲ ರಚನೆಯಲ್ಲಿ ಬದಲಾವಣೆಯನ್ನು ಬೇಕಾದರೂ ಸೂಚಿಸಬಹುದು ಎಂದು ಅವರಿಗೆ ಹೇಳುತ್ತೀರಾ?

ಕೋಲ್‌ಮನ್: ಫಿಲ್‌ಹಾರ್ಮೋನಿಕ್‌ಗೆ ನಾನು ಪ್ರತಿ ವಾದ್ಯದ ಭಾಗವನ್ನು ಪ್ರತ್ಯೇಕವಾಗಿ ಬರೆದು, ಅದರ ಪ್ರತಿಗಳನ್ನು, ಆಯಾ ಸ್ಕೋರಿನ ಮೇಲ್ವಿಚಾರಕರ ಬಳಿಗೆ ಹೋಗುತ್ತಿದ್ದೆ. ಆದರೆ ಜಾಜ಼್ ತಂಡಕ್ಕೆ ಮಾತ್ರ ಸಂಗೀತವನ್ನು ರಚಿಸಿ ರಿಹರ್ಸಲ್ ಸಮಯದಲ್ಲಿ ಅವರವರ ಭಾಗವನ್ನು ಅವರವರಿಗೆ ಕೊಡುತ್ತೇನೆ. ಮನೋಧರ್ಮ ಸಂಗೀತ ಎಂಬ ಹೆಸರಿದ್ದರೂ ಕೂಡ, ಹೆಚ್ಚಿನ ಸಂಗೀತಗಾರರು ಮನೋಧರ್ಮವನ್ನು ಪ್ರಸ್ತುತಪಡಿಸಲು ಒಂದು ಮೂಲ ಚೌಕಟ್ಟನ್ನು ಆಧಾರವಾಗಿ ಇಟ್ಟುಕೊಂಡಿರುತ್ತಾರೆ. ಇದು ನನಗೆ ಆತಂಕದ ವಿಷಯ.
ನಾನು ಇತ್ತೀಚೆಗಷ್ಟೇ ಯರೋಪ್ಯ ಸಂಗೀತಗಾರ ಜೋಚಿಮ್ ಕುನ್ ಜೊತೆಯಲ್ಲಿ ಒಂದು ಸಿಡಿಯನ್ನು ಧ್ವನಿಮುದ್ರಿಸಿದೆ. ಅವರ ಜೊತೆಗೆ ನುಡಿಸುವುದಕ್ಕೇ ಒಂದು ಸಂಗೀತವನ್ನು ರಚಿಸಿದೆ. ಅದನ್ನು ೧೯೯೬ರ ಆಗಸ್ಟ್‌ನಲ್ಲಿ ಧ್ವನಿಮುದ್ರಿಸಿದೆವು. ಅದರಲ್ಲಿ ಎರಡು ವೈಶಿಷ್ಟ್ಯಗಳಿವೆ. ಅದು ಸಂಪೂರ್ಣವಾಗಿ ಮನೋಧರ್ಮ ಸಂಗೀತ, ಆದರೆ ಅದೇ ಹೊತ್ತಿಗೆ ಅದು ಐರೋಪ್ಯ ಸಂಗೀತ ಪದ್ಧತಿಯ ನೀತಿನಿಯಮಗಳನ್ನು ಅನುಸರಿಸುತ್ತದೆ. ಹಾಗಿದ್ದಾಗ್ಯೂ ಅದನ್ನು ಕೇಳಿದಾಗ ಸಂಪೂರ್ಣ ಮನೋಧರ್ಮದ ಅನುಭವ ನಿಮಗಾಗುತ್ತದೆ.

ಡೆರಿಡಾ: ಹಾಗಾದರೆ, ಸಂಗೀತಗಾರ ಮೊದಲಿಗೆ ನೀವು ನೀಡುವ ವಿನ್ಯಾಸವನ್ನು ಓದಿಕೊಳ್ಳುತ್ತಾನೆ. ನಂತರ ತನ್ನ ಕಲ್ಪನೆ ಹಾಗೂ ಮನೋಧರ್ಮವನ್ನು ಅದಕ್ಕೆ ಸೇರಿಸಿ ತನ್ನ ಛಾಪನ್ನು ಮೂಡಿಸುತ್ತಾನೆ.

ಕೋಲ್‌ಮನ್: ಹೌದು ಇಬ್ಬರೂ ಅಥವಾ ಮೂವರು ಸಂಗೀತಗಾರರು ನಾದದೊಂದಿಗೆ ಅನುಸಂಧಾನ ಮಾಡುತ್ತಿರುತ್ತಾರೆ. ಆದರೆ ಅಲ್ಲಿ ಯಾರೂ ಒಬ್ಬರ ಮೇಲೆ ಇನ್ನೊಬ್ಬರು ಮೇಲುಗೈ ಸಾಧಿಸಲು ಪ್ರಯತ್ನಿಸುತ್ತಿರುವುದಿಲ್ಲ. ಅಥವಾ ಮುನ್ನಡೆಸುವುದಕ್ಕೆ ಒಬ್ಬ ಪ್ರಧಾನ ವಾದಕ ಅಥವಾ ಗಾಯಕ ಅಂತ ಯಾರು ಇರೊಲ್ಲ. ಎಲ್ಲರೂ ಸಮಾನ ಸ್ತರದಲ್ಲಿ ಇರುತ್ತಾರೆ. ಅಂದರೆ, ನೀವು ಸ್ವಲ್ಪ ಜಾಣರಾಗಿರಬೇಕು. ಬಹುಶಃ ಜಾಣ ಎನ್ನುವುದೇ ಸೂಕ್ತವಾದ ಪದ ಎಂದು ಭಾವಿಸುತ್ತೇನೆ. ಮನೋಧರ್ಮ ಸಂಗೀತದಲ್ಲಿ ಸಂಗೀತಗಾರರು ಒಂದು ಭಾವನಾತ್ಮಕವಾದ ಅಥವಾ ಬೌದ್ಧಿಕವಾದ ಸಮಸ್ಯೆಯನ್ನು (ಪಜಲ್) ಪುನರ್ ಜೋಡಣೆ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಹೀಗೆ ಮತ್ತೆ ಜೋಡಿಸುವಾಗ ವಾದ್ಯಗಳು ಸ್ವರಗಳನ್ನು (ಟೋನ್) ಒದಗಿಸುತ್ತಿರುತ್ತವೆ. ಮೊದಲಿನಿಂದ ಪಿಯಾನೊ ಹಾಗೆ ಲೀಡ್ ಮಾಡುತ್ತಾ ಸ್ವರಗಳನ್ನು ಒದಗಿಸುತ್ತಿತ್ತು. ಆದರೆ ಈಗ ಅದು ಅನಿವಾರ್ಯವಲ್ಲ. ನಿಜ ಹೇಳಬೇಕೆಂದರೆ ಸಂಗೀತದಲ್ಲಿ ವ್ಯಾಪಾರೀ ಅಂಶ ತುಂಬಾ ಅನಿಶ್ಚಿತವಾದುದು. ಲಾಭವನ್ನು, ಮಾರುಕಟ್ಟೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಆಗಿರುವ ಸಂಗೀತ ಕಡಿಮೆಯೇ.

ಡೆರಿಡಾ: ನೀವು ಪೂರ್ವಾಭ್ಯಾಸ ಪ್ರಾರಂಭಿಸುವಾಗ ಎಲ್ಲಾ ವಿವರಗಳನ್ನು ಸಿದ್ಧಪಡಿಸಿಕೊಂಡುಬಿಟ್ಟಿರುತ್ತೀರೋ ಇಲ್ಲಾ ಮನೋಧರ್ಮಕ್ಕೆ, ಅನಿರೀಕ್ಷಿತ ಹೊಳವುಗಳಿಗೆ ಅವಕಾಶ ಇಟ್ಟುಕೊಂಡಿರುತ್ತೀರೋ?

ಕೋಲ್‌ಮನ್: ಒಂದು ವೇಳೆ ನಾವು ನುಡಿಸುತ್ತಾ ಇದ್ದಾಗ ನಿಮಗೆ ಯಾವುದನ್ನಾದರು ಸುಧಾರಿಸಿ ಮತ್ತಷ್ಟು ಉತ್ತಮಗೊಳಿಸಬಹುದು ಅಂತ ಅನ್ನಿಸಿದರೆ ಇದನ್ನು ಪ್ರಯತ್ನಿಸು ಅಂತ ನೀವು ನನಗೆ ಹೇಳಬಹುದು. ನನ್ನ ದೃಷ್ಟಿಯಲ್ಲಿ ಸಂಗೀತಕ್ಕೆ ಒಬ್ಬ ಪ್ರಧಾನ ನಾಯಕ ಅಥವಾ ನಿರ್ವಾಹಕ ಅಂತಿಲ್ಲ.

ಡೆರಿಡಾ: ಕಚೇರಿ ಎನ್ನುವುದು ಕರಾರುವಾಕ್ಕಾಗಿ ನಿಯೋಜಿತವಾಗಿರುವ ಕಾರ್ಯಕ್ರಮ. ಆ ಕಚೇರಿ ಮತ್ತು ನಿಬದ್ಧ ಅಥವಾ ಮನೋಧರ್ಮ ಸಂಗೀತದ ನಡುವಿನ ಸಂಬಂಧ ಯಾವ ರೀತಿಯದು? ನಿಬದ್ಧ ರಚನೆಗಳಿಂದಾಗಿ, ಸಂಗೀತದಲ್ಲಿ ಮಹತ್ವದ ಸಂಗತಿಗಳು ಸಂಭವಿಸುವುದು ತಪ್ಪಿಹೋಗಬಹುದಾ?

ಕೋಲ್‌ಮನ್: ನೋಡಿ, ನಾನು ಹೇಳುತ್ತಿರುವುದು ಭಾಷೆಯ ವಿಷಯದಲ್ಲೂ ನಿಜವೇ ಇಲ್ಲವೋ ಅಂತ ಗೊತ್ತಿಲ್ಲ. ಆದರೆ ಜಾಜ಼್ ಸಂಗೀತದಲ್ಲಿ ನೀವು ತೀರಾ ಪ್ರಾಚೀನ ರಚನೆಯೊಂದನ್ನು ತೆಗೆದುಕೊಂಡು ಅದನ್ನು ರೂಪಾಂತರಿಸಿ, ಪ್ರಸ್ತುತಪಡಿಸಬಹುದು. ನೆನಪೊಂದನ್ನು ವರ್ತಮಾನಕ್ಕೆ ತರುತ್ತೀರಲ್ಲ ಅದು ನಿಜಕ್ಕೂ ರೋಮಾಂಚಕಾರಿ. ಒಂದು ಇನ್ನೊಂದಾಗಿ ಬದಲಾಗುವುದು ನಿಜವಾಗಿಯೂ ಆರೋಗ್ಯಕರ ಬೆಳವಣಿಗೆ. ಆದರೆ ಅದು ಆಗುವುದು ಅಪರೂಪ.

ಡೆರಿಡಾ: ಮನೋಧರ್ಮ ಅನ್ನೋದು ಓದುವುದೇ ರೀತಿಯ ಪರಿಕಲ್ಪನೆ. ಬಹುಶಃ ಇದನ್ನು ನೀವೂ ಒಪ್ಪಿಕೊಳ್ಳುತ್ತೀರಿ ಅಂದುಕೊಳ್ಳುತ್ತೀನಿ. ಮನೋಧರ್ಮ ಅಂದರೆ ಹೊಸದೇನನ್ನೋ ಸೃಷ್ಟಿಸುವುದು ಅಂದುಕೊಳ್ಳುತ್ತೇವೆ. ಆದರೆ ಈ ಮೊದಲೇ ಸಿದ್ಧವಾಗಿರುವ ಒಂದು ವಿನ್ಯಾಸವಿದ್ದಾಗ ಮಾತ್ರ ಅದು ಸಾಧ್ಯವಾಗುತ್ತದೆ. ಆ ಹಿಂದಿನದನ್ನು ಬಿಟ್ಟು ಇದು ಇರೋದಕ್ಕೆ ಸಾಧ್ಯವಿಲ್ಲ.

ಕೋಲ್‌ಮನ್: ಹೌದು, ಅದು ನಿಜ.

ಡೆರಿಡಾ: ನಾನು ಆರ್ನೆಟ್ ಕೋಲ್‌ಮನ್ ಪರಿಣತ ಅಲ್ಲ. ಆದರೆ ನೀವು ಏನು ಮಾಡುತ್ತಿದ್ದೀರೋ ಅದನ್ನು ನನಗೆ ಹೆಚ್ಚು ಪರಿಚಿತವಾದ ಕ್ಷೇತ್ರಕ್ಕೆ ಅಂದರೆ ಲಿಖಿತ ಭಾಷೆಯ ಕ್ಷೇತ್ರಕ್ಕೆ ರೂಪಾಂತರಿಸುತ್ತೇನೆ. ಒಮ್ಮೆಯಷ್ಟೇ ಸೃಷ್ಟಿಯಾಗುವ ವಿಶಿಷ್ಟವಾದ ಕೃತಿಯೂ ಕೂಡ ಅದರ ವಿನ್ಯಾಸದ ಒಳಗೇ ಪುನರಾವರ್ತನೆಯಾಗುತ್ತದೆ. ಅಂದರೆ ಮೊತ್ತ ಮೊದಲ ಸಲದ ಸೃಷ್ಟಿಯೂ ಪುನರಾವರ್ತನೆಯೇ ಆಗಿರುತ್ತದೆ. ಈ ಪುನರಾವರ್ತನೆ ಮನೋಧರ್ಮದ ಪರಿಕಲ್ಪನೆಯನ್ನು ಜಟಿಲಗೊಳಿಸುತ್ತದೆ. ಉತ್ತಮಪಡಿಸುವ ಕ್ರಿಯೆಯಲ್ಲಿಯೇ (ಮನೋಧರ್ಮದಲ್ಲೇ) ಪುನರಾವರ್ತನೆ ಇದೆ. ಹಾಗಾಗಿ ಜನ ಮನೋಧರ್ಮ ಹಾಗೂ ಈಗಾಗಲೇ ರಚಿತವಾಗಿರುವ ಸಂಗೀತ ಎನ್ನುವುದರ ನಡುವೆ ನಿಮ್ಮನ್ನು ಸಿಕ್ಕಿಬೀಳಿಸಲು ಪ್ರಯತ್ನಿಸಿ, ತಪ್ಪು ಮಾಡುತ್ತಿದ್ದಾರೆ.

ಕೋಲ್‌ಮನ್: ಪುನರಾವರ್ತನೆ ಅನ್ನುವುದು ಭೂಮಿ ಸುತ್ತುತ್ತದೆ ಅನ್ನುವಷ್ಟೇ ಸ್ವಾಭಾವಿಕ.

ಡೆರಿಡಾ: ನಿಮ್ಮ ಸಂಗೀತ ಮತ್ತು ಜನ ಅದಕ್ಕೆ ಸ್ಪಂದಿಸುವ ರೀತಿ ಬದಲಾವಣೆ ತರಬಹುದು ಅಥವಾ ಬದಲಾವನೆ ತರಬೇಕು ಅಂತ ನಿಮಗೆ ಅನ್ನಿಸುತ್ತದಾ? ಒಬ್ಬ ಕಲಾವಿದನಾಗಿ ಅಥವಾ ಸಂಗೀತ ರಚನಕಾರನಾಗಿ ಒಟ್ಟಾರೆ ಪರಿಸ್ಥಿತಿಯನ್ನು ಪ್ರಭಾವಿಸುವುದಕ್ಕೆ ನಿಮಗೆ ಸಾಧ್ಯವೇ ಅಥವಾ ಪ್ರಭಾವಿಸಬೇಕೆ?

ಕೋಲ್‌ಮನ್: ಇಲ್ಲ, ನಾನು ಹಾಗೆ ನಂಬಿಲ್ಲ. ನನಗಿಂತ ಹಿಂದೆಯೂ ಹಲವರಿಗೆ ಈ ಅನುಭವ ಆಗಿದೆ. ಈಗ ಆ ಬಗ್ಗೆ ನಾನೇನಾದರು ಗೊಣಗಾಡಿದರೆ, ಯಾಕೆ ಗೊಣಗಾಡುತ್ತೀಯೆ? ನಾವು ನಿನಗಿಂತಲೂ ಹೆಚ್ಚು ಮೆಚ್ಚಿಕೊಳ್ಳುವ ವ್ಯಕ್ತಿಗೋಸ್ಕರವಾಗಿಯೇ ಬದಲಾಗಿಲ್ಲ. ಇನ್ನು ನಿನಗೋಸ್ಕರ ಏಕೆ ಬದಲಾಗ ಬೇಕು? ಎನ್ನುತ್ತಾರೆ.
ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆಯಾಗುತ್ತಿದ್ದಾಗ ನಾನು ದಕ್ಷಿಣದಲ್ಲಿದ್ದೆ. ನಾನು ಸಂಗೀತದ ಮೂಲಕ ಅವರೊಂದಿಗೆ ಗುರುತಿಸಿಕೊಂಡಿದ್ದೆ. ನಾನು ಟೆಕ್ಸಾಸ್‌ನಲ್ಲಿದ್ದಾಗ ರೇಡಿಯೊದಲ್ಲಿ ಸ್ಯಾಕ್ಸೋಫೋನ್ ನುಡಿಸಿ ಸಂಸಾರಕ್ಕೆ ಒಂದಿಷ್ಟು ಹಣ ಸಂಪಾದಿಸುತ್ತಿದ್ದೆ. ಒಂದು ದಿವಸ ಜನ ಜಗಳವಾಡುತ್ತಿದ್ದ, ಜೂಜು, ಸೂಳೆಗಾರಿಕೆ ಸಿಕ್ಕಾಪಟ್ಟೆ ಇದ್ದ ಜಾಗಕ್ಕೆ ಬಂದೆ. ಅಲ್ಲಿ ಒಬ್ಬ ಹೆಂಗಸನ್ನು ಇರಿದು ಕೊಲ್ಲುವುದನ್ನು ನೋಡಿದೆ. ಅಲ್ಲಿಂದ ಓಡಿಹೋಗಬೇಕೆನ್ನಿಸಿತು. ನಾನು ಇನ್ನು ಮೇಲೆ ಈ ಸಂಗೀತ ನುಡಿಸೊಲ್ಲ, ಅದು ಅವರ ನೋವನ್ನು ಇನ್ನಷ್ಟು ಹೆಚ್ಚಿಸುತ್ತದೆ ಅಂತ ಅಮ್ಮನಿಗೆ ಹೇಳಿದೆ. ಅದಕ್ಕೆ ಅಮ್ಮ ನಿನಗೇನಾಗಿದೆ, ನಿನ್ನ ಆತ್ಮ ಸಂತೋಷಕ್ಕೆ ಯಾರಾದರೂ ಹಣಕೊಡಬೇಕು ಅಂದುಕೊಂಡಿದ್ದೀಯ? ಅಂತ ಕೇಳಿದರು. ನಾನು ಆ ಬಗ್ಗೆ ಯೋಚಿಸಿಯೇ ಇರಲಿಲ್ಲ. ಅಮ್ಮ ಹಾಗೆ ಕೇಳಿದಾಗ ನನಗೆ ಬದುಕಿಗೆ ಮರುದೀಕ್ಷೆ (ಡಿe-bಚಿಠಿಣizeಜ) ನೀಡಿದಂತಾಯಿತು.

ಡೆರಿಡಾ: ನಿಮ್ಮಮ್ಮ ತುಂಬಾ ವಿವೇಕಸ್ಥೆ.

ಕೋಲ್‌ಮನ್: ಹೌದು ಅವಳು ಜಾಣೆ. ಅಂದಿನಿಂದ ಬೇರೆಯವರು ಮಾಡದೇ ಇರುವುದನ್ನು ನಾನು ಪಾಪಪ್ರಜ್ಞೆ ಇಲ್ಲದೆ ಹೇಗೆ ಮಾಡುವುದು ಅಂತ ಹೆಣಗುತ್ತಿದ್ದೇನೆ.

ಡೆರಿಡಾ: ಯಶಸ್ವಿಯಾಗಿದ್ದೀರಾ?

ಕೋಲ್‌ಮನ್: ಗೊತ್ತಿಲ್ಲ. ಆದರೆ ಆ ಹೊತ್ತಿಗಾಗಲೇ ರೂಪುಗೊಂಡಿದ್ದ ಬೆಬಾಪ್ (ಜಾಸ್ ಸಂಗಿತದ ಒಂದು ಶಾಖೆ) ಇದಕ್ಕೊಂದು ಪರಿಹಾರವಾಗಿ ಕಂಡಿತು. ಬೆಬಾಪ್ ಒಂದು ನಿರ್ದಿಷ್ಟ ಸನ್ನಿವೇಶ ಮತ್ತು ಮನಃಸ್ಥಿತಿಯೊಂದಿಗೆ ತೆಕ್ಕೆ ಹಾಕಿಕೊಳ್ಳದ ವಾದ್ಯಸಂಗೀತ. ಅದನ್ನು ತುಂಬಾ ಸಹಜ, ಸಾಧಾರಣ ಸನ್ನಿವೇಶದಲ್ಲಿಯೂ ಪ್ರಸ್ತುತಪಡಿಸಲು ಸಾಧ್ಯ. ಆದರೆ ನಾನು ಬ್ಲೂಸ್ (ಅಗಾಧ ವಿಷಣ್ಣತೆ ತಲ್ಲಣ ತುಂಬಿದ ಆಫ್ರೋ-ಅಮೆರಿಕನ್ ಸಂಗೀತ) ನುಡಿಸುತ್ತಿದ್ದ ಕಡೆಗಳಲ್ಲಿ ನೂರಾರು ನಿರುದ್ಯೋಗಿಗಳು ಇರುತ್ತಿದ್ದರು. ದುಡ್ಡಿಗಾಗಿ ಜೂಜಾಡುವುದು ಬಿಟ್ಟು ಇನ್ನೇನೂ ಮಾಡುತ್ತಿರಲಿಲ್ಲ. ಬೆಬಾಪ್ ನ್ಯೂಯಾರ್ಕಿನಲ್ಲಿ ಹೆಚ್ಚು ವ್ಯಾಪಕವಾಗಿತ್ತು. ಹಾಗಾಗಿ ಅಲ್ಲಿಗೆ ಹೊರಟೆ. ನನಗಾಗ ಸುಮಾರು ೧೭ ವರ್ಷ.
ಇದು ಐವತ್ತರ ದಶಕದ ಆರಂಭ. ನಾನು ಬೀಟಲ್ಸ್ ಬ್ಯಾಂಡಿನವರಂತೆ ಉದ್ದ ಕೂದಲು ಬಿಟ್ಟುಕೊಂಡಿದ್ದೆ. ದಕ್ಷಿಣದಲ್ಲಿ ಕಪ್ಪುಜನರೇ ನನ್ನನ್ನು ಪೋಲಿಸರ ಹಾಗೆ ಹೊಡೆದು ಚಚ್ಚಿದರು. ಅವರಿಗೆ ನಾನು ಇಷ್ಟವಾಗಿರಲಿಲ್ಲ. ಅವರಿಗೆ ನಾನು ವಿಚಿತ್ರವಾಗಿ ಕಾಣಿಸುತ್ತಿದ್ದೆ. ನನ್ನ ಮುಖಕ್ಕೆ ಗುದ್ದಿದರು. ನನ್ನ ಸ್ಯಾಕ್ಸೋಫೋನ್ ಒಡೆದರು. ಅದರಿಂದ ತುಂಬಾ ನೋವಾಯಿತು. ಅಲ್ಲಿ ನಾನು ಸೇರಿಕೊಂಡ ಬ್ಯಾಂಡ್‌ನವರು ಮಿನಸ್ಟ್ರೆಲ್ ಪೈಪ್-ಮ್ಯೂಸಿಕ್ ಅನ್ನುವ ಸಂಗೀತವನ್ನು ನುಡಿಸುತ್ತಿದ್ದರು. ನಾನು ಬೆಬಾಪ್ ನುಡಿಸಲು ಪ್ರಯತ್ನಿಸಿದೆ. ಒಂದಿಷ್ಟು ಪ್ರಗತಿ ಸಾಧ್ಯವಾಯಿತು. ನನಗೆ ಬೇಡಿಕೆ ಶುರುವಾಯಿತು. ನಾನು ನ್ಯೂ ಆರ‍್ಲಿಯನ್ಸ್‌ನಲ್ಲಿದ್ದೆ. ಚಿಕ್ಕವ ನಿಂದಲೂ ನಾನು ಚರ್ಚಿನಲ್ಲಿ ನುಡಿಸುತ್ತಿದ್ದೆ. ಅಲ್ಲಿಯೂ ಸ್ಯಾಂಕ್ಟಿಫೈಡ್ ಚರ್ಚ್ ಒಂದರಲ್ಲಿ ನುಡಿಸೋದಕ್ಕೆ ಪ್ರಾರಂಭಿಸಿದೆ. ಅಂತೂ ಅಮ್ಮ ಹೇಳಿದ ದಿನದಿಂದ ಯಾವುದೇ ಪಾಪಪ್ರಜ್ಞೆ ಇಲ್ಲದೆ ನುಡಿಸಬಹುದಾದ ಸಂಗೀತಕ್ಕೆ ಹುಡುಕುತ್ತಿದ್ದೇನೆ. ಇಲ್ಲಿಯವರೆಗೂ ಸಿಕ್ಕಿಲ್ಲ.

ಡೆರಿಡಾ: ನೀವು ಅಷ್ಟು ಸಣ್ಣವರಿದ್ದಾಗಲೇ ನ್ಯೂಯಾರ್ಕಿಗೆ ಬಂದಾಗ ನಿಮಗೆ ಸಂಗೀತಾತ್ಮಕವಾಗಿ ಹಾರ್ಮೊಲಾಡಿಕ್ಸ್‌ನ್ನು ಆವಿಷ್ಕರಿಸಬಹುದು ಅಂತ ಏನಾದರೂ ಮೊದಲೇ ಅನ್ನಿಸಿತ್ತಾ ಅಥವಾ ಬಂದ ಮೇಲೆ ಆದ ಬೆಳವಣಿಗೆಯಾ?

ಕೋಲ್‌ಮನ್: ಇಲ್ಲ, ನ್ಯೂಯಾರ್ಕ್‌ಗೆ ಬಂದಾಗ ನನ್ನನ್ನು ದಕ್ಷಿಣದಿಂದ ಬಂದವನು, ಅವನಿಗೆ ಸಂಗೀತ ಏನೂ ಗೊತ್ತಿಲ್ಲ, ಓದುಬರಹ ಬಾರದವನು ಅಂತ ಪರಿಗಣಿಸಿದ್ದರು. ನಾನು ಅದನ್ನು ವಿರೋಧಿಸಲೇ ಇಲ್ಲ. ಯಾರ ಸಹಾಯವೂ ಇಲ್ಲದೆ ನನ್ನದೇ ಆದ ಗ್ರಹಿಕೆಯನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಿದೆ. ತುಂಬಾ ಕಷ್ಟನಷ್ಟಗಳನ್ನು ಅನುಭವಿಸಿದೆ. ೧೯೬೨ರ ಡಿಸೆಂಬರ್ ೨೧ರಂದು ಟೌನ್‌ಹಾಲನ್ನು ನಾನು ಬಾಡಿಗೆಗೆ ಪಡೆದು ಕಾರ್ಯಕ್ರಮ ನೀಡಿದೆ. ಕಾರ್ಯಕ್ರಮದ ಸಂಜೆ ಹಿಮಮಾರುತ, ವೃತ್ತಪತ್ರಿಕೆಯವರ ಮುಷ್ಕರ, ವೈದ್ಯರ ಮುಷ್ಕರ ಮತ್ತು ಒಂದು ಸಬ್‌ವೇ ಮುಷ್ಕರ. ಕಾರ್ಯಕ್ರಮ ಧ್ವನಿಮುದ್ರಿಸಲು ಕೇಳಿಕೊಂಡಿದ್ದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ. ಕಾರ್ಯಕ್ರಮವನ್ನು ಮತ್ಯಾರೋ ರೆಕಾರ್ಡ್ ಮಾಡಿಕೊಂಡರು. ಆ ರೆಕಾರ್ಡ್ ಇಟ್ಟುಕೊಂಡು ಸ್ವಂತ ರೆಕಾರ್ಡಿಂಗ್ ಸಂಸ್ಥೆಯನ್ನು ಪ್ರಾರಂಭಿಸಿದರು. ನಾನು ಅವರನ್ನು ಮತ್ತೆ ನೋಡಲೇ ಇಲ್ಲ.

ಡೆರಿಡಾ: ನಿಮ್ಮ ಯೋಜನೆಗೆ ತಂತ್ರಜ್ಞಾನವನ್ನು ಬಳಸಿದ್ದು ತುಂಬಾ ದೊಡ್ಡ ಬದಲಾವಣೆ ಅಂತ ನಿಮಗೆ ಅನ್ನಿಸಿತಾ? ಅಥವಾ ಸಲೀಸಾಗಿ ನಡೆದು ಹೋಯಿತಾ? ಹಾಗೆಯೇ ನಿಮ್ಮ ಹೊಸ ಯೋಜನೆ ಸಿವಿಲೈಜ಼ೇ ಷನ್ಸ್ಗೂ ಮತ್ತು ಜಾಗತೀಕರಣ ಅನ್ನುತ್ತಾರಲ್ಲ ಅದಕ್ಕೂ ಏನಾದರೂ ಸಂಬಂಧ ಇದೆಯೇ?

ಕೋಲ್‌ಮನ್: ಎರಡರಲ್ಲೂ ಒಂದಿಷ್ಟು ಸತ್ಯವಿದೆ ಅನ್ನಿಸುತ್ತೆ. ಏಕೆಂದರೆ ಆದಿಮ ಬಿಳಿಯ ಜನ ಅನ್ನುವರು ಇದ್ದರೆ ಎಂಬ ಪ್ರಶ್ನೆ ಸಾಧ್ಯವಾಗಿದ್ದೆ ಇದರಿಂದ. ತಂತ್ರಜ್ಞಾನ ಅನ್ನುವುದು ಬಿಳಿಯರು ಎನ್ನುವುದನ್ನು ಪ್ರತಿನಿಧಿಸುತ್ತದೆ, ಸಂಪೂರ್ಣ ಸಮಾನತೆಯನ್ನಲ್ಲ.

ಡೆರಿಡಾ: ನೀವು ಜಾಗತೀಕರಣ ಅನ್ನುವ ಪರಿಕಲ್ಪನೆಯನ್ನು ಅನುಮಾನಿಸುತ್ತೀರಿ, ನನಗೂ ನಿಮ್ಮ ಅಭಿಪ್ರಾಯ ಸರಿ ಅನ್ನಿಸುತ್ತದೆ.

ಕೋಲ್‌ಮನ್: ನೀವು ಸಂಗೀತದ ವಿಷಯಕ್ಕೆ ಬಂದಾಗ, ಪಾಶ್ಚಾತ್ಯ, ಐರೋಪ್ಯ ಸಂಸ್ಕೃತಿಯಲ್ಲಿ ಅನ್ವೇಷಕರು ಎನ್ನಬಹುದಾದವರು ಒಂದು ಅರ್ಧ ಡಜ಼ನ್ ಇರಬಹುದು. ಇನ್ನು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಅನ್ವೇಷಕರೆಂದರೆ ಭಾರತದವರು. ಅದರಲ್ಲೂ ಹೆಚ್ಚಾಗಿ ಕಲ್ಕತ್ತ್ತಾ ಮತ್ತು ಬಾಂಬೆಯವರು. ಭಾರತೀಯ ಹಾಗೂ ಚೀನೀ ವಿಜ್ಞಾನಿಗಳು ಹಲವರು ಇದ್ದಾರೆ. ಅವರ ಅನ್ವೇಷಣೆಗಳು ಹಾಗೂ ಯರೋಪ್ಯ ಅಥವಾ ಅಮೇರಿಕೆಯ ಅನ್ವೇಷಕರ ಚಿಂತನೆಗಳು ತಿರುಗುಮುರುಗಾಗಿರರುವಂತೆ ತೋರುತ್ತದೆ. ಆದರೆ ಅನ್ವೇಷಕ ಅನ್ನುವ ಪದದಲ್ಲಿ ಜನಾಂಗೀಯ ಪ್ರಾಬಲ್ಯದ ಅರ್ಥ ಧ್ವನಿಸುತ್ತದೆ. ಅನ್ಚೇಷಣೆಗಿಂತ ಅನ್ವೇಷಕ ಮುಖ್ಯವಾಗಿದ್ದಾನೆ. ಇದು ನೋವಿನ ವಿಷಯ. ಯಾಕೆಂದರೆ ಇದೂ ಒಂದು ರೀತಿಯ ಪ್ರಚಾರವೆ.

ಕೋಲ್‌ಮನ್: ಮಹಿಳೆ ಮತ್ತು ಪುರುಷರ ನಡುವಿನ ವ್ಯತ್ಯಾಸಗಳಿಗೂ, ಅಥವಾ ಜನಾಂಗಗಳ ನಡುವಿನ ವ್ಯತ್ಯಾಸಗಳಿಗೂ ಶಿಕ್ಷಣಕ್ಕೂ ಮತ್ತು ಬದುಕುವುದಕ್ಕೆ ಬೇಕಾದ ಬುದ್ಧಿವಂತಿಕೆಗೂ ಸಂಬಂಧವಿದೆ. ನಾನೊಬ್ಬ ಕರಿಯ. ನನ್ನ ಪೂರ್ವಜರು ಗುಲಾಮರು. ಈ ಹಿನ್ನೆಲೆಯಲ್ಲಿ ನನ್ನ ಭಾಷೆಯ ಮೂಲವೇ ನನಗೆ ಸರಿಯಾಗಿ ಗೊತ್ತಿಲ್ಲ.

ಡೆರಿಡಾ: ನನ್ನದೂ ಅದೇ ಕಥೆ. ನಾನು ಹುಟ್ಟಿದ್ದು ಅಲ್ಜೀರಿಯದ ಯಹೂದಿ ಕುಟುಂಬದಲ್ಲಿ. ಅವರೆಲ್ಲಾ ಫ್ರೆಂಚ್ ಮಾತನಾಡುತ್ತಿದ್ದರು. ಆದರೆ ಅವರ ಮೂಲ ಭಾಷೆ ಅದಲ್ಲ. ನಾನು ಇದನ್ನು ಕುರಿತು ಒಂದು ಸಣ್ಣ ಪುಸ್ತಕ ಬರೆದಿದ್ದೇನೆ. ನಾನು ಯಾವಾಗಲೂ ಅದರ‍್ಸ್ ಮಾನೋಲಿಂಗ್ವಲಿಸಂ (ನನಗಿರುವುದು ಒಂದೇ ಭಾಷೆ, ಅದೂ ನನ್ನದಲ್ಲ) ಮಾತನಾಡುತ್ತಿದ್ದೆ. ನನಗೆ ನನ್ನ ಮೂಲ ಭಾಷೆಯ ಜೊತೆಯಾಗಲಿ ಅಥವಾ ನನ್ನ ಪೂರ್ವಜರು ಎನ್ನುವವರ ಭಾಷೆಯ ಜೊತೆಯಾಗಲಿ ಯಾವುದೇ ಸಂಪರ್ಕವೂ ಇಲ್ಲ.

ಕೋಲ್‌ಮನ್: ನೀವು ಇಂದು ಮಾತನಾಡುವ ಭಾಷೆ ನಿಮ್ಮ ಚಿಂತನೆಗೆ ಅಡ್ಡಿಯಾಗುತ್ತಿದೆಯೇ ಎಂದು ಯಾವಾಗಲಾದರೂ ಕೇಳಿಕೊಂಡಿದ್ದೀರಾ? ನಿಮ್ಮ ಮೂಲ ಭಾಷೆ ನಿಮ್ಮ ಚಿಂತನೆಯನ್ನು ಪ್ರಭಾವಿಸಬಲ್ಲುದೇ?

ಡೆರಿಡಾ: ಅದು ನನಗೊಂದು ಒಗಟು. ನನಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನ ಮೂಲಕ ಏನೋ ಮಾತಾಡುತ್ತಿದೆ ಅಂತ ನನಗೆ ಗೊತ್ತು. ಆದರೆ ಆದು ನನಗೆ ತಿಳಿಯದ ಭಾಷೆ. ಆದರೆ ಕೆಲವೊಮ್ಮೆ ಅದನ್ನು ಸಲೀಸಾಗಿ ನನ್ನ ಭಾಷೆಗೆ ಅನುವಾದಿಸಿಕೊಳ್ಳುತ್ತೇನೆ. ಫ್ರೆಂಚ್ ಭಾಷೆಗೆ ಏನನ್ನಾದರೂ ಮಾಡು ಎಂದು ನನ್ನೊಳಗಿನ ಅದೇನೋ ನನ್ನನ್ನು ಒತ್ತಾಯಿಸುತ್ತಿದೆ ಎಂದು ನನಗನ್ನಿಸುತ್ತಿದೆ.

ಕೋಲ್‌ಮನ್: ಅಮೇರಿಕೆಯಲ್ಲಿ ಕರಿಯರು ಮಾತನಾಡುವ ಇಂಗ್ಲೀಷನ್ನು ಎಬೋನಿಸ್ ಅಂತ ಕರೆಯುತ್ತಾರೆ. ಕರಿಯರು ಸದಾ ತುಸು ವ್ಯಂಗ್ಯದ ಲೇಪನ ಇರುವ ಭಾಷೆಯಲ್ಲಿ ಸುತ್ತಿಬಳಸಿ ಮಾತನಾಡುತ್ತಾರೆ.

ಕ್ಯಾಲಿಫೋರ್ನಿಯಾದಲ್ಲಿ ನೀನು ಅಲ್ಲಿ ಕೂರಬಾರದು ಅಂತ ಯಾವ ಬಿಳಿಯನೂ ಹೇಳಲಿಲ್ಲ. ನಾನು ಅಲ್ಲೇ ಮೊದಲು ಅದನ್ನು ನೋಡಿದ್ದು. ಕ್ಯಾಲಿಫೋರ್ನಿಯದಲ್ಲಿ ಯಾರೋ ಒಬ್ಬರು ನನ್ನನ್ನು ತುಂಬಾ ಪ್ರಶ್ನೆಗಳನ್ನು ಕೇಳಿದರು. ನನಗೆ ಏನೂ ಅರ್ಥವಾಗಲಿಲ್ಲ. ಮನಃಶಾಸ್ತ್ರಜ್ಞರನ್ನು ಭೇಟಿಮಾಡಿದೆ. ಅವರು ನನಗೆ ವೆಲಿಯಂ ಎಂಬ ಶಾಮಕ ಮದ್ದನ್ನು ತೆಗೆದುಕೊಳ್ಳುವಂತೆ ಸೂಚಿಸಿದರು. ನಾನದನ್ನು ತೆಗೆದುಕೊಳ್ಳಲಿಲ್ಲ.
ನಾನು ಎಲ್ಲಿದ್ದೇನೆ ಅನ್ನೋದು ನನಗೆ ಎಷ್ಟೋ ಸಲ ಗೊತ್ತಾಗುತ್ತಿರಲಿಲ್ಲ. ಲೈಬ್ರರಿಗೆ ಹೋಗಿ, ಮನುಷ್ಯನ ಮೆದುಳನ್ನು ಕುರಿತ ಪುಸ್ತಕಗಳನ್ನೆಲ್ಲಾ ಓದಿದೆ. ಅವುಗಳ ಪ್ರಕಾರ ಮೆದುಳು ಎನ್ನುವುದು ಕೇವಲ ಒಂದು ಸಂಭಾಷಣೆ. ಹಾಗಾಗಿ ಆಲೋಚಿಸುವುದು ಮತ್ತು ಅರಿಯುವುದು ಮೆದುಳಿನಿಂದಲೇ ಆಗುವುದಿಲ್ಲ. ತಿಳಿಯುವಿಕೆ ಮತ್ತು ಇರುವಿಕೆ ಎನ್ನುವ ಅರ್ಥದಲ್ಲಿ ನಾವು ಯಾವುದನ್ನು ಮಿದುಳು ಎಂದು ಕರೆಯುತ್ತೀವೆಯೋ ಅದು ಮತ್ತು ಈಗ ನಾವು ಏನಾಗಿದ್ದೇವೆಯೋ ಅದನ್ನು ರೂಪಿಸಿರುವ ಮಿದುಳು ಎರಡೂ ಬೇರೆ ಎಂದು ನನಗೆ ಹೆಚ್ಚೆಚ್ಚು ಸ್ಪಷ್ಟವಾಗುತ್ತಿದೆ.

ಡೆರಿಡಾ: ನಮಗೆ ಒಂದು ನಂಬಿಕೆ ಇದೆ: ನಾವೇನನ್ನು ನಂಬಿದ್ದೇವೊ ಅದರಿಂದ ನಮ್ಮನ್ನು ಅರ್ಥಮಾಡಿಕೊಳ್ಳುತ್ತೇವೆ ಅಂತ. ಕಪ್ಪು ಜನರಂತೂ ಹಾಗೇ ನಂಬಿಕೊಂಡಿದ್ದಾರೆ. ನಮಗೆ ಇಲ್ಲಿಯವರಿಗೆ ಹೇಳಿಕೊಂಡು ಬಂದಿರುವ ಕಥನಗಳನ್ನು ಕೇಳಿಕೊಂಡು ನಾವೇನು ಅನ್ನುವುದು ನಮಗೆ ಗೊತ್ತು ಅಂತ ಅಂದುಕೊಂಡಿದ್ದೇವೆ ಅಥವಾ ನಂಬಿಕೊಂಡಿದ್ದೇವೆ. ಇದು ಸಾರ್ವತ್ರಿಕ ಸತ್ಯ.
ನಾವಿಬ್ಬರೂ ಒಂದೇ ವಯಸ್ಸಿನವರು. ಒಂದೇ ವರ್ಷ ಹುಟ್ಟಿದವರು. ನನಗೆ ೧೯ ತುಂಬುವವರೆಗೆ ನಾನು ಫ್ರಾನ್ಸಿಗೆ ಹೋಗಿಯೇ ಇರಲಿಲ್ಲ. ಅಲ್ಜೀರಿಯಾದಲ್ಲಿದ್ದೆ. ೧೯೪೦ರಲ್ಲಿ ಎರಡನೇ ಮಹಾಯುದ್ಧದ ಹೊತ್ತಿನಲ್ಲಿ ನಾನಿನ್ನೂ ಸಣ್ಣವ. ನಾನೊಬ್ಬ ಯಹೂದಿ ಎಂಬ ಜನಾಂಗೀಯ ಕಾರಣಕ್ಕಾಗಿ ನನ್ನನ್ನು ಶಾಲೆಯಿಂದ ಹೊರಗೆ ಹಾಕಿದ್ದರು. ನನಗೆ ಏನೂ ಅರ್ಥವಾಗಿರಲಿಲ್ಲ. ತುಂಬಾ ನಂತರದಲ್ಲಿ ಯಾರೋ ಹೇಳಿದ ಕಥನಗಳ ಮೂಲಕ ಇವೆಲ್ಲಾ ನನಗೆ ಅರ್ಥವಾಯಿತು. ಈಗ ನಿಮ್ಮ ತಾಯಿ ಯಾರು, ಹೇಗಿದ್ದರು ಅನ್ನೋದು ನಮಗೆ ತಿಳಿಯೋದು ಕೂಡ ಕಥನಗಳಿಂದಲೇ.
ನೀವು ಕರಿಯರಿಗೆ ನಾಗರೀಕ ಹಕ್ಕುಗಳನ್ನು ಕೊಡುವುದಕ್ಕೆ ಮೊದಲು ನ್ಯೂಯಾರ್ಕ್ ಮತ್ತು ಲಾಸ್ ಅಂಜಲಿಸ್‌ನಲ್ಲಿ ವಾಸವಗಿದ್ದೀರಿ ಅಂದುಕೊಳ್ಳುತ್ತೇನೆ. ನಾನು ೧೯೫೬ರಲ್ಲಿ ಮೊದಲ ಬಾರಿ ಅಮೆರಿಕೆಗೆ ಹೋದಾಗ ಎಲ್ಲಾ ಕಡೆ ಬಿಳಿಯರಿಗೆ ಕಾದಿರಿಸಲಾಗಿದೆ ಅನ್ನುವ ಫಲಕಗಳು ಇದ್ದವು. ಅದು ಎಷ್ಟು ಕ್ರೂರವಾಗಿತ್ತು ಅಂತ ನನಗೆ ನೆನಪಿದೆ. ಅದನ್ನೆಲ್ಲಾ ನೀವು ಅನುಭವಿಸಿದ್ದೀರಲ್ಲವೇ?

ಕೋಲ್‌ಮನ್: ಹೌದು. ಪ್ಯಾರಿಸ್‌ನಲ್ಲಿ ನನಗೆ ಒಂದು ಅಂಶ ತುಂಬಾ ಇಷ್ಟಾ ಆಗುತ್ತೆ. ಅಲ್ಲಿ ನೀವು ಸಾಮಾಜಿಕವಾಗಿ ಪ್ರಮುಖ ವ್ಯಕ್ತಿಯಾಗಿದ್ದರೆ, ನೀವು ಜನಾಂಗೀಯವಾದಿಯಾಗಿರುವುದಕ್ಕೆ ಸಾಧ್ಯವಿಲ್ಲ. ಪ್ಯಾರಿಸಿನಲ್ಲಿ ಮಾತ್ರ ನಿಮಗೆ ಜನಾಂಗೀಯವಾದ ಪ್ರತ್ಯಕ್ಷವಾಗಿ ಕಾಣುವುದಿಲ್ಲ. ಆ ಬಗ್ಗೆ ಮಾತಾಡುವುದನ್ನು ನೀವು ಕೇಳಬಹುದು ಅಷ್ಟೆ.

ಡೆರಿಡಾ: ಅಂದರೆ ಅಲ್ಲಿ ಜನಾಂಗೀಯತೆ ಇಲ್ಲ ಅಂತಲ್ಲ. ಆದರೆ ಅದನ್ನು ಸಾಧ್ಯವಾದಷ್ಟು ಮಟ್ಟಿಗೆ ತೋರಿಸಿಕೊಳ್ಳದೇ ಇರಬೇಕು. ಅದು ಅಲ್ಲಿ ಅನಿವಾರ್ಯ. ಪ್ಯಾರಿಸ್‌ನಲ್ಲಿ ನಿಮ್ಮ ಸಂಗೀತದ ಪ್ರಸ್ತುತಿಯನ್ನು ಯಾವ ರೀತಿಯಲ್ಲಿ ಆಯೋಜಿಸಿಕೊಂಡಿದ್ದೀರಿ?

ಕೋಲ್‌ಮನ್: ನನ್ನ ಮಟ್ಟಿಗೆ ಅನ್ವೇಷಕ ಅಂದರೆ ತುಂಬಾ ಬುದ್ಧಿವಂತ, ಶ್ರೀಮಂತ ಅಂತ ಅಲ್ಲ. ಅನ್ವೇಷಕ ಅನ್ನೋದು ಒಂದು ಪದವಲ್ಲ. ಅದೊಂದು ಕ್ರಿಯೆ. ಅದನ್ನು ಮಾಡಿಲ್ಲದೇ ಇರುವುದರಿಂದ ಅದರ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ.

ಡೆರಿಡಾ: ನೀವು, ಪದಗಳನ್ನು ಇಟ್ಟುಕೊಂಡು ಏನು ಮಾಡುತ್ತೀರಿ? ನೀವು ಸೃಷ್ಟಿಸುವ ಸಂಗೀತಕ್ಕೂ ಮತ್ತು ನೀವೇ ಸೃಷ್ಟಿಸುವ ಪದಗಳಿಗೂ ಅಥವಾ ನಿಮ್ಮ ಸೃಷ್ಟಿಯ ಮೇಲೆ ಜನ ಹೇರುವ ಮಾತುಗಳಿಗೂ ಇರುವ ಸಂಬಂಧ ಹೇಗಿರುತ್ತದೆ? ಇನ್ನು ಶೀರ್ಷಿಕೆಯನ್ನು ಆಯ್ಕೆ ಮಾಡಿಕೊಳ್ಳುವ ಸಮಸ್ಯೆ ಎದುರಾದಾಗ ಏನನ್ನು ಕಲ್ಪಿಸಿಕೊಂಡು ಹೆಸರಿಡುತ್ತೀರಿ?

ಕೋಲ್‌ಮನ್: ನನಗೊಬ್ಬಳು ಸೋದರಸೊಸೆ ಇದ್ದಳು. ಇತ್ತೀಚೆಗೆ ಫೆಬ್ರುವರಿಯಲ್ಲಿ ತೀರಿಕೊಂಡಳು. ಅವಳ ಶವಸಂಸ್ಕಾರಕ್ಕೆ ಹೋಗಿದ್ದೆ. ಶವಪೆಟ್ಟಿಗೆಯಲ್ಲಿ ಅವಳ ಹೆಣಕ್ಕೆ ಯಾರೋ ಕನ್ನಡಕ ಹಾಕಿದ್ದರು. ನನ್ನ ಒಂದು ರಚನೆಗೆ ’ಅವಳು ಸತ್ತು ಮಲಗಿದ್ದಳು, ತನ್ನ ಶವಪೆಟ್ಟಿಗೆಯಲ್ಲಿ ಕನ್ನಡಕ ಧರಿಸಿ’ ಎಂಬ ಶೀರ್ಷಿಕೆ ಕೊಡಬೇಕು ಅಂದುಕೊಂಡಿದ್ದೆ. ಆದರೆ ನಂತರ ಬ್ಲೈಂಡ್ ಡೇಟ್ ಅಂತ ಹೆಸರಿಟ್ಟೆ.

ಡೆರಿಡಾ ಆ ಘಟನೆ ನಿಮ್ಮ ಮೇಲೆ ಪರಿಣಾಮ ಬೀರಿತು.

ಕೋಲ್‌ಮನ್: ಸತ್ತ ಹೆಂಗಸಿಗೆ ಯಾರೋ ಏಕೆ ಕನ್ನಡಕ ಹಾಕಿದ್ದಾರೆ ಅಂತ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಅದರರ್ಥವೇನೆಂದು ನನಗೆ ತಿಳಿಯಲಿಲ್ಲ. ಬದುಕನ್ನು ಕುರಿತು ಮಹಿಳೆ ಹೇಗೆ ಯೋಚಿಸುತ್ತಾಳೆ ಅಂಥ ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ಅದರಲ್ಲೂ ಪುರುಷರ ದೃಷ್ಟಿಗೂ ಅದಕ್ಕೂ ಸಂಬಂಧವೇ ಇಲ್ಲದೇ ಹೋದಾಗ ಅರ್ಥಮಾಡಿಕೊಳ್ಳುವುದು ಇನ್ನೂ ಕಷ್ಟ.

ಡೆರಿಡಾ: ಮಹಿಳೆಯರ ಜೊತೆಗಿನ ನಿಮ್ಮ ಸಂಬಂಧ ಕುರಿತಂತೆ ತುಂಬಾ ಮಹತ್ವವಾದದ್ದು ಏನೋ ನಿಮ್ಮ ರಚನೆಗಳಲ್ಲಿ ಇದೆ ಅಂತ ನಿಮಗೆ ಅನ್ನಿಸುತ್ತದಾ?

ಕೋಲ್‌ಮನ್: ಒಬ್ಬ ಸಂಗೀತಗಾರನಾಗಿ ಹೆಸರು ಮಾಡುವ ಮೊದಲು, ನಾನೊಂದು ದೊಡ್ಡ ಡಿಪಾರ್ಟಮೆಂಟಲ್ ಸ್ಟೋರ್‌ನಲ್ಲಿ ಕೆಲಸಮಾಡುತ್ತಿದ್ದೆ. ಒಂದು ದಿನ ಊಟದ ವಿರಾಮದಲ್ಲಿ ಗ್ಯಾಲಯೊಂದರಲ್ಲಿ ಒಬ್ಬ ಶ್ರೀಮಂತ, ಬಿಳಿ ಮಹಿಳೆಯ ವರ್ಣಚಿತ್ರವನ್ನು ಯಾರೋ ರಚಿಸಿದ್ದರು. ಬದುಕಿನಲ್ಲಿ ಬಯಸಬಹುದಾದ್ದೆಲ್ಲಾ ಆ ಚಿತ್ರದ ಮಹಿಳೆಯ ಬಳಿ ಇತ್ತು. ಆದರೆ ಅವಳಲ್ಲಿ ಅತ್ಯಂತ ತೀವ್ರವಾದ ಏಕಾಂಗಿತನದ ಭಾವನೆಯೂ ಕಾಣುತ್ತಿತ್ತು. ಅಂತಹ ಏಕಾಂಗಿತನವನ್ನು ನಾನೆಂದೂ ನೋಡಿರಲಿಲ್ಲ. ಮನೆಗೆ ಬಂದು ಲೋನ್ಲಿ ವುಮನ್ ಎಂಬ ಕೃತಿಯನ್ನು ರಚಿಸಿದೆ.

ಡೆರಿಡಾ: ಹಾಗಾಗಿ ಒಂದು ರಚನೆಯ ಶೀರ್ಷಿಕೆ ಅನ್ನೋದು ಪದಗಳ ಆಯ್ಕೆಯಲ್ಲ ಬದಲಾಗಿ ಅಲ್ಲಿ ಅನುಭದ ಉಲ್ಲೇಖವಿರುತ್ತದೆ. ನಾನು ಭಾಷೆ, ಮಾತು ಇವುಗಳನ್ನು ಕುರಿತು ಈ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ. ಯಾಕೆಂದರೆ ನಾನು ನಿಮ್ಮೊಂದಿಗೆ ಮಾತಕತೆಯಾಡಲು ಸಿದ್ಧ ವಾಗುತ್ತಿದ್ದೇನೆ. ನಾನು ನಿಮ್ಮ ಸಂಗೀತವನ್ನು ಕೇಳಿದೆ. ಪರಿಣತರು ಅದರ ಬಗ್ಗೆ ಬರೆದಿರುವುದನ್ನು ಓದಿದೆ. ನೆನ್ನೆ ರಾತ್ರಿ ನನ್ನ ಗೆಳೆಯ ರುಡಾಲ್ಫ್ ಬರ್ಗರ್ ಮಂಡಿಸಿದ ಪ್ರಬಂಧವೊಂದನ್ನು ಓದಿದೆ. ಅವನೊಬ್ಬ ಸಂಗೀತಗಾರ. ಅವನ ತಂಡದ ಹೆಸರು ಕಾಟ್ ಒನೊಮ. ಅವನ ಪ್ರಬಂಧ ನಿಮ್ಮ ಹೇಳಿಕೆಗಳನ್ನು ಆಧರಿಸಿದೆ. ನೀವು ಸಂಗೀತವನ್ನು ಹೇಗೆ ರೂಪಿಸುತ್ತೀರಿ ಅನ್ನುವ ವಿಶ್ಲೇಷಣೆಯನ್ನು ನಿಮ್ಮ ಹೇಳಿಕೆಯಿಂದಲೇ ಪ್ರಾರಂಭಿಸುತ್ತಾನೆ. ಸಂಗೀತವಾಗುವ ಮೊದಲು ಸಂಗೀತ ಅನ್ನುವುದು ಕೇವಲ ಮಾತು ಎಂದು ನನಗೆ ಮನವರಿಕೆಯಾಗಿದೆ. ಅದಕ್ಕೆ ಕಾರಣ ನನಗೆ ಗೊತ್ತಿಲ್ಲ. ಇದನ್ನು ಹೇಳಿದ್ದು ನಿಮಗೆ ನೆನಪಿನದೆಯೇ?

ಕೋಲ್‌ಮನ್: ಇಲ್ಲ

ಡೆರಿಡಾ: ನಿಮ್ಮ ಶಾಬ್ಧಿಕ ಹೇಳಿಕೆಗಳನ್ನು ಹೇಗೆ ಅರ್ಥಮಾಡಿಕೊಳ್ಳುತ್ತೀರಿ? ಅವು ನಿಮಗೆ ತುಂಬಾ ಮುಖ್ಯವೇ?

ಕೋಲ್‌ಮನ್: ನನಗೆ ನಿಮ್ಮೊಂದಿಗೆ ಸಾಂಗೀತಿಕ ಸಂಬಂಧ ಇಟ್ಟುಕೊಳ್ಳುವುದಕ್ಕಿಂತ ಮಾನವೀಯ ಸಂಬಂಧ ಇಟ್ಟುಕೊಳ್ಳುವುದರಲ್ಲಿ ಹೆಚ್ಚಿನ ಆಸಕ್ತಿ ಇದೆ. ಮನುಷ್ಯ ಸಂಬಂಧಕ್ಕೆ ಸಂಬಂಧಿಸಿದ ನಾದಗಳಲ್ಲಿ, ಶಬ್ದಗಳಲ್ಲಿ ನನ್ನನ್ನು ಅಭಿವ್ಯಕ್ತಿಸಿಕೊಳ್ಳಲು ಸಾಧ್ಯವೇ ಎಂದು ನೋಡಬಯಸುತ್ತೇನೆ. ಜೊತೆಗೆ ಎರಡು ಪ್ರತಿಭೆಗಳು ಮತ್ತು ಎರಡು ಕ್ರಿಯೆಗಳ ನಡುವಿನ ಸಂಬಂಧದ ಬಗ್ಗೆಯೂ ಮಾತನಾಡಲು ಸಾಧ್ಯವಾಗ ಬೇಕೆಂದು ಬಯಸುತ್ತೇನೆ. ಮಾನವ ಸಂಬಂಧ ಹೆಚ್ಚು ಸುಂದರವಾದದ್ದು. ನೀವು, ನಿಮಗಾಗಿ ಮತ್ತು ಇತರಿಗಾಗಿ ಬಯಸುವ ಸ್ವಾತಂತ್ರ್ಯಕ್ಕೆ ಅಲ್ಲಿ ನಿಮಗೆ ಅವಕಾಶವಿದೆ