ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಸುಕು-ಮಾತು”ಕಥೆ”-ಮಾಲಿಕೆ ೧

ಇದೊಂದು ನಸುಕು.ಕಾಮ್ ನ ಒಂದು ಚಿಕ್ಕ ಪ್ರಯೋಗ. ಯಾವುದೋ ಒಂದು ಸನ್ನಿವೇಶದ ಹಿನ್ನೆಲೆ, ಯಾವುದೋ ಎರಡು ಯಾವುದೇ ಪಾತ್ರಗಳು (ಸಜೀವ ಅಥವಾ ನಿರ್ಜೀವ), ಅವುಗಳ ನಡುವೆ ಮಾತುಕತೆಯಾಡಿಸಿ, ಒಂದು ಕಥೆ ಕಟ್ಟಿಕೊಡುವುದು. ಏನು ಹೇಳಬೇಕಾದರೂ ಪಾತ್ರಗಳಲ್ಲಿ ಹೇಳಿಸುವುದು. ಅತೀ ಚಿಕ್ಕ ಅಂದರೆ ೨ ಸಾಲುಗಳಿಂದ ಸುಮಾರು ೨೦-೨೫ ಸಾಲುಗಳ ವರೆಗೆ. ನೀವು ಹಾಗೆ ಬರೆದರೆ ಅದನ್ನು ನಮ್ಮ nasukuportal@gmail.com ಗೆ ಕಳಿಸಿ.

ಮಾತು ‘ಕಥೆ’-೧

★ ದೊಡ್ಡಪ್ಪನ ಜೀವನಪ್ರೀತಿಯ ಚಿಗುರುಗಳು ★

ನಾನು ಪರೀಕ್ಷೆಯ ಸಮಯದಲ್ಲಿ ತೋಟದಂಚಿಗೆ ಗದ್ದೆಯ ಪಕ್ಕದಲ್ಲಿ ಹರಿಯುತ್ತಿದ್ದ ಹೊಳೆದಂಡೆಯ ಅತ್ತಿಮರಕ್ಕೆ ಆತು ಕುಳಿತುಕೊಂಡು, ಕಾಲುಗಳನ್ನು ಹರಿವ ನೀರಿಗೆ ಇಳಿಬಿಟ್ಟು ಓದಿಕೊಳ್ಳುತ್ತಿದ್ದೆ. ಹಾಗೆ ಒಂದು ದಿನ ಸಂಜೆ ಸುಮಾರು ನಾಲ್ಕೂವರೆಯ ಸಮಯಕ್ಕೆ ಓದಲೆಂದು ಹೋದಾಗ ದೊಡ್ಡಪ್ಪ ನಾನು ಕುಳಿತುಕೊಳ್ಳುತ್ತಿದ್ದ ಜಾಗದಲ್ಲಿ ಕುಳಿತು ಟವೆಲ್ಲಿನಿಂದ ಬೆವರೊರೆಸಿಕೊಳ್ಳುತ್ತಿದ್ದ.
ನಾನು: “ಏನ್ ದೊಡ್ಡಪ್ಪ, ಚಾ ಕುಡಿದಾಯ್ತಾ? ಇಲ್ಲೇನು ಮಾಡ್ತಾ ಇದ್ದೀಯಾ?
ದೊಡ್ಡಪ್ಪ: ಒಂದೆರಡು ಹಲಸಿನ ಗಿಡ, ಮಾವಿನ ಗಿಡ ಎಲ್ಲ ಕೊಟ್ಟೆಯಲ್ಲೇ ದೊಡ್ಡ ಆಗ್ತಾ ಇತ್ತು. ಗದ್ದೆ ಅಂಚಿಗೆ ನೆಟ್ಟುಹೋಗೋಣ ಅಂತ ಬಂದೆ”
ನಾನು: “ಅಯ್ಯೋ, ಈ ವಯಸ್ಸಿನಲ್ಲಿ ನೀ ಯಾಕೆ ಸುಮ್ಮನೆ ಕಷ್ಟಪಡ್ತೀಯಾ? ಅಣ್ಣನ ಹತ್ತಿರ ಹೇಳಿದ್ದರೆ ಆಗಿತ್ತು. ಅಷ್ಟು ದೊಡ್ಡ ಗುಂಡಿ ತೆಗೆಯಲಿಕ್ಕೆ ನಿನಗೆ ಕಷ್ಟವಾಗೋದಿಲ್ಲವಾ?”
ದೊಡ್ಡಪ್ಪ: “ವಯಸ್ಸಾಯಿತು ಅಂತ ಹಸಿವಾದಾಗ ಊಟ ಬಿಡ್ತೀವಾ ಮಗಳೇ? ಭೂಮಿತಾಯಿಯ ಋಣ ಉಳಿಸಿಕೊಂಡು ಸತ್ತರೆ ಸ್ವರ್ಗ ಸಿಗುವುದುಂಟಾ!”
ನಾನು: “ದೊಡ್ಡಪ್ಪ, ಈ ಸ್ವರ್ಗ-ನರಕ ಎಲ್ಲ ನಿಜಕ್ಕೂ ಇದೆಯಾ? ನೀನು ಮಾಡುವ ಪೂಜೆ, ತಿಥಿ, ದಾನ-ಧರ್ಮ ಸಾಕಾಗೋದಿಲ್ಲವಾ ಪುಣ್ಯ ಸಿಗಲಿಕ್ಕೆ?”
ದೊಡ್ಡಪ್ಪ: “ಪಾಪ-ಪುಣ್ಯಗಳ ಲೆಕ್ಕ ಇಡುವವರ್ಯಾರು ಹೇಳು! ಕೆಲವರು ದುಡ್ಡು, ಆಸ್ತಿ ಸಂಪಾದನೆ ಮಾಡಲಿಕ್ಕೆ ಕೆಲಸ ಮಾಡ್ತಾರೆ. ಇನ್ನು ಕೆಲವರು ಒಳ್ಳೆಯ ಹೆಸರು ಸಂಪಾದಿಸಿ ಸಾಯಬೇಕು ಅಂದುಕೊಳ್ತಾರೆ. ನಾನು ನನ್ನ ಮನಸ್ಸಿನ ಸಮಾಧಾನಕ್ಕಾಗಿ ನನ್ನ ಕೈಯಲ್ಲಿ ಎಷ್ಟಾಗುತ್ತೋ ಅಷ್ಟು ದುಡಿಯೋದು. ನನ್ನಿಂದಾಗಿ ಮುಂದಿನ ತಲೆಮಾರಿಗೆ ಬದುಕಲಿಕ್ಕೆ ಒಂದು ಒಳ್ಳೆಯ ವಾತಾವರಣ ಸೃಷ್ಟಿಯಾದರೆ ನಾನು ಬದುಕಿದ್ದು ಸಾರ್ಥಕ! ನಾ ನೆಡುವ ಗಿಡ ನಾಳೆ ಮನುಷ್ಯರಿಗೆ ಉಪಯೋಗವಾಗದಿದ್ದರೂ, ಮಂಗಗಳಾದರೂ ಹಣ್ಣು ತಿಂದು ಹೊಟ್ಟೆ ತುಂಬಿಸಿಕೊಳ್ಳಬಹುದು. ಎಲ್ಲ ಪ್ರಶ್ನೆಗಳಿಗೂ ಸರಿಯಾದ ಉತ್ತರ ಸಿಗೋದಿಲ್ಲ ನೋಡು!”
ನಾನು: “ದೊಡ್ಡಪ್ಪ, ನೀ ಶಾಲೆಗೆ ಹೋಗೋವಾಗ ಪರೀಕ್ಷೆ ಎಲ್ಲ ಇತ್ತಾ?”
ದೊಡ್ಡಪ್ಪ: “ಅಯ್ಯೋ, ನಾನು ಹುಟ್ಟಿದಾಗ ಮನೆ ಹತ್ತಿರ ಶಾಲೆ ಎಲ್ಲಿತ್ತು? ಸೊಸೈಟಿಯಲ್ಲಿ ಸಹಿ ಮಾಡೋದೊಂದು ಹೇಗೋ ಕಲಿತುಕೊಂಡೆ. ಬದುಕು ಪ್ರಶ್ನೆ ಕೇಳ್ತಾ ಇತ್ತು, ನಾನು ಉತ್ತರ ಹುಡುಕ್ತಿದ್ದೆ. ಅಣ್ಣ-ತಮ್ಮ, ಅಕ್ಕ-ತಂಗಿ, ಮಕ್ಕಳು ಎಲ್ಲ ಸೇರಿ ಸಮಾಜ; ಯಾವ ಗಿಡಕ್ಕೆ ಎಷ್ಟು ಆಳ-ಅಗಲಗಳ ಗುಂಡಿ ತೆಗೆಯಬೇಕು ಎನ್ನುವ ಲೆಕ್ಕಾಚಾರವೇ ಗಣಿತ; ಗೊಬ್ಬರ ಹಾಕುವುದೇ ವಿಜ್ಞಾನ! ಗಿಡ ಬೆಳೆಯುವುದನ್ನು ನೋಡುತ್ತ ಸಂಗೀತ ತಾನಾಗಿಯೇ ಒಲಿಯಿತು”.
ದೊಡ್ಡಪ್ಪ ಒಂದು ಕೈಯಲ್ಲಿ ಗುದ್ದಲಿ, ಇನ್ನೊಂದು ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು “ಗುಡಬಿರಪ್ಪಿ ರಾಮಿ ರಾಮಿ, ಗುಡಬಿರಂಬಿ ರಾಮಿ ರಾಮಿ, ನಮ್ಮನೆ ಮಗಳು ರಾಮಿ ರಾಮಿ” ಎಂದು ಹಾಡುತ್ತ ಅಲ್ಲಿಂದ ಎದ್ದು ಹೋದ. ಅವನು ಹೆಜ್ಜೆಯಿಟ್ಟ ಕಲ್ಲಿನಮೇಲೆ ಒದ್ದೆಯಾಗಿದ್ದ ಅವನ ಪಾದದ ಗುರುತುಗಳು ಮೂಡಿದವು.
ಈಗಲೂ ಆ ಕಲ್ಲುಗಳೆಲ್ಲ ಅಲ್ಲಿಯೇ ಇವೆ. ದೊಡ್ಡಪ್ಪ ನೆಟ್ಟ ಮಾವಿನಮರದ ಚಿಗುರಿನ ಪುಟ್ಟಪುಟ್ಟ ಹೂಗಳು ಕಲ್ಲಿನ ಮೇಲೆಲ್ಲ ಹರಡಿಕೊಂಡಿವೆ. ಪ್ರಶ್ನೆಪತ್ರಿಕೆಗಳು ಪ್ರತಿವರ್ಷವೂ ಬದಲಾಗುತ್ತವೆ.

  • ಅಂಜನಾ ಹೆಗಡೆ

ಮಾತು ‘ಕಥೆ’-೨

★ ಇಗೋ ಕನ್ನಡ ★

ಸುದ್ದಿ ಪತ್ರಿಕೆ ಓದುವ ಸನ್ನಿವೇಶ
ಮೊಮ್ಮೊಗ: ಮೊಸರಿನಲ್ಲಿ ಕೊರೊನಾ ನಿಯಂತ್ರಣ..
ತಾತ: ಬಹಳ ಸಂತೋಷ.ಮುಂದಕ್ಕೆ ಓದು.
ಮೊಮ್ಮೊಗ:ಮಾಸ್ಕ್ ಧರಿಸಿ ಆಯೋಗ್ಯರಾಗಿ….
ತಾತ: ಎನೋ ತಪ್ಪಿದೆ .. ಅನ್ನಿಸುತ್ತೆ ..ಕೊಡು ಇಲ್ಲಿ….
ಮೊಮ್ಮೊಗ: ತಗೊಳಿ… ನೀವೇ ಓದಿ.
ತಾತ: ಅಯ್ಯೋ..ಇಲ್ಲಿರುವುದು ಮೈಸೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ,ಮಾಸ್ಕ್ ಧರಿಸಿ ಆರೋಗ್ಯರಾಗಿ.. ಎಂದು.

ಲೇಖಕಿ ಶ್ರೀಮತಿ ಸುಮಾ ವೀಣಾ

ಮಾತು ‘ಕಥೆ’-೩

★ ಬ್ಲಾಕ್ ಟೀ ★

ಹುಡುಗಿ – ಜಗತ್ತಿನಲ್ಲಿ ಪ್ರೀತಿಸಿದ ಹೃದಯಕ್ಕೆ ಪ್ರೇಮ ನಿವೇದಿಸುವ ಬದಲು, ಡಾಕ್ಟರ್ ಬಳಿಗೆ ಕಳಿಜಿಸಿದ ಮೊದಲ ಜೊತೆಗೆ ಕಟ್ಟ ಕಡೆಯ ಪ್ರೇಮಿ ತಾವೇ.
ಹುಡುಗ- (ಕಣ್ಣರಳಿಸಿ) ಮುಗುಳ್ನಗುತ್ತಾನೆ.
ಹುಡುಗಿ- I hate you, still I can’t. ಅಷ್ಟು ಮುಗ್ಧೆ ನಾನು.
ಹುಡುಗ- ಮೊದಲನೆ ಭಾರಿ ಇಂಜೆಕ್ಷನ್ ತಗೋತಾ ಇದೀನಿ, ಅದೆಷ್ಟು ನೋವಾಯ್ತು ಗೊತ್ತಾ? ನೀನ್ನೆಲ್ಲ ಹೊಟ್ಟೆಕಿಚ್ಚು ಇಷ್ಟಿರತ್ತೆ ಅನಿಸಿರಲಿಲ್ಲ.
ಹುಡುಗ-( ಮಂದ ಸ್ಮಿತನಾಗಿ ಅವಳ ಸನಿಹ ಬಂದು ಕಣ್ಣಲ್ಲಿ ಕಣ್ಣಿಟ್ಟು ನೋಡತೊಡಗುವನು.)
ಹುಡುಗಿ- ನೋಡಲ್ಲ ನಿನ್ನ (ಬೇರೆ ಕಡೆಗೆ ತಿರುಗಿ) ನನ್ನ ಕೋಪ ಕರಗೋವರೆಗೂ ಬ್ಲಾಕ್ ಟೀ ನೇ ಕುಡಿಬೇಕು, (ಮೆಲ್ಲಗೆ ಕಪ್ ಎತ್ತಿ ಅವನ ಕೈಗಿಡುತ್ತಾಳೆ)
ತುಸು ಗಂಭೀರವಾಗಿ ಕಪ್ ಕಷ್ಟದಿಂದ ತುಟಿಗೆ ತರುತ್ತಾನೆ.
ಹುಡುಗಿಯ ಖುಷಿಗೆ ಪಾರವೇ ಇಲ್ಲ, ಅಷ್ಟರಲ್ಲಿ ಹುಡುಗ ಮಾಯವಾಗಿರುತ್ತಾನೆ.

ಲೇಖಕಿ ನಳಿನ ಡಿ.

ಮಾತು ‘ಕಥೆ’-೪

★ ಅಪರಿಚಿತರು ★

ರಾಮು: ನಮಸ್ಕಾರಾ ನನ್ನ ಹೆಸರು ರಾಮು
ನಿಮ್ಮ ಹೆಸರೇನು
ಶ್ಯಾಮು: ಸಂತೋಷ.. ನನ್ನ ಹೆಸರು ಶ್ಯಾಮು.
ರಾಮು : ನೀವು ಬೆಂಗಳೂರಿಗೇನಾ ಹೋಗೋದು?
ಶ್ಯಾಮು:: ಹೌದು ಸರ. ನಿಮ್ಮ ಊರು ಹೈದರಾಬಾದೇನಾ
ರಾಮು:: ಹೌದು ನೀವು ಇರುವುದೆಲ್ಲಿ?
ಶ್ಯಾಮು:: ನಾವು ಇರುವುದು ಲಿಂಗಮಪಲ್ಲಿಯಲ್ಲಿ ಮಯುರ ಅಪಾರ್ಟಮೆಂಟ ಫ್ಲಾಟ್ ನಂಬರ ೧೦೪.
ರಾಮು :: ನಾವು ಇರುವುದು ಅದೇ ಫ್ಲಾಟ್ ರೀ ಸ್ವಾಮಿ
ಪಕ್ಕದ ವ್ಯಕ್ತಿ ಇದೇನಿದು ಇಬ್ಬರು ಒಂದೇ ಫ್ಲಾಟ್ ಇದ್ದರೂ ಪರಿಚಯ ಇಲ್ಲವಾ?
ರಾಮು:: ಸರ, ನಾವಿಬ್ರೂರೂ ಅಣ್ಣ-ತಮ್ಮಂದಿರೀ.. ಲಾಕ್್ ಡೌನ್ ನಾಗ ಮನ್ಯಾಗ ಕುಂತ ಒಬ್ಬರ ಮುಖ ಒಬ್ಬರು ನೋಡ ನೋಡ ಬ್ಯಾಸತ್ತ ತಲಿ ಕೆಟ್ಟ, ಅಪರಿಚಿತರಾಗಿ ಬಿಟ್ಟೇವ್ರಿ..

ಡಾಕ್ಟರ್ ಸಂಪತ್ ಸುಳಿಭಾವಿ

ಮಾತು ‘ಕಥೆ’-೫

ಅಮ್ಮ ಮತ್ತು ಪುಟ್ಟನ ನಡುವಿನ ಸಂಭಾಷಣೆ

ಪುಟ್ಟ, ನೀನು ದೊಡ್ಡವನಾದ ಮೇಲೆ ಏನಾಗ್ತೀಯಾ? ” “ದೊಡ್ಡ ದೊಡ್ಡ ಆಗ್ತೀನಿ.. “

“ದೊಡ್ಡ ದೊಡ್ಡ ಆದ್ಮೇಲೆ ಏನಾಗ್ತಿ ಪುಟ್ಟ? “

“ಅಪ್ಪ ಆಗ್ತೀನಿ..!! “???

  • ಡಾ. ಪ್ರೀತಿ ಕೆ. ಎ.
ಡಾ. ಪ್ರೀತಿ ಕೆ. ಎ.

ಮಾತು ‘ಕಥೆ’-೬

★ ಅಪ್ಪ ಮಗ ★

ಅಪ್ಪ ಹಾಗೂ ಮೂರು ನಾಲ್ಕು ವರ್ಷದ ಮಗ.

ಮಗ;-ಅಪ್ಪ ನಾವು ಒಂದು ಪ್ರಾಣಿ(ಪೆಟ್) ಸಾಕೋಣವೇ?

ಅಪ್ಪ;-ಯಾಕೋ, ನೀನೇ ಒಂದು ಪ್ರಾಣಿ ಇದ್ದೀಯಲ್ಲ? ಮತ್ತೆ ಯಾಕೆ?

ಮಗ;-ಹಾಗಲ್ಲ ಅಪ್ಪ, ಒಂದು ಸಣ್ಣ ಪ್ರಾಣಿ ಮರಿ ಸಾಕೋಣ.

ಅಪ್ಪ;- ಓಹೋ ಹಾಗೆ; ನಿನ್ನ ಬಳಿ ಎಷ್ಟೊಂದು ಆಟಿಗೆ ಪ್ರಾಣಿಗಳು ಇವೆಯಲ್ಲ. ಅವುಗಳನ್ನೇ
ಪೆಟ್ (ಪ್ರೀತಿ) ಪ್ರಾಣಿಗಳೆಂದು ತಿಳಿದುಕೊ.

ಮಗ;-ಇಲ್ಲ ಅಪ್ಪ, ನಾವು ಖರೆ ಖರೆ ಜೀವಂತ ಪ್ರಾಣಿ ಮರಿ ತಂದು ಸಾಕೋಣ.

ಅಪ್ಪ;-ಮೂವತ್ತನೇ ಮಾಳಿಗೆಯಲ್ಲಿರುವ ಈ, ಇಷ್ಟು ಸಣ್ಣ ಮನೆಯಲ್ಲಿ ಆ ಪ್ರಾಣಿಯನ್ನ
ಎಲ್ಲಿ ಇಡುತ್ತಿಯೋ? ಅದರ ಸ್ವಚ್ಛತೆಯ ಕೆಲಸ ಯಾರು ಮಾಡ್ತಾರೋ? ನನಗಂತೂ ಸಮಯ ಇಲ್ಲ.

ಮಗ;-ಅದರಬಗ್ಗೆ ನೀನೇನು ಚಿಂತಿಸ ಬೇಡ ಅಪ್ಪ, ನಾನು ಮತ್ತೆ ಅಮ್ಮ ಅದನ್ನೆಲ್ಲ ನೋಡ್ಕೋತೇವಿ. ಅದನ್ನು ಬಾಲ್ಕನಿಯಲ್ಲಿ ಕಟ್ಟಿಹಾಕಿ ಇಡೋಣ.

ಅಪ್ಪ;-ಹೌದಾ? ಹಾಗಾದರೆ ಪೆಟ್ ತರೋದಾ? ಯವುದು ತರಬೇಕು?

ಮಗ;-ನನಗೆ ನಾಯಿ ಮರಿ `ಡೊಗಿ’ ಬೇಕು.

ಅಪ್ಪ;-ನಾಯಿ ಮರಿ ನಾಳೆ ಒರ್ಡರ್ ಮಾಡುವುದಾ? ಪಕ್ಕಾ ಹೇಳು.

ಮಗ;-(ಸ್ವಲ್ಪ ತಡೆದು ಯೋಚಿಸಿದವನಂತೆ) ಬೇಡ, ಬೇಡ. ಅಪ್ಪ ನಾವು ಬೆಕ್ಕಿನಮರಿ ತರೋಣ. ಅದು ಎಲ್ಲಿ ಬೇಕಾದರೂ ಸಿಗುತ್ತೆ ಅಲ್ವಾ?

ಅಪ್ಪ;-ಆಯಿತು ಹಾಗಾದರೆ ನಾಳೆ ಬೆಕ್ಕಿನಮರಿ ಹುಡುಕಿ ತರುವುದಾ?
ಮಗ;-ಹಾಂ. ಅಪ್ಪ, ನಾಯಿಮರಿ ಬೆಕ್ಕಿನಮರಿ ಇವಕ್ಕಿಂತಾ, ಆಕಳುಕರು, ಕುದುರೆಮರಿ, ಮೊಲ, ಅಥವಾ ಬಿಳಿಇಲಿ, ಆಮೆ ಇವುಗಳಲ್ಲಿ ಯಾವುದಾದರೊಂದು ತರೋಣವೇ?

ಅಪ್ಪ;-ಮಗನೇ, ನಿನ್ನ ಆಟಿಗೆ ಸಾಮಾನಿನಲ್ಲಿರುವ ಪ್ರಾಣಿಗಳನ್ನೆಲ್ಲ ಸರಿಯಾಗಿ ಒಮ್ಮೆ
ನೋಡು. ಅವುಗಳಲ್ಲಿ ನಿನಗೆ ಯಾವುದು `ಒಂದು’ ಪ್ರಾಣಿ ಅತೀ ಇಷ್ಟ ಎಂದು ಹೇಳು. ಮತ್ತೆ ಅದನ್ನು ತರಲು ನಾವು ಪ್ರಯತ್ನಿಸೋಣ.

ಮಗ;-(ಎಲ್ಲವನ್ನೂ ನೋಡಿ ಬಂದು)ಅಪ್ಪ, ನಮಗೆ ಆ ಜೀವಂತ `ಒಂದು’ ಪ್ರಾಣಿಮರಿ ಬೇಡ.
ನನ್ನಲ್ಲಿರುವ ಇಷ್ಟೊಂದು ಪ್ರಾಣಿಗಳೇ ಸಾಕು.

(ಅಪ್ಪ, ನಿಟ್ಟುಸಿರು ಬಿಟ್ಟ)

ಲೇಖಕಿ ಶಾಂತಾ ಶಾಸ್ತ್ರಿ

ಮಾತು ‘ಕಥೆ’-೭

ತಾಯಿ-ಮಗಳು

ಲಿಂಗಮ್ಮ:- ಶಶಿ ನಾ ಹೇಳಿದ್ದು ನೆನಪೈತೆಲ್ಲ, ನಾಳೆ ಗೆಳ್ತೇರ ಹುಡಿಕ್ಕೊಂಡು ಎಲ್ಗೂ ಹೋಗಬ್ಯಾಡಾ.
ಶಶಿ :- (ಪುಸ್ತಕದಿಂದ ತಲೆ ಎತ್ತುತ್ತ)- ಯಾಕವಾ ಏನ ಅಂಥಾ ಮಹತ್ವದ ಕೆಲ್ಸೈತಿ? ( ಹೇಳುತ್ತ ಪುಸ್ತಕದತ್ತ ಕಣ್ಣು ಹಾಕುತ್ತಾಳೆ.)
ಲಿ.; ನಿನ್ನ ನೋಡಾಕ ಬರವ್ರದಾರ.( ಸೋಫಾದಲ್ಲಿ ಕುಳ್ಳಿರುತ್ತಾಳೆ.)
ಶಶಿ:- (ಪುಸ್ತಕದಿಂದ ಮುಖ ಮೇಲೆತ್ತಿ)ನನ್ನ್ ನೋಡಾಕ? ನನಗೇನಾಗೇತಿ, ನಾ ಆರಾಮ„ ಅದೀನಲ್ಲ. ಯಾರವು ಅವ್ರಿಗೇನೂ ಉದ್ಯೋಗ ಇಲ್ಲಾ, ಸುಮ್ ಸುಮ್ನ್ ಬರಾಕ.( ಮತ್ತೆ ಪುಸ್ತಕದಲ್ಲಿ ಮುಖ)
ಲಿ: (ಮಗಳೆಡೆಗೆ ಕೈ ಮಾಡುತ್ತಾ) ಏ ಕನ್ಯಾ ನೋಡಾಕಂತ ಬರ್ತಾರಾ. ಇದೂ ಮಹತ್ವದ ಕೆಲ್ಸನ„ ಏನೂ ಗೊತ್ತಿಲ್ಲದವರಂಗ ಮಾತಾಡ್ತೀಯಲ್ಲ.
ಶ: (ಮುಖ ಮೇಲೆತ್ತಿ) ಓ „ „ „ ವಧು ಪರೀಕ್ಷೆ ಅನ್ನು.
ಲಿ: ನೀ ಹಂಗ „ ಅನ್ಕೊ. ಹುಡುಗ ಛಲೊ ಅದಾನು, ಮಂದೀನೂ ಛಲೋ ಅದಾರ.
ಶ: (ಪುಸ್ತಕದಲ್ಲಿ ಒಂದು ಬೆರಳನ್ನಿಟ್ಟು ಅದನ್ನು ಮುಚ್ಚುತ್ತಾಳೆ) ಹ್ಯಾಂಗ ನೋಡ್ತಾನವಾ ನನ್ನ, ಕೈ ನೋಡ್ತಾನ „ ಕಾಲ್ ನೋಡ್ತಾನ „, ನಾ ಎಷ್ಟ ಮೇಕಪ್ ಮಾಡೀನಿ ನೋಡ್ತಾನೊ, ರಸ್ತಾದಾಗ ಹೊಂಟಾಗ ಮಂದಿ „ ಪಿಳಿ ಪಿಳಿ ಕಣ್ಣ್ ಬಿಟ್ಕೊಂಡು ಮಂಗ್ಯಾನಂಗ ನೋಡ್ತಾರಲ್ಲ ಹಾಂಗ „ . . . .
ಲಿ : (ಅವಳ ಮಾತನ್ನು ಅರ್ಧದಲ್ಲಿಯೇ ತಡೆಯುತ್ತಾ ಹಣೆ ಹಣೆ ಬಡಿದುಕೊಳ್ಳುತ್ತಾ)) ಏ ಏ ಸಾಕ ನಿಲ್ಸು ಬಡ ಬಡಾ ಒದರಬ್ಯಾಡ. ನಾ ಈ ಸಧ್ಯಕ ನಿನ್ನ್ ಹ್ಯಾಂಗ ನೋಡಾಕ್ಹತ್ತೀನಿ. ಹಂಗ „ ನೋಡ್ತಾನಾ.
ಶ: (ಕೈಯಲ್ಲಿದ್ದ ಪುಸ್ತಕವನ್ನು ಮುಚ್ಚಿ ಮೇಲೆ ಕೆಳಗೆ ತಿರುಗಿಸುತ್ತ) ನೋಡಿ . . . ಮುಂದ „?
ಲಿ: ಮುಂದೇನು ಪಸಂದ ಆದ್ರ ಮದ್ವಿ ಮಾತು ಮುಂದ್‍ವರ್ಸಬಹದು.
ಶ: ಆಗದಿದ್ರ . . .
ಲಿ: ಆಗದಿದ್ರ ಅನ್ನುವಂಗೇನಿಲ್ಲ. ಆಗತ್ತ ಅನ್ನೊ ಭರೋಸಾ ಕೊಟ್ಟಾರ.
ಶ: ಯಾರ್ಗೆ ಅವ್ರಿಗೆ? . . . (ಭುಜ ಹಾರಿಸುತ್ತ)ನನಗ ಪಸಂದ ಆಗದಿದ್ರ. . .
ಲಿ: (ಅಚ್ಚರಿಯಿಂದ) ಅವತ್ತ್ ಹುಡುಗನ್ ಮಾಹಿತಿ ತೋರಿಸಿದ್ ಮ್ಯಾಲೆ ನಿ ಏನ್ ಹೇಳ್ಳಿಲ್ಲಾ. ಅವಾಗ ಹೇಳ್ಬಕಾಗಿತ್ತಲ್ಲ. ನಾವ್ಯಾಕ ಈಗ ಕರೀತಿದ್ವಿ. ಅವ್ರನ್ನ್.
ಶ: ನಾ ಏನೂ ನೋಡ್ಲಿಲ್ಲ.
ಲಿ: ಅವಾಗ ನೋಡದಿದ್ದರ ಆತು ಬಿಡು ಈಗ ಬರ್ತಾನಲ್ಲ ನೋಡು. ಪಸಂದ ಇಲ್ಲ ಅಂತ ಹೇಳ್ಬಿಡು. ಈಗ ಬರಬ್ಯಾಡ್ರಿ ಅಂತ ಹ್ಯಾಂಗ ಹೇಳದು. (ಸಿಟ್ಟಿನಿಂದ) ಸಲ್ಪೂ ಜವಾಬ್ದಾರಿ ಇಲ್ಲ. ಬಾಯಿಗ್ಬಂದಾಂಗ ಏ„ ನರ ಮಾತಾಡ್ತಿ. ನಿಂಗ„ ಮದ್ವೀ ಮಾಡ್ಕಳ್ಳೋದು ಐತೇ ಇಲ್ಲ ಅಂತ್ಹೇಳು, ಯಾರ್ನರ„ ಮೆಚಿಗೊಂಡಿದ್ರ . . ಕರ್ಕೊಂಬಾ ನೋಡಿ ಅವನ್ ಜೊತಿನ„ ಮಾಡೂಣು,. . . ಹುಡಗಾಟಾ ಮಾಡಾಕ 20 ವರ್ಸದ ಹುಡ್ಗೀ ಅಂತ ತಿಳ್ಕೊಂಡಿಯೆನ?
ಶ: (ಪುಸ್ತಕವನ್ನು ಪಕ್ಕದಲ್ಲಿಡುತ್ತಾ)ಯಾರ್ನೂ ಮೆಚಿಗೊಳ್ಳಾಕ ವ್ಯಾಳೆ ಸಿಕ್ಕಿಲ್ಲ. ನನಗೇನ್ ಹೇಳ್ಬಕಾಗೇತಿ ಕೇಳ್ ಮದಲ „ ಹುಡುಗ ನಮ್ಮ್ ಮನಿಗೆ ಬಂದು ನನ್ನ್ ಪಸಂದ ಇಲಾ ನಾಪಸಂದ ಮಾಡ „ ದು ನಂಗ್ ಒಪ್ಗಿ ಇಲ್ಲ,
ಲಿ: ಮತ„ ನೀವು ನೀವು ಎಲ್ಲೆರ ಭೇಟ್ಯಾಕ್ಕಿರೇನೂ, ಹೇಳೂಣು ಅವ್ರಿಗೆ. . ಹಂಗ„ ಮಾಡು.
ಶ: ಊಹೂ. ನಾನು ಅವ್ರ ಮನೀಗ್ಹೋಗಿ ಹುಡುಗನ್ನ ಪರೀಕ್ಷಾ ಮಾಡಬಕಾಗೇತಿ.
ಲಿ: ಮಾಡಲಾ ಅವಾ ನಾಳಿಗೆ ಬರ್ತಾನಲಾ, ನಿಂಗೇನ ಬೇಕು ಕೇಳು.
ಶ: ಅವಾ ಬರ „ದ ಬ್ಯಾಡಾ, . . .

ಲಿ: ಹಂಗಂದ್ರೇನು? ಬರ್ಲಾರ್ದ ಹ್ಯಂಗ್ ಪರೀಕ್ಷಾ ಮಾಡ್ತಿ?
ಶ: (ಕೈಯಲ್ಲಿ ಪುಸ್ತಕವನ್ನು ಹಿಡಿದು ಅತ್ತಿತ್ತ ತಿರುಗಿಸುತ್ತಾ) ನಾವ „ ಅಲ್ಲಿಗ್ಹೋಗದು. (ಎದ್ದು ಒಳಗೆ ಹೋಗುತ್ತಾಳೆ).
ಲಿ:.”…”

ಲೇಖಕಿ :ವಾಸಂತಿ

ಮಾತು ‘ಕಥೆ’-೮

★ ಕುಡಿತ ★

ನಿಂಗಿ: ದಿನಾ ಸೆರೆ ಕುಡದ ರಾಡ್ಯಾಗ ಹೊಳ್ಳ್ಯಾಡಿ ಬಂದ ಎಮ್ಮಿ ಹಂಗ್ ಮನೀಗಿ ಬರತಿ ಅಲ್ಲ ನಾಚಿಗಿ ಆಗೂದಿಲ್ಲ ಏನ್ ನಿನಗ? ನೀ ನನ್ನ ಗಂಡಾ ಅಂತ ಹೇಳಕೊಳ್ಳಾಕೂ ಅಸಹ್ಯ ಆಕ್ಕತಿ ನನಗ.

ಪರಶಾ: ಏ…ನಿಂಗಿ…ಚುಪ್…ನಾ ಕುಡೆವಾ. ದಿನ್ನಾ ಕುಡದ ಬರವಾ. ಯಾಕ ಅಂದ್ರ ನಾ ದೇಶ ಸೇವಾ ಮಾಡಾಕತ್ತೇನಿ.

ನಿಂಗಿಗೆ ಬ್ಯಾಡಗಿ ಮೆಣಸಿನ ಕಾಯಿ ತಿಂದಂಗ್ ಆಗಿ, ನಿಗಿ ನಿಗಿ ಅನ್ನಾಕತ್ತಳು.

ನಿಂಗಿ: ಏ ಮೂಳಾ, ಹಳೇ ಮೂಳಾ. ಹೇಣ್ತಿ ಮಕ್ಕಳು ಹೊಟ್ಟಿಗೆ ಹಿಟ್ ಇಲ್ಲದ ಸೆಟದ ಹೊಕ್ಕಾರ. ಆವಾಗ ಭೂಮಿ ತಾಯಿ ಭಾರಾ ಕಡಿಮಿ ಆಕ್ಕತಿ. ಇದss ಏನ್ ನಿನ್ನ ದೇಶ ಸೇವಾ?

ಪರಶಾ: ಏ ನಿಂಗಿ ನಿನ್ನೆ ಟೀವ್ಯಾಗ ನೋಡಿಲ್ಲ ಏನ್? ಮುಖ್ಯ ಮಂತ್ರಿಗಳು ಎಲ್ಲಾ ಸೆರೇದ್ ಅಂಗಡಿಯವರಿಗೆ ತಾಕೀತ್ ಮಾಡ್ಯಾರ ಅಂತ. ತಿಂಗಳಿಗೆ ಇಂತಿಷ್ಟ ಸೆರೆ ಮಾರಬೇಕಂತ. ರೈತರ ಸಾಲಾ ಮನ್ನಾ ಆಗಬೇಕ ಅಂದರ ಸರ್ಕಾರದ ಕೈಯ್ಯಾಗ ರೊಕ್ಕ ಬೇಕ. ಸರ್ಕಾರಕ್ಕ ಹೊಳಿ ಹರದಂಗ ರೊಕ್ಕಾ ಹರದ ಬರಬೇಕ. ಅದಕ್ಕ ಎಲ್ಲಾರ ಮನೀಗೂ ಹೋಗಿ ಹೇಳಿ ಬಂದೆ. “ಮಾನ್ಯ ಮತದಾರ ಬಾಂದವರೆ, ನೀವೆಲ್ಲಾರೂ ದಿನ್ನಾ ಗಿಚ್ ಕುಡೀಬೇಕ. ಕುಡದು ದೇಶ ಸೇವಾ ಮಾಡಬೇಕ” ಅಂತ.

ಕುದ್ದು ಹೋದ ನಿಂಗಿ, ಕೈಯ್ಯಾಗಿನ ಲತ್ತಿಗುಣಿಲೆ ಪರಸ್ಯಾನ ತಲಿ ಮ್ಯಾಲೆ ಕುಕ್ಕಿ,

ನಿಂಗಿ: ಏಯ್ ಜೋಕಮಾರಾ, ನಮ್ಮ ಸಂಘದಿಂದ ನಿನ್ನೆ ಹೆಣ್ಣಮಕ್ಕಳೆಲ್ಲಾ ಮೆರವಣಿಗಿ ಮಾಡಿದ್ವಿ. “ಕುಡಿತ ಆರೋಗ್ಯಕ್ಕೆ ಹಾನಿಕರ, ಕುಡಿತದ ಸಹವಾಸ ಹೆಂಡತಿ ಮಕ್ಕಳ ಉಪವಾಸ” ಅಂತ ಬಿಸಲಾಗ ಗಂಟಲಾ ಹರಕೊಂಡ್ ಬಂದೇವಿ.

ಪರಶಾ: ಏಯ್ ನಿಂಗಿ ಕೋಮಾಲಂಗಿ, ರೈತರು ನಮ್ಮ ದೇಶದ ಬೆನ್ನೆಲುಬು. ಅನ್ನದಾತರು ಸಾಲ ಬಾದೆಯಿಂದ ಹೊರಗ ಬರಬೇಕು. ಅದಕ್ಕ ನಾನು ನನ್ನ ತನು,ಮನ,ಧನದಿಂದ ಸಹಾಯ ಮಾಡತೇನಿ. “ಮಾನ್ಯ ಮಂತ್ರಿಗಳೇ ನಾವು ಕುಡುಕರೆಲ್ಲ ನಿಮ್ಮ ಜೋಡಿ ಕೈ ಜೋಡಸತೇವಿ. ವಂದೇ ಮಾತರಂ… ಜೈ ಕರ್ನಾಟಕ ಮಾತೆ..
.
ಎಂದು ಜೈಕಾರ ಹಾಕುತ್ತ ಪರಶಾ ದೊಪ್ಪನೆ ನೆಲಕ್ಕುರುಳಿದ. “ಮಾನ್ಯ ಮತದಾರ ಬಾಂಧವರೇ ಕುಡೀಬೇಕ?. ದೇಶ ಸೇವಾ ಮಾಡಬೇಕ?” ಎಂದು ಪರಶಾ ಬಡ ಬಡಿಸುತ್ತಲೇ ಇದ್ದ.

ಗೌರಿ.ಚಂದ್ರಕೇಸರಿ