ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಯುದ್ಧೋನ್ಮಾದದ ಅಲೆಯೂ ಪ್ರಜಾತಂತ್ರದ ಆಶಯಗಳೂ

ನಾ ದಿವಾಕರ

ಮಾರುಕಟ್ಟೆಗೆ ಯುದ್ಧಬೇಕಿದೆ ಮನುಕುಲದ ಉಳಿವಿಗೆ ಶಾಂತಿ ಬೇಕಿದೆ ಆಯ್ಕೆ ನಮ್ಮದು…

“ಯುದ್ಧ”ದ ಪರಿಕಲ್ಪನೆಯೇ ಮನುಕುಲ ವಿರೋಧಿ. ಆದರೆ ಜಗತ್ತಿನ ಶತಮಾನಗಳ ಇತಿಹಾಸದಲ್ಲೊಮ್ಮೆ ಇಣುಕಿನೋಡಿದಾಗ, ಮನುಷ್ಯ ಸಮಾಜ ಯುದ್ಧಗಳಿಲ್ಲದೆ ತನ್ನ ಅಸ್ತಿತ್ವವೇ ಇರುವುದಿಲ್ಲ ಎಂಬ ಧೋರಣೆಯೊಂದಿಗೇ ನಡೆದುಬಂದಿರುವುದನ್ನು ಗಮನಿಸಬಹುದು. ಎಲ್ಲ ನಾಗರಿಕತೆಗಳಲ್ಲೂ ಮಾನವ ಸಮಾಜ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಮತ್ತು ತನ್ಮೂಲಕ ವರ್ಗಾಧಾರಿತ, ಜನಾಂಗ ಆಧಾರಿತ, ಜಾತಿ-ಮತ ಆಧಾರಿತ ಆಧಿಪತ್ಯವನ್ನು ಸಾಧಿಸಲು ಯುದ್ಧ ಪರಂಪರೆಯನ್ನು ಪೋಷಿಸುತ್ತಲೇ ಬಂದಿದೆ. ವಿಭಿನ್ನ ಸಮುದಾಯಗಳನ್ನು ಮತ್ತು ಸಮಸ್ತ ಸಮಾಜವನ್ನು ತನ್ನ ಹಿಡಿತದಲ್ಲಿರಿಸಿಕೊಳ್ಳುವ ಹಪಹಪಿಯೊಡನೆಯೇ ಸಾಮಾಜಿಕ ಮೇಲರಿಮೆಗಾಗಿ, ಆರ್ಥಿಕ ಪ್ರಾಬಲ್ಯಕ್ಕಾಗಿ, ರಾಜಕೀಯ ಅಧಿಕಾರಕ್ಕಾಗಿ ತವಕಿಸುವ ಆಳುವ ವರ್ಗಗಳು ತಮ್ಮ ಅಧಿಕಾರ ಕೇಂದ್ರಗಳನ್ನು ರಕ್ಷಿಸಿಕೊಳ್ಳಲು ಯುದ್ಧವನ್ನೂ ಅಸ್ತ್ರವನ್ನಾಗಿಯೇ ಬಳಸುತ್ತವೆ.

ಒಂದು ಪುಟ್ಟ ರಾಷ್ಟ್ರ ಉಕ್ರೇನಿನ ಮೇಲೆ ವಿನಾಶಕಾರಿ ದಾಳಿ ಆರಂಭಿಸಿರುವ ರಷ್ಯಾದ ದುರಾಕ್ರಮಣದ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಮತ್ತೊಮ್ಮೆ ಯುದ್ಧೋನ್ಮಾದ, ಯುದ್ಧಭೀತಿ ಮತ್ತು ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದೆ. ಇಡೀ ಜಗತ್ತು ಮತ್ತೊಂದು ಮಹಾಯುದ್ಧವನ್ನು, ಮೂರನೆ ವಿಶ್ವಯುದ್ಧವನ್ನು ಬಯಸುತ್ತಿದೆ ಅಥವಾ ನಿರೀಕ್ಷಿಸುತ್ತಿದೆ ಎನ್ನುವ ರೀತಿಯಲ್ಲಿ ಮಾಧ್ಯಮಗಳು ಯುದ್ಧವನ್ನು ವೈಭರೀಕರಿಸುತ್ತಿವೆ. ಭಾರತ, ಪಾಕಿಸ್ತಾನವನ್ನೂ ಸೇರಿದಂತೆ ರಷ್ಯಾ, ಅಮೆರಿಕ, ಚೀನಾ ಮುಂತಾದ ರಾಷ್ಟ್ರಗಳು ಪರಮಾಣು ಅಸ್ತ್ರಗಳನ್ನು ಹೊಂದಿರುವುದರಿಂದ ಈ ಸಂಭಾವ್ಯ ಮಹಾಯುದ್ಧ ಮನುಕುಲದ ಪೂರ್ಣ ವಿನಾಶಕ್ಕೆ ಕಾರಣವಾಗುವುದೇನೋ ಎಂಬ ಆತಂಕವೂ ಕಾಡಲಾರಂಭಿಸಿದೆ. ಆದರೆ ಇವೆಲ್ಲವೂ ಕೇವಲ ಮಾಧ್ಯಮಗಳ ರಂಜನೀಯ ವರದಿಗಾರಿಕೆಯಷ್ಟೇ ಎನ್ನುವುದು ಇಷ್ಟರಲ್ಲೇ ಸ್ಪಷ್ಟವಾಗುತ್ತದೆ.

2008ರಿಂದಲೂ ಬಿಕ್ಕಟ್ಟು ಎದುರಿಸುತ್ತಿರುವ ಬಂಡವಾಳಶಾಹಿ ವ್ಯವಸ್ಥೆ ಮತ್ತು ಬಂಡವಾಳ ಜಗತ್ತು ತನ್ನ ವಿಮೋಚನೆಗಾಗಿ ಯುದ್ಧಗಳನ್ನೇ ಆಶ್ರಯಿಸುವುದು ಚಾರಿತ್ರಿಕ ಸತ್ಯ. ತನ್ನ ಸಾಮ್ರಾಜ್ಯ ವಿಸ್ತರಣೆಗೂ ಅವಕಾಶವಿಲ್ಲದೆ, ಬಂಡವಾಳಹೂಡಿಕೆಗೂ ಅವಕಾಶಗಳನ್ನು ಕಳೆದುಕೊಂಡು, ಪ್ರಪಂಚದ ತೈಲ ಮತ್ತಿತರ ನಿಸರ್ಗ ಸಂಪತ್ತಿನ ಮೇಲೆ ಒಡೆತನ ಸಾಧಿಸಲು ತವಕಿಸುತ್ತಿರುವ ಅಮೆರಿಕ ತನ್ನ ಆರ್ಥಿಕ ಪುನಶ್ಚೇತನಕ್ಕಾಗಿಯೇ ವಿಶ್ವದ ಯಾವುದೋ ಒಂದು ಮೂಲೆಯಲ್ಲಿ ಯುದ್ಧಗಳನ್ನು ಪ್ರಚೋದಿಸುತ್ತದೆ. ಈಗ ನಡೆಯುತ್ತಿರುವ ಯುದ್ಧವೂ ಮಾತುಕತೆಗಳಲ್ಲಿ ಕೊನೆಗೊಳ್ಳುತ್ತದೆ, ಉಕ್ರೇನಿನಲ್ಲಿ ರಷ್ಯಾದ ಕೈಗೊಂಬೆ ಸರ್ಕಾರವನ್ನು ಸ್ಥಾಪಿಸುವ ಮೂಲಕ, ರಷ್ಯಾ ಏಷಿಯಾ ಪೆಸಿಫಿಕ್ ಪ್ರಾಂತ್ಯದಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳಲಿದೆ. ಈ ಪ್ರದೇಶದ ನೈಸರ್ಗಿಕ ಸಂಪನ್ಮೂಲಗಳನ್ನು ಆಕ್ರಮಿಸಿಕೊಂಡು, ಏಷಿಯಾದ ರಾಷ್ಟ್ರಗಳಲ್ಲಿ ತನ್ನ ಬಂಡವಾಳಹೂಡಿಕೆಯ ಪ್ರಶಸ್ಥ ಭೂಮಿಯನ್ನು ಹುಡುಕುವ ಪ್ರಕ್ರಿಯೆಯಲ್ಲೇ ಅಮೆರಿಕ ಮತ್ತೊಂದು ಯುದ್ಧದ ಬಗ್ಗೆ ಯೋಚಿಸಲಾರಂಭಿಸುತ್ತದೆ.

ಎರಡನೆ ಮಹಾಯುದ್ಧ ಮುಗಿದ ನಂತರ ಇಡೀ ವಿಶ್ವವನ್ನು ಎರಡು ಧೃವಗಳಲ್ಲಿ ವಿಂಗಡಿಸಿದ ಸಾಮ್ರಾಜ್ಯಶಾಹಿ ಶಕ್ತಿಗಳು ಪ್ರಜಾಪ್ರಭುತ್ವದ ರಕ್ಷಣೆಯ ಹೆಸರಿನಲ್ಲೇ ಪ್ರತಿ ಹತ್ತು ವರ್ಷಕ್ಕೊಮ್ಮೆ ಯುದ್ಧಗಳನ್ನು ನಡೆಸುತ್ತಲೇ ಇವೆ. ನ್ಯಾಟೋ ಎಂದು ಕರೆಯಲಾಗುವ ಯುದ್ಧಪಿಪಾಸು ದುಷ್ಟ ಕೂಟ ಕಾಲಿಟ್ಟ ದೇಶಗಳಲ್ಲೆಲ್ಲಾ ಅಲ್ಲಿನ ಜನೋಪಯೋಗಿ, ಜನಪರ ಸರ್ಕಾರಗಳನ್ನು ಪದಚ್ಯುತಗೊಳಿಸಿ ಕೈಗೊಂಬೆ ಸರ್ಕಾರಗಳನ್ನು ಸ್ಥಾಪಿಸಲಾಗಿದೆ. ಸದ್ದಾಂಹುಸೇನ್, ಕರ್ನಲ್ ಗಡಾಫಿ ಮುಂತಾದ ನಾಯಕರು ಕಾಪಾಡಿಕೊಂಡು ಬಂದಿದ್ದ ಒಂದು ಕಲ್ಯಾಣ ರಾಜ್ಯವನ್ನು ಮಸಣಸದೃಶವಾಗಿಸಿ, ಆ ನಾಯಕರನ್ನು ಹತ್ಯೆ ಮಾಡಿದ ಅಮೆರಿಕದ ದೃಷ್ಟಿಯಲ್ಲಿ ಪ್ರಜಾಪ್ರಭುತ್ವ ಎಂದರೆ ತೈಲ ಸಂಪತ್ತಿನ ಒಡೆತನ ಸಾಧಿಸಲು ಇರುವ ಒಂದು ಅಸ್ತ್ರ. ಈ ಅಸ್ತ್ರವನ್ನು ಬಳಸಿಯೇ ಕೊಲ್ಲಿ ರಾಷ್ಟ್ರಗಳ ಮೇಲೆ, ಆಫ್ರಿಕಾದ ದೇಶಗಳ ಮೇಲೆ ನಿರಂತರ ದಾಳಿ ನಡೆಸಿದೆ.

ಈಗ ಅಮೆರಿಕದ ವಕ್ರದೃಷ್ಟಿ ರಷ್ಯಾದ ಮೇಲೆ ಬಿದ್ದಿದೆ. ಉಕ್ರೇನಿಗೆ ನ್ಯಾಟೋ ಸದಸ್ಯತ್ವ ನೀಡುವ ಮೂಲಕ ಅಲ್ಲಿ ತನ್ನ ಸೇನಾ ನೆಲೆಯನ್ನು ಸ್ಥಾಪಿಸಿ, ಸುತ್ತಲಿನ ಮಾರುಕಟ್ಟೆ-ಸಾರಿಗೆ ಮಾರ್ಗಗಳನ್ನು ನಿಯಂತ್ರಿಸುವ ಸಾಮ್ರಾಜ್ಯಶಾಹಿ ಹುನ್ನಾರವನ್ನು ಅಮೆರಿಕದ ರಾಜಕೀಯ ತಂತ್ರಗಾರಿಕೆಯಲ್ಲಿ ಕಾಣಬಹುದು. ಏಕೆಂದರೆ ಅಮೆರಿಕದ ಶಸ್ತ್ರಾಸ್ತ್ರ ತಯಾರಿಕೆಯ ಕೇಂದ್ರ ಪೆಂಟಗನ್ ಕೇವಲ ಸಾಮ್ರಾಜ್ಯಶಾಹಿಯ ಭೌಗೋಳಿಕ ವಿಸ್ತರಣೆ ಮಾತ್ರವಲ್ಲದೆ, ಅಮೆರಿಕದ ಆರ್ಥಿಕ ಮಾರುಕಟ್ಟೆಯನ್ನು ವೃದ್ಧಿಸಲೂ ನೆರವಾಗುತ್ತದೆ. ಉಕ್ರೇನ್ ತನ್ನ ರಕ್ಷಣೆಗಾಗಿ ಇನ್ನು ಮುಂದಿನ ದಿನಗಳಲ್ಲಿ ಖರೀದಿಸಲಿರುವ ಶಸ್ತ್ರಾಸ್ತ್ರಗಳೇ ಅಮೆರಿಕದ ಮಾರುಕಟ್ಟೆಯ ಪೋಷಣೆಗೆ ಮೂಲವಾಗಬಹುದು. ಅಮೆರಿಕದ ಈ ದುಷ್ಟ ಪ್ರಯತ್ನಕ್ಕೆ ಬಲಿಯಾಗಿರುವುದು ಉಕ್ರೇನ್ ಎಂಬ ಪುಟ್ಟ ರಾಷ್ಟ್ರ. ಪರಮಾಣು ಅಸ್ತ್ರದ ಬೆದರಿಕೆ ಹಾಕುವ ಮೂಲಕ ರಷ್ಯಾದ ಅಧ್ಯಕ್ಷ ಪುಟಿನ್ ತಮ್ಮೊಳಗಿನ ಅಮಾನುಷತೆಯನ್ನು ಪ್ರದರ್ಶಿಸಿರುವುದೇ ಅಲ್ಲದೆ, ಇಡೀ ಪ್ರಜ್ಞಾವಂತ ಜಗತ್ತನ್ನು ಜಾಗೃತಗೊಳಿಸಿದ್ದಾರೆ.

ಪರಮಾಣು ಅಸ್ತ್ರ ಪರೀಕ್ಷೆ ನಡೆಸಿದಾಗ ಹೆಮ್ಮೆಯಿಂದ ಎದೆತಟ್ಟಿಕೊಂಡು, “ನಮ್ಮದು ಅಣ್ವಸ್ತ್ರ ದೇಶ” ಎಂದು ಬೀಗುವ ರಾಷ್ಟ್ರೀಯವಾದಿಗಳು ಪುಟಿನ್ ನೀಡಿದ ಒಂದು ಹೇಳಿಕೆಯಿಂದ ಕಂಗಾಲಾಗಿದ್ದಾರೆ. ಏಕೆಂದರೆ ರಷ್ಯಾ ಉಕ್ರೇನಿನ ವಿರುದ್ಧ ಪರಮಾಣು ಅಸ್ತ್ರ ಬಳಸಿದರೂ ಅದು ಜಗತ್ತಿನ ಅಂತ್ಯದ ಮೊದಲ ಮೆಟ್ಟಿಲಾಗುತ್ತದೆ. ಈ ವಾಸ್ತವ ರಷ್ಯಾ ಅಧ್ಯಕ್ಷನಿಗೂ ತಿಳಿದಿದೆ. ಪರಮಾಣು ಅಸ್ತ್ರಗಳು ಕೇವಲ ಕೊಲ್ಲುವ ಆಯುಧಗಳಲ್ಲ ಸರ್ವನಾಶ ಮಾಡುವ ಪ್ರಳಯಾಂತಕ ಸಾಧನಗಳು. ಬಳಸುವವರನ್ನೂ ಬಳಕೆಗೆ ಗುರಿಯಾಗಿರುವವರನ್ನೂ ನಾಶಪಡಿಸುವುದರೊಂದಿಗೆ, ಕೋಟ್ಯಂತರ ಅಮಾಯಕ ಜೀವಿಗಳು ಕ್ಷಣ ಮಾತ್ರದಲ್ಲಿ ಉರಿದು ಬೂದಿಯಾಗುವ ಭೀಕರ ಕ್ಷಣದ ಊಹೆಯೇ ಜಾಗತಿಕ ಸಮುದಾಯದ ಅಂತರ್ ಪ್ರಜ್ಞೆಯನ್ನು ಬಡಿದೆಬ್ಬಿಸುತ್ತದೆ. ಪರಮಾಣು ಅಸ್ತ್ರವನ್ನು ಹೊಂದಿರುವ ಎಲ್ಲ ದೇಶಗಳೂ “ನಾವು ಮೊದಲು ಬಳಸುವುದಿಲ್ಲ” ಎಂಬ ಶಪಥಕ್ಕೆ ಬದ್ಧತೆ ತೋರುತ್ತವೆ. ಆದರೆ ಅಣ್ವಸ್ತ್ರ ಪ್ರಯೋಗದಲ್ಲಿ ಕೊನೆ ಮೊದಲು ಎನ್ನುವುದಿರುವುದಿಲ್ಲ ಕೇವಲ ಬದುಕು ಅಥವಾ ಸಾವು, ಉಳಿವು ಅಥವಾ ವಿನಾಶ ಇಲ್ಲಿ ಮುಖ್ಯವಾಗುತ್ತದೆ.

ಈ ಯುದ್ಧಗಳು ಒಂದು ಹಂತಕ್ಕೆ ಕೊನೆಗೊಳ್ಳುತ್ತವೆ, ಶಾಂತಿ ನೆಲೆಸುತ್ತದೆ. ಪುಟಿನ್ ತನಗೆ ಬೇಕಾದ ಒಂದು ಕೈಗೊಂಬೆ ಸರ್ಕಾರವನ್ನು ಉಕ್ರೇನಿನಲ್ಲಿ ಸ್ಥಾಪಿಸುವ ಮೂಲಕ, ನ್ಯಾಟೋ ಅತಿಕ್ರಮಣವನ್ನು ತಡೆಗಟ್ಟಿ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳುತ್ತಾನೆ. ಅಮೆರಿಕ ತನ್ನ ಶಸ್ತ್ರಾಸ್ತ್ರ ಸರಕುಗಳ ಗೋದಾಮುಗಳನ್ನು ಮತ್ತೊಂದು ದೇಶದಲ್ಲಿ ಹುಡುಕಲಾರಂಭಿಸುತ್ತದೆ. ಇಂದು ವಿಶ್ವದ ಪ್ರಜ್ಞಾವಂತ ಸಮುದಾಯಗಳು, ನಾಗರಿಕರು ಯೋಚಿಸಬೇಕಿರುವುದು ಈ ಕ್ಷಣಕಾಲದ ಯುದ್ಧಗಳ ಬಗ್ಗೆ ಅಲ್ಲ. ಈ ಯುದ್ಧಗಳು ಸೃಷ್ಟಿಸುವ ಅಶಾಂತಿ, ಅಸ್ಥಿರತೆ, ಆತಂಕಗಳ ಬಗ್ಗೆ. ನಾಗರಿಕರ ಮೇಲೆ ನಡೆಯುವ ಬಾಂಬ್, ಕ್ಷಿಪಣಿ ದಾಳಿಗಳಿಂದ ತಮ್ಮ ಬದುಕು ಕಳೆದುಕೊಳ್ಳುವ ಲಕ್ಷಾಂತರ ಜನರ ಭವಿಷ್ಯದ ಬದುಕು ನಮ್ಮ ಪ್ರಜ್ಞೆಯನ್ನು ಕದಡಬೇಕಲ್ಲವೇ ? ಎಲ್ಲ ಯುದ್ಧಗಳಲ್ಲೂ ಅಂತಿಮವಾಗಿ ಅವಸಾನ ಹೊಂದುವುದು ಮಾನವ ಸಮಾಜ ಮತ್ತು ಮಾನವೀಯ ಮೌಲ್ಯಗಳು. ಈ ಯುದ್ಧಗಳಿಂದ ಬೆಳೆಯುವುದು ಬಂಡವಾಳಶಾಹಿ ವ್ಯವಸ್ಥೆ ಪೋಷಿಸುತ್ತಲೇ ಬಂದಿರುವ ಬಡತನ, ದಾರಿದ್ರ್ಯತೆ ಮತ್ತು ಸಾಮಾಜಿಕಾರ್ಥಿಕ ದೌರ್ಜನ್ಯಗಳು.

ಯುದ್ಧೋನ್ಮಾದ ಎನ್ನುವುದನ್ನು ಒಂದು ನಿರ್ದಿಷ್ಟ ಯುದ್ಧ ಸನ್ನಿವೇಶದಲ್ಲಿಟ್ಟು ನೋಡುವುದಕ್ಕಿಂತಲೂ, ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯು ಸಮಾಜದಲ್ಲಿ ಅಂತರ್ಗತವಾಗಿರುವ ಸಾಮಾಜಿಕಾರ್ಥಿಕ ಅಸಮಾನತೆಯನ್ನು ಮತ್ತಷ್ಟು ಹಿಗ್ಗಿಸಲು ಬಳಸುವ ಒಂದು ಮಾರ್ಗ ಎಂದು ಅರ್ಥಮಾಡಿಕೊಳ್ಳಬೇಕಿದೆ. ಜನಸಮುದಾಯಗಳ ನಡುವೆ ಪ್ರತ್ಯೇಕತೆಯ ಗೋಡೆಗಳನ್ನು ಬೇಲಿಗಳನ್ನು ನಿರ್ಮಿಸಿ “ನಮ್ಮವರಲ್ಲದವರನ್ನು” ಗುರುತಿಸುವ ಮೂಲಕ ಶೋಷಿತ ಜನತೆಯ ನಡುವೆಯೂ ದ್ವೇಷಾಸೂಯೆಗಳ ಬೇಲಿಗಳನ್ನು ಸೃಷ್ಟಿಸುವ ಒಂದು ರಾಜಕೀಯ-ಸಾಂಸ್ಕೃತಿಕ-ಬೌದ್ಧಿಕ ಪ್ರಕ್ರಿಯೆಯ ಭಾಗವಾಗಿ ಯುದ್ಧೋನ್ಮಾದವನ್ನೂ ಪರಿಭಾವಿಸಬೇಕಿದೆ. ಹಾಗಾಗಿಯೇ ಇತ್ತೀಚಿನ ದಿನಗಳಲ್ಲಿ ಪ್ರಜಾಪ್ರಭುತ್ವ ದೇಶಗಳೂ ಸಹ ಸರ್ವಾಧಿಕಾರದ ಮಾರ್ಗಗಳನ್ನು ಅನುಸರಿಸುವ ಮೂಲಕ ಜನಸಾಮಾನ್ಯರಲ್ಲಿ ಯುದ್ಧೋನ್ಮಾದವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿವೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂಬ ಹೆಗ್ಗಳಿಕೆ ಇರುವ ಭಾರತವೂ ಹೊರತಾಗಿಲ್ಲ.

ಈ ಹಿನ್ನೆಲೆಯಲ್ಲಿ ನೋಡಿದಾಗ, ಉಕ್ರೇನ್ ಮತ್ತು ರಷ್ಯಾ ನಡುವೆ ಉಲ್ಬಣಿಸಿರುವ ಯುದ್ಧೋನ್ಮಾದಕ್ಕಿಂತಲೂ ಆಂತರಿಕವಾಗಿ ಭಾರತದಲ್ಲಿ ಸೃಷ್ಟಿಸಲಾಗಿರುವ ಆತಂಕಕಾರಿ ವಾತಾವರಣ ಇಂದು ನಮ್ಮನ್ನು ಜಾಗೃತಗೊಳಿಸಬೇಕಿದೆ. ಸುಲಭ ಪರಿಹಾರ ಕಾಣಬಹುದಾದಂತಹ ಹಿಜಾಬ್ ವಿವಾದದ ಹಿನ್ನೆಲೆಯಲ್ಲೂ ನಾವು ಹಿಂದೂ ಮತಾಂಧರ ಯುದ್ಧೋನ್ಮಾದವನ್ನು ಕಾಣುತ್ತಿದ್ದೇವೆ. ಯುದ್ಧಭೀತಿಯಿಂದ ತಮ್ಮ ಸುರಕ್ಷತೆಗಾಗಿ ಭಾರತಕ್ಕೆ ಹಿಂದಿರುಗಲು ಸಿದ್ಧವಾಗಿರುವ ಸಾವಿರಾರು ವಿದ್ಯಾರ್ಥಿಗಳಲ್ಲಿ ಯುದ್ಧೋನ್ಮಾದವನ್ನು ವಿರೋಧಿಸುವ ಧೋರಣೆಯನ್ನು ನಿರೀಕ್ಷಿಸಲು ಸಾಧ್ಯವೇ ? ಈ ಯುವ ಪೀಳಿಗೆ ಪ್ರತಿನಿಧಿಸುವ ಭಾರತದ ಮಧ್ಯಮ ವರ್ಗಗಳು ಮತ್ತು ಹಿತವಲಯದ ಜನತೆ ಆಳುವ ವರ್ಗಗಳ ಯುದ್ಧಪರಂಪರೆಯನ್ನು ಪೋಷಿಸಿಕೊಂಡೇ ಬಂದಿವೆ. ಒಂದು ವೇಳೆ ಪಾಕಿಸ್ತಾನದೊಡನೆ ಸಂಘರ್ಷ ಏರ್ಪಟ್ಟರೆ ಇದೇ ವರ್ಗವೇ ಯುದ್ಧವನ್ನು ಸಂಭ್ರಮಿಸುತ್ತವೆ, ವೈಭವೀಕರಿಸುತ್ತವೆ. ಭಾರತದ ಬಹುತೇಕ ಮಾಧ್ಯಮಗಳು ಈ ವರ್ಗವನ್ನೇ ಪ್ರತಿನಿಧಿಸುತ್ತವೆ.

ಯುದ್ಧ ವಿರೋಧಿ ಧೋರಣೆಯನ್ನು ಸಾಪೇಕ್ಷ ನೆಲೆಯಲ್ಲಿ ವ್ಯಾಖ್ಯಾನಿಸುವ ಒಂದು ಪರಂಪರೆಯನ್ನೂ ಇವತ್ತಿನ ಸಂದರ್ಭದಲ್ಲಿ ಗಮನಿಸಬೇಕಿದೆ. ರಷ್ಯಾದಲ್ಲಿ ಸಾವಿರಾರು ಜನರು ಪುಟಿನ್ ಸರ್ಕಾರದ ಯುದ್ಧನೀತಿಯನ್ನು ವಿರೋಧಿಸುತ್ತಿದ್ದಾರೆ. ಕಾರ್ಗಿಲ್ ಸಂಘರ್ಷದ ಸಂದರ್ಭದಲ್ಲೂ, 1971ರ ಭಾರತ ಪಾಕ್ ಯುದ್ಧದ ಸಂದರ್ಭದಲ್ಲೂ ಭಾರತದಲ್ಲೂ ಸಹ ಇದೇ ರೀತಿಯ “ ಯುದ್ಧ ಬೇಡ ಶಾಂತಿ ಬೇಕು ” ಎಂಬ ಸಂದೇಶ ಮೊಳಗಿತ್ತು. ಈಗಲೂ ಸಹ ಯಾವುದೇ ಸಂಭಾವ್ಯ ಯುದ್ಧದ ಸಂದರ್ಭದಲ್ಲೂ ಭಾರತದಲ್ಲಿ ಈ ಧ್ವನಿಗಳು ಮೊಳಗುತ್ತವೆ. ಆದರೆ ಯುದ್ಧೋನ್ಮಾದಕ್ಕೆ ಸಿಲುಕಿರುವ ಸಮಾಜ ಇಂತಹ ದನಿಗಳನ್ನು “ದೇಶದ್ರೋಹಿ” ಎಂದು ಭಾವಿಸುತ್ತದೆ. ಇಲ್ಲಿ ಯುದ್ಧಗಳಿಂದ ಉಂಟಾಗುವ ಜೀವಹಾನಿ ಮತ್ತು ಪರಿಸರ ವಿನಾಶಕ್ಕಿಂತಲೂ ಭೌಗೋಳಿಕ ಅಸ್ಮಿತೆ ಮತ್ತು ಅಸ್ತಿತ್ವದ ಪ್ರಶ್ನೆಗಳು ಮುನ್ನೆಲೆಗೆ ಬರುತ್ತವೆ. “ನಮ್ಮ ದೇಶ”ದ ರಕ್ಷಣೆಗಾಗಿ ಯುದ್ಧ ಅನಿವಾರ್ಯ ಎನ್ನುವ ಮನಸುಗಳು ಸಂಕುಚಿತ ರಾಷ್ಟ್ರೀಯತೆಯ ಸಮ್ಮೋಹನಕ್ಕೊಳಗಾಗುವುದರಿಂದ , ವಿವೇಕ ಮತ್ತು ವಿವೇಚನೆಯನ್ನು ಕಳೆದುಕೊಂಡಿರುತ್ತವೆ.

ಭಾರತದ ಪ್ರಸ್ತುತ ಸನ್ನಿವೇಶವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಈ ಅಸ್ಮಿತೆ ಮತ್ತು ಅಸ್ತಿತ್ವದ ಸಂಘರ್ಷಗಳು ಆಂತರಿಕವಾಗಿಯೇ ಯುದ್ಧೋನ್ಮಾದದ ಅಲೆಗಳನ್ನು ಸೃಷ್ಟಿಸಿರುವುದು ಸ್ಪಷ್ಟವಾಗುತ್ತದೆ. ಯಾವುದೇ ದೇಶವಾಗಿರಲಿ, ಯಾವುದೇ ಜನಾಂಗವಾಗಿರಲಿ, ಯುದ್ಧದ ಮೂಲ ಇರುವುದು ಮನುಜ ದ್ವೇಷದಲ್ಲಿ ಮತ್ತು ಮತ್ತೊಬ್ಬರ ಮೇಲೆ ತನ್ನ ಯಜಮಾನಿಕೆ ಸಾಧಿಸುವ ಮೇಲರಿಮೆಯ ಅಹಮಿಕೆಯಲ್ಲಿ. ಈ ಶ್ರೇಷ್ಠತೆಯ ಮೇಲರಿಮೆ ಮತ್ತು ಅಧಿಕಾರ ಪಾರಮ್ಯದ ಹಪಹಪಿಯೇ ಇಡೀ ಜನಸಮುದಾಯಗಳನ್ನು ಶಸ್ತ್ರಧಾರಿಗಳಾಗಲು ಪ್ರಚೋದಿಸುತ್ತದೆ. “ತಮ್ಮವರಲ್ಲದವರನ್ನು” ನಿರ್ಮೂಲ ಮಾಡುವ ಉನ್ಮತ್ತ ಮನೋಭಾವವನ್ನು ಸಾಮಾನ್ಯ ಜನತೆಯಲ್ಲೂ ಉದ್ಧೀಪನಗೊಳಿಸುವ ಮೂಲಕ ಆಳುವ ವರ್ಗವು ತನ್ನ ಭೂ ವಿಸ್ತರಣಾವಾದಕ್ಕೆ, ಸಾಮ್ರಾಜ್ಯಶಾಹಿ ಧೋರಣೆಯನ್ನು ಸಮರ್ಥಿಸಲು ರಾಷ್ಟ್ರೀಯತೆಯ ಆಸರೆ ಪಡೆಯುತ್ತದೆ. ಇತ್ತೀಚೆಗೆ ಹರಿದ್ವಾರದಲ್ಲಿ ನಡೆದ ಹಿಂದೂ ಸಂತರ ಧರ್ಮ ಸಂಸತ್ತಿನಲ್ಲಿ “ ಮುಸ್ಲಿಮರ ಹತ್ಯಾಕಾಂಡಕ್ಕೆ ” ಕರೆ ನೀಡಿರುವುದು ಈ ಧೋರಣೆಯನ್ನೇ ಬಿಂಬಿಸುತ್ತದೆ.

What is ISIS? What you need to know about Islamic State in Iraq and Syria

ಮತ್ತೊಂದೆಡೆ ಭಾರತದಲ್ಲಿ ಮತ್ತು ಜಾಗತಿಕ ಮಟ್ಟದಲ್ಲೂ ಸಹ ಮುಸ್ಲಿಂ ಮತಾಂಧ ಸಂಘಟನೆಗಳು ಇದೇ ರೀತಿಯ ಯುದ್ಧೋನ್ಮಾದವನ್ನು ಪೋಷಿಸುತ್ತಿವೆ. ಇಸ್ಲಾಂ ದ್ವೇಷ ಒಂದು ಜಾಗತಿಕ ವಿದ್ಯಮಾನವಾಗಿ ರೂಪುಗೊಳ್ಳುತ್ತಿದ್ದು, ಯಾವುದೇ ಮುಸ್ಲಿಂ ರಾಷ್ಟ್ರದ ಮೇಲೆ ನಡೆಯುವ ದಾಳಿಯನ್ನು ಸಮರ್ಥಿಸುವ ಒಂದು ಮನೋಭಾವವನ್ನು ಸಮಾಜದಲ್ಲಿ ಸೃಷ್ಟಿಸಲಾಗುತ್ತಿದೆ. ಅಂತರಿಕವಾಗಿ ಗಮನಿಸಿದಾಗ, ಸಾಂವಿಧಾನಿಕ ನೆಲೆಯಲ್ಲಿ ಪರಿಹರಿಸಿಕೊಳ್ಳಬಹುದಾದ ಸಮಸ್ಯೆಗಳನ್ನು ಮತ ಧರ್ಮಗಳ ನೆಲೆಯಲ್ಲಿ ಬಗೆಹರಿಸಲೆತ್ನಿಸಿದಾಗ ಸಹಜವಾಗಿಯೇ ಈ ಸಾಂಸ್ಕೃತಿಕ ಗೋಡೆಗಳು, ವೈರುಧ್ಯಗಳು ಬಲವಾಗುತ್ತವೆ. ಈ ಪ್ರಯತ್ನಗಳು ಮತೀಯವಾದ ಮತ್ತು ಮತಾಂಧತೆಯನ್ನು ಪೋಷಿಸುವ ಮೂಲಕ ಅಲ್ಪಸಂಖ್ಯಾತ ಯುವ ಸಮುದಾಯದಲ್ಲೂ ಯುದ್ಧೋನ್ಮಾದದ ಭಾವನೆಗಳನ್ನು ಉದ್ಧೀಪನಗೊಳಿಸಲಾಗುತ್ತದೆ. ಭಾರತದ ಸಂದರ್ಭದಲ್ಲಿ ಈ ಅಪಾಯವನ್ನು ನಾವು ನಿರ್ಲಕ್ಷಿಸಲಾಗುವುದಿಲ್ಲ. ಭಯೋತ್ಪಾದನೆ ಮತ್ತು ಇಸ್ಲಾಂ ದ್ವೇಷದ ಬಗ್ಗೆ ಪ್ರಭುತ್ವದ, ಆಳುವ ವರ್ಗದ ವ್ಯಾಖ್ಯಾನವನ್ನು ಒಪ್ಪಿಕೊಳ್ಳಬೇಕೆಂದಿಲ್ಲ. ಹಾಗೆಂದ ಮಾತ್ರಕ್ಕೆ ಭಾರತದಲ್ಲಿ ಭಯೋತ್ಪಾದಕ ಶಕ್ತಿಗಳು ಮುಸ್ಲಿಂ ಯುವಕರಲ್ಲಿ ಸಮರೋತ್ಸಾಹವನ್ನು ಹೆಚ್ಚಿಸುತ್ತಿರುವ ವಾಸ್ತವವನ್ನು ಅಲ್ಲಗಳೆಯಲಾಗುವುದಿಲ್ಲ. ಹಿಂದುತ್ವ ದಾಳಿಯಿಂದ ಸುರಕ್ಷಿತವಾಗಿರಲು ಮುಸ್ಲಿಂ ಸಮುದಾಯ ಸೆಕ್ಯುಲರ್ ನೆಲೆಗಳನ್ನಾಶ್ರಯಿಸುವುದಕ್ಕಿಂತಲೂ ತಮ್ಮದೇ ಮತೀಯ ನೆಲೆಗಳನ್ನಾಶ್ರಯಿಸಲು ಬಯಸುತ್ತಿರುವುದನ್ನೂ ಗಂಭೀರವಾಗಿ ವಿಶ್ಲೇಷಣೆಗೊಳಪಡಿಸಬೇಕಿದೆ.

INDIA Indian democracy at risk from Hindu-Muslim violence
हिंसाचाराविरोधात डाव्या संघटनांनी मोर्चा काढणे हास्यास्पद का आहे - वाचा

ಕರ್ನಾಟಕದ ಕರಾವಳಿಯಲ್ಲಿ, ಕೇರಳ ಮತ್ತು ಪಶ್ಚಿಮ ಬಂಗಾಲದಲ್ಲಿ, ಈಶಾನ್ಯ ರಾಜ್ಯಗಳಲ್ಲಿ ನಡೆಯುತ್ತಿರುವ ಮತೀಯ ದಾಳಿ ಮತ್ತು ಪ್ರತಿದಾಳಿಗಳನ್ನು ಗಮನಿಸಿದಾಗ ಈ ಆತಂಕಗಳು ಎದುರಾಗದಿರುವುದಿಲ್ಲ. ಈ ಮತೀಯ ಗಲಭೆಗಳಲ್ಲಿ ಹೆಚ್ಚು ಹೆಚ್ಚಾಗಿ ಯುವ ಪೀಳಿಗೆಯೇ ಬಲಿಯಾಗುತ್ತಿರುವುದನ್ನೂ ಗಂಭೀರವಾಗಿ ಪರಿಗಣಿಸಬೇಕಿದೆ. ಇತ್ತೀಚೆಗೆ ಕರ್ನಾಟಕದ ನರಗುಂದದಲ್ಲಿ ಸಮೀರ್ ಮತ್ತು ಶಿವಮೊಗ್ಗದಲ್ಲಿ ಹರ್ಷ ಎಂಬ ಯುವಕರ ಹತ್ಯೆಯಾಗಿರುವುದು ವೈಯಕ್ತಿಕ ಕಾರಣಗಳಿಗಾಗಿದ್ದರೂ ಇದರ ಈ ಹಂತಕ ಪ್ರವೃತ್ತಿಯ ಹಿಂದೆ ಅಡಗಿರುವ ಸೂಕ್ಷ್ಮ ಯುದ್ಧೋನ್ಮಾದವನ್ನು ನಾವು ನಿರ್ಲಕ್ಷಿಸಲಾಗುವುದಿಲ್ಲ. ಹಿಂದೂ ಮತಾಂಧ ಸಂಘಟನೆಗಳು ಮುಕ್ತವಾಗಿಯೇ, ಯಾವುದೇ ಶಿಕ್ಷೆಯ ಭೀತಿಯಿಲ್ಲದೆ ಕೊಚ್ಚಿ ಹಾಕುವ, ಮಾರಣ ಹೋಮ ಮಾಡುವ, ಹತ್ಯಾಕಾಂಡ ನಡೆಸುವ ಘೋಷಣೆಗಳಿಗೆ ಮೊರೆಹೋಗುತ್ತಿವೆ. ಈ ಮತಾಂಧತೆ ಮತ್ತು ಹಿಂಸಾತ್ಮಕ ಪ್ರವೃತ್ತಿಯನ್ನು ಪೋಷಿಸಲೆಂದೇ ಯುವ ಪೀಳಿಗೆಗೆ ಕತ್ತಿ, ತಲವಾರು, ಖಡ್ಗಗಳನ್ನು ಸಾರ್ವಜನಿಕವಾಗಿಯೇ ವಿತರಿಸಲಾಗುತ್ತಿದೆ.

ಯುದ್ಧೋನ್ಮಾದದ ವಿರುದ್ಧ ದನಿ ಎತ್ತುವ ಮುನ್ನ ಈ ಬೆಳವಣಿಗೆಗಳನ್ನು ಪ್ರಜ್ಞಾವಂತ ಸಮಾಜ ಸೂಕ್ಷ್ಮವಾಗಿ ಗಮನಿಸಬೇಕಿದೆ. ವ್ಯಕ್ತಿಯ ವಿರುದ್ಧ ಕತ್ತಿ ಝಳಪಿಸುವ ಮನೋಭಾವವೇ ಒಂದು ದೇಶದ ಮೇಲೆ ಬಾಂಬ್ ದಾಳಿ ನಡೆಸುವ ಮನೋವೃತ್ತಿಯನ್ನೂ ಬೆಳೆಸುತ್ತದೆ. ಹಿಂದೂ ಅಥವಾ ಮುಸ್ಲಿಂ ಅಥವಾ ಅಸ್ಪೃಶ್ಯರ ಇಡೀ ಕೇರಿಗಳಿಗೇ ಬೆಂಕಿ ಹಚ್ಚಿ ಧ್ವಂಸ ಮಾಡಲು ಪ್ರಚೋದಿಸುವ ಧೋರಣೆಯೇ ಮತ್ತೊಂದು ದೇಶದ ಮೇಲೆ ಅಣ್ವಸ್ತ್ರ ಪ್ರಯೋಗವನ್ನು ಸಮರ್ಥಿಸುವ ಮನೋಭಾವವನ್ನೂ ಪೋಷಿಸುತ್ತದೆ. ಯುದ್ಧೋನ್ಮಾದದ ಮೂಲವನ್ನು ನಾವು ಇಲ್ಲಿ ಗುರುತಿಸಬೇಕಿದೆ. ಕಳೆದ ಮೂರು ನಾಲ್ಕು ದಶಕಗಳಲ್ಲಿ, ವಿಶೇಷವಾಗಿ ಕಳೆದ ಏಳು ವರ್ಷಗಳಲ್ಲಿ ಭಾರತದಲ್ಲಿ ಉಲ್ಬಣಿಸುತ್ತಿರುವ ಮತಾಂಧತೆ, ಜಾತಿ ದ್ವೇಷ ಮತ್ತು ಮತೀಯವಾದ ಇಂತಹುದೇ ಉನ್ಮಾದಕರ ವಾತಾವರಣವನ್ನು ಸೃಷ್ಟಿಸುತ್ತಿದ್ದು, ಇದು ಯಾವುದೇ ಸಂಭಾವ್ಯ ಯುದ್ಧದ ಸಂದರ್ಭದಲ್ಲಿ ಯುದ್ಧೋನ್ಮಾದದಲ್ಲಿ ಕೊನೆಗೊಳ್ಳುತ್ತದೆ.

ಸಮಾಜದಲ್ಲಿ ಅಂತರ್ ವಾಹಿನಿಯಾಗಿ ಹರಿಯುವ ಅನ್ಯ ಮತದ್ವೇಷ, ಜಾತಿ ದ್ವೇಷ, ಜನಾಂಗೀಯ ದ್ವೇಷ ಮತ್ತು ಇದರ ಸುತ್ತ ಬೆಳೆಯುವ ಸಾಂಸ್ಕೃತಿಕ-ಮತೀಯ ಅಸ್ಮಿತೆಯ ರಾಜಕಾರಣ ಯುದ್ಧೋನ್ಮಾದದ ಮೂಲ ಆಕರಗಳಾಗಿರುತ್ತವೆ. ಒಂದು ನಿರ್ದಿಷ್ಟ ಯುದ್ಧದ ಸಂದರ್ಭದಲ್ಲಿ ಚಿಮ್ಮಿದಂತೆ ಕಾಣುವ ಯುದ್ಧೋನ್ಮಾದದ ಮೂಲ ಸಮಾಜದಲ್ಲಿ ಗುಪ್ತಗಾಮಿನಿಯಾಗಿ ಹರಿಯುವ ಸಮರೋತ್ಸಾಹವೇ ಆಗಿರುತ್ತದೆ. ಹಿರೋಷಿಮಾ ನಾಗಸಾಕಿಯ ಮೇಲೆ ಅಣುಬಾಂಬ್ ಪ್ರಯೋಗಿಸಿದ ಅಮೆರಿಕಕ್ಕೂ, ಕಂಬಾಲಪಲ್ಲಿಯಲ್ಲಿ ಅಮಾಯಕರ ಗುಡಿಸಲುಗಳನ್ನು ಸುಟ್ಟ ಭಾರತ ಸವರ್ಣೀಯರಿಗೂ ವ್ಯತ್ಯಾಸವೇನಾದರೂ ಇರಲು ಸಾಧ್ಯವೇ ? ಎರಡೂ ಸಂದರ್ಭಗಳಲ್ಲಿ ಕಾರ್ಯಗತವಾಗಿದ್ದು ಇದೇ ದ್ವೇಷ, ಅಸೂಯೆ, ಅಮಾನುಷತೆ ಮತ್ತು ಯುದ್ಧೋನ್ಮಾದ.

ಪ್ರಜಾಪ್ರಭುತ್ವದ ಉಳಿವಿಗೆ ಈ ಯುದ್ಧೋನ್ಮಾದದ ಅಳಿವು ಅತ್ಯವಶ್ಯ. ಇದು ಸಾಧ್ಯವಾಗಬೇಕೆಂದರೆ ಪ್ರಜ್ಞಾವಂತ ಸಮಾಜ ಎಲ್ಲ ರೀತಿಯ ಜಾತಿ-ಮತ-ಜನಾಂಗೀಯ ದ್ವೇಷ ಭಾವನೆಗಳನ್ನು ಅಂತ್ಯಗೊಳಿಸಲು ಸಜ್ಜಾಗಬೇಕು. ಎಲ್ಲ ರೀತಿಯ ಮತೀಯವಾದ ಮತ್ತು ಮತಾಂಧತೆಯನ್ನು ಕೊನೆಗೊಳಿಸಬೇಕು. ಸಮನ್ವಯದ ಬದುಕಿಗಾಗಿ ಬೇಕಿರುವುದು ಮಾನವ ಪ್ರೀತಿ ಮಾತ್ರ. ಇದು ಸಾಧ್ಯವಾದರೆ ಯಾವುದೇ ಸಂಘರ್ಷವೂ ನಡೆಯುವುದಿಲ್ಲ. “ನಮ್ಮವರಲ್ಲದವರನ್ನು” ಪ್ರೀತಿಸಲು ಪ್ರಚೋದಿಸುವ ಭ್ರಾತೃತ್ವದ ನೆಲೆಗಳೇ ಯುದ್ಧೋನ್ಮಾದದ ಅಲೆಗಳನ್ನು ಹಿಮ್ಮೆಟ್ಟಿಸಲು ಸಾಧ್ಯ. ಈ ಮಾನವ ಪ್ರೀತಿಯನ್ನು ಪೋಷಿಸುವ ಮೂಲಕವೇ ಒಂದು ಮಾನವೀಯ ಸಮಾಜವನ್ನು ನಿರ್ಮಿಸಲೂ ಸಾಧ್ಯ. ಪ್ರಜಾತಂತ್ರದ ಈ ಆಶಯಗಳೊಂದಿಗೆ ಸಮಾಜದಲ್ಲಿ ನಿಧಾನವಾಗಿ ಬೇರೂರುತ್ತಿರುವ ಯುದ್ಧೋನ್ಮಾದದ ಬೀಜಗಳನ್ನು ಕಿತ್ತೊಗೆಯಲು ಪ್ರಜ್ಞಾವಂತ ಸಮಾಜ ಸಜ್ಜಾಗಬೇಕಿದೆ.