ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸುಡುಗಾಡು ಸಿದ್ಧ ಎಂಬ ಒಂದು ಪಾತ್ರ ಹಾಗೂ ಒಂದು ರಾಜಕೀಯ ಸಭೆಯ ಸುತ್ತ ನಡೆಯುವ ಕಥೆ ಇದು. ‘ಪ್ರಭುತ್ವ ತಲೆಗಳನ್ನು ಮೆಟ್ಟಿ ತನ್ನ ಉದ್ದೇಶ ನೆರವೇರಿಸಿಕೊಳ್ಳುತ್ತದೆ; ಆದರೆ ಉರುಳುವ ತಲೆಗಳು ಯಾರವು...? ವಿಶ್ವಾಸ್ ಭಾರದ್ವಾಜ್ ಬರೆದ ಕಥೆಯನ್ನು.. ಓದಿ ನೋಡಿ...
ವಿಶ್ವಾಸ್ ಭಾರದ್ವಾಜ್
ಇತ್ತೀಚಿನ ಬರಹಗಳು: ವಿಶ್ವಾಸ್ ಭಾರದ್ವಾಜ್ (ಎಲ್ಲವನ್ನು ಓದಿ)

ಸಭೆಯಲ್ಲಿದ್ದವರೆಲ್ಲಾ ಒಂದು ಕ್ಷಣ ಗೊಂದಲಕ್ಕೀಡಾದವರಂತೆ ತಮ್ಮತಮ್ಮಲ್ಲಿ ಗುಸುಗುಸು ಎಂದುಕೊಂಡರು. ಈಗ ಸುತ್ತುತ್ತಿದ್ದ ತಲೆ ಒಂದು ಹಂತಕ್ಕೆ ಬಂದಿದೆ, ಈಗ ಮನೆಗೆ ಹೋಗಬೇಕು ಎಂದು ಮೇಲೆದ್ದ ಸಿದ್ದನಿಗೆ, ಮತ್ತೆಲ್ಲಿ ಮಾಸ್ತರು ಎದುರು ಸಿಕ್ಕು ಬಯ್ಯುತ್ತಾರೇನೋ ಎಂದು ತಿರುಗಿ ಕುಕ್ಕರಗಾಲಿನಲ್ಲಿ ಕುಳಿತು ಮಾಸ್ತರ್ ಎತ್ತ ಕಡೆ ಹೋದರೆಂದು ಅಡಗಿಕೊಂಡೇ ಅತ್ತ ಇತ್ತ ತಿರುಗಿ ಹಣುಕಿದ.

ವಿಪ್ಲವ ಕಥೆಯಿಂದ…

ಗುಪ್ಪೆಬಿದ್ದಿದ್ದ ಕಂಬಳಿಯನ್ನೆತ್ತಿ ಧೂಳು ಕೊಡವಿ ಹೆಗಲಿಗೆ ಹಾಕಿಕೊಂಡು, ಹೆಣಕ್ಕೆ ಒಣ ಪುಳ್ಳಿಗಳ ಒಟ್ಟುವ ತನಗಿಂತ ಒಂದಾಳು ಉದ್ದದ ಕೋಲನ್ನು ಆಧಾರವಾಗಿಸಿಕೊಂಡು ಮೇಲೆದ್ದ ಸಿದ್ಧ, ಮನೆಯಲ್ಲಿ ಕೆಂಚಿ ಬಾಯಿಂದ ಉದುರಬಹುದಾದ ನುಡಿಮುತ್ತುಗಳ ನೆನೆಸಿಕೊಂಡು ಪಟಪಟನೆ ತಲೆ ಕೊಡವಿದ. ರಾತ್ರಿ 11ರವರೆಗೆ ಉರಿದ ಚಿತೆಯ, ಹೊಗೆ, ಕಿಡಿ, ಬೂದಿಗಳೆಲ್ಲಾ ಕಣ್ಣೊಳಗೆ ಹೊಕ್ಕು ಉರಿವ ಚಿತೆಯಂತೆ ಕಣ್ಣುಗಳೂ ಉರಿದು, ಯಾರೋ ಸತ್ತವರ ಕಡೆಯ ಪುಣ್ಯಾತ್ಮ ಕೊಟ್ಟ 50 ರೂಪಾಯಿ ಹಳೆಯ ನೋಟಿನಿಂದ 4 ಸೇಂದಿ ಬಾಟಲಿ ತಂದು ಗಂಟಲಿಗೆ ಸುರುವಿಕೊಂಡಿದ್ದಷ್ಟು ದಿಟವಾಗಿ ನೆನಪಿದೆ. ಮೂರುದಿನದ ಸರಕದು; ಯಾವ ಮಾಯೆಯ ಮುಸುಕು ಅಡರಿತ್ತೋ ಒಂದೇ ಸಲಕ್ಕೆ ಖಾಲಿ ಮಾಡಿದ್ದ. ಸದ್ಯಕ್ಕೆ ಊರಲ್ಲಿ ಸಾಯೋರು ಯಾರಿಲ್ಲ. ಯಾರಾದರೂ ಸಾಯದಿದ್ದರೆ ತನಗೆ ಸೇಂದಿ ಸಿಕ್ಕಲ್ಲ. ಅಲ್ಲಿಲ್ಲ ಕೂಲಿ ನಾಲಿ ಮಾಡುವ, ಅವರಿವರ ಮನೆಯಲ್ಲಿ ಕಸ ಮುಸುರೆ ತಿಕ್ಕುವ ಕೆಂಚಿ ಸೈತ ಸೇಂದಿಗೆ ಕಾಸು ಕೊಡೋದಿಲ್ಲ. ಅವತ್ಯಾಕೋ ಅವನಿಗೆ ತಾನಿನ್ನು ಮತ್ತೆ ಯಾವತ್ತೂ ಸೇಂದಿ ಕುಡಿಯಾರೆನೇನೋ ಎಂದು ಬಲವಾಗಿ ಅನ್ನಿಸಿತು.

ಅವನು ಹಿಂದಿನ ರಾತ್ರಿ ಮನೆಗೆ ಹೋಗಿರಲಿಲ್ಲ. ಪಟ್ಟೇಗಾರರ ದೊಡ್ಡ ಮನೆಯ 90ರ ಹಿರಿಯ ಪರಂಧಾಮ ಸೇರಿಕೊಂಡಿದ್ದ. ಅವನ ದಡೂತಿ ಹೆಣವ ಹೆಣಗಾಡಿ ಸುಟ್ಟು ಮುಗಿಸುವ ಹೊತ್ತಿಗಾಗಲೆ ಹೊತ್ತು ಮೀರಿತ್ತು; ಚಂದ್ರನೂ ನೆತ್ತಿಗೇರಿದ್ದ. ತೀರಾ ಕೊಬ್ಬಿದ ದೇಹಗಳು ಒಮ್ಮೊಮ್ಮೆ ನೆಣ ಸುರಿಸಿ ಚಿಟಪಟ ಉರಿದು ಬಿಡುತ್ತವೆ, ಆದರೆ ಸ್ಥೂಲಕಾಯದವನು ನಾರು ಮೈಯವನಾದರೆ ಅಗ್ನಿ ತನುವೊಳಗೆ ತನ್ನ ಕೇಸರ ನಾಲಿಗೆ ಚಾಚಲು ತಕರಾರು ಮಾಡುತ್ತದೆ. ಆಗೆಲ್ಲಾ ಸುಡುಗಾಡು ಸಿದ್ಧ, ಅವನಿಂತ ಮೂರಡಿ ಉದ್ದವಿರುವ ಬಿದಿರು ಗಳವನ್ನು ಚಿತೆಯೊಳಗೆ ತೂರಿಸಿ ಬೆಂಕಿ ಅತ್ತಿತ್ತಾಗದಂತೆ ನೋಡಿಕೊಳ್ಳುತ್ತಾನೆ. ನಿನ್ನೆ ಅವನು ಬಳಲಿದ್ದೂ ಹೀಗಾಗೆ. ನಾಲ್ಕು ಬಾಟಲಿ ಬೈನೇ ಮರದ ಕಳ್ಳು ಸೇಂದಿ ಖಾಲಿಯಾಗಿದ್ದು ಆ ಬಳಲಿಕೆಗೆ.
ಮೇಲೆ ಏಳಲಾಗದವನಂತೆ ಕೂತವನು ತೂರಾಡುತ್ತಲೇ ಮೇಲೆದ್ದವನೇ, ತಲೆ ಎತ್ತಿ ನೆತ್ತಿಗೇರಿದ ಸೂರ್ಯನನ್ನು ಒಮ್ಮೆ ಕೆಕ್ಕರಿಸಿ ನೋಡಲು ಯತ್ನಿಸಿ ಸೋತು, ಉರಿದು ಬೂದಿಯಾದ ಚಿತೆಯನ್ನೊಮ್ಮೆ ನೋಡಿದ. ರಾತ್ರಿಯ ನಶೆ ಹೆಜ್ಜೆಯ ತಾಳತಪ್ಪಿಸುತ್ತಿತ್ತು. ಈ ಸ್ಥಿತಿಯಲ್ಲಿ ಮನೆಗೆ ಹೋದರೆ ಕೆಂಚಿ ಮತ್ತೆ ಮಸಣಕ್ಕೆ ಕಳಿಸ್ತಾಳೆ ಎಂದುಕೊಂಡವನೇ ಕಂಚಿನಹೊಳೆದಲ್ಲಿ ಮುಳುಗೇಳಲು ನಡೆದ. ವರ್ಷವಿಡೀ ತುಂಬಿ ಹರಿಯುವ ಕಂಚಿನ ಹಳ್ಳದಲ್ಲಿ ಮೀನುಗಳು ಪುಟಿದೇಳುತ್ತಿದ್ದವು. ಅವನು ಹುಟ್ಟಿದಾಗಿನಿಂದಲೂ ಕಂಚಿನ ಹೊಳೆ ಹಾಗೇ ಇದೆ. ಅದರ ಪಾಡಿಗೆ ಅದು ತಣ್ಣಗೆ ಹರಿಯುತ್ತದೆ. ವರ್ಷದ ಸದಾಕಾಲ ಮೈತುಂಬಾ ಜಲರಾಶಿ ತುಂಬಿಕೊಂಡು ವಯ್ಯಾರದಿಂದ ನಿಶ್ಯಬ್ದದಿಂದ ಹರಿವ ಆ ಸ್ನಿಗ್ಧ ಸುಂದರಿ ಸಿದ್ದನಿಗೆ ಯಾವತ್ತೂ ಆಪ್ತ. ಸುಡುಗಾಡಿನ ವೈರಾಗ್ಯವನ್ನು ಕಡಿಮೆ ಮಾಡಿ ಅವನೊಳಗೆ ಜೀವನಪ್ರೀತಿಯ ಅಮೃತಧಾರೆ ಹರಿಸುವ ಚೆಲುವೆ ಆ ನೀರರಾಣಿ. ಸಿದ್ದನ ಪಾಲಿಗಿರುವುದು ಎರಡೇ ಗಮ್ಯಗಳು, ಒಂದು ಅವನ ಕರ್ಮಭೂಮಿ ಮಸಣ ಇನ್ನೊಂದು ಅವನ ಪಾಲಿನ ಪವಿತ್ರತಾಣ ಕಂಚಿನ ಹೊಳೆಯ ದಿಣ್ಣೆ. ಅವನ ಬದುಕಿನೊಂದಿಗೆ ಕಂಚಿನ ಹೊಳೆ ಹಾಸುಹೊಕ್ಕಾಗಿದೆ. ಅದರ ಹೊರತು ಅವನಿಗೊಂದು ಅಸ್ಥಿತ್ವವೇ ಇಲ್ಲವೆನ್ನುವಷ್ಟು ಬೆಸೆದುಕೊಂಡಿದೆ. ಕಂಚಿನ ಹೊಳೆಯ ಪರಿಸರದ ಎಲ್ಲಾ ಜೈವಿಕ ಅಜೈವಿಕ, ಸ್ಥಿರ ಚರ ಸಂಗತಿಗಳು ಅವನ ಬದುಕಿನ ಅವಿಭಾಜ್ಯ ಪಾತ್ರಗಳೇ ಆಗಿವೆ. ಹೊಳೆಯಲ್ಲಿ ಚಿಮ್ಮುವ ಹತ್ಮೀನುಗಳಿಂದ ನೀರು ಕುಡಿಯಲು ಬರುವ ಕಾಟಿ, ಸಾರಂಗಗಳ ತನಕ ಎಲ್ಲವೂ ಅವನ ಬಾಳಿನ ಭಾಗಗಳೇ. ಅದೆಷ್ಟೋ ಹೊತ್ತು ಮೀಯಲು ಮರೆತು ಹಳ್ಳದ ನೀರನ್ನೇ ನೋಡುತ್ತಿದ್ದವನಿಗೆ, ಊರ ಕಡೆಯಿಂದ ಮೈಕಿನಲ್ಲಿ ಯಾರದ್ದೋ ಭಾಷಣದ ಸದ್ದನ್ನು ಆಕಡೆಯಿಂದ ಬೀಸಿ ಬಂದ ಗಾಳಿ ಹೊತ್ತು ತಂದು ಕಿವಿಯೊಳಗೆ ತುರುಕಿದಂತಾಗಿ, ಅನಿಯಂತ್ರಿತನಾಗಿ ಊರ ಕಡೆಗೆ ಹೆಜ್ಜೆಯಿಟ್ಟ.

ಊರಿನ ಬಯಲು ರಂಗಮಂಚದಲ್ಲಿ ಯಾವುದೋ ಸಭೆ ನಡೆಯುತ್ತಿತ್ತು. ಸಿದ್ದನಿಗೆ ಮೈಕು ಸೆಟ್ಟಿನಲ್ಲಿ ಯಾರಾದರೂ ಮಾತಾಡುವುದು ನೋಡುವುದೆಂದರೆ ಇನ್ನಿಲ್ಲದ ಆಸಕ್ತಿ. ಮೈಕುಸೆಟ್ಟು ಎನ್ನುವುದು ಭೂಮಿಗೆ ಭಗವಂತ ದಯಪಾಲಿಸಿದ ವಿಶೇಷ ಯಂತ್ರ ಎಂದೇ ಅವನು ನಂಬಿಕೊಂಡಿದ್ದಾನೆ. ಊರಿಗೆ ಯಾರೇ ಬಂದು ಮೈಕುಸೆಟ್ಟಿನಲ್ಲಿ ಮಾತಾಡಿದರೂ ಅಲ್ಲಿಗೆ ಹಾಜರಾಗುವ ಸಿದ್ದ ಬಿಟ್ಟಗಣ್ಣಿನಿಂದ ನೋಡುತ್ತಾ ಕುಳಿತುಬಿಡುತ್ತಾನೆ. ಮಾತಾಡುವವರನ್ನಲ್ಲ; ಮೈಕನ್ನು ಮತ್ತು ಗಂಟೆಯಾಕಾರದ ನೀಲಿ ಬಣ್ಣದ ಅದರ ಘೋಷಕವನ್ನು. ಊರಲ್ಲಿ ನಾಟಕ, ಚತುರ್ಥಿ ಹಬ್ಬ, ಮದುವೆ ಮುಂತಾದ ಕಡೆ ಮೈಕು ಹಾಕಿದ್ದರೆ ಅಲ್ಲಿಗೆ ಸಿದ್ದ ಹಾಜರಿದೇ ಇರುತ್ತಾನೆ ಎನ್ನುವುದು ಖಾತ್ರಿ. ಸುಡುಗಾಡು ಸಿದ್ದನಿಗೆ ಮೈಕು ಸಿದ್ದ ಅನ್ನುವ ಹೆಸರು ಈ ಕಾರಣದಿಂದಲೇ ಬಿದ್ದಿದೆ.

ಖಾದಿಯ ಬಟ್ಟೆ ಮತ್ತು ಬ್ಯಾಗು ಧರಿಸಿದ್ದ ಗಡ್ಡದಾರಿಯೊಬ್ಬ ರೋಷಾವೇಶದಿಂದ ಅಬ್ಬರಿಸಿ ಮಾತಾಡುತ್ತಿದ್ದ. ಮತ್ತೊಂದಷ್ಟು ಜನ ಕೆಳಗೆ ನಿಂತು ಕರಪತ್ರಗಳನ್ನು ಹಂಚುತ್ತಿದ್ದರು. ದೂರದಲ್ಲಿ ನಿಂತು, ಅರೆಬರೆ ತೆರೆದ ಕಣ್ಣಿನಲ್ಲಿ ವೇದಿಕೆಯತ್ತ ನೋಡಿದ ಸಿದ್ದನಿಗೆ ಮನೆಗೆ ಹೋಗಬೇಕು, ಕೆಂಚಿ ರಾತ್ರಿಯಿಂದ ಉಣ್ಣದೇ ಕಾಯುತ್ತಿರುತ್ತಾಳೆ ಎನ್ನುವ ನೆನಪಾಗಿ ಮನೆಯತ್ತ ಹೆಜ್ಜೆಹಾಕಲು ಹೊರಟ. ಸಾಮಾನ್ಯವಾಗಿ ಮೈಕು ಕಂಡರೆ ಜಗತ್ತನ್ನೇ ಮರೆಯುವ ಸಿದ್ದನನ್ನು ಈ ದಿನ ಯಾವುದೋ ಶಕ್ತಿ ಜಾಗೃತಗೊಳಿಸಿ ಎಬ್ಬಿಸಿದ್ದೇನೋ ಇತ್ತು. ಆದ್ರೆ ಅಷ್ಟರಲ್ಲಿ ಮತ್ತೊಂದಷ್ಟು ಜನರು ಸಭೆಗೆ ಬರುವವರು ಸಿದ್ದನ ಕೈ ಹಿಡಿದು ಸಭೆ ನಡೆಯುತ್ತಿದ್ದ ಅಂಗಳಕ್ಕೆ ಎಳೆದು ತಂದರು. ಕೆಂಚಿ ಮರೆತು ಮತ್ತೆ ಮೈಕಿನ ಮಾಯಾಜಾಲದಲ್ಲಿ ಬಂಧಿಯಾಗಿ ಕುಳಿತ ಸಿದ್ದ.

“ಈ ಸರ್ಕಾರವನ್ನು ಆಳ್ತಿರೋ ಮೂರ್ಖ ದೊರೆಗಳು ನಮ್ಮ ಕಂಚಿನಹೊಳೆಯನ್ನು ಸರ್ವನಾಶ ಮಾಡೋಕೆ ಹೊಟಿದ್ದಾರೆ, ನಾವಿದನ್ನು ತಡೆಯಬೇಕು ಸಂಗಾತಿಗಳೇ. ಉಗ್ರವಾಗಿ ಪ್ರತಿಭಟಿಸಬೇಕು, ನಮ್ಮ ನೆಲ, ಗಾಳಿ, ಪರಿಸರ, ನೀರು ಸ್ವಚ್ಛವಾಗಿರಬೇಕು ಎಂದರೆ ಈ ಅತ್ಯಾಚಾರಗಳನ್ನು ತಡೆಯಬೇಕು. ಈ ತುಘಲಕ್ ದೊರೆಗಳ ತಿಕ್ಕಲುತನ ಖಂಡಿಸಿ ಸೊಕ್ಕು ಮುರಿಯಬೇಕು..” ಗಡ್ಡದಾರಿ ಏನು ಮಾತಾಡುತ್ತಿದ್ದಾನೆ ಎನ್ನುವ ಒಂದಂಶವೂ ಅರ್ಥವಾಗದೇ ಸಿದ್ದ ತನ್ನ ಮೇಲಂಗಿಯ ಕಿಸೆಯೊಳಗಿದ್ದ ಬೀಡಿ ತೆಗೆದು ಬಾಯಿಗಿಟ್ಟುಕೊಂಡು ಸುತ್ತಮುತ್ತ ನೋಡಿದವನು ಯಾಕೋ ಈಗ ಬೇಡ ಎನ್ನಿಸಿ ವಾಪಾಸ್ ತೆಗೆದು ಕಿವಿಗೆ ಸಿಕ್ಕಿಸಿಕೊಂಡ.
ಬಳಿಕ ಮತ್ತೊಬ್ಬ ಖಾದಿದಾರಿ ಮಾತು ಶುರು ಮಾಡಿದ, “ಕಂಚಿನಹೊಳೆ ವರ್ಷವಿಡೀ ತುಂಬಿ ಹರಿಯುತ್ತೆ. ಮುಂದೆ ನೇತ್ರಾವತಿ ನದಿ ಸೇರತ್ತೆ. ಪರಮೇಶ್ವರಪ್ಪ ಅನ್ನೋ ಎಡಬಿಡಂಗಿ ಕೊಟ್ಟ ವರದಿಯನ್ನು ಈ ಸರ್ಕಾರ ಈಡೇರಿಸೋಕೆ ಹೊರಟಿದೆ. ಕಂಚಿನಹೊಳೆಕ್ಕೆ ಡ್ಯಾಂ ಕಟ್ತಾರಂತೆ. ಆಮೇಲೆ, ನೀರನ್ನು ಬೆಂಗ್ಳೂರಿಗೆ ಒಯ್ತಾರಂತೆ. ನಮ್ಮಪ್ಪನ ಅಜ್ಜನ ಕಾಲದಲ್ಲಿ ಕಂಚಿನಹೊಳೆ ವರ್ಷವಿಡೀ ತುಂಬಿ ಹರೀತಿತ್ತು. ಆದ್ರೆ ಆಗ ನದೀ ತರ ಹರೀತಿತ್ತು ಈಗ ಹಳ್ಳದ ತರ ಹರೀತಿದೆ. ಈ ವ್ಯತ್ಯಾಸಕ್ಕೆ ಕಾರಣ ನಮ್ಮ ಅಭಿವೃದ್ಧಿ ಎನ್ನುವ ಹೆಸರಿನಲ್ಲಿ ಪ್ರಕೃತಿಯ ಮೇಲಾಗುತ್ತಿರುವ ಆಕ್ರಮಣ. ಕಾಡು ನಾಶವಾದರೆ ಜಲಮೂಲಗಳಾದರೂ ಎಲ್ಲಿಂದ ಉಳಿದಾವು? ನಮ್ಮ ಮಕ್ಕಳ ಕಾಲಕ್ಕೆ ಇದರ ನೀರು ಮತ್ತೂ ಕಮ್ಮಿ ಆಗ್ತದೆ. ಅಂತದ್ರಲ್ಲಿ ಈಗ ನಮ್ಮ ಪಾಲಿನ ನೀರನ್ನು ಆ ದೊಡ್ಡ ನಗರಕ್ಕೆ ಕಾರು, ಕಾಂಪೋಂಡ್ ತೊಳಿಯಕ್ಕೆ ತಗೊಂಡು ಹೋಗ್ತಾರಂತೆ. ಕಂಚಿನ ಹಳ್ಳ ಬತ್ತಿ ಹೋದ್ರೆ ಸುತ್ತಮುತ್ತಲಿನ ಹತ್ತು ಹಳ್ಳಿ ಬರಡಾಗುತ್ತೆ. ಡ್ಯಾಂ ಕಟ್ಟಿದ್ರೆ ಇದೇ ಹತ್ತು ಹಳ್ಳಿಗಳು ಮುಳುಗಿಹೋಗುತ್ತೆ, ಕಾಡೂ ನಾಶವಾಗ್ತದೆ. ಇದು ನಮ್ಮ ಜೀವಜಲ, ನಮ್ಮ ಕೃಷಿ, ನಮ್ಮ ಬದುಕಿನ ಆದ್ಯತೆ. ಇದನ್ನು ಕೊಟ್ಟು ಬಾಯಿಗೆ ಮೂರು ಹಿಡಿ ಮಣ್ಣು ಹಾಕ್ಕೋಬೇಕಾ..” ನೆರೆದಿದ್ದ ಸಭಿಕರಲ್ಲಿ ಅರ್ಧದಷ್ಟು ಜನ ಭಾಷಣಕಾರರ ಮಾತುಗಳನ್ನು ಕೇಳ್ತಿದ್ರೆ, ಇನ್ನರ್ಧ ಜನ ಅವರು ಕೊಟ್ಟ ಕರಪತ್ರಗಳನ್ನು ಓದುತ್ತಿದ್ದರು. ಓದು ಬರಹ ಬಾರದ ಸಿದ್ದ ತನಗೂ ಕೊಟ್ಟ ಕರಪತ್ರವನ್ನು ಹಿಂದೆ ಮುಂದೆ ತಿರುಗಿಸಿ ತಲೆ ಕೆರೆದುಕೊಂಡ.

ಅದೇ ವೇಳೆಗೆ ಸರ್ಕಾರಿ ಶಾಲೆಯ ಮಾಸ್ಟರ್ ವೇದಿಕೆ ಹತ್ತಿದ್ರು. ಇಷ್ಟರ ತನಕ ಅಗಂತುಕರ ಮಾತುಗಳನ್ನು ಕೇಳುತ್ತಿದ್ದ ಸಿದ್ದನಿಗೆ ತಮ್ಮೂರಿನ ಮಾಸ್ತರು ವೇದಿಕೆ ಹತ್ತಿದ್ದನ್ನು ಕಂಡು ಖುಷಿಯಿಂದ ಎದ್ದು ಚಪ್ಪಾಳೆ ಬಡಿದು, ಸೀಟಿ ಹಾಕಲು ನಿಂತ. ‘ಸೇಂದಿ ಕುಡಿಯಬೇಡ, ಬೀಡಿ ಸೇದಬೇಡ ಹಾಳಾಗ್ತೀಯಾ! ಆರೋಗ್ಯ ಹಾಳು ಮಡ್ಕೋಬೇಡ’ ಎಂದು ಮಾಸ್ತರ್ ಸಿಕ್ಕಾಗಲೆಲ್ಲಾ ಬಯ್ಯುತ್ತಿದ್ದ ಸಂಗತಿ ನೆನಪಾಗಿ ಪೆಚ್ಚಾಗಿ ಕುಳಿತುಕೊಂಡ.

ಮಾಸ್ತರ್ ತಮ್ಮ ಪರಿಚಯ ಹೇಳಿಕೊಂಡು ಮಾತು ಆರಂಭಿಸಿದ್ರು.. “ಇಷ್ಟೊತ್ತಂಕಾ ನಿಮ್ಮ ಮಾತುಗಳನ್ನು ಕೇಳಿದೆ. ನಿಮ್ಮ ಹೋರಾಟ ತಪ್ಪಲ್ಲ, ಆದ್ರೆ ಕೆಲವು ಸೂಕ್ಷ್ಮ ವಿಚಾರ ನಿಮಗೆ ಹೇಳ್ತೀನಿ ಕೇಳಿ. ನದಿ, ತೊರೆ, ಹಳ್ಳ-ಕೊಳ್ಳಗಳು ರಾಷ್ಟ್ರೀಯ ಸಂಪತ್ತು ಅಂತ ಕೋರ್ಟ್ ಹೇಳಿದೆ. ಒಂದು ನಗರದ ಕುಡಿಯುವ ನೀರಿನ ಉದ್ದೇಶಕ್ಕೆ ನೀರು ಕೊಡಿ ಎಂದರೆ ಕೊಡದೇ ಇರಲಾಗುವುದಿಲ್ಲ. ಆಳುವ ಪ್ರಭುತ್ವ ತೀರ್ಮಾನಿಸಿದರೆ ಅದನ್ನು ಮಾಡಿ ಮುಗಿಸದೇ ಬಿಡುವುದಿಲ್ಲ. ಕಂಚಿನ ಹೊಳೆಯಲ್ಲಿ ವರ್ಷದಲ್ಲಿ 10 ಟಿಎಂಸಿ ನೀರು ಉತ್ಪತ್ತಿಯಾಗಿ ಹರಿದು ನೇತ್ರಾವತಿ ಮಡಿಲು ಸೇರುತ್ತದೆ. ಪರಮೇಶ್ವರಪ್ಪ ಸಮಿತಿ ವರದಿ ಪ್ರಕಾರ 4 ಟಿಎಂಸಿ ನೀರನ್ನು ಬೆಂಗಳೂರಿಗೆ ತರಬಹುದು ಎಂದಿದೆ. ನೀವು ಹೇಳಿದ ಹಾಗೆ 600 ಅಡಿ ಎತ್ತರಕ್ಕೆ ಏರಿಸಬೇಕು ನಿಜ. ಈಗಾಗಲೇ ಈ ರಾಜ್ಯದಲ್ಲಿ ದೇಶದಲ್ಲಿ ಅನುಷ್ಠಾನಗೊಂಡಿರುವ ನೀರಾವರಿ ಯೋಜನೆಗಳು ಹೀಗೇ ಮೊದಲು ವಿರೋಧ ಎದುರಿಸಿಯೇ ಅನುಷ್ಠಾನಗೊಂಡಿವೆ. ಸರ್ಕಾರ ಇದನ್ನು ಕೈಬಿಡುತ್ತೆ ಅಂತ ನನಗನ್ನಿಸೋದಿಲ್ಲ. ಯಾಕೆ ಗೊತ್ತಾ? ನೀವಿಲ್ಲಿ ಸೇರಿಸಿದ್ದೀರಲ್ಲ ಈ ಸುತ್ತಮುತ್ತಲಿನ ಹಳ್ಳಿ ಜನ, ಇವರ ಮಕ್ಕಳು ಮರಿಯೆಲ್ಲಾ ಬೆಂಗಳೂರು ಸೇರಿವೆ. ತಮ್ಮ ಮಕ್ಕಳಿಗೆ ಕುಡಿಯೋಕೆ ನೀರು ಹೋಗುತ್ತೆ ಅನ್ನೋದಾದ್ರೆ ಇವರೆಲ್ಲಾ ಯಾಕೆ ಹೋರಾಟಕ್ಕಿಳಿಯುತ್ತಾರೆ?” ನೆರೆದಿದ್ದ ಸಭಿಕರನ್ನೊಮ್ಮೆ ನೋಡಿದ್ರು ಮಾಸ್ತರ್. ಬಹಳಷ್ಟು ಜನರು ಆ ಮಾತು ತಮಗೆ ಒಪ್ಪಿಗೆಯೆಂಬಂತೆ ಹುಸಿನಗೆ ಸೂಸಿದರು. ಮತ್ತೆ ಮಾತು ಮುಂದುವರೆಸಿದ ಅವರು, “ನಿಮ್ಮ ಉತ್ಸಾಹ ಹಾಳು ಮಾಡೋಕೆ ನಂಗೂ ಮನಸಿಲ್ಲ, ನಿಮ್ಮ ಪರಿಸರ ಪ್ರಜ್ಞೆ ಕಂಡು ನಂಗೂ ಮೆಚ್ಚುಗೆಯಾಗಿದೆ, ಆದ್ರೆ ಒಂದು ಸಲ ಈ ಸುತ್ತಮುತ್ತಲಿನ ಹಳ್ಳಿಗಳ ಪರಿಸ್ಥಿತಿ ನೋಡಿದ್ದೀರಾ? ನೀವು ಈ ಭಾಗದವರಲ್ಲ ಅನ್ನಿಸುತ್ತೆ ಹಾಗಾಗಿ ನಮ್ಮ ಹಳ್ಳಿಗಳ ಪರಿಸ್ಥಿತಿ ನಿಮಗೆ ಗೊತ್ತಿಲ್ಲ. ಇಲ್ಲಿನ ಕೃಷಿ ಭೂಮಿ ನೋಡಿಕೊಳ್ಳೋರಿಲ್ಲದೆ ಪಾಳು ಬೀಳ್ತಿದೆ. ಬೆಳೆದು ನಿಂತ ಮಕ್ಕಳಿಗೆ ಬಿಸಿಲಲ್ಲಿ ಹೊಲದಲ್ಲಿ ಕಷ್ಟ ಪಡೋದು ಬೇಕಿಲ್ಲ. ವಯಸ್ಸಾದ ಅಪ್ಪ ಅಮ್ಮ ಎಷ್ಟು ಅಂತ ಜಮೀನಿನಲ್ಲಿ ಬೆವರು ಹರಿಸ್ತಾರೆ. ಈಗ ಸರ್ಕಾರದವರು ಡ್ಯಾಂ ಕಟ್ಟಿ ಮುಳುಗುವ ಜಮೀನುಗಳಿಗೆ ಎಕರೆಗೆ 3 ಲಕ್ಷ ಪರಿಹಾರ ಕೊಡ್ತೀವಿ ಅಂತಿದ್ದಾರೆ. ಇವರಿಗೂ ಅದೇ ಬೇಕಾಗಿದೆ; ಜಮೀನು ಮಾರಿ ಮಕ್ಕಳೊಂದಿಗೆ ಬೆಂಗಳೂರು ಸೇರಬೇಕು ಎಂದು ಬಟ್ಟೆ ಬರೆ ಬ್ಯಾಗು ಸಿದ್ದಮಾಡಿ ಕೂತಿದ್ದಾರೆ. ಇವರೆನ್ನೆಲ್ಲ ಕಟ್ಟಿಕೊಂಡು ನೀವು ಜನಹೋರಾಟ ಕಟ್ಟಿ ಸರ್ಕಾರನಾ ಹಿಮ್ಮೆಟ್ಟಿಸಲು ಸಾಧ್ಯವೇ? ಯೋಚಿಸಿ ನೋಡಿ. ಆದ್ರೆ ನಿಮ್ಮ ಹೋರಾಟಕ್ಕಂತೂ ನಾನು ಬೆಂಬಲ ಕೊಡುತ್ತೇನೆ. ನಿಮಗೆಲ್ಲಾ ಒಳ್ಳೇದಾಗಲಿ” ಮಾತು ಮುಗಿಸಿದವರೆ ಖಾದಿದಾರಿ ಭಾಷಣಕಾರರಿಗೆ ಕೈಮುಗಿದು ವೇದಿಕೆಯಿಂದಿಳಿದು ಹೊರಟರು.

ಸಭೆಯಲ್ಲಿದ್ದವರೆಲ್ಲಾ ಒಂದು ಕ್ಷಣ ಗೊಂದಲಕ್ಕೀಡಾದವರಂತೆ ತಮ್ಮತಮ್ಮಲ್ಲಿ ಗುಸುಗುಸು ಎಂದುಕೊಂಡರು. ಈಗ ಸುತ್ತುತ್ತಿದ್ದ ತಲೆ ಒಂದು ಹಂತಕ್ಕೆ ಬಂದಿದೆ, ಈಗ ಮನೆಗೆ ಹೋಗಬೇಕು ಎಂದು ಮೇಲೆದ್ದ ಸಿದ್ದನಿಗೆ, ಮತ್ತೆಲ್ಲಿ ಮಾಸ್ತರು ಎದುರು ಸಿಕ್ಕು ಬಯ್ಯುತ್ತಾರೇನೋ ಎಂದು ತಿರುಗಿ ಕುಕ್ಕರಗಾಲಿನಲ್ಲಿ ಕುಳಿತು ಮಾಸ್ತರ್ ಎತ್ತ ಕಡೆ ಹೋದರೆಂದು ಅಡಗಿಕೊಂಡೇ ಅತ್ತ ಇತ್ತ ತಿರುಗಿ ಹಣುಕಿದ.

ಪರಿಸ್ಥಿತಿ ತಮ್ಮ ಕೈ ಮೀರುತ್ತಿದೆ ಎನ್ನುವುದು ಅರ್ಥವಾಗುತ್ತಿದ್ದ ಹಾಗೆ ಆವರೆಗೆ ಮಾತನಾಡದೇ ನಿಂತಿದ್ದ ಇನ್ನೊಬ್ಬ ತರುಣ ಮೈಕನ್ನು ಕೈಗೆತ್ತಿಕೊಂಡು ಸಭೆಯನ್ನು ನೋಡಿ, ಒಮ್ಮೆ ಗಂಟಲು ಸರಿಮಾಡಿಕೊಳ್ಳುವಂತೆ ಕೆಮ್ಮಿದ. ಅವನು ತನ್ನನ್ನೇ ದಿಟ್ಟಿಸಿ ನೋಡುತ್ತಿದ್ದಾನೆ ಎಂದುಕೊಂಡ ಸಿದ್ದ ಒಂದೆರಡು ಬಾರಿ ಹಿಂದೆ ಮುಂದೆ ನೋಡಿಕೊಂಡು, ಹಿಂಜರಿಕೆಯಿಂದ ತಲೆ ತಗ್ಗಿಸಿ ಮತ್ತೆ ನಿಧಾನ ತಲೆಯೆತ್ತಿ ಅವನನ್ನು ಓರೆಗಣ್ಣಿನಿಂದ ನೋಡಿದ. “ಸಂಗಾತಿಗಳೇ, ಈ ಸ್ಕೂಲ್ ಮಾಸ್ಟರ್ ಹೇಳಿದ್ದು ಒಂದರ್ಥದಲ್ಲಿ ನಿಜ. ನೀವು ಇಲ್ಲಿಯವರೆಗೆ ನಿಮ್ಮ ಸ್ವಾರ್ಥವನ್ನು ಮಾತ್ರ ಯೋಚಿಸಿದ್ರಿ, ಸಮಾಜಕ್ಕಾಗಿ ಚಿಂತಿಸಿರಲಿಲ್ಲ. ಈಗ ನಾವು ಸಮಾಜಕ್ಕಾಗಿ, ನಮ್ಮ ಮುಂದಿನ ಪೀಳಿಗೆಗಾಗಿ ಧ್ವನಿಯೆತ್ತುವ ಸಮಯ ಬಂದಿದೆ. ಈಗ ಕೈಕಟ್ಟಿ ಕೂತ್ರೆ ನಮ್ಮ ಮುಂದಿನ ಜನಾಂಗ ನಮ್ಮನ್ನು ಖಂಡಿತಾ ಕ್ಷಮಿಸೋದಿಲ್ಲ. ಈ ಕಾರಣಕ್ಕೆ ನಾವು ಹಳ್ಳಿ ಹಳ್ಳಿಗಳಿಗೆ ಬಂದು ಸಂಘಟನೆ ಮಾಡ್ತಿರೋದು. ನಿಮ್ಮ ಅರಿವನ್ನು ಜಾಗೃತಗೊಳಿಸಿ, ಇಲ್ಲದಿದ್ದರೆ ಈ ಪ್ರಭುತ್ವ ನಮ್ಮ ತಲೆಗಳನ್ನು ತುಳಿದಾದರೂ ತನ್ನ ಉದ್ದೇಶ ಈಡೇರಿಸಿಕೊಳ್ಳತ್ತೆ. ಹೋಗುವ ತಲೆ ಯಾರದ್ದು? ಶಾಂತಿಯಿಂದ ಸಾಧ್ಯವಿಲ್ಲದ್ದನ್ನು ರಕ್ತ ಹರಿಸಿ ಸಾಧ್ಯ ಮಾಡೋಣ. ಕ್ರಾಂತಿ ಚಿರಾಯುವಾಗಲಿ.. ಇನ್‍ಕ್ವಿಲಾಬ್ ಜಿಂದಾಬಾದ್..” ಅವನ ಘೋಷಣೆ ಮೊಳಗುತ್ತಿದ್ದಂತೆ ಪೊಲೀಸ್ ಜೀಪುಗಳು, ವ್ಯಾನ್ ವೇಗವಾಗಿ ಬಂದು ಬಯಲು ಅಂಗಳ ಸುತ್ತುವರೆದು ನಿಂತವು.

ಅಲ್ಲಿಯತನಕ ಇದ್ದ ಶಾಂತಿ ಕದಡಿ ಜನರು ಸಿಕ್ಕಸಿಕ್ಕಲ್ಲಿ ಓಡಿದರು. ವೇದಿಕೆ ಹತ್ತಿದ ಪೊಲೀಸರು ಮೂವರು ಖಾದಿದಾರರನ್ನು ಬಂಧಿಸಿ ಕೆಳಗೆ ಎಳೆದು ತಂದರು. ಅವರು ಮೂವರ ಮುಖದಲ್ಲಿ ಗಾಬರಿ ಆತಂಕಗಳಿದ್ದವು. ಸಿದ್ದ ಕುಳಿತಿದ್ದವನು ಆ ಗಲಭೆಯ ಕಾರಣದಿಂದ ಅದಾಗಲೇ ಎದ್ದು ನಿಂತಿದ್ದ. ಮೂರ್ನಾಲ್ಕು ಜನ ಅವರನ್ನು ತಳ್ಳಿಕೊಂಡು ಓಡಿದ್ದರು. ಕೆಲವರು ಪೋಲೀಸರ ಭಯದಿಂದ ಸುಮ್ಮನೆ ನಡುಗುತ್ತಾ ಬಯಲಿನ ಮಧ್ಯೆದಲ್ಲಿ ನಿಂತು ಅತ್ತಿತ್ತ ನೋಡುತ್ತಿದ್ದರು. ಪೊಲೀಸ್ ಅಧಿಕಾರಿಯೊಬ್ಬ “ಮಹಾಜನಗಳೇ ಯಾರೂ ಗದ್ದಲ ಮಾಡಬೇಡಿ, ಇಲ್ಲಿ ನಿಮ್ಮನ್ನು ಉದ್ದೀಪನೆಗೊಳಿಸಿ ಮಾತಾಡಲು ಬಂದವರು ನಕ್ಸಲ್ ಚಳುವಳಿಯ ನಾಯಕರು. ಸಮಾಜದಲ್ಲಿ ಅಶಾಂತಿ ಉಂಟುಮಡುವುದೇ ಇವರ ಉದ್ದೇಶ. ಯಾರೂ ಹೆದರಬೇಡಿ, ನಾಗರೀಕರಿಗೆ ನಮ್ಮಿಂದ ತೊಂದರೆಯಾಗಲ್ಲ..” ಇನ್ನೂ ಏನೋ ಹೇಳುವವನಿದ್ದ, ಅಷ್ಟರಲ್ಲಿ ಕೊನೆಯಲ್ಲಿ ಮಾತನಾಡಿದ ಕ್ರಾಂತಿಕಾರಿ ಯುವಕ ತನ್ನ ಖಾದಿ ಬ್ಯಾಗಿನಿಂದ ಪಿಸ್ತೂಲು ತೆಗೆದು ಡಂ ಡಂ ಡಂ ಎಂದು ಸುತ್ತ ಮುತ್ತ ಗುಂಡು ಹಾರಿಸಿದ. ಪೊಲೀಸರು ಮರುಗುಂಡು ದಾಳಿ ಮಾಡಿದರು. ಉಳಿದವರಿಬ್ಬರು ತಮ್ಮ ತಮ್ಮ ಬ್ಯಾಗುಗಳಿಂದ ಪಿಸ್ತೂಲು ತೆಗೆದು ಫೈರಿಂಗ್ ಆರಂಭಿಸುತ್ತಲೇ ರಂಗಮಂಚದ ಹಿಂದೆ ಓಡಿದರು. ವೇದಿಕೆಯ ಮೇಲೆ ಮೈಕ್ ಹಿಡಿದುಕೊಂಡಿದ್ದ ಅಧಿಕಾರಿ ಮೂಲೆಯಲ್ಲಿ ಏನೂ ತೋಚದೆ ಪೆಕರನಂತೆ ತಲೆ ಕೆರೆದುಕೊಳ್ಳುತ್ತ ಘಟನೆಯನ್ನು ನೋಡುತ್ತಿದ್ದ ಸಿದ್ದನ ಬಳಿ ‘ಹಿಡಿ ಅವನನ್ನು’ ಎಂದ. ಹಿಂದೆ ಮುಂದೆ ನೋಡದೆ ಮೈಮೇಲೆ ಆವೇಶ ಬಂದವನಂತೆ ಸಿದ್ದ ಅವನ ಹಿಂದೆ ಓಡಿದ.

ಅದೇ ಸಮಯದಲ್ಲಿ ಅಚಾನಕ್ಕಾಗಿ ಪೊಲೀಸಿನವರಲ್ಲೊಬ್ಬ ಸಿಡಿಸಿದ ಗುಂಡು ಸಿದ್ದನ ಎಡಭುಜದ ಹಿಂದಿನ ಬೆನ್ನುಸೀಳಿತು. ಚೀರುತ್ತಾ ಕೆಳಗೆ ಬಿದ್ದ ಸುಡುಗಾಡು ಸಿದ್ದ. ಅಷ್ಟರವರೆಗೆ ಸಭೆಯಲ್ಲಿ ಮಾತಾಡುತ್ತಿದ್ದ ಮೂವರು ಖಾದೀದಾರಿಗಳು ತಪ್ಪಿಸಿಕೊಂಡಿದ್ದರು. ಸಭಿಕರು ಗಾಬರಿ ಭಯ ಆತಂಕಗಳನ್ನು ಹೊತ್ತೇ ಮನೆ ಸೇರಿದ್ದರು. ಫೈರಿಂಗ್ ನಡೆಸಿದ ಪೊಲೀಸರು ಬೆನ್ನು ಮೇಲೆ ಮಾಡಿಕೊಂಡು ಬಿದ್ದಿದ್ದ ಸಿದ್ದನ ಬಳಿ ಬಂದು ನಿಂತರು. ಅವರ ಉನ್ನತ ಅಧಿಕಾರಿ ಹತ್ತಿರ ಬಂದು ಸಿದ್ದನ ದೇಹವನ್ನು ಹತ್ತಿರದಿಂದ ನೋಡಿದ, “ಛೇ! ಎಂತಾ ಕೆಲಸ ಆಗೋಯ್ತಲ್ರಿ, ಇವನು ಹಾಸ್ಪಿಟಲೈಸ್ ಮಾಡಿದ್ರೂ ಬದುಕಲ್ಲ, ನಕ್ಸಲೈಟ್ ಫೈರ್ ಮಾಡಿ ಊರವನು ಒಬ್ಬ ಸತ್ತ ಅಂತ ರಿಪೋರ್ಟ್ ಬರೀರಿ. ಆಂಬುಲೆನ್ಸ್ ಕರೆಸಿ, ಬದುಕಿದ್ರೆ ಸರಿ. ಇಲ್ಲಾಂದ್ರೆ ಬಾಡಿನ ಪೋಸ್ಟ್ ಮಾರ್ಟಂಗೆ ಕಳಿಸಿ” ಕೈ ಕೈ ಹಿಸುಕಿಕೊಳ್ಳುತ್ತಲೇ ಆರ್ಡರ್ ಮಾಡಿದ.

ಬೆಳಗಿನಿಂದ ಆವರಿಸಿಕೊಂಡಿದ್ದ ಸೇಂದಿಯ ನಶೆ ಪೂರಾ ಇಳಿದಂತಾಗಿದ್ದ ಸಿದ್ದ ಕಣ್ಣು ಬಿಟ್ಟ. ಆ ನೋವಿನ ಗಳಿಗೆಯಲ್ಲಿ ಅವನಿಗೆ ಕೆಂಚಿ ಮನೆಗೆ ಹೋಗದಿದ್ದರೆ ಮಸಣ ಸೇರಿಸುತ್ತಾಳೆ ಎಂದು ನೆನಪಾಯ್ತು. ನಿನ್ನೆ ಸುಡಗಾಡಿನಲ್ಲಿ ಸುಟ್ಟ ಹೆಣದ ಕಾವು ಈಗ ಪೂರ್ತಿ ಇಳಿದಿರಬಹುದು, ಬೇಗನೆ ಹೋಗಿ ಬೂದಿಯನ್ನೆಲ್ಲ ಬಳಿದು ಕಂಚಿನಹೊಳೆಕ್ಕೆ ಎರಚಬೇಕು ಎನ್ನುವ ಕರ್ತವ್ಯ ಪ್ರಜ್ಞೆ ಜಾಗೃತವಾಯ್ತು. ಕೊನೆಯಬಾರಿಗೆ ಕಣ್ಣು ಮುಚ್ಚುವ ಮೊದಲು ಖಾಲಿಯಾಗಿದ್ದ ಸೇಂದಿ ಬಾಟಲಿ ಮತ್ತು ಮಾಸ್ತರರ ಬೈಗುಳ ನೆನಪಾಯ್ತು. ‘ಪ್ರಭುತ್ವ ತಲೆಗಳನ್ನು ಮೆಟ್ಟಿ ತನ್ನ ಉದ್ದೇಶ ನೆರವೇರಿಸಿಕೊಳ್ಳುತ್ತದೆ; ಆದರೆ ಉರುಳಲಿರುವ ತಲೆಗಳು ಯಾರವು’ ಅನಂತ ನೀಲಾಗಸದಿಂದ ಅಶರೀರವಾಣಿಯೊಂದು ಬಡಬಡಿಸಿದಂತಾಯ್ತು. ಸೇದದೇ ಕಿವಿ ಸಂದಿಯಲ್ಲಿ ಸಿಕ್ಕಿಸಿಕೊಂಡಿದ್ದ ಬೀಡಿಗಾಗಿ ಕೈಚಾಚಿದ ಕೈ ಅರ್ಧಕ್ಕೆ ನಿಂತಿತು.