ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಿವಾಹದ ನಂತರವೂ ಬದುಕು ಇದೆ

ಗೌರಿ ಚಂದ್ರಕೇಸರಿ
ಇತ್ತೀಚಿನ ಬರಹಗಳು: ಗೌರಿ ಚಂದ್ರಕೇಸರಿ (ಎಲ್ಲವನ್ನು ಓದಿ)


ಫೇಸ್ ಬುಕ್ಕಿನ ಕೃಪಾ ಕಟಾಕ್ಷದಿಂದ ಹಳೆಯ ಸ್ನೇಹಿತೆಯೊಬ್ಬಳ ಸಂಪರ್ಕ ಸಿಕ್ಕಿತ್ತು. ಒಂದೇ ಕಾಲೇಜಿನಲ್ಲಿ ಓದುತ್ತಿದ್ದ ನಾವು ಸ್ನಾತಕೋತ್ತರ ಪದವಿಯ ನಂತರ ಒಬ್ಬರನ್ನೊಬ್ಬರು ಭೇಟಿಯೇ ಆಗಿರಲಿಲ್ಲ, ಮಾತುಕತೆಯೂ ಇರಲಿಲ್ಲ. ಕಾರಣ ಅವಳು ಯಾವ ಊರಿನಲ್ಲಿರಬಹುದೆಂಬ ಮಾಹಿತಿಯೂ ನನಗಿರಲಿಲ್ಲ. ಇಪ್ಪತ್ತು ವರುಷದ ನಂತರ ಭೇಟಿಯಾದ ಅವಳ ಹತ್ತಿರ “ಏನು ಮಾಡಿಕೊಂಡಿದ್ದೀಯಾ” ಎಂದು ಕೇಳಿದ್ದೆ. “ಓದಿನ ನಂತರ ಒಂದು ವರುಷ ಕೆಲಸ ಮಾಡಿಕೊಂಡಿದ್ದೆ. ನಂತರ ಮದುವೆ ಗೊತ್ತಾಗಿ ಹೋಯ್ತು. ಈಗ ಎರಡು ಮಕ್ಕಳ ತಾಯಿ. ಸಧ್ಯಕ್ಕೆ ಮನೆಯಲ್ಲಿದ್ದೇನೆ” ಎಂದಳು. ನನ್ನ ಮನಸ್ಸು ಒಂದು ಕ್ಷಣ ಹಿಂದಕ್ಕೆ ಓಡಿತ್ತು. ಬಳುಕುವ ಬಳ್ಳಿಯಂತೆ ಇದ್ದ ಗೆಳತಿ ಸಕಲ ಕಲಾ ವಲ್ಲಭೆ. ಭರತ ನಾಟ್ಯ, ಕಥಕ್ ಪ್ರವೀಣೆ. ವೇದಿಕೆಯಲ್ಲಿ ನಿಂತು ಹಾಡುವಂತಹ ಗಾಯಕಿ. ನೀರಿಗೆ ಇಳಿದರೆ ಮೀನಿನಂತೆ ಈಜುವಾಕೆ. ವಿದ್ಯಾರ್ಥಿ ದೆಸೆಯಲ್ಲಿ ರಾಜ್ಯ ಮಟ್ಟದ ಯುವ ಜನೋತ್ಸವದವರೆಗೂ ಹೋಗಿ ಹತ್ತು ಹಲವಾರು ಬಹುಮಾನಗಳನ್ನು ಪಡೆದಿದ್ದಳು. ಹತ್ತಾರು ವಿದ್ಯಾರ್ಥಿನಿಯರಿಗೆ ನೃತ್ಯವನ್ನು ಹೇಳಿ ಕೊಡುತ್ತ ಅಲ್ಪ ಸ್ವಲ್ಪ ಸಂಪಾದನೆಯನ್ನೂ ಮಾಡುತ್ತಿದ್ದಳು. ಅಂತಹ ಪ್ರತಿಭಾವಂತ ಸ್ನೇಹಿತೆಯು ಮದುವೆಯ ನಂತರ ತನ್ನಿಷ್ಟದ ಎಲ್ಲವನ್ನೂ ಏಕೆ ತೊರೆದು ಬಿಟ್ಟಳೆಂದು ಪ್ರಶ್ನಿಸಿದ್ದೆ. ಉತ್ತಮ ಸಂಬಂಧ. ನನ್ನ ಕಲೆಯನ್ನು ಮುಂದುವರೆಸಲು ನನ್ನ ಗಂಡನ ಮನೆಯವರಿಗೆ ಇಷ್ಟವಿರಲಿಲ್ಲ. ಹೀಗಾಗಿ ನನ್ನಿಷ್ಟದ ಹವ್ಯಾಸಗಳೆಲ್ಲವನ್ನೂ ತೊರೆಯಬೇಕಾಯಿತು ಎಂದಳು.

ಇದು ಕೇವಲ ಒಬ್ಬಳ ಕಥೆಯಲ್ಲ. ಇದೇ ರೀತಿ ಎಷ್ಟೋ ಹೆಣ್ಣು ಮಕ್ಕಳು ಮದುವೆಯ ನಂತರ ತಮ್ಮಲ್ಲಡಗಿದ ಕಲೆಯನ್ನು ಮೂಟೆ ಕಟ್ಟಿ ಅಟ್ಟಕ್ಕೆಸೆಯುತ್ತಾರೆ. ಮದುವೆ ಎಂಬುದು ಹೆಣ್ಣಿನ ಆಸೆ ಆಕಾಂಕ್ಷೆಗಳನ್ನು ಕಸಿಯುವ ಒಂದು ವ್ಯವಸ್ಥೆ ಯಾಕಾಗಬೇಕು? ಆಕೆಯ ಕೈ ಹಿಡಿಯುವ ವ್ಯಕ್ತಿ ಹಾಗೂ ಅವನ ಮನೆಯವರು ತಮ್ಮ ಮನೆಗೆ ಬರುವವಳ ಕಲೆ ಪ್ರತಿಭೆಗಳನ್ನು ಪ್ರೋತ್ಸಾಹದ ನೀರೆರೆದು ಪೋಷಿಸಬೇಕೇ ಹೊರತು ಚಿವುಟಿ ಹಾಕುವುದರ ಕುರಿತು ಬೇಸರವೆನ್ನಿಸಿತ್ತು. ಒಮ್ಮೆ ಮೈಗೂಡಿಸಿಕೊಂಡ ಕಲೆಯನ್ನು ಜೀವದಂತೆ ಪ್ರೀತಿಸಿರುತ್ತೇವೆ. ಅದರ ಹಿಂದೆ ಎಷ್ಟೊಂದು ಪರಿಶ್ರಮವಿರುತ್ತದೆ. ನಮ್ಮ ಹವ್ಯಾಸಗಳನ್ನು ಬದುಕಿನ ಒಂದು ಭಾಗವಾಗಿಸಿಕೊಂಡಿರುತ್ತೇವೆ. ಎಷ್ಟೋ ಜನರಿಂದ ಚಪ್ಪಾಳೆಗಳನ್ನು ಗಿಟ್ಟಿಸಿಕೊಂಡಿರುತ್ತೇವೆ. ನಮ್ಮ ಮಡಿಲ ಮಗುವಂತೆ ಅದನ್ನು ಪೋಷಿಸಿರುತ್ತೇವೆ. ಆದರೆ “ಮದುವೆ” ಎಂಬ ಮೂರಕ್ಷರದ ಬಂಧನಕ್ಕೆ ಒಳಗಾದಾಗ ನಮ್ಮ ಕಲೆಗೆ ಅಡ್ಡ ಗೋಡೆ ಏಕೆ ಏಳಬೇಕು?

ಕೆಲವೊಮ್ಮೆ ನಮ್ಮ ಆಸೆ ಆಕಾಂಕ್ಷೆಗಳನ್ನು ನಾವು ಹೆಣ್ಣು ಮಕ್ಕಳೇ ಹೂತು ಹಾಕಿ ಬಿಡುತ್ತೇವೆ. ನಮ್ಮ ಹವ್ಯಾಸಗಳು ನಮ್ಮ ಮುಂದಿನ ಬದುಕಿಗೆ ಅಡ್ಡಿಯಾಗ ಬಹುದೇನೋ, ನಾನು ಹೋಗಿ ಸೇರುವ ಮನೆಯವರಿಗೆ ಇದರಿಂದ ತೊಂದರೆಯಾಗಬಹುದೇನೋ, ನಾನು ನನ್ನ ಕಲೆಯನ್ನು ಮುಂದುವರೆಸಿಕೊಂಡು ಹೋಗುವುದು ಅವರಿಗೆ ಇಷ್ಟವಾಗಲಾರದೇನೋ ಹೀಗೆ ನಮಗೆ ನಾವೇ ಯೋಚಿಸಿ ನಮ್ಮ ಹವ್ಯಾಸಗಳ ಕತ್ತು ಹಿಸುಕಿ ತಿಲಾಂಜಲಿಯನ್ನು ಇಡುತ್ತೇವೆ.

ಎಷ್ಟೋ ಹೆಣ್ಣು ಮಕ್ಕಳು ತಮ್ಮ ಇಂಪಾದ ಗಾನವನ್ನು ತಮಗಾಗಿ ಕೇವಲ ನಾಲ್ಕು ಗೋಡೆಗಳ ಮಧ್ಯ ಮಾತ್ರ ಸೀಮಿತಗೊಳಿಸಿಕೊಳ್ಳುತ್ತಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಜತನದಿಂದ ಕಾಯ್ದುಕೊಂಡು ಬಂದಿರುವ ನೂಪುರಗಳನ್ನು ಕಟ್ಟಿಕೊಂಡು ಮನದಣಿಯೇ ನರ್ತಿಸಿ ತೃಪ್ತಿ ಪಟ್ಟುಕೊಳ್ಳುವ ಸಹೋದರಿಯರಿದ್ದಾರೆ.

ಮೊದಲ ಇನ್ನಿಂಗ್ಸ್‍ ನಲ್ಲಿ ಅಂದರೆ ಮದುವೆಗೂ ಮುನ್ನವಿರುವ ಅಸ್ಮಿತೆಯನ್ನು ಮದುವೆಯ ನಂತರ ಸಂಪೂರ್ಣ ಬದಲಾಯಿಸಿಕೊಂಡು ಬಿಡುತ್ತಾರೆ ಕೆಲ ಹೆಣ್ಣು ಮಕ್ಕಳು. ತಮ್ಮ ಕಲಾ ಬದುಕನ್ನು ಆಲ್ಬಂ ಒಂದರಲ್ಲಿ ಬಂಧಿಸಿಟ್ಟು ಆಗಾಗ ಅವುಗಳ ಮೇಲೆ ಕಣ್ಣಾಡಿಸಿ ತೃಪ್ತಿಪಟ್ಟುಕೊಳ್ಳುತ್ತಾರೆ. ತಮ್ಮ ಹವ್ಯಾಸಗಳಿಂದ ದೂರಾದ ಬಗ್ಗೆ ಸದಾ ಒಂದು ವಿಷಾದ ಭಾವವೊಂದು ಅವರನ್ನು ಕಾಡುತ್ತಿರುತ್ತದೆ. ಮತ್ತೊಮ್ಮೆ ಆ ದಿನಗಳು ಬರಬಾರದೆ ಎಂದುಕೊಳ್ಳುತ್ತಲೇ ಜೀವನವನ್ನು ಕಳೆದು ಬಿಡುತ್ತಾರೆ.

ಇಂಥವರು ತಮ್ಮ ಮಕ್ಕಳ ಮೇಲೆ ಸದಾ ಒತ್ತಡವನ್ನು ತರುತ್ತಾರೆ. ಅನ್ನವಿಳಿಯದ ಗಂಟಲಲ್ಲಿ ಕಡುಬನ್ನು ತುರುಕುವಂತೆ, ಸಂಗೀತದಲ್ಲಿ ಆಸಕ್ತಿ ಇಲ್ಲದ ಮಕ್ಕಳನ್ನು ಒತ್ತಾಯ ಪೂರ್ವಕವಾಗಿ ಸಂಗೀತ ತರಗತಿಗೆ ಸೇರಿಸುವುದು, ನೃತ್ಯದ ಕುರಿತು ನಿರಾಸಕ್ತಿಯನ್ನು ಹೊಂದಿದ ತಮ್ಮ ಮಕ್ಕಳನ್ನು ನೃತ್ಯ ಶಾಲೆಗೆ ಕಳುಹಿಸುವುದು ಹೀಗೆ ತಮ್ಮಲ್ಲಿ ಉಸಿರುಗಟ್ಟಿ ಕುಳಿತ ಹವ್ಯಾಸಗಳನ್ನು ಮಕ್ಕಳ ಮೂಲಕ ಸಾಕಾರಗೊಳಿಸಲು ಹಾತೊರೆಯುತ್ತಾರೆ. ಹೀಗೆ ಬದುಕಿನುದ್ದಕ್ಕೂ ಆತ್ಮ ವಂಚನೆಯನ್ನು ಮಾಡಿಕೊಳ್ಳುವ ಬದಲು ಮದುವೆಯ ನಂತರವೂ ತಮ್ಮ ಹವ್ಯಾಸಗಳನ್ನು ಮುಂದುವರೆಸಿಕೊಂಡು ಹೋಗಬೇಕು.

ಕಲೆ ಇಲ್ಲದ ಮಾನವ ಬಾಲ ಕೋಡುಗಳಿಲ್ಲದ ಪ್ರಾಣಿಯಂತೆ ಎಂಬ ಮಾತಿದೆ. ಕಲೆಗಳ ಮೈಗೂಡಿಸಿಕೊ-ಳ್ಳುವಿಕೆಯಿಂದ ಬದುಕು ರೋಚಕವಾಗುತ್ತದೆ. ಜೀವಂತಿಕೆಯಿಂದ, ಹೊಸತನದಿಂದ ಕೂಡಿರುತ್ತದೆ. ಕಲೆ ಎಲ್ಲರಿಗೂ ಒಲಿಯುವಂತಹದ್ದಲ್ಲ. ಹಾಗಾಗಿ ನಮಗೊಲಿದಿರುವ ಯಾವುದೇ ಕಲೆಯನ್ನು ಬದುಕಿನುದ್ದಕ್ಕೂ ಮುಂದುವರೆಸಿಕೊಂಡು ಇನ್ನೊಬ್ಬರಿಗೂ ಸ್ಪೂರ್ತಿಯಾಗಬೇಕು.