ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶ್ರೀಮತಿ ತಾರಾಮತಿ ಕುಲಕರ್ಣಿ
ಇತ್ತೀಚಿನ ಬರಹಗಳು: ಶ್ರೀಮತಿ ತಾರಾಮತಿ ಕುಲಕರ್ಣಿ (ಎಲ್ಲವನ್ನು ಓದಿ)

ಜಯತು ಜಯತು..
ಅನ್ನುತ್ತಾ ಪ್ರತೀಹಾರಿಯ ಪ್ರವೇಶ.

“ದೇವೀ ವಸುಮತಿ ನಿನಗೆ ಕಾಣಿಸಿದಳೇ‌ “

ಎಂದು ಆತಂಕದಿಂದ
ಸೇವಕನನ್ನು ಪ್ರಶ್ನಿಸಲಾಗಿ

” ನನ್ನ ಕೈಯಲ್ಲಿ ಪತ್ರವನ್ನು‌ ಕಂಡು ಅವರು ತಿರುಗಿ ಹೊರಟು ಹೋದರು”
ಎಂದು ಸೇವಕ ಉತ್ತರಿಸಿದನು.

ರಾಜ‌ಕಾರ್ಯದಲ್ಲಿ ತಾನು ಮಧ್ಯ ಬರುವದು ಯೋಗ್ಯವಲ್ಲ ಎಂದು ಅರಿತ ಇಂಗಿತಜ್ಞೆ ಅವಳು. ಅಮಾತ್ಯರು ಕಳಿಸಿದ ಸಂದೇಶವನ್ನು ದುಷ್ಯಂತ ಓದುವನು.

ಊರಲ್ಲಿಯ ಒಬ್ಬ ಪ್ರಸಿದ್ಧ ವ್ಯಾಪಾರಿ ತೀರಿಕೊಂಡಿರುವನು.
ಅವನಿಗೆ ಸಂತಾನ ಇಲ್ಲ.ಅವನ ಅಪಾರ ಸಂಪತ್ತು ರಾಜ ಭಂಡಾರಕ್ಕೆ ಸೇರಬೇಕು.

ವ್ಯಾಪಾರಿಗೆ ಒಬ್ಬಳೇ ಹೆಂಡತಿ. ಅವಳು ಗರ್ಭವತಿ, ಪು:ಸವನ ಸಂಸ್ಕಾರ ಸಮಾರಂಭ ಆಗಿದೆ ಎಂಬ ವಿಷಯ ತಿಳಿದು ಬಂದಿದೆ.

ಹಾಗಾದರೆ ಅವಳ ಮಗುವಿಗೆ ಆ ಆಸ್ತಿ ಸೇರ ತಕ್ಕದ್ದು.ಇದು ನನ್ನ ಆಜ್ಞೆ ಎಂದು ಅಮಾತ್ಯರಿಗೆ ಹೇಳಬೇಕು.”

ಯೇನ ಯೇನ ವಿಯುಜ್ಯಂತೆ ಪ್ರಜಾ: ಸ್ನಿಗ್ಧೇನ ಬಂಧುನಾ
ಸ: ಸ: ಪಾಪಾದೃತೆ ತಾಸಾಂ ದುಷ್ಯಂತ ಇತಿ ಘುಷ್ಯತಾಮ್
.”

ಯಾರಾದರೂ ತನ್ನ ಆಪ್ತರನ್ನು ಕಳಕೊಂಡಾಗ ,ಆ ವ್ಯಕ್ತಿಯ ಸ್ಥಾನವನ್ನು ದುಷ್ಯಂತನು ತುಂಬುವನು ಎಂದು ಘೋಷಣೆ ಹೊರಡಲಿ” ಎಂದು ಸೇವಕನನ್ನು ಕರೆದು ಹೇಳುವನು.

ಅದನ್ನು ಕೇಳಿ ಪ್ರತೀಹಾರೀ ಬಾಗಿ ಗೌರವ ವ್ಯಕ್ತ ಪಡಿಸುತ್ತಾ ಹೀಗೆ ಹೇಳಿದನು.

ಮಹಾರಾಜಾ, ಸಂದರ್ಭೋಚಿತವಾಗಿ ‌ಹೊರಟ ತಮ್ಮ ಘೋಷಣೆಯಿಂದ ಜನ ಸಂತುಷ್ಟರಾದರು. ಯೋಗ್ಯ ವೇಳೆಯಲ್ಲಿ ಮಳೆ ಸುರಿದಂತಿದೆ.” ಎಂದು ಹರುಷ ಪಡುವನು.

ಆಗ ದುಷ್ಯಂತನ ಮನದಲಿ ತುಮುಲ. “ನನಗೂ ಮಕ್ಕಳಿಲ್ಲ. ಪುರು ವಂಶಪರಂಪರಾಗತವಾಗಿ ಬಂದ ಆಸ್ತಿಯ ಗತಿ ಏನು !! ನನ್ನ ಮಗುವನ್ನು ಹೊತ್ತು ಬಂದು ನಿಂತ ಧರ್ಮಪತ್ನಿಯನ್ನು ನಿರ್ದಯನಾಗಿ ತಳ್ಳಿಬಿಟ್ಟೆನಲ್ಲ!! ಸಕಾಲದಲ್ಲಿ ಒದಗಿಬಂದ ಬಂಗಾರದ ರಾಶಿಯನ್ನು ಅಲಕ್ಷಿಸಿದೆ.” ಎಂದು ದುಷ್ಯಂತ ಬಹಳ ಪರಿತಪಿಸುತ್ತಿದ್ದಾನೆ. ಇನ್ನು ನಾನು ಸತ್ತ ಮೇಲೆ ಪಿಂಡ ಹಾಕುವವರ್ಯಾರು ? ಪಿತೃಗಳಿಗೆ ತರ್ಪಣ ಕೊಟ್ಟು ವಂಶ‌ ಉದ್ಧಾರ​ ಮಾಡಬಹುದಾದ ಅವಕಾಶ ಇಲ್ಲದಾಯಿತು. ಪಿತೃಗಳಿಗೆ ಇನ್ನು ಕಣ್ಣೀರೇ ಗತಿಯೇ ಎಂದು ಹಲುಬುವನು. ದುಷ್ಯಂತನಿಗೆ ಶಕುಂತಲೆಯಲ್ಲಿದ್ದ ತೀವ್ರ ಪ್ರೀತಿಯನ್ನು ತನ್ನ ಸಖಿ ಮೇನಕೆಗೆ ಅರುಹಲು, ಸಾನುಮತಿ ಆಕಾಶಕ್ಕೆ ನೆಗೆದಳು. ವಿದೂಷಕನ ಧ್ವನಿ ಕೇಳಿ ಬರುವದು.

ಆಗಿನ ಕಾನೂನಿನಂತೆ ಸಂತಾನ ರಹಿತನ ಆಸ್ತಿ ರಾಜನಿಗೆ ಸೇರಬಹುದಾಗಿದ್ದರೂ ದುಷ್ಯಂತ ಅದರ, ಲಾಭ ತೆಗೆದುಕೊಳ್ಳದೇ ಉದಾರತೆಯಿಂದ, ಆ ಆಸ್ತಿ, ಅವನ ಹೆಂಡತಿ ಹಾಗೂ ಹುಟ್ಟಲಿರುವ ಮಗುವಿಗೇ ಸೇರಬೇಕು ಎಂದನು. ಇದು ಅವನ ಉದಾರ ಗುಣ.

ಸಂತಾನ ರಹಿತನಾದ ಆ ಮೃತ ವ್ಯಕ್ತಿ ವ್ಯಾಪಾರದಿಂದ ಸಾಕಷ್ಟು ಹಣ ಸಂಪಾದಿಸಿದ್ದನು. ಆಗಿನ ಕಾಲದಲ್ಲಿಯೂ ದೇಶ ವಿದೇಶಗಳಲ್ಲಿ ವ್ಯಾಪಾರ ವಹಿವಾಟು ನಡೆದಿತ್ತು ಎಂಬುದರ ಸೂಚನೆಯೂ ಇಲ್ಲಿ ಇದೆ. ವ್ಯವಹಾರದ ವ್ಯಾಪ್ತಿಯನ್ನೂ, ಹಣ, ವ್ಯಾಪಾರ ಇತ್ಯಾದಿಗಳ ವಿವಾದಗಳ ಇತ್ಯರ್ಥಕ್ಕೆ ನ್ಯಾಯ ಸಂಹಿತೆಯೂ ಇರುವುದನ್ನೂ ಕಾಳಿದಾಸ ಹೀಗೆ ಚಿತ್ರಿಸಿದ್ದನ್ನು ಇಲ್ಲಿ ಮನಗಾಣಬೇಕು .

ಆತ್ಮಾ ಏವ‌ ಪುತ್ರ ನಾಮಾಸಿ ಸ ಜೀವ ಶರದ ಶತಮ್

ತಂದೆಯೇ ಪುತ್ರ ರೂಪದಲ್ಲಿ ಹುಟ್ಟುವನು. ಅವನು ನೂರುಕಾಲ ವಂಶದ ಕೀರ್ತಿ ಬೆಳೆಸುತ್ತಾ ಬದುಕಲಿ ಎಂಬುದೇ ತಂದೆಯ ಆಶೆ. ದುಷ್ಯಂತ ಇದಕ್ಕೆ ಹೊರತಾದವನೇನಲ್ಲ. ಪುತ್ರ ಪೂರ್ವಜರ ಶ್ರಾದ್ಧ ಕರ್ಮಗಳನ್ನು ಮಾಡುತ್ತ ಮೂರು ತಲೆಮಾರಿನ ಪಿತೃಗಳಿಗೆ ಮೋಕ್ಷವನ್ನು ತರುವನು. ತನ್ನ ಪುತ್ರನನ್ನು ಹೊತ್ತ ಧರ್ಮಪತ್ನಿಯನ್ನು ಕಡೆಗಣಿಸಿದೆನಲ್ಲ ಆಲೋಚನೆ ಕಾಡುತ್ತಿದೆ. ದುಷ್ಟ ಶಕ್ತಿಯೊಂದು ತನ್ನನ್ನು ಕಾಡುತ್ತಿದೆ ಎಂದು ವಿದೂಷಕನ ಕೂಗು ಕೇಳಿಬಂದಿದೆ. ತನ್ನ ಅಕಾರ್ಯದ ಪರಿಣಾಮ ಪ್ರಜೆಗಳನ್ನು ದು:ಖಕ್ಕೆ ಈಡುಮಾಡಲಾಗದು ಎಂದು ದುಷ್ಟರನ್ನು ನಿಗ್ರಹಿಸಲು ತನ್ನ ಬಿಲ್ಲು ಬಾಣ ಹಿಡಿದು ಹೊರಡಲು ಸಿದ್ಧ​ನಾದ ದುಷ್ಯಂತ.

ಹಂಸಕ್ಷೀರ ನ್ಯಾಯದಂತೆ ಅರಸ ವರ್ತಿಸಬೇಕು. ಪತ್ನಿ ವಿಯೋಗದಿಂದ ತಾನು ರಾಜಕಾರಣದ ಜವಾಬ್ದಾರಿಯನ್ನು ಸರಿಯಾಗಿ ವಹಿಸುತ್ತಿಲ್ಲ. ಅದರಿಂದ ಅರಾಜಕತೆ ಉಂಟಾಗಿ ಪ್ರಜೆಗಳು ಕಷ್ಟ ಅನುಭವಿಸುತ್ತಿದ್ದಾರೆ ಎಂಬುದರ ಅರಿವಾಗಿ ,ಅದರ ನಿವಾರಣೆಗೆ ಕರ್ತವ್ಯ ಬದ್ಧನಾಗಿ ಹೊರಡುವನು. ತನ್ನ ದು:ಖವನ್ನು ಕಡೆಗಣಿಸಿ ಪ್ರಜೆಗಳಿಗೆ ನ್ಯಾಯ ಒದಗಿಸಲು ಹೊರಟನು. ಅಷ್ಟರಲ್ಲಿ ಮಾತಲಿ ಅಂದರೆ ಇಂದ್ರನ ರಥದ ಸಾರಥಿಯ ಪ್ರವೇಶ ಆಗುವದು. ಇಂದ್ರ ರಾಕ್ಷಸರ ಹಾವಳಿಯನ್ನು ತಡೆಗಟ್ಟಲು ರಾಜಾ ದುಷ್ಯಂತನನ್ನು ಆಮಂತ್ರಿಸಿದ್ದಾನೆ ಎಂದು ಮಾತಲಿ ತಿಳಿಸಿದನು. ಕಾಲನೇಮಿ ರಾಕ್ಷಸನ ವಂಶಜನಾದ ದುರ್ಜಯ ಎಂಬುವವನು ಕಂಟಕನಾಗಿದ್ದು ಅವನನ್ನು ಸಂಹರಿಸಲು ಪುರುವಂಶದ ದುಷ್ಯಂತನೇ ಸರಿಯಾದವನೆಂದು ಇಂದ್ರನ ಅಭಿಪ್ರಾಯ.

ಚಂದ್ರನು ಕತ್ತಲೆಯನ್ನು ದೂರಮಾಡಿದಂತೆ ಈ ಕಾರ್ಯ ನಿನ್ನಿಂದಲೇ ಆಗುವದು. ಆದ್ದರಿಂದ ನಿನ್ನ ಶಸ್ತ್ರಗಳನ್ನು ಧರಿಸಿ ರಥವನ್ನು ಏರು“. ಎನ್ನುವನು ಮಹೇಂದ್ರನ ಸಾರಥಿ.

ಅನುಗ್ರಹೀತ: ಅಹಮ್ ಅನಯಾ ಮಘವತ: ಸಂಭಾವನಯಾ

ಇಂದ್ರನು ತನಗೆ ತೋರಿಸಿದ ಗೌರವಕ್ಕಾಗಿ ಧನ್ಯತೆಯನ್ನು ಅನುಭವಿಸುತ್ತಾ ದೊರೆ ಕಾರ್ಯ ಪ್ರವೃತ್ತನಾದನು. ವಿದೂಷಕ ಮಾಧವ್ಯನನ್ನು ಕಾಡಿದ ವ್ಯಕ್ತಿ ಮಾತಲಿಯೇ ಎಂದು ತಿಳಿದಾಗ ಅದರ ಕಾರಣ ತಿಳಿಯ ಬಯಸಿದ ದುಷ್ಯಂತ. ಆಗ, ಮಾತಲಿ ಹೇಳಿದ ಸಂಗತಿ ಸೋಜಿಗಕರವಾಗಿದೆ

ಮಹಾರಾಜರು ಯಾವದೋ ಮಾನಸಿಕ ತೊಂದರೆಯಿಂದ ಬಳಲುತ್ತಿರುವದನ್ನು ಕಂಡೆ..
ತಮ್ಮನ್ನು ವಾಸ್ತವಕ್ಕೆ ತರಲು ಅವನಿಗೆ ತೊಂದರೆ ಕೊಡುವ ಉಪಾಯ ಹೂಡಿದೆ.
” ಜ್ವಲತಿ ಚಲಿತೇ ಇಂಧನ: ಅಗ್ನಿ: ವಿಪಕೃತ: ಪನ್ನಗ: ಫಣಾಮ್ ಕುರುತೆ.
ಪ್ರಯ: ಸ್ವಂ ಮಹಿಮಾನಮ್ ಕ್ಷೋಭಾತ್ ಪ್ರತಿಪದ್ಯತೆ ಹಿ ಜನ:

ಅಗ್ನಿಯನ್ನು ಊದಿದರೆ ಇನ್ನೂ ಚೆನ್ನಾಗಿ ಉರಿಯುತ್ತದೆ. ಪೀಡಿಸಿದಾಗ ಸರ್ಪವು ಹೆಡೆಯನ್ನು
ಮೇಲೆತ್ತುವದು ಅಲ್ಲವೇ? ಅದೇ ರೀತಿ ಮನುಷ್ಯನೂ ತನ್ನ ಶಕ್ತಿ, ವಿಭೂತಿಯನ್ನು ತೋರಿಸುವುದು ಅಭಿಮಾನಕ್ಕೆ ಧಕ್ಕೆ ತಗುಲಿದಾಗ. ನಿನ್ನ ಪ್ರಿಯ ಮಿತ್ರನಿಗೆ ಕಿರುಕುಳ ಕೊಟ್ಟರೆ ನೀನು ಎಚ್ಚರಗೊಂಡು ಕಾರ್ಯೋನ್ಮುಖ ಆಗುವಿ ಎಂದು ಹಾಗೆ ಮಾಡಿದೆ
” ಹೇಗಿದೆ ಮಾತಲಿಯ ತರ್ಕ!.

ಶತಕ್ರತು, ಇಂದ್ರನ ಆಹ್ವಾನವನ್ನು ಮೀರಲಾಗದು ಎಂದು ಹೇಳುತ್ತ ಕರ್ತವ್ಯ ನಿರ್ವಹಿಸಲು ಸನ್ನದ್ಧನಾದನು ದುಷ್ಯಂತ. ತನ್ನ ವೈಯಕ್ತಿಕ ದು:ಖದ ಕಾರಣದಿಂದ, ಕರ್ತವ್ಯ ಚ್ಯುತನಾಗಬಾರದು ಎಂದು ನಿರ್ಧರಿಸಿದನು.

ಇಲ್ಲಿಗೆ ಆರನೇಯ ಅಂಕದ ಮುಗಿತಾಯದ ಪರದೆ ಜಾರುತ್ತದೆ.

ಮೊದಲನೇ ಅಂಕದಲ್ಲಿ ದುಷ್ಯಂತ ಧನುರ್ಧಾರೀ ಆಗಿದ್ದ, ಬೇಟೆಯ ಹವ್ಯಾಸದಿಂದ. ಆಗ ಆತ ಜಿಂಕೆಯ ಬೆನ್ನು ಹತ್ತಿದ್ದನು.

ಮೂರನೇಯ ಅಂಕದಲ್ಲಿ ಮತ್ತೆ ಬಿಲ್ಲುಬಾಣ ಧರಿಸಿದ, ಕಣ್ವರ ಆಶ್ರಮದಲ್ಲಿ ರಾಕ್ಷಸರ ಹಾವಳಿಯಿಂದ ಯಜ್ಞ ಯಾಗಾದಿಗಳನ್ನು ಕಾಪಾಡಲು.

ಈಗ ಆರನೇಯ ಅಂಕದಲ್ಲಿ ಮತ್ತೆ ಧನುರ್ಧಾರಿ ಆದನು ಶತಕ್ರತುವಿನ ಆಜ್ಞಾಪಾಲನೆಗಾಗಿ.

ನೂರು ಯಜ್ಞಮಾಡಿದ ಇಂದ್ರನಿಗೆ ರಾಕ್ಷಸರ ಸಂಹಾರ ಮಾಡುವದು ಅಸಾಧಾರಣ ಕೆಲಸವೇನೂ ಆಗಿರಲಿಲ್ಲ. ರಾಕ್ಷಸರ ನಿವಾರಣೆ ಸೂರ್ಯನಿಂದ ಆಗಲಾರದು. ದೇವಾಸುರ ಸಂಗ್ರಾಮಕ್ಕೆ ಚಂದ್ರವಂಶೀಯ ದುಷ್ಯಂತನೇ ಬರಬೇಕು. ಅದರಿಂದ ಪುರುವಂಶಕ್ಕೆ ಕೀರ್ತಿಯನ್ನು ತಂದು ಕೊಡುವದು ಇಂದ್ರನ ಉದ್ದೇಶ.

ಈಗ ದುಷ್ಯಂತ ದು:ಖಿ ಆದರೂ ಕರ್ತವ್ಯ ಮುಖ್ಯ ಎಂದು ಭಾವಿಸಿದನು. ಇತರರಿಗೆ ಕಷ್ಟ ಬಂದಾಗ ಮಹಾನುಭಾವರು ಆತ್ಮವಿಶ್ವಾಸದಿಂದ, ವಿನಯದಿಂದ ವಿಪತ್ತು ದೂರ ಮಾಡಲು ಧೃಢ ವಿಶ್ವಾಸದಿಂದ ಮುನ್ನುಗ್ಗುವರು. ಇಲ್ಲಿ ಧಿರೋದಾತ್ತ ನಾಯಕನ ಚಿತ್ರಣ ಇದೆ.

ಇನ್ನು ೭ನೆಯ ಹಾಗೂ ಕೊನೆಯ ಅಂಕದ ಪ್ರದರ್ಶನಕ್ಕಾಗಿ ವೇದಿಕೆ ಸಿದ್ಧ ಮಾಡೋಣವೇ ?