ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶ್ರೀಮತಿ ತಾರಾಮತಿ ಕುಲಕರ್ಣಿ
ಇತ್ತೀಚಿನ ಬರಹಗಳು: ಶ್ರೀಮತಿ ತಾರಾಮತಿ ಕುಲಕರ್ಣಿ (ಎಲ್ಲವನ್ನು ಓದಿ)

ಹಿಂದೀ ಸಿನೇಮಾದ ಸಾಮಾನ್ಯ ದೃಶ್ಯ. ಗುರುಹಿರಿಯರ ಸಮ್ಮುಖದಲ್ಲಿ ವಧೂವರರು ಪತಿಪತ್ನಿಯರಾಗೀ, ಮೊದಲ ರಾತ್ರಿ ,ನಾಚಿ ಕುಳಿತ ನವವಧುವಿನ ಅವಗುಂಠನ ಅಥವಾ ಘೂಂಘಟ್ ಎತ್ತುವದು ಗಂಡನ ಕೆಲಸ.

ಆದರೆ ಇಲ್ಲಿ ಶಕುಂತಲೆಯ ಅವಗುಂಠನವನ್ನು, ಅನಿವಾರ್ಯವಾಗಿ ಗೌತಮಿ ಎತ್ತುವ ಪ್ರಸಂಗ ಕಾಣುತ್ತೇವೆ.

ಇದು ಗಾಂಧರ್ವ ವಿವಾಹದ ಸ್ವಾತಂತ್ರ್ಯ ತೆಗೆದುಕೊಂಡದ್ದರ ಪರಿಣಾಮ ಎನ್ನಬೇಕೇ?
ಆಗಲೂ ಕೂಡ ಪ್ರೇಮ ವಿವಾಹ ಅಷ್ಟು ಮಾನ್ಯತೆ ಪಡೆದಿರಲಿಲ್ಲ ಎಂದು ಎನಿಸುವುದಿಲ್ಲವೇ?

ಪ್ರಸ್ತುತಕ್ಕೆ ಬರೋಣ.

ಗೌತಮಿ ಅವಗುಂಠನ ಸರಿಸಿದಾಗ, ಶಕುಂತಲೆಯ ಸುಂದರ ಅಕ್ಲಿಷ್ಟ ಕಾಂತಿಯನ್ನು ಕಂಡ ದುಷ್ಯಂತ.

“ಭ್ರಮರ ಇವ‌ ವಿಭಾತೆ ಕುಂದಮ್
ಅಂತ: ತುಷಾರಂ
ನ ಚ ಖಲು ಭೋಕ್ತುಮ್, ನ ಅಪಿ ಶಕ್ನೋಮಿ ಹಾತುಮ್.”

“ಅದೇ ಅರಳುತ್ತಿರುವ ಕುಂದ ಪುಷ್ಪದ ನಿರ್ಮಲ ಸೌಂದರ್ಯದಂತೆ ಶಕುಂತಲೆ ಕಂಗೊಳಿಸಿದಳು. ಪುಷ್ಪದ ಮೇಲಿನ ಮಂಜಿನ ಹನಿ, ತುಷಾರವು, ಹೂವಿನೊಳಗೆ ಅಡಗಿದ ಮಕರಂದವನ್ನು ಮರೆಮಾಚಿದೆ. ಇದರಿಂದ ಭ್ರಮರಕ್ಕೆ ಭ್ರಮೆ ಆಗಿದೆ. ಪುಷ್ಪದೊಳಗಿನ ಜೇನನ್ನು ಗುರುತಿಸಲಾರದಾಗಿದೆ.”

ಇದೇ ರೀತಿ ದುಷ್ಯಂತ ಭ್ರಮೆಗೆ ಒಳಗಾಗಿರುವನು. ಅವಳ ನಿಷ್ಕಲ್ಮಶ ಸೌಂದರ್ಯ ಕಂಡರೂ ಇವಳನ್ನು ತಾನು ಮೊದಲು ಪರಿಗ್ರಹಿಸಿದ್ದರ‌ ನೆನಪು ಬಾರದಾಗಿದೆ.

“ಭೋ,ರಾಜನ್, ಇತಿ ಜೋಷಮಾಸ್ಯತೆ?”

“O King! Why do you thus sit silent?”

ಎಂದು ಶಾರಂಗರವ ಅಸಹನೆಯಿಂದ ‌ಪ್ರಶ್ನಿಸಲು,

“ಭೋ ತಪೋಧನರೇ, ಎಷ್ಟು ಪ್ರಯತ್ನಿಸಿದರೂ, ನಾನು ಇವಳನ್ನು ವರಿಸಿದ್ದು ನೆನಪು ಆಗುತ್ತಿಲ್ಲ.
ಇವಳಲ್ಲಿ ಗರ್ಭಿಣಿಯ ಲಕ್ಷಣಗಳೂ ಇವೆ. ಪರದಾರೆಯನ್ನು ನಾನು ಹೇಗೆತಾನೆ ಸ್ವೀಕರಿಸಲು ಸಾಧ್ಯ?
ಅವಳು ಕನ್ಯೆ ಆಗಿದ್ದರೆ, ನನಗೆ ಅವಳನ್ನು ಪರಿಗ್ರಹಿಸಿದ ಸ್ಮೃತಿ ಬರದಿದ್ದರೂ, ಅವಳನ್ನು ನಾನು ಸ್ವೀಕಾರ ಮಾಡಬಹುದಾಗಿತ್ತು. ಆದರೆ ಅವಳು ತಾಯಿಯಾಗಲಿರುವ ಸ್ತ್ರೀ. ಅವಳ ಮಗುವಿನ ತಂದೆ ನಾನಲ್ಲದಿರುವಾಗ ಅವಳನ್ನು ಹೇಗೆ ಸ್ವೀಕರಿಸಲಿ? ಕ್ಷೇತ್ರಿಯ ನಾನಲ್ಲ! “

ಆಗ ಶಕುಂತಲೆ ಮನದಲಿ ದು:ಖಿಸುವಳು. ಈ ಆರ್ಯನಿಗೆ ಹೇಗೆ ತಾನೆ ವಿವಾಹದ ಪ್ರಸಂಗವನ್ನು ನೆನಪಿಸುವದು ಎಂದು ಚಿಂತಿಸಿದಳು. ತನ್ನನ್ನು ಪತ್ನಿ ಎಂದು ಸ್ವೀಕರಿಸಲು ನಿರಾಕರಿಸಿದವನನ್ನು ಶಕುಂತಲೆ “ಆರ್ಯಪುತ್ರ” ಎಂದು ಸಂಬೋಧಿಸಲು ಹಿಂಜರಿಯುವಳು. ಕಾರಣ‌ ಪತಿಯನ್ನು ಮಾತ್ರ ಆರ್ಯಪುತ್ರ ಎಂದು ಕರೆಯುವ‌ ವಾಡಿಕೆ.

ದುಷ್ಯಂತ ತನ್ನದು ದುಂಬಿಯ ಸ್ಥಿತಿ ಆಗಿದೆ ಎಂದು ಚಿಂತಿಸಿದ. ಮಧುವನ್ನು ಹೀರಲಾರ. ಪರಸ್ತ್ರೀಯನ್ನು ಸ್ವೀಕರಿಸಲಾರ. ಧರ್ಮದ ಉಲ್ಲಂಘನೆ ಮಾಡಲಾರ. ಹೀಗೆ ಚಿಂತಿಸುವವನನ್ನು ಮೋಸಗಾರ ಅನಬಹುದೇ? ಹಿಂದೆ ಮುಂದೆ ವಿಚಾರ ಮಾಡದೇ ಶಕುಂತಲೆಯನ್ನು ಸ್ವೀಕರಿಸಿ ಬಿಟ್ಟರೆ ಸ್ತ್ರೀ ಲಂಪಟ ಅನಬಹುದು.

ಶಾರಂಗರವ ಸ್ವಲ್ಪ ಕೋಪಿಷ್ಠ. ರಾಜನನ್ನು ಅಯೋಗ್ಯ ಎಂದು ತೆಗಳುವನು.

“ಶಕುಂತಲೆಯನ್ನು ಪತ್ನಿ ಆಗಿ ಸ್ವೀಕರಿಸು. ಹಾಗೆ ಮಾಡದಿದ್ದಲ್ಲಿ ನೀನು ಮಹರ್ಷಿಗಳ ಅವಮಾನ ಮಾಡುತ್ತಿರುವಿ. ನೀನು ಯೋಗ್ಯ ವರನೆಂದು ಅವರು ನಿನಗೆ ಮಗಳನ್ನು ಸಮರ್ಪಿಸಿದರು.ಕಣ್ವರು ಆಶ್ರಮದೊಳಗೆ ಇಲ್ಲದಾಗ ನೀನು ಅವರ ಸಂಪತ್ತು ಆದ ಮಗಳನ್ನು ಕದ್ದಿರುವಿ. ಈಗ ನಿನಗೊಪ್ಪಿಸಿದಾಗ ನಿರಾಕರಿಸಿ ಋಷಿಗಳ ಅವಮಾನ ಮಾಡಿರುವಿ”.

ಆಗ ಶಾಂತಿ ಸ್ವಭಾವದ ಶಾರದ್ವತ ಹೇಳುವನು

“ಸ್ವಲ್ಪ ತಾಳ್ಮೆ ಇರಲಿ. ನಿನ್ನ ಮಾತು ಸಾಕು. ಈಗ ಶಕುಂತಲೆಯೇ ಸಮಾಧಾನಕರ ಉತ್ತರವನ್ನು ಕೊಡಲಿ.”

ಆಗ ಶಕುಂತಲೆ, ದುಷ್ಯಂತನಿಗೆ ನೆನಪು ಮಾಡಿಕೊಡಲು, ತಮ್ಮಿಬ್ಬರ ಮಿಲನದಲ್ಲಿ ಆದ ಕೆಲವು ಘಟನೆಗಳನ್ನು ಹೇಳುವಳು. ಅವನನ್ನು ಆರ್ಯಪುತ್ರ ಎಂದು ಸಂಬೋಧಿಸದೇ ಪೌರವ ಎಂದು ಕರೆದು ದುಷ್ಯಂತ ಪುರುವಂಶದ ಲಲಾಮಭೂತ ಎನ್ನುವುದನ್ನು ನೆನಪು ಮಾಡಿಕೊಡುವಳು.

ಆಶ್ರಮದ ಸರಳ ಜೀವಿಗಳು ಇಂಥ ಮೋಸದ ನಾಟಕ ಮಾಡಲಾರರು ಎಂದು ತಿಳಿಸಲು ಪ್ರಯತ್ನಿಸಿದಳು.
ಸ್ವೀಕರಿಸಿದ ಪತ್ನಿಯನ್ನು ತ್ಯಾಗ ಮಾಡುವದು ನಿನ್ನ ವಂಶದ ಘನತೆಗೆ ವಿರುದ್ಧವಾದುದು. ಹಾಗೆ ಮಾಡಿದರೆ, ವಿವೇಕ ಶೂನ್ಯ ಎನಿಸುವೀ.”

ದುಷ್ಯಂತ, ಶಾಂತಂ ಪಾಪಂ ಎಂದು ಉದ್ಗರಿಸುತ್ತ,

“ನೀನು ನಿನ್ನನ್ನು ಸ್ವೀಕರಿಸಲು ಹೇಳಿ ನನ್ನನ್ನು ಅಧರ್ಮದಲ್ಲಿ ನೂಕುತ್ತಿರುವಿ. ನದಿಯ ನೀರು ದಡವನ್ನು ಮೀರಿ ಹರಿದಾಗ ಅದರ ನೀರೂ ಕಲುಷಿತ ಆಗುತ್ತದೆ ಅಲ್ಲದೇ ದಡದ ಗಿಡಮರಗಳನ್ನೂ ಬೇರು ಸಹಿತ ಕಿತ್ತು ಹಾಕುವದು. ಎರಡೂ ಕುಲಗಳನ್ನು ಪತನಕ್ಕೆ ನೂಕುತ್ತಿರುವಿ.”

ಎಂದು ಶಕುಂತಲೆಯ ವಾದವನ್ನು ಅಲ್ಲಗಳೆದನು.

ಆಗ ಸಖಿಯರು ಹೇಳಿದ ಮಾತು ನೆನಪಿಗೆ ಬಂತು. ಗುರುತಿಗಾಗಿ ದುಷ್ಯಂತನಿಂದ ಪಡೆದ ಉಂಗುರವನ್ನು ತೋರಿಸಲು ಮುಂದಾದಳು. ಉಂಗುರ ಧರಿಸಿದ ತನ್ನ ಬೆರಳನ್ನು ನೋಡಿ ಅದು ಉಂಗುರ ಶೂನ್ಯವಾಗಿದೆ!!

ಆಗ ತಕ್ಷಣ ಗೌತಮಿ ಹೇಳುವಳು.

“ಶಕ್ರಾವತಾರದ ಶಚಿತೀರ್ಥದಲ್ಲಿ ನೀನು ತರ್ಪಣ ಬಿಡುತ್ತಾ ಇರುವಾಗ ಉಂಗುರ ಜಾರಿ ಸರೋವರದಲ್ಲಿ ಬಿದ್ದಿರಬಹುದು.”

ಆಗ ದುಷ್ಯಂತ ತೋರಿಸಿದ ಪ್ರತಿಕ್ರಿಯೆ ನಮಗೂ ಕೋಪ ಬರಿಸುವಂತಹುದು.

“ಇದಂ ತತ್ ಪ್ರತ್ಯುತ್ಪನ್ನಮತಿ ಸ್ತ್ರೈಣಮ್ ಇತಿ ಯದುಚ್ಯತೆ.”

ನಗುತ್ತಾ ಹೇಳುವನು.

“ಸ್ತ್ರೀಯರು ಪ್ರತ್ಯುತ್ಪನ್ನ ಮತಿಗಳು ಅಂತ ಅದಕ್ಕೇ ಅನ್ನುವರು.”

‘ಪ್ರತ್ಯುತ್ಪನ್ನ ಮತಿ’ ಅಂದರೆ ಸಮಯದ ಲಾಭ ತೆಗೆದುಕೊಳ್ಳುತ್ತಾ ಮಾತನ್ನು ಪ್ರಸಂಗಾನುಸಾರವಾಗೀ ಹೊರಳಿಸುವವದು. ಗಾಳಿ ಬೀಸಿದ್ಹಾಂಗ ತೂರುವವರು.

ಆಗ ದೈವ ತನಗೆ ಕೈಕೊಟ್ಟು ಬಿಟ್ಟಿತು ಎಂದು ನಿರಾಶಳಾದಳು ಶಕುಂತಲೆ. ಆಗ ಆಕೆಗೆ ಇನ್ನೊಂದು ವಿಚಾರ ಹೊಳೆಯಿತು.

ಆಶ್ರಮದಲ್ಲಿ ಒಂದು ಘಟನೆಯನ್ನು ಬಣ್ಣಿಸುವಳು.

“ಒಂದು ದಿನ ನನ್ನ ಸಾಕುಮಗ ಎನಿಸಿದ ದೀರ್ಘಾಪಾಂಗ ಎಂಬ ಜಿಂಕೆ ನೀರು ಕುಡಿಯಲು ಧಾವಿಸಿದಾಗ, ನೀನು ಅದಕ್ಕೆ ನೀರು ಕುಡಿಸಲು ಮುಂದಾದೆ. ಅಪರಿಚಿತ ಆದ ನಿನ್ನ ಕೈಯಿಂದ ಅದು ನೀರು ಸ್ವೀಕರಿಸಲಿಲ್ಲ. ನಂತರ ಜಿಂಕೆ ನಾನು ಕೊಟ್ಟ ನೀರನ್ನು ಕುಡಿದಾಗ ನೀನು ಹೇಳಿದ್ದು ನೆನಪಿದೆಯಾ?

‘ಸರ್ವ: ಸಗಂಧೇಷು ವಿಶ್ವಸಿತಿ.’
ಸಾಮಾನ್ಯವಾಗಿ ಒಬ್ಬರು ತಮ್ಮದೇ ಜಾತಿಯವರಲ್ಲಿ ವಿಶ್ವಾಸ ಇಡುತ್ತಾರೆ.”

ಸಗಂಧಾ: ಎಂದರೆ ಸಮನಾದ ಗಂಧ
(having common smell ).
ಅಂದರೆ ಶಕುಂತಲೆ ಹಾಗೂ ಜಿಂಕೆ ಒಂದೇ ಕುಲದವರು ಎಂದು ದುಷ್ಯಂತ ಹಾಸ್ಯ ಮಾಡಿದ್ದನು.

ಆಶ್ರಮದಲ್ಲಿ ಜಿಂಕೆ ಸಾಕುಮಗ ಇದ್ದಂತೆ ಶಕುಂತಲೆಯೂ ಸಾಕುಮಗಳೇ ತಾನೇ!

ಈ ಘಟನೆಯನ್ನು ವಿವರಿಸಿದಾಗಲೂ ದುಷ್ಯಂತನಿಗೆ ಯಾವ ನೆನಪೂ ಮರುಕಳಿಸಲಿಲ್ಲ.

ಉಂಗುರ ಮಾಯವಾದದ್ದನ್ನು ನೋಡಿ ಆಯಿತು, ಕಟ್ಟುಕಥೆಯನ್ನ ಕೇಳಿಯಾಯಿತು ಎಂದು ದುಷ್ಯಂತ ಅಪಹಾಸ್ಯ ಮಾಡುತ್ತಾನೆ.

“ಲೌಕಿಕದಲ್ಲಿ ಲೋಲುಪರಾದವರು ಮಾತ್ರ ಇಂಥ ಬಣ್ಣದ ಸಿಹಿ ಮಾತುಗಳಿಂದ ಮೋಸಹೋಗ ಬಲ್ಲರು. ಈ ಹೆಣ್ಣು ಮಕ್ಕಳು ಕರುಣಾಪಾತ್ರರಾಗಿ ತಮ್ಮ ಕೆಲಸ ಸಾಧಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.”

ಎಂದು ನುಡಿಯುತ್ತಾ ಅರಸ ತನ್ನನ್ನು ಸಮರ್ಥಿಸಿಕೊಳ್ಳುತ್ತಾ ತಾನು ಧರ್ಮ ಪಾಲಕ ಎಂದು ತೋರಿಸಿಕೊಳ್ಳಲು ಪ್ರಯತ್ನ ಮಾಡಿದ. ಮುಂದೆ ಅವನು ಹೇಳುವ ನುಡಿ ಅತಿ ಮಾರ್ಮಿಕವಾಗಿದೆ. ಅದನ್ನು ಮುಂದಿನವಾರ ನೋಡೋಣವೇ ?