ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಹೀಗೊಂದು ಮದುವೆಯ ಕತೆ

ಸವಿತಾ ಅರುಣ್ ಶೆಟ್ಟಿ
ಇತ್ತೀಚಿನ ಬರಹಗಳು: ಸವಿತಾ ಅರುಣ್ ಶೆಟ್ಟಿ (ಎಲ್ಲವನ್ನು ಓದಿ)

ಟುಂಯ್ಯಿ ಟುಂಯ್ಯಿ ವಾಟ್ಸಾಪ್ ಮೆಸೇಜ್ ನ ನೋಟಿಫಿಕೇಶನ್ ಬಂದಾಗ ಇಡ್ಲಿಗೆ ಕಡೆಯುತಿದ್ದವಳು ಅಲ್ಲಿಂದಲೇ ಫೋನ್ ಗೆ ಒಂದು ಇಣುಕು ಹಾಕಿದೆ, ಸುಮಾಳ ಅಕ್ಕನ ಮಗಳ ಮದುವೆಯ ಕರೆಯೋಲೆ. ಈಗೀಗ ಇನ್ವಿಟೇಶನ್ ಪ್ರಿಂಟ್ ಮಾಡಿಸುವ ಜಂಜಾಟ ಇಲ್ಲ, ಮನೆಮನೆ ಬಿಸಿಲು ಮಳೆಯಲ್ಲಿ ತಿರುಗಿ ಆಮಂತ್ರಣ ಹಂಚುವ ಕಷ್ಟವಿಲ್ಲ .ಕೆಲವರು ಕೇಳುವುದುಂಟು ,”ಮನೆಗೆ ಬಂದು ಕೊಡ್ಬೇಕಾ?”ಅಂತ. ನಾವೇ ,”ಬೇಡ ,ನಿಮಗ್ಯಾಕೆ ಕಷ್ಟ” ಅಂತ ಹೇಳುವುದುಂಟು ..ಮನಸ್ಸಲ್ಲಿ ‘ಮನೆಗೆ ಬಂದೇ ಕೊಡಲಿ ‘ಅಂತ ಇದ್ರೂ ಅವರಿಗೆ ಯಾಕೆ ಮುಜುಗರ ಮಾಡುದು ಅಲ್ಲವಾ!?

ಸ್ವಲ್ಪ ಹೊತ್ತಿನಲ್ಲೇ ಅವಳಿಂದ ಫೋನ್ ಕಾಲೂ ಬಂತು .”ಹೇಗೂ ಊರಿಗೆ ಬರ್ತಿದ್ದೀಯಲ್ಲ, ಮದುವೆಗೆ ಬಾ.. ನಿನಗೆ ನಮ್ಮಲ್ಲಿ ನಡೆಯುವ ಮದುವೆಯ ವಿಧಿ ವಿಧಾನ ನೋಡುವ ಆಸಕ್ತಿ ಅಲ್ವ ….? ಬಾ. ಮತ್ತೆ ನಾವು ಒಬ್ಬರಿಗೊಬ್ಬರು ಮೀಟ್ ಮಾಡಿದ ಹಾಗೂ ಆಯಿತು.”

ನಂಗೂ ತುಂಬಾ ಸಂತಸ, ೧೫ ವರ್ಷಗಳಿಂದ ಮುಖಾಮುಖಿ ಭೇಟಿಯಿಲ್ಲ. ವಾಟ್ಸಪ್ ಮೇಸೇಜಸ್ ಗಳಲ್ಲಿ, ಫೋನ್ ಕಾಲ್ ಗಳಲ್ಲಿ ನಮ್ಮ ಗೆಳೆತನ ಇನ್ನೂ ಜೀವಂತ.

ದೀಪಾವಳಿ ರಜೆಯೂ ಬಂತು, ಊರಿಗೆ ಹೊರಟಿದ್ದೂ ಆಯಿತು. ಹೊರಡುವಾಗ ಒಂದೆರಡು ಕಾಂಜೀವರಂ ಸೀರೆ ತಕ್ಕೊಂಡೇ ಹೋಗುವ ಅಭ್ಯಾಸ, ಯಾರದಾದರೂ ಅರ್ಜೆಂಟ್ ಆಗಿ ಶುಭಕಾರ್ಯ ಫಿಕ್ಸ್ ಆದರೆ ಮತ್ತೆ ಎಲ್ಲಿಂದ ಒಳ್ಳೆಯ ಬಟ್ಟೆ ತರುವುದು .? ಜೊತೆಗೆ ಅಮ್ಮನ ಪಿರಿಪಿರಿ ಕೇಳಬೇಕು .ನನ್ನ ಸೀರೆ ಉಟ್ಕೊಳ್ಳಿ ಅಂತ ಒಂದೇ ಚೊರೆ ಅವರದ್ದು ಶುರುವಾಗುತ್ತದೆ .. ಸೀರೆಯಾದರೂ ಉಟ್ಕೊಂಡು ಹೋಗಬಹುದೇ …..!,ಆದರೆ ಬ್ಲೌಸ್,?? ಏನೂ ಡಿಸೈನ್ ಇರದಿದ್ದದ್ದು ಹಾಕ್ಕೊಂಡು ಹೋದರೆ ನಮ್ಮ ಮರ್ಯಾದೆ ಏನಾಗಬೇಡ !?

ಮದುವೆಯ ದಿನವೂ ಬಂತು .ಮಕ್ಕಳನ್ನು ಅಮ್ಮನೊಟ್ಟಿಗೆ ಮನೆಯಲ್ಲೇ ಬಿಟ್ಟು ಹೊರಟೆ. ಅವರಿಗೆ ಊರಲ್ಲಿ ಬಂದು ಮದುವೆ , ದೇವಸ್ಥಾನಕ್ಕೆಲ್ಲ ಸುತ್ತುವ ಆಸಕ್ತಿಯೂ ಇಲ್ಲ. ಬಾಕ್ಯಾರಿನ ಗದ್ದೆಯಲ್ಲಿ ಕ್ರಿಕೆಟ್ ಆಡುವ ಹುಚ್ಚು ಅವಕ್ಕೆ. ನನಗೂ ಸುಲಭವೇ ಆಯಿತು..!

ನಮ್ಮಲ್ಲಿ ಕಾರಿಲ್ಲ. ಇದ್ದರೂ ಡ್ರೈವ್ ಮಾಡುವುದು ಯಾರು ? ಕ್ಯಾಬ್ ಮಾಡುವ ಅಂದರೆ ಬಂಗಾರ ಎಲ್ಲ ಹಾಕ್ಕೊಂಡು ಒಬ್ಬಳೇ ಕಾರ್ಕಳದಿಂದ ಮಂಗಳೂರು ತನಕ ಹೋಗಲು ಹೆದರಿಕೆ. ಹೇಗೂ ಗಡಿಗಡಿ ಕಾರ್ಕಳ ಮಂಗಳೂರು ಪ್ರೈವೇಟ್ ಎಕ್ಸ್ಪ್ರೆಸ್ ಬಸ್ಗಳಿವೆಯಲ್ಲ .ಹೋದರಾಯ್ತು ಅಂತ ಬಸ್ ಸ್ಟ್ಯಾಂಡಿನವರೆಗೆ ರಿಕ್ಷಾದಲ್ಲಿ ಹೋದದ್ದಾಯ್ತು.. ಊರಲ್ಲಿ ರಿಕ್ಷಾ ಬಾರಿ ಕಾಸ್ಟ್ಲಿ ಮಾರಾಯ್ರೆ..! ಒಂಭತ್ತು ತಿಂಗಳು ಭರ್ತಿ ತುಂಬಿದ ಬಸುರಿಯಂತಿತ್ತು ಬಸ್ಸು.. ಕಾಲಿಡಲಿಕ್ಕೆ ಜಾಗ ಇಲ್ಲ. ಅದರ ಮೇಲೆ ಕಂಡಕ್ಟರ್ ನ ಅಬತಾರ.. “ಮುಂದಿದ್ದವರು ಹಿಂದೆ ಹೋಗಿ.ಹಿಂದಿದ್ದವರು ಮುಂದೆ ಹೋಗಿ” ಅಂತ..ನಡುವೆ ಫುಟ್ಬಾಲ್ ಆಡುವಷ್ಟು ಜಾಗ ಉಂಟು ಅಂತ ಅವನ ಬೊಬ್ಬೆ..ಜರಿಸೀರೆಯಲ್ಲಿ ಬೆವರುವ ಮೈ. ಹೇಗೂ ಮಂಗಳೂರು ಮುಟ್ಟಿದೆ ನಿಮಗ್ಗೊತ್ತುಂಟಾ.! ಈಗ ಮಂಗಳೂರಲ್ಲಿ ಮೂರೂ ಕಾಲಗಳನ್ನು ಒಂದೇ ದಿನದಲ್ಲಿ ನೋಡಬಹುದಂತೆ …

ನಾನು ಮಂಗಳೂರು ಮುಟ್ಟುವಾಗ ೧೨ ಘಂಟೆಗೆ ಮಳೆಗಾಲ ಶುರುವಾಗಿ ಆಗಿದೆ. ನಾನು ಬಸ್ ಇಳಿದು, ಮದುವೆ ಮಂಟಪ ಮುಟ್ಟುವಷ್ಟರಲ್ಲಿ ಚಂಡಿ ಪುಂಡಿ ಮುದ್ದೆ. ನನ್ನ ಅವಸ್ಥೆ ಊಹಿಸಿ. ಬೆವರಿಗೆ ಮೈಗಂಟಿದ ಸೀರೆ ಈಗ ಚಿರಿಪಿರಿ ಮಳೆಯಲ್ಲಿ . ಮದುವೆಯ ಹಾಲ್ ಒಳಗಡೆ ಚಳಿಗಾಲದ ಫೀಲ್ . ಕೊನೆಯಲ್ಲೆಲ್ಲೋ ಕುಕ್ಕರಿಸಿದೆ. ಅಲ್ಲಿಂದಲೇ ನನ್ನ ಗೆಳತಿಗಾಗಿ ಇಣುಕು ಹಾಕಲು ತೊಡಗಿದೆ..ಅವಳಿಲ್ಲದಿದ್ದರೂ ಅವಳ ಅಕ್ಕನಾದರೂ ಮದುಮಕ್ಕಳ ಪಕ್ಕದಲ್ಲಿ ಇರುತ್ತಾರೆ ಅಲ್ಲವಾ ಅಂತ..ಯಾರೂ ಕಾಣುತ್ತಿಲ್ಲ ,ಎಲಾ ಸೋಜಿಗವೇ ..! ನನಗೆ ಸ್ಟೇಟಸ್ ಗಳಲ್ಲಿ ನೋಡಿ ನೋಡಿ ಮನೆಯವರೆಲ್ಲರ ಪರಿಚಯ ಇದೆ..ಮತ್ತೆ ಯಾಕೆ ಎಲ್ಲ ಅಪರಿಚಿತ ಮುಖಗಳೇ ಕಾಣುತ್ತಿವೆ? ಅರ್ಥವಾಗಲಿಲ್ಲ .ಫೋನ್ ತೆಗೆದು ಅಡ್ರೆಸ್ಸ್ ನೋಡಿದೆ. ಸರಿಯಾಗಿದೆ ! ಆಗಲೇ ಮದುವೆ ವಿಧಿವಿಧಾನಗಳು ಮುಗಿದು ವಧುವರರಿಗೆ ವಿಶ್ ಮಾಡಲು ಜನ ಸಾಲಿನಲ್ಲಿ ನಿಂತಿದ್ದಾರೆ…ನಾನೂ ಹೋಗಿ ನಿಂತೆ. ಬೇಗ ಬೇಗ ವಿಶ್ ಮಾಡಿ ಊಟ ಮಾಗಿಸಿ ಮನೆ ತಲುಪುವ ಆತುರ ನನ್ನದು. ಮತ್ತೆ ಲೇಟ್ ಆದರೆ ಮಳೆಯಲ್ಲಿ ಸಿಕ್ಕಿಕೊಂಡರೆ..ತಡವಾದರೆ ,ನಮ್ಮ ಕಾರ್ಕಳದಲ್ಲೂ ಕರೆಂಟ್ ಹೋದರೆ ,ಮನೆಯಲ್ಲಿ ಮಕ್ಕಳಿಗೆ ಟಿವಿ ನೋಡಲಾಗದೆ ಅಮ್ಮನಿಗೆ ತೊಂದರೆ ಕೊಟ್ಟರೆ..ಹೀಗೆ ನೂರೆಂಟು ‘ರೆ’ ಗಳ ಟೆನ್ಶನ್.

ಅಷ್ಟರಲ್ಲಿ ಎಲ್ಲೋ ನೋಡಿದ ಹಾಗಿದ್ದ ಮುಖವೊಂದು ನನ್ನನ್ನೇ ನೋಡುತ್ತಾ ಬರುತ್ತಿದೆ.. “ಅರೆ, ನೀನು ಕವಿತಾ ಅಲ್ಲಾನ?” ಎಂದ . ಓಹ್, ಹೌದಲ್ಲ! ಇವ ನನ್ನ ಕ್ಲಾಸ್ಮೇಟ್ ಇದ್ದವ. ಅವನಿಗೆ ನನ್ನ ನೆನಪಿದ್ದದ್ದದ್ದು ಆಗಬಹುದು. ಪದವಿಯ ಮೂರು ವರ್ಷದಲ್ಲಿ ಒಮ್ಮೆಯೂ ಮಾತಾಡಿರಿಕ್ಕಿಲ್ಲ.. ನಾನಾಗಿ ನಾನು ಯಾರತ್ರನು ಮಾತಾಡುವುದೇ ಕಮ್ಮಿ..ಅದ್ರಲ್ಲೂ ಇವ ಅಪರೂಪಕ್ಕೊಮ್ಮೆ ಕ್ಲಾಸ್ಸಿಗೆ ಹಾಜರಿ ಕೊಡುತ್ತಿದ್ದವ..ಈಗ ತುಂಬಾ ಆಪ್ತನಂತೆ ಮಾತನಾಡಿಸಿದ ..ನಂಗೂ ಖುಷಿಯಾಯ್ತು ..ಒಂದು ಜೊತೆಯಾಯ್ತಲ್ಲ ಅಂತ .”ಹುಡುಗ ನನ್ನ ಆಫೀಸ್ ನವ. ನೀನು ಯಾವ ಕಡೆಯಿಂದ ..?”ಎಂದ. ನಾನು,” ಹುಡುಗಿಯ ಕಡೆಯಿಂದ” ಎಂದೆ .ಪುಣ್ಯಕ್ಕೆ, ಹೇಗೆ, ಏನು ಅಂತ ಕೇಳಲಿಲ್ಲ, ಪಾಪ !

ಬೇರೆ ಯಾರೂ ಪರಿಚಯದವರು ಸಿಗಲೂ ಇಲ್ಲ, ಮಾತನಾಡಿಸಲೂ ಇಲ್ಲ. ಪೆಚ್ಚುನಗೆಯ ಫೋಸ್ ಕೊಟ್ಟು, ಊಟದ ಹಾಲ್ ಗೆ ಬಂದೆ. ಇಲ್ಲಿ ಬೇಸಿಗೆಕಾಲಕ್ಕೆ ಶಿಫ್ಟ್ ಆದಂತಾಯ್ತು. ಊಟಕ್ಕೆ ಕೂತಾಗ ನನ್ನ ಕ್ಲಾಸ್ಮೇಟ್ ಕೂಡ ಜೊತೆಯಲ್ಲೇ ಕೂತ.. ಸುಮಾರು ಬಗೆಯ ಪಲ್ಯ.. ಒಂದೊಂದೇ ಐಟಮ್ಸ್ ಬಡಿಸುತ್ತಾ ಹೋದ ಹಾಗೆ ನಾನು ತಿನ್ನುತ್ತಾ ಬಂದೆ.. ಆದರೇನು ..!? ಒಂದು ಸಲ ನೆಕ್ಕಿ, ರುಚಿಯಾಗಿದೆ ಇನ್ನೂ ತಿನ್ನುವ ಆಸೆ ಆದರೆ ಅಲ್ಲಿ ಎಲ್ಲುಂಟು..? ಇಷ್ಟಿಷ್ಟೇ ಬಡಿಸಿದ್ದಾರೆ. ಹಕ್ಕಿಪಿಕ್ಕೆಯ ಹಾಗೆ.(ಭಟ್ರ ಅಡುಗೆಯೆಂದರೆ ಹಾಗೇ ಅಂತೆ…! ಯಾರೋ ಹೇಳಿದರಪ್ಪ!..ನಂಗೊತ್ತಿಲ್ಲ!!) ಅದ್ರೂ ಐಟಮ್ಸ್ ನೋಡಿಯೇ ಹೊಟ್ಟೆ ತುಂಬಬಹುದಿತ್ತು. ಅಷ್ಟರಲ್ಲಿ ವಧುವಿನ ಅಪ್ಪ, ವರನ ಅಪ್ಪ ದುಡ್ಡು ಕೊಡುತ್ತಾ ಬಂದರು..ನನಗೆ ತಗೋಳಿಕ್ಕೆ ನಾಚಿಕೆ ಆಯಿತು..ಇವರೆಂತಕ್ಕೆ ನನಗೆ ದುಡ್ಡು ಕೊಡ್ತಾರಪ್ಪ! ಅಂತಂದು ..ಬದಿಯಲ್ಲೇ ಕೂತಿದ್ದವ ಹೇಳಿದ ,”ತಗೋ’ ತಗೋ ಇದು ದಕ್ಷಿಣೆ. ಎಲ್ಲರಿಗೂ ಕೊಡ್ತಾರೆ.” “ಹೌದಾ…ನಮ್ಮಲ್ಲಿ ಈ ಕ್ರಮ ಇಲ್ಲಪ್ಪ.” ಅಂತ ಮೆಲ್ಲನೆ ಪರ್ಸ್ ನಲ್ಲಿ ತುರುಕಿಸಿದೆ..ಬಸ್ಚಾರ್ಜ್ ಬಂತು ಅದ್ಕೊಂಡೆ ಮನದಲ್ಲೇ. ಊಟ ಮುಗಿದು, ಗೆಳತಿಗಾಗಿ ಸುಮಾರು ಹುಡುಕಿದೆ,ಇಷ್ಟು ದೂರ ಬಂದು, ಇಷ್ಟೊತ್ತಿನಲ್ಲಿ ಇನ್ನೂ ಸಿಗಲಿಲ್ವಲ್ಲ, ನಾನು ಬಂದಿದ್ದೆ ಅಂತ ಹೇಗೆ ಹೇಳುವುದು.. ಫೋನ್ ಕೂಡ ನಾಟ್ ರೀಚಬಲ್ ಬರ್ತಾ ಇದೆ. ಇನ್ನೂ ಕಾದರೆ ಮನೆ ಸೇರ್ಲಿಕ್ಕೆ ಲೇಟ್ ಆಗ್ತದೆ ಅಂತ ಹೊರಟೆ.

ಹೊರಗೆ ಬಂದಾಗ ಹಾಲ್ ನ ಹೊರಗಿಟ್ಟ ಮದುಮಕ್ಕಳ ಹೆಸರಿನ ಬೋರ್ಡ್ ಕಾಣಿಸಿತು. ಒಳಗೆ ಹೋದಾಗ ನೋಡಿರಲಿಲ್ಲ. ಪ್ರಿಯ ವೆಡ್ಸ್ ಪ್ರಥಮ್..ಅರೆ, ನನ್ನ ಫ್ರೆಂಡ್ ನ ಅಕ್ಕನ ಮಗಳ ಹೆಸರು ಶ್ರಾವ್ಯ ಅಲ್ವ..ನಾನ್ಯಾವ ಮದುವೆಗೆ ಬಂದೆ..ಇನ್ನೊಮ್ಮೆ ಚೆಕ್ ಮಾಡ್ತೇನೆ ನೋಡುವ ಅಂತ ಫೋನ್ ನಲ್ಲಿ ಇನ್ವಿಟೇಶನ್ ನೋಡ್ತೇನೆ…

ಧಾರೆಯ ಮೂಹೂರ್ತ ಗೋಧೂಳಿ ಸಮಯ , ಸಂಜೆ ೬:೪೫ಕ್ಕೆ.