ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಹೊಸ ವರುಷ ಹೊಸ ಹರುಷ ಬೇವು ಬೆಲ್ಲದ ವಿಶೇಷ

ರಾಜೇಶ್ವರಿ ವಿಶ್ವನಾಥ್
ಇತ್ತೀಚಿನ ಬರಹಗಳು: ರಾಜೇಶ್ವರಿ ವಿಶ್ವನಾಥ್ (ಎಲ್ಲವನ್ನು ಓದಿ)

ಚೈತ್ರ ಶುಕ್ಲ ಪ್ರತಿಪದಗೆ “ಯುಗಾದಿ”ಎನ್ನುತ್ತಾರೆ. ವರ್ಷದಲ್ಲಿ” ಮೂರೂವರೆ ಮುಹೂರ್ತದ “ಪೈಕಿ ಯುಗಾದಿ ಒಂದು ಶುಭ ಮುಹೂರ್ತವಾಗಿದೆ.ಈ ಹಬ್ಬ ಹಳೆಯ ಹೊಸತನ್ನು ಸೇರಿಸುವ ಕೊಂಡಿ. ಫಾಲ್ಗುಣ ಬಹುಳ ಅಮಾವಾಸ್ಯೆ ದಿನ ಹಳೆಯ ವರ್ಷಕ್ಕೆ ವಿದಾಯ ಹೇಳಿ,ಮಾರನೇ ದಿನ ಚೈತ್ರ ಮಾಸದ ಶುಕ್ಲ ಪ್ರತಿಪದೆಯಂದು ಯುಗಾದಿ ಎಂದು ಹೊಸವರ್ಷವನ್ನು ಆಚರಿಸುತ್ತೇವೆ. ಹಿಂದಿನ ವರ್ಷದ ಕಹಿ ಘಟನೆಗಳನ್ನು ಮರೆತು ಸಿಹಿ ಸಂತಸದ ಕ್ಷಣಗಳನ್ನು ನೆನೆಸಿಕೊಳ್ಳುತ್ತಾ ಭವಿಷ್ಯದ ಸುಖಕ್ಕಾಗಿ ಯುಗಾದಿಯನ್ನು ಆಚರಿಸುತ್ತೇವೆ. ಸೂರ್ಯಚಂದ್ರರ ಹಿನ್ನೆಲೆಯಲ್ಲಿ ಯುಗಾದಿ ಎರಡು ಬಾರಿ ಆಚರಣೆಯಲ್ಲಿದೆ. ನಮ್ಮಲ್ಲಿ ಸೌರ ಚಂದ್ರಮಾನದ ಹಬ್ಬಗಳು ರೂಡಿಯಲ್ಲಿದೆ. ರೂಢಿಯಲ್ಲಿದೆ.ಆಚರಣೆಯಲ್ಲೂ ಕೆಲವು ವಿಷಯಗಳಿವೆ.

‌ ಯುಗಾದಿ ಎಂಬ ಪದ ಸಂಸ್ಕೃತದ ಯುಗ ಮತ್ತು ಆದಿ ಎಂಬ ಎರಡು ಪದಗಳಿಂದ ಕೂಡಿದೆ. ಈ ಯುಗಾದಿಯು ಕೃತಯುಗದ ಚೈತ್ರ ಶುದ್ಧ ಪಾಡ್ಯ ತಿಥಿ ದಿನದಂದು ಪ್ರಾರಂಭವಾಯಿತು ಎಂಬ ಪ್ರತೀತಿ ಇದೆ.ಹಾಗೂ ಬ್ರಹ್ಮದೇವನು ಆ ದಿನದಿಂದಲೇ ಸೃಷ್ಟಿಯ ಕಾರ್ಯ ಆರಂಭಿಸಿದನೆಂಬ ಪ್ರತೀತಿ ಇದೆ. ಅಂದಿನಿಂದಲೇ ವರ್ಷ, ಋತುಗಳು, ಮಾಸಗಳು,ಗ್ರಹಗಳು,ನಕ್ಷತ್ರಗಳು ಸೃಷ್ಟಿಸಿದನೆಂಬ ನಂಬಿಕೆಯಿದೆ.ವೇದಗಳ ಮಂತ್ರದಲ್ಲಿ ವರ್ಷವನ್ನು ರಥಕ್ಕೂ, ಉತ್ತರಾಯಣಾ ಮತ್ತು ದಕ್ಷಿಣಾಯನವನ್ನು ಅದರ ಚಕ್ರಗಳಿಗೂ ಹೋಲಿಸಲಾಗಿದೆ. ಆದ್ದರಿಂದಲೇ ವರ್ಷವನ್ನು ಯುಗ ಎಂದೂ ಅದರ ಮೊದಲ ದಿನವನ್ನು ಯುಗಾದಿ ಎಂದೂ ಕರೆಯಲಾಗಿದೆ.
ಸೂರ್ಯಚಂದ್ರರ ಹಿನ್ನೆಲೆಯಲ್ಲಿ ಯುಗಾದಿ ಎರಡು ಬಾರಿ ಆಚರಣೆಯಲ್ಲಿದೆ. ನಮ್ಮಲ್ಲಿ ಸೌರ,ಚಂದ್ರಮಾನ ಹಬ್ಬಗಳು ರೂಡಿಯಲ್ಲಿದೆ.ಆಚರಣೆಯಲ್ಲೂ ಕೆಲವು ವಿಶೇಷಗಳಿವೆ.
‌ ಶ್ರೀರಾಮಚಂದ್ರನು ಚೈತ್ರ ಶುದ್ಧ ಪಾಡ್ಯಮಿಯಂದೇ ವಿಜಯೋತ್ಸವ ಆಚರಿಸಿ, “ಯುಗಾದಿ” ಶುಭದಿನದಂದು ಶ್ರೀರಾಮಚಂದ್ರ ಪಟ್ಟಾಭಿಶಕ್ತನಾಗುತ್ತಾನೆ. ಉಜ್ಜಯಿನಿಯ ವಿಕ್ರಮಾದಿತ್ಯನನ್ನು ಶಾಲಿವಾಹನ ಪರಾಭವಗೊಳಿಸಿ ತನ್ನ ಶಕವನ್ನು ಸ್ಥಾಪಿಸಿದ್ದು ಈ ದಿನವೇ. ಕೃತಿಯುಗದ ಪ್ರಾರಂಭ ಈ ದಿನವಾದರೆ, ತೇತ್ರಾಯುಗವು ವೈಶಾಖ ಶುಕ್ಲ ತೃತೀಯದಂದು, ಅಂತೆಯೇ ದ್ವಾಪರ ಪ್ರಾರಂಭವಾದದ್ದು ಈ ಮಾಘ ಬಹುಳ ಅಮಾವಾಸ್ಯೆಯ ದಿನ.
‌ಯುಗಾದಿಯನ್ನು ಸಂತೋಷ ಸಂಭ್ರಮದಿಂದ ಸ್ವಾಗತಿಸಲು ಇಡೀ ಪ್ರಕೃತಿ ಸಜ್ಜಾಗಿರುತ್ತದೆ. ಎಲ್ಲೆಡೆ ಕಂಗೊಳಿಸುತ್ತಿರುವ ಚಿಗುರು ಹೊಸ ಚೈತನ್ಯವನ್ನು ಪ್ರತಿಬಿಂಬಿಸುವ ಹೊತ್ತಿನಲ್ಲಿಯೇ ಬಣ್ಣಬಣ್ಣದ ಹೂವುಗಳಿಂದ ಅಲಂಕರಿಸಿಕೊಂಡ ಮರಗಿಡಗಳು ಕಣ್ಣಿಗೆ ಸೊಬಗನ್ನು, ಮನಕ್ಕೆ ಉಲ್ಲಾಸವನ್ನು ನೀಡುತ್ತದೆ. ಮಾವು-ಬೇವು ಚಿಗರಿ,ಆ ಚಿಗುರಿಗೆ ಮನಸೋತ ಕೋಗಿಲೆ ಹಾಡಲು ವಸಂತ ನೆನೆಯಲೇಬೇಕು. ಇದು ಪ್ರಕೃತಿಯ ಸಹಜ ಧರ್ಮ.
‌ದೇವರ ದಿವ್ಯ ಸಂದೇಶ.
‌ಪ್ರತಿಯೊಂದು ಹಬ್ಬವೂ ನಮ್ಮ ಬದುಕಿನ ದಿವ್ಯ ಸಂದೇಶವನ್ನೇ ನೀಡುತ್ತದೆ. ಯುಗಾದಿ ಹಬ್ಬದಂದು ದೇವರಿಗೆ ಅರ್ಪಿಸುವ ಬೇವು-ಬೆಲ್ಲ,ದೈವೀ ಗುಣ ಮೈಗೂಡಿಸಿಕೊಳ್ಳುತ್ತಾ( ಬೆಲ್ಲ )ಪ್ರಕೃತಿಗಾಗಿ ಹಂಬಲಿಸುತ್ತ (ಬೇವು) ತಾಳ್ಮೆಗೆಡದೆ ಮುನ್ನಡೆ ಯುವವರಿಗೆ ತನ್ನ ಕೃಪಾ ಪ್ರಸಾದದ ಸವಿ ಕಟ್ಟಿಟ್ಟದ್ದು. ಎಂಬ ದೇವರ ದಿವ್ಯಸಂದೇಶವನ್ನೇ ಬಿಂಬಿಸುತ್ತದೆ.
‌ಹಬ್ಬದ ಸಂಪ್ರದಾಯ
‌ಯುಗಾದಿ ಹಬ್ಬವನ್ನು ಬೇವುಬೆಲ್ಲದ ಹಬ್ಬ ಎಂದು ಕರೆಯುತ್ತಾರೆ.ಈಹೊಸ ವರ್ಷ ಯುಗಾದಿ ಹಬ್ಬವನ್ನು ಸಂತೋಷ ಸಂಭ್ರಮದಿಂದ ಆಚರಿಸುತ್ತಾರೆ. ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಮನೆಯನ್ನು ಗೋಮಾಯದಿಂದ ಸಾರಿಸಿ ರಂಗವಲ್ಲಿ ಬಿಡುತ್ತಾರೆ. ಮನೆಯನ್ನು ಮಾವು ಬೇವುಗಳಿಂದ ಸಿಂಗರಿಸುತ್ತಾರೆ. ಮನೆಯ ಮುಂಭಾಗಕ್ಕೆ ಅಷ್ಟದಳ, ಪದ್ಮ, ಸ್ವಸ್ತಿಕ, ಕಮಲ, ಕಳಸ ಮುಂತಾಗಿ ರಂಗೋಲಿಯನ್ನು ಬಿಡಿಸುತ್ತಾರೆ. ಗೋಶಾಲೆ,ತುಳಸಿಕಟ್ಟೆ, ದೇವರ ಮನೆಯನ್ನು ತಳಿರು ತೋರಣಗಳಿಂದ ಅಲಂಕರಿಸುತ್ತಾರೆ.ಮನೆಯ ಗೋವು,ಎತ್ತುಗಳಿಗೆ ಸ್ನಾನಮಾಡಿಸಿ ಬಣ್ಣದ ಅಲಂಕಾರ ಮಾಡಿ ಹೂವಿನಿಂದ ಅಲಂಕರಿಸುತ್ತಾರೆ ನಂತರ ಕುಟುಂಬದ ಸದಸ್ಯರೆಲ್ಲರೂ ಅಭ್ಯಂಜನ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ದೇವರಿಗೆ ದೀಪ ಬೆಳಗಿಸುತ್ತಾರೆ. ಸಂಕಲ್ಪ ವಿಧಿಯೊಂದಿಗೆ ಅಭಿಷೇಕ ಸಲ್ಲಿಸಿ ಧೂಪ ದೀಪ ನಿವೇಧನಾದಿಗಳ ಜೊತೆ ನಿಂಬ ಕಂದಳವನ್ನು ನಿವೇದಿಸುತ್ತಾರೆ.ಹೊಸವರ್ಷದ ಪಂಚಾಂಗ ವನ್ನಿಟ್ಟು ಪೂಜಿಸುತ್ತಾರೆ. ಈ ರೀತಿಯ ಆಚರಣೆಯಿಂದ ಕುಟುಂಬಕ್ಕೆ ವರ್ಷಪೂರ್ತಿ ಆರೋಗ್ಯ, ಸಂತಸ, ಸಡಗರ ಒದಗುತ್ತದೆಂಬ ನಂಬಿಕೆ ಇದೆ.

‌ಆರೋಗ್ಯಕರವಾದ ಬೇವು ಬೆಲ್ಲ ಸ್ವೀಕಾರ.
‌ಯುಗಾದಿ ಹಬ್ಬದ ವೈಶಿಷ್ಟ ಬೇವು-ಬೆಲ್ಲಗಳ ಸೇವನೆ. ಇವೆರಡನ್ನು ಸೇರಿಸಿ ದೇವರಿಗೆ ನೈವೇದ್ಯ ಮಾಡುತ್ತಾರೆ. ಬೇವು ಕಹಿಗೆ ಸಂಕೇತವಾದರೆ,ಬೆಲ್ಲ ಸಿಹಿಗೆ ಸಂಕೇತ. ಬೇವಿನ ಹೂ ಎಲೆಗಿಂತ ಶ್ರೇಷ್ಠವಾದದ್ದು. ದೇವತಾ ಪ್ರಾರ್ಥನೆ ಮಾಡಿ ಬೇವು-ಬೆಲ್ಲ ಪ್ರಸಾದ ರೂಪವಾಗಿ ಸ್ವೀಕರಿಸುತ್ತಾರೆ. ಇದನ್ನು ಸ್ವೀಕರಿಸುವಾಗ ಈ ಶ್ಲೋಕ ಹೇಳುತ್ತಾರೆ.
” ಶತಾಯರ್ವಜ್ರದೇಹಾಯ ಸರ್ವಸಂಪತ್ಕರಾಯಚ,ಸರ್ವಾರಿಷ್ಟ ವಿನಾಶಯ ನಿಂಬಕಂದಳ ಭಕ್ಷಣಮ್”
ಈ ಶ್ಲೋಕದ ಅರ್ಥ ನೂರು ವರ್ಷಗಳ ಆಯಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿ, ರೋಗ ನಿವಾರಣೆಗಾಗಿ ಬೇವು ಬೆಲ್ಲ ಸೇವನೆ ಮಾಡುತ್ತೇನೆ ಎಂದು ಅರ್ಥ.
ಹಾಗೆ ಹಲವರಿಗೆ ಪ್ರಸಾದದ ರೂಪದಲ್ಲಿ ಹಂಚಿ ಹಿರಿಯರಿಗೆ ಕಾಣಿಕೆ ಕೊಟ್ಟು ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾರೆ.ಬೇವು-ಬೆಲ್ಲವನ್ನು ಸವಿಯುವುದರ ಮೂಲಕ ಕಷ್ಟ ಸುಖವನ್ನು ಸಮನಾಗಿ ಕಾಣಬೇಕೆನ್ನುವ ಮನಸ್ಥಿತಿಯನ್ನು ರೂಡಿಸಿಕೊಳ್ಳಬೇಕು. ಕಷ್ಟ-ಸುಖವು ಒಂದೇ ನಾಣ್ಯದ ಎರಡು ಮುಖ ಇದ್ದಹಾಗೆ. ಜೀವನವು ಬರೀ ಸಿಹಿಯು ಅಲ್ಲ ಅಥವಾ ಕಹಿಯೂ ಅಲ್ಲ. ಎರಡು ಸಮಪ್ರಮಾಣ ಬದುಕು. ಸುಖ ಬಂದಾಗ ಹಿಗ್ಗದೇ ಕಷ್ಟ ಬಂದಾಗ ಕುಗ್ಗದೇ ಜೀವನದಲ್ಲಿ ಇರಬೇಕು. ಏನೇ ಕಷ್ಟ ಸಮಸ್ಯೆಗಳು ಬಂದರೆ ಧೈರ್ಯ ತಾಳ್ಮೆ ಕಳೆದುಕೊಳ್ಳಬಾರದು. ಶಾಂತ ಸ್ವಭಾವ ಬೆಳಸಿಕೊಳ್ಳಬೇಕು.’ಈಸಬೇಕು ಇದ್ದು ಜಯಿಸಬೇಕು’ಎಂದುದಾಸರು ಹೇಳಿಲ್ಲವೆ.
ಇನ್ನು ಆಯುರ್ವೇದದ ಪ್ರಕಾರ ಬೇವು ರೋಗನಿವಾರಕ, ಕ್ರಿಮಿನಾಶಕ, ಆರೋಗ್ಯದಾಯಕ, ಔಷಧೀಯ ಗುಣಗಳಿವೆ ಇವೆ. ಬೇವಿನ ಎಲೆಗಳನ್ನು ದಿನಾ ಸೇವಿಸುವುದರಿಂದ ಸರ್ವ ಅನಿಷ್ಟಗಳು ನಾಶವಾಗುವುದಲ್ಲದೆ, ಆಯುಷ್ಯವೃದ್ಧಿಯಾಗುತ್ತದೆ. ಬೇವು ಅಧರಕ್ಕೆ ಕಹಿಯಾದರೂ ಉದರಕ್ಕೆ ಸಿಹಿ. ಬೇವಿನ ಎಲೆಗಳನ್ನು ಬೆಳಿಗ್ಗೆ ಎದ್ದು ಖಾಲಿಯ ಹೊಟ್ಟೆಯಲ್ಲಿ ತಿನ್ನುತ್ತಾ ಬಂದರೆ ನಮ್ಮದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಬೇವಿನ ರಸ ಕುಡಿಯುವುದರಿಂದ ರಕ್ತಶುದ್ಧಿ ಆಗುತ್ತದೆ. ಅಲ್ಲದೆ ಅಜೀರ್ಣ, ಹೊಟ್ಟೆನೋವು ,ಹೊಟ್ಟೆ ಉರಿ, ಮಲಬದ್ಧತೆ ಇವೆಲ್ಲವೂ ಶಮನ ಮಾಡುತ್ತದೆ. ಚರ್ಮದ ಪೋಷಣೆಗೆ ಹಾಗೂ ಕೂದಲಿನ ಸಂರಕ್ಷಣೆಗೆ ಸಿದ್ದೌಷದಿಯಲ್ಲದೆ, ಇದು ಸೌಂದರ್ಯವರ್ಧಕವು ಹೌದು. ಅಂತು ಈ ಕಹಿಬೇವನ್ನು ಪ್ರತಿನಿತ್ಯ ಸೇವಿಸುತ್ತಾ ಬಂದರೆ ಶೇಕಡ 60ರಷ್ಟು ರೋಗಗಳು ಬರುವುದಿಲ್ಲ. ಬೇವಿನಲ್ಲಿ ಪಿಷ್ಟ ಪದಾರ್ಥಗಳು, ಪ್ರೋಟೀನ್, ಮೇದಸ್ಸು (ಫ್ಯಾಟ್ಸ್), ಖನಿಜಾಂಶ (ಮಿನರಲ್ಸ್), ಕ್ಯಾಲ್ಸಿಯಂ, ಐರನ್, ಥಯಾಮಿನ್, ನಿಯೋಸಿಕ್, ನಿಕೋಟಿಕ್ ಆಮ್ಲ, ಇಮ್ಸುನೋ ರೆನ್ಸುಲೇಶನ್ಕರಟೋವೈನಿಸ್ (ದಪ್ಪಚರ್ಮವನ್ನು ಮೃದುಗೊಳಿಸುವುದು) ಗುಣ ಇರುವುದು ಸಾಬೀತಾಗಿದೆ.
ಇನ್ನು ಬೆಲ್ಲ ಉಷ್ಣಕಾರಕ ಹಾಗೂ ಜೀರ್ಣಕಾರಕ. ಇದು ಆಯಸ್ಸನ್ನು ಹೆಚ್ಚಿಸುತ್ತದೆ. ಇದಕ್ಕೆ ಅದರದೇ ಆದ ರುಚಿ ಇರುವುದಲ್ಲದೆ, ಆರೋಗ್ಯ ದೃಷ್ಟಿಯಿಂದ ನೋಡಿದರೆ ಸಕ್ಕರೆಗಿಂತ ಬೆಲ್ಲವು ಒಳ್ಳೆಯದಲ್ಲದೆ, ಇದರಲ್ಲಿ ಸಾಕಷ್ಟು ಪೌಷ್ಟಿಕಾಂಶ ಕೂಡ ಜಾಸ್ತಿ ಇರುತ್ತದೆ. ಬೆಲ್ಲದಲ್ಲಿ ಅಂಟುರಾಳ, ಪಿಷ್ಟ ಪದಾರ್ಥಗಳು, ಕಾರ್ಬೋಹೈಡ್ರೇಟ್ಸ್, ಪ್ರೊಟೀನ್ಸ್,ಖನಿಜಾಂಶ, ವಿಟಮಿನ್, ಕ್ಯಾಲ್ಸಿಯಂ, ಅಮಿನೊ ಆಸಿಡ್, ಕಬ್ಬಿಣ ಇದೆ. ಇದೂ ಸಹ ರಕ್ತವರ್ಧಕ ಹಾಗೂ ಬೊಜ್ಜು ನಿವಾರಣೆಗೆ ಅತ್ಯುತ್ತಮವಾದದ್ದು.ಆಗಾಗಿ ಬೇವು-ಬೆಲ್ಲ ನಮ್ಮ ಬದುಕಿನ ಸಿಹಿಕಹಿಗಳ ಪ್ರತೀಕ.ದೇಹವನ್ನು ತಂಪಾಗಿಸಲು ಬೇವು-ಬೆಲ್ಲ ಸಹಕಾರಿಯಾಗಿದೆ.
ನಮ್ಮ ಹಿರಿಯರು ಬೇವು-ಬೆಲ್ಲದ ಮಹತ್ವವನ್ನು ಅರಿತಿದ್ದರಿಂದ ನಮ್ಮ ದೇಹದ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಪ್ರಕೃತಿಯ ವಿದ್ಯಮಾನಕ್ಕನುಗುಣವಾಗಿ ಈ ಪದ್ಧತಿಯನ್ನು ಜಾರಿಗೆ ತಂದಿದ್ದಾರೆ.
ಯುಗಾದಿ ಹಬ್ಬದ ಆಚರಣೆಯಿಂದ ಆಗುವ ಮತ್ತೊಂದು ಪ್ರಯೋಜನವೆಂದರೆ ಈ ಸಂದರ್ಭದಲ್ಲಿ ಮಾಡುವ ಅಡುಗೆಗಳಾದ ಕಡ್ಲೆಬೇಳೆ ಮತ್ತು ತೊಗರಿಬೇಳೆ ಹೋಳಿಗೆ, ಪಾಯಸ, ಕೋಸುಂಬರಿ, ಮಾವಿನಕಾಯಿ ಚಿತ್ರಾನ್ನ, ವಿವಿಧ ಬಗೆಯ ತಿಂಡಿ ತಿನಿಸುಗಳು ಇವೆಲ್ಲವೂ ದೇಹದ ಬೆಳವಣಿಗೆಗೆ ಆರೋಗ್ಯ ರಕ್ಷಣೆಗೆ ಬೇಕಾದ ಪೌಷ್ಟಿಕಾಂಶಳಾಗಿರುತ್ತವೆ.
ಯುಗಾದಿ ಹಬ್ಬದ ಅಂದು ಸಂಜೆ ಪೂಜೆ, ಉತ್ಸವ, ಭಜನೆ ಮೊದಲಾಗಿ ನಡೆಸುತ್ತಾರೆ.ಹಾಗೂ ಹಿರಿಯರಿಗೆ ನಮಸ್ಕರಿಸುತ್ತಾರೆ.ಆ ದಿನದ ಪವಿತ್ರ ದರ್ಶನ ವೆಂದರೆ ಚಂದ್ರದರ್ಶನ. ಈ ಚಂದ್ರ ದರ್ಶನ ಮಾಡಿದರೆ ಎಲ್ಲಾ ರೀತಿಯ ಕಷ್ಟಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.
ವರಕವಿ ಡಾ: ದಾ.ರಾ ಬೇಂದ್ರೆಯವರ ಯುಗಾದಿ ಕವನದಲ್ಲಿ ಹೇಳಿದಂತೆ, “ಯುಗಯುಗಾದಿ ಕಳೆದರೂ ಮತ್ತೆ ಮತ್ತೆ ಬರುತ್ತಿದೆ. ಹೊಸ ವರ್ಷಕ್ಕೆ ಹೊಸ ಹರುಷವ ತರುತಿದೆ”. ಎಂದು ನೆನಪಾಗುವಂತೆ, ಯುಗಾದಿ ಸೃಷ್ಟಿಯ ಸಂಕೇತ. ಸೃಷ್ಟಿ ಹೊಸತನ್ನು ಪ್ರತಿನಿಧಿಸುತ್ತದೆ. ಒಟ್ಟಿನಲ್ಲಿ ಸುಖ-ದುಃಖ, ಸಿಹಿ ಕಹಿ ನೋವು-ನಲಿವು ಗಳನ್ನು ಸಮನಾಗಿ ಕಾಣಬೇಕೆನ್ನುವ ದಿವ್ಯ ಸಂದೇಶವನ್ನು ಸಾರುವ ಶ್ರೀ “ಶುಭಕೃತು ಸಂವತ್ಸರ” ಈ ಯುಗಾದಿಗೆ ಶುಭಕೋರೋಣ.