ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ರಮ್ಯ- ಬಿಂದು

ರಮ್ಯಾ ವಿನಯ್
ಇತ್ತೀಚಿನ ಬರಹಗಳು: ರಮ್ಯಾ ವಿನಯ್ (ಎಲ್ಲವನ್ನು ಓದಿ)

ನೀನೇರಿದ ಎತ್ತರವನ್ನು
ತಲುಪಬಹುದಿತ್ತೇನೋ
ನಾನಿನ್ನೂ
ಮೆಟ್ಟಿಲುಗಳನ್ನು ಎಣಿಸುತ್ತ
ಕಳೆದುಹೋಗಿದ್ದೇನೆ

*****

ಹಳೆಯ ಸಾಲುಗಳನ್ನಾದರೂ
ನೆನಪಿಸಿಕೋ ಮತ್ತೊಮ್ಮೆ
ತೇಲಬೇಕಿದೆ ನೆನಪಿನಲೆಯಲ್ಲಿ
ಮರೆತೆಲ್ಲ ದುಗುಡ

*****

ಕುದಿಯುತ್ತಿದ್ದ ಚಹಾದೊಂದಿಗೆ
ಮಿಳಿತವಾಗಿದ್ದವೆಷ್ಟೋ ಭಾವಗಳು
ಉಕ್ಕಿದಾಗಲೇ ಅರಿವಾದದ್ದು
ತಾಪವು ಹದ ತಪ್ಪಿತ್ತೆಂದು

*****

ಕರಗುವುದರ ಅರಿವಿದ್ದರೂ
ದೀಪ ಉರಿಯುತ್ತಲೇ ಇತ್ತು
ಬಹುಶಃ ಅದೂ
ಪ್ರೇಮಿಯಾಗಿರಬೇಕು…

*****

ಕತ್ತಲೆಯ ಮುಸುಕನ್ನು
ಸರಿಸದಿರು ಗೆಳೆಯಾ
ಮುಚ್ಚದ ಕಣ್ಣುಗಳು
ಕೆಂಪಾದ ಕೆನ್ನೆ ಕಂಡೀತು

*****

ಸುಗಮವಲ್ಲವೀ ಪಯಣ
ಸಾಗಿಹೆ ಕೊನೆಯರಿಯದ
ದಾರಿಗೆ
ಕಮರಿಹೋಗಿದೆ ಕನಸು
ದೂರು ಹೇಳಲಿ ಯಾರಿಗೆ

*****

ಎಂದೂ ಕಾಣದ ಕನಸೊಂದು
ರೆಪ್ಪೆ ಮೇಲೆ ಕೂತಿದೆ
ಮನದಲೀಗ ಬೆಳಗಿವೆ
ಸಾಲು ಹಣತೆ

*****