ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಂತರರಾಷ್ಟ್ರೀಯ ಕಾಫಿ ದಿನ

ವಿವೇಕಾನಂದ ಎಚ್.ಕೆ.
ಇತ್ತೀಚಿನ ಬರಹಗಳು: ವಿವೇಕಾನಂದ ಎಚ್.ಕೆ. (ಎಲ್ಲವನ್ನು ಓದಿ)

ಅಂತರರಾಷ್ಟ್ರೀಯ ಕಾಫಿ ದಿನ ಎಂದು ಕ್ಯಾಲೆಂಡರ್ ನೆನಪಿಸುತ್ತಿದೆ..ಅಕ್ಟೋಬರ್ 1…

ಬೆಳಗಿನ ಘಮ ಘಮ ಪರಿಮಳದ ಬಿಸಿ ಬಿಸಿ ಟೀ ಅಥವಾ ಕಾಫಿಯೊಂದಿಗೆ ದಿನ ಪ್ರಾರಂಭಿಸುವುದು ಬಹಳಷ್ಟು ಜನರ ದಿನಚರಿ. ಅದರಲ್ಲೂ ದಕ್ಷಿಣ ಭಾರತದ ಕನ್ನಡ ನಾಡಿನ ಬಹುತೇಕರು ಕಾಫಿ ಪ್ರಿಯರು……

ಕಾಫಿ ಇಲ್ಲದೆ ಹಾಸಿಗೆಯಿಂದ ಏಳದ ಎಷ್ಟೋ ಜನರಿದ್ದಾರೆ. ” ಕಾಫಿ ” ಎಂಬ ವಿಷಯವನ್ನು ಇಟ್ಟುಕೊಂಡು ಬರೆದ ಎಷ್ಟೋ ಲಲಿತ ಪ್ರಬಂಧಗಳು ನಗುವಿನ ಅಲೆಯನ್ನೇ ಉಕ್ಕಿಸುತ್ತದೆ. ಆತಿಥ್ಯದ ಆಪ್ತಮಿತ್ರ ಕಾಫಿ. ಬಾಂಧವ್ಯದ ಬೆಸುಗೆ ಕಾಫಿ, ಸ್ನೇಹ ಪ್ರೀತಿ ಪ್ರೇಮದ ಕೊಂಡಿ ಕಾಫಿ, ವ್ಯವಹಾರದ ಸೇತುವೆ ಕಾಫಿ, ಮನೋಲ್ಲಾಸದ ಔಷಧಿ ಕಾಫಿ, ಬೇಸರ ಕಳೆಯುವ ಸಾಧನ ಕಾಫಿ, ಕಾಲ ಹರಟೆಯ ಖುಷಿ ಕಾಫಿ….

ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಜೊತೆಗಾರ ಕಾಫಿ….

ಯಾರಾದರೂ ಪ್ರಬಂಧ ಬರೆಯುವ ಕಲೆಯನ್ನು ಮೈಗೂಡಿಸಿಕೊಳ್ಳುವ ಆಸಕ್ತಿ ಇದ್ದರೆ ಕಾಫಿ ಎಂಬುದು ಹೇಗೆ ನಮ್ಮೆಲ್ಲರ ಬದುಕಿನ ಭಾಗ ಎಂಬ ವಿಷಯದ ಬಗ್ಗೆ ಬರೆಯುತ್ತಾ ಸುಲಭವಾಗಿ ಅಭ್ಯಾಸ ಮಾಡಬಹುದು.

ಕಾಫಿ ಎಂದಾಗ ಕರ್ನಾಟಕದ ಕಾಫಿಗೆ, ಇತ್ತೀಚಿನ ಜಾಗತೀಕರಣದ ಆಧುನಿಕ ದಿನಮಾನಗಳಲ್ಲಿ ಅಂತರರಾಷ್ಟ್ರೀಯ ಪ್ರಚಾರ ಮತ್ತು ಪ್ರಖ್ಯಾತಿ ನೀಡಿದ್ದು ಕಾಫಿ ಡೇ ಸಿದ್ದಾರ್ಥ. ಕರ್ನಾಟಕದ ಕಾಫಿ ಹಿಂದಿನಿಂದಲೂ ದೇಶ ವಿದೇಶಗಳಲ್ಲಿ ರಫ್ತಾಗುತ್ತಿತ್ತು. ಅದನ್ನು ಇನ್ನೂ ಹೆಚ್ಚು ಮಾಡಿದ್ದಲ್ಲದೆ ಅಂತರರಾಷ್ಟ್ರೀಯ ಕಾಫಿಯನ್ನು ಅಂದರೆ ಬ್ರೆಜಿಲ್ ಕಾಫಿ, ಆಫ್ರಿಕಾದ ಕಾಫಿ ಇತ್ಯಾದಿಗಳನ್ನು ಕಾಫಿ ಡೇ ಮುಖಾಂತರ ಕರ್ನಾಟಕದ ಜನಸಾಮಾನ್ಯರಿಗೆ ಪರಿಚಯಿಸಿದ್ದು ಸಿದ್ದಾರ್ಥ.

” A lot can happen over coffee ” ಎಂಬ ಅಡಿ ಬರಹದೊಂದಿಗೆ ಅದನ್ನು ಪ್ರಖ್ಯಾತ ಮಾಡಿ ಕಾಫಿ ಪ್ರಿಯರ ಬದುಕಿನ ಸ್ಪೂರ್ತಿಯಾಗಿದ್ದ ಸಿದ್ದಾರ್ಥ ಅವರ ಹಣೆ ಬರಹ ಅವರ ಬದುಕನ್ನು ಮಧ್ಯದಲ್ಲೇ ನಿಲ್ಲಿಸಿದ್ದು ದುರಂತ.

ಅವರ ಆತ್ಮಹತ್ಯೆಯ ಸಂದರ್ಭದಲ್ಲಿ ಬರೆದ ಲೇಖನ…..

ಹೋರಾಡಬೇಕಿರುವುದು ಬದುಕಲೇ ಹೊರತು ಸಾಯಲು ಅಲ್ಲ
Mr. Siddarth………..

ಒಂದು ಕಪ್ ಕಾಫಿ ಸೇವನೆಯಿಂದ ಏನೇನೋ ಆಗಬಹುದು ಎಂಬ ಟ್ಯಾಗ್‌ ಲೈನ್ ನೀವೇ ನೀಡಿರುವಿರಿ.

ಹೌದು,
ಆ ದುರಂತದ ದಿನ ನೀವು ನಿಂತ ಆ ಸೇತುವೆಯಿಂದ ಕೆಲವೇ ಕಿಲೋಮೀಟರುಗಳ ಅಂತರದಲ್ಲಿ ಒಂದು ಪುಟ್ಟ ಗುಡಿಸಲಿನಂತ ರಸ್ತೆ ಬದಿಯ ಹೋಟೆಲಿನಲ್ಲಿ ಆ ಸಂಜೆಯ ಸುಂದರ ಮಬ್ಬು ಗತ್ತಲ ದಟ್ಟ ಕಾಡಿನಲ್ಲಿ ತಣ್ಣನೆಯ ಗಾಳಿಯ ನಡುವೆ ತುಂತುರು ಮಳೆ ಹನಿಯ ಸುಂದರ ಪರಿಸರದಲ್ಲಿ ಒಂದು 10 ರೂಪಾಯಿಯ ಬಿಸಿಬಿಸಿ ಕಾಫಿ ಕುಡಿದು ನಿಮ್ಮ ನೆನಪಿನ ಅಂಗಳದಲ್ಲಿ ಒಂದು ಸಣ್ಣ ವಾಕ್ ಮಾಡಿದ್ದರೆ ಬಹುಶಃ ನೀವು ಇಂದು ನಮ್ಮೊಂದಿಗೆ ಇರುತ್ತಿದ್ದಿರಿ.

ಬೆತ್ತಲೆಯೊಂದಿಗೆ ಭೂ ಪ್ರವೇಶಿಸುವ ನಾವು ಮತ್ತೆ ಬೆತ್ತಲಾಗಲು ಹೆದರುವುದೇಕೆ……,

ಬೆಳೆಯುತ್ತಾ ದೇಹ ಬಲಿಯುತ್ತದೆ. ಅಂಗಾಗಗಳು ದಪ್ಪವಾಗುತ್ತವೆ. ಉಡುಗೆ ತೊಡುಗೆಗಳು ಮೈ ಅಲಂಕರಿಸುತ್ತವೆ. ಮನಸ್ಸಿನಲ್ಲಿ ಹಲವಾರು ಭಾವನೆಗಳು ಮೂಡುತ್ತವೆ. ಬೇರೆ ಬೇರೆ ಸಂಬಂಧಗಳು ಜೊತೆಯಾಗುತ್ತವೆ‌.
ಆದರೆ ಅವೆಲ್ಲವೂ ತಾತ್ಕಾಲಿಕವಲ್ಲವೆ.

ಜೀವನದ ಎಲ್ಲಾ ದಿನಗಳು ಹಿತಕರವಾಗಿಯೇ ಇರಬೇಕು ಎಂದರೆ ಹೇಗೆ ? ಒಂದಷ್ಟು ಕಹಿ ದಿನಗಳು ಸಹ ಸಹಿಸಬೇಕಲ್ಲವೇ ?

ಅರವತ್ತು ವಸಂತಗಳನ್ನು ಮುಗಿಸಿದ ನೀವು ಇನ್ನೊಂದಿಷ್ಟು ದಿನ ಮುನ್ನಡೆಯಬಹುದಿತ್ತು.

ಮಿಸ್ಟರ್ ಸಿದ್ದಾರ್ಥ್,
ಈ ದೇಶ, ಈ ರಾಜ್ಯ, ಈ ಜಿಲ್ಲೆ, ಈ ತಾಲ್ಲೂಕು, ಈ ಹೋಬಳಿ, ಈ ಗ್ರಾಮ ಮತ್ತು ಇಲ್ಲಿನ ಬಹುತೇಕ ಮನೆಗಳು ಸಾಲದಲ್ಲಿಯೇ ನಡೆಯುತ್ತಿವೆ. ನಮ್ಮೆಲ್ಲರ ತಲೆಯ ಮೇಲೂ ಎಷ್ಟೋ ಸಾಲಗಳು ಹುಟ್ಟುತ್ತಲೇ ಹೆಗಲೇರುತ್ತವಂತೆ. ಅದರ ಪ್ರಮಾಣದಲ್ಲಿ ಒಂದಷ್ಟು ವ್ಯತ್ಯಾಸಗಳು ಇರಬಹುದು. ಅಂತಹ ದೇಶದ ಪ್ರಜೆಗಳಾದ ನಾವು ಸಾಲಕ್ಕೆ ಹೆದರುವುದೆ ?
ರೈತರೇನೋ ಪಾಪ ಮುಗ್ದರು. ನೀವು……..

ನಿಮಗೂ ತಿಳಿದಿತ್ತು ಈ ಸಮಾಜದ ಸ್ಥಿತಿ ಗತಿ. ಎಷ್ಟೋ ಎಷ್ಟೋ ಜನ ಎಂತಹ ದುಸ್ಥಿತಿಯಲ್ಲಿ ಬದುಕುತ್ತಿದ್ದಾರೆ.

ಗಣ್ಯ ವ್ಯಕ್ತಿ ಆದ ಕಾರಣಕ್ಕೆ ಕಷ್ಟಗಳು ನೋವುಗಳು ದುಃಖಗಳು ಅವಮಾನಗಳು ಸಹ ಗಣ್ಯವಾಗುವುದಿಲ್ಲ. ಅದು ಪ್ರತಿ ಮನುಷ್ಯನಿಗೂ ಸಹಜ ಮತ್ತು ಸಾಮಾನ್ಯ. ಆದರೆ ನಮ್ಮ ಭ್ರಮೆ ಮತ್ತು ಕೃತಕ ಮನಸ್ಥಿತಿಯ ಪರಿಸರ ಹಾಗು ಜನಪ್ರಿಯತೆ ನಮ್ಮ ಮಾನ ಅವಮಾನಗಳು ದೊಡ್ಡದು ಎಂಬಂತೆ ನಮ್ಮೊಳಗೆ ಬಿಂಬಿತವಾಗಿ ನಮ್ಮನ್ನು ಚಿಕ್ಕವರನ್ನಾಗಿಸುತ್ತದೆ. ಬಹುಶಃ ನೀವು ಆ ಭ್ರಮೆಗೆ ಬಲಿಯಾಗಿರಬಹುದೆ ?

ಗರಿಷ್ಠ ಎಂದರೆ ನಿಮಗೆ ಏನು ತೊಂದರೆ ಆಗಬಹುದಿತ್ತು.
ನಿಮ್ಮ ಆಸ್ತಿಯೆಲ್ಲಾ ಸರ್ಕಾರದ ವಶವಾಗಬಹುದಿತ್ತು,
ನಿಮ್ಮನ್ನು ಜೈಲಿಗೆ ಹಾಕಬಹುದಿತ್ತು.
ನಿಮ್ಮ ಕುಟುಂಬದವರು, ಆಪ್ತರು, ಸ್ನೇಹಿತರು ನಿಮಗೆ ಛೀಮಾರಿ ಹಾಕಿ ದೂರ ಇಡಬಹುದಿತ್ತು.

” ಎಲ್ಲವನ್ನೂ, ಎಲ್ಲರನ್ನೂ ಕಳೆದುಕೊಂಡ ಮೇಲೆಯೇ ನಮ್ಮನ್ನು ನಾವು ಪಡೆಯುವುದು “

ಅದಕ್ಕಿಂತ ದೊಡ್ಡ ಸ್ವಾತಂತ್ರ್ಯ ಸೃಷ್ಟಿಯ ಜೀವಿಗೆ ಇನ್ನೇನಿದೆ.

ಇದು ಒಣ ವೇದಾಂತವಲ್ಲ ವಾಸ್ತವ.

ಇರಬಹುದು,
ನಿಮಗೆ ಆರ್ಥಿಕ ಸಂಕಷ್ಟ,
ತೆರಿಗೆ ಕಿರುಕುಳ,
ಸಾಲಗಾರರ ಒತ್ತಡ,
ಸ್ವಾಭಿಮಾನಕ್ಕೆ ಧಕ್ಕೆ,
ಸೋಲಿನ ಹತಾಶೆ,
ವಿಫಲತೆಯ ನಿರಾಶೆ,

ಅದು ಬದುಕಲು ಕಾರಣಗಳಾಗಬೇಕಿತ್ತೇ ಹೊರತು ಸಾಯಲು ಅಲ್ಲ.
ಸಾವು ಬಂದೇ ಬರುತ್ತದೆ. ಅದನ್ನು ಹುಡುಕಲು ಪ್ರಯತ್ನಿಸಬಾರದಿತ್ತು.

ನಾವು ನಮ್ಮನ್ನು ಮಾತ್ರ ನಿಯಂತ್ರಿಸಿಕೊಳ್ಳಬಹುದು. ಇತರರು ನಮ್ಮ ನಿಯಂತ್ರಣಕ್ಕೆ ಸಿಗುವುದು ಮತ್ತು ನಮ್ಮ ಇಚ್ಛೆಗೆ ಅನುಗುಣವಾಗಿ ವರ್ತಿಸುತ್ತಾರೆ ಎಂದು ನಿರೀಕ್ಷಿಸುವುದು ಬಹುದೊಡ್ಡ ತಪ್ಪಾಗಬಹುದು.

ಇರಲಿ ಬಿಡಿ ನಿಮ್ಮ ಸಾಯುವ ಸ್ವಾತಂತ್ರ್ಯ ಪ್ರಶ್ನಿಸಲು ನಾವು ಯಾರು ?

ನಿಮ್ಮ ಒಟ್ಟು ವ್ಯಕ್ತಿತ್ವ ಮತ್ತು ನಿಮ್ಮ ಸಾಮರ್ಥ್ಯವನ್ನು ಹೀಗೆ ಗ್ರಹಿಸಿದ್ದೇನೆ.

ಚಿಕ್ಕಮಗಳೂರಿನ ಸಣ್ಣ ಹಳ್ಳಿಯ ಬಾಲಕನೊಬ್ಬ ಅಂತರರಾಷ್ಟ್ರೀಯ ಮಟ್ಟದಲ್ಲಿ ಉದ್ಯಮಿಯಾಗಿ ಬೆಳೆದು ಹೆಸರಾಂತ ರಾಜಕಾರಣಿಯ ಅಳಿಯನಾಗಿ, ಎರಡು ಮಕ್ಕಳ ತಂದೆಯಾಗಿ, ಅರವತ್ತನೆಯ ವಯಸ್ಸಿನಲ್ಲಿ ತನ್ನ ಒಟ್ಟು ಅನುಭವದ ಲಾಭ ಪಡೆಯದೆ ಮನಸ್ಸನ್ನು ನಿಯಂತ್ರಿಸದೆ ಮಾನಸಿಕ ರೋಗಿಯಾಗಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡನು.

ಸಿದ್ದಾರ್ಥ ನೀವು ಇದನ್ನು ಓದುವುದಿಲ್ಲ. ನಿಮ್ಮದು ಇನ್ನು ಮುಗಿದ ಅಧ್ಯಾಯ. ಆದರೆ ನಿಮ್ಮ ಸಾವು ನಮಗೆ ಬುದ್ದತ್ವದ ಅನುಭವ ನೀಡಲಿ.


ಎಷ್ಟೇ ಸಾಲ ಆಗಲಿ,
ಎಷ್ಟೇ ಅವಮಾನ ಆಗಲಿ,
ಯಾವೊನೇ ಕೈಕೊಡಲಿ,
ಯಾವೊಳೇ ಕೈಬಿಡಲಿ,
ಎಷ್ಟೇ ಸೋಲಾಗಲಿ
ಯಾರು ಏನೇ ಅಂದುಕೊಳ್ಳಲಿ,
ಹೊಟ್ಟೆ ತುಂಬ ಊಟ ಮಾಡಿ,
ಕಣ್ಣು ತುಂಬ ನಿದ್ದೆ ಮಾಡಿ,
ಒಂದು ಕಾಫಿ ಕುಡಿದು,
ಸಿನಿಮಾಗೆ ಹೋಗಿ ಬಿಡಿ.
ಆತ್ಮಹತ್ಯೆ ಗೀತ್ಮಹತ್ಯೆ ಎಲ್ಲಾ ಹೇಡಿಗಳ ಸರಕು.
ಸಾವು ಅಂದರೆ ತುಂಬಾ ಹೆದರಿಕೆ.
ಅದಕ್ಕೆ ಅದನ್ನು ಹುಡುಕಿಕೊಂಡು ಹೋಗಬೇಡಿ
ಬದುಕು ಮುಖ್ಯ.


ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಹೆಚ್.ಕೆ.