ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅವಳ ಕಂಗಳಲ್ಲಿ ಉಳಿದ ಶ್ವಾಸ…

ಶ್ರೀ ತಲಗೇರಿ
ಇತ್ತೀಚಿನ ಬರಹಗಳು: ಶ್ರೀ ತಲಗೇರಿ (ಎಲ್ಲವನ್ನು ಓದಿ)

“ಪ್ರೀತಿ ಮತ್ತು ಸಹಾನುಭೂತಿ ಎರಡೂ ಅವಶ್ಯಕತೆಗಳು,
ಅವು ಐಷಾರಾಮವಲ್ಲ”

ದಲೈ ಲಾಮಾ

ಮನುಷ್ಯನನ್ನು ಯಾವಾಗ ನಾಗರಿಕತೆ ತನ್ನ ತೆಕ್ಕೆಗೆ ಸೆಳೆದುಕೊಂಡಿತೋ, ಅವತ್ತಿನಿಂದಲೇ ಮನುಷ್ಯ ಬಹುಶಃ ನಿಧಾನಕ್ಕೆ ಅನಾಗರಿಕತೆಯ ಕಡೆಗೆ ಹೊರಟನೇನೋ! ಹೀಗೆ ಅನ್ನುವುದು ಅನುಚಿತ ಅನ್ನಿಸಬಹುದು ಅಥವಾ ಹೀಗೆಲ್ಲಾ ಸುಮ್ಮನೆ ಹೇಳಿಬಿಡುವುದು ಅಸಂಬದ್ಧ ಹಾಗೂ ಅಪ್ರಬುದ್ಧ ಅಂತಲೂ ಅನ್ನಿಸಬಹುದು. ಈ ಮಾನವ ಜನಾಂಗ ಎಷ್ಟು ಸರಳವೋ ಅಷ್ಟೇ ಸಂಕೀರ್ಣವಾದದ್ದು. ಒಂದಷ್ಟು ವರುಷಗಳ ಹಿಂದೆ ಗಡ್ಡೆ ಗೆಣಸು ತಿಂದಷ್ಟೇ ತಿಂದು ತೃಪ್ತವಾಗುತ್ತಿದ್ದ ಮನುಷ್ಯನ ನಾಲಿಗೆಗೆ ಈಗ ಬೇರೆ ರುಚಿಗಳ ಪರಿಚಯವಾಗಿದೆ ಹಾಗೂ ಅದರ ಬೇಡಿಕೆ ಈಗ ಬೇರೆಯೇ. ತನ್ನ ದೇಹವನ್ನು ಬಟ್ಟೆಗಳಿಂದ ಮುಚ್ಚಿಕೊಳ್ಳಬೇಕು ಅನ್ನುತ್ತನ್ನುತ್ತಲೇ ಈಗ ಅದಕ್ಕೆ ಬೇರೆ ಬಣ್ಣ ಹಚ್ಚಲಾಗಿದೆ. ಸಂಘ ಜೀವಿ ಮನುಷ್ಯ ಅನ್ನುತ್ತನ್ನುತ್ತಲೇ ಈಗ ಅಲ್ಲಲ್ಲಿ ಪಂಗಡಗಳು ಹುಟ್ಟಿಕೊಂಡಿವೆ. ಮಾನವ ಕುಲ, ಮನುಷ್ಯ ಜನಾಂಗ ಇತ್ಯಾದಿ ದೊಡ್ಡ ದೊಡ್ಡ ಪದಗಳನ್ನು ಬಳಸುವ ನಾವು ನಮ್ಮದೇ ಚಿಕ್ಕ ಚಿಕ್ಕ ಬೌದ್ಧಿಕ ವೃತ್ತಗಳಲ್ಲಿ ಬದುಕುತ್ತಿರುವುದು ಸತ್ಯವೇ ಅಲ್ಲವಾ? ಇದು ಉಪದೇಶ ಅನಿಸುತ್ತದೆ, ರುಚಿಸುವುದಿಲ್ಲ. ಎಷ್ಟೋ ವರ್ಷಗಳಿಂದ ಇದನ್ನು ಕೇಳಿ ಕೇಳಿ, ಅಭ್ಯಾಸವಾಗಿದೆ. ಮನುಷ್ಯನ ಮನೋಭೂಮಿಕೆ ಅದೆಷ್ಟರ ಮಟ್ಟಿಗೆ ಸಿದ್ಧವಾಗಿದೆಯೆಂದರೆ ಒಂದೇ ಕಾಲಕ್ಕೆ ಆತ ಹಲವು ಮುಖಗಳನ್ನು ತೊಡಬಲ್ಲ. ಆಳದಲ್ಲಿ ನಿಜವಾದ ಮುಖ ಯಾವುದು ಅನ್ನುವುದನ್ನೇ ಮರೆಸಬಲ್ಲ, ಅನುಮಾನಗಳನ್ನು ಪ್ರಶ್ನೆಗಳನ್ನು ಬಿತ್ತಬಲ್ಲ. ಹಲವು ಭಾವಪ್ರಕಾರಗಳಿಂದ ನಿತ್ಯವೂ ಬಳಲುವ ನಮಗೆ ಗಡಿ, ಅಧಿಕಾರ, ವೈಭೋಗ, ನಾವು ಹೇಳಿದ್ದನ್ನು ಮಾತ್ರವೇ ಕೇಳಬಲ್ಲ ಸಾಮಾಜಿಕ ವ್ಯವಸ್ಥೆ ಇತ್ಯಾದಿಗಳು ಕನಸುಗಳಾಗಿರದೇ ಅವಶ್ಯಕ ಚಟಗಳಾಗಿವೆ. ಇವೆಲ್ಲವುಗಳ ಮಧ್ಯ ನಡೆಯಬಲ್ಲ ಹಲವು ಘಟನೆಗಳು ನಮ್ಮ ಮುಂದಿನ ಜನಾಂಗದ ಮೇಲೆ ಅದೆಂಥ ಪರಿಣಾಮಗಳನ್ನು ಬೀರಬಲ್ಲವು, ಹಾಗೇ ನಾವು ಈ ಎಲ್ಲಾ ನಮ್ಮದೇ ತತ್ವ ಸಿದ್ಧಾಂತಗಳ ಅಡಿಯಲ್ಲಿ ಹೇಗೆ ನಮಗರಿವಿಲ್ಲದೆಯೇ ದಾರಿ ತಪ್ಪುತ್ತೇವೆ‌ ಮತ್ತು ಅದು ಯಾವ ಯಾವ ದುರಂತಗಳಿಗೆ ಕಾರಣವಾಗಬಲ್ಲದು ಅನ್ನುವುದನ್ನು ಸೂಚ್ಯವಾಗಿ ತಿಳಿಸುವ ಚಿತ್ರವೇ “ಫಸ್ಟ್ ದೇ ಕಿಲ್ಡ್ ಮೈ ಫಾದರ್”

“ಯುದ್ಧದ ಅವಶ್ಯಕತೆ ಇದೆ ಅನ್ನುವ ನೆಪದಲ್ಲಿ ಅವರು ಕಾಂಬೋಡಿಯಾಕ್ಕೆ ಬರುತ್ತಾರೆ” ( under the pretext that there’s a war necessity, they come to Cambodia ) ಅನ್ನುತ್ತಲೇ ಸಿನೆಮಾ ಶುರುವಾಗುತ್ತದೆ. ಪುಟ್ಟ ಹುಡುಗಿಯೊಬ್ಬಳು ಟಿವಿಯಲ್ಲಿ ಯುದ್ಧದ ಸುದ್ದಿಗಳನ್ನು ನೋಡುವಾಗ ಅಸ್ಪಷ್ಟವಾಗಿ ಅವಳ ಮುಖ ಅಲ್ಲಿ ಟಿವಿ ಪರದೆಯ ಮೇಲೆ ಮೂಡುತ್ತದೆ, ಅದು ಆಕೆಯಲ್ಲಿ ನಿಧಾನಕ್ಕೆ ಮೂಡುತ್ತಿದ್ದ ಆ ಭೀಕರತೆಯ ಚಿತ್ರಣವಾಗಿತ್ತಾ ಅನ್ನುವಷ್ಟರ ಮಟ್ಟಿಗೆ ಅದು ಕಾಡುತ್ತದೆ. ಅಲ್ಲಿಂದ ಇಡೀ ಸಿನೆಮಾ ಆಕೆಯ ದೃಷ್ಟಿಕೋನದ ಮೂಲಕವೇ ನಮ್ಮೆದುರು ತೆರೆದುಕೊಳ್ಳುತ್ತದೆ. ವಿಯೆಟ್ನಾಮ್ ಮತ್ತು ಕಾಂಬೋಡಿಯಾ ಯುದ್ಧದ ಕುರಿತಾಗಿ ಇರುವ ಈ ಸಿನೆಮಾ, ಖಮೇ ರೂಷ಼್ ( Khmer Rouge ) ಕಾಂಬೋಡಿಯಾವನ್ನು ತನ್ನ ಆಡಳಿತಕ್ಕೆ ಒಳಪಡಿಸಿಕೊಂಡು ಫೆನೋಮ್ ಪೆನ್ ( Phnom Penh ) ಅಲ್ಲಿ ಇದ್ದಂಥ ಜನರನ್ನು ಅಲ್ಲಿಂದ ಖಾಲಿ ಮಾಡಿಸಿ, ಸಮಾಜದ ಎಲ್ಲಾ ಆರ್ಥಿಕ ವರ್ಗಗಳನ್ನು ಒಂದೇ ಸ್ತರದಲ್ಲಿ ನೋಡುವ ಪ್ರಯತ್ನ ಮಾಡುವಾಗ ನಡೆದ ನರಮೇಧದ ಕತೆಯಾಗಿ ನಮ್ಮೆದುರು ಅನಾವರಣಗೊಳ್ಳುತ್ತದೆ. ಹಾಗಂತ ಇದು ಇವೆಲ್ಲವನ್ನೂ ತೀರಾ ವಾಚ್ಯವಾಗಿಸುವುದಿಲ್ಲ. ಬಡವ ಶ್ರೀಮಂತ ಅನ್ನುವ ಪ್ರತ್ಯೇಕತೆ ಅಳಿಯಬೇಕು ಅನ್ನುವುದು ಒಳ್ಳೆಯ ಉದ್ದೇಶವೇ ಆಗಬೇಕಿತ್ತಲ್ಲಾ, ಹಾಗಿದ್ದರೆ ಅಲ್ಲಿ ಜನರು ಕಷ್ಟಕ್ಕೆ ಸಿಲುಕಿದ್ದಾದರೂ ಯಾಕೆ? ತನ್ನದು ಸ್ವಂತದ್ದು ಅಂತ ಏನೂ ಇಲ್ಲ, ಇವೆಲ್ಲವೂ ನಮ್ಮದು ಅನ್ನುವ ಒಂದು ವಿಶಾಲ ಮನೋಭಾವ ಸಮಾಜದ ಹಲವು ಸಮಸ್ಯೆಗಳಿಗೆ ಉತ್ತರವಾಗಬೇಕಿತ್ತಲ್ಲಾ, ಆದರೆ ಅದು ಅಷ್ಟೆಲ್ಲಾ ಸಾವಿಗೆ ಹೇಗೆ ಕಾರಣವಾಯಿತು? ಜಗತ್ತಿನಲ್ಲಿ ಇವತ್ತು ಒಂದು ಸಮಾಜ ವ್ಯವಸ್ಥೆ ಹೇಗಿರಬೇಕು ಅನ್ನುವುದಕ್ಕೆ ಹಲವು ನಿಲುವುಗಳಿವೆ, ಉದಾಹರಣೆಗೆ ಬಂಡವಾಳಶಾಹಿ, ಸಮಾಜವಾದ, ಸಮತಾವಾದ ಇತ್ಯಾದಿ ಇತ್ಯಾದಿ. ಆದರೆ ಈ ಎಲ್ಲಾ ವಾದಗಳೂ ಕಾಗದದಲ್ಲಿ ಅತ್ಯಂತ ತರ್ಕಬದ್ಧವಾಗಿಯೂ, ಆದರ್ಶಯುತವಾಗಿಯೂ, ಜನರ ಬದುಕಿನ ಗುಣಮಟ್ಟವನ್ನು ಹೆಚ್ಚಿಸುವುದಕ್ಕಾಗಿಯೂ, ಸುಸ್ಥಿರತೆ ಹಾಗೂ ಸದೃಢತೆಯನ್ನು ಸದಾ ಕಾಪಾಡುವುದಕ್ಕಾಗಿಯೂ ಇರಬಹುದಾದಂತೆ ಕಂಡರೂ ವಾಸ್ತವದಲ್ಲಿ ಎಲ್ಲಕ್ಕೂ ಅದರದ್ದೇ ಆದ ಅವಗುಣಗಳೂ, ಮಿತಿಗಳೂ ಇವೆ. ಅವುಗಳ ಪರಿಣಾಮವೇ ಈ ಥರದ ಹಲವು ಘಟನೆಗಳಿಗೆ ಕಾರಣವಾಗಬಲ್ಲದು ಅನ್ನುವುದಕ್ಕೆ ಈ ಯುದ್ಧ ಮತ್ತು ಅದರಿಂದ‌ ಪ್ರೇರಿತವಾದ ಈ ಸಿನೆಮಾ ಎರಡೂ ಪ್ರತ್ಯಕ್ಷ ಸಾಕ್ಷಿಗಳಾಗಿ ನಮಗೆ ಸಿಗುತ್ತವೆ.

ಈ ಸಿನೆಮಾದಲ್ಲಿ ಬರುವ ಕೆಲವು ದೃಶ್ಯಗಳನ್ನು ಗಮನಿಸುವುದಾದಲ್ಲಿ, ತಮ್ಮ ನಗರವನ್ನು ತೊರೆದು ಗ್ರಾಮಾಂತರ ಪ್ರದೇಶಗಳಿಗೆ ವಲಸೆ ಹೋಗಬೇಕಾದ ಸಂದರ್ಭ ಬಂದಾಗ ಅಲ್ಲಿ ಕಾರಲ್ಲಿ ಕೂತಿರುವವರು ಮತ್ತು ಕಾಲ್ನಡಿಗೆಯಲ್ಲಿ ಹೋಗುತ್ತಿರುವವರು ಇಬ್ಬರ ವೇಗವೂ ಒಂದೇ ಆದಾಗ ಇದೊಂದ ಹೊಸ ಭರವಸೆಯಾಗಿ ಕಾಣುತ್ತದೆ. ಇನ್ನೊಂದು ದೃಶ್ಯದಲ್ಲಿ ಎರಡು ಕೀಟಗಳನ್ನು ಒಂದರ ಮೇಲೊಂದು ಬಿಟ್ಟು ಅವು ಹೋರಾಡುತ್ತಾ ಒದ್ದಾಡುವುದನ್ನು ನೋಡಿ‌ ಕೇಕೆ ಹಾಕುವ ಮಕ್ಕಳ ಗುಂಪು ಮನುಷ್ಯ ಮೂಲದಲ್ಲಿ ಕ್ರೌರ್ಯವನ್ನೇ ಇಷ್ಟಪಡುವುದಾ, ಹುಟ್ಟುತ್ತಾ ಕ್ರೂರಿಯಾಗಿ ಕೊನೆಗೆ ಸಾಧುವಾಗುವುದೇ ನಾಗರಿಕತೆಯ ಪ್ರಕ್ರಿಯೆಯಾ ಅನ್ನುವ ಹಲವು ಪ್ರಶ್ನೆಗಳಿಗೆ ಬುನಾದಿಯಾಗುತ್ತದೆ. ನಮ್ಮಲ್ಲಿ ಭೇದ ಇರಬಾರದು ಅನ್ನುತ್ತಾ, ಅದಕ್ಕಾಗಿ ನಾವು ತೊಡುವ ಬಟ್ಟೆಗಳೂ ಒಂದೇ ಬಣ್ಣದ್ದಾಗಿರಬೇಕು ಅನ್ನುತ್ತಾ ಬೇರೆ ಬೇರೆ ಬಣ್ಣಗಳನ್ನೇ ದ್ವೇಷಿಸುವುದು, ಯಾರದೋ ಮಗನಿಗೆ ಜ್ವರ ಬಂದಾಗ ಆತನಿಗೆ ಇತರ ದೇಶದ ಔಷಧಿಗಳನ್ನು ಕೊಡಬಾರದು, ನಾವು ಹೇಳುವುದನ್ನೇ ಕೊಡಬೇಕು ಅನ್ನುತ್ತಾ ಅದಕ್ಕಾಗಿ ಶಿಕ್ಷಿಸುವುದು, ನಾವೆಲ್ಲರೂ ಸಮಾನರು ಅಂತ ಘೋಷಣೆಗಳನ್ನು ಕೂಗುತ್ತಾ ‘ಅಂಕೋರ್’ ( Angkor ) ಆಜ್ಞೆಗಳನ್ನು ನೀವು ಪಾಲಿಸಬೇಕು ಅಂತ ಆಜ್ಞಾಪಿಸುವಾಗ ಇನ್ನೆಲ್ಲಿಯ ಸಮಾನತೆ? ನಮಗೆ ಇವುಗಳನ್ನೂ ಸಮರ್ಥಿಸಿಕೊಳ್ಳುವುದಕ್ಕೆ ತಿಳಿದಿದೆ, ಹಾಗಾಗಿಯೇ ಹೇಳಿದ್ದು ಮನುಷ್ಯ ಸರಳವೂ ಹೌದು, ಸಂಕೀರ್ಣವೂ ಹೌದು. ಅದರಂತೆಯೇ ಆತ ಸೃಷ್ಟಿಸಿಕೊಂಡ ವ್ಯವಸ್ಥೆಗಳೂ ! ಇಲ್ಲಿ ಇದು ಹೀಗೇ, ಇದೇ ಅಂತಿಮ ಅಂತ ಹೇಳುವಷ್ಟರಲ್ಲಿ ಅಲ್ಲಿ ಇನ್ನೇನೋ ಆಗಿರುತ್ತದೆ. ನೆನಪಿರಲಿ ಬಂದೂಕು ಮತ್ತು ಗುದ್ದಲಿಗಳು ಎಲ್ಲಾ ಕಾಲದಲ್ಲೂ ಒಟ್ಟಿಗೇ ಜೀವಿಸುತ್ತವೆ.

ತನ್ನ ಎದುರಿರುವ ಅಪರಿಚಿತ ವ್ಯಕ್ತಿ ತನ್ನನ್ನು ಕೊಲ್ಲಬಹುದು ಅನ್ನುವ ಅರಿವಿದ್ದರೂ ಅವರು ನಕ್ಕಾಗ ಪ್ರತಿಯಾಗಿ ನಗುವುದು ಮಕ್ಕಳ‌ ಮುಗ್ಧತೆಯ ಪ್ರತೀಕವಲ್ಲದೇ ಇನ್ನೇನು ! ಹೀಗೆ ತನ್ನ ಕಣ್ಣುಗಳಲ್ಲೇ ಇವೆಲ್ಲವನ್ನೂ ಸೆರೆಹಿಡಿಯುತ್ತಾ, ತನ್ನಷ್ಟೇ ವಯಸ್ಸಿನ ಮಕ್ಕಳ ಕೈಯಲ್ಲಿ ಬಂದೂಕು, ಬಾಂಬುಗಳನ್ನು ನೋಡುತ್ತಲೇ, ಆ ಪರಿಸರದಲ್ಲೇ ದಿನ‌ ಕಳೆದು ಬದುಕುಳಿದ ಆ ಪುಟ್ಟ ಬಾಲಕಿಯೇ ಲೊಂಗ್ ಅಂಗ್ ( Loung Ung ). ಏಂಜೆಲಿನಾ ಜ್ಯೂಲಿ ( Angelina Jolie ) ನಿರ್ದೇಶನದ ಈ ಚಿತ್ರ ಗೋಲ್ಡನ್ ಗ್ಲೋಬ್ ಅವಾರ್ಡ್ಸ್, ೨೦೧೮ರಲ್ಲಿ ಅತ್ಯುತ್ತಮ ವಿದೇಶಿ ಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಏಂಜೆಲಿನಾ ಜ್ಯೂಲಿ ಮತ್ತು ಲೊಂಗ್ ಅಂಗ್ ಇಬ್ಬರೂ ಸೇರಿ ಈ ಚಿತ್ರಕ್ಕೆ ಚಿತ್ರಕಥೆಯನ್ನು ಬರೆದಿದ್ದಾರೆ. ಮೊದಲಿಗೆ ಹತ್ಯೆಯಾಗಿದ್ದು ಲೊಂಗ್ ಅಂಗ್ ಅವರ ಅಕ್ಕ ಆಗಿದ್ದರೂ ಚಿತ್ರದ ಹೆಸರು ಮಾತ್ರ ‘ಫಸ್ಟ್ ದೇ ಕಿಲ್ಡ್ ಮೈ ಫಾದರ್’ !

ವಿಕೃತಿಯ ದಾಳಿಗೊಳಗಾಗಿ ರುಂಡ ಮುಂಡ ಬೇರೆಯಾದ ಬುದ್ಧ ಮೂರ್ತಿಗೂ ನಮಿಸಿ ತನ್ನ ದಿಕ್ಕಿನಲ್ಲಿ ನಡೆಯುವಷ್ಟು ನಂಬಿಕೆ ಮನುಷ್ಯನಿಗೆ.. ಇಂಥ ನಂಬಿಕೆಗಳು ಮನುಷ್ಯತ್ವದ ಕುರಿತಾದ ಇನ್ನಷ್ಟು ನಂಬಿಕೆಗಳನ್ನು ಉದ್ದೀಪನಗೊಳಿಸಲಿ, ಬಾಂಬಿನ ಧೂಳು ಹೊಗೆ ಹರಡಿಕೊಳ್ಳುವ ಹವಾಮಾನದಲ್ಲಿ ಗಾಳಿಪಟ, ಚಿಟ್ಟೆ, ಹಕ್ಕಿಗಳು ಸ್ವಚ್ಛಂದವಾಗಿ ಅಪಾಯವಿಲ್ಲದೇ ಹಾರಲಿ, ಒಡೆದ ಕಾಲುಗಳಿಗೆಲ್ಲಾ ಮೆತ್ತನೆಯ ಚಪ್ಪಲಿಗಳು ಸಿಗಲಿ, ರಕ್ತದ ಕಲೆಗಳಿರುವ ಮಣ್ಣಲ್ಲಿ ಬಿಳಿ ಹೂವೊಂದು ಪ್ರೀತಿಯಿಂದ ಅರಳಲಿ ಅನ್ನುವುದಷ್ಟೇ ಪ್ರಾರ್ಥನೆ…