ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಆಚೀಚಿನ ಆಯಾಮ – ೧೭ : ಒಂದು ನಿಮಿಷ ಅಂದರೆ……

ಚಂದಕಚರ್ಲ ರಮೇಶ ಬಾಬು
ಇತ್ತೀಚಿನ ಬರಹಗಳು: ಚಂದಕಚರ್ಲ ರಮೇಶ ಬಾಬು (ಎಲ್ಲವನ್ನು ಓದಿ)

ಯಾವುದಾದರೂ ಕೆಲಸ ನೆನಪಿಸಿದಾಗ ನಾವು “ ಒಂದ್ ನಿಮಿಷ. ಈಗ್ಲೇ ಮಾಡುತ್ತೇನೆ “ ಎನ್ನುತ್ತೇವೆ. ಅಥವಾ ಅದನ್ನು ಮತ್ತಿಷ್ಟು ತಿಳಿಮಾಡಲು “ ಅದೆಷ್ಟರ ಕೆಲಸ ಸಾರ್. ಒಂದ್ನಿಮಿಷದಲ್ಲಿ ಮಾಡಿಬಿಡ್ತೀನಿ “ ಎನ್ನುತ್ತೇವೆ. ಎಲ್ಲಿದ್ದೀರಾ ಅಂತ ವಿಚಾರಿಸಿದಾಗ “ ಇಲ್ಲೇ ಹತ್ತಿರದಲ್ಲಿ. ಒಂದ್ನಿಮಿಷದಲ್ಲಿ ನಿಮ್ಮ ಮುಂದಿರ್ತೇನೆ.” ಎನ್ನುತ್ತೇವೆ. ನಮಗೆ ಈ ಒಂದ್ನಿಮಿಷ ಎನ್ನೋದು ಅಷ್ಟು ಸಸಾರವಾಗಿ ಕಾಣುತ್ತದೆ. ನಾವು ಯಾವುದೋ ಯಾತ್ರೆಯ ಅಂಗವಾಗಿ ದಿಲ್ಲಿಗೆ ಹೋಗುತ್ತಲಿದ್ದೆವು. ನಿಜಾಮುದ್ದೀನ್ ಸ್ಟೇಶನ್ ನಲ್ಲಿ ಇಳಿಯುವುದಿತ್ತು. ಗೂಗ​ಲನ್ನು ಹುಡುಕಿ, ರೈಲಿನ ವಿವರ ನೋಡಿದಾಗ ನಮಗೆ ಕಂಡಿದ್ದು, ರೈಲು ನಿಜಾಮುದ್ದೀನ್ ಸ್ಟೇಷನ್ ನಲ್ಲಿ ಬರೀ ಎರಡೇ ನಿಮಿಷ ನಿಲ್ಲುತ್ತದೆ ಅಂತ. ನಮ್ಮ ಸಾಮಾನುಗಳು ಐದಾರಿದ್ದವು. ನಮಗೆ ಸ್ವಲ್ಪ ಆತಂಕ ಶುರುವಾಯಿತು. ನಮ್ಮ ಜೊತೆಗಿದ್ದ ಉತ್ತರ ಭಾರತದ ಸಹ ಪ್ರಯಾಣಿಕರೊಬ್ಬರು ನಮ್ಮ ಆತಂಕ ತುಂಬಿದ ಮುಖಗಳನ್ನು, ನಮ್ಮ ಲಗುಬಗೆಯ ಮಾತುಕತೆಯನ್ನು ಗಮನಿಸಿ ಏನೆಂದು ವಿಚಾರಿಸಿದರು. ನಾವು ನಮ್ಮ ಕಾತರವನ್ನು ಹಂಚಿಕೊಂಡೆವು. ಆಗ ಅವರು ಹೇಳಿದ ಧೈರ್ಯ ತುಂಬಿದ ಮಾತು ಇಂದಿಗೂ ನನ್ನ ಕಿವಿಗಳಲ್ಲಿ ಆಗಾಗ ರಿಂಗಣಿಸುತ್ತದೆ. “ ದೊ ಮಿನಿಟ್ ಬಹುತ್ ಹೋತೆ ಹೈ ಜೀ. ಆಸಾನ್ ಸೆ ಉತರ್ ಸಕ್ತೆ ಹೈ. ಆಪ್ ಚಿಂತಾ ಮತ್ ಕೀಜಿಯೆ” ಎನ್ನುತ್ತ ಇಳಿಯವಾಗ ನಮಗೆ ತುಂಬಾ ಸಹಾಯ ಮಾಡಿದರು. ಅಂದಿನಿಂದ ನನಗೆ ದೊ ಮಿನಿಟಿನ ಮತ್ತು ಒಂದು ನಿಮಿಷದ ನಿಜವಾದ ಅರ್ಥ ಗೊತ್ತಾಗಲು ಶುರುವಾಯಿತು.

ನಿಜಕ್ಕೂ ನಿಮಿಷದ ಅವಧಿ ಅರವತ್ತು ಸೆಕೆಂಡುಗಳೇ. ಹೆಚ್ಚೂ ಆಗಲ್ಲ, ಕಮ್ಮೀನೂ ಆಗಲ್ಲ. ಆದರೇ ಆ ಅವಧಿಯ ಪ್ರಭಾವ ನಮ್ಮ ಮೇಲೆ ಭಿನ್ನ ಪರಿಸ್ಥಿತಿಗಳನ್ನನುಸರಿಸಿ ಆಗುವುದು ನಮ್ಮೆಲ್ಲರ ಅನುಭವಕ್ಕೆ ಬಂದಿರುತ್ತದೆ. ಸುಖದ ಕ್ಷಣಗಳು ಬೇಗ ಕಳೆದಂತೆನಿಸಿ ಕಾಯುವ ಮತ್ತು ದುಗುಡ ತುಂಬಿದ ಘಳಿಗೆಗಳು ತುಂಬಾ ಉದ್ದವೆನಿಸುತ್ತವೆ.

 ಈ ಒಂದು ನಿಮಿಷ ಅದೆಷ್ಟು ಉದ್ದ ಅಂತ ನನಗನಿಸಿದ್ದು ಮೊನ್ನೆ ಒಂದು ಸಭೆಯಲ್ಲಿ ಶ್ರದ್ಧಾಂಜಲಿ ಸಮರ್ಪಣೆ ಸಮಯದಲ್ಲಿ. ನಾನು ಯಾವುದೋ ಸ್ಥಳೀಯ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ. ನನ್ನ ವಯಸ್ಸನ್ನು ಮನಸ್ಸಿನಲ್ಲಿಟ್ಟುಕೊಂಡೋ ಅಥವಾ ನನ್ನ ಕೆಲಸದ ಹಿನ್ನೆಲೆಯಲ್ಲೋ ಅಥವಾ ನನ್ನ ಸಾಹಿತ್ಯದ ಹವ್ಯಾಸವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಲೋ ನನ್ನನ್ನು ಆರಿಸಿದ್ದರು. ಪುಣ್ಯಕ್ಕೆ ಆ ಹುದ್ದೆಗೆ ಚುನಾವಣೆ ಇರಲಿಲ್ಲ. ನಾನಂತೂ ಸ್ಪರ್ಧೆಗಿಳಿಯುತ್ತಿರಲಿಲ್ಲ. ಒಂದುವೇಳೆ ಯಾರಾದರೂ ಹುರಿದುಂಬಿಸಿ ಕಣಕ್ಕಿಳಿಸಿದರೂ ಗೆದ್ದಂತೂ ಖಂಡಿತಾ ಬರುತ್ತಿರಲಿಲ್ಲ. ಅದಿರಲಿ.

ಕಮಿಟಿಯ ಸಭೆಗೆ ಬುಲಾವ್ ಬಂದಿತ್ತು. ಹಾಜರಾದೆ. ಕರೋನಾದ ಈ ಸಂಕಷ್ಟದಲ್ಲಿ ಹೊರಗೆ ಹೋಗುವುದು ಬೇಡ ಎಂದು ನನ್ನ ಮನೆಯವರ ಆಕ್ಷೇಪಣೆಯನ್ನು ಕಡೆಗಾಣಿಸುತ್ತ, ನನ್ನ ಆಸಕ್ತಿ (ತೆವಲು ಎನ್ನಬಹುದು) ಯನ್ನು ಸ್ವಲ್ಪಮಟ್ಟಿಗೆ ತೋರಲು ಹೋಗಿದ್ದೆ. ಮುಂಚಿತವಾಗಿ ಈ ಆರು ತಿಂಗಳ ಅವಧಿಯಲ್ಲಿ ಅಗಲಿದ ಸದಸ್ಯರ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವಿತ್ತು. ಕಾರ್ಯದರ್ಶಿಗಳು ಎಲ್ಲರನ್ನೂ ಬರಮಾಡಿಕೊಂಡು ಅಂದು ಚರ್ಚಿಸುವ ಕಾರ್ಯಕ್ರಮಗಳ ಪಟ್ಟಿಯನ್ನು ಓದಿ ಮುಂಚಿತವಾಗಿ ಶ್ರದ್ಧಾಂಜಲಿ ಎಂದು ಪ್ರಕಟಿಸಿದರು. ತೀರಿ ಹೋದವರು ತುಂಬಾ ಹಿರಿಯ ಸದಸ್ಯರಾಗಿದ್ದರು. ಈಗಿನ ಆಡಳಿತ ಮಂಡಳಿಯಲ್ಲಿಯ ಸದಸ್ಯರಲ್ಲಿ ಒಬ್ಬರಿಗೆ ಮಾತ್ರ ಅವರ ಬಗ್ಗೆ ಮಾಹಿತಿ ಇತ್ತು. ಅವರು ತಮ್ಮ ಆಸನದಿಂದ ಎದ್ದು ಮಾಹಿತಿ ನೀಡಲು ಮುಂದಾದರು. ಆದರೆ ಮತ್ತೊಬ್ಬ ಸದಸ್ಯರು ಆಕ್ಷೇಪಣೆ ಎತ್ತಿದರು. ಮುಂಚೆ ಶ್ರದ್ಧಾಂಜಲಿ ಮುಗಿಸಿ ನಂತರ ಅವರ ಬಗ್ಗೆ ತಿಳಿಯೋಣ ಎಂದರು. ಕೆಲವರು ಹೌದೆಂದರು. ಕೆಲವರು ಅಲ್ಲವೆಂದರು. ಕೊನೆಗೆ ಅಧ್ಯಕ್ಷರು ಮೌನ ಮುರಿದು ಮುಂಚೆ ಶ್ರದ್ಧಾಂಜಲಿ ಮುಗಿಸಿಯೇ ಮತ್ತೇನಾದರೂ ಎನ್ನುವ ನಿರ್ಣಯ ಹೇಳಿದರು. ಹಾಗಾಗಿ ನೆರೆದ ಸದಸ್ಯರೆಲ್ಲರೂ ತಮ್ಮ ತಮ್ಮ ಆಸನಗಳಿಂದ ಎದ್ದು ನಿಂತು ಸನ್ನದ್ಧರಾದರು.

ಕಾರ್ಯದರ್ಶಿಗಳು “ಒಂದು ನಿಮಿಷದ ಮೌನವನ್ನಾರಚರಿಸಿದ ಮೇಲೆ ಮತ್ತೆ ಅವರ ಬಗ್ಗೆ ತಿಳಿಯೋಣ. ಈಗ ನಾನು ಸಿಗ್ನಲ್ ಕೊಡುತ್ತೇನೆ. ಆಗಿನಿಂದ ಮೌನ ವಹಿಸಿ. ಒಂದು ನಿಮಿಷದ ನಂತರ ಮತ್ತೊಮ್ಮೆ ಸಿಗ್ನಲ್ ಕೊಡುವೆ. ಅಲ್ಲಿಗೆ ಮುಗಿಸೋಣ” ಎನ್ನುತ್ತ ತಮ್ಮ ಮೊಬೈಲನ್ನು ದಿಟ್ಟಿಸಿದರು. ಸರಿಯಾದ ಸಮಯ ಎನಿಸುತ್ತಲೇ ’ ಎಸ್’ ಅಂದರು. ಅಲ್ಲಿಂದ ಶುರುವಾಯಿತು ಒಂದು ನಿಮಿಷದ ಈ ಉದ್ದವೆನಿಸಿದ ಮೌನ.

ಅಧ್ಯಕ್ಷರು ತಮ್ಮ ಸ್ಥಾನದ ಮರ್ಯದೆಗೆ ತಕ್ಕಂತೆ ಕಣ್ಣು ಮುಚ್ಚಿ ಧ್ಯಾನಾಸಕ್ತರಂತೆ ಮೌನಕ್ಕಿಳಿದರು. ಕಾರ್ಯದರ್ಶಿಗಳಿಗೆ ಆ ಸ್ವಾತಂತ್ರ್ಯವಿಲ್ಲ ಅಲ್ಲವೇ ? ಮತ್ತೆ ಮೊಬೈಲ್ ನೋಡದೆಯೇ ಒಂದು ನಿಮಿಷ ಎಷ್ಟು ಎಂದು ಅಂದಾಜು ಮಾಡುವುದು ನಮಗೆ ಬರುತ್ತದೆಯೇ ? ಇಲ್ಲವಲ್ಲ. ಹಾಗಾಗಿ ಅವರ ದೃಷ್ಟಿ ಮೊಬೈಲಿನ ಪರದೆ ಮೇಲೆಯೇ ನೆಟ್ಟಿತ್ತು. ಅವರ ಶ್ರದ್ಧಾಂಜಲಿ ಕರ್ತವ್ಯ ಪಾಲನೆ ಮಾತ್ರ ಆಗಿತ್ತು.

ಮಾಹಿತಿ ಹಂಚಿಕೊಳ್ಳ ಬೇಕಾದ ಸದಸ್ಯರು ತೀವ್ರ ಅಸಂತೋಷದಲ್ಲಿದ್ದ ಹಾಗೆ ಕಾಣುತ್ತಿತ್ತು. ಅವರ ಮನಸ್ಸಿನಲ್ಲಿ

 ’ಮಾಹಿತಿ ಕೊಟ್ಟಿದ್ದರೆ ಈ ಒಂದು ನಿಮಿಷದ ಮೌನ ಮತ್ತು ಶ್ರದ್ಧಾಂಜಲಿ ಇನ್ನೂ ಅರ್ಥಪೂರ್ಣವಾಗುತ್ತಿತ್ತಲ್ಲ’ ಎನ್ನುವ ಹಾಗಿತ್ತು ಮುಖಚರ್ಯೆ. ಆಗಾಗ ಅಧ್ಯಕ್ಷರ ಕಡೆಗೆ ನೋಡುತ್ತ ತಮ್ಮ ಅಸಮಾಧಾನವನ್ನು ಹೊರಹಾಕುವಂತೆ ತಮ್ಮ ಚೂಪಾದ ನೋಟವನ್ನೆಸೆಯುತ್ತಿದ್ದರು. ಅವರ ಪಕ್ಕಕ್ಕಿದ್ದವರು ಏನೋ ಇವರಿಗೆ ಹೇಳಲು ಹೋಗಿ ಮತ್ತೆ ಕಾರ್ಯದರ್ಶಿಗಳ ಕಡೆಗೆ ನೋಡಿ ಸುಮ್ಮನಾದರು.

ಕೆಲ ಯುವ ಸದಸ್ಯರು ಈ ನಿಮಿಷವನ್ನು ವ್ಯರ್ಥ ಮಾಡಲು ತಯಾರಿದ್ದಂತೆ ಕಾಣಲಿಲ್ಲ. ತಮ್ಮ ಮೊಬೈಲುಗಳನ್ನು ತೆರೆದು ವಾಟ್ಸಪ್ ಅಪ್ ಡೇಟ್ ಮಾಡಿಕೊಳ್ಳುವುದು ಕಂಡಿತು. ಅವರ ವಾದ ಇಷ್ಟೇ ಇರಬಹುದು. ’ ಮೌನ ಆಚರಿಸುತ್ತಿದ್ದೇವಲ್ಲ. ಮತ್ತೇನು ’ ಎಂದು. ಎಷ್ಟಾದರು ಬಂಡಾಯ ಧೋರಣೆಯಲ್ಲವೇ ! ಯುವರಕ್ತ !

ಅಷ್ಟರಲ್ಲಿ ಮತ್ತೊಬ್ಬ ಸದಸ್ಯರ ಮೊಬೈಲ್ ರಿಂಗಣಿಸಿತು. ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಅವರ ಕಡೆಗೆ ಕಿಡಿಗಣ್ಣ ನೋಟವೆಸೆದರು. ಸಭೆಗೆ ಬರುವಾಗಲೇ ಮೊಬೈಲನ್ನು ಸ್ವಿಚಾಫ್ ಮಾಡಬೇಕು ಅಥವಾ ಸೈಲೆಂಟಿನಲ್ಲಿಡ ಬೇಕುಎನ್ನುವ ಘೋಷಣೆ ಮುಂಚಿನ ಮೀಟಿಂಗ್ ಗಳಲ್ಲೇ ಮಾಡಲಾಗಿತ್ತು. ಹಾಗಾಗಿ ಆ ಸದಸ್ಯರು ಗಡಿಬಿಡಿಯಲ್ಲಿ ತಮಗೆ ಬಂದ ಕಾಲನ್ನು ಕಟ್ ಮಾಡಿ ಜೇಬಿಗಿಳಿಸಿದರು. ಸೈಲೆಂಟ್ ಅಥವಾ ಆಫ್ ಮಾಡಿದ ಹಾಗೆ ಕಾಣಲಿಲ್ಲ. ಮತ್ತೊಂದು ಕಾಲ್ ಈ ಒಂದು ನಿಮಿಷದಲ್ಲಿ ಬರಲಾರದು ಎನಿಸಿರಬೇಕು.

ಒಟ್ಟಿಗೆ ಕೂತಿದ್ದ ಮಹಿಳಾ ಸದಸ್ಯರು ಮುಖವನ್ನು ಅಡಿಗೆ ಹಾಕಿ ನಿಂತಿದ್ದರು. ಅವರು ಸಹ ಅಧ್ಯಕ್ಷರ ರೀತಿಯಲ್ಲೇ ಈ ಶ್ರದ್ಧಾಂಜಲಿಯಲ್ಲಿ ಮನಸಾ ಭಾಗವಹಿಸುತ್ತಿದ್ದಂತೆ ಅನಿಸಿತ್ತು.  ಅಷ್ಟರಲ್ಲಿ ಸಂಸ್ಥೆಯ ವಾಚ್ ಮನ್ ಯಾವುದರ ಬಗ್ಗೆಯೋ ಕೇಳಲು ’ ಸಾರ್’ ಎನ್ನುತ್ತ ಒಳಬಂದ. ಎಲ್ಲರೂ ಅವನನ್ನು ಇರಿಯುವಂತೆ ನೋಡಿದರು. ಅವನಿಗೂ ಪರಿಸ್ಥಿತಿ ಅರ್ಥವಾಗಿ ನಾಲಿಗೆ ಕಚ್ಚಿಕೊಂಡಂತೆ ಮಾಡಿ ಹೊರನಡೆದ. ಪಾಪ ಸಂಭಾವಿತ. ಅವನ ತಂದೆ ತೀರಿಹೋದಾಗ ಅವನನ್ನು ಸಹ ನಿಲ್ಲಿಸಿ ಇಂಥ ಮೌನಾಚರಣೆ ಮಾಡಿದ್ದು ಅವನಿಗೆ ನೆನಪಿತ್ತು.

ಯಾರೋ ಮುಂದಿನ ಸಾಲಿನವರು ಕಾರ್ಯದರ್ಶಿಗಳ ಕಡೆಗೆ ನೋಡಿದರಂತ ಕಾಣುತ್ತೆ. ಅವರು ಇನ್ನೂ ಇಪ್ಪತ್ತು ಸೆಕೆಂಡಿದೆ ಎನ್ನುವ ಹಾಗೆ ಬೆಟ್ಟು ತೋರಿದರು. ನಾನು ಸಹ  ನಲವತ್ತು ಸೆಕೆಂಡು ಬರೀ ಅವರಿವರವರನ್ನು ನೋಡುತ್ತ ಕಾಲ ಕಳೆದದ್ದು ಗುರುತಿಸಿಕೊಂಡೆ. ಉಳಿದ ಇಪ್ಪತ್ತು ಸೆಕೆಂಡಾದರೂ ಅಗಲಿದವರನ್ನು ನೆನೆಯಲು ಆಣಿಯಾದೆ. ಆದರೆ ನೋಡಿ ಒಂದು ನಿಮಿಷದಲ್ಲಿ ಅದೆಷ್ಟು ಕೆಲಸ ಮಾಡಿದೆ ಅಂತ. ಅದಕ್ಕೇ ಹೇಳಿದ್ದು ಒಂದು ನಿಮಿಷ ಅನ್ನೋದು ತುಂಬಾ ಉದ್ದ.