ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಆಚೀಚಿನ ಆಯಾಮ – ೨೨ : ಯಾವುದೂ ಅತಿಯಾಗಬಾರದು

ಚಂದಕಚರ್ಲ ರಮೇಶ ಬಾಬು
ಇತ್ತೀಚಿನ ಬರಹಗಳು: ಚಂದಕಚರ್ಲ ರಮೇಶ ಬಾಬು (ಎಲ್ಲವನ್ನು ಓದಿ)

೨೦೦೬ ರಲ್ಲಿ ಒಂದು ತೆಲುಗು ಚಿತ್ರ ಬಂದಿತ್ತು . ಅದರ ಹೆಸರು “ಬೊಮ್ಮರಿಲ್ಲು” ಅಂತ. ಅರ್ಥ ಬೊಂಬೆಮನೆ ಅಂತ. ಚಿತ್ರ ತಂಬಾ ಯಶಸ್ಸನ್ನು ಕಂಡು ಬೆಂಗಾಲಿ, ತಮಿಳು ಮತ್ತು ಒಡಿಯಾ ಭಾಷೆಗಳಲ್ಲಿ ಪುನಃ ನಿರ್ಮಿತವಾಗಿತ್ತು. ಚಿತ್ರ ತೆಲುಗಿನದಾದರು ಕನ್ನಡ ನಾಡಿನ ಅನೇಕ ನಗರಗಳಲ್ಲಿ ಪ್ರದರ್ಶನವಾಗಿದ್ದು, ತುಂಬಾ ಜನ ನೋಡಿರ ಬಹುದಾದ ಚಿತ್ರ ಇದು. ಇದರಲ್ಲಿಯ ತಂದೆಯ ಪಾತ್ರದಲ್ಲಿ ಕನ್ನಡದ ಹೆಮ್ಮೆಯ ಪೋಷಕ ನಟರಾದ ಶ್ರೀ ಪ್ರಕಾಶ್ ರಾಜ್ ಕಾಣಿಸಿಕೊಂಡು ಅದನ್ನು ತುಂಬಾ ಸಮರ್ಥವಾಗಿ ನಿರ್ವಹಿಸಿದ್ದರು. ಈ ಪಾತ್ರದ ತಂದೆ ತನ್ನ ಕುಟುಂಬದ ಸದಸ್ಯರ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾ ಅವರ ಬೇಕು ಬೇಡಗಳನ್ನು ತಾನೇ ಖುದ್ದಾಗಿ ಊಹಿಸುತ್ತಾ ಪೂರೈಸುತ್ತಿರುತ್ತಾರೆ. ಅದರ ಬಗ್ಗೆ ಅವರಿಗೆ ತುಂಬಾ ಹೆಮ್ಮೆ ಇರುತ್ತದೆ. ಅವರ ಮೊದಲ ಮಗ ಅವರು ಹೇಳಿದ ಹಾಗೆ ಕೇಳಿಕೊಂಡೇ ಇರುತ್ತಾನೆ. ಉಳಿದ ಸದಸ್ಯರ ವಿಷಯ ಅಷ್ಟಾಗಿ ಚಿತ್ರದಲ್ಲಿ ಕಾಣುವುದಿಲ್ಲ. ಆದರೆ ಅವರ ಚಿಕ್ಕ ಮಗ ಮಾತ್ರ ಮನೆಯ ಹೊರಗೆ ತನಗಿಷ್ಟ ಬಂದ ಹಾಗೆ ಇರುತ್ತಿದ್ದರೂ, ಮನೆಯಲ್ಲಿ ಮಾತ್ರ ಅಪ್ಪನ ಮಾತನ್ನು ಕೇಳುವ ಮಗನಾಗೇ ಇರುತ್ತಾನೆ. ಆದರೆ ಅವನ ಅಸಹನೆ ಮಾತ್ರ ಪ್ರತಿ ಹೆಜ್ಜೆಯಲ್ಲೂ ಕಾಣುತ್ತಿರುತ್ತದೆ. ಚಿತ್ರ ಅನೇಕ ತಿರುವುಗಳನ್ನು ಪಡೆದುಕೊಳ್ಳುತ್ತಾ ಸಾಗಿ ಕೊನೆಯಲ್ಲಿ ಅಪ್ಪ, ಮಗನ ಮುಖಾಮುಖಿಯಾಗುತ್ತದೆ. ಆಗ ಮಗ ಅಪ್ಪನಿಗೆ “ ಅಪ್ಪಾ! ನೀವು ನನ್ನ ಬದುಕಿನಲ್ಲಿ ಎಷ್ಟರವರೆಗೆ ಪ್ರವೇಶ ಮಾಡಿದ್ದೀರಿ ಎಂದರೆ ನಾನು ಇಷ್ಟು ವರ್ಷ ಹೇಗೆ ಕಳೆದೆ ಅಂತ ಹಿಂತಿರುಗಿ ನೋಡಿದಾಗ ನನ್ನ ಬದುಕಿನಲ್ಲಿ ನಾನು ಕಾಣುವುದೇ ಇಲ್ಲ. ಬರೀ ನೀವೇ ಕಾಣುತ್ತೀರಿ” ಅಂತ ಹೇಳುತ್ತಾನೆ.  ಚಿತ್ರ ಎಷ್ಟು ಹೆಸರುವಾಸಿಯಾಯಿತು ಎಂದರೆ ಮನೆಗಳಲ್ಲಿ ಆ ತರದ ವ್ಯಕ್ತಿತ್ವದ ತಂದೆಗೆ “ಬೊಮ್ಮರಿಲ್ಲು ಫಾದರ್ “ ಅಂತ ಕರೆಯುವಷ್ಟು. ಈಗ ತಿಳಿಯಿತಲ್ಲವೇ ಸ್ನೇಹಿತರೇ ನಾನು ಯಾವ ವಿಷಯದ ಬಗ್ಗೆ ಮಾತಾಡ್ತಿದ್ದೀನಿ ಅಂತ ! ಹೌದು. ಓವರ್ ಕೇರಿಂಗ್ ಪೇರೆಂಟ್ಸ್ ಬಗ್ಗೆ. ಹೆಚ್ಚುವರಿ ಜಾಗ್ರತೆ ವಹಿಸುವ ತಂದೆ ತಾಯಿಯರ ಬಗ್ಗೆ.

ಹಳೆಯ ಕಾಲದಲ್ಲಿ ದಂಪತಿಗಳಿಗೆ ತುಂಬಾ ಜನ ಮಕ್ಕಳಿರುತ್ತಿದ್ದರು. ಆಗಿನ ವ್ಯವಸ್ಥೆಯೇ ಹಾಗಿತ್ತು. ಹಾಗಾಗಿ ಮಕ್ಕಳ ಬಗ್ಗೆ ಹೆಚ್ಚು ನಿಗಾ ವಹಿಸುತ್ತಿರಲಿಲ್ಲ. ತಂದೆ ತಾಯಿಯರಿಬ್ಬರೂ ಕೂಡು ಸಂಸಾರದ ಹೊಣೆಗಳನ್ನು ನಿರ್ವಹಿಸುವುದರಲ್ಲೇ ಹೆಣಗಾಡುತ್ತಿದ್ದರು, ಹಣ್ಣಾಗುತ್ತಿದ್ದರು.  ಸರಕಾರ ತಂದ ಕುಟುಂಬ ಯೋಜನೆ, ಕುಗ್ಗುತ್ತಿರುವ ಆರ್ಥಿಕ ಸ್ತರ, ಆರೋಗ್ಯದ ಬಗ್ಗೆ ಕಾಳಜಿ ಇವೆಲ್ಲವೂ ಸೇರಿ ಕುಟುಂಬಗಳನ್ನು ಮೊಟುಕುಗೊಳಿಸಿದವು. ”ನಮಗಿಬ್ಬರೇ ಮಕ್ಕಳು, ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ “ ಎನ್ನುವ ನಿನಾದದೊಂದಿಗೆ ನಾವೆಲ್ಲ ನಮ್ಮ ಸಂಸಾರದ ಸೈಜನ್ನು ಕಮ್ಮಿ ಮಾಡಿದೆವು. ಬರ್ತಾ ಬರ್ತಾ ಆರ್ಥಿಕ ಮಟ್ಟದ ಸುಧಾರಣೆಯಾಯಿತು. ಮಕ್ಕಳ ಬಗ್ಗೆ ಕಾಳಜಿ ಬೆಳೆಯಿತು. ತಮ್ಮ ಮಕ್ಕಳಿಗೆ ತಾವು ಪಡೆಯಲಾಗದ ಸವಲತ್ತುಗಳನ್ನು ಕೊಟ್ಟು ಅವರು ತಮ್ಮ ಹಾಗೆ ಕಷ್ಟಗಳಲ್ಲಲ್ಲದೇ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆಯಬೇಕು ಎನ್ನುವ ದೃಷ್ಟಿಕೋನ ತಂದೆತಾಯಿಯರ ಮನಗಳಲ್ಲಿ ಹೊಕ್ಕಿತು. ಒಂದು ಸ್ತರದ ವರೆಗೂ ಅದೂ ಸರಿಯಾಗೇ ಕಂಡಿತು. ಆದರೆ ಕೆಲ ಸನ್ನಿವೇಶಗಳಲ್ಲಿ ಮಾತ್ರ ಅದು ಅತಿರೇಕಕ್ಕೆ ಹೋಗುತ್ತಾ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಸಹ ಅವರನ್ನು ಅವರ ಹಾದಿಗೆ ಬಿಡದೇ ಅವರ ಜೀವನಗಳಲ್ಲಿ ತಂದೆ ತಾಯಿಯರ ಪ್ರವೇಶ ಜಾಸ್ತಿಯಾಗುತ್ತ ಬಂದು ಅವರ ಜೀವನಗಳನ್ನೇ ದಾರಿ ತಪ್ಪಿಸುವ ಹಾಗಾದಾಗ  ಈ ತರದ ಪ್ರವರ್ತನೆಯನ್ನು ಚರ್ಚೆಗೆ ಒಡ್ಡಬೇಕಾದ ಪರಿಸ್ಥಿತಿ ಬಂದಿತು.

ಎಷ್ಟೋ ವಿದ್ಯಾರ್ಥಿಗಳು ತಾವು ಬಯಸಿದ ಅಥವಾ ತಮಗೆ ಪ್ರಾವೀಣ್ಯವಿರುವ ಕ್ಷೇತ್ರಗಳಲ್ಲಿ ತಮ್ಮ ವಿದ್ಯಾಭ್ಯಾಸ ಅಥವಾ ತರಬೇತಿಯನ್ನು ಮುಂದುವರೆಸಲಾರದೇ ಹೋದದ್ದರ ಮುಖ್ಯ ಕಾರಣ ತಮ್ಮ ತಂದೆ ತಾಯಿ ಅಂತ ಹೇಳಿದ್ದಾರೆ.  ಇದರ ಹಿಂದಿರುವುದು ತಂದೆ ತಾಯಿಯರು ತಮ್ಮ ಸುತ್ತಲಿರುವ ಸಮಾಜದಲ್ಲಿ ತಾವು ಗಣ್ಯರೆನಿಸಿಕೊಳ್ಳಲು ಮಕ್ಕಳನ್ನು ಡಾಕ್ಟರ್ ಅಥವಾ ಇಂಜಿನಿಯರ್ ಆಗಿ ಮಾಡಬೇಕೆನ್ನುವ ಹಂಬಲ. ಅದೆಷ್ಟಾದರೂ ಖರ್ಚಾಗಲಿ, ನನ್ನ ಮಗ ಅಥವಾ ಮಗಳು ಇದೇ ಕೋರ್ಸ್ ಓದಬೇಕು ಎನ್ನುವ ಪ್ರತಿಷ್ಠೆಗೆ ಹೋಗಿ ಮಕ್ಕಳ ಮೇಲೆ ತಮ್ಮ ಇಷ್ಟವನ್ನು ಹೇರುವುದು. ಸ್ವಲ್ಪ ಮಟ್ಟಿಗೆ ವಿದ್ಯಾರ್ಥಿಯ ಸುತ್ತ ಮುತ್ತ  ಸ್ನೇಹಿತರು ಸಹ ಕಾರಣ ಎನ್ನಬಹುದು. ಒಬ್ಬ ವಿದ್ಯಾರ್ಥಿಗೆ ತುಂಬಾ ಒಳ್ಳೆ ಅಂಕ ಬಂದಿದೆ ಎನ್ನಿ. ಅವನಿಗೆ ಸುಲಭವಾಗಿ ಮೆಡಿಕಲ್ ಅಥವಾ ಇಂಜನೀರಿಂಗ್ ನಲ್ಲಿ ಸೀಟ್ ಬರುತ್ತದೆ ಎಂದೆಣಿಸಿ. ಆದರೆ ಅವನಿಗೆ ಕಲೆಗಳ ಬಗ್ಗೆ ಆಸಕ್ತಿ, ಇಷ್ಟ. ಅವನು ಬಿ.ಎ. ಓದಬೇಕೆಂದಾಗ ಆವನ ಅಥವಾ ಅವಳ ಸ್ನೇಹಿತರೇ ಅವನನ್ನು ಹೀಯಾಳಿಸುವುದು ಕಾಣಬಹುದು. ಇದರ ಕಾರಣದಿಂದ ಅವನು ಮನಸ್ಸಿಲ್ಲದ ಮನಸ್ಸಿನಿಂದ ಪ್ರತಿಷ್ಟಿತ ಕೋರ್ಸ್ ಗೆ ಸೇರಿ ಅದರಲ್ಲಿ ಆಸಕ್ತಿ ಕಾಣದೇ ಕಮ್ಮಿ ಅಂಕ ಪಡೆಯುವುದೋ ಅಥವಾ ಅನುತ್ತೀರ್ಣನಾಗಿ ನಗೆ ಪಾಟಲಿಗೀಡಾಗುವುದೋ ಆಗುತ್ತದೆ. ಈ ರೀತಿಯ ಘಟನೆಗಳು ನಮಗೆ ಬರೀ ಚಲನ ಚಿತ್ರಗಳಲ್ಲೇ ಅಲ್ಲದೇ ನಿಜ ಜೀವನದಲ್ಲೂ ಸಿಗುತ್ತವೆ.

ಮುಂದೆ ಅವರ ವಯಸ್ಕ ಜೀವನಕ್ಕೆ ಬರೋಣ. ಇಲ್ಲೂ ಹಾಗೇ. ಮಗನ ಅಥವಾ ಮಗಳ ವೈವಾಹಿಕ ಜೀವನದಲ್ಲಿ ಅನಗತ್ಯವಾದ ಪ್ರವೇಶ, ಸಲಹೆ, ಕೆಲವೊಮ್ಮೆ ಅದರಿಂದ ಅವರಿಬ್ಬರ ಮನಸ್ಸುಗಳಲ್ಲಿ ವೈಮನಸ್ಯ, ಕೊನೆಗೆ ನಾವಿದ್ದೇವೆ ಎನ್ನುವ ಭರವಸೆ ಜಾಸ್ತಿಯಾದಾಗ ವಿಚ್ಛೇದನ. ಇವೆಲ್ಲವೂ ಈಗಿನ ತರುಣರ ಸಮಾಜದಲ್ಲಿ ತುಂಬಾ ಸಾಧಾರಣವಾಗಿವೆ.

ಇದಕ್ಕೂ ನನಗೊಂದು ಚಿತ್ರ ನೆನಪಿಗೆ ಬರುತ್ತದೆ. ಚಿತ್ರ ಯಾಕೆ ಉಲ್ಲೇಖಿಸುತ್ತಿದ್ದೇನೆ ಅಂದರೆ ತುಂಬಾ ಜನ ನೋಡಿರಬಹುದು ಅಂತ. ಮತ್ತೆ ಚಲನಚಿತ್ರದ ವಿಷಯ ಎಲ್ಲೋ ನಡೆದ ನಿಜ ಘಟನೆಯೇ ಆಗಿರಬೇಕಲ್ಲವೇ ! ಚಿತ್ರ ನಾಲ್ಕು ದಶಕಗಳ ಹಿಂದಿನದು. ಹೆಸರು “ಕೋರಾ ಕಾಗಜ್”. ಇದರಲ್ಲಿಯ ನಾಯಕಿ ಸ್ಥಿತಿವಂತರ ಮನೆಯವಳಾಗಿರುತ್ತಾಳೆ. ನಾಯಕ ಸಾಧಾರಣ ದರ್ಜೆಯವನಾಗಿರುತ್ತಾನೆ. ಇಬ್ಬರ ನಡುವೆ ಅಂಕುರಿಸಿದ ಪ್ರೀತಿಯಿಂದಾಗಿ ಮದುವೆ ನಡೆಯುತ್ತದೆ. ನಾಯಕಿಯ ಅಮ್ಮನಿಗೆ ಒಂದಿಷ್ಟು ಈ,ಮದುವೆ ಇಷ್ಟವಿರುವುದಿಲ್ಲ. ಹುಡುಗನ ಬಗ್ಗೆ ಅವರಿಗೆ ತಕರಾರಿರುವುದಿಲ್ಲ. ಆದರೆ ಅವನ ಆದಾಯ ಕಮ್ಮಿ ಅಂತ ಅವಳ ಅಸಡ್ಡೆ. ಹಾಗಾಗಿ ತನ್ನ ಮಗಳು ಕಷ್ಟ ಪಡುತ್ತಾಳೆ ಎನ್ನುವ ಅತೀ ಕಾಳಜಿಯ ಸ್ವಭಾವದಿಂದ ಅವಳು ತನ್ನ ಖರ್ಚಿನಲ್ಲಿ ಮಗಳ ಮನೆಗೆ ಬೇಕಾದ ಸವಲತ್ತುಗಳನ್ನು ಒದಗಿಸುತ್ತಿರುತ್ತಾಳೆ. ಅದು ನಾಯಕನಿಗೆ ಹಿಡಿಸುವುದಿಲ್ಲ. ಅವನು ತನ್ನ ಅಸಮಾಧಾನ ಹೊರಹಾಕಿದಾಗ ಗಂಡ ಹೆಂಡತಿ ಬಿಟ್ಟು ಹೋಗುತ್ತಾರೆ. ಕೊನೆಯಲ್ಲಿ ಸುಖಾಂತವಾಗುವ ಮಾತು ಬೇರೇ. ನಾನಿಲ್ಲಿ ಹೇಳ ಹೊರಟಿದ್ದು ಈ ಅತೀ ಕಾಳಜಿ ಅವರ ವೈವಾಹಿಕ ಜೀವನಕ್ಕೇ ಮುಳುವಾಯಿತು ಎನ್ನುವ ಅಂಶ.

ಹಳೇ ಕಾಲದಲ್ಲಿ ಫೋನ್ ಗಳ ಹಾವಳಿ ಇರಲಿಲ್ಲ. ಬಾಯಿ ಮಾತಿನ ಸಲಹೆಗಳು ಮಾತ್ರ ಇರುತ್ತಿದ್ದವು. ಈಗ ಹಾಗಿಲ್ಲ. ಎರಡೂ ಪಾರ್ಟಿಗಳ ಕೈಯಲ್ಲೂ ಫೋನ್ ಗಳು. ಸರಾಗವಾಗಿ ಸಲಹೆಗಳು ಹರಿಯುತ್ತವೆ. ಈ ಅಂಶದಲ್ಲಿ ಹುಡುಗಿಯ ಅಮ್ಮನ ಪಾತ್ರ ಮುಖ್ಯವಾಗುತ್ತದೆ. ತನ್ನ ಮಗಳು ಅತ್ತೆ ಮನೆಯಲ್ಲೂ ಸುಖವಾಗಿರ ಬೇಕೆನ್ನುವ ಹಂಬಲದಿಂದ ಮಗಳಿಗೆ ಸತತ ಸಲಹೆಗಳನ್ನು ಕೊಡುತ್ತ ಅವಳ ತಲೆ ಕೆಡಿಸುವುದು ಕಾಣುತ್ತದೆ. ಅಡಿಗೆ ಊಟ, ಉಡುಗೆ ತೊಡುಗೆ, ಇಬ್ಬರ ಸಂಬಳ ಎಲ್ಲವೂ ಅಮ್ಮನಿಗೆ ಬೇಕು. ತನ್ನ ಸಲಹೆ ಕೊಡಬೇಕು. ಅದು ಜಾರೀ ಗೊಳಿಸಲಾಗಿದೆಯಾ ಇಲ್ಲವಾ ಅಂತ ತಪಾಸಣೆ ಬೇರೇ. ಕೂಡು ಕುಟುಂಬದಲ್ಲಿರುವ ಅಳಿಯನಿಗೆ ಹೊರ ಬಂದು ಬೇರೇ ಸಂಸಾರ ಹೂಡು ಎನ್ನುವ ಸಲಹೆ. ಅದರ ಬಗ್ಗೆ ದಿನಾಲು ಫೋನಿನಲ್ಲಿ ವಿಚಾರಣೆ.

ತಂದೆಯದು ಆಸ್ತಿ, ಹೂಡಿಕೆ, ತಿಂಗಳ ಖರ್ಚು, ಎಲ್ಲಾದರೂ ಸಿಗುವ ರಿಯಾಯತಿ ಮಾರಾಟ, ಪ್ರವಾಸದ ಸ್ಥಳಗಳು,ಅಲ್ಲಿಗೆ ಹೋದಾಗ ತೆಗೆದುಕೊಳ್ಳ ಬೇಕಾದ ಜಾಗ್ರತೆಗಳು ಇವುಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ತುಂಬಾ ಮುಕ್ತವಾಗಿ ಅಳಿಯನಿಗೆ ಉಪದೇಶ ನೀಡುತ್ತಾರೆ. ತಮ್ಮಮಗನೇ ಇವೆಲ್ಲವನ್ನೂ ಕೇಳದೇ ಕಡೆಗಣಿಸಿದರೂ ಅಳಿಯನಿಗೆ ಹೇಳುವಾಗ ಆ ಗತ್ತೇ ಬೇರೇ. ಅದಕ್ಕೆ ಮಗಳ ಬೆಂಬಲ ಬೇರೇ ಇರುತ್ತದೆ. ಮಕ್ಕಳು ಮದುವೆಯಾಗಿ ವಿದೇಶಕ್ಕೆ ಹೋದರೂ ಈ ಸಲಹೆಗಳ ಹಾವಳಿ ತಪ್ಪಿದ್ದಲ್ಲ. ಈಗಂತೂ ಸ್ಕೈಪ್, ವಾಟ್ಸಪ್ ವಿಡಿಯೋ ಕಾಲ್ ಸೌಲಭ್ಯಗಳು ಬಂದಿವೆಯಲ್ಲ !

ಹೀಗೆ ಇಬ್ಬರೂ ತಮ್ಮ ಮಗಳ ವೈಯಕ್ತಿಕ ಮತ್ತು ವೈವಾಹಿಕ ಜೀವನದಲ್ಲಿ ತಮ್ಮ ಹಸ್ತಕ್ಷೇಪ ಮಾಡುತ್ತ ಅವಳು ತನ್ನ ಜೀವನವನ್ನು ತಮ್ಮ ದಾರಿಯತ್ತ ಎಳೆದು ಅದು ಬಿಕ್ಕಟ್ಟನ್ನು ಎದುರಿಸುವಾಗ ವಿಚ್ಛೇದನಕ್ಕೆ ಪ್ರೋತ್ಸಾಹಿಸುತ್ತಾರೆ. ಹಿಂದೆ ತಂದೆತಾಯಂದಿರು ಗಂಡಿಗಾಯಿತು ಅಥವಾ ಹೆಣ್ಣಿಗಾಯಿತು ಮದುವೆಯ ಬಂಧದ ಪ್ರಾಮುಖ್ಯತೆ ತಿಳಿಸಿ ಹೇಳುತ್ತಿದ್ದರು. ಗಂಡ ಹೆಂಡಿರು ಬೇರೇ ಆದಲ್ಲಿ ಅದರ ದುಷ್ಪ್ರಭಾವ ಮಕ್ಕಳ ಮೇಲೆ ಬೀಳುವುದರ ಬಗ್ಗೆ ತಿಳಿಸಿ ಹೇಳುತ್ತಿದ್ದರು. ಮಕ್ಕಳು ಮುಂದಿನ ತಲೆಮಾರಲ್ಲವೇ ! ಅವರು ಒಂದು ಹಿತಕರ ವಾತಾವರಣದಲ್ಲಿ ಬೆಳೆದರೆ ಮಾತ್ರ ಈ ಸಮಾಜಕ್ಕೆ ಒಳಿತಾಗಬಲ್ಲರು, ಅದಕ್ಕಾಗಿ ಸ್ವಲ್ಪ ಮಟ್ಟಿಗೆಯ ಹೊಂದಾಣಿಕೆ ಮತ್ತು  ಸ್ವಲ್ಪ ಮಟ್ಟಿಗೆಯ ತ್ಯಾಗವನ್ನು ಮಾಡಿ ಸಂಸಾರವನ್ನು ತೂಗಿಸಿಕೊಂಡು ಹೋಗಬೇಕಾದ ಅವಶ್ಯಕತೆಯ ಬಗ್ಗೆ ಉಪದೇಶ ಮಾಡುತ್ತಿದ್ದರು. ಕಾಲ ಬದಲಾಗಿ ಈಗ ತಂದೆ ತಾಯಂದಿರೇ ಒಂದು ಮನೆಯನ್ನು ಒಡೆಯಲು ಮುಂದಾಗುತ್ತಿರುವುದು ಅತಿ ವಿಷಾದನೀಯ.

ತಮ್ಮ ಮಕ್ಕಳ ಬಗ್ಗೆ ತಕ್ಕಷ್ಟು ಜಾಗ್ರತೆ ವಹಿಸಬೇಕಾಗಿರುವುದು ಎಲ್ಲ ತಂದೆ ತಾಯಂದಿರ ಕರ್ತವ್ಯ. ಆದರೆ ಅದು ಅತಿರೇಕಕ್ಕೆ ಹೋಗಬಾರದು. ಒಂದು ಸ್ತರದ ವರೆಗೆ ಬೆಳೆದ ಮಕ್ಕಳು ತಮ್ಮ ಸುತ್ತಲಿರುವ ಪರಿಸರವನ್ನು ನೋಡುತ್ತ ಅದರಿಂದ ಕಲಿಯುತ್ತ, ತಮ್ಮದೇ ಆದ ವ್ಯಕ್ತಿತ್ವವನ್ನು ಮತ್ತು ಸಮಸ್ಯೆಗಳನ್ನು ಸುಧಾರಿಸುವ ಕ್ರಮಗಳನ್ನು ರೂಪಿಸಿಕೊಳ್ಳುತ್ತಾರೆ. ಅವರನ್ನು ಅವರ ರೀತಿಯಲ್ಲೇ ಬೆಳೆಯಲು ಬಿಡಬೇಕು. ಬೇಕಾದಲ್ಲಿ ಸಲಹೆಗಳನ್ನು ನೀಡಬೇಕೇ ವಿನಃ ಅವರ ಮೇಲೆ ತಮ್ಮ ವ್ಯಕ್ತಿತ್ವಗಳನ್ನು ಹೊರೆಸಿ ಅವರನ್ನು ಬೊಂಬೆಗಳನ್ನಾಗಿಸಬಾರದು. ಯಾವುದರಲ್ಲಾಯಿತು ಅತಿ ಒಳ್ಳೆಯದಲ್ಲ ಅಲ್ಲವೇ !