ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಇಗೋ ಬಂದಿದೆ ನಿಮ್ಮ ಊರಿಗೆ ‘ಉ’ಕಾರದ ಉಗಿಬಂಡಿ….

ಪುನೀತ್ ಕುಮಾರ್ ವಿ

ಉಗಿಬಂಡಿ! ಅಂದರೆ ಗೊತ್ತಲ್ಲ, ಕ್ಞುಂ…ಕ್ಞುಂ…ಕುಂ…ಊ.. ಅಂತ ಉನ್ಮಾದದಿಂದ ಉಲಿಯುತ ಹೊಗೆಯುಗುಳುತ ವೇಗದಲ್ಲಿ ಚಲಿಸುವ ಚುಕುಬುಕು ರೈಲು-ಕನ್ನಡದಲ್ಲಿ ಉಗಿಬಂಡಿ. ಒಂದನೆ ಈಯತ್ತೆ ಓದುವಾಗ ಸಚಿತ್ರ ಮಗ್ಗಿಪುಸ್ತಕದಲ್ಲಿ ನೀವು ಓದಿರಬಹುದು ಅಥವಾ ನೋಡಿರಬಹುದು : ‘ಅ’ ಅರಸ, ‘ಆ’ ಆನೆ ಅಂತ ಸಾಗುವ ಅಕ್ಷರಪಯಣ ‘ಉ’ಕಾರ ಬಂದಾಗ ಉಗಿಬಂಡಿ ಅಂತ ಇರುತ್ತಿತ್ತು ತಾನೆ?

ಅಂತೆಯೇ ಈವತ್ತು ಇಲ್ಲಿ, ಉಗಿಬಂಡಿ; ಇರಿ ಇರಿ. ಕೇವಲ ಉಗಿಬಂಡಿ ಅಲ್ಲ. ‘ಉ’ಕಾರದ ಉಗಿಬಂಡಿ! ಅಂಕಣದುದ್ದಕೂ ಚಲಿಸುತ್ತದೆ. ಈ ಉಗಿಬಂಡಿಯ ಪ್ರತಿಯೊಂದು ಬೋಗಿಯೊಳಗೂ ಬರಿ ಉಕಾರಗಳ ಉದ್ಘೋಷ ಕೇಳುತ್ತಿರುತ್ತದೆ. ಉಕಾರಗಳ ಉಲ್ಲಾಸ ಅನುರಣಿಸುತ್ತದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ : ಉ ಅಕ್ಷರದಿಂದ ಶುರುವಾಗುವ ಅನೇಕ ವಿಶೇಷಣಗಳನ್ನು ಈ ಉಗಿಬಂಡಿ ಹೊತ್ತು ತರುತ್ತದೆ. ಅರ್ಥಾತ್, ನಾಮಪದವಾಗಿ, ಕ್ರಿಯಾಪದವಾಗಿ, ವಿಶೇಷಣವಾಗಿ…ಹೀಗೆ ಹಲವಾರು ಪ್ರಕಾರಗಳಲ್ಲಿ ‘ಉಕಾರ’ ಹೇಗೆ ನಮ್ಮ ಮಾತಿನಲ್ಲಿ, ಭಾಷೆಯಲ್ಲಿ ಹಾಸುಹೊಕ್ಕಾಗಿದೆ ಎಂದು ಸಾದರಪಡಿಸುತ್ತದೆ ಈ ಬಂಡಿ. ಈ ಬಂಡಿಯ ಒಳಹೊಕ್ಕು ನೀವು ಪಯಣಿಸಿದರೆ ಖಂಡಿತ ಆಶ್ಚರ್ಯಚಕಿತರಾಗುತ್ತೀರಿ. ಹೌದಲ್ವ ‘ಉ’ ಅಕ್ಷರದ ಮಹಾತ್ಮೆ ಇಷ್ಟೆಲ್ಲ ಇದೆಯಲ್ಲ ಎಂದು ಸೋಜಿಗರಾಗುತ್ತೀರಿ. ಹಾಗಂತ ಬೇರೆ ಅಕ್ಷರಗಳನ್ನು ನಾನು ಅಲ್ಲಗಳೆಯುತ್ತಿಲ್ಲ. ಎಲ್ಲಕೂ ಅವುಗಳ ಘನತೆ ಇದ್ದೇ ಇದೆ. ಈ ಹೊತ್ತು, ‘ಉ’ಅಕ್ಷರದ ಹು(ಉ)ಟ್ಟುಹಬ್ಬ ಆಚರಿಸೋಣ ಅಷ್ಟೆ. ಹಾಗಾದರೆ ಉಕಾರದ ವೈಶಿಷ್ಟ್ಯ ಅರಿಯಲು ಉತ್ಸುಕರಾಗಿದ್ದೀರಿ ತಾನೆ. ಬನ್ನಿ ಮತ್ತೆ, ದೀಪಾವಳಿ ಹಬ್ಬದ ವಿಶೇಷ ಸಂದರ್ಭದಲ್ಲಿ ಉಕಾರದ ಉಗಿಬಂಡಿಯ ಪಯಣಕ್ಕೆ ಜೊತೆಯಾಗಿ. ಶುರುಮಾಡುವ ಮೊದಲು ಜೋರಾಗಿ ಉಘೇ ಉಘೇ ಅನ್ನಿರಿ.

ಉಘೇ ಉಘೇ.”

*****

ನಮ್ಮ ದಿನನಿತ್ಯ ಜೀವನದಲ್ಲಿ ಉಕಾರದ ಶಬ್ದಗಳು ಬಹಳ ಹತ್ತಿರವಾಗಿವೆ ಮತ್ತು ನಮ್ಮ ಜೀವನದಲ್ಲಿ ಬಹುಮುಖ್ಯ ಪಾತ್ರವಹಿಸುವ ಕೆಲವು ಶಬ್ದಗಳು ಶುರುವಾಗುವುದು ‘ಉ’ ವರ್ಣದಿಂದ! ಬೇಕಾದರೆ ನೋಡಿ :

ನೇಸರ ‘ಉದಿಸುತ್ತಾನೆ’ ‘ಉದಯರಾಗ’ ಹಾಡುತ್ತಾನೆ; ಹಕ್ಕಿಗಳು ‘ಉಲಿಯುತ್ತವೆ’; ಕಡಲ ಅಲೆಗಳು ‘ಉಕ್ಕಿ’ ಹರಿಯುತ್ತವೆ; ಹಲ್ಲು ‘ಉಜ್ಜಬೇಕು’; ಬಟ್ಟೆ ‘ಉಡಬೇಕು’; ಊಟ ‘ಉಣಬೇಕು’; ದೀಪ ‘ಉರಿಬೇಕು’; ರೈತ ‘ಉತ್ತಬೇಕು’; ಬೆಳೆದ ದವಸ-ಧಾನ್ಯಗಳನ್ನು ಶೇಖರಿಸಲು ‘ಉಗ್ರಾಣ’ ಬೇಕು.

ರುಚಿಗೆ ‘ಉಪ್ಪು’, ಊಟಕ್ಕೆ ‘ಉಪ್ಪಿನಕಾಯಿ; ಚಿತ್ರಾನ್ನಕ್ಕೆ ‘ಉದ್ದಿನವಡೆ’ ಉದ್ದಿನವಡೆ ಮಾಡಲು ‘ಉದ್ದಿನಬೇಳೆ’. ಬಹುತೇಕರು ಇಷ್ಟ ಪಡುವ ‘ಉಪ್ಸಾರು’. ಅನೇಕರಿಗೆ ಹಿಡಿಸದ ‘ಉಪ್ಪಿಟ್ಟು’….ಹೀಗೆ ಅಡುಗೆಮನೆ ಒಳಗಂತೂ ಉಕಾರದ ಮಹಿಮೆ ಹೆಚ್ಚೇ. ಏಕೆ ಹೇಳಿ ಕೆಲವು ಸಿಹಿತಿಂಡಿಗಳನ್ನು ಹೊರತುಪಡಿಸಿ ಮಿಕ್ಕ ಎಲ್ಲ ಪದಾರ್ಥಕ್ಕೂ ‘ಉಪ್ಪು’ ಅತ್ಯಗತ್ಯ. ಅದಿಲ್ಲದೇ ಅಡುಗೆ ಅಪೂರ್ಣ. ರುಚಿಹೀನ.

ಅಕಸ್ಮಾತ್ ಮನೇಲಿ ಹೆಂಡತಿ ಅಡುಗೆ ಮಾಡಿಲ್ಲ ಅಂದರೆ ಗಂಡ ಉಕಾರದ ಮೊರೆಹೋಗಲೇಬೇಕು ಅರ್ಥಾತ್- ‘ಉಪಾಹಾರ ಮಂದಿರ’ಕ್ಕೆ. ಇಲ್ಲದಿದ್ದರೆ ‘ಉಪವಾಸವೇ’ ಗತಿ ಆ ಶ್ರೀಪತಿಗೆ. ಇದೆಲ್ಲ ಇರಲಿ ಮುಖ್ಯವಾಗಿ ನಾವು ಜೀವಂತವಾಗಿ ಬಾಳ್ವೆ ಮಾಡಬೇಕಾದರೆ ಬೇಕಾಗಿರುವುದು ಏನ್ಹೇಳಿ? ಕಣ್ಣು, ಮೂಗು, ಬಾಯಿ, ದೇಹ.. ಇವೆಲ್ಲಕೂ ಮುಖ್ಯವಾಗಿ ‘ಉಸಿರು’. ಊಟಕ್ಕೆ ಉಪ್ಪು ಹೇಗೊ, ದೇಹಕ್ಕೆ ಉಸಿರು ತಾನೆ. ಮನುಷ್ಯ ಜೀವಂತ ಚೇತನ ಅನಿಸಿಕೊಳ್ಳುವುದೇ ಉಸಿರಾಡುವುದರಿಂದ. ಹಾಗೆಯೇ ಮನುಷ್ಯ ಎಂದು ಹುಟ್ಟಿದ ಮೇಲೆ ಅವನ ಬದುಕಿಗೊಂದು ಉದ್ದೇಶ, ಉದಾತ್ತ ಗುಣ, ಉದಾರ ಮನಸ್ಸು ಮುಖ್ಯ. ನೋಡಿದ್ರಾ ಉಕಾರಕ್ಕೂ ನಮ್ಮ ಜೀವನಕ್ಕೂ ಎಂಥ ಅವಿನಾಭಾವ ಸಂಬಂಧ ಇದೆ ಅಂತ​.

ಇನ್ನು ನಾವೆಲ್ಲ ಜೀವನ ಸಾಗಿಸುವುದೇ ಹೊಟ್ಟೆ(ಉದರ) ತುಂಬಿಸಿಕೊಳ್ಳೋಕೆ ಎಂಬುದು ಪರಮಸತ್ಯ. ಯಾವುದೇ ‘ಉದ್ಯೋಗ’ ಮಾಡಲಿ ಎಷ್ಟೇ ದುಡಿಯಲಿ, ಹೆಚ್ಚು ಸಂಪಾದನೆ ಬರುವ ‘ಉದ್ಯಮ’ ನಡೆಸಲಿ, ಉತ್ತಮ ‘ಉದ್ಯೋಗಿ’, ಶ್ರೀಮಂತ ‘ಉದ್ಯಮಿ’ ಎಂದು ಕೀರ್ತಿಗಳಿಸಲಿ ಕೊನೆಗೆ ಅವರಿಗೆಲ್ಲ ಬೇಕಾಗಿರುವುದು ತುತ್ತು ಊಟ ಮಾತ್ರ. ಇದನ್ನೇ ನಮ್ಮ ಪುರಂದರದಾಸರು ಸರಳವಾಗಿ ಹೇಳಿದ್ದಾರೆ : “ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ”. ಇದೇ ಅರ್ಥಸಾರುವ ಇನ್ನೊಂದು ನುಡಿ ಹೀಗಿದೆ- ‘ಉದರ ನಿಮಿತ್ತಂ ಬಹುಕೃತ ವೇಷಂ’.

ಈಗ ಶಾಲೆ ಕಡೆಗೆ ಬನ್ನಿ ಅಲ್ಲೂ ಉಕಾರದ ಪ್ರಾಬಲ್ಯ ನೀವು ಕಾಣಬಹುದು : ಮಕ್ಕಳು ಬೆಳೀತ ಬೆಳೀತ ‘ಉಡಾಳತನ’ ಬಿಟ್ಟು ಒಳ್ಳೆಯ ಮಕ್ಕಳಾಗಿ, ಶಿಸ್ತಿನ ವಿದ್ಯಾರ್ಥಿಗಳಾಗಬೇಕಾದರೆ, ಜ್ಞಾನವಂತರಾಗಬೇಕಾದರೆ ‘ಉಪಾಧ್ಯಾಯರು’ ಬೇಕೇ ಬೇಕು. ಅನೇಕ ವಿಷಯಗಳನ್ನು ಅರ್ಥ ಮಾಡಿಕೊಂಡು ಕಲಿಯಬೇಕೆಂಬ ‘ಉತ್ಸಾಹ’ ಮಕ್ಕಳಲ್ಲಿ ಅನವರತ ಇರಬೇಕು. ಪ್ರತಿನಿತ್ಯ ಅಭ್ಯಾಸ ಮಾಡಬೇಕು, ಓದಬೇಕು, ‘ಉರು’ಹೊಡಿಬೇಕು(Byheart), ನೆನಪಿಟ್ಟುಕೊಳ್ಳಬೇಕು, ಮನನಮಾಡಬೇಕು. ಮುಖ್ಯ ಪರೀಕ್ಷೆಗಳಲ್ಲಿ ಪ್ರಶ್ನೆಗಳಿಗೆ ಸೂಕ್ತ ‘ಉತ್ತರ’ಗಳನ್ನು ಬರೀಬೇಕು. ಉತ್ತಮ ಅಂಕಗಳನ್ನು ಪಡೆದು ಉತ್ತಮ ಶ್ರೇಣಿಯಲ್ಲಿ ‘ಉತ್ತೀರ್ಣ’ರಾಗಬೇಕು. ಹಾಗಾದಾಗ ಅವರ ‘ಉಜ್ವಲ’ ಭವಿಷ್ಯ ಬೆಳಗುವುದು ಖಚಿತ.

ಅಷ್ಟೆ ಅಲ್ಲದೇ ದಿನನಿತ್ಯ ತರಗತಿಯೊಳಗೆ ಮೇಷ್ಟ್ರು ಹಾಜರಾತಿ ಪುಸ್ತಕ ಹಿಡಿದು ಹೆಸರು ಕೂಗಲು ಶುರುಮಾಡಿದರೆ ಸಾಕು ‘ಉ’ ಅಕ್ಷರದಿಂದ ಶುರುವಾಗುವ ವಿದ್ಯಾರ್ಥಿಗಳ ಹೆಸರುಗಳು ನಲಿದಾಡುತ್ತವೆ : ಉಮಾ, ಉಷಾ, ಉಮೇಶ, ಉಮಾಶ್ರೀ, ಉಮಾಪತಿ, ಉಮಾಕಾಂತ, ಉಲ್ಲಾಸ್, ಉಸ್ಮಾನ್, ಉಮರ್, ಉಪೇಂದ್ರ, ಉದಯ್ ಹೀಗೆ. ಶಾಲೆಯಿಂದ ಮನೆಗೆ ಬಂದ ಮಗು ಉಲ್ಲಾಸದಿಂದ ಆಡಿ ನಲಿದಾಡಬೇಕಾದರೆ ಮನೆಯ ಸಮೀಪ ಒಂದು ‘ಉದ್ಯಾನವನ’ ಇದ್ದರೆ ಎಷ್ಟು ಚಂದ ಅಲ್ಲೊಂದು ‘ಉಯ್ಯಾಲೆ’ ಇದ್ದರಂತೂ ಮಹದಾನಂದ. ಜೀವನವೇ ಒಂದು ‘ಉಯ್ಯಾಲೆ’ ಎಂದಿದ್ದಾರೆ ಹಿರಿಯರು. ಅದು ಸದಾ ನೋವು-ನಲಿವು, ಏಳು-ಬೀಳು, ಆಶೆ- ಹತಾಶೆ ಮುಂತಾದ ಭಾವಗಳ ಏರಿಳಿತಗಳ ಎಲ್ಲೆಯೊಳಗೆ ಜೀಕುತ್ತಿರುತ್ತದೆ. ಕಾಲ ಹಿಂದೆ ನಿಂತು ಅದನ್ನು ತೂಗುತ್ತಿದ್ದರೆ, ಅದರಲ್ಲಿ ಕೂತು ಮೈಮರೆಯಬೇಕಾದವರು ನಾವು.

ಮದುವೆಗಾಗಿ ವಧುವರರ ಅನ್ವೇಷಣೆ ಎಲ್ಲ ಮುಗಿದು ಮದುವೆ ನಿಶ್ಚಿತಾರ್ಥ ನಿಶ್ಚಿಯವಾದ ದಿನ ‘ಉಂಗುರ’ ಬದಲಾಯಿಸಿಕೊಳ್ಳುವ ಮೂಲಕವೇ ನವಜೋಡಿಗೆ ಬಂಧನದ ಸವಿಭಾಗ್ಯ ದೊರಕುವುದು. ಮತ್ತೆ ಮದುವೆ ‘ಉತ್ಸವದಲ್ಲಿ’ ಬಂಧು ಮಿತ್ರರು ವಧು-ವರರಿಗೆ ‘ಉಡುಗೊರೆ’ ಕೊಡುವುದು ಸಾಮಾನ್ಯ.

ನೋಡಿ ಇಲ್ಲೆಲ್ಲ ‘ಉ’ಕಾರ ಹೇಗೆ ಜೈಕಾರ ಹಾಕಿಸಿಕೊಂಡು ವಿಜೃಂಭಿಸುತ್ತಿದೆ ಎಂದು

ಇನ್ನು,’ಉಪರಾಷ್ಟ್ರಪತಿ’, ‘ಉಪಮುಖ್ಯಮಂತ್ರಿ’; ‘ಉಪನಿರ್ದೇಶಕ’; ‘ಉಪಸಂಪಾದಕ’; ‘ಉತ್ತರಾಧಿಕಾರಿ’, ‘ಉಚ್ಚನ್ಯಾಯಾಲಯ’ ಆಗಾಗ ನಾವು ಮಾಧ್ಯಮಗಳಲ್ಲಿ ಕೇಳುತ್ತಿರುತ್ತೇವೆ.

=====

ಈಗ ಉಕಾರದ ಕೆಲವು ಊರುಗಳ ಹೆಸರು ನೋಡೋಣ :

ಉಪ್ಪಿನಂಗಡಿ, ಉಪ್ಪುಂದ, ಉಚ್ಚಂಗಿ, ಉಡುಪಿ, ಉತ್ತರ ಕನ್ನಡ, ಉಲ್ಲಾಳ ಉಪನಗರ, ಉಜ್ಜಯಿನಿ, ಉಪ್ಪಾರಪೇಟೆ, ಉತ್ತರ ಪ್ರದೇಶ, ಉತ್ತಾರಖಾಂಡ, ಉದಯಪುರ.

=====

ಉಕಾರದ ಕೆಲವು ಕನ್ನಡ ಸಿನಿಮಾಗಳು

ಉಯ್ಯಾಲೆ
ಉಪಾಸನೆ
ಉಂಡೂ ಹೋದ ಕೊಂಡೂ ಹೋದ
ಉಲ್ಟಾ ಪಲ್ಟಾ
ಉಪೇಂದ್ರ
ಉಸಿರೇ
ಉಪ್ಪಿ-2
ಉಲ್ಲಾಸ ಉತ್ಸಾಹ
ಉಪ್ಪಿದಾದ M.B.B.S
ಉಳಿದವರು ಕಂಡಂತೆ
ಉಗ್ರಂ

=====

ಇಲ್ಲಿವರೆಗೂ ‘ಉಕಾರದ’ ಲಘು ಹರಟೆ ಕಂಡಿರಿ. ಈಗ ಅರ್ಥಬದ್ಧ ವಿಚಾರಗಳೆಡೆಗೆ ಗಮನಹರಿಸೋಣ. ಚರ್ಚಿಸೋಣ. ಅದೂ ಉಕಾರದಿಂದಲೇ ಪಲ್ಲವಿಸುತ್ತದೆ ನೆನಪಿರಲಿ.

ಉಕಾರದ ಕೆಲವು ವಿಶಿಷ್ಟ ಪದಗಳ ಅರ್ಥ :

• ಉಡು ಎಂಬ ಸಂಸ್ಕೃತ ಪದದ ಅರ್ಥ ನಕ್ಷತ್ರ;

• ಉಡುಪಥ ಅಂದರೆ ನಕ್ಷತ್ರಗಳ ದಾರಿ= ಆಕಾಶ;

• ಉಡುರಾಜ, ಉಡುದೇವ, ಉಡುಪ ಈ ಮೂರು ಪದಗಳಿಗೆ ಅರ್ಥ ಚಂದ್ರ. ಅಂದರೆ ನಕ್ಷತ್ರಗಳ ಒಡೆಯ ಚಂದ್ರ.

• ಉಚ್ಛ್ರಾಯ = ಏಳಿಗೆ, ಅಭಿವೃದ್ದಿ, ಉನ್ನತಿ;

• ಉದಯೋನ್ಮುಖ= ಏಳಿಗೆಯಾಗುತ್ತಿರುವ;

• ಉದಕ ಅಂದರೆ ನೀರು, ಜಲ; ಉಷ್ಣೋದಕ= ಬಿಸಿನೀರು;

• ಉಷಃಕಾಲ = ಸೂರ್ಯೋದಯ

• ಉಸುಕು = ಮರಳು, sand;

• ಉಟ = ಎಲೆಗಳು, leaves, grass;

• ಉಟಜ = ಎಲೆಗಳಿಂದ ಕಟ್ಟಿದ ಮನೆ, ಪರ್ಣಕುಟೀರ, ಪರ್ಣಶಾಲೆ;

=====

ಈ ವಿಭಾಗದಲ್ಲಿ ಕೆಲವು ರಚನೆಗಳನ್ನು ಕುರಿತು :

ಉಳ್ಳವರು ಶಿವಾಲಯ ಮಾಡುವರು
ನಾನೇನು ಮಾಡಲಿ ಬಡವನಯ್ಯ
ಎನ್ನ ಕಾಲೇ ಕಂಬ, ದೇಹವೇ ದೇಗುಲ
ಶಿರವೇ ಹೊನ್ನ ಕಳಶವಯ್ಯ
ಕೂಡಲಸಂಗಮದೇವಾ ಕೇಳಯ್ಯ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ.

‘ದೇಹವೇ ದೇಗುಲ’ ಎಂದು ಸಾರಿರುವ ಅರ್ಥಪೂರ್ಣ ವಚನ ಇದು. ದೇವಾಲಯವನ್ನು ಮಾನವ ಶರೀರದ ಪ್ರತೀಕವಾಗಿ ಈ ವಚನದಲ್ಲಿ ಬಸವಣ್ಣನವರು ಹೇಳಿದ್ದಾರೆ.

=====

ಮಂಕುತಿಮ್ಮನ ಕಗ್ಗ’ ಖ್ಯಾತಿಯ ಡಿ. ವಿ ಗುಂಡಪ್ಪನವರು ಅವರ ಒಂದು ಕಗ್ಗ ಹೀಗಿದೆ:

ಉಪ್ಪಿಷ್ಟು ಹುಳಿಯಿಷ್ಟು ಕಾರ ಸಿಹಿಯಷ್ಟಿಷ್ಟು
ಒಪ್ಪಿರ್ದೊಡದು ಭೋಜ್ಯವಂತು ಜೀವಿತಂ
ತಪ್ಪು ಸರಿ ಬೆಪ್ಪು ಜಾಣಂದಕುಂದುಗಳ ಬಗೆ
ಯಿಪ್ಪತ್ತು ಸೇರೆರುಚಿ- ಮಂಕುತಿಮ್ಮ.

ಊಟದಲ್ಲಿ ಉಪ್ಪು, ಹುಳಿ, ಕಾರ, ಸಿಹಿ, ಸರಿಯಾದ ಪ್ರಮಾಣದಲ್ಲಿ ಒಪ್ಪವಾಗಿ ಇದ್ದರೆ ಹೇಗೆ ತೃಪ್ತಿಯಿಂದ ಭೋಜನ ಮಾಡಬಹುದೊ. ಹಾಗೆಯೇ ಬದುಕಿನಲ್ಲೂ ಸರಿ, ತಪ್ಪು, ಪೆದ್ದುತನ, ಜಾಣ್ಮೆ, ಅಂದ, ಕುಂದು, ಮುಂತಾದ ಹತ್ತಾರು ಬಗೆಯ ಭಾವಗಳು ಸೇರಿದರೆ ಜೀವನವೂ ನೀರಸವಾಗದೆ ‘ಸಮರಸ’ವಾಗಿರುತ್ತದೆ. ಅದೇ ಜೀವನ. ಏಕೆಂದರೆ, ಎಲ್ಲರೂ ಎಲ್ಲ ಸಮಯದಲ್ಲೂ ಸರಿಯಾದದ್ದುನ್ನೇ ಮಾಡಲು ಸಾಧ್ಯವಿಲ್ಲ, ತಪ್ಪು ಸಹ ಒಮ್ಮೊಮ್ಮೆ ಆಗಬಹುದು. ಕೆಲವೊಮ್ಮೆ ಗೊತ್ತಿಲ್ಲದೆಯೂ ತಪ್ಪಾಗುತ್ತದೆ. ಕೆಲವೊಮ್ಮೆ ಎಡವುತ್ತೇವೆ, ಕೆಲವೊಮ್ಮೆ ಎಚ್ಚರವಾಗಿರುತ್ತೇವೆ. ಹಾಗಾಗಿ ನಾವು ಬೇಸರ ಪಟ್ಟಿಕೊಳ್ಳಬಾರದು ಇವೆಲ್ಲ ಇದ್ದರೆಯೇ ಜೀವನ ರಸಮಯ, ವರ್ಣಮಯ ಎಂಬುದು ಈ ಕಗ್ಗದ ತಾತ್ಪರ್ಯ. ಎಷ್ಟು ಸತ್ಯ ಅಲ್ಲವೆ?

=====

ವರಕವಿ ಬೇಂದ್ರೆ ಅವರು ‘ವಸಂತಮುಖ’ ಎಂಬ ಕವನದ ಮೊದಲ ಸಾಲುಗಳು :

ಉದಿತ ದಿನ! ಮುದಿತ ವನ
ವಿಧವಿಧ ವಿಹಗಸ್ವನ
ಇದುವೆ ಜೀವ, ಇದು ಜೀವನ
ಪವನದಂತೆ ಪಾವನ

=====

ನಮ್ಮ ‘ಹುಯಿಲಗೋಳ ನಾರಾಯಣರಾಯರು’ ಕನ್ನಡ ನಾಡಿನ ಬಗ್ಗೆ ಬರೆದಿರುವ ಸೊಗಸಾದ ಹಾಡಿನ ಪಲ್ಲವಿ ಗೊತ್ತಲ್ಲ :

ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು
ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು

=====

ಚುಟುಕ ಬ್ರಹ್ಮ’ ಎಂದು ಖ್ಯಾತರಾದ ದಿ‌ನಕರ ದೇಸಾಯಿ ಅವರ “ಚಂದ್ರನಿಗೆ ಸಲಹೆ” ಎಂಬ ಚುಟುಕ ಇಲ್ಲಿದೆ. ವಿಡಂಬನೆ, ಹಾಸ್ಯ, ಜೀವನಮೌಲ್ಯ, ಆದರ್ಶ, ತಾತ್ವಿಕತೆ ಮುಂತಾದ ಅನೇಕ ಸಂಗತಿಗಳನ್ನು ಚುಟುಕದಲ್ಲಿ ಹಿಡಿದಿಡುವುದು ದೇಸಾಯಿ ಅವರ ವಿಶೇಷ.

ಮನುಷ್ಯರು ಚಂದ್ರಲೋಕಕ್ಕೂ ಲಗ್ಗೆ ಇಟ್ಟು ಅನೇಕ ಅನ್ವೇಷಣಗಳನ್ನು ಶುರು ಮಾಡಿದ ಹಿನ್ನೆಲೆಯಲ್ಲಿ ಕವಿ, ಚಂದ್ರನಿಗೆ ಈ ರೀತಿ ಸಲಹೆ ನೀಡುತ್ತಾರೆ. ಓದಿ ಮಜವಾಗಿದೆ.

ಉಳಿಸಿಕೊಳಲಿಕೆ, ಚಂದ್ರ, ನಿನ್ನ ಕುಲಗೋತ್ರ
ನೀನಾಗಬೇಕಯ್ಯ ಒಂದು ನಕ್ಷತ್ರ.
ಮತ್ತೆ ಚಿಕ್ಕೆಯ ಹಾಗೆ ಬಲು ದೂರ ಹೋಗು.
ಇಲ್ಲದಿದ್ದರೆ, ಹಿಡಿಯುವರು ನಿನ್ನ ಮೂಗು.

=====

ನಮ್ಮ ಕನ್ನಡ ಲೇಖಕರ ಕೆಲವು ಪುಸ್ತಕಗಳ ಹೆಸರು ಉಕಾರದಿಂದ ಶುರುವಾಗುತ್ತದೆ.

ಪಿ. ಲಂಕೇಶ‍್ರ ಕಥಾಸಂಕಲನ ‘ಉಲ್ಲಂಘನೆ’. ಚದುರಂಗ ಅವರ ‘ಉಯ್ಯಾಲೆ’ ಕಾದಂಬರಿ, ರಾಮಾಯಣ ಆಧರಿಸಿ ಎಸ್. ಎಲ್. ಭೈರಪ್ಪ ಅವರು ಬರೆದ ಕಾದಂಬರಿ-“ಉತ್ತರಕಾಂಡ”. ರಾಮಸ್ವಾಮಿ ಹುಲಕೋಡು ಅವರ “ಉಪ್ಪಿಗಿಂತ ರುಚಿ ಬೇರೆ ಇಲ್ಲ”, ಜೋಗಿ ಅವರ ಒಂದು ವಿಶೇಷ ಪುಸ್ತಕದ ಹೆಸರು ಏನು ಗೊತ್ತಾ? “ಉಳಿದ ವಿವರಗಳು ಲಭ್ಯವಿಲ್ಲ!”

=====

ಉಳಿದ ವಿವರಗಳು ಲಭ್ಯವಿಲ್ಲ.. ಅಂದ ಮೇಲೆ ಇನ್ನೇನು ಹೇಳಲಿ. ಕೊನೆಯಾದಾಗಿ ನಾನು ಹೇಳುವುದು: ಇಷ್ಟೆಲ್ಲ ಉಪಕಾರ ಮಾಡಿರುವ ‘ಉ’ಕಾರವನ್ನು ಉಪೇಕ್ಷೆ ಮಾಡಬೇಡಿ ಅಷ್ಟೆ.

ಒಂದು ಒಗಟು ಕೇಳುವ ಮೂಲಕ ಈ ಉಗಿಬಂಡಿ ಮುಂದಿನ ಊರಿಗೆ ಹೋಗುತ್ತದೆ. ನೀವು ಒಗಟು ಬಿಡಿಸ್ತಾ ಉಗಿಬಂಡಿಯನ್ನು ಬೀಳ್ಕೊಡಿ.

ಒಗಟು ಇದು :
ಉದ್ದನೆ ಮರಕ್ಕೆ ನೆರಳಿಲ್ಲ“. ಉತ್ತರ ಹೇಳಿ ನೋಡೋಣ?