ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶಶಿಕಲಾ ಹೆಗಡೆ
ಇತ್ತೀಚಿನ ಬರಹಗಳು: ಶಶಿಕಲಾ ಹೆಗಡೆ (ಎಲ್ಲವನ್ನು ಓದಿ)

“ಅಮ್ಮಾ, ಆ ಕೆಂಪು ಬಣ್ಣವನ್ನೂ ಹಾಕಲು ಹೇಳಮ್ಮಾ” ಪುಟ್ಟ ಕಾರ್ತಿಕನಿಗೆಂದು ಗೋಲಾವಾಲಾ ಗೋಲಾದ ತಯಾರಿಯಲ್ಲಿ ತೊಡಗಿದ್ದ.ಹಳದಿ,ಹಸಿರು,ಕೇಸರಿ,ನರುಗೆಂಪು ಬಣ್ಣಗಳನ್ನು ಒಂದಾದ ಮೆಲೆ ಒಂದರಂತೆ ಆ ಐಸಿನ ಮುದ್ದೆಗೆ ಸೇರಿಸುತ್ತಲಿದ್ದ. ಆ ಕಡೆ ಬಣ್ಣ ಸೇರಿದಂತೆ ಈ ಕಡೆ ಕಾರ್ತಿಕನ ಮುಖದ ಮೇಲಿನ ನಗು ಹೆಚ್ಚಾಗುತ್ತಾ ಹೋಗುತ್ತಿತ್ತು. ಥಟ್ಟನೆ ,ಅಯ್ಯೋ ಈ ಗೋಲಾವಾಲ ಮಾಮಾ ಕೆಂಪು ಬಣ್ಣವನ್ನು ಹಾಕದೇ ಇದ್ದರೆ , ಎಂದು ಗಾಬರಿಯಾಗಿ ಅಮ್ಮನನ್ನು ಎಚ್ಚರಿಸಿದ್ದ ಕಾರ್ತಿಕ.

ಮುಂಬಯಿಯ ಉಪನಗರವೊಂದರಲ್ಲಿ ವಾಸಿಸುವ ಈ ಕಾರ್ತಿಕ್‍ನಿಗೆ ದಿನಕ್ಕೊಂದು ಹೆಸರಿನ ನಾಮಕರಣ ಅಪ್ಪ,ಅಮ್ಮನಿಂದ. ಪುಟ್ಟ, ಪೋಕರಿ, ಅಮ್ಮಾ ಪುಟ್ಟಿ ಎಂದೆಲ್ಲ ಕರೆಸಿಕೊಳ್ಳುವ ಸಣ್ಣ ಪೋರ ಅವನು.ವಾರಕ್ಕೊಮ್ಮೆಯಾದರೂ ಅಮ್ಮನ ಜೊತೆ ಮಾರ್ಕೆಟ್ಟಿನ ಕಡೆ ಸವಾರಿ ಹೊರಡುವುದು ವಾಡಿಕೆ. ಹಾಗೆ ತಿರುಗಾಡಲು ಹೋದಾಗಲೆಲ್ಲಾ ತನಗೆ ಗೋಲಾ ಬೇಕೆಂದು ಅಮ್ಮನನ್ನು ಪೀಡಿಸಿ ಕಾಡಿಸುವುದೂ ಕೂಡ ವಾಡಿಕೆಯೇ.”ಅದೆಲ್ಲ ಒಳ್ಳೆಯದಲ್ಲ”ಎಂದು ಅಮ್ಮ ಮುದ್ದಿನಿಂದಲೇ ಗದರಿಸುವುದೂ ಕೂಡ ವಾಡಿಕೆಯೇ ಆಗಿಬಿಟ್ಟಿದೆ. ಕಟ್ಟು ನಿಟ್ಟಿನ,ಶಿಸ್ತಿನ ಸಿಪಾಯಿಯಂತಿದ್ದ ಅಮ್ಮ ಇಂದು ಗೋಲಾ ಕೊಡಿಸಲು ರಾಜಿಯಾಗಿದ್ದಳು.ಕಾರ್ತಿಕನ ಖುಷಿಯನ್ನು ಕೇಳಬೇಕೇ? ಸುತ್ತಮುತ್ತ ಓಡಾಡುತ್ತಿದ್ದ ಗಾಡಿಗಳೊಂದೂ ಅವನಿಗೆ ಕಾಣುತ್ತಿರಲಿಲ್ಲ. ಡಬಲ್ ಡೆಕ್ಕರ್ ಬಸ್ ಎದುರಿಗೆ ಹಾದುಹೋದರೆ ಕೈತಟ್ಟಿ ಖುಷಿಪಡುತ್ತಿದ್ದ ಅವನಿಗೆ ಇಂದು ಅದ್ಯಾವುದರ ಕಡೆಗೂ ಗಮನವಿಲ್ಲ.ಅವನು ಕಣ್ಣು ಹಾಯಿಸಿದಲ್ಲೆಲ್ಲ ಅವನಿಗೆ ಕಾಣುವುದು ರಂಗು ರಂಗಿನ ಗೋಲಾಗಳು. ಇಂದು ಅಪ್ಪ ಬರುವವರೆಗೂ ಎಚ್ಚರಿರಬೇಕು.’ನಿಂಗೆ ಗೋಲಾ ಇಲ್ಲ’ಎಂದು ಅಪ್ಪನಿಗೆ ‘ಟೇಂಗಾ’ ತೋರಿಸಿ ಹಿಯಾಳಿಸಿ ನಗಬೇಕು ಎನ್ನುವ ಪ್ಲಾನೂ ಅವನ ತಲೆಯಲ್ಲಿ ಗಿರಕಿ ಹೊಡೆಯುತಿತ್ತು. ಅರ್ಜುನನ ಗುರಿ ಮೀನಿನ ಕಣ್ಣಿನ ಮೇಲೆಯೇ ಇತ್ತಂತೆ, ಹಾಗೆಯೇ ಕಾರ್ತಿಕನ ಗಮನವೆಲ್ಲವೂ ಈಗ ಗೋಲಾದ ಮೇಲೆ. ಇನ್ನೇನು ತಯಾರಾದ ಗೋಲಾವನ್ನು ಬಾಯಲ್ಲಿ ಇಡಬೇಕು ಎನ್ನುಷ್ಟರಲ್ಲಿ ……..

“ಕಾರ್ತಿಕ್ ಹೊತ್ತಾಯ್ತು ಏಳು,ಅಪ್ಪನ ಜೊತೆ ತಿಂಡಿ ತಿನ್ನಲ್ವಾ? ಅಪ್ಪಂಗೆ ಆಫೀಸಿಗೆ ಹೊತ್ತಾಗುತ್ತೆ ,ಮಗಾ ಎದ್ಗೊ,”ಎಂಬ ಅಮ್ಮನ ಧ್ವನಿ ಕೇಳಿ ಥಟ್ಟನೆ ಕಣ್ಣು ತೆರೆದ.ಅರೇ! ನನ್ನ ಗೋಲಾ ಎಲ್ಲಿ ಹೋಯ್ತು ಎಂದು ಹುಡುಕಾಡಿದ.ಬಾಯಲ್ಲಿಡುವ ಮೊದಲೇ ಕನಸಿನಲ್ಲೆ ಕರಗಿದ ಗೋಲಾವನ್ನು ನೆನಪಿಸಿಕೊಂಡು ಅಳು ಬರುವಂತಾಯ್ತು. ತಾನೀಗ ಅತ್ತರೆ ಅಪ್ಪ,ಅಮ್ಮ ಏನಾಯ್ತು ಎಂದು ಕೇಳದೇ ಇರುತ್ತಾರೆಯೇ. ಕನಸಿನಲ್ಲಿ ಕಂಡದ್ದನ್ನೆಲ್ಲ ಅವರಿಗೆ ಹೇಳಿದರೆ ನಕ್ಕೇ ನಗುತ್ತಾರೆ. ಅದಕ್ಕಿಂತ ಸುಮ್ಮನೆ ಎದ್ದು ಅಪ್ಪನ ಜೊತೆ ತಿಂಡಿ ತಿನ್ನುವುದು ಒಳ್ಳೆಯದು ಎನ್ನುತ್ತ ಗಡಿಬಿಡಿಯಿಂದ ಎದ್ದು ಅಪ್ಪನು ಮುಂದೊಡ್ಡಿದ ಕೈಗಳಿಗೆ ತನ್ನ ಪುಟ್ಟ ಕೈಗಳನ್ನು ಸೇರಿಸಿ ಹಲ್ಲುಜ್ಜಲು ತೆರಳಿದ. ಮುಖ ತೊಳೆದು ಬರುವಷ್ಟರಲ್ಲಿ ಅಮ್ಮ ಬೆಳ್ಳನೆಯ ಇಡ್ಲಿಗಳನ್ನು ಪ್ಲೇಟಿನಲ್ಲಿ ಹಾಕಿ ಇಟ್ಟಿದ್ದಳು. ಪುಟ್ಟನಿಗೆ ಪುಟಾಣಿ ಇಡ್ಲಿಗಳು ಜೊತೆಗೆ ತುಪ್ಪಬೆಲ್ಲ ಬೆರೆಸಿಟ್ಟಿದ್ದಳು. ಅಪ್ಪನ ಪ್ಲೇಟಿನಲ್ಲಿ ಇಡ್ಲಿಯ ಜೊತೆ ಚಟ್ನಿ. ಅಮ್ಮ ಹಾಲು ಮತ್ತು ಚಹ ತರಲು ಒಳಗಡೆ ಹೋದೊಡನೆ ಅಪ್ಪ ಒಂದು ಚೂರು ಇಡ್ಲಿಗೆ ಚಟ್ನಿಯನ್ನು ತಾಗಿಸಿ ಪುಟ್ಟನ ಬಾಯಲ್ಲಿ ಇಟ್ಟು ಬಿಟ್ಟ. “ಹಾ”ಖಾರದ ಚಟ್ನಿ ನಾಲಿಗೆಗೆ ತಾಗಿದೊಡನೆ ಕಾರ್ತಿಕನಿಗೆ ಅರಿವಿಲ್ಲದೆಯೆ ಒಂದು ಸಣ್ಣ ಚೀತ್ಕಾರ ಹೊರಬಿದ್ದಿತು.”ಅದ್ಯಾರು ಅದು,ಪುಟ್ಟನಿಗೆ ಚಟ್ನಿ ತಿನ್ನಿಸಿದವರು?” ಒಳಗಿನಿಂದ ಒಡನೆಯೇ ಅಮ್ಮನ ಏರುಧ್ವನಿ ಕೇಳಿಬಂತು. ಕಣ್ಣು ಮಿಟುಕಿಸಿ ನಕ್ಕ ಅಪ್ಪನ ಮುಖವನ್ನೇ ನೋಡುತ್ತಾ “ಇಲ್ಲಪ್ಪಾ ಇಲ್ಲ,ಅಪ್ಪ ಚಟ್ನಿ ಕೊಡಲೇ ಇಲ್ಲ”ಕಿಸಿಕಿಸಿ ನಗುತ್ತ ಕಾರ್ತಿಕನ ಉತ್ತರ.”ಅಪ್ಪ ಮಗನ ಕಾರಸ್ಥಾನ ನನಗೆ ತಿಳಿಯದೇ? ನೀವಿಬ್ಬರೂ ಒಂದೇ”ಎಂದು ನಗುತ್ತಾ ಬಂದ ಅಮ್ಮ ಮೆತ್ತಗೆ ಇಬ್ಬರ ಕಿವಿಯನ್ನು ಹಿಂಡಿದಳು. ಕಿವಿಯೇ ಕಿತ್ತು ಬಂತೇನೋ ಎಂಬಂತೆ ಇಬ್ಬರ ಚೀರಾಟ. ಮರುಗಳಿಗೆಯಲ್ಲೇ ʼಹೋʼ ಎಂಬ ನಗು.ಯಾರಿಗುಂಟು ಯಾರಿಗಿಲ್ಲ ಇಂತಹ ಸಂಸಾರ ಸುಖ.ಅಪ್ಪ ಅಮ್ಮನ ಮಡಿಲಲ್ಲಿ ಕಾರ್ತಿಕ ಪರಮಸುಖಿ.

ತಿಂಡಿ ತಿಂದು ತಯಾರಾಗಿ ಅಪ್ಪ ಆಫೀಸಿಗೆ ಹೊರಟನೆಂದರೆ ಇನ್ನು ಬರುವುದು ಸರಿರಾತ್ರಿಗೇ ಸರಿ. ಒಂದೊದು ದಿನ ಪುಟ್ಟ ಅಪ್ಪನಿಗಾಗಿ ಕಾದು ಕಾದು ಸುಸ್ತಾಗಿ ನಿದ್ದೆ ಮಾಡಿಬಿಡುತ್ತಿದ್ದ. ಅದಕ್ಕೆಂದೇ ಅಪ್ಪ ಆಫೀಸಿಗೆ ಹೊಗುವಾಗಲೇ ಪುಟ್ಟನಿಗೆ ಚಾಕಲೇಟ್ ಕೊಟ್ಟು ಹೋಗುತ್ತಿದ್ದ. ಇದಕ್ಕೇಂದೇ ಕಾರ್ತಿಕ್ ಕಾತುರದಿಂದ ಕಾಯುತ್ತಿದ್ದ. ದಿನ ದಿನವೂ ಬೇರೆ ಬೇರೆ ಬಣ್ಣದ ಚಾಕಲೇಟ್, ಅದಕ್ಕೆ ಬದಲಾಗಿ ಕಾರ್ತಿಕ್ ಅಪ್ಪನಿಗಾಗಿ ಒಂದು ಪುಟ್ಟ ಕೆಲಸ ಮಾಡಬೇಕಾಗುತ್ತಿತ್ತು, ಹೆಚ್ಚು ಕಷ್ಟದ ಕೆಲಸವೇನಲ್ಲ, ಅಪ್ಪನ ಕುತ್ತಿಗೆಯನ್ನು ಗಟ್ಟಿಯಾಗಿ ಬಳಸಿ ಕೆನ್ನೆಗೆ ಗಲ್ಲಕ್ಕೆ ಮುತ್ತು ಕೊಡಬೇಕಾಗಿತ್ತು ಅಷ್ಟೇ! ಚಾಕಲೇಟ್ ಕೈಗೆ ಸಿಕ್ಕೊಡನೆ ಓಡಿಹೋಗಿ ಫ್ರಿಜ್ಜಿನ ಬಾಗಿಲು ತೆಗೆದು ತನ್ನ ಚಾಕಲೇಟ್ ಡಬ್ಬ ತೆಗೆದು ಅದರೊಳಗೆ ಚಾಕಲೇಟನ್ನು ತುಂಬಿ ಭದ್ರವಾಗಿ ಮುಚ್ಚಿ ಮತ್ತೆ ಫ್ರಿಜ್ಜಿನೊಳಗೆ ಇಟ್ಟು ಬಿಡುತ್ತಿದ್ದ. ಚಾಕಲೇಟನ್ನು ಮುಟ್ಟಿನೋಡುವ ಭಾಗ್ಯ ಮಾತ್ರ ಅವನಿಗಿತ್ತು. ತಿಂದು ಆನಂದಿಸುವ ಅದೃಷ್ಟ ಅವನಿಗಿರಲಿಲ್ಲ. ಅಮ್ಮ ಯಾವತ್ತೂ ಹೇಳುತ್ತಿದ್ದ ಮಾತು ಪುಟ್ಟನ ಮನಸ್ಸಿನಲ್ಲಿ ಮನನವಾದಂತೇ ಇತ್ತು.”ಡಾಕ್ಟರ್ ಮಾಮಾ ಹೇಳಿದ್ದಾರೆ,ನೀನು ಚಾಕಲೇಟ್, ಐಸ್‍ಕ್ರೀಮ್ ಎಲ್ಲಾ ತಿನ್ನದೇ ಇದ್ರೆ ಬೇಗ ಬೇಗ ನಡೆದಾಡೋದಕ್ಕೆ ಕಲಿಸ್ತಾರಂತೆ. ಆಮೇಲೆ ನಿಂಗೆ ಎಲ್ಲಾ ತಿನ್ನೋಕೆ ಕೊಡ್ತೀನಿ. ಅಲ್ಲಿತನಕ ಡಾಕ್ಟರ್‍ಮಾಮಾ ಹೇಳಿದಂತೇ ಕೇಳ್ಬೇಕು “ಎಂದು ತಿಳಿಸಿ ಹೇಳಿದ್ದಳು. ಅಮ್ಮ ತನಗೆ ಹೇಳಿದ ಮಾತುಗಳನ್ನು ತನ್ನ ಮುದ್ದು ಭಾಷೆಯಲ್ಲಿ ಅಪ್ಪನಿಗೆ ಹೇಳಿದಾಗ ಯಾಕೋ ಅಪ್ಪ ಪುಟ್ಟನ ಕಣ್ತಪ್ಪಿಸಿ ಕಣ್ಣೀರನ್ನು ಒರೆಸಿಕೊಂಡಿದ್ದರು.

ಪುಟ್ಟನ ಚಾಕಲೇಟ್ ಡಬ್ಬಿ ಒಂದು ಚಿಕ್ಕ ಇತಿಹಾಸದ ಪುಸ್ತಕ ಇದ್ದಂತೆ. ಅದರ ಪ್ರತಿಯೊಂದು ಪುಟಗಳು ಅವನಿಗೆ ಚಿರಪರಿಚಿತ. ತನಗೆ ಯಾರು ಚಾಕಲೇಟ್ ಕೊಟ್ಟರೂ ಡಬ್ಬಿಯಲ್ಲಿ ತುಂಬಿ ಇಡುತ್ತಿದ್ದ. ಅಷ್ಟೇ ಅಲ್ಲದೆ ಮನೆಗೆ ಯಾವ ನೆಂಟರು ಬಂದರೂ ಅವರೆದುರಿಗೆ ತನ್ನ ಚಾಕಲೇಟನ ಖಜಾನೆಯನ್ನು ತೆರೆದು ಇಡುತ್ತಿದ್ದ. ಪ್ರತಿಯೊಂದು ಚಾಕಲೇಟನ್ನು ಯಾರು ತಂದು ಕೊಟ್ಟಿದ್ದು, ಯಾವಾಗ ತಂದುಕೊಟ್ಟಿದ್ದು ಎಂಬೆಲ್ಲ ವಿವರವನ್ನು ಪಟಪಟನೆ ಹೇಳಿಬಿಡುತ್ತಿದ್ದ. ಆದರೆ ಯಾರಾದರೂ “ನಂಗೊಂದು ಚಾಕಲೇಟ್ ಕೊಡು ಮರಿ” ಎಂದರೆ ಮಾತ್ರ ತನ್ನ ಪ್ರಾಣಪ್ರಿಯವಾದ ಆಸ್ತಿಯನ್ನು ಸರಸರನೆ ಡಬ್ಬಿಯಲ್ಲಿ ತುಂಬಿಕೊಂಡು ಹೊರಟುಬಿಡುತ್ತಿದ್ದ. ತಾನು ನಡೆದಾಡಲು ಕಲಿತಮೇಲೆ ಒಂದೊಂದಾಗಿ ಅವನ್ನೆಲ್ಲಾ ತಿನ್ನಬೇಕು ಎನ್ನುವ ಆಸೆ ಅವನಿಗಿರುವುದು ಸಹಜ ತಾನೇ!

ಪುಟ್ಟನ ವಯಸ್ಸೇನೋ ಶಾಲೆಗೆ ಸೇರಿಸುವಷ್ಟು ಆಗಿದ್ದರೂ ʼಇಂತಹ ಮಕ್ಕಳನ್ನು ನಮ್ಮ ಶಾಲೆಗೆ ಸೇರಿಸಿಕೊಳ್ಳಲು ಆಗುವುದಿಲ್ಲʼಎಂಬ ತಿರಸ್ಕಾರದ ಮಾತು ಎಲ್ಲ ಶಾಲೆಗಳಿಂದಲೂ ಕೇಳಲು ದೊರಕಿತ್ತು.ತನ್ನೆಲ್ಲ ಬೇಸರ, ನೋವನ್ನು ನುಂಗಿಕೊಂಡು ಅಮ್ಮ ಮನೆಯಲ್ಲಿಯೇ ಅವನಿಗೆ ಪಾಠ ಹೇಳಿಕೊಡಲು ನಿರ್ಧರಿಸಿದ್ದಳು. ಎಲ್ಲದರಲ್ಲೂ ತುಂಬಾ ಚುರುಕಾಗಿದ್ದ ಅವನು ಅಮ್ಮನು ಹೇಳಿಕೊಟ್ಟ ಅಕ್ಷರಗಳನ್ನು ಓದಲು ಬರೆಯಲು ಕಲಿತಿದ್ದ. ತನ್ನಷ್ಟೇ ದೊಡ್ಡವನಾದ ಪಕ್ಕದ ಮನೆಯ ಹಾರ್ದಿಕ ಯುನಿಫಾರ್ಮ ಹಾಕಿಕೊಂಡು, ಮಿರಮಿರ ಮಿಂಚುವ ಶೂಗಳನ್ನು ತೊಟ್ಟುಕೊಂಡು, ಮನೆಯವರಿಗೆ ಬೈ ಎಂದು ಕೈ ಬೀಸುತ್ತಾ ಶಾಲೆಗೆ ಹೋಗುವುದನ್ನು ನಿತ್ಯವೂ ಗ್ಯಾಲರಿಯಿಂದ ಪುಟ್ಟ ನೋಡುತ್ತಾನೆ. ಆದರೆ ತಾನೂ ಶಾಲೆಗೆ ಹೋಗುತ್ತೇನೆ ಎಂದು ಯಾವತ್ತೂ ಹಠ ಮಾಡಿದವನಲ್ಲ. ವಯಸ್ಸಿಗೆ ಮೀರಿದ ತಿಳುವಳಿಕೆ, ಗಾಂಭೀರ್ಯ ಅವನಲ್ಲಿತ್ತು. ಅಮ್ಮ ಒಳಗಡೆ ಕೆಲಸದಲ್ಲಿ ತೊಡಗಿದರೆ ಇವನ ಪ್ರಪಂಚವೇ ಬೇರೆ. ತನ್ನೆಲ್ಲ ಆಟಿಗೆ ಸಾಮಾನುಗಳನ್ನು ಹರಡಿಕೊಂಡು ಒಂಟಿಯಾಗಿ ಆಡುವ ಪರಿಪಾಠ ಅವನಲ್ಲಿ ಬೆಳೆದುಬಿಟ್ಟಿತ್ತು. ಆಟಿಗೆಯ ಟ್ರಕ್‍ನಲ್ಲಿ ಚಿಕ್ಕಪುಟ್ಟ ಸಾಮಾನುಗಳನ್ನು ತುಂಬಿಸಿಕೊಂಡು ಅಡಿಗೆ ಕೋಣೆಯಿಂದ ಪುಟ್ಟ ಗ್ಯಾಲರಿಗೆ ಅವನ ಸವಾರಿ ಸಾಗುತ್ತಿತ್ತು. ಅಲ್ಲಿ ಸಾಮಾನುಗಳನ್ನು ಇಳಿಸಿ,ಮತ್ತೇನೇನೋ ಸಾಮಾನುಗಳನ್ನು ತುಂಬಿಸಿಕೊಂಡು ಅಡಿಗೆಮನೆಯತ್ತ ಮರುಪಯಣ.”ಭಾಭೀ,ಆಪಕಾ ಸಾಮಾನ್ ಕುಚ್ ಹೈ ಕ್ಯಾ?”ಎಂದು ಹರುಕು ಮುರುಕು ಹಿಂದಿಯಲ್ಲಿ ಮಾತನಾಡಿ ಅಮ್ಮನನ್ನು ಬೇಕೆಂದೇ ಕೆಣಕುತ್ತಿದ್ದ. ಚಿಕ್ಕ ಚಿಕ್ಕ ಮಿಕ್ಸರ್, ಪಾತ್ರೆಗಳು,ಟೇಬಲ್,ಕುರ್ಚಿ,ಎಲ್ಲವಕ್ಕೂ ಅವನ ಟ್ರಕ್ಕಿನಲ್ಲಿ ಜಾಗವಿರುತ್ತಿತ್ತು. ಕೆಲವೊಮ್ಮೆ ಅಮ್ಮನ ಕಣ್ತಪ್ಪಿಸಿ ಅಡಿಗೆ ಮನೆಯ ಚಮಚ,ಸಣ್ಣ ಸಣ್ಣ ಪ್ಲೇಟುಗಳು,ಉಪ್ಪು ಖಾರದ ಡಬ್ಬಿಗಳು ಕೂಡ ಟ್ರಕ್ಕಿನಲ್ಲಿ ಅಡಗಿ ಕುಳಿತು ಗ್ಯಾಲರಿ ಸೇರಿಬಿಡುತ್ತಿದ್ದವು. ಅಡಿಗೆ ಮನೆಯಲ್ಲಿ ತನಗೆ ಬೇಕಾದ ಸಾಮಾನು ಕಾಣದೇ,ಇವನ ಕಿತಾಪತಿಯ ಅರಿವುಳ್ಳ ಅಮ್ಮ ಹುಸಿಮುನಿಸು ತೋರಿಸುತ್ತ, ಪುಟ್ಟನ ತಲೆಯ ಮೇಲೆ ಮೆತ್ತಗೆ ಮೊಟಕಿ ತನ್ನ ಸಾಮಾನುಗಳನ್ನು ಎತ್ತಿಕೊಂಡು ಹೋಗುತ್ತಿದ್ದಳು. “ದಿನದಿಂದ ದಿನಕ್ಕೆ ತುಂಬಾ ಮಸ್ತಿ ಖೋರನಾಗ್ತಾ ಇದ್ದೀಯ ನೀನು.ಅಪ್ಪನಿಗೆ ಹೇಳಿ ಕೊಡ್ತೇನೆ ಇರು” ಎಂಬ ಗದರಿಕೆಯ ಮಾತು ಕೂಡ ಇರುತ್ತಿತ್ತು. ಆಗೆಲ್ಲ ಅಮ್ಮನ ಮುಖ ನೋಡಿ ಮುಸಿಮುಸಿ ನಗುತ್ತಿದ್ದ. ಅಮ್ಮನ ಪ್ರೀತಿಯನ್ನು ಅವನೇನು ಅರಿಯನೇ!

ಹೆಚ್ಚಿನ ಸಮಯವನ್ನು ಆಟವಾಡುತ್ತಾ ಖುಷಿಯಿಂದ ಕಳೆಯುವ ಪುಟ್ಟನಿಗೆ ಅಮ್ಮ ಎಣ್ಣೆಯ ಬಟ್ಟಲನ್ನು ಹಿಡಿದು ಬಂದರೆ ಮಾತ್ರ ಕಿರಿಕಿರಿಯಾಗುತ್ತಲಿತ್ತು. ಕೈ ಕಾಲು ಮೈಗೆಲ್ಲ ಎಣ್ಣೆ ಹಚ್ಚಿ ಮಾಲಿಷ್ ಮಾಡುತ್ತಾ, ಏನಾದರೂ ಕತೆ ಹೇಳುತ್ತಾ “ಅಮ್ಮಾ ಪುಟ್ಟಿ ಈಗ ಎಕ್ಸರ್ಸೈಜ್ ಮಾಡ್ತಾ”ಎಂದು ಅಮ್ಮ ಹೇಳಿದರೆ ಇಲ್ಲ ಎನ್ನಲು ಪುಟ್ಟನಿಗೆ ಆಗುತ್ತಲೇ ಇರಲಿಲ್ಲ. ಅಮ್ಮ ಮಾಡಿಸುತ್ತಿದ್ದ ವ್ಯಾಯಮವನ್ನೆಲ್ಲ ಚಾಚೂ ತಪ್ಪದೆ ಸುಮ್ಮನೆ ಮಾಡುತ್ತಿದ್ದ. ಅಮ್ಮನಿಗೂ ಗೊತ್ತು, ಮಗನಿಗೆ ಇದು ಇಷ್ಟವಿಲ್ಲ ಎಂದು.ಆದರೆ ಅವಳಿಗೂ ಇದೆಲ್ಲ ಅನಿವಾರ್ಯ. ಬೇಗ ಬೇಗ ಈ ಕೆಲಸವನ್ನು ಮುಗಿಸಿ ಸ್ನಾನ ಮಾಡಿ ಕುಳಿತರೆ,ತನ್ನ ಗೆಳೆಯ ಹಾರ್ದಿಕ್ ಶಾಲೆಯಿಂದ ಬಂದೊಡನೆ ಅವನೊಡನೆ ಆಡಬಹುದು ಎನ್ನುವ ಆಸೆಯೂ ಅವನಿಗೆ. ಹಾರ್ದಿಕ್ ಕೆಲವೊಮ್ಮೆ ಶಾಲೆಯಿಂದ ನೇರವಾಗಿ ಇಲ್ಲಿಗೇ ಬಂದುಬಿಡುತ್ತಿದ್ದ ಯುನಿಫಾರ್ಮನ್ನು ಕೂಡ ಬದಲಿಸದೇ. ಆಗೆಲ್ಲ ಅವನ ಅಮ್ಮ ಅವನ ಡ್ರೆಸ್ ಚೇಂಜ್ ಮಾಡಿಸಲೆಂದು ಓಡಿಬರುತ್ತಿದ್ದಳು. ಈ ಮಕ್ಕಳಿಬ್ಬರೂ ಹೊಡೆದಾಡದೇ,ಜಗಳ ಮಾಡದೇ ಚಂದವಾಗಿ ಆಡುವುದನ್ನು ನೋಡುವುದೇ ಅಮ್ಮಂದಿರಿಬ್ಬರಿಗೂ ಖುಷಿಯ ಸಂಗತಿ. ಇಂತಹ ದಿನಗಳಲ್ಲಿ ಹಾರ್ದಿಕನ ಮನೆಯ ಧೋಕ್ಲ,ಥೇಪ್ಲಾ ಇವರ ಮನೆಗೆ ರವಾನೆ ಆಗುತ್ತಿತ್ತು. ಜೊತೆಗೆ ಇವರ ಮನೆಯ ಅನ್ನ,ಸಾಂಭಾರ್,ಇಡ್ಲಿ,ದೋಸೆ ಇತ್ಯಾದಿ. ಎಲ್ಲರೂ ಸೇರಿ ಊಟ ಮಾಡುವಾಗಿನ ಮಜವೇ ಮಜ. ಮಕ್ಕಳಿಬ್ಬರೂ ಹರುಕು ಮುರುಕು ಹಿಂದಿಯಲ್ಲಿ ಮಾತನಾಡುವುದನ್ನು ಕೇಳುತ್ತಾ ನಗುವ ಅಮ್ಮಂದಿರು.

“ಬೆಚ್ಚನಾ ಮನೆಯಿರಲು ವೆಚ್ಚಕ್ಕೆ ಹೊನ್ನಿರಲು ಇಚ್ಚೆಯನರಿವ ಸತಿಯಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಎಂದು ಸರ್ವಜ್ನನಂಥ ಜ್ನಾನಿಗಳು ಹೇಳಿದ್ದಾರೆ. ಪೇಟೆ ಪಟ್ಟಣಗಳಲ್ಲಿ ವಾಸಿಸುವ ಜನರಿಗೆ ಸುಖ ದುಖದಲ್ಲಿ ನೆರವಾಗುವ,ಭಾಗಿಯಾಗುವ ನೆರೆಹೊರೆಯವರಿದ್ದರೆ ಸ್ವರ್ಗವೇ ದೊರಕಿದಂತೆ. ಮುಂಬಯಿಯಂತಹ ದೊಡ್ಡ ದೊಡ್ಡ ಶಹರುಗಳಲ್ಲಿ ಇತ್ತೀಚೆಗೆ ಕೆಲವು ಗಗನಚುಂಬಿ ಕಟ್ಟಡಗಳಲ್ಲಿ ವಾಸಿಸುವ ಜನರಿಗೆ ತಮ್ಮ ಅಕ್ಕಪಕ್ಕದ ಮನೆಗಳಲ್ಲಿ ಯಾರು ವಾಸಿಸುತ್ತಾರೆ ಎಂಬುದು ಸಹ ಗೊತ್ತಿರುವುದಿಲ್ಲ ಎಂಬುದು ನಿಜ. ನೆರೆ ಹೊರೆಯವರನ್ನು ಪರಿಚಯಿಸಿಕೊಳ್ಳುವ ಗೊಡವೆಗೂ ಅವರು ಹೋಗುವುದಿಲ್ಲ. ಆದರೆ ಇಂತಹ ನಗರಿಗಳಲ್ಲಿ ಇಂದಿಗೂ ಹೆಚ್ಚಿನ ಜನ ಅಕ್ಕಪಕ್ಕದವರ ತೊಂದರೆ ತೊಡಕುಗಳಿಗೆ ಸಹಾಯ ಮಾಡಲು ಒದಗಿಬರುತ್ತಾರೆ, ಓಡಿಬರುತ್ತಾರೆ. ಈ ರೀತಿಯ ಒಂದು ವಾತಾವರಣವಿರುವುದರಿಂದಲೇ ತಮ್ಮ ಜನರಿಂದ,ಬಂಧು ಬಳಗದವರಿಂದ ದೂರವಿದ್ದರೂ ಒಂಟಿತನ ಜನರನ್ನು ಕಾಡುವುದಿಲ್ಲ. ಆಪತ್ಕಾಲಗಳಲ್ಲೂ ಎದಗುಂದದೇ ಎಲ್ಲವನ್ನೂ ಎದುರಿಸುವ ಧೈರ್ಯ ಮೂಡಿಬರುತ್ತದೆ.

ಕಾರ್ತಿಕನ ಅಪ್ಪ ಅಮ್ಮನ ಪರಿಸ್ಥಿತಿಯೂ ಇಂತಹದ್ದೇ. ಮಗನ ಆಗಮನದ ನಂತರ ಎಂತದೇ ಸಂಕಷ್ಟಗಳು ಬಂದರೂ ಸಹಾಯ ಹಸ್ತವನ್ನು ಚಾಚುವವರು, ಸಂತೈಸುವವರು ಅವರ ಸುತ್ತಮುತ್ತ ಇದ್ದರು. ಬಾಲಕೃಷ್ಣನಂತೆಯೇ ಮುದ್ದಾಗಿದ್ದ ಕಾರ್ತಿಕನನ್ನು ನಾಮುಂದು ತಾಮುಂದು ಎಂದು ಅಕ್ಕಪಕ್ಕದವರೆಲ್ಲರೂ ತಮ್ಮ ಮನೆಗೆ ಎತ್ತಿಕೊಂಡು ಹೋಗಿ ಆಡಿಸುತ್ತಿದ್ದರು. ರಾತ್ರಿಯ ವೇಳೆ ಅವನು ಅಳುವ ಸದ್ದೇನಾದರೂ ಕಿವಿಗೆ ಬಿದ್ದರೆ ಎನಾಯ್ತೆಂದು ಕೇಳಲು ಕೂಡಲೇ ಓಡಿ ಬರುತ್ತಿದ್ದರು. ಸಂಜೆಯಾಗುತ್ತಿದ್ದಂತೆ ಅಮ್ಮ ಪುಟ್ಟನನ್ನು ಬೇಗ ಬೇಗ ರೆಡಿ ಮಾಡಿಸಿ,ಅವಸರವಸರವಾಗಿ ಎತ್ತಿಕೊಂಡು ಓಡುತ್ತಿದ್ದಳು. ಇದು ಕಾರ್ತಿಕನಿಗೆ ಇದು ಬಹಳ ಇಷ್ಟವಾದದ್ದು. ಬೆಳಿಗ್ಗೆಯಿಂದ ಮನೆಯಲ್ಲೆ ಇರುತ್ತಿದ್ದ ಅವನಿಗೆ ಈಗ ಹೊರಪ್ರಪಂಚದ ಪರ್ಯಟನ. ಅಮ್ಮನ ಕಂಕುಳಿನಲ್ಲಿ ಕುಳಿತು ಸಾಗುವಾಗ ಎಲ್ಲದರ ಕಡೆಯೂ ಕೂತುಹಲದ ನೋಟ. ತನಗೆ ಏನೇ ಹೊಸತು ಕಂಡರೂ ಅದನ್ನು ಅಮ್ಮನಿಗೆ ಹೇಳುವ ಹುಮ್ಮಸ್ಸು, ಹೂಮನಸು. ಒಮ್ಮೊಮ್ಮೆ ಅಮ್ಮ ಅವನ ಕುತೂಹಲದ ಮಾತುಗಳಿಗೆ ಕಿವಿಯಾಗುತ್ತಿದ್ದಳು, ಗಡಿಬಿಡಿಯಲ್ಲಿ ಓಡುವಾಗ ಕೆಲವೊಮ್ಮೆ ಅವನ ಮಾತುಗಳಿಗೂ ಗಮನ ಕೊಡಲಾರಳು.ಅಮ್ಮನ ಓಟವೂ ಪುಟ್ಟನಿಗೆ ಆಟವೇ. ಸುತ್ತಮುತ್ತ ಸಾಗುವವರೆಲ್ಲ ಅಮ್ಮನ ಓಟದ ಕುಲುಕುವಿಕೆಯಿಂದ ಕುಣಿದಂತೆ ಕಂಡು ಅವನಿಗೆ ಖುಷಿಯೋ ಖುಷಿ,ನಗುವೋ ನಗು. ಇವನ ಮುದ್ದು ಮುಖವನ್ನು ನೋಡಿ ದಾರಿಯಲ್ಲಿ ಹೋಗುವವರೆಷ್ಟೋ ಜನ ಇವನ ಕೆನ್ನೆಯನ್ನು ಹಿಂಡಿ,ಮುದ್ದಿಸಿ ಹೋಗುತ್ತಿದ್ದರು. ಇದ್ಯಾವುದರ ಪರಿವೆಯೇ ಇಲ್ಲದ ಅಮ್ಮನ ಚಿಂತೆಯ ದಾರಿಯೇ ಬೇರೇ ಮುಖವಾಗಿ ಸಾಗುತ್ತಿರುತ್ತದೆ. ಎಷ್ಟು ಗಂಟೆಯ ಟ್ರೈನ್ ಸಿಗುವುದೋ? ಡಾಕ್ಟರರ ಕ್ಲಿನಿಕ್‍ನಲ್ಲಿ ಎಷ್ಟುದ್ದ ಲೈನ್ ಇರುವುದೋ? ಎಂಬೆಲ್ಲ ಯೋಚನೆಗಳಲ್ಲಿ ಮುಳುಗಿರುತ್ತಿದ್ದಳು. ಸ್ಟೇಶನ್ ತಲುಪಿದೊಡನೆ ಎತ್ತರದ ಬ್ರಿಡ್ಜನ್ನು ಸರಸರನೆ ಏರಿ ಪ್ಲಾಟ್‍ಫಾರ್ಮಿಗೆ ಮೆಟ್ಟಿಲುಗಳನ್ನು ಪಟಪಟನೆ ಇಳಿಯುವ ವೇಗಕ್ಕೆ ಕುಲುಕಾಡುವ ಪುಟ್ಟನಿಗೆ ಮಜವೊ ಮಜ. ಟ್ರೈನಿನ ಡಬ್ಬಿಯನ್ನು ಒಮ್ಮೆ ಹತ್ತಿಕೊಂಡರೆ ಅಬ್ಬಾ, ಒಂದು ಯುದ್ದವನ್ನು ಗೆದ್ದಂತೆ. ಕುಳಿತುಕೊಳ್ಳಲು ಸೀಟು ಸಿಕ್ಕರೆ ಭಾಗ್ಯವೋ ಭಾಗ್ಯ. ಇಲ್ಲವಾದರೆ ಹ್ಯಾಂಡಲ್ಲಿಗೆ ಜೋತು ಬೀಳುವುದೇ ಸೈ. ಯಾರಾದರೂ ಪುಟ್ಟನನ್ನು ತಮ್ಮ ಕಾಲ ಮೇಲೆ ಕೂರಿಸಿಕೊಳ್ಳಲು ಕರೆದರೂ ಅಮ್ಮ ಬಿಡುತ್ತಿರಲಿಲ್ಲ. ಅವರೇನಾದರೂ ಕುತೂಹಲಕ್ಕೆಂದು ಪ್ರಶ್ನೆಯನ್ನು ಕೇಳಿದರೇ,ಸಹಾನುಭುತಿಯನ್ನು ತೋರಿದರೇ…… ಈ ರೇಗಳ ಕಾಟವೇ ಬೇಡ ಎನ್ನುವ ಮನಸ್ಥಿತಿ ಅಮ್ಮನದು. ಪುಟ್ಟನಿಗು ಅಷ್ಟೇ ಅಮ್ಮನ ಸಾನ್ನಿಧ್ಯವೇ ಇಷ್ಟ. ಅಮ್ಮನ ಕುತ್ತಿಗೆಯನ್ನು ಗಟ್ಟಿಯಾಗಿ ತಬ್ಬಿ ಹಿಡಿದುಕೊಂಡು ಸುಮ್ಮನೆ ಹೊರಗಡೆ ನೋಡುತ್ತಿದ್ದ.

ಅಂತೂ ಇಂತೂ ಇವರು ಇಳಿಯುವ ಸ್ಟೇಷನ್ ಬಂದೊಡನೆ ಧಾವಂತದಿಂದ ಇಳಿದು ಕ್ಲಿನಿಕ್ಕನ್ನು ಬೇಗನೆ ಸೇರಿಕೊಳ್ಳುವ ತವಕ. ಅಲ್ಲಿ ಸೇರಿರುವ ಜನರೆಲ್ಲಾ ಪುಟ್ಟನ ಪರಿಚಯದವರೇ. ಇವನ ಓರಗೆಯ ಮಕ್ಕಳು, ಅಂಕಲ್ ಆಂಟಿಯಂದಿರು, ಅಜ್ಜ ಅಜ್ಜಿಯಂದಿರು, ಹೀಗೆ ಎಲ್ಲಾ ವಯಸ್ಸಿನವರೂ ತಮ್ಮ ಏನೇನೋ ತೊಂದರೆಗಳಿಗೆ ಪರಿಹಾರವನ್ನು ಹುಡುಕಿಕೊಂಡು ಬರುತ್ತಿದ್ದರು. ದಿನಾಲು ಸಿಗುವವರು ಎಂದಮೇಲೆ ಪರಸ್ಪರ ಮುಗುಳ್ನಗುವಿನ ವಿನಿಮಯ,ಮಾತುಕತೆ ನಡೆಯುತ್ತಿತ್ತು. “ಕಾರ್ತಿಕ್”ಎಂದು ಸಿಸ್ಟರ್ ಆಂಟಿ ಕೂಗಿ ಕರೆದೊಡನೆ ಅಮ್ಮ ಅವನನ್ನು ಎತ್ತಿಕೊಂಡು ಒಳಗೆ ನಡೆಯುತ್ತಾಳೆ. ಸ್ವಲ್ಪ ಸಣ್ಣಗಾಗುವ ಮಗನ ಮುಖವನ್ನು ನೋಡಿ,ನಾನಿದ್ದೇನೆ ಹೆದರಬೇಡ ಎನ್ನುವಂತೆ ಅವನ ಬೆನ್ನಮೇಲೆ ಕೈಯಾಡಿಸುತ್ತಾಳೆ. ಒಳಗಡೆ ಕುರ್ಚಿಯೊಂದರಲ್ಲಿ ಕಾರ್ತಿಕನನ್ನು ಅಪ್ಪಿಹಿಡಿದು ಕುಳಿತುಕೊಳ್ಳುತ್ತಾಳೆ.”ಹಾಯ್ ಕಾರ್ತಿಕ್,ಹೌ ಆರ್ ಯು ಬೇಬಿ”ಎಂದು ನಗು ನಗುತ್ತ ತನ್ನನ್ನು ಮಾತನಾಡಿಸುತ್ತ ಬರುವ ಡಾಕ್ಟರ್ ಮಾಮಾನನ್ನು ನೋಡಿ ನಗಲೋ,ಅಥವಾ ತನಗೆ ಚುಚ್ಚಲೆಂದೇ ತಂದಿರುವ ಸೂಜಿಗಳನ್ನು ನೋಡಿ ಅಳಲೋ ಎಂದೇ ಪುಟ್ಟನಿಗೆ ಅರ್ಥವಾಗದು. ಮೊದಲ ದಿನ ಇಲ್ಲಿಗೆ ಬಂದಾಗ “ಈ ಡಾಕ್ಟರ್ ಮಾಮಾ ನಿನಗೆ ನಡೆದಾಡಲು ಕಲಿಸುತ್ತಾರೆ, ಸೂಜಿ ಚುಚ್ಚಿದಾಗ ನೋವಾದ್ರು ಅಳಬೇಡ”ಎಂದು ಅಮ್ಮ ಕಿವಿಯಲ್ಲಿ ಹೇಳಿದ ಮಾತುಗಳು ಅವನಿಗೆ ನೆನಪಿದೆ. ಅಪ್ಪ ಅಮ್ಮನ ಕೈ ಹಿಡಿದು ನಡೆದಾಡುವ ಆಸೆ, ಹಾರ್ದಿಕನೊಂದಿಗೆ ಶಾಲೆಗೆ ಹೋಗುವ ಆಸೆ, ಎಲ್ಲರಂತೆ ಕ್ರಿಕೆಟ್ ಆಡುವ ಆಸೆ …..ಕಂಗಳಲ್ಲಿ ತುಂಬಿರುವ ಇಂತಹ ನೂರಾರು ಆಸೆಗಳಿಗಾಗಿ ಸಾವಿರಾರು ಸೂಜಿಗಳನ್ನು ಕೂಡ ಚುಚ್ಚಿಸಿಕೊಳ್ಳಲು ತಯಾರಿದ್ದ ಅವನು.ಅಲ್ಲದೇ ಅಮ್ಮ ಗಟ್ಟಿಯಾಗಿ ಹಿಡಿದು ಕುಳಿತಿರುವಾಗ ಅವನಿಗೆ ಏನೋ ಧೈರ್ಯ,ಭರವಸೆ.ಮೊದಲ ದಿನ ಇಲ್ಲಿಗೆ ಬಂದು ಮನೆಗೆ ಹೋದ ಮೇಲೆ ಅಪ್ಪನಿಗೆ ಕ್ಲಿನಿಕ್‍ನಲ್ಲಿ ನಡೆದ ವಿಷಯವನ್ನೆಲ್ಲ ಹೇಳುವಾಗ ಅಮ್ಮ ತನಗೇ ಸೂಜಿ ಚುಚ್ಚಿದರೇನೋ ಎಂಬಂತೇ ಅಳುಮುಖ ಮಾಡಿಕೊಂಡಿದ್ದಳು.

ಆದಿನ ಟ್ರೇಟ್ಮೆಂಟ್ ಮುಗಿದು ಹೊರಗೆ ಬರುತ್ತಿರುವಾಗ ಅಮ್ಮ ಡಾಕ್ಟರರೊಡನೆ ಮಾತಿಗೆ ನಿಂತಳು.”ಡಾಕ್ಟರ್,ನೀವು ಹೇಳಿದಂತೆ ಕಾರ್ತಿಕನಿಗೆ ಯಾವುದೇ ಸ್ವೀಟ್ಸನ್ನಾಗಲೀ,ಚಾಕಲೇಟ್ ಐಸ್ ಕ್ರೀಮ್ ಏನನ್ನೂ ಕೊಡ್ತಾ ಇಲ್ಲ. ಅವನು ಕೂಡ ಅವೆಲ್ಲ ಬೇಕೆಂದು ಹಠ ಕೂಡ ಮಾಡೊದಿಲ್ಲ. ಆದರೆ ನಾಳೆ ಅವನ ಬರ್ತಡೇ. ಅವನ ಗೆಳಯಂದಿರನ್ನೆಲ್ಲ ಕರೆದು ಆಚರಿಸಬೇಕು ಅಂತ ಆಸೆ. ನಾಳೆ ಟ್ರೀಟ್‍ಮೆಂಟಿಗೆ ಬರೋದಿಕ್ಕೆ ಆಗೋದಿಲ್ಲ. ಅಲ್ಲದೇ ನಾಳೆ ಒಂದಿನ ಅವಂಗೆ ಕೇಕ್,ಐಸ್‍ಕ್ರಿಮ್,ಚಾಕ್‍ಲೇಟ್ ಎಲ್ಲಾ ಕೊಡಬಹುದಾ?”ಅಮ್ಮನ ಮಾತನ್ನು ಕೇಳಿ ಕಾರ್ತಿಕನಿಗೆ ಕುಣಿದಾಡುವಷ್ಟು ಖುಷಿ. ಅದರೆ ಡಾಕ್ಟರ್ ಮಾಮಾ ಏನು ಹೇಳ್ತಾರೊ ಎನ್ನುವ ಆತಂಕ. ತನ್ನ ಗೆಳೆಯರ ಹುಟ್ಟು ಹಬ್ಬದ ಸಂಭ್ರಮವನ್ನು ನೋಡುತ್ತಿದ್ದ ಅವನಿಗೆ ತನ್ನ ಬರ್ತಡೇಯನ್ನು ಕೂಡ ಹಾಗೇ ಆಚರಿಸುವ ಹಂಬಲ. ಅರೆ ಅಪ್ಪ ಅಮ್ಮನಿಗೆ ಹೇಳಿದರೆ ಬೇಜಾರು ಮಾಡಿಕೊಳ್ಳಬಹುದು ಎಂದು ಸುಮ್ಮನಿರುತ್ತಿದ್ದ.

“ಓಕೆ, ನಾಳೆ ಒಂದಿನ ಮಾತ್ರ ಅವನಿಗೆ ಏನ್ಬೇಕೋ ಕೊಡಿ,ಒಂದು ದಿನ ಮಾತ್ರ.”ಎಂದು ಅಮ್ಮನಿಗೆ ಹೇಳಿದ ಡಾಕ್ಟರ್ “ಹಾಯ್ ಕಾರ್ತಿಕ್. ಮುಂದಿನ ವರ್ಷದ ಬರ್ತಡೇಗೆ ನೀನು ನಡೆದುಕೊಂಡು ಬಂದು ಸ್ವೀಟ್ ಕೊಟ್ಟು ಹೋಗಬೇಕು ಆಯ್ತಾ”ಎಂದರು. ಅಮ್ಮ ಹಾಗೂ ಮಗನ ಮುಖದ ಮೇಲೇ ನಗೆಯ ಹೊನಲು,ಹೊಳೆ.”ಥ್ಯಾಂಕ್ಯೂ ಡಾಕ್ಟರ್”ಎಂದು ಕ್ಲಿನಿಕ್ ನಿಂದ ಹೊರಬಿದ್ದ ಅಮ್ಮ ಮನೆಗೆ ವಾಪಸ್ಸಾಗುತ್ತಿರುವಾಗಲೇ ಮಾರನೆಯ ದಿನದ ತಯಾರಿಗೆ ಸಾಮಾನುಗಳನ್ನು ಖರೀದಿಸಿದಳು. ಮಗನ ಬರ್ತಡೇಗೆ ಏನೆಲ್ಲ ಮಾಡಬೇಕು,ಯಾರನ್ನೆಲ್ಲ ಕರೆಯಬೇಕು ಎಂಬ ವಿಚಾರ ಅವಳ ತಲೆಯಲ್ಲಿ. ಮನೆ ತಲುಪುವಾಗ ರಾತ್ರಿಯಾಗಿತ್ತು. ಮಾರನೆಯ ದಿನದ ಸಂಭ್ರಮದ ವಿಷಯವನ್ನು ಅಮ್ಮ ಮಗನಿಗೆ ಹೇಳುತ್ತಿದ್ದಳು. ಬೇಗ ಊಟ ಮಾಡಿದರೂ ಕಾರ್ತಿಕನಿಗೆ ನಿದ್ದೆ ಬಾರದು. ಒಂದೆಡೆ ನಾಳೆ ಅಮ್ಮ ಮಾಡಬಹುದಾದ ತಿಂಡಿ ಅಡುಗೆಗಳ ಆಲೋಚನೆ ,ಇನ್ನೊಂದಡೆ ತನ್ನ ಗೆಳಯರಿಗೆ ಹೊಸ ಆಟಿಗೆ ಸಾಮಾನುಗಳನ್ನೆಲ್ಲ ತೋರಿಸಬೇಕೆಂಬ ಸಂಭ್ರಮ. ಅಪ್ಪ ಏನು ಗಿಫ್ಟ್ ಕೊಡುತ್ತಾರೋ ಎಂಬ ಕುತೂಹಲ. ಒಂದೇ ಎರಡೇ ಎಷ್ಟೊಂದು ಖುಷಿ.ತನ್ನ ಬರ್ತಡೇ ವಿಷಯ ತಿಳಿದು ಅಪ್ಪಂಗೆ ಎಷ್ಟೊಂದು ಖುಷಿ ಆಗಬಹುದು ಎನ್ನುವ ಕುತೂಹಲ. ಅಮ್ಮ ಅಡಿಗೆ ಮನೆಯಿಂದ ಹೊರ ಬರುವಂತೇ ಕಾಣುತ್ತಿಲ್ಲ. ಕುಳಿತಲ್ಲೇ ತೂಕಡಿಕೆ ಬಂದ ಕಾರ್ತಿಕನ ಕನಸಿನಲ್ಲೆಲ್ಲ ಬಣ್ಣ ಬಣ್ಣದ ಚಾಕ್‍ಲೇಟ್ ,ರಂಗು ರಂಗಿನ ಕೇಕು,ಐಸ್ ಕ್ರೀಮ್‍ಗಳೇ ತುಂಬಿದ್ದವು.