ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕಪ್ಪು ರಂಧ್ರಗಳೆಂಬ ವ್ಯಾಕ್ಯೂಮ್ ಕ್ಲೀನರ್…….?!

ಕಪ್ಪು ರಂಧ್ರಗಳ ಬಗ್ಗೆ ಕೂತೂಹಲಕರ ಮಾಹಿತಿ ನೀಡುತ್ತಾರೆ ಲೇಖಕ ರಾಜೀವ್ ಅವರು.
ರಾಜೀವ್

ಬ್ಲಾಕ್ ಹೋಲ್ ಅಥವಾ ಕನ್ನಡಲ್ಲಿ ಕಪ್ಪು ರಂಧ್ರ ಅಥವ ಕೃಷ್ಣ ರಂಧ್ರ ಅಂತಲೂ ಕರೆಯುತ್ತಾರೆ ಬ್ರಹ್ಮಾಂಡದಲ್ಲಿ ಗ್ರಹ, ನಕ್ಷತ್ರ, ಧೂಮಕೇತುಗಳು, ಉಪಗ್ರಹಗಳ ಜೊತೆಗೆ ಇದು ಸಹ ಇರುವುದೆಂದು ಖಗೋಳಶಾಸ್ತ್ರ ತಿಳಿಸುತ್ತದೆ. ಕಪ್ಪು ರಂಧ್ರ ಇರುವಿಕೆಯ ಬಗ್ಗೆ ಮೊದಲು ತಿಳಿಸಿದ್ದು ಐನ್‍ಸ್ಟೈನ್ ಅವರ ಸಾಪೇಕ್ಷ ಸಿದ್ದಾಂತ. ಅದರ ಪ್ರಕಾರ space(ಸ್ಥಳ) ಹಾಗು ಸಮಯ(time) ಅತ್ಯಂತ ಸಂಕೀರ್ಣವಾದ ವಲಯಗಳಾಗಿದ್ದು ಇದು ಎಲ್ಲವನ್ನು ಆವರಿಸಿದೆ ಹಾಗು ಬ್ರಹ್ಮಾಂಡದ ಎಲ್ಲ ವಸ್ತುಗಳ ಬಳಿ ಇವು ವಕ್ರಿಭವನ ಅಥವ ಬಾಗುವುದು(bending). ಹೆಚ್ಚು ದ್ರವ್ಯರಾಶಿಯುಳ್ಳ(Massive) ಆಕಾಶಕಾಯಗಳು ಈ ಸ್ಪೇಸ್ ಅನ್ನು ಬಾಗಿಸುತ್ತದೆ ಇದರ ಪರಿಣಾಮವೇ ಗುರುತ್ವಾಕರ್ಷಣೆಯ ಬಲ.

ಕಪ್ಪು ರಂಧ್ರಗಳು ತಮ್ಮ ಬಳಿ ಬರುವ ಎಲ್ಲ ವಸ್ತುಗಳನ್ನು ಆಕರ್ಷಣೆ ಮಾಡಿ ಒಳಗೆ ಎಳೆದುಕೊಂಡು ಬಿಡುತ್ತದೆ ಹಾಗು ಒಳಗೆ ಹೋದ ಯಾವುದೇ ವಸ್ತು ಮತ್ತೆ ವಾಪಸ್ ಬರುವುದಿದೆಯಲ್ಲ ಇದು ಒಂದು ಭಾರಿ ಮಾತ್ರ ಮಾಡುವ ಪ್ರಯಾಣ. ಯಾವ ರೀತಿ ಒಂದು ಆಳವಾದ ಭಾವಿಗೆ ವಸ್ತು ಎಸೆದರೆ ಅದು ಭಾವಿಯ ಆಳಕ್ಕೆ ಸೇರುವುದೋ ಹಾಗೇಯೆ ಈ ಬ್ಲಾಕ್ ಹೋಲ್ ಸಹ ಬ್ರಹ್ಮಾಂಡದಲ್ಲಿ ಇರುವ ನಿಜವಾದ ಅಡಿಪಾಯವಿಲ್ಲದ ಭಾವಿಗಳು ಆದರೆ ನೀರು ಸಿಗದು!

ಈ ಕಪ್ಪು ರಂಧ್ರವನ್ನು ಸ್ವತಃ ಬೆಳಕು ಸಹ ತಪ್ಪಿಸಿಕೊಳ್ಳಲಾಗದು ಒಂದು ವೇಳೆ ಬೆಳಕು ಇದರ ಬಳಿ ಬಂದರೆ ಅದೂ ಸಹ ಕಪ್ಪು ಕುಳಿಯ ಒಳಗೆ ಸೇರುತ್ತದೆ ಹಾಗೂ ಮತ್ತೆ ವಾಪಸ್ ಬಾರದು ಹೀಗಾಗಿ ಬೆಳಕನ್ನು ಪ್ರತಿಫಲಿಸದ ಕಾರಣ ಇವು ಗೋಚರಿಸಲ್ಲ ಹೀಗಾಗಿ ಅವನ್ನು ಕಪ್ಪು ಅಂತಲೂ ಹಾಗು ರಂಧ್ರಗಳ ಹಾಗೆ ತನ್ನೆಡೆದ ಬಂದುದನ್ನು ಒಳಗೆ ಹಾಕಿಕೊಳ್ಳುವುದರಿಂದ ಅದನ್ನು ರಂಧ್ರವಾಗಿ ಪರಿಗಣಿಸಿ ‘ಕಪ್ಪು ಕುಳಿ’ ಅಥವ ‘ಕಪ್ಪು ರಂಧ್ರ’ ಎಂದು ಕರೆಯುತ್ತಾರೆ.

ಇದು ಪದಕ್ಕೆ ಸಿಕ್ಕ ಅರ್ಥವಾಯ್ತು ಹಾಗಾದರೆ ಈ ಕಪ್ಪು ರಂಧ್ರಗಳು ಹೇಗೆ ಸೃಷ್ಟಿಯಾಗುತ್ತದೆ? ಇವುಗಳ ಮೂಲ ಯಾವುದು? ಇವು ಯಾಕೆ ಎಲ್ಲವನ್ನು ಆಕರ್ಷಣೆ ಮಾಡುತ್ತದೆ? ಇವು ಬ್ರಹ್ಮಾಂಡದಲ್ಲಿ ಹೇಗೆ ಗೋಚರಿಸುತ್ತದೆ? ಹಾಗು ಎಲ್ಲಿ ಗೋಚರಿಸುತ್ತದೆ?

ಕಪ್ಪು ರಂಧ್ರಗಳು ಮೂಲತಃ ನಕ್ಷತ್ರಗಳೆ ಆಗಿವೆ ಎಲ್ಲಾ ನಕ್ಷತ್ರಗಳು ಸಹ ನಮ್ಮಂತೆ ಹುಟ್ಟುತ್ತದೆ ಹಾಗು ಸಾಯುತ್ತದೆ ಆದರೆ ಅದು ಜೈವಿಕವಾಗಿ ಅಲ್ಲದಿದ್ದರು ಜೀವವಿಲ್ಲದ ಸೃಷ್ಟಿ ಹಾಗು ನಾಶ ಎನ್ನಬಹುದು. ನಕ್ಷತ್ರಗಳು ಬೆಳಕನ್ನು ಹಾಗು ಶಾಖವನ್ನು ಉತ್ಪಾದನೆ ಮಾಡುವ ಬೃಹತ್ ಖಾರ್ಗಾಣೆಗಳು ಅಂದರೆ ತಪ್ಪಾಗದು.

ನಕ್ಷತ್ರಗಳಲ್ಲಿ ಮುಖ್ಯವಾಗಿ ಎರಡು ಅಂಶದಿಂದ ಅಸ್ತಿತ್ವವನ್ನು ಪಡೆಯುತ್ತದೆ ಒಂದು ಅದರೊಳಗೆ ಹೈಡ್ರೋಜನ್(ಜಲಜನಕ) ಅಪಾರ ಪ್ರಮಾಣದಲ್ಲಿ ಇದ್ದು ನಾಲ್ಕು ಅಣು ಜಲಜನಕ ಸೇರಿ ಒಂದು ಹೀಲಿಯಂ ಅಣುಗಳಾಗಿ ಪರಿವರ್ತನೆ ಆಗುತ್ತದೆ ಇದಕ್ಕೆ ವಿಜ್ಞಾನದಲ್ಲಿ ‘Nucleur Fusion Reaction’ ಅಂತಾರೆ.

ಪ್ರತಿಯೊಂದು ಪರಮಾಣುವಿನಲ್ಲಿ ನ್ಯೂಟ್ರಾನ್ ಹಾಗು ಪ್ರೋಟಾನ್ ಕಣಗಳಿದ್ದು ಅದು ನ್ಯೂಕ್ಲಿಯಸ್ ಅನ್ನು ರಚಿಸುತ್ತದೆ. ಜಲಜನಕದಲ್ಲಿ ಸಹ ಇದೇ ನ್ಯೂಕ್ಲಿಯಸ್ ಇದ್ದು ಅವು ಮತ್ತೊಂದು ಜಲಜನಕದ ನ್ಯೂಕ್ಲಿಯಸ್ ನೊಂದಿಗೆ ಸೇರುತ್ತದೆ ಇದರ ಪರಿಣಾಮವೇ ಶಕ್ತಿಯ ಉತ್ಪಾದನೆ ಈ ಶಕ್ತಿಯೇ ನಮಗೆ ಬೆಳಕು ಹಾಗು ಶಾಖದ ರೂಪದಲ್ಲಿ ಬರುತ್ತದೆ.

ಮತ್ತೊಂದು ಅಂಶ ಹೆಚ್ಚು ದ್ರವ್ಯರಾಶಿ(mass) ಇರುವ ಕಾರಣ ಇವುಗಳಿಗೆ ಗುರುತ್ವಾಕರ್ಷಣೆಯ ಬಲ ಹೆಚ್ಚಾಗಿದೆ ಹೀಗಾಗಿ ಒಂದು ಗುರುತ್ವ ಬಲ ಎಲ್ಲವನ್ನು ಒಳಗೆ ಎಳೆದುಕೊಳ್ಳುತ್ತಿರುತ್ತದೆ ಹಾಗು ನಕ್ಷತ್ರ ಒಳಗೆ ಉಂಟಾಗುವು fusion ಪ್ರಕ್ರಿಯೆಯ ಶಕ್ತಿ ಎಲ್ಲವನ್ನು ಹೊರಗೆ ತಳ್ಳುತ್ತದೆ. ಒಂದು ಬಲ ಒಳಗೆಳೆದರೆ ಮತ್ತೊಂದು ಬಲ ಹೊರ ತಳ್ಳುತ್ತದೆ ಈ ಬಲಗಳು ಸಮವಾದ ಕಾರಣ ನಕ್ಷತ್ರ ತನ್ನ ಅಸ್ತಿತ್ವವನ್ನು ಕಾಪಾಡುತ್ತದೆ.

ಹಾಗಾದರೆ ಈ ಬಲಗಳಲ್ಲಿ ಒಂದು ಬಲ ಕಡಿಮೆಯಾದರೆ ಏನಾಗುತ್ತದೆ? ಅಥವ ಒಂದು ಬಲ ಮೈಲುಗೈ ಸಾಧಿಸಿದರೆ ಏನಾಗುತ್ತದೆ? ಅದೇ ನಕ್ಷತ್ರದ ಸಾವು!! ಅಥವ ನಾಶ!! ನಕ್ಷತ್ರದ ಎಲ್ಲಾ ಜಲಜನಕವೂ ಉರಿದು ಶಕ್ತಿಯಾಗಿ ಹೋದ ನಂತರ ಆ ನಕ್ಷತ್ರಕ್ಕೆ ಹೊರ ನೂಕುವ ಬಲ ಕಡಿಮೆಯಾಗುತ್ತದೆ ಹೀಗಾಗಿ ಗುರುತ್ವ ಹೆಚ್ಚಾಗಿ ಇಡೀ ನಕ್ಷತ್ರವನ್ನೆ ಕಬಳಿಸುತ್ತದೆ ಇದರ ಪರಿಣಾಮ ಎಷ್ಟು ತೀವ್ರವಾಗಿ ಇರುತ್ತದೆ ಎಂದರೆ ನಕ್ಷತ್ರವೇ ತನ್ನ ಗುರುತ್ವಕ್ಕೆ ಸಿಕ್ಕಿ ಕುಸಿಯುತ್ತದೆ ಹಾಗು ಎಲ್ಲಾ ವಸ್ತುಗಳು ಹತ್ತಿರ ಹತ್ತಿರವಾಗಿ ಸಾಂಧ್ರತೆ ಹೆಚ್ಚಾಗುತ್ತದೆ ಇದರ ಪರಿಣಾಮ ಆ ಭಾಗದಲ್ಲಿ ಒಂದು ರಂಧ್ರ ಉಂಟಾಗುತ್ತದೆ.

ಮೂಲತಃ ಅದು ರಂಧ್ರವಲ್ಲ ಅದೊಂದು ಅನಂತ ಸಾಂಧ್ರೆತೆಯ ಪ್ರದೇಶವಾಗಿದ್ದು ಅಲ್ಲಿ ಗುರುತ್ವದ ತೀಕ್ಷ್ಣತೆ ಅಧಿಕವಾಗಿ ಇರುತ್ತದೆ ಇದೇ ಕಪ್ಪು ರಂಧ್ರಗಳ ಸೃಷ್ಟಿಗೆ ಕಾರಣವಾಗುವ ಒಂದು ಪ್ರಕ್ರಿಯೆ. ಆದರೆ ಎಲ್ಲಾ ನಕ್ಷತ್ರಗಳು ಕಪ್ಪು ರಂಧ್ರವಾಗದು ಎಂದು ಖಗೋಳಶಾಸ್ತ್ರ ತಿಳಿಸುತ್ತದೆ ಉದಾಹರಣೆಗೆ ನಮ್ಮ ಸೂರ್ಯ ಬೇರೆ ನಕ್ಷತ್ರಕ್ಕೆ ಹೋಲಿಸಿದರೆ ಗಾತ್ರದಲ್ಲಿ ಹಾಗು ದ್ರವ್ಯರಾಶಿಯಲ್ಲಿ ಚಿಕ್ಕದು ಹೀಗಾಗಿ ನಮ್ಮ ಸೂರ್ಯ ಕಪ್ಪು ರಂಧ್ರವಾಗದು.

ವಿಜ್ಞಾನಿಗಳ ಪ್ರಕಾರ ಕಪ್ಪು ರಂಧ್ರವಾಗಲೂ ಯಾವುದೇ ನಕ್ಷತ್ರಕ್ಕೆ ನಮ್ಮ ಸೂರ್ಯನಿಗಿಂತ ಹತ್ತು ಪಟ್ಟು ದ್ರವ್ಯರಾಶಿ ಇರಬೇಕು ಆಗ ಮಾತ್ರ ಅದು ಕಪ್ಪು ರಂಧ್ರವಾಗುತ್ತದೆ. ಹಾಗಾದರೆ ಸೂರ್ಯ ಹಾಗು ಅದಕ್ಕಿಂತ ಹತ್ತು ಪಟ್ಟು ದ್ರವ್ಯರಾಶಿ ಇಲ್ಲದ ನಕ್ಷತ್ರಗಳಯ ಜಲಜನಕವನ್ನು ಕಳೆದುಕೊಂಡ ಬಳಿಕ ಏನಾಗುತ್ತದೆ? ಅವು ಸಹ ತಮ್ಮ ಗುರುತ್ವಾಕರ್ಷಣೆಯ ಬಲಕ್ಕೆ ಕುಸಿಯುತ್ತದೆ ಆದರೆ ಕಪ್ಪು ರಂಧ್ರವಾಗದೆ ಸುಮಾರು ನೂರು ಕಿಮಿ ವ್ಯಾಸ ಹೊಂದಿದೆ ನ್ಯೂಟ್ರಾನ್ ನಕ್ಷತ್ರ ಅಥವ ಬಿಳಿ ಕುಬ್ಜಗಳಾಗುತ್ತದೆ.

ಕಪ್ಪು ರಂಧ್ರಗಳು ಎಲ್ಲವನ್ನು ಆಕರ್ಷಣೆ ಮಾಡಲೂ ಮೂಲ ಕಾರಣ ಅವುಗಳ ಗುರುತ್ವ ಹಾಗು ಕಪ್ಪು ರಂಧ್ರಗಳು ಸಾಮಾನ್ಯವಾಗಿ ಗೋಚರವಾಗುವುದಿಲ್ಲ. ಇದಕ್ಕೆ ಕಾರಣ ಬೆಳಕು ಸಹ ಇದರೊಳಗೆ ಹೋಗಿ ಮತ್ತೆ ಹಿಂದುರುಗುವುದಿಲ್ಲ ಹೀಗಾಗಿ ಬೆಳಕಿನಲ್ಲಿ ಪ್ರತಿಫಲನವಾಗದೆ ನಮಗೆ ನೋಡುವ ಅವಕಾಶವೆ ಇಲ್ಲ. ಹೀಗೆ ಕಪ್ಪು ರಂಧ್ರಗಳು ತಮ್ಮ ಅಸ್ತಿತ್ವವನ್ನು ಬಹಳಷ್ಟು ವರ್ಷಗಳಿಂದ ರಹಸ್ಯವಾಗಿ ಇಟ್ಟಿದ್ದವು. ಆದರೆ 2019 ಏಪ್ರಿಲ್ 10ರಂದು ಮೊದಲ ಕಪ್ಪು ಕುಳಿಯ ಫೋಟೊವನ್ನು ಖಗೋಳಶಾಸ್ತ್ರಜ್ಞರು ತೆಗೆದರು.

ಗೋಚರವಾಗದ ಕಪ್ಪು ರಂಧ್ರಗಳನ್ನು ಹೇಗೆ ಪತ್ತೆ ಮಾಡುತ್ತಾರೆ? ಎಂಬುದು ಮಾತ್ರ ಬಹು ರೋಚಕ ವಿಷಯ. ಯಾವುದೇ ಬೆಳಕನ್ನು ಪ್ರತಿಫಲಿಸದ ಇವು ತಮ್ಮ ಇರುವಿಕೆಯನ್ನು ಬೇರೆ ನಕ್ಷತ್ರಗಳ ಮೂಲಕ ತಿಳಿಸುತ್ತದೆ. ಉದಾಹರಣೆಗೆ ಒಂದು ಕಪ್ಪು ಕುಳಿಯ ಬಳಿ ಒಂದು ನಕ್ಷತ್ರವಿದೆ ಅನ್ಕೊಳಿ ಆ ನಕ್ಷತ್ರದ ಬೆಳಕು ನಮಗೆ ಗೋಚರಿಸುತ್ತದೆ ಆದರೆ ಅದನ್ನು ವೀಕ್ಷಿಸುತ್ತ ಅದರ ಚಲನೆ ಹಾಗು ಅದರ ಬೆಳಕಿನ ಪ್ರಭಾವ ಗಮನಿಸಿದರೆ ಒಂದುವೇಳೆ ಅಲ್ಲಿ ಕಪ್ಪು ರಂಧ್ರವಿದ್ದರೆ ನಕ್ಷತ್ರ ಅದರ ಸುತ್ತ ಸುತ್ತುತ್ತದೆ ಹಾಗು ತಮ್ಮ ಬೆಳಕು ಅದರೊಳಗೆ ಚಲಿಸುತ್ತದೆ ಈ ಎರಡನ್ನು ಆಧಾರವಾಗಿಸಿ ಅವುಗಳನ್ನು ಪತ್ತೆ ಮಾಡಲಾಗುತ್ತದೆ.

ಕಪ್ಪು ರಂಧ್ರದ ಬಳಿ ಹೋದ ಕೂಡಲೇ ನಾವು ಅದಕ್ಕೆ ಬಲಿಯಾಗಲ್ಲ ಅಥವ ಯಾವುದೇ ಗ್ರಹ ನಕ್ಷತ್ರ ಹಾಗು ಬೆಳಕು ಅದರೊಳಗೆ ಹೋಗಿಬಿಡುವುದಿಲ್ಲ. ಅದಕ್ಕೊಂದು ಮಿತಿಯಿದೆ ಅದನ್ನು ಖಗೋಳಶಾಸ್ತ್ರಜ್ಞರು ‘Event horizon’ ಅಂತಾರೆ ಇದು ಕಪ್ಪು ರಂಧ್ರಗಳ ಸುತ್ತ ಇರುವ ಒಂದು ಗಡಿರೇಖೆ ಅನ್ನಬಹುದು ಇದರ ಹೊರಗೆ ಇದ್ದರೆ ಯಾವುದೇ ವಸ್ತು ಕಪ್ಪು ರಂಧ್ರಗಳ ಸೆಳೆತಕ್ಕೆ ಮಾತ್ರ ಒಳಪಟ್ಟಿರುತ್ತದೆ ಆದರೆ ಅದು ಕಪ್ಪು ರಂಧ್ರಗಳ ಒಳಗೆ ಹೋಗುವುದಿಲ್ಲ. ಆದರೆ ದುರಾದೃಷ್ಟವಶಾತ್ ಅವು ಅದನ್ನು ದಾಟಿದರೆ ಮಾತ್ರ ಕಪ್ಪು ರಂಧ್ರಗಳ ಒಳಗೆ ಹೋಗಬೇಕಾಗುವುದು.

ಒಂದು ಪ್ರಶ್ನೆ ಒಂದುವೇಳೆ ನಮ್ಮ ಸೂರ್ಯ ಸಹ ಕಪ್ಪು ರಂಧ್ರವಾಯ್ತು ಈಗ ಅದರ ಸುತ್ತ ಸುತ್ತವ ಎಲ್ಲಾ ಗ್ರಹವೂ ಅದರೊಳಗೆ ಹೋಗುವುದೆ? ಅಂದರೆ ಇಲ್ಲ ಹಾಗೆ ಆಗದು ಕಾರಣ ಸೂರ್ಯ ಕಪ್ಪು ರಂಧ್ರವಾದರೂ ಅದರ event horizon ಅತ್ಯಂತ ಕಡಿಮೆ ವ್ಯಾಸ ಹೊಂದಿರುತ್ತದೆ ಹೀಗಾಗಿ ಯಾವುದೇ ಗ್ರಹಗಳು ಅದರ ಆಚೆಗೆ ಇರುತ್ತದೆ ಹೊರೆತು ಒಳಗೆ ಹೋಗಲ್ಲ.

ಮತ್ತೊಂದು ಪ್ರಶ್ನೆ ಕಪ್ಪು ರಂಧ್ರಗಳ ಒಳಗೆ ಹೋದ ವಸ್ತು ಏನಾಗುತ್ತದೆ? ಈ ಪ್ರಶ್ನೆಗೆ ಉತ್ತರ ಯಾರಿಗೂ ಗೊತ್ತಿಲ್ಲ ಕಾರಣ ನಮಗೆ ಮಾಹಿತಿ ಅದರ ಹೊರಗೆ ಮಾತ್ರ ಉಳಿಯುತ್ತದೆ ಒಳಗೋದ ವಸ್ತು ಮತ್ತೆ ಬರುವುದಿಲ್ಲ ಆದ್ದರಿಂದ ಅದರ ವಿಚಾರಗಳು ಸಹ ಹೊರ ಜಗತ್ತಿಗೆ ಸಿಗುವುದಿಲ್ಲ. ಒಂದು ವಿಚಾರ ಮಾತ್ರ ಗೊತ್ತು ಅತೀವ ಸಾಂಧ್ರತೆ ಹೊಂದಿದ ಇವು ಯಾವುದೇ ವಸ್ತುವನ್ನು ಕೇವಲ ಆಕರ್ಷಣೆ ಮಾಡಲ್ಲ ಅವುಗಳನ್ನು ಹಂತ ಹಂತವಾಗಿ ಸೀಳುತ್ತ ಅವನ್ನು ಸಹ ತನ್ನೊಳೆಗೆ ಸೇರಿಸಿಕೊಳ್ಳುತ್ತದೆ.

ಒಂದು ಸಣ್ಣ ರೂಮಿನಲ್ಲಿ ನೀವು ಜಗತ್ತಿನ ಎಲ್ಲಾ ವಸ್ತುಗಳನ್ನು ತುಂಬಲು ಪ್ರಯತ್ನ ಪಟ್ಟರೆ ಆ ರೂಮಿನ ಸಾಂಧ್ರತೆ ಹೇಗೆ ಹೆಚ್ಚಾಗುವುದೊ ಇದು ಸಹ ಹಾಗೆಯೆ ಆಗಿದ್ದು ರಂಧ್ರ ರೀತಿ ಮಾತ್ರ ವರ್ತಿಸುತ್ತದೆ ಈ ರಂಧ್ರಕ್ಕೆ ಮಾತ್ರ ಯಾವುದೇ ಆಡಿಪಾಯವಿಲ್ಲವಂತೆ!!

ಇದು ಬುಡವಿಲ್ಲದ ಒಂದು ಗೋಣಿಚೀಲ ಹಾಕಿದ ವಸ್ತು ಎಲ್ಲಿ ಹೋಗುತ್ತಿದೆ ಎಂಬುದು ಮಾತ್ರ ಇನ್ನು ರಹಸ್ಯ. ಆದರೆ ಕೆಲ ಖಗೋಳಶಾಸ್ತ್ರಜ್ಞರ ಪ್ರಕಾರ ಕಪ್ಪು ರಂಧ್ರಗಳಲ್ಲಿ ಏಕತ್ವ(singularity) ಇದೆ ಎಂದು ಅಂದರೆ ಬ್ರಹ್ಮಾಂಡ ಅಸ್ತಿತ್ವವಕ್ಕೆ ಬರುವ ಮುನ್ನ ಇದೆ ಸ್ಥಿತಿಯಲ್ಲಿ ಇತ್ತು. ಹೀಗಾಗಿ ಅವರ ಪ್ರಕಾರ ಇದು ನಿಜವಾದರೆ ಕಪ್ಪು ಕುಳಿಯ ಒಳಗೆ ಸಹ ಮತ್ತೊಂದು ನಮ್ಮಂತಹ ಬ್ರಹ್ಮಾಂಡ ಇರಬಹುದೇನೊ? ಅಲ್ಲಿಯೂ ಸಹ ನಿಮ್ಮಂತೆ ಈ ಲೇಖನವನ್ನು ಯಾರೋ ಓದಿ ಆಶ್ಚರ್ಯವಾಗಿರಬಹುದು………ಬಲ್ಲವರು ಯಾರು ಬ್ರಹ್ಮಾಂಡದ ಕೌತುಕವ???