ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕಾಲದ ಅಂಗಳದಲ್ಲಿ ಜಾರುವ ಮೋಡ…

ಶ್ರೀ ತಲಗೇರಿ
ಇತ್ತೀಚಿನ ಬರಹಗಳು: ಶ್ರೀ ತಲಗೇರಿ (ಎಲ್ಲವನ್ನು ಓದಿ)

ಕಲಾವಿದ ಅಥವಾ ಕಲಾವಿದೆ ಯಾರೇ ಇರಲಿ, ಪ್ರತಿಯೊಬ್ಬರೂ ಅವರವರ ಬದುಕಿನಲ್ಲಿ ಅದೆಷ್ಟೋ ಬೇರೆ ಬೇರೆ ಪಾತ್ರಗಳನ್ನು ಮಾಡುತ್ತಾರೆ. ಸಿನೆಮಾವೋ ನಾಟಕವೋ‌ ಯಕ್ಷಗಾನವೋ ಅಥವಾ ಇನ್ನಾವುದೋ ಮುಗಿದ ಮೇಲೆ‌ ಆ‌ ಕಲಾವಿದರು ಕೆಲವು ಸಲ ಆ ಪಾತ್ರಗಳ ಪ್ರಭಾವಲಯದಿಂದ ಹೊರಬರುವುದಕ್ಕೆ ಬಹಳಷ್ಟು ಕಷ್ಟಪಡುವ ಉದಾಹರಣೆಗಳೂ ಇವೆ. ಇನ್ನು ಕೆಲವರು ತಾವು ಮಾಡುವ ಎಲ್ಲಾ ಪಾತ್ರಗಳಲ್ಲೂ ತಮ್ಮ ಬದುಕನ್ನೇ ಬದುಕುತ್ತಾ, ಕೊನೆ ಕೊನೆಗೆ ಅವರ ಅಸ್ತಿತ್ವವನ್ನೂ ಮೀರಿ ಆ ಪಾತ್ರ ಬೆಳೆಯಬಹುದಾದ ಎಲ್ಲಾ ಸಾಧ್ಯತೆಗಳೂ ತೀರಾ ವಿರಳವಾಗಿಯಾದರೂ ಇರಬಹುದು. ಎಷ್ಟೆಲ್ಲಾ ಪಾತ್ರಗಳನ್ನು ಇಷ್ಟಪಟ್ಟೇ ಮಾಡಿದ್ದಾದರೂ ಕೆಲವೇ ಕೆಲವು ಪಾತ್ರಗಳು ಮಾತ್ರ ಅವರನ್ನು ಅತೀ ತೀವ್ರವಾಗಿ ಕಾಡಿರುತ್ತವೆ, ಆಪ್ತ ನೆನಪುಗಳ ಹಾಗೆ ಆ ಪಾತ್ರಗಳನ್ನು ಅವರು ಅಪ್ಪಿಕೊಳ್ಳುತ್ತಿರುತ್ತಾರೆ. ಆ ಪಾತ್ರಗಳು ಅವರ ಬದುಕಿಗೆ ತುಂಬಾ ಹತ್ತಿರವಾಗಿರಬಹುದು, ಅವರ ಕನಸುಗಳಿಗೆ ದನಿಯಾದಂತೆ ಇರಬಹುದು, ಅವರ ಆಸೆಗಳ ಅಭಿವ್ಯಕ್ತಿಯಂತೆ ಆ ಪಾತ್ರ ಇರಬಹುದು ಅಥವಾ ಸುಪ್ತ ಹಾಗೂ ಅವ್ಯಕ್ತ ಭಾವಗಳ ಪ್ರತಿನಿಧಿಯಂತೆ ಇರಬಹುದು. ಎಲ್ಲರ ಮನಸ್ಥಿತಿ ಹಾಗೂ ಪರಿಸ್ಥಿತಿಗನುಗುಣವಾಗಿ ಯಾವ್ಯಾವುದೋ ಒಂದಷ್ಟು ಪಾತ್ರಗಳು ಯಾರ್ಯಾರಿಗೋ ಇಷ್ಟವಾಗುತ್ತವೆ. ಇದು ಕಲೆಗೆ ಇರಬಹುದಾದ ಸಾಧ್ಯತೆ.

ನಾವು ಮನುಷ್ಯರು ವಯಸ್ಸಾಗುವುದನ್ನು ತಡೆಯಬೇಕೆಂದು ಅದೆಷ್ಟು ಪ್ರಯತ್ನಪಡುತ್ತೇವೆ! ತಲೆಗೂದಲು ಬಿಳಿಯಾಗದಂತೆ, ದೇಹದಲ್ಲಿ ಸುಕ್ಕುಗಳು ಬಾರದಂತೆ‌ ತಡೆಯುವ ಸಕಲ ಪ್ರಯತ್ನಗಳೂ ‌ನಡೆಯುತ್ತಲೇ ಇವೆ. ಹಾಗಾಗಿ ವಯಸ್ಸು ಒಂದರ್ಥದಲ್ಲಿ ನಮ್ಮೆಲ್ಲರ ಪರಮಶತ್ರು. ಬಾಲ್ಯದಲ್ಲಿ ಯೌವನ ಯಾಕಾದರೂ ಇನ್ನೂ ಬಂದಿಲ್ಲ ಎನ್ನುವ ಗಡಿಬಿಡಿಯಾದರೆ, ಯೌವನದಲ್ಲಿ ಬಾಲ್ಯ ಕಳೆದೇಹೋಯಿತಲ್ಲ ಅನ್ನುವ ಹಳಹಳಿಕೆ, ಬಹುತೇಕ ಎಲ್ಲರ ಸಹಜವಾದ ಕತೆ ಇದು. ಈ ತೊಳಲಾಟಗಳ ಮಧ್ಯ ಬದಲಾಗುವ ಜೀವನಶೈಲಿಯೊಂದಿಗೂ, ಅವರವರದೇ ಸಂಸಾರದ ವ್ಯಾಖ್ಯಾನಗಳ ಮಧ್ಯ, ಅದರ ಆಗುಹೋಗುಗಳ ಮಧ್ಯ ಇದಿರಾಗುವ ಸಂಘರ್ಷಗಳೊಟ್ಟಿಗೂ ಮುಖಾಮುಖಿಯಾಗುತ್ತಾ ಹೇಗೋ ದಿನ‌ ಕಳೆದೇ ಹೋಗುತ್ತದೆ. ಅದಾದ ಮೇಲೆ ಮತ್ತೆ ‘ಅಯ್ಯೋ, ವಯಸ್ಸಾಗೋಯ್ತಲ್ಲಾ’ ಅನ್ನುವ ಕೊರಗು ಶುರುವಾಗುತ್ತದೆ. ಆಮೇಲಿನದ್ದರ ಸಂಗತಿ ಇನ್ನೊಂದು ಥರದ್ದು. ಯೌವನದಲ್ಲಿರುವವರಿಗೆ ನೆಲ‌ ನೋಡುವುದಕ್ಕೆ ಪುರುಸೊತ್ತಿಲ್ಲ, ಮುದುಕಾದವರಿಗೆ ತಲೆ ಎತ್ತಿ ಹೆಜ್ಜೆ ಇಡುವುದಕ್ಕೆ ಬೇಕಾದ ತಾಕತ್ತಿಲ್ಲ ಅನ್ನುವುದು ಎರಡೂ ಭಿನ್ನ ವಿಚಾರಗಳು ಒಟ್ಟಿಗೇ ಸಾಗುವ ಪರಿ. ವಯಸ್ಸು, ಕಲೆ ಮತ್ತು ಇವೆರಡರ ಪ್ರಸ್ತುತತೆಗಳ ಕುರಿತಾಗಿ ಇರುವ ಚಲನಚಿತ್ರವೇ ‘ಕ್ಲೌಡ್ಸ್ ಆಫ್ ಸಿಲ್ಸ್ ಮರಿಯಾ’ ( clouds of sils maria )

ತನ್ನನ್ನು ಸಿನೆಮಾತಾರೆಯನ್ನಾಗಿ ಮಾಡಿದವನ ಪರವಾಗಿ ಬಹುಮಾನವನ್ನು ಸ್ವೀಕರಿಸಿ, ಅವನ‌ ಕುರಿತು ಒಂದಷ್ಟು ಸಂಭ್ರಮದ ಮಾತಾಡಲು ಪ್ರಯಾಣ ಹೊರಟವಳಿಗೆ, ಪ್ರಯಾಣದ‌‌ ಮಧ್ಯ ಅವ ತೀರಿಹೋಗಿರುವ ಸುದ್ದಿ ಬರುತ್ತದೆ. ಮುಂದೆ ನಡೆಯಬೇಕಾಗಿರುವ ಇಡೀ ಸಮಾರಂಭದ ಚಿತ್ರಣವೇ ಬದಲಾಗುತ್ತದೆ ಅವಳ ಮನಸ್ಸಲ್ಲಿ ಅನ್ನುವಲ್ಲಿಂದ ಸಿನೆಮಾ ತನ್ನನ್ನು ತಾನು ತೆರೆದುಕೊಳ್ಳುವುದಕ್ಕೆ ಶುರುವಾಗುತ್ತದೆ. ಕೆಲವೊಮ್ಮೆ ಸಿನೆಮಾ ತಾರೆಯರ ಪರಿಸ್ಥಿತಿ ಹೇಗೆಂದರೆ, ಶೋಕ ಸಮಾರಂಭಕ್ಕೆ ಹೋದರೂ ಅವರನ್ನು ಹಿಂಬಾಲಿಸುವ, ಅವರ ಫೋಟೋ ತೆಗೆಯಲು ದುಂಬಾಲು ಬೀಳುವ, ಅವರು ಯಾವ ಥರದ ಬಟ್ಟೆ ಹಾಕಿದ್ದರು ಅನ್ನುವುದನ್ನೂ ಚಾಚೂ ತಪ್ಪದೇ ವರದಿ ಮಾಡುವ ಮಾಧ್ಯಮಗಳಿಗೆ‌ ಕೊರತೆಯಿಲ್ಲ. ಹೀಗಿರುವಂಥ ಸಿನೆಮಾ ತಾರೆಗೆ ಸರಿ ಸುಮಾರು ಅವಳ ಅರ್ಧದಷ್ಟು ವಯಸ್ಸಿನ ಸಹಾಯಕಿ ( personal assistant ) ಹೀಗೆ ಇಡೀ ಸಿನೆಮಾ ಅವರಿಬ್ಬರ ನಡುವಿನ ಗಳಿಗೆಗಳಲ್ಲಿ ಮತ್ತು ಅವರಿಬ್ಬರ ನಡುವಿನ ನೆನಪಿನ‌ ಗಳಿಗೆಗಳೊಂದಿಗೆ ಸಾಗುತ್ತದೆ. ಇಬ್ಬರ ಯೋಚನಾ ಲಹರಿಗಳು, ಆಸಕ್ತಿಗಳು ಬೇರೆ ಬೇರೆ. ಇಬ್ಬರೂ ಬದುಕುತ್ತಿರುವ ಮಾನಸಿಕ ಕಾಲಘಟ್ಟಗಳು ಬೇರೆ ಬೇರೆ. ಬೆಳೆದ ವಾತಾವರಣ ಬೇರೆ ಬೇರೆ. ಬದುಕಿನ ವ್ಯಾಖ್ಯಾನಗಳು ಬೇರೆ ಬೇರೆ. ಅಭಿರುಚಿಗಳು ಬೇರೆ ಬೇರೆ. ಹೀಗೆ ‘ಬೇರೆ ಬೇರೆ’ಗಳನ್ನಿಟ್ಟುಕೊಂಡು ಮನುಷ್ಯ ಸಂಬಂಧಗಳನ್ನು ಬಿಡಿಸಿಡುವ ಪ್ರಯತ್ನ ಈ ಸಿನೆಮಾದ್ದು.

ಯಾವಾಗಲೂ ಸಂಬಂಧದಲ್ಲಿ ಒಬ್ಬ ವ್ಯಕ್ತಿಗೆ ಇನ್ನೊಬ್ಬ ವ್ಯಕ್ತಿಯ ಕುರಿತಾಗಿ ಏನು ಅನಿಸಿತೋ, ಆ ವ್ಯಕ್ತಿಗೂ ಈ ವ್ಯಕ್ತಿಯ ಕುರಿತಾಗಿ ಅಷ್ಟೇ ತೀವ್ರವಾದ ಅನಿಸಿಕೆಯಿರಬೇಕು ಅನ್ನುವುದು ಸಾಮಾನ್ಯ ಆಸೆಯಾದರೂ, ಅದು ಅಷ್ಟು ವಾಸ್ತವಿಕತೆಗೆ ಹೊಂದುವಂಥದ್ದಲ್ಲ. ಎಲ್ಲಿಯವರೆಗೆ ಎರಡೂ ಕಡೆಯಿಂದಲೂ ಆ ತೀವ್ರತೆಯಿರುತ್ತದೋ ಅಲ್ಲಿಯವರೆಗೆ ಮಾತ್ರ ಆ ಸಂಬಂಧ ದ್ವಿಮುಖವಾಗಿರುತ್ತದೆ ಹಾಗೂ ಅತ್ಯಂತ ಗಹನವಾಗಿರುತ್ತದೆ. ಹಾಗೆ ಇಲ್ಲವಾದಲ್ಲಿ, ಸಡಿಲವಾಗುತ್ತಾ ಹೋಗುತ್ತದೆ. ಮುಂದೊಂದು ದಿನ ಆ ಸಂಬಂಧವೇ ಇಬ್ಬರಿಗೂ ಅಪರಿಚಿತವಾದಂತೆ ಭಾಸವಾಗಬಹುದು.

ಇಪ್ಪತ್ತು ವರ್ಷಗಳ ಹಿಂದೆ ಆ ತೀರಿಕೊಂಡ ನಿರ್ದೇಶಕ ಮಾಡಿದ್ದ ಕತೆಯನ್ನೇ ಮತ್ತೆ ರಂಗರೂಪಕ್ಕೆ ತರುವ ಯೋಜನೆಯನ್ನು ಹಾಕಿಕೊಳ್ಳಲಾಗುತ್ತದೆ. ಇಪ್ಪತ್ತು ವರ್ಷಗಳ ಹಿಂದೆ ಮಾಡಿದ್ದ ಪಾತ್ರಕ್ಕೆ ಮುಖಾಮುಖಿಯಾಗುವ ಹಿರಿಯ ವಯಸ್ಸಿನ ಮಹಿಳೆಯ ಪಾತ್ರವನ್ನು ಮಾಡುವಂತೆ ಈಗ ಈಕೆಯ ಬಳಿ ಕೇಳುತ್ತಾರೆ. ಈಕೆ ಅದನ್ನು ನಿರಾಕರಿಸಿದರೂ ಈಕೆಯ ಸಹಾಯಕಿ, ಈಕೆಯ ಬಳಿ ವಯಸ್ಸಾದ ಮಹಿಳೆಯ ಆ ಪಾತ್ರ ಬೇರೆಯದಲ್ಲ, ಆ ಹುಡುಗಿಯೇ ಅಷ್ಟು ವರ್ಷಗಳ ಬಳಿಕ ಹೇಗಾಗಬಹುದು ಅನ್ನುವುದರ ದ್ಯೋತಕ ಅದು ಇನ್ನುವ ಹೊಸ ಆಲೋಚನೆಯ ದಿಕ್ಕನ್ನು ತೋರಿಸುತ್ತಾಳೆ. ಇಲ್ಲಿಂದ ಸಿನೆಮಾ ಆ ನಾಟಕದ‌ ತಾಲೀಮಿಗೂ, ಆ ಸಿನೆಮಾ ತಾರೆಯ ವೈಯಕ್ತಿಕ ಜೀವನಕ್ಕೂ ವ್ಯತ್ಯಾಸವೇ ಗೊತ್ತಾಗದ ಹಾಗೆ, ಒಂದು ಇನ್ನೊಂದರೊಳಗೆ ಬೆರೆತ ಹಾಗೆ ಸಾಗುತ್ತದೆ.

ಈ ಸಿನೆಮಾದಲ್ಲಿ ವಾಚ್ಯಕ್ಕಿಂತಲೂ ಸೂಚ್ಯಕ್ಕೆ‌ ಹೆಚ್ಚಿನ‌ ಜಾಗವಿದೆ.‌ ಅದು ಕಾವ್ಯದ ಗುಣ. ನಾವು ಈ ಕಾಲಘಟ್ಟದಲ್ಲಿದ್ದುಕೊಂಡೇ ಈ ಕಾಲಘಟ್ಟದ ಸಂಗತಿಗಳಿಂದ ಭಿನ್ನವಾಗಿಯೂ, ಅವುಗಳೊಂದಿಗೆ ಅಂತರ ಕಾಯ್ದುಕೊಂಡೇ ಇರಬಹುದು ಅನ್ನುವುದನ್ನೂ ಸಿನೆಮಾ ಹೇಳುತ್ತದೆ. ಬಹಳಷ್ಟು ಸಲ ನಾವು ನಮ್ಮವರನ್ನು ಮೆಚ್ಚಿಸುವುದಕ್ಕಾಗಿಯೇ ಅದೆಷ್ಟೋ ಕೆಲಸಗಳನ್ನು ಮಾಡುತ್ತಿರುತ್ತೇವೆ.‌ ಆದರೆ,‌ ಅವೆಲ್ಲವೂ ನಗಣ್ಯವೆಂಬಂತೆ ಅವರು ಎದ್ದು ಹೊರಟಾಗ ‘ಇಷ್ಟು ದಿನ‌ ಇದ್ದಿದ್ದ ಆ ಮುಕ್ತತೆಯಾದರೂ, ಆತ್ಮೀಯತೆಯಾದರೂ ಏನಾಗಿತ್ತು ಹಾಗಿದ್ದರೆ, ಅವಕ್ಕೆಲ್ಲ ಅರ್ಥವೇ ಇರಲಿಲ್ಲವಾ, ಅಥವಾ ಅರ್ಥ ಕಳೆದುಕೊಳ್ಳುವುದಕ್ಕೆ ಸಮಯವೇ ಬೇಡವಾ?’ ಅನ್ನುವ ಪ್ರಶ್ನೆ ‌ಬಹಳ‌ ಗಾಢವಾಗಿಯೇ ಉಳಿದುಹೋಗುತ್ತದೆ. ಹಾಗಾಗಿಯೇ ಈ ಸಿನೆಮಾಕ್ಕೆ ನೆನಪುಗಳನ್ನು ಮೌನವಾಗಿಯೇ ಪ್ರಶ್ನಿಸುವ ಗುಣವಿದೆ. ಕಾಲದ ವೈಪರೀತ್ಯಕ್ಕೆ ಕಳೆದುಹೋಗದೇ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತಲೇ ಮುನ್ನಡೆಯುವುದನ್ನು ಹೇಳಿಕೊಡುವ ಗಟ್ಟಿತನವಿದೆ.

ಒಂದೇ ನಾಣ್ಯದ ಎರಡು ಮುಖಗಳನ್ನು ನೋಡುವ ಮನಸ್ಸಿದ್ದಲ್ಲಿ ಈ ಸಿನೆಮಾ ಹೆಚ್ಚು ಇಷ್ಟವಾಗಬಹುದು!

~`ಶ್ರೀ’
ತಲಗೇರಿ