ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಿಜಯ್ ದಾರಿಹೋಕ
ಇತ್ತೀಚಿನ ಬರಹಗಳು: ವಿಜಯ್ ದಾರಿಹೋಕ (ಎಲ್ಲವನ್ನು ಓದಿ)

ತುಂಬಾ ಕಾಲದ ಹಿಂದೆ ಟಿಬೆಟ್ ನಲ್ಲಿ ಜೀವಿಸಿದ್ದ ನುಯೇನ್ ಎಂಬ ಮಹಿಳೆ ಬುದ್ಧ ಅಮಿತಾಭನ ಪರಮ ಭಕ್ತಳಾಗಿದ್ದಳು. ದಿನಕ್ಕೊಮ್ಮೆ ಹಲವು ಬಾರಿಯಂತೆ ‘ನಮೋ ಅಮಿತಾಭ’ ಎಂಬ ಮಂತ್ರೋಚ್ಚಾರ ತಪ್ಪದೇ ಕಠೋರವಾಗಿ ಹತ್ತು ವರ್ಷಗಳಷ್ಟು ಕಾಲ ಪಾಲಿಸಿಕೊಂಡು ಬಂದಿದ್ದಳು. ಇಷ್ಟಾದರೂ ಕೂಡ ಈ ಮಹಿಳೆಗೆ ಮಹಾ ಮುಂಗೋಪ, ಎಲ್ಲರ ಮೇಲೂ ಕೂಗಾಡುವ ಸ್ವಭಾವ ಮಾತ್ರ ಕೊಂಚವೂ ಬದಲಾಗಲಿಲ್ಲ.

ಅನುಷ್ಠಾನ ಪ್ರತಿದಿನವೂ ಮುಂದುವರೆದಿತ್ತು. ಮೊದಲು ಸ್ವಲ್ಪ ಧೂಪ ಹತ್ತಿಸಿ, ಚಿಕ್ಕ ಗಂಟೆಯನ್ನು ಬಾರಿಸುವ ಮೂಲಕ ತನ್ನ ಅನುಷ್ಠಾನ ವನ್ನು ಆರಂಭಿಸುತ್ತಿದ್ದಳು.  ಇವಳಿಗೆ ಹೇಗಾದರೂ ಮಾಡಿ ಬುದ್ದಿ ಕಲಿಸಬೇಕೆಂದು ನೆರೆಯಾತ ನಿಶ್ಚಯಿಸಿಕೊಳ್ಳುತ್ತಾನೆ. ಒಂದು ದಿನ ಗಂಟೆಯ ಸದ್ದು ಕೇಳಿ ಬರಲು ಆತ ಆಕೆಯ ಮನೆಯ ಬಳಿ ಬರುತ್ತಾನೆ.

ಮನೆಯ ಬಾಗಿಲು ಬಡಿದು ಜೋರಾಗಿ “ಓಯ್ ನುಯೇನ್ ರವರೇ ಓಯ್ ನುಯೇನ್ ರವರೇ …” ಎಂದು ಕೂಗಿ ಕರೆಯುತ್ತಾನೆ. 

ತನ್ನ ಪೂಜೆಯ ಸಮಯ ಅಂದುಕೊಂಡು ಆಕೆ “ನಮೋ ಅಮಿತಾಭ ನಮೋ ಅಮಿತಾಭ..” ಎಂದು ಪುನರುಚ್ಚಾರ ಮುಂದುವರೆಸುತ್ತಾಳೆ.

ಈತ ಮತ್ತೆ ಜೋರಾಗಿ ಓಯ್ ನುಯೇನ್ ರವರೇ ಓಯ್ ನುಯೇನ್ ರವರೇ ಎಂದು ಕರೆಯುವುದನ್ನು ಮುಂದುವರೆಸುತ್ತಾನೆ.

ಇದೆ ರೀತಿ ತುಸು ಸಮಯ ಮುಂದುವರೆಯುತ್ತಲೇ ಮಹಿಳೆಗೆ ತುಂಬಾ ಕೋಪ, ಕೂಡಲೇ ಎದ್ದು ಆತನ ದವಡೆ ಮುರಿಯಲೆ ಅಂತನ್ನಿಸಿದರೂ ತನ್ನನ್ನೇ ತಾನು ನಿಯಂತ್ರಿಸುವ ಪ್ರಯತ್ನ ಮಾಡುತ್ತಾಳೆ.

“ನಮೋ ಅಮಿತಾಭ ನಮೋ ಅಮಿತಾಭ…” ಮುಂದುವರೆಯುತ್ತದೆ. 

“ಓಯ್ ನುಯೇನ್ ರವರೇ ಓಯ್ ನುಯೇನ್ ರವರೇ …” ಮತ್ತೆ ನೆರೆಯಾತನ ಕರೆ ಮತ್ತೆ ಕೇಳಿಸುತ್ತದೆ.

ಈ ಬಾರಿ ಮಹಿಳೆಯ ಸಹನೆಯ ಕಟ್ಟೆ ಒಡೆಯುತ್ತದೆ.. ಕೂಡಲೇ ದಡಾರನೆ ಬಾಗಿಲನ್ನು ತೆರೆದು ಕಿರುಚುತ್ತಾಳೆ..

“ಲೋ ಬುದ್ದಿಗಿದ್ದಿಯಿದೆಯೋ ನಿನಗೆ..ಯಾಕ್ ಹಂಗೆ ಕೂಗಾಡುತ್ತಿದ್ದೀಯಾ..ನಾನಿಲ್ಲಿ ನನ್ನ ಅನುಷ್ಠಾನದಲ್ಲಿ ನಿರತಳಾಗಿದ್ದಿನಿ…ನೀನು ಮಾತ್ರ ಮತ್ತೆ ಮತ್ತೆ ನನ್ನ ಹೆಸರನ್ನು ಯಾಕೆ ಒಂದೇ ಸಮನೇ ಒದರುತ್ತಿದ್ದೀ?.. 

ನೆರೆಯಾತ ನಸು ನಗುತ್ತಾ ಹೇಳುತ್ತಾನೆ..” ಅಲ್ಲಮ್ಮ, ನಾನ್ ಒಂದ್ ಹತ್ತು ನಿಮಿಷ ನಿಮ್ಮ ಹೆಸರು ಕರೆದಿದ್ದಕ್ಕೇ ನಿಮಗಿಷ್ಟು ಕೋಪ ಬರಬೇಕಾದ್ರೆ, ಪಾಪ ಬುದ್ಧ ಅಮಿತಾಭ..! ಹತ್ತು ವರ್ಷಕ್ಕಿಂತ ಹೆಚ್ಚು ಕಾಲ ಅವರ ಹೆಸರು ಕರೆಯುತ್ತೀರಲ್ಲ…ಅವರಿಗೆಷ್ಟು ಕೋಪ ಬಂದಿರಬೇಕು ಹೇಳಿ..