ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗಜಲ್‌ನಲ್ಲಿ ಸಂಕೀರ್ಣತೆ- ಒಂದು ಟಿಪ್ಪಣಿ

ಡಾ. ಗೋವಿಂದ್ ಹೆಗಡೆ
ಇತ್ತೀಚಿನ ಬರಹಗಳು: ಡಾ. ಗೋವಿಂದ್ ಹೆಗಡೆ (ಎಲ್ಲವನ್ನು ಓದಿ)

ನಮ್ಮ ನಡುವಿನ ಪ್ರಮುಖ ಕವಿಗಳಲ್ಲಿ ಒಬ್ಬರು, ತಮ್ಮ ವಿಶಿಷ್ಟ ಸಂವೇದನೆಯ ಕವನಗಳಿಂದ ಗುರುತಿಸಲ್ಪಟ್ಟಿರುವವರು, ಆತ್ಮೀಯ ಕವಿ ಬಂಧು ಚಿಂತಾಮಣಿ ಕೊಡ್ಲೆಕೆರೆಯವರು. ಕನ್ನಡ ಕಾವ್ಯದಲ್ಲಿ ತಾತ್ವಿಕತೆಯ ಸ್ವರೂಪವನ್ನು ಅವರಂತೆ ಅಧ್ಯಯನ ಮಾಡಿದವರು, ಪರಿಭಾವಿಸಿದವರು ವಿರಳ. ತಮ್ಮ ಪಿಎಚ್ಡಿ ಸಂಪ್ರಬಂಧದಲ್ಲಿ ಅವರು ಎರಡು ನೂರಕ್ಕೂ ಹೆಚ್ಚು ಕವಿತೆಗಳ ತಾತ್ತ್ವಿಕತೆಯ ಸ್ವರೂಪವನ್ನು ವಿಶ್ಲೇಷಣೆ ಮಾಡಿ ತೋರಿಸಿದ್ದಾರೆ.
ಗಜಲ್ ಪ್ರಕಾರದಲ್ಲಿನ ಸಂಕೀರ್ಣತೆಯ ಸ್ವರೂಪದ ಬಗ್ಗೆ ಅವರ ಪ್ರಶ್ನೆ ಇದು :

ನನ್ನ ಪ್ರಶ್ನೆ / ಕುತೂಹಲ : ಈ ಆಕೃತಿ (ಗಜ಼ಲ್) ನಮ್ಮ ಸಂಕೀರ್ಣ ಭಾವಗೀತೆ( ಕೆ. ಎಸ್. ನ. ರ ‘ಯಾರು ತೂಗುವ ತೊಟ್ಟಿಲೋ’, ಅಡಿಗರ ‘ ಅಳುವ ಕಡಲೊಳು’, ಬೇಂದ್ರೆಯವರ ‘ಜೋಗಿ’ ಮುಂ. ಪದ್ಯಗಳು) ಅಥವಾ ನವ್ಯ ಪದ್ಯಗಳಂತೆ ಮಾಲೆ ಮಾಲೆ ಸಂಕೀರ್ಣ ಭಾವನೆಗಳನ್ನು ಹೇಳಲು ಶಕ್ತವಾಗಿದೆಯೇ ಎಂಬುದು. – ಚಿಂತಾಮಣಿ ಕೊಡ್ಲೆಕೆರೆ

ಸಾನೆಟ್ಗಳನ್ನು ಹಾಗೆ ಹಿಗ್ಗಿಸುವ, ಹೊಂದಿಸುವ, ಬೆಳೆಸುವ ಹೊಸ ಹೊಸ ಪ್ರಯತ್ನಗಳು ನಮ್ಮಲ್ಲಿ ನಡೆದವು, ನಡೆಯುತ್ತಿವೆ. ಕಳೆದ ಐದಾರು ವರ್ಷಗಳಿಂದ ಗಜಲ್ ಪ್ರಕಾರದ ಬಗ್ಗೆ ಒಂದಿಷ್ಟು ಅಧ್ಯಯನ ನಡೆಸಿ, ಅದರಲ್ಲಿ ಒಂದಿಷ್ಟು ಕೃಷಿಯನ್ನು ಮಾಡುವ ಸಾಹಸವನ್ನು ನಾನು ಮಾಡಿದ್ದೇನೆ. ಇತ್ತೀಚಿಗೆ ಪತ್ರಿಕೆಯೊಂದರಲ್ಲಿ ಪ್ರಕಟವಾದ ಎರಡು ಗಜಲ್‌ಗಳನ್ನು ಶ್ರೀ ಕೊಡ್ಲೆಕೆರೆಯವರಿಗೆ ಕಳಿಸಿಕೊಟ್ಟಿದ್ದೆ. ಈ ಹಿನ್ನೆಲೆಯಲ್ಲಿ ಅವರ ಮನಸ್ಸಿಗೆ ಈ ಪ್ರಶ್ನೆ ಬಂದಿರಲೂಬಹುದು. ( ಅವರು ಆಮೇಲೆ ಟಿಪ್ಪಣಿಯಲ್ಲಿ ಹೇಳಿದಂತೆ ನನ್ನನ್ನು ಒಂದಿಷ್ಟು ‘ಕೆಣಕುವ’ ಉದ್ದೇಶವೂ ಅವರದಾಗಿತ್ತು!).

ಈ ಪ್ರಶ್ನೆಗೆ ಉತ್ತರ ಹೇಳುತ್ತೇನೆ ಎನ್ನುವುದಕ್ಕಿಂತ ಈ ಕುರಿತು ನನ್ನ ಅನಿಸಿಕೆಯನ್ನು ಹೇಳುವೆ ಎನ್ನುವುದೇ ಸಮಂಜಸ ಎಂದು ತೋರುತ್ತದೆ. ಹಾಗೆ ನನ್ನ ಅನಿಸಿಕೆಗಳನ್ನು ಅವರೊಂದಿಗೆ ಹಂಚಿಕೊಂಡಾಗ ತುಂಬ ಸಂತೋಷಪಟ್ಟು ಈ ಸಂವಾದವನ್ನು ಪ್ರಕಟಿಸಲು ಅನುಮತಿ ನೀಡಿದರು. ಅಷ್ಟು ಮಾತ್ರವಲ್ಲ, ಫೇಸ್ಬುಕ್‌ನ ತಮ್ಮ ಗೋಡೆಯಲ್ಲಿ ಗಜಲ್ ಮತ್ತು ಸಂಕೀರ್ಣತೆ: ಒಂದು ಸಂವಾದ ಎಂಬ ಹೆಸರಲ್ಲಿ ಇದನ್ನು ಪ್ರಕಟಿಸಿದರು. ಅವರ ಪ್ರೀತಿಗೆ ವಂದನೆಗಳನ್ನು ಹೇಳುತ್ತ ನನ್ನ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ.
ಭಾವಗೀತೆಗಳು ಹೆಸರೇ ಹೇಳುವಂತೆ ಹಾಡುಗಬ್ಬಗಳು. ಹೀಗೆ ಹಾಡಿಕೊಳ್ಳುವುದು ತನ್ನ ಖುಷಿಗೆ, ಸಂತೋಷಕ್ಕೆ ಇರಬಹುದು; ಇನ್ನೊಬ್ಬರು ಕೇಳಲಿ ಎಂದೂ ಇರಬಹುದು. ಇನ್ನು ನವ್ಯ ಕವಿತೆಗಳು ಒಂದು ರೀತಿಯಲ್ಲಿ ತನ್ನೊಂದಿಗೇ ತಾನು ಮಾತನಾಡಿಕೊಳ್ಳುವ ರೀತಿಯವು ಎಂದೇ ನನಗನಿಸಿದೆ. ಇಂಗ್ಲಿಷ್ ನಲ್ಲಿ ಲೌಡ್ ಥಿಂಕಿಂಗ್ ಎನ್ನುತ್ತಾರಲ್ಲ, ಹಾಗೆ. ಅಂದರೆ ಒಂದು ರೀತಿಯ ಅಂತರ್ಮುಖತೆ, ಒಳಸರಿಯುವಿಕೆ ಅವುಗಳ ಲಕ್ಷಣವೇ ಎಂಬುದು ನನ್ನ ಗ್ರಹಿಕೆ.

ಇವಕ್ಕೆ ವ್ಯತಿರಿಕ್ತವಾಗಿ ಗಜಲ್ ಇನ್ನೊಬ್ಬರಿಗೆ ಹೇಳುವ ಆಶಯವನ್ನು, ಲಕ್ಷ್ಯವನ್ನು ಪ್ರಧಾನವಾಗಿ ಹೊಂದಿರುವ ಕಾವ್ಯ ಪ್ರಕಾರ.
ಮೂಲದಲ್ಲಿ ಹೆಂಗಸರೊಂದಿಗೆ ಮಾತನಾಡುವುದು ಪ್ರೇಮಾನುರಾಗಗಳನ್ನು ವ್ಯಕ್ತಪಡಿಸುವುದು ಅದರ ಆಶಯವಾಗಿತ್ತು. ಅಲ್ಲಿಂದ ಅದು ಈಗ ಸಾಕಷ್ಟು ದೂರ ಬಂದಿದೆ. ಯಾವುದೇ ಕಾವ್ಯದ ವಸ್ತು ಆಶಯಗಳು, ಈಗ ಗಜಲ್ ನ ವಸ್ತು ಆಶಯಗಳೂ ಆಗಿವೆ. ಹಾಗಿದ್ದೂ ತನ್ನ ಸಂವಹನದ ರೀತಿಯಲ್ಲಿ ಅದು ಇನ್ನೊಬ್ಬರಿಗೆ ‘ಕೇಳಿಸುವ’ ಕಾವ್ಯವಾಗಿಯೇ ಉಳಿದುಕೊಂಡಿದೆ- ಅವರ ತೊಡಗಿಕೊಳ್ಳುವಿಕೆಯನ್ನು ಅಪೇಕ್ಷಿಸುತ್ತದೆ ಎಂದೇ ನನ್ನ ಗ್ರಹಿಕೆ, ಅನಿಸಿಕೆ. ಗಜಲ್ ಮುಷಾಯಿರಾಗಳ ಬಗ್ಗೆ ಓದಿದಾಗ ಈ ಅನಿಸಿಕೆ ಇನ್ನಷ್ಟು ದೃಢವಾಯಿತು.
ಹೀಗೆ ಇನ್ನೊಬ್ಬರಿಗೆ ‘ಕೇಳಿಸುವ’ ಉಪಾಯವಾಗಿ, ಅವರನ್ನು ತೊಡಗಿಸಿಕೊಳ್ಳುವ ತಂತ್ರವಾಗಿ ದ್ವಿಪದಿಗಳು, ರದೀಫ್,ಕಾಫಿಯಾ ಇತ್ಯಾದಿಗಳ ಗಜಲ್‌ನ ಸ್ವರೂಪ ಒದಗಿಬಂತು ಎಂದು ಅನಿಸುತ್ತದೆ. ಹಾಗಾಗಿ ಅದಕ್ಕೊಂದು ‘ವಾಚ್ಯ’ ಸ್ವರೂಪ ಅನಿವಾರ್ಯವಾಗಿದೆ.
ಭಾವತೀವ್ರತೆ ಉಳ್ಳ ಹಲವಾರು ಗಜಲ್ಗಳು ನಮ್ಮ ಎದುರಿಗಿವೆ. ಶಾಂತರಸರ, ಮುಕ್ತಾಯಕ್ಕನವರ,ಗಿರೀಶ ಜಕಾಪುರೆಯವರ ಹಲವಾರು ರಚನೆಗಳು ಸಂಕೀರ್ಣವಾದ ಚಿತ್ರಗಳನ್ನು ನಮ್ಮ ಮುಂದೆ ಇಡುತ್ತವೆ. ಅನುರಾಗ ಗೀತೆಗಳು, ತಾತ್ವಿಕ ರಚನೆಗಳು,ಶೋಷಣೆಯನ್ನು ಹಸಿಹಸಿಯಾಗಿ ಚಿತ್ರಿಸುವ, ನಮ್ಮನ್ನು ಬಡಿದೆಬ್ಬಿಸುವ – ಹಲವಾರು ಗಜಲ್ ಕವಿಗಳ- ರಚನೆಗಳೂ ಇವೆ.
ನವ್ಯ ಕಾವ್ಯ ಮತ್ತು ಗಜಲ್‌ಗಳನ್ನು ಒಟ್ಟಿಗೆ ನೋಡಿದಾಗ ಅನಿಸುವುದು- ನವ್ಯಕಾವ್ಯ ಅನಿರ್ಬಂಧಿತವಾಗಿ ಹರಿಯುವ ಹೊಳೆ. ಅದು ಜಲಪಾತವಾಗಿ ಧುಮುಕಲೂ ಬಹುದು, ರಭಸವಾಗಿ ಹರಿದು ಸುಳಿಯಾಗಿ ಸುಳಿದು ನಮ್ಮನ್ನು ಆವರಿಸಬಹುದು. ಆದರೆ ಗಜಲ್ ಯೋಜಿತವಾಗಿ ಕಾಲುವೆಯಲ್ಲಿ ಹರಿಸುವ ನೀರಿನಂತೆ. ಯೋಜಿತ ಪಾತ್ರದೊಳಗೆ ಹರಿಯಬೇಕಾದ ಸಂದರ್ಭ, ನಿರ್ಬಂಧ ಗಜಲ್‌ನದು. ಅಂದರೆ ಸಂಕೀರ್ಣತೆ ಕೇವಲ ವಸ್ತುವಿನ, ಆಶಯದ ಆಯ್ಕೆ ಮಾತ್ರವಲ್ಲ ನಿರ್ವಹಣೆಯ ಕ್ರಮವೂ ಹೌದು ಅನಿಸುತ್ತದೆ.
ಸಾನೆಟ್‌ನಲ್ಲಿ ತುಂಬ ಗಂಭೀರವಾದ, ಸಾಂದ್ರವಾದ, ಸಂಕೀರ್ಣವಾದ ರಚನೆಗಳು ಬಂದಿವೆ, ನಿಜ. ಒಟ್ಟು ಹದಿನಾಲ್ಕು ಸಾಲುಗಳ, 8-6, ಅಥವಾ 4-4-4-2 ಸಾಲುಗಳ ವಿನ್ಯಾಸದ, ಸ್ಥೂಲವಾಗಿ 27 ಮಾತ್ರೆಗಳ ಸಂರಚನೆ/ವಿನ್ಯಾಸ ಸಾನೆಟ್‌ನದು ಎಂದು ನನ್ನ ಗ್ರಹಿಕೆ. ಸಾನೆಟ್‌ಗಳಲ್ಲಿ ಸಾಧ್ಯವಾಗಿದ್ದು ಗಜಲ್‌ನಲ್ಲಿ ಏಕೆ ಆಗಿಲ್ಲ ಎಂದರೆ ಉತ್ತರ ಸ್ವಲ್ಪ ಕಷ್ಟ.
ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ‘ಕನ್ನಡ ಗಜಲ್’ ಅನ್ನು ಸಂಪಾದಿಸಿದ ಚಿದಾನಂದ ಸಾಲಿ ತಮ್ಮ ಮಾತಿನಲ್ಲಿ ಹೀಗೆ ಹೇಳುತ್ತಾರೆ-
“… ಇದರ (ಗಜಲ್‌ನ) ಗೇಯತೆಯಲ್ಲಿ, ಲಯದಲ್ಲಿ, ಕೋಮಲ ವಿನ್ಯಾಸದಲ್ಲಿ ಸುಡುವ ವರ್ತಮಾನಗಳಿಗೆ ಕನ್ನಡಿ ಹಿಡಿಯಲಾಗುವುದಿಲ್ಲ ಎಂಬುದು ಮತ್ತೊಂದು ಅಂಥ ಮಿಥ್ಯಾರೋಪ. ಈ ಸಂಕಲನದಲ್ಲಿರುವ ಆನಂದ ಝುಂಜರವಾಡರ ರಚನೆಗಳು ಈ ಮಾತಿಗೆ ಸರಿಯಾದ ಉತ್ತರದಂತಿವೆ.” ಅದೇನೇ ಇರಲಿ, ಈ ಪ್ರಕಾರದಲ್ಲಿ ಸಂಕೀರ್ಣ ಅಭಿವ್ಯಕ್ತಿ ಸಾಧ್ಯವಾಗಿಲ್ಲ ಎಂದರೆ ಅಂತಹ ಬರಹ ಇನ್ನೂ ಬಂದಿಲ್ಲ, ಅಂತಹ ಕ್ರತು ಶಕ್ತಿಯುಳ್ಳ ಕವಿ ಈ ಪ್ರಕಾರದಲ್ಲಿ ಈವರೆಗೆ ಬರೆದಿಲ್ಲ ಎಂದು ಅಂದುಕೊಳ್ಳಬೇಕೇನೋ.

ತುಂಬಾ ಚೆಲುವಾದ ಗಜಲ್ ಗಳನ್ನು ಬರೆದಿರುವ ನಮ್ಮ ಪ್ರಮುಖ ಕವಿಗಳಲ್ಲಿ ಒಬ್ಬರಾದ ಬಿ ಆರ್ ಲಕ್ಷ್ಮಣರಾವ್ ಒಮ್ಮೆ ನನ್ನೊಂದಿಗೆ ಖಾಸಗಿ ಮಾತುಕತೆಯಲ್ಲಿ ಹೇಳಿದ್ದು ಹೀಗೆ- ಗಜಲ್‌ನ ಶೇರ್‌ಗಳಲ್ಲಿ ಅಂದರೆ ಎರಡು ಎರಡು ಸಾಲುಗಳ ವಿನ್ಯಾಸದಲ್ಲಿ ನಾವು ನಮ್ಮ ಕವಿತೆಯನ್ನು ಕಟ್ಟಬೇಕು, ಅಳವಡಿಸಬೇಕು. ರದೀಫ್, ಕೆಲವೊಮ್ಮೆ ಕಾಫಿಯಾ ಕಾರಣದಿಂದಾಗಿ ಅಭಿವ್ಯಕ್ತಿಗೆ ಸಿಗುವ ಅವಕಾಶ ಒಂದೂವರೆ ಸಾಲು ಮಾತ್ರ. ಇದು ಕೂಡ ಅಲ್ಲಿನ ಸಂವಹನ ಸಾಧ್ಯತೆಯನ್ನು ಮಿತಗೊಳಿಸುತ್ತದೆ- ಅಂತ. ಇದನ್ನು ಕೂಡ ಪೂರ್ತಿಯಾಗಿ ತೆಗೆದುಹಾಕಲಾಗದೇನೋ.

ನಾನು ಗಜಲ್ ಬರಹಕ್ಕೆ ತೊಡಗಿದ್ದು ಮಾಧ್ಯಮದ ಅಂದರೆ ಆಕೃತಿಯ ಹುಡುಕಾಟವಾಗಿ. ನನ್ನ ರಚನೆಗಳಲ್ಲಿ ಎಷ್ಟರಮಟ್ಟಿಗೆ ಸಂಕೀರ್ಣತೆಯನ್ನು ತಂದಿದ್ದೇನೆ ಎಂದು ಹೇಳಲಾರೆ. ಆದರೆ ನವ್ಯ ಮಾದರಿಯ ನನ್ನ ಕವಿತೆಗಳಲ್ಲಿ ಅಭಿವ್ಯಕ್ತಿ ಪಡೆಯದ ಎಷ್ಟೋ ಸಂಗತಿಗಳು, ಅಲ್ಲಿ ಮೈ ಪಡೆಯದ ರೂಪಕಗಳು, ಚಿತ್ರಗಳು ನನ್ನ ಗಜಲ್‌ಗಳಲ್ಲಿ ಮೈ ಪಡೆದಿವೆ ಎನ್ನುವ ಸಣ್ಣ ಸಂತಸ ನನ್ನದು.
ಕನ್ನಡದಲ್ಲಿ ಈವರೆಗೆ ಪ್ರಕಟವಾದ ಗಜಲ್ ಸಂಕಲನಗಳ ಸಂಖ್ಯೆ ನೂರರ ಹತ್ತಿರ ಬಂದಿರಬೇಕು. ಹಾಗಿದ್ದೂ ಈ ಪ್ರಕಾರದಲ್ಲಿ ಒಟ್ಟಾರೆಯಾಗಿ ಸಾಧಿಸಿದ್ದು ಸ್ವಲ್ಪ, ಸಾಧಿಸಬೇಕಾದ್ದು ಬಹಳ ಎಂದೇ ನನ್ನ ಭಾವನೆ.
ಹುಣ್ಣಿಮೆ ಚಂದಿರನ ಹೆಣಾ ಬಂತೋ ಮುಗಲಾಗ ತೇಲತಾ ಹಗಲಽ‘ ಎಂದ ಬೇಂದ್ರೆ,
ಬಡವರು ಸತ್ತರೆ ಸುಡಲಿಕೆ ಸೌದಿಲ್ಲೆ
ಒಡಲ ಕಿಚ್ಚಿನಲಿ ಹೆಣ ಬೆಂದೋ | ದೇವರೆ
ಬಡವರಿಗೆ ಸಾವ ಕೊಡಬ್ಯಾಡ ||

ಎಂದ ಜನಪದ ಕವಿ ‘ಕೆಂಡ-ಸಂಪಿಗೆ’ಯಾಗಿ ಗಜಲ್ ಬನದಲ್ಲಿ ಅರಳಲಿ. ಓದುಗನ ಎದೆಯನ್ನು ಪರಿಮಳಿಸಲಿ ಎಂದು ಹಾರೈಸುತ್ತೇನೆ.