ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗೌರಿ ಲಂಕೇಶ್ ನೆನಪುಗಳು

ಡಾ.ಎಚ್.ಎಸ್. ಸತ್ಯನಾರಾಯಣ
ಇತ್ತೀಚಿನ ಬರಹಗಳು: ಡಾ.ಎಚ್.ಎಸ್. ಸತ್ಯನಾರಾಯಣ (ಎಲ್ಲವನ್ನು ಓದಿ)

ಇವತ್ತು ಶಿಕ್ಷಕರ ದಿನಾಚರಣೆ. ಮೂರು ವರ್ಷದ ಹಿಂದೆ ೨೦೧೭ರಲ್ಲಿ ಅತ್ಯುತ್ತಮ ಉಪನ್ಯಾಸಕ ರಾಜ್ಯ ಪ್ರಶಸ್ತಿಯನ್ನು ಮುಖ್ಯ ಮಂತ್ರಿಗಳಿಂದ ಪಡೆದ ಸಂಭ್ರಮದಲ್ಲಿ ಅವತ್ತೆಲ್ಲಾ ತಲೆ ಭುಜದ ಮೇಲೆ ನಿಲ್ಲುತ್ತಿರಲಿಲ್ಲ. ಕರೆದು ಪ್ರಶಸ್ತಿ ದುಡ್ಡು ಎಲ್ಲಾ ಕೊಟ್ಟರೆ ಯಾರಿಗೆ ತಾನೇ ಖುಷಿಯಾಗುವುದಿಲ್ಲ! ಆದರೆ ರಾತ್ರಿ ಎಂಟುಗಟ್ಟೆಯ ಹೊತ್ತಿಗೆ ಗೌರಿಲಂಕೇಶರನ್ನು ಗುಂಡಿನಿಂದ ಹೊಡೆದುರುಳಿಸಿದ ಸುದ್ದಿ ಬಂದಪ್ಪಳಿಸಿ ನನ್ನ ಸಂಭ್ರಮವನ್ನು ನೆಲಕಚ್ಚಿಸಿತು. ಇನ್ನೂ ಕಲಬುರ್ಗಿಯವರ ಬರ್ಬರ ಹತ್ಯೆಯ ನೆನಪು ಹಸಿಹಸಿಯಾಗಿರುವಾಗಲೇ ಗೌರಿಯವರ ಹತ್ಯೆಯ ಸುದ್ದಿ ಮನಸನ್ನು ಮುಕ್ಕಾಗಿಸಿಬಿಟ್ಟಿತು. ವಿರೋಧದ ದನಿಗೆ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಇಂತಹ ಧಮನಕಾರಿ ಪ್ರತಿಕ್ರಿಯೆಯೇ? ಈಗಲೂ ಗುಬ್ಬಚ್ಚಿಯಂತಹ ಗೌರಿಯವರ ದುರ್ಮರಣವನ್ನು ಜೀರ್ಣಿಸಿಕೊಳ್ಳಲಾಗುತ್ತಿಲ್ಲ!

ಇವತ್ತು ಅವರ ಹತ್ಯೆಯಾದ ದಿನ. ಅವರನ್ನು ಕುರಿತು ನಮ್ಮ ಪ್ರವರ ಕೊಟ್ಟೂರು ಅವರು ಬರೆದ ‘ಗೌರಿ’ ಪದ್ಯವನ್ನು ಓದುವ ಮೂಲಕ ಗೌರಿಯವರಿಗೊಂದು ಕಾವ್ಯ ಶ್ರದ್ಧಾಂಜಲಿ ಸಲ್ಲಿಸಿದೆ. ನಾನು ಹತ್ತಿರದಿಂದ ಒಡನಾಡಿದ್ದ ಗೌರಿಯವರ ವ್ಯಕ್ತಿತ್ವವನ್ನು ಪ್ರವರ ಅವರು ಅದ್ಭುತವಾಗಿ ಕವಿತೆಯಲ್ಲಿ ಹಿಡಿದಿಟ್ಡಿದ್ದಾರೆ. ಗೌರಿಯವರ ಬಗ್ಗೆ ಬಂದಿರುವ ಅನೇಕ ಕವಿತೆಗಳನ್ನು ನಾನು ಗಮನಿಸಿದ್ದೇನೆ. ಪ್ರವರ ಕೊಟ್ಟೂರು ಅವರ ‘ಒಂದು ಮುತ್ತಿನಿಂದ ಕೊಲ್ಲಬಹುದು’ ಎಂಬ ಹೊಸ ಸಂಕಲನದ ‘ಗೌರಿ’ ಕವಿತೆ ನಿಜಕ್ಕೂ ಸೊಗಸಾಗಿದೆ. ಈ ಹುಡುಗ ಅದೆಷ್ಟು ಚೆಂದ ಕವಿತೆ ಬರೀತಾನೆ ಅಂತ ತುಂಬ ಖುಷಿಪಟ್ಟೆ. ಆ ಸಂಕಲನದ ಉಳಿದ ಕವಿತೆಗಳ ಬಗ್ಗೆ ಒಮ್ಮೆ ಬರೆಯಬೇಕು, ಮಾತಾಡಬೇಕು ಎಂಬ ಆಸೆಯನ್ನು ಬಲವಾಗಿಸುವಂತೆ ಅವರ ರಚನೆಗಳಿವೆ.

ನಾನು ಬಸವನಗುಡಿಯ ಕಾಲೇಜಿನಲ್ಲಿ ಐದು ವರ್ಷ ಕೆಲಸ ಮಾಡಿದೆ. ಮೊದಲ ಮೂರು ವರ್ಷಗಳ ಅವಧಿಗೆ ಹಿರಿಯ ಕವಯತ್ರಿ ಎಂ ಆರ್ ಕಮಲ ಅವರು ಪ್ರಾಚಾರ್ಯರಾಗಿದ್ದರು. ಒಮ್ಮೆ ಮಾತು ಲಂಕೇಶರತ್ತ ಹೊರಳಿತು. ನಾನು “ಲಂಕೇಶರು ಬದುಕಿರುವವರೆಗೆ ಅದು ಲಂಕೇಶ್ ಪತ್ರಿಕೆ, ಗೌರಿ ನಡೆಸುತ್ತಿರುವುದು ಲಂಕೇಶ್ ಪುತ್ರಿಕೆ” ಎಂದು ತಮಾಷೆ ಮಾಡಿದ್ದೆ. ಅಚ್ಚರಿಯೆಂಬಂತೆ ಮರುದಿನವೇ ಲಂಕೇಶ್ ಪತ್ರಿಕೆಯ ಕಚೇರಿಯಿಂದ ಹುಡುಕಿಕೊಂಡು ಬಂದ ಹುಡುಗನೊಬ್ಬ “ಮೇಡಂ ನಿಮ್ಮುನ್ನ ಕರ್ಕೊಂಬರಕ್ಕೆ ಹೇಳಿದ್ರು, ಬನ್ನಿ ಸಾರ್ ಹೋಗಣ” ಎಂದ. ನಾನು ಕ್ಲಾಸ್ ಮುಗಿಸಿ ಸಂಜೆ ಬರ್ತೀನಿ ಹೋಗಪ್ಪ ಅಂತ ಕಳಿಸಿದವನು ಸಂಜೆ ಹೋದೆ.

“ಎಲ್ರಿ ಇದ್ರಿ ಇಷ್ಟ್ ದಿನಾ? ನಿಮ್ ಸಹಾಯ ಬೇಕಿತ್ತು ನಂಗೆ ಅರ್ಜೆಂಟ್” ಅಂತ ತುಂಬ ದಿನದಿಂದ ಪರಿಚಯವಿರೋರ ತರ ಮಾತಾಡಿದ್ರು. ಸಂಕೋಚವನ್ನು ಮುಲಾಜಿಲ್ಲದೆ ದೂರಾಗಿಸುವ ಅವರ ಸರಳ, ನೇರ ನಡೆನುಡಿ ತುಂಬ ಹಿಡಿಸಿತು. ‘ಲಂಕೇಶ್ ಪುತ್ರಿಕೆ’ ಅಂತ ತಮಾಷೆ ಮಾಡಿದ್ದು ಹೇಳಲು, ಜಯಂತ್ ಕಾಯ್ಕಿಣಿ ಹಂಗೇ ಹೇಳಿದಾರೆ ಅಂತ ನಗಾಡಿದ್ದರು.

“ಅಪ್ಪನ ಕೆಲವು ಪುಸ್ತಕಗಳನ್ನು ರೀಪ್ರಿಂಟ್ ಮಾಡ್ತಿದೀನಿ. ನೀವು ಪ್ರೂಫ್ ನೋಡಿ ಕೊಡ್ತೀರಾ ಪ್ಲೀಸ್? ಅದುಕ್ಕೆ ದುಡ್ಡುಗಿಡ್ಡು ಅಂತೆಲ್ಲಾ ಕೊಡಕ್ಕಾಗಲ್ಲಪ್ಪ…ಮೊದ್ಲೆ ಹೇಳ್ಬಿಡ್ತೀನಿ” ಅಂದರು. ಮಾತಿನ ಮಧ್ಯೆ ಸ್ಟೈಲಾಗಿ ಒಂದು ಸಿಗರೇಟು ಹಚ್ಚಿದರು. ನಾನು ಬೇಕಂತಲೇ ನನ್ನ ಎದುರು ಸಿಗರೇಟ್ ಹಚ್ಚಿ ತಾನೆಷ್ಟು ಬೋಲ್ಡ್ ಅನ್ನೊದನ್ನ ಬಿಂಬಿಸ್ತಿದಾರೆ ಅನ್ನಿಸಿತು. ಪುಟ್ಟ ಪ್ರೇಮಿನ ಕನ್ನಡಕ ಕೂಡ ಕಣ್ಣಿನಿಂದ ಜಾರಿ ಮೂಗುತುದಿಗೆ ಬಂದಿತ್ತು. “ಸಿಗರೇಟ್ ಸೇದೋ ಅಭ್ಯಾಸ ಇದ್ರೆ ತಗೊಳ್ಳಿ” ಅಂತ ಪ್ಯಾಕ್ ಮುಂದೆ ಹಿಡಿದರು. ನನಗ್ಯಾಕೋ ಲಂಕೇಶರನ್ನು ನೋಡಿದ್ದ ಚೇರಲ್ಲಿ ಗೌರಿ ಕುಳಿತಿರುವುದು ಹಿಡಿಸಿರಲಿಲ್ಲ! ಪ್ರೂಫ್ ನೋಡಿಯಾದ ಮೇಲೆ ತರುತ್ತೇನೆ ಮೇಡಂ ಎಂದು ಅಲ್ಲಿಂದ ಎದ್ದುಬಂದೆ.

ಮತ್ತೆ ಹೋದಾಗ ನಾನು ನೋಡಿದ ಪ್ರೂಫ್ ಗಮನಿಸಿ, “ಎಷ್ಟು ಚೆನ್ನಾಗಿ ಪ್ರೂಫ್ ನೋಡಿ, ಮಾರ್ಕ್ ಮಾಡಿದ್ದೀರಿ! ಯಾರ್ರಿ ಕಲ್ಸಿದ್ದು?” ಅಂತ ಮೆಚ್ಚುಗೆಯಿಂದ ಕೇಳಿದರು. “ನಾನು ಮೈಸೂರಲ್ಲಿ ಎಂ ಎ ಓದುವಾಗ ಕಲ್ತಿದ್ದು ಮೇಡಂ, ಹಾ ಮಾ ನಾಯಕರು ಗುರುತು ಮಾಡುವುದನ್ನೂ, ಸಂಕೇತಾಕ್ಷರಗಳನ್ನೂ ಹೇಳಿಕೊಟ್ಟಿದ್ದರು” ಎಂದೆ. ಆ ಹೆಸರು ಅವರಿಗೆ ಅಪಥ್ಯವೆಂಬುದು ಅವರ ಕಿವುಚಿದ ಮುಖಭಾವದಿಂದಲೇ ಅರ್ಥವಾಯಿತು. ಕೋರ್ಟಿನಲ್ಲಿ ಲಂಕೇಶರ ವಿರುದ್ಧ ಜಯಗಳಿಸಿದ್ದರ ಬಗ್ಗೆ ಹಾಮಾನಾ ಲಂಕೇಶ್ ತೀರಿಕೊಂಡಾಗ ತಮ್ಮ ಅಂಕಣದಲ್ಲಿ ಬರೆದಿದ್ದನ್ನು ನೆನೆದು ನಕ್ಕು ಸುಮ್ಮನಾದೆ.

ಆಮೇಲೆ ತೇಜಸ್ವಿಯವರ ಬಗ್ಗೆ ಮಾತು ಬಂತು. ತೇಜಸ್ವಿ ತೀರಿಕೊಂಡಾಗ ತಾವು ಪ್ರಕಟಿಸಿದ್ದ ಒಂದು ಪುಸ್ತಕ ಕೊಟ್ಟು “ಇದ್ರಲ್ಲಿ ವಿಪರೀತ ಅಚ್ಚಿನ ದೋಷಗಳು ಉಳಿದುಕೊಂಡಿವೆ, ಕರೆಕ್ಷನ್ ಹಾಕಿ ಕೊಡಿ, ಇನ್ನೊಂದ್ ಎಡಿಷನ್ ತರೋಣ” ಎಂದರು. ತಾವು ಕುಳಿತ ಚೇರಿನ ಹಿಂದೆ ನೇತುಹಾಕಿದ್ದ ಫೋಟೋ ತೋರಿಸಿ “ಇದು ತೇಜಸ್ವಿ ಮಾಮ ನಾನು ಅಪ್ಪ ಮೂಡಿಗೆರೆಯ ಅವರ ತೋಟದ ಮನೆಗೆ ಹೋಗಿದ್ದಾಗ ತೆಗೆದಿದ್ದು, ನಂಗೆ ತುಂಬಾ ಇಷ್ಟ ಇದು” ಎಂದರು. ಮುದ್ದಾದ ಮುಖದ ಆಂಗ್ಲೋ ಇಂಡಿಯನ್ ತರ ಕಾಣುವ ಬಾಲಕಿ ಗೌರಿ ಲಂಕೇಶರ ಕೊರಳನ್ನು ತಬ್ಬಿ ನಿಂತಿರುವ ಆ ಫೋಟೋ ನಿಜವಾಗಲೂ ತುಂಬ ಸುಂದರವಾಗಿತ್ತು. ಲಂಕೇಶರು ಕಾಲವಾದ ಹೊಸತರಲ್ಲಿ ಗೌರಿ ತೇಜಸ್ವಿಯವರ ಕೈಲಿ ಪುನಃ ಪತ್ರಿಕೆಗೆ ಬರೆಸಲು ಮಾಡಿದ ಶತಪ್ರಯತ್ನಗಳ ಕಥೆಯನ್ನೆಲ್ಲಾ ಹೇಳಿದರು. ಯಾವ ಮುಲಾಜಿಗೂ ಒಳಗಾಗದ ತೇಜಸ್ವಿ ‘ಆಗಲ್ಲ’ ಅಂದುಬಿಟ್ಟರಂತೆ.

ಮತ್ತೊಮ್ಮೆ ಗೌರಿಯವರ ಆಫಿಸಲ್ಲಿ ಕುಳಿತಿದ್ದಾಗ ಅಕ್ಕನಿಗೆ ಊಟದ ಕ್ಯಾರಿಯರ್ ತೆಗೆದುಕೊಂಡು ಕವಿತಾ ಲಂಕೇಶ್ ಅಲ್ಲಿಗೆ ಬಂದರು. ಗೌರಿ ನನ್ನ ಪರಿಚಯಿಸಿದಾಗ ‘ಹಾಯ್’ ಎಂದು ನಕ್ಕರು. ಗೌರಿಗಿಂತಲೂ ತುಂಬ ಸರಳ ನಡೆನುಡಿಯ ಹುಡುಗಿ ಇವರು ಅನ್ನಿಸಿತು. “ತೇಜಸ್ವಿಯವರ ತುಕ್ಕೋಜಿ ಕಾದಂಬರಿಯನ್ನು ಸಿನಿಮಾ ಮಾಡಬೇಕೆಂದಿದ್ದೇವೆ. ನೀವು ಅದುನ್ನ ಓದಿದೀರಾ? ಹೇಗಿದೆ ಅದು? ಯಾರೋ ಅದರ ಬಗ್ಗೆ ಹೇಳಿದ್ರು” ಅಂದರು ಕವಿತಾ. ನನಗೆ ವಿಪರೀತ ನಗು ಬಂತು. ಅದು ಕಾದಂಬರಿಯೋ ಸಣ್ಣ ಕತೆಯೋ ಅನ್ನೋ ಸಾಮಾನ್ಯ ಸಾಹಿತ್ಯ ಜ್ಞಾನವೂ ಈಕೆಗಿಲ್ಲವಲ್ಲ, ಸಿನಿಮಾ ಹೇಗೆ ಮಾಡ್ತಾರೋ ಅಂತ ಆಶ್ಚರ್ಯ ಜೊತೆಗೆ! “ಮೇಡಂ ಅದು ಕಾದಂಬರಿಯಲ್ಲ, ತೇಜಸ್ವಿಯವರ ಅಬಚೂರಿನ ಪೋಸ್ಟಾಫೀಸು ಸಂಕಲನದ ಒಂದು ಸಣ್ಣಕತೆ. ತುಂಬ ಚೆನ್ನಾಗಿದೆ” ಅಂದೆ. ಆಮೇಲೆ ಗೌರಿಯವರ ಪುಸ್ತಕದ ಕಪಾಟಿನಲ್ಲಿದ್ದ ತೇಜಸ್ವಿ ಸಮಗ್ರ ಕಥೆಗಳ ಸಂಕಲನದಲ್ಲಿದ್ದ ಆ ಕತೆಯನ್ನು ಹುಡುಕಿಕೊಟ್ಟೆ.
ಓದಿನೋಡುವೆನೆಂದು ಜೊತೆಗೊಯ್ದಿದ್ದ ಕವಿತಾ ಅದನ್ನು ಸಿನಿಮಾ ಮಾಡಿದ ಹಾಗೆ ಕಾಣಲಿಲ್ಲ. ಆ ಅಕ್ಕತಂಗಿಯರ ನಡುವಿನ ಬಾಂಧವ್ಯ ಮಾತ್ರ ಬಹಳ ಬಿಗಿಯಾಗಿತ್ತು. ಇಂದ್ರಜಿತ್ ಇವರೊಂದಿಗೆ ಕಿತ್ತಾಡಿಕೊಂಡು ದೂರಾಗಿದ್ದರು. ಇವರ ಮಾತಿನಲ್ಲಿ ಆ ‘ಜಿತು’ವಿನ ವಿಚಾರ ನುಸುಳದೇ ಇರಲಿಲ್ಲ. ಆದರೆ ಆ ಮಾತಿನಲ್ಲಿ ಕಹಿಭಾವ ತುಂಬಿರಲಿಲ್ಲ.

ಇಂದಿರಾ ಲಂಕೇಶರ ‘ಹುಳಿಮಾವಿನ ಮರ ಮತ್ತು ನಾನು’ ಪುಸ್ತಕದ ಪ್ರೂಫ್ ನೋಡಿ, ಹಿಂದಿರುಗಿಸಲು ಹೋಗಿದ್ದಾಗ ತಮ್ಮ ಅಮ್ಮನ ಬರಹ ಹೇಗಿದೆಯೆಂದು ತೀವ್ರ ಕುತೂಹಲದಿಂದ ಕೇಳಿದ್ಸರು. ಲಂಕೇಶರ ‘ಹುಳಿಮಾವಿನ ಮರ’ಕ್ಕಿಂತಲೂ ಇಂದಿರಾ ಅವರದ್ದು ತುಂಬಾ ಪ್ರಾಮಾಣಿಕವಾದ, ದಿಟ್ಟ ಬರವಣಿಗೆ ಎಂಬ ನನ್ನ ಅಭಿಪ್ರಾಯ ತಿಳಿದು ಖುಷಿಪಟ್ಟರಲ್ಲದೆ, “ಇರಿ, ಅಮ್ಮಂಗೆ ಇದನ್ನೆಲ್ಲಾ ಹೇಳಿ, ಆನಂದಿಸ್ತಾರೆ” ಅಂತ ಹೇಳಿ ಕಾಲ್ ಮಾಡಿ ಕೊಟ್ಟೇಬಿಟ್ಟರು! ಅದೇ ಸಮಯಕ್ಕೆ ದ್ವಿತೀಯ ಪಿ ಯು ಸಿ ಪಠ್ಯಕ್ಕೆ ಲಂಕೇಶರ ‘ಮುಟ್ಟಿಸಿಕೊಂಡವನು’ ಕಥೆ ಆಯ್ದಿದ್ದೆವಾಗಿ, ಅದನ್ನು ಬಳಸಿಕೊಳ್ಳಲು ಅನುಮತಿ ಪತ್ರ ಬೇಡಿದಾಗ, ಇಂದಿರಾ ಅವರು ಮರುದಿವಸವೇ ಒಂದು ಲಕೋಟೆಯಲ್ಲಿ ಅನುಮತಿ ಪತ್ರವಿಟ್ಟು ಹತ್ರಿರದಲ್ಲೇ ಇರುವ ನಮ್ಮ ಕಾಲೇಜಿಗೆ ಕಳಿಸಿಕೊಟ್ಟಿದ್ದರು.

ಲಂಕೇಶರ ಬಹುತೇಕ ಕೃತಿಗಳನ್ನು ಮರುಮುದ್ರಣ ಮಾಡಿದ್ದರಿಂದ ಪ್ರೂಫ್ ನೆಪದಲ್ಲಿ ಅವಷ್ಟನ್ನೂ ಮತ್ತೆ ಮತ್ತೆ ನನ್ನಿಂದ ಓದಿಸಿದ್ದು ಗೌರಿಯವರೇ! ಆದರೆ ಅಪ್ಪನ ಸಾಹಿತ್ಯವೂ ಸೇರಿದಂತೆ ಉಳುದವರ ಸಾಹಿತ್ಯದ ಬಗೆಗಿನ ಆಕೆಯ ತಿಳುವಳಿಕೆ ತೀರಾ ಬಾಲೀಶವಾಗಿತ್ತು ಎಂಬುದು ಹತ್ತಿರದಿಂದ ನನ್ನ ಅನುಭವ. ಸ್ವತಃ ಗೌರಿಯವರಿಗೂ ತಾವೊಬ್ಬ ಪತ್ರಕರ್ತೆಯೇ ಹೊರತು, ಸಾಹಿತಿಯಲ್ಲ ಎಂಬ ಅರಿವಿತ್ತು. ಅವರು ಬರೆದ ಒಂದು ಕೆಟ್ಟ ಪದ್ಯ ಓದಿ ನಾವಿಬ್ಬರೂ ಸಖತ್ ನಗಾಡಿದ್ದೆವು! ಅವರ ಸಂಪಾದಕೀಯ ಬರಹದ ಭಾಷೆಗಳೂ ಕೂಡ ವಿರೋಧಿಗಳನ್ನು ಕೆರಳಿಸುವ ಧೋರಣೆಯುಳ್ಳವಾಗಿರುತ್ತಿದ್ದವು! ತಮ್ಮ ವಿರೋಧಾಭಿಪ್ರಾಯವನ್ನು ಮತ್ತೊಬ್ಬರಿಗೆ ನೋವಾಗದಂತೆ ಹೇಳುವ ಕಲೆ ಅವರಿಗೆ ಒಲಿಯಲೇ ಇಲ್ಲ! ಅಥವಾ ಹಾಗೇ ಬರೆದರೆ ಮಾತ್ರವೇ ತಾನು ರಾಷನಲಿಸ್ಟ್ ಎಂದು ತೋರಿಸಿಕೊಳ್ಳಬಹುದೆಂಬ ಹುಂಬತನವೂ ಇರಬಹುದು. ಅವರ ಒರಟುಭಾಷೆಯ ಬಗ್ಗೆ ತುಂಬ ಸಲ ನಾನು ಮಾತಾಡಿದ್ದೆ.

ಗೌರಿಯವರನ್ನು ನೆನೆದಾಗಲೆಲ್ಲ ಇಂತಹ ಅನೇಕ ನೆನಪುಗಳು ನುಗ್ಗಿಬರುತ್ತವೆ. ಅವರ ಬದುಕು, ಬರಹ, ಹೋರಾಟಗಳ ಕುರಿತ ಚರ್ಚೆಗಳಿಂದ ತುಂಬ ಅಂತರ ಕಾಯ್ದುಕೊಂಡು, ಸಾಹಿತ್ಯಕ ಸಂಬಂಧ ಮಾತ್ರ ಸ್ಥಾಪಿಸಿಕೊಂಡಿದ್ದ ನನಗೆ ಲಂಕೇಶರ ಮೂಲಕ ಮಾತ್ರವೇ ಗೌರಿಯವರನ್ನು ಕಾಣಲು ಸಾಧ್ಯವಾಗಿರಬೇಕು. “ನೋಡಿ ನನ್ನ ಮಗಳು ಬರೆದ ಚಿತ್ರ” ಅಂತ ಮಗುವಿನ ಬಣ್ಣದಾಟಗಳನ್ನು ತಂದು ತಾವು ಕುಳಿತುಕೊಳ್ಳುತ್ತಿದ್ದ ಚೇರಿನ ಹಿಂಭಾಗದ ಗೋಡೆಗೆಲ್ಲಾ ಅಂಟಿಸಿಕೊಂಡು, ಬಂದವರಿಗೆಲ್ಲಾ ತೋರಿಸಿ ಸಂತೋಷಪಡುಚ ಗೌರಿ ಕೂಡ ಪುಟ್ಟ ಮಗುವಿನಂತೆಯೇ ಕಂಡಿದ್ದುಂಟು. ಅವರು ತುಂಬ ಹಣಕಾಸಿನ ಸಮಸ್ಯೆಯಲ್ಲಿದ್ದರೆಂದು ಕೇಳಿದ ನೆನಪು. “ಆಟೋ ಚಾರ್ಜ್ ಕೂಡ ನೀವು ಇಸ್ಕಳ್ಳಲ್ಲವಲ್ರಿ” ಅಂತಾ ಆಕ್ಷೇಪಿಸುತ್ತಿದ್ದರು. “ಲಂಕೇಶರ ಮೇಲಿನ ಪ್ರೀತಿಗೆ ಮೇಡಂ” ನಾನು ಕರಡು ತಿದ್ದಿಕೊಡೋದು ಅಂತಂದಿದ್ದಕ್ಕೆ ನಗುತ್ತಾ ಕೈತುಂಬಾ ಪುಸ್ತಕ ಕೊಟ್ಟು ಕಳಿಸುತ್ತಿದ್ದರು. ಅವರು ಕೊಕ್ಕರೆಕಾಲಿನ ಕನ್ನಡದ ಅ ಹಸ್ತಾಕ್ಷರವಿರುವ ಅನೇಕ ಕೃತಿಗಳು ಈಗ ಅವರ ನೆನಪನ್ನು ಮರುಕಳಿಸುತ್ತಿರುತ್ತವೆ.

ಒಮ್ಮೆ ಲಂಕೇಶರ ಹುಟ್ಟುಹಬ್ಬವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದರು. “ಮರೆಯದೇ ಬನ್ರಿ, ವೇದಿಕೆಗೆ ಕರೆದು ಒಂದು ಸೆಟ್ ಪುಸ್ತಕ ಕೊಡ್ತೀನಿ, ಎಷ್ಟು ಹೆಲ್ಪ್ ಮಾಡಿದೀರ” ಅಂದಿದ್ದರು. ಒಟ್ಟಿಗೇ ಎಂಟು ಕೃತಿಗಳ ಮರುಮುದ್ರಣದ ಪ್ರೂಫ್ ನೋಡಿ ಕೊಟ್ಟಿದ್ದೆ. ಆ ಬಗ್ಗೆ ಸಂಪಾದಕೀಯದಲ್ಲೇ ಕೃತಜ್ಞತೆ ಹೇಳಿದ್ದರು. ಆದರೂ ನೂರಾರು ಜನರೆದುರು ಹೊಗಳಿ ಪುಸ್ತಕ ಕೊಡುತ್ತಾರಲ್ಲ ಅಂತ ಯಲ್ಲಪ್ಪನವರ ಜೊತೆ ಹೋದರೆ, ಮಾತಿನಲ್ಲಿ ಹೆಸರು ಪ್ರಸ್ತಾಪಿಸಿದರೆ ಹೊರತು, ಪುಸ್ತಕಗಳನ್ನು ಕೊಡಲೇ ಇಲ್ಲ! ಮರುದಿನ ಫೋನ್ ಮಾಡಿ “ಅಯ್ಯೋ ನಿಮ್ಮೊಬ್ಬರಿಗೆ ಕೊಟ್ಟಿದ್ದರೆ, ಅಲ್ಲಿದ್ದವ್ರಿಗೆಲ್ಲಾ ಕೊಟ್ಟು ಬೋಳುಸ್ಕಂಬೇಕಿತ್ತು ಕಣ್ರೀ.. ಸಾರಿ. ಕಾಲೇಜಿಗೆ ಕೊಟ್ಟು ಕಳುಸ್ತೀನಿ ಇರಿ” ಅಂದವರೆ ಪುಸ್ತಕಗಳ ಕಟ್ಟನ್ನು ಅರ್ಧಗಂಟೆಯೊಳಗೆ ಕಳಿಸಿಕೊಟ್ಟಿದ್ದರು ಕೂಡ. ಇದು ಅವರ ರೀತಿ!
ಇಂತಹ ಅನೇಕ ನೆನಪುಗಳು ಗೌರಿಯವರೊಂದಿಗೆ ಸಾಲು ಸಾಲಾಗಿ ಬರುವುದಕ್ಕೆ ನಮ್ಮ ಪ್ರವರ ಕೊಟ್ಟೂರು ಬರೆದ ಕವಿತೆ ಕಾರಣವಾಯ್ತು. ಈ ಹುಡುಗನ ಪದ್ಯವನ್ನು ಖಂಡಿತಾ ನೀವೆಲ್ಲ ಓದಿ ಸುಖಿಸಬೇಕು. ಮತ್ತು ಈ ನೆನಪುಗಳನ್ನು ಫೋನಿನಲ್ಲಿ ಕೇಳಿಸಿಕೊಂಡು ಬರೀರಿ ಗುರುಗಳೇ ಅಂತ ಒತ್ತಾಯಿಸಿದ್ದು ಡಾ ಕುಮಾರಸ್ವಾಮಿ ಬೆಜ್ಜಿಹಳ್ಳಿ. ಇಬ್ಬರಿಗೂ ನನ್ನ ನೆನಕೆಗಳು.

ಲೇಖಕರು-ಡಾ ಎಚ್ ಎಸ್ ಸತ್ಯನಾರಾಯಣ