ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚಕ್ರವರ್ತಿ ಸೂಲಿಬೆಲೆ ವಿಷಯದ ಬಗ್ಗೆ……

ವಿವೇಕಾನಂದ ಎಚ್.ಕೆ.
ಇತ್ತೀಚಿನ ಬರಹಗಳು: ವಿವೇಕಾನಂದ ಎಚ್.ಕೆ. (ಎಲ್ಲವನ್ನು ಓದಿ)

ಚಕ್ರವರ್ತಿ ಸೂಲಿಬೆಲೆ ಎಂಬ ದೇಶಭಕ್ತ ಯುವಕರ ಆಕರ್ಷಣೆಯ ವ್ಯಕ್ತಿತ್ವ ಮತ್ತು………

ಮಿಥುನ್‌ ಚಕ್ರವರ್ತಿ ಎಂಬ ಹುಡುಗ ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರೇರಿತನಾಗಿ ದೇಶದ ಜನರಲ್ಲಿ ದೇಶಭಕ್ತಿಯ ಜಾಗೃತಿ ಮೂಡಿಸಲು ಶ್ರಮಿಸುತ್ತಾ ಇಂದು ಒಂದು ಹಂತದ ನಾಯಕರಾಗಿ ಬೆಳೆದಿರುವುದು ಅಭಿನಂದನೀಯ ಮತ್ತು ಸಂತೋಷ ಪಡುವ ವಿಚಾರ.

ಎಷ್ಟೋ ಪ್ರತಿಭಾವಂತ ಯುವಕರು ಇನ್ನೆಲ್ಲೋ ತಮ್ಮದೇ ಪ್ರಪಂಚದಲ್ಲಿ ಮುಳುಗಿ ಸಾಮಾಜಿಕ ಜವಾಬ್ದಾರಿ ಮರೆತಿರುವಾಗ ಮಿಥುನ್‌ ಎಂಬ ಯುವಕ ತನ್ನ ತಿಳಿವಳಿಕೆಯನ್ನು ಸಮಾಜದಲ್ಲಿ ನೇರವಾಗಿ ಹಂಚಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ.

ಭಾರತದ ಯಾರೇ ಆಗಲಿ ಬೆಳೆಯುವುದು ಎಂದರೆ,
ಈ ಮಣ್ಣಿನ, ಈ ಸಮಾಜದ, ಈ ದೇಶದ, ಈ ಪ್ರಜಾಪ್ರಭುತ್ವ ವ್ಯವಸ್ಥೆಯ ಮತ್ತು ಒಟ್ಟು ಮಾನವೀಯ ಪ್ರಜ್ಞೆಯ ಮೌಲ್ಯಗಳನ್ನು ಎತ್ತಿಹಿಡಿದು ಶಾಂತಿ ಸೌಹಾರ್ದತೆ ಉಂಟುಮಾಡಿ, ಅಭಿವೃದ್ಧಿ ಸಾಧಿಸಿ ಜನರ ಜೀವನಮಟ್ಟ ಸುಧಾರಿಸುವುದು ಮತ್ತು ನೆಮ್ಮದಿಯ ವಾತಾವರಣ ಕಲ್ಪಿಸುವುದೇ ಆಗಿರಬೇಕೆಂಬುದು ಸಾಮಾನ್ಯರ ಆಶಯ. ಅದೇ ವ್ಯಕ್ತಿತ್ವ ಬೆಳೆಯುವ ಸರಿಯಾದ ಮಾರ್ಗ.

ಎಲ್ಲರಿಗೂ ಗೊತ್ತಿರುವ ವಿಷಯವೆಂದರೆ ಮನುಷ್ಯ ಹುಟ್ಟಿದ ತಕ್ಷಣ ಅನೇಕ ಪೂರ್ವ ನಿರ್ಧಾರಿತ ಸಂಕೋಲೆಗಳ ಬಂಧಿ. ಅದರಲ್ಲೂ ಆಧುನಿಕ ಮಗು ಅತ್ಯಂತ ಕಠಿಣ ಕಬ್ಬಿಣದ ಗೋಡೆಗಳಂತ ಜಾತಿ ಧರ್ಮ ಭಾಷೆ ಪ್ರದೇಶವೂ ಸೇರಿ ಅನೇಕ ಅಡೆತಡೆಗಳು ನಡುವೆ ತೆವಳಲು ಪ್ರಾರಂಭಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿಯೇ ನಿಜವಾದ ಮಾನವೀಯ ಪ್ರಜ್ಞೆಯ ಜನರ ಅವಶ್ಯಕತೆ ಇರುವುದು. ಕೆಡವುವ ದುಷ್ಟ ಶಕ್ತಿಗಳ ವಿರುದ್ಧ ಕಟ್ಟುವ ಮನಸ್ಸುಗಳ ಪ್ರವೇಶ ಆಗಬೇಕಾಗಿರುವುದು ಇಲ್ಲಿಯೇ.

ನಮ್ಮ ಧರ್ಮ, ನಮ್ಮ ಸಂಸ್ಕೃತಿ, ನಮ್ಮ ಸಂಪ್ರದಾಯ, ನಮ್ಮ ಅನುಭವ ನಮಗೆ ಕಲಿಸಿರುವುದು ಪ್ರೀತಿ ಕರುಣೆ ಕ್ಷಮಾಗುಣಗಳೇ ದ್ವೇಷ ಅಸೂಯೆ ಸೇಡಿಗಿಂತ ಪರಿಣಾಮಕಾರಿ ಮತ್ತು ಅತ್ಯುತ್ತಮ ಮಾನವೀಯ ಮೌಲ್ಯಗಳು.

ಈ ಹಿನ್ನೆಲೆಯಲ್ಲಿ ಚಕ್ರವರ್ತಿ ಸೂಲಿಬೆಲೆಯವರನ್ನು ವಿಮರ್ಶೆಗೆ ಒಳಪಡಿಸಬಹುದು.

ಕಳೆದ ಹಲವಾರು ವರ್ಷಗಳಿಂದ ಅವರು ಚಿಂತಕ, ವಾಗ್ಮಿ, ಪ್ರವಚನಕಾರ, ಸಮಾಜ ಸೇವಕ ಮುಂತಾದ ಗುಣ ವಿಶೇಷಗಳಿಂದ ಕರೆಯಲ್ಪಡುತ್ತಿದ್ದು ಅತ್ಯುತ್ತಮ ಭಾಷಣಕಾರ ಎಂದು ಹೆಸರಾಗಿದ್ದಾರೆ ಮತ್ತು ಸಮಾಧಾನಕರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅವರ ಭಾಷಣದ ತುಣುಕುಗಳು ಎಲ್ಲಾ ಮಾಧ್ಯಮ ಜಾಲತಾಣಗಳಲ್ಲಿ ನೋಡಬಹುದು.

ಅವರು ನಿಷ್ಪಕ್ಷಪಾತಿಯೇ?
ದೇಶ ನಿಷ್ಠರೇ ಅಥವಾ ಧರ್ಮ ನಿಷ್ಠರೇ ? ಭಾರತೀಯತೆಯ ಪ್ರತಿಪಾದಕರೇ ಅಥವಾ ಹಿಂದುತ್ವದ ಪ್ರತಪಾದಕರೆ ?
ಅವರು ಭಾಗವಹಿಸುವ ವೇದಿಕೆಗಳು ಮತ್ತು ಅವರ ಸಂಪರ್ಕಗಳು ಕೇವಲ ಕೆಲವು ಸಂಘಟನೆ ಮತ್ತು ಸಿದ್ದಾಂತಗಳಿಗೆ ಮೀಸಲೇ ಅಥವಾ ಎಲ್ಲಾ ವರ್ಗಗಳನ್ನು ಅವರು ಪ್ರತಿನಿಧಿಸುತ್ತಾರೆಯೇ ?
ದ್ವೇಷದ ಭಾಷಣ ಮಾಡುತ್ತಾರೆಯೇ ಅಥವಾ ಪ್ರೀತಿಯ ಭಾಷಣ ಮಾಡುತ್ತಾರೆಯೇ ?
ಸಂಕುಚಿತ ಚಿಂತನೆಯೇ ಅಥವಾ ಸಮಗ್ರ ಚಿಂತನೆಯೇ ?
ಮಾತುಗಳಲ್ಲಿ ಸ್ವಾಭಾವಿಕತೆ ಇದೆಯೇ ಅಥವಾ ಕೃತಕತೆಯೇ ? ಅವರ ಭಾಷಣದಲ್ಲಿ ಸತ್ಯ ಮತ್ತು ಸುಳ್ಳಿನ ನಡುವೆ ಎಷ್ಟು ಅಂತರವಿದೆ ? ಮಾತು ಮತ್ತು ಕೃತಿಯ ನಡುವೆ ಎಷ್ಟು ಸಾಮ್ಯತೆ ಇದೆ ?
ಎಲ್ಲಾ ಕಾಲಕ್ಕೂ ಎಲ್ಲಾ ಸಂದರ್ಭಗಳಲ್ಲೂ ಅವರ ನ್ಯಾಯದ ದಂಡ ಸಮಾನಾಂತರವಾಗಿ ಇರುತ್ತದೆಯೇ ಅಥವಾ ಅನುಕೂಲಕ್ಕೆ ತಕ್ಕಂತೆ ವಾಲುತ್ತದೆಯೇ ?
ಈ ಪ್ರಶ್ನೆಗಳಿಗೆ ನಾವು ಪ್ರಬುದ್ಧ ಉತ್ತರ ಕಂಡುಕೊಳ್ಳಲು ಸಾಧ್ಯವಾದರೆ ಚಕ್ರವರ್ತಿ ಸೂಲಿಬೆಲೆಯವರ ಬಗ್ಗೆ ನೀವು ಒಂದು ಅಭಿಪ್ರಾಯಕ್ಕೆ ಬರಬಹುದು.

ಅದಕ್ಕೂ ಮೊದಲು ಇನ್ನೊಂದಿಷ್ಟು ಮಾಹಿತಿ ನಿಮ್ಮ ಗಮನದಲ್ಲಿರಲಿ.
ಇಂಡಿಯಾದ ನಿಜವಾದ ಹುಟ್ಟನ್ನು 1950 ಜನವರಿ 26 ರಿಂದಲೇ ನಾವು ಪರಿಗಣಿಸಬೇಕು. ಅದಕ್ಕೂ ಹಿಂದಿನ ಇತಿಹಾಸವನ್ನು ಅಸ್ತಿತ್ವಕ್ಕಾಗಿ ಹೋರಾಟ ಎಂದೇ ಪರಿಗಣಿಸಬೇಕು. ಇಲ್ಲದಿದ್ದರೆ ಆಗ ಉದ್ಭವಿಸುವ ಪ್ರಶ್ನೆಗಳಿಗೆ ಉತ್ತರಿಸಲು ನಂದ – ಮೌರ್ಯರಿಂದ ಬ್ರಿಟೀಷರವರೆಗೆ ಯಾರೂ ಜವಾಬ್ದಾರರಲ್ಲ. ಅವರು ಸಾಮ್ರಾಜ್ಯ ಶಾಹಿಗಳು ಮಾತ್ರ. ಬಲವೇ ನ್ಯಾಯ ಸಿದ್ದಾಂತದ ಪ್ರತಿಪಾದಕರವರು.
1950 ರ ಗಣರಾಜ್ಯಗಳ ಒಕ್ಕೂಟ ವ್ಯವಸ್ಥೆಯೇ ನಮ್ಮ ನಿಜವಾದ ಭಾರತ.

ಸುಮಾರು 74 ವರ್ಷಗಳ ಈ ದೇಶದಲ್ಲಿ ಒಂದಿಷ್ಟು ಅಭಿವೃದ್ಧಿಯೂ, ಇನ್ನೊಂದಿಷ್ಟು ವಿನಾಶವೂ ಆಗಿದೆ. ಅದಕ್ಕೆ ಎಲ್ಲಾ ರಾಜಕೀಯ ಪಕ್ಷಗಳ ಕೊಡುಗೆಯೂ ಇದೆ. ಯಾವುದೋ ಒಂದು ಪಕ್ಷವನ್ನು ಅಥವಾ ವ್ಯಕ್ತಿಯನ್ನು ಗುರಿಯಾಗಿಸಿ ಮಾತನಾಡುವುದು ಉಚಿತವಲ್ಲ.

ಚಕ್ರವರ್ತಿ ಸೂಲಿಬೆಲೆ ಒಂದು ರಾಜಕೀಯ ಪಕ್ಷ, ಒಂದು ಸಂಘಟನೆ, ಒಂದು ಧರ್ಮ ಮತ್ತು ಒಂದೇ ದಿಕ್ಕಿನಲ್ಲಿ ಮಾತನಾಡುತ್ತಿರುವುದು ಬಹಿರಂಗವಾಗಿ ಕಂಡುಬರುತ್ತದೆ. ಅಷ್ಟೇ ಅಲ್ಲ ಅದಕ್ಕೆ ಭಿನ್ನ ಚಿಂತನೆಗಳ ವಿರುದ್ಧ ದ್ವೇಷ ಕಾರುವ ಭಾಷಣಗಳನ್ನು ಮಾಡುತ್ತಾರೆ. ಹೊಗಳಿಕೆ ಅಥವಾ ತೆಗಳಿಕೆಯ ಭರದಲ್ಲಿ ಅತಿರೇಕದ ಬಾಲಿಶ ಮತ್ತು ವಾಸ್ತವಕ್ಕೆ ದೂರವಾದ ಮಾತುಗಳನ್ನು ಆಡುತ್ತಾರೆ. ಸಾಧಾರಣ ರಾಜಕಾರಣಿಗಳಂತೆ ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ಪಕ್ಷವನ್ನು ದೇಶದ್ರೋಹಿ ಪಕ್ಷಗಳಂತೆ ಬಿಂಬಿಸುತ್ತಾರೆ. ( ಒಂದು ದೇಶವನ್ನು ಸುಮಾರು 60 ವರ್ಷಗಳಷ್ಟು ಆಡಳಿತ ನಡೆಸಿದ ಪಕ್ಷವನ್ನು ದೇಶದ್ರೋಹಿ ಎನ್ನುವುದು ದ್ವೇಷದ ಪರಮಾವಧಿ.) ಭ್ರಷ್ಟ ಮತ್ತು ಅಸಮರ್ಥ ಪಕ್ಷ ಎಂದು ಬೇಕಾದರೆ ಕರೆಯಬಹುದು. ಒಂದು ಪಕ್ಷವನ್ನು ಹೊಗಳಿ ಇನ್ನೊಂದು ಪಕ್ಷವನ್ನು ಟೀಕಿಸುವುದು ಸಮಗ್ರ ಚಿಂತನೆಯಾಗುವುದಿಲ್ಲ.

ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮದ ವಿರುದ್ಧ ಅವರಿಗಿರುವ ಆಕ್ರೋಶ ಮುಚ್ಚಿಡುವಂತದ್ದು ಏನೂ ಇಲ್ಲ. ಚಿಕ್ಕ ಮಕ್ಕಳ ಟಿಟ್ ಫಾರ್ ಟ್ಯಾಟ್ ರೀತಿ ನಮ್ಮ ಧರ್ಮದ ಹುಳುಕುಗಳನ್ನು ಮುಚ್ಚಲು ಇನ್ನೊಂದು ಧರ್ಮದ ಹುಳುಕುಗಳನ್ನು ಎತ್ತಿ ತೋರಿಸುವ ಎಳಸು ಪಲಾಯನ ವಾದಕ್ಕೆ ಶರಣಾಗುತ್ತಾರೆ. ಇತರರಿಗಿಂತ ನಾವೇ ಶ್ರೇಷ್ಠ ಸಿದ್ದಾಂತವನ್ನೇ ಪ್ರತಿಪಾದಿಸುತ್ತಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಭಾರತದ ಇತಿಹಾಸವನ್ನು ತಮ್ಮ ವಾಕ್ ಚಾತುರ್ಯ ಮತ್ತು ಜನರ ಭಾವನೆಗಳ ಜನಪ್ರಿಯತೆಯನ್ನು ಆಧಿರಿಸಿ ತಿರುಚಿ ತಿರುಚಿ ಹೇಳುತ್ತಾರೆ. ಘಟನೆಗಳು ಸುತ್ತ ಇರಬಹುದಾದ ಅನುಮಾನಗಳನ್ನು ತಮ್ಮ ವಾದದ ಸಮರ್ಥನೆಯಾಗಿ ಅತ್ಯಂತ ಕೆಟ್ಟ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಾರೆ. ಸಾರ್ವಕರ್, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಭಾಯ್ ಪಟೇಲ್, ಲಾಲ್ ಬಹಾದ್ದೂರ್ ಶಾಸ್ತ್ರಿ, ನರೇಂದ್ರ ಮೋದಿ ಮುಂತಾದವರ ವ್ಯಕ್ತಿತ್ವಗಳನ್ನು ಅವಶ್ಯಕತೆಗಿಂತ ಹೆಚ್ಚು ವಿಜೃಂಭಿಸಿ ಅವರ ಸಮಕಾಲೀನ ಗಾಂಧಿ ನೆಹರು ಮುಂತಾದವರನ್ನು ಕೆಳಮಟ್ಟಕ್ಕೆ ಇಳಿಸುತ್ತಾರೆ. ಸಮಗ್ರ ದೃಷ್ಟಿಯ ಕೊರತೆಯಿಂದ ಇದು ಉದ್ದೇಶ ಪೂರ್ವಕ ನಡೆಯಾಗಿರುತ್ತದೆ. ಅಭಿಪ್ರಾಯ ಸ್ವಾತಂತ್ರ್ಯ ಇದೆಯಾದರು ಇತಿಹಾಸವನ್ನು ನಮ್ಮ ಲಾಭಕ್ಕೆ ತಕ್ಕಂತೆ ಅರ್ಥೈಸುವುದು ಒಳ್ಳೆಯದಲ್ಲ. ದಾಖಲೆಗಳು ಮಾತ್ರ ಇತಿಹಾಸವಲ್ಲ. ಅದರ ಒಳಗೆ ಅಡಗಿರುವ ಸತ್ಯವನ್ನು ಸಹ ಸೂಕ್ಷ್ಮವಾಗಿ ಗಮನಿಸಬೇಕು.

ಅವರ ಅನೇಕ ನಡೆಗಳು ಸೈನಿಕರ ಜೀವ ರಕ್ಷಣೆಗಿಂತ ಅವರು ಸಾವುಗಳನ್ನು ಹುತಾತ್ಮ ಪಟ್ಟಕ್ಕೇರಿಸಿ ಅದನ್ನು ಸಂಭ್ರಮಿಸಲು ಕಾಯುತ್ತಿರುವಂತೆ ಭಾಸವಾಗುತ್ತದೆ. ಕಾರಣ ಸೈನಿಕರ ಬಗ್ಗೆ ಅವರದು ಅತಿರೇಕದ ಪ್ರತಿಕ್ರಿಯೆ. ಸೈನಿಕರ ಬಗ್ಗೆ ದೇಶದ ಪ್ರಜೆಗಳಿಗೆ ವಿಶೇಷ ಗೌರವ ಕೊಡುವ ಬಗ್ಗೆ ಯಾರೂ ಹೇಳಿಕೊಡಬೇಕಿಲ್ಲ. ಅದು ಅವರ ಸಹಜ ಗುಣವಾಗಿದೆ.

ಯುವಕರಲ್ಲಿ ದೇಶಭಕ್ತಿಯನ್ನು ಒಂದು ತೋರಿಕೆಯ ಅಂಶವಾಗಿ ಪರಿವರ್ತಿಸಿದ ಅಪಕೀರ್ತಿಯೂ ಚಕ್ರವರ್ತಿ ಸೂಲಿಬೆಲೆಯವರಿಗೆ ಸೇರುತ್ತದೆ. ದೇಶಭಕ್ತಿ ಮನಸ್ಸು ಹೃದಯಗಳಲ್ಲಿ ಅಡಗಿರುವ ಒಂದು ಸ್ವಾಭಾವಿಕ ಅಭಿವ್ಯಕ್ತಿ. ಅದನ್ನು ಮುಖವಾಡವಾಗಿ ಪರಿವರ್ತಿಸಿ ಉಪಯೋಗಿಸುವ ಅವಶ್ಯಕತೆ ಇಲ್ಲ.

ಒಂದು ಪಕ್ಷದ ವಕ್ತಾರರಂತೆ ಮಾತನಾಡುವ ಸೀಮಿತ ವ್ಯಕ್ತಿತ್ವವನ್ನು ಅವರು ಬೆಳೆಸಿಕೊಂಡಿದ್ದು ಒಂದು ದುರಂತ. ಸ್ವಾಮಿ ವಿವೇಕಾನಂದರು ಇಡೀ ದೇಶದ ಸಾಂಸ್ಕೃತಿಕ ರಾಯಭಾರಿಯಾಗಿದ್ದರು. ಹಿಂದು ಧರ್ಮದ ಹುಳುಕುಗಳನ್ನು ಸಹ ಬಹಿರಂಗವಾಗಿ ಟೀಕಿಸಲು ಹಿಂಜರಿಯುತ್ತಿರಲಿಲ್ಲ. ಅದರ ಅರ್ಥ ಅವರು ಹಿಂದೂ ವಿರೋಧಿಯಲ್ಲ. ಧರ್ಮವನ್ನು ಸರಿಯಾಗಿ ಅರ್ಥೈಸಿ ಅದನ್ನು ವಿಶ್ವ ಮಾನ್ಯ ಮಾಡುವ ಮಹತ್ವಾಕಾಂಕ್ಷೆ ಹೊಂದಿದ್ದರು. ಚಕ್ರವರ್ತಿಯವರು ಇದನ್ನು ಗಮನಿಸಬೇಕು.

ಏನೇ ಆಗಲಿ, ಇತ್ತೀಚೆಗೆ ಅವರ ವಿರುದ್ಧ ನಡೆದ ಕೆಟ್ಟ ರೀತಿಯ ಟ್ರೋಲ್ ಗಳನ್ನು ಒಪ್ಪಲಾಗದು. ಅದನ್ನು ಖಂಡಿಸಬೇಕು. ವಿಚಾರಗಳನ್ನು ವಿಚಾರಗಳಿಂದ ಎದುರಿಸಿಬೇಕೆ ಹೊರತು ಕೀಳು ಮಟ್ಟದ ತಂತ್ರಗಳು ಮೊರೆ ಹೋಗುವುದು ಸಭ್ಯ ನಾಗರಿಕ ಸಮಾಜದ ಲಕ್ಷಣವಲ್ಲ. ನಮ್ಮ ನಡವಳಿಕೆಯೇ ನಿಜವಾದ ದೇಶಭಕ್ತಿಯೇ ಹೊರತು ಮಾತುಗಳಲ್ಲ. ಅದು ಚಕ್ರವರ್ತಿಯವರಿಗೂ ಅನ್ವಯ.

ಒಟ್ಟಿನಲ್ಲಿ ನಮ್ಮ ನಡುವೆ ಬೆಳೆಯುತ್ತಿರುವ ಒಬ್ಬ ಧಾರ್ಮಿಕ ಚಿಂತನೆಯ ಉತ್ತಮ ಮಾತುಗಾರ ಚಕ್ರವರ್ತಿ ಸೂಲಿಬೆಲೆ ಮುಂದಿನ ದಿನಗಳಲ್ಲಿ ಆತ್ಮಾವಲೋಕನ ಮಾಡಿಕೊಂಡು ಒಂದು ವೇಳೆ ಅವರ ಚಿಂತನೆಗಳಲ್ಲಿ ಅವರಿಗೇ ಏನಾದರೂ ಕುಂದುಕೊರತೆ ಕಂಡುಬಂದರೆ ಅದನ್ನು ಸರಿಪಡಿಸಿಕೊಂಡು ಮುನ್ನಡೆಯಲಿ, ಕೆಡವುವ ಕ್ರಿಯೆಗಿಂತ ಕಟ್ಟುವ ಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿ, ಕುರುಡು ಮುಸ್ಲಿಂ ಮತ್ತು ಕ್ರಿಶ್ಚಿಯನ್ ದ್ವೇಷ ಬಿಟ್ಟು ರಚನಾತ್ಮಕ ಮತ್ತು ಆರೋಗ್ಯಕರ ಟೀಕೆಗಳನ್ನು ಮಾಡಲಿ, ದೇಶ ಮತ್ತು ಸಮಾಜದ ಅಭಿವೃದ್ಧಿಯಲ್ಲಿ ಭಾಗಿಯಾಗಲಿ ಎಂದು ಆಶಿಸುತ್ತಾ………..

ಚಕ್ರವರ್ತಿ ಸೂಲಿಬೆಲೆಯವರೆ,
ಅಂದು ಬಾಬರ್ ರಾಮ ಮಂದಿರ ಕೆಡವಿ ಮಸೀದಿ ಕಟ್ಟಿಸಿದ, ಇಂದು ಮಸೀದಿ ಕೆಡವಿ ರಾಮ ಮಂದಿರ ಕಟ್ಟಲಾಯಿತು. ಮುಂದೆ…..

ಇದಕ್ಕೆ ಕೊನೆಯಿಲ್ಲ. ಇಟ್ಟಿಗೆ ಪವಿತ್ರವಲ್ಲ. ಮನಸ್ಸು ಪವಿತ್ರ. ಪ್ರೀತಿಯಿಂದ ದೇಶ ಕಟ್ಟೋಣ ದ್ವೇಷದಿಂದಲ್ಲ. ಭಯೋತ್ಪಾದಕರನ್ನು ಸಂವಿಧಾನದ ಬಲದಿಂದ ನಾಶ ಮಾಡೋಣ, ಕತ್ತಿ ಮಚ್ಚು ತ್ರಿಶೂಲಗಳಿಂದ ಅಲ್ಲ. ಇದು ಭಾರತ.
ವಿಶ್ವಗುರು ಮತ್ತು ಆಧ್ಯಾತ್ಮದ ತವರೂರು. ಅದನ್ನು ಅಜ್ಞಾನದಿಂದ ನಮ್ಮ ಸ್ವಾರ್ಥಕ್ಕಾಗಿ ಬಲಿ ಕೊಡದಿರೋಣ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಹೆಚ್.ಕೆ.