ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ದೇಹ ಮತ್ತು ಮನಸ್ಸು ನಡುವೆ ಸಂಕ ಉಸಿರು

ಮಹಾದೇವ ಕಾನತ್ತಿಲ
ಇತ್ತೀಚಿನ ಬರಹಗಳು: ಮಹಾದೇವ ಕಾನತ್ತಿಲ (ಎಲ್ಲವನ್ನು ಓದಿ)

ಇರುವೆ – ನಡಿಗೆ

ದೇಹ ತುಂಬಾ ಜೀವನಾಡಿ
ತುಂಬಿ ಹರಿವ ಜೀವನದಿ
ಕ್ರಮ ಕ್ರಮಣ ಕರ್ಮ ಸೂತ್ರ
ಉಸಿರು ಮನಸ ನಾಡಿಗ

“ಮಾದೇವ ಮಾಮಾ!
ಕಳೆದ ತಿಂಗಳು ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿವಸ ಇತ್ತು!. ಯೋಗಾಭ್ಯಾಸ ಮಾಡಿಸಿದರು. ಕೊನೆಗೆ ಪ್ರಾಣಾಯಾಮ ಕೂಡಾ ಮಾಡಿಸಿದರು.
ಮಾಮಾ, ಉಸಿರಾಟದ ವ್ಯಾಯಾಮಕ್ಕೆ ಪ್ರಾಣಾಯಾಮ ಅಂತ ಯಾಕೆ ಹೇಳ್ತಾರೆ?. ಇದನ್ನು ಆಂಗ್ಲ ಭಾಷೆಯಲ್ಲಿ ಬ್ರೀದಿಂಗ್ ಎಕ್ಸರ್ಸೈಸ್ ಅಂತಾರಲ್ವಾ ಮಾಮಾ?..”

” ಹೇಯ್ ಪುಟ್ಟೂ! ಅಂತೂ ನೀನೂ ಪ್ರಾಣಾಯಾಮ ಮಾಡಿದೆ ಅನ್ನು!. ಯಾವಾಗ ನೋಡಿದ್ರೂ ಭೌತಶಾಸ್ತ್ರದ ದೃಷ್ಟಿಯಲ್ಲಿ ಸರಿಯೆನಿಸಿದರೆ ಮಾತ್ರ ಅದನ್ನು ನಂಬುವೆ ಅನ್ತಿದ್ದೆ!. “

” ಹೌದು ಮಾಮಾ, ಶಾಲೆಯಲ್ಲಿ ಎಲ್ರೂ ಮಾಡುವಾಗ ನಾನು ಮಾಡದಿದ್ರೆ ಹೇಗೆ?. ಆದರೂ ಈ ಬ್ರೀದಿಂಗ್ ಎಕ್ಸರ್ಸೈಸ್ ಗೆ ಅಷ್ಟೊಂದು ಪ್ರಾಮುಖ್ಯತೆ ಯಾಕೆ ಮಾಮಾ?”

” ಅನು ಪುಟ್ಟೂ, ಭೌತಶಾಸ್ತ್ರ ಎಂಬುದು ಒಂದು ಫಿಕ್ಸ್‌ಡ್ ಐಡಿಯಾ ಅಲ್ಲ. ಅನುಭವಕ್ಕೆ ಬರುವ ವಿದ್ಯಮಾನಗಳನ್ನು ಇದುವರೆಗಿನ ಸಿದ್ಧಾಂತ, ಹೈಪಾಥಿಸಿಸ್ ಗಳ ಆಧಾರದಲ್ಲಿ, ಅರ್ಥ ಮಾಡಿಕೊಳ್ಳುವ ವಿಧಾನ ಅಷ್ಟೇ. ಹೊಸ ವಿದ್ಯಮಾನಗಳನ್ನು ಇದುವರೆಗಿನ ಸಿದ್ಧಾಂತ ದ ಮೂಲಕ ಅರ್ಥಮಾಡಿಕೊಳ್ಳಲು ಸಾಧ್ಯವಾಗದೇ ಇದ್ದರೆ, ಹೊಸ ಸಿದ್ಧಾಂತವನ್ನು ಕಂಡುಹುಡುಕಿ, ಅಗತ್ಯಬಿದ್ದರೆ ಹೊಸ ಹೈಪಾಥಿಸಿಸ್ ಸೃಷ್ಟಿಸಿ ಅರಿವನ್ನು ತಿಳಿಗೊಳಿಸುವ ಪ್ರಯತ್ನ ಭೌತಶಾಸ್ತ್ರ ಮಾಡುತ್ತದೆ. ಅದು ವಿಜ್ಞಾನದ ಮೂಲ ಸಾರ.
ಈಗ ಒಂದು ಪ್ರಶ್ನೆ ಕೇಳಲೇ ಅನೂ?”

” ಪ್ರಶ್ನೆ ಕೇಳು ಮಾಮಾ, ನಾನು ತಪ್ಪು ಉತ್ತರ ಹೇಳಿದರೆ ಕೋಪ ಮಾಡ್ಬಾರ್ದು..”

” ಕೋಪ ಯಾಕೆ ಪುಟ್ಟೂ, ಉತ್ತರ ಸರಿ, ತಪ್ಪು ಎಂದು ಬಣ್ಣ ಹಚ್ಚುವ ಕೆಲಸ ಮಾಮ ಮಾಡೋದಿಲ್ಲ, ನಿಂಗೊತ್ತು!. ವಿಜ್ಞಾನದಲ್ಲಿ ಜಿಜ್ಞಾಸೆಯೇ ಮುಖ್ಯ. ಜಿಜ್ಞಾಸೆಯಿಂದ ದೊರೆತ ನವನೀತ ಹೀಗೇ ಇರಬೇಕು ಎಂಬ ಹಟ ಯಾಕೆ? ಅಲ್ವಾ.

ಈಗ ಪ್ರಶ್ನೆ ಕೇಳುವೆ.
ನಿನಗೆ ಸಡನ್ ಆಗಿ ಯಾವುದೋ ಕಾರಣಕ್ಕೆ, ತುಂಬಾ ಬೇಜಾರಾದಾಗ ನಿನ್ನ ಉಸಿರಾಟದ ಪ್ಯಾಟರ್ನ್ ಗಮನಿಸಿರುವೆಯಾ?”

” ಹೌದು ಮಾಮ, ಉಸಿರಾಟದ ವೇಗ ಹೆಚ್ಚಾಗುತ್ತದೆ, ಅಳು ಬಂದರೆ ಬಿಕ್ಕಳಿಸುವಾಗ ಉಸಿರಾಟ ಭೋರ್ಗರೆಯುವ ಜಲಪಾತದಂತೆ ಕಟ್ಟಿ ಕಟ್ಟಿ ಸುರಿಯುತ್ತೆ.”

” ಹೌದಲ್ವಾ ಅನು!, ಮತ್ತೆ ಮನಸ್ಸು ಶಾಂತವಾಗಿದ್ದಾಗ? “

” ಮನಸ್ಸು ಶಾಂತವಾಗಿದ್ದಾಗ ಉಸಿರಾಟ, ನಿಧಾನವಾಗಿ, ಸರಾಗವಾಗಿ ನಡೆಯುತ್ತೆ. ಬಯಲುಪ್ರದೇಶದಲ್ಲಿ ನಿಧಾನವಾಗಿ ಹರಿಯುವ ಜುಳು ಜುಳು ನದಿಯಂತೆ.”

” ಅನು ಪುಟ್ಟೂ, ಎಷ್ಟು ಕಾವ್ಯಾತ್ಮಕವಾಗಿ ಹೇಳಿದೆ!, ಎಂತ ನಿನ್ನ ತಾರಜ್ಜಿ ಕಾಳಿದಾಸನ ಪಾಠ ತುಂಬಾ ಮಾಡಿದಂತಿದೆ! ಉಸಿರಾಟವನ್ನು ಜಲಪಾತಕ್ಕೂ, ಬಯಲಿನಲ್ಲಿ ಹರಿವ ಮಂದಗಮನೆಗೂ ಹೋಲಿಸಿ, ಉಪಮಾಲಂಕಾರವನ್ನೂ ಕಲಿತು ಪ್ರಯೋಗಿಸಿದೆ ನೋಡು!

ಅದಿರಲಿ!. ಈಗ ವಿಷಯಕ್ಕೆ ಬರೋಣ. ದುಃಖವಾದಾಗ, ಖುಷಿಯಾದಾಗ, ಕೋಪ ಬಂದಾಗ, ಶಾಂತವಾಗಿದ್ದಾಗ ಉಸಿರಾಟದ ಪ್ಯಾಟರ್ನ್ ಮನಸ್ಥಿತಿಗೆ ಅನುರೂಪವಾಗಿ ಬದಲಾಗುತ್ತದೆ ಅಂತಾಯ್ತಲ್ಲ.
ಮನಸ್ಸೊಳಗೆ ನಡೆಯುವ ಕ್ರಿಯೆ ಮತ್ತು ಉಸಿರಾಟದ ಪ್ರಕ್ರಿಯೆಗಳನ್ನು ಲಾಜಿಕ್ ಉಪಯೋಗಿಸಿ ವಿಷ್ಲೇಶಣೆ ಮಾಡುವಾಗ ಎರಡರ ನಡುವಿನ ಸಂಬಂಧವನ್ನು ಗುರುತಿಸುವ ವಿಧಾನಕ್ಕೆ ಭೌತಶಾಸ್ತ್ರದಲ್ಲಿ ಫಿನೋಮಿನಲಾಜಿಕಲ್ ವಿಧಾನ ಎನ್ನುತ್ತಾರೆ. ಇದರ ತಾತ್ಪರ್ಯ, ಮನಸ್ಸಿನ ಅವಸ್ಥೆಗೆ ಸರಿಯಾಗಿ ಉಸಿರಾಟದ ಪ್ಯಾಟರ್ನ್ ಇರುತ್ತದೆ ಅಂತ.”

“ಮಾದೇವ ಮಾಮಾ, ಮನಸ್ಸು ಮತ್ತು ಉಸಿರಾಟದ ನಡುವೆ ಸಂಬಂಧ ಇದೆ ಅಂತಾಯ್ತು, ಹಾಗಿದ್ದರೆ ಪ್ರಾಣಾಯಾಮ? “

” ಪ್ರಾಣಾಯಾಮ ದ ವಿಷಯಕ್ಕೆ ಬರುವ ಮೊದಲು, ಇನ್ನೊಂದು ಪ್ರಶ್ನೆ..
ನೀನು ಪರೀಕ್ಷೆ ಬರೆಯಲು ಹಾಲ್‌ನಲ್ಲಿ ಕುಳಿತಿರುವೆ ಅಂತಿಟ್ಕೋ. ಇನ್ನೈದು ನಿಮಿಷದಲ್ಲಿ ಪ್ರಶ್ನೆ ಪತ್ರಿಕೆ ನಿನ್ನ ಕೈಗೆ ಕೊಡುತ್ತಾರೆ. ಇನ್ವಿಜಿಲೇಟರ್, ಪ್ರಶ್ನೆ ಪತ್ರಿಕೆಯ ಪ್ಯಾಕೆಟ್ ಓಪನ್ ಮಾಡ್ತಿದ್ದಾರೆ.. ಈಗ ನಿನಗೆ ಏನನಿಸುತ್ತದೆ?”

” ಮಾಮಾ, ಪ್ರಶ್ನೆ ಪತ್ರಿಕೆಯಲ್ಲಿ ಯಾವ ಪ್ರಶ್ನೆ ಇರಬಹುದು?. ನಾನು ಚೆನ್ನಾಗಿ ಓದದೇ ಇರುವ ಅಧ್ಯಾಯದಿಂದ ಪ್ರಶ್ನೆ ಬರದಿದ್ದರೆ ಸಾಕು..ಅಂತೆಲ್ಲಾ ಚಿಂತೆಯಾಗುತ್ತೆ..”

” ಹಾಗೆ ಚಿಂತೆಯಾದಾಗ ನಿನ್ನ ದೇಹದಲ್ಲಿ ಏನಾದರೂ ಪರಿವರ್ತನೆ ಆಗುತ್ತದೆಯೇ?”

” ಹ್ಞಾ ಮಾಮ, ಮೈಯೆಲ್ಲಾ ಬಿಸಿಯಾದಂತೆ, ಈಗಷ್ಟೇ ವಾಂತಿ ಬರುವಂತೆ, ಹೀಗೆಲ್ಲಾ ಆಗುತ್ತೆ. ಆದರೆ ವಿಚಿತ್ರ ಎಂದರೆ, ಪ್ರಶ್ನೆ ಪತ್ರಿಕೆ ಸಿಗುತ್ತಲೇ ಎಲ್ಲಾ ನಾರ್ಮಲ್ ಆಗುತ್ತೆ!”

” ಅನೂ, ಎಷ್ಟು ತೆರೆದ ಮನಸ್ಸು ನಿನ್ನದು, ತೆರೆದ ಪುಸ್ತಕದಂತೆ. ನನಗೂ ಶಾಲೆಯಲ್ಲಿದ್ದಾಗ, ಭಾಷಣ ಮಾಡಲು ಮೇಷ್ಟ್ರು ನನ್ನನ್ನು ವೇದಿಕೆಗೆ ಕಳಿಸಿದರೆ ಮನಸ್ಸು ತುಂಬಾ ಟೆನ್ಷನ್. ತಪ್ಪು ಮಾತಾಡಿದರೆ, ಮಾತು ಎಡವಿದರೆ, ಓದಿಕೊಂಡ ವಿಷಯ ಮರೆತುಹೋದರೆ? ಅಂತೆಲ್ಲಾ ಚಿಂತೆಯ ಒಲೆ ಉರಿಯುತ್ತಿತ್ತು. ಎದೆ ಡಬ್ ಡಬ್ ಅಂತ ವೇಗವಾಗಿ ಬಡಿಯುತ್ತಿತ್ತು. ಕೈಕಾಲು ಗಡಗಡ ನಡುಗುತ್ತಿತ್ತು.

ಈ ಎರಡು ಉದಾಹರಣೆಗಳಿಂದ, ನಮಗೆ ಏನು ತಿಳಿಯುತ್ತದೆ?. ಮನಸ್ಸಿನ ಮೇಲಿನ ಒತ್ತಡದ ಪ್ರಭಾವ ದೇಹದ ಕ್ರಿಯೆಗಳ ಮೇಲೆ ಆಗುತ್ತೆ ಅಂತ,ಅಲ್ಲವೇ?.”

” ಹೌದು ಮಾಮಾ, ಮೊದಲ ಚಿಂತನೆಯಲ್ಲಿ ನೀವು ಮನಸ್ಸು ಮತ್ತು ಉಸಿರಾಟವನ್ನು ಕನೆಕ್ಟ್ ಮಾಡಿದಿರಿ. ಎರಡನೇ ಚಿಂತನೆಯಲ್ಲಿ ಮನಸ್ಸಿನ ಡೈನಾಮಿಕ್ಸ್ ಮತ್ತು ದೇಹಪ್ರವೃತ್ತಿಯ ನಡುವೆ ಇರುವ ಸಂಬಂಧವನ್ನು ತಿಳಿಸಿದಿರಿ. ಅಂದರೆ, ದೇಹ, ಉಸಿರಾಟ ಮತ್ತು ಮನಸ್ಸು ಈ ಮೂರೂ ಒಂದಕ್ಕೊಂದು ತಳಕುಹಾಕಿಕೊಂಡು ನಡೆಯುತ್ತವೆ ಅಂತಾಯ್ತಲ್ಲ ಮಾಮಾ..”

” ಹೌದು. ಈಗ ಮೊದಲಿನ ವಿಷಯಕ್ಕೆ ಬರೋಣ. ಮನಸ್ಸಿನ ಅವಸ್ಥೆಗೆ ಸರಿಯಾಗಿ ಉಸಿರಾಟದ ಗ್ರಾಫ್ ಬದಲಾಗುತ್ತೆ. ಹಾಗಿದ್ದರೆ, ಶ್ವಾಸೋಚ್ಛಾಸದ ವಿಧಾನದ ಮೇಲೆ ಕೆಲವು ಕ್ರಿಯೆಗಳನ್ನು ಅಭ್ಯಾಸ ಮಾಡಿ, ಉಸಿರಾಟದ ಪ್ಯಾಟರ್ನ್ ಮೇಲೆ ನಿಯಂತ್ರಣ ಸಾಧಿಸಿದರೆ, ಮನಸ್ಸಿನ ಡೈನಾಮಿಕ್ಸ್ ಮೇಲೆ ನಿಯಂತ್ರಣ ಸಾಧ್ಯವೇ?.”

” ಅರ್ರೇ ಮಾಮಾ!, ಇದು ತುಂಬಾ ಇಂಟರೆಸ್ಟಿಂಗ್ ಇದೆ!. ಹಾಗಿದ್ದರೆ ಈ ಉಸಿರಾಟದ ವಿವಿಧ ಎಕ್ಸರ್ಸೈಸ್ ಗಳ ಮೂಲಕ ಮನಸ್ಸನ್ನು ಬೇಕಾದ ಹಾಗೆ ಆಡಿಸಬಹುದಲ್ವಾ!. ಹಾವಾಡಿಗ ವಾದ್ಯ ಊದಿ ಹಾವನ್ನು ಆಡಿಸಿದಂತೆ! ಅಬ್ಬಾ ಹಾಗಿದ್ದರೆ ಈ ಶ್ವಾಸೋಚ್ಛಾಸದ ಕ್ರಿಯೆಗಳೇ ಪ್ರಾಣಾಯಾಮ ಅಂತಾಯ್ತು”

” ಹೌದು ಅನು ಪುಟ್ಟು. ಪ್ರಾಣಾಯಾಮದ ಅಭ್ಯಾಸದಿಂದ ಮನಸ್ಸಿನ ಮೇಲೆ ಹತೋಟಿ ಸಾಧಿಸಬಹುದು. ಅದರ ಮೂಲಕ, ಮನಸ್ಸು ಸದಾ ಶಾಂತವಾಗಿಯೂ, ಸಮತೋಲಿತವಾಗಿಯೂ ಇರುವಂತೆ ಮಾಡಿದರೆ, ನಿನ್ನ ಮನಸ್ಸಿನ ಮೇಲೆ ಯಾವತ್ತಿಗೂ ಒತ್ತಡವಿರಲ್ಲ. ಮಾನಸಿಕ ಒತ್ತಡವಿಲ್ಲದಿದ್ದರೆ, ದೇಹದ ಮೇಲೆ ಆಗುವ ಹಲವು ಪ್ರತಿಕೂಲ ಪರಿಣಾಮಗಳನ್ನೂ ತಡೆಗಟ್ಟಬಹುದು.”

” ಮಾಮಾ, ಹಾಗಿದ್ದರೆ ಯೋಗ ಕೂಡಾ ಒಂದು ವಿಜ್ಞಾನವೇ ಅಂತಾಯ್ತಲ್ವಾ, ಭೌತಶಾಸ್ತ್ರದಲ್ಲಿ ಇರುವಂತೆ ಯೋಗಶಾಸ್ತ್ರದಲ್ಲಿಯೂ ಸಿದ್ಧಾಂತ, ಹೈಪಾಥಿಸಿಸ್ ಗಳು ಇರಬಹುದಲ್ವಾ..”

” ಅನು ಪುಟ್ಟೂ, ಜಾಣೆ ನೀನು. ಆ ಬಗ್ಗೆ ನಾಳೆ ಮಾತಾಡುವ, ಆಯ್ತಾ!”