ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶ್ರೀ ತಲಗೇರಿ
ಇತ್ತೀಚಿನ ಬರಹಗಳು: ಶ್ರೀ ತಲಗೇರಿ (ಎಲ್ಲವನ್ನು ಓದಿ)

ಸುತ್ತಲೂ ಮರಗಳು. ಕಾಡಿನ ಎದೆಯನ್ನು ಸೀಳುತ್ತಲೇ ಸಾಗುವ ದಾರಿಗಳು, ಅರ್ಧ ಟಾರು ರಸ್ತೆ ಇನ್ನರ್ಧ ಮಣ್ಣೋ, ಕಲ್ಲೋ, ಕೆಸರೋ; ಅಂತೂ ಒಂದು ರಸ್ತೆ! ರಿಂಗ ರಿಂಗಾ ಅನ್ನುವ ಯಾವ ಸಪ್ಪಳವೂ ಕೇಳದ, ದೂರವಾಣಿ ಕರೆ ಮಾಡಬೇಕು ಅಂತಾದಲ್ಲಿ ಅದ್ಯಾವುದೋ ಚೂರು ದೂರದ ಅಂಗಡಿಯಲ್ಲೋ ಮನೆಯಲ್ಲೋ ಇರುವ ತಂತಿ ಫೋನು ಅಥವಾ ಯಾವುದೋ ಒಂದು ಬೆಟ್ಟದ ತುದಿಗೆ ಕಂಡಂತೆ ಅನಿಸುವ ಸಿಗ್ನಲ್ ಕಡ್ಡಿಗಳು.. ಮಳೆ ಬಂದರೆ ಹೊರಗೆ ಬಂದು ಕುಣಿಯಲೇಬೇಕೆನ್ನುವಷ್ಟು ಪ್ರಸನ್ನವಾಗಿರುವ ವಾತಾವರಣ, ಇಳಿಜಾರು, ಏರು, ಕಟ್ಟಿಗೆಯ ಒಲೆಯಲ್ಲೇ ನಿತ್ಯದ ಅಡುಗೆ, ತೋಟ ಗದ್ದೆ ಇದರದ್ದೇ ವ್ಯವಸಾಯ, ಸಂಜೆಯಾಗುತ್ತಿದ್ದಂತೆ ಕೈಮುಗಿದು ಊಟ ಮಾಡೋ ಸಂಪ್ರದಾಯ, ಮನರಂಜನೆಗೆ ಕೇಳಬಹುದಾದ ಪಕ್ಕದ ಮನೆಯ ರೇಡಿಯೋ ಅಥವಾ ಊರಲ್ಲಿ ಆಗಾಗ ನಡೆಯುವ ಜನಪದ ನೃತ್ಯ, ಹಸಿವನ್ನು ತಣಿಸುವುದಕ್ಕೆ ದಿನವೂ ಹೆಚ್ಚೇನೂ ವ್ಯತ್ಯಾಸವಿಲ್ಲದ ಆಹಾರ, ಬೆಳಗಾದರೆ ಚಿಲಿಪಿಲಿ, ಸಂಜೆಗೆ ಹೂ‌ಮಾಲೆ ಹಾಕಿ ಅಲಂಕರಿಸಿದಂತಿರುವ ಹಕ್ಕಿ ಸಾಲು, ಎಲೆಗಳ ಮಧ್ಯದಿಂದ ಎಳೆ ಎಳೆಯಾಗಿ ಬೀಳೋ ಸೂರ್ಯ ಕಿರಣ, ಕಚ್ಚಾ ಬೀದಿಗಳು, ಮಳೆಗಾಲಕ್ಕೆ ಬೇಕಾಗುತ್ತದೆ ಅಂತ ಬಿಸಿಲಲ್ಲಿ ಒಣಗಿಸಲು ಇಟ್ಟಾಗಲೇ ಬರುವ ಮಳೆ, ಪುಟ್ಟ ಪುಟ್ಟ ಮನೆ, ಕೊಠಡಿಗಳು.. ಹೀಗೆಲ್ಲಾ ಇರುವ ಚಿತ್ರಣವಿದ್ದರೆ ಅದು ಖಂಡಿತಾ ನಮ್ಮೆಲ್ಲರ ಹಳ್ಳಿಯನ್ನು ಮತ್ತೆ ನಾವೆಲ್ಲೋ ಇರುವ ಮಹಾನಗರದಲ್ಲೇ ತಂದು ಪ್ರತಿಷ್ಠಾಪಿಸಿದಂತೆ ಭಾಸವಾಗುವುದರಲ್ಲಿ ಅತಿಶಯೋಕ್ತಿಯೇನಿಲ್ಲ.

ನಮ್ಮಲ್ಲಿ ಬಹುತೇಕರು ನಗರದ ಯಾವುದೋ ಮಹಡಿಯಲ್ಲಿ ಕೊರಗುತ್ತಾ, ಊರಿಗೆ ಹೋಗುವುದಕ್ಕೆ ಹಬ್ಬ ಬರುವುದನ್ನೇ ಕಾಯುತ್ತಾ, ಊರಿನ ಕುರಿತಾದ ಅದೇ ಅದೇ ಕವಿತೆ, ಕತೆ, ಲೇಖನಗಳನ್ನು ಮತ್ತೆ ಮತ್ತೆ ಓದುತ್ತಾ, ಅಲ್ಲಿನ ಬಾಲ್ಯದ ಗೋಲಿಯಾಟ, ಕಣ್ಣುಮುಚ್ಚಾಲೆ, ಚಿನ್ನಿ ದಾಂಡು ಇವೆಲ್ಲವನ್ನೂ ನೆನೆಸಿಕೊಂಡು ತುಟಿಯಂಚಲ್ಲಿ ನಕ್ಕು ಭಾರವಾದ ಉಸಿರು ಬಿಟ್ಟು, ಆ ದಿನಗಳೇ ಚೆನ್ನಾಗಿದ್ವಪಾ ಅಂತ ಅಂದುಕೊಳ್ಳುತ್ತಾ ಇರುವುದು ನಗರ ಜೀವನದ ನಿತ್ಯಕರ್ಮ ಅನ್ನುವಷ್ಟರ ಮಟ್ಟಿಗೆ ಹಾಸುಹೊಕ್ಕಾಗಿದೆ. ಹೀಗಿರುವಾಗ ಊರಿಗೆ ‌ಹಿಂದಿರುಗಿ ಹಲವು ದಿನಗಳ ಕಾಲ‌ ಅಲ್ಲಿಯೇ ಇರುವಂತಾದರೆ, ಎಲ್ಲಾ ಅಸ್ಥಿರತೆಗಳ ಮಧ್ಯದಲ್ಲಿಯೂ ಅದೇನೋ ನಮ್ಮ ನೆಲದಲ್ಲಿ ನಾವಿದ್ದೇವೆ ಅನ್ನುವ ನೆಮ್ಮದಿ, ಆತ್ಮವಿಶ್ವಾಸ ಹಾಗೂ ನಾವು ಆ‌ ನೆಲದವರು ಅನ್ನುವ ಸ್ಥಳೀಯ ಭಾವ ಆವರಿಸುವ ಸುಖಕ್ಕೆ ಒಂದು ವಾಕ್ಯದ ವರದಿ ನೀರಸವೇ. ಕೊರೋನಾ ಅಂಥದ್ದೊಂದು ಅವಕಾಶವನ್ನು ಹಲವರಿಗೆ ತಂದುಕೊಟ್ಟಿತು. ಹಾಗೇ ಮುಂಬೈ ಬದುಕಿನಿಂದ ಅರುಣಾಚಲ‌ ಪ್ರದೇಶದ ಹಳ್ಳಿಗೆ ಬೇರೆ ಒಂದು ಕಾರಣದಿಂದಾಗಿ ೭-೮ ವರ್ಷಗಳ ನಂತರ ಮರಳಿ ಹೋಗುವ ಐಟಿ ಉದ್ಯೋಗಿಯ ಕತೆಯನ್ನು ಹೇಳುವ ಚಿತ್ರ ಕ್ರಾಸಿಂಗ್ ಬ್ರಿಡ್ಜಸ್ ( Crossing Bridges )

ಅದೆಷ್ಟೋ ವರ್ಷಗಳ ನಂತರ ಊರಿಗೆ ಹೋದಾಗ ಅದೇನೋ ಮೊದಮೊದಲಿಗೆ ಕಳೆದುಕೊಂಡ ಭಾವ. ಕಿರಿಕಿರಿ ಪಿರಿಪಿರಿ ಅನ್ನುವ ಗದ್ದಲ ಕಡಿಮೆ; ಅದರಿಂದಾಗಿ ಜಗತ್ತೇ ಸ್ತಬ್ಧವಾದಂತೆ, ಅಲ್ಲಿ ಮಾಡಬೇಕಾದ ಕೆಲಸ, ಅಲ್ಲಿನ ಆಹಾರ, ಅದನ್ನು ಬಡಿಸುವ ಪದ್ಧತಿ ಎಲ್ಲವೂ ಅಪರಿಚಿತವಾದಂತೆ. ಸಮಯ ಕಳೆಯುವುದೇ ದುಸ್ತರವಾದಂತೆ. ಬಹುಶಃ ಅಲ್ಲಿಗೆ ಹೋಗುವಾಗ ಯಾಕೆ ಹೋಗುತ್ತಿದ್ದೇವೆ ಅನ್ನುವ ಮನಸ್ಥಿತಿಯೂ ಬಹುಮುಖ್ಯ ಅನಿಸುತ್ತದೆ. ಕೆಲವರಿಗೆ ಅದು ಬಿಡುಗಡೆಯ ಜಾಗವಾದಲ್ಲಿ ಕೆಲವರಿಗೆ ಅದು ಒಂದು ಸ್ವಲ್ಪ‌ ದಿನಗಳ ಕಾಲ ಕಳವಳವನ್ನೂ ಉಂಟುಮಾಡಬಲ್ಲ‌ ಜಾಗ; ವಿಚಿತ್ರವೆನಿಸಿದರೂ ಇದು ಸತ್ಯ. ಪ್ರಕೃತಿಯ ಪುಟ್ಟ ಪುಟ್ಟ ಸಂಭ್ರಮವನ್ನೂ ಗಮನಿಸುವುದಕ್ಕೆ ಸಾಧ್ಯವಾಗುವಂಥ ಎಲ್ಲಾ ಅವಕಾಶವನ್ನೂ ಊರು ಕಲ್ಪಿಸಿಕೊಡುತ್ತದೆ. ಅದಕ್ಕಾಗಿಯೇ ಅದು ನಮಗೆ ಆಪ್ತ ಅಂತ ಅನಿಸುತ್ತದೆಯೇನೋ ಬಹುಶಃ. ಕ್ರಾಸಿಂಗ್ ಬ್ರಿಡ್ಜಸ್ ಅನ್ನುವ ಈ ಸಿನೆಮಾ ಒಂದು ಅಜ್ಞಾತ ಸಂಸ್ಕೃತಿಯ ಜೊತೆಜೊತೆಗೆ ಜ್ಞಾತ ಸಂಸ್ಕೃತಿಯ ರಾಯಭಾರಿಯಂತೆ ಕಾಣುತ್ತದೆ. ಪ್ರತಿ ಜನಾಂಗದಲ್ಲೂ ಇರಬಹುದಾದ ಆ ಜನಾಂಗದ ಜೀವಾಳ ಅನ್ನಬಹುದಾದ ಹಲವು ವಿಶಿಷ್ಟ ಆಚರಣೆಗಳ, ಸಂಪ್ರದಾಯಗಳ, ಭಾಷೆ ಸಂಸ್ಕೃತಿ ಸಂವೇದನೆಗಳ ಕುರಿತಾಗಿ ಚಿತ್ರ ಹೇಳುತ್ತದೆ. ಜೊತೆಗೆ ಒಮ್ಮೊಮ್ಮೆ ನಾವು ಯಾವುದ‌ನ್ನು ತುಂಬಾ ಮೆರೆಸುತ್ತೇವೆ ಹಾಗೂ ಯಾವುದನ್ನು ಕಡೆಗಣಿಸುತ್ತೇವೆ ಎನ್ನುವುದನ್ನೂ ಈ ಸಿನೆಮಾ ಹೇಳುತ್ತದೆ. ಆಧುನಿಕ ಮನರಂಜನೆಯ ಮಾಧ್ಯಮಗಳು ಹೇಗೆ ನಿಧಾನಕ್ಕೆ ಹಳ್ಳಿಗಳನ್ನು ಆವರಿಸಿಕೊಳ್ಳುತ್ತಿವೆ ಮತ್ತು ಅದರ ಪರಿಣಾಮಗಳೇನು ಅನ್ನುವುದನ್ನೂ , ಅದರ ಜೊತೆಗೆ ಅದು ಒದಗಿಸಿಕೊಡಬಹುದಾದ ಸಾಧ್ಯತೆಗಳೇನು ಅನ್ನುವುದನ್ನೂ, ಸ್ವದೇಶಿ ಅಥವಾ ಆ ನೆಲದ ಉತ್ಪನ್ನಗಳಿಗೆ ಬೆಲೆ ಕೊಡಬೇಕು ಅನ್ನುವುದನ್ನೂ ಸಿನೆಮಾ ಹೇಳಿದೆ, ನೆನಪಿರಲಿ ಈ ಸಿನೆಮಾ ಬಿಡುಗಡೆಯಾಗಿದ್ದು ೨೦೧೩ರಲ್ಲಿ !

ಅರುಣಾಚಲ ಪ್ರದೇಶದ ವ್ಯಕ್ತಿಯೇ ಅರುಣಾಚಲ ಪ್ರದೇಶದ ಕುರಿತಾಗಿ ಮಾಡಿದ ಮೊದಲ ಚಿತ್ರ ಇದು. ಅದರಲ್ಲೂ ಶರ್ದುಕ್ಪನ್ ( Sherdukpen ) ಭಾಷೆಯಲ್ಲಿ ಮಾಡಿದ ಮೊದಲ ಚಿತ್ರ. ೨೦೧೪ರ ೬೧ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಈ ಭಾಷೆಯಲ್ಲಿ ಮಾಡಿದ ಅತ್ಯುತ್ತಮ ಚಿತ್ರ ಅಂತ ಪ್ರಶಸ್ತಿಯನ್ನೂ ಪಡೆದುಕೊಂಡಿದೆ. ಈ ಚಿತ್ರದ ಕುರಿತು ತಿಳಿದುಕೊಳ್ಳಲು ಹುಡುಕಿದಾಗಲೇ ಈ ಥರದ್ದೊಂದು ಭಾಷೆ ಅಥವಾ ಭಾಷೆಯ ಪ್ರಭೇದ ಇದೆ ಅನ್ನುವುದು ಗೊತ್ತಾಗಿದ್ದು. ಅರುಣಾಚಲ ಪ್ರದೇಶ ಅತಿ ಹೆಚ್ಚು ಭಾಷಾ ಪ್ರಭೇದಗಳಿರುವ ರಾಜ್ಯಗಳಲ್ಲಿ ಒಂದು. ಇಡೀ ಭಾರತದ ಜನಪದ ಸಂಸ್ಕೃತಿ ಅಡಗಿರುವುದೇ ಇಂಥ ಬುಡಕಟ್ಟು ಜನಾಂಗಗಳಲ್ಲಿ, ಪುಟ್ಟ ಪುಟ್ಟ ಹಳ್ಳಿಗಳ ಹಲವಾರು ಕುಟುಂಬಗಳಲ್ಲಿ. ಆದರೆ, ಹೊರ ಜಗತ್ತಿಗೆ ಅವು ತಲುಪುವುದೇ ಇಲ್ಲ; ಹೊರಗಿನವರಿಗೆ ಅದು ಬೇಕಿಲ್ಲ ಕೂಡಾ! ಈ ಸಿನೆಮಾದ ಪ್ರತೀ ಅಂಶ ನಮ್ಮೆಲ್ಲರಿಗೂ ಒಂದಲ್ಲಾ ಒಂದು ರೀತಿಯಲ್ಲಿ ಸಂಬಂಧಿಸಿದ್ದೇ ಆಗಿದೆ. ಎರಡು ಪೀಳಿಗೆಗಳ ನಡುವಿನ ಯೋಚನಾ ಲಹರಿಗಳ ವ್ಯತ್ಯಾಸದಿಂದ ಹಿಡಿದು, ಅಲ್ಲೆಲ್ಲೋ ಬಿದ್ದ ಮರವನ್ನೇ ಸೇತುವೆಯಂತೆ ಬಳಸುವವರೆಗೆ! ನಮ್ಮೆಲ್ಲರಿಗೂ ಅಭಿವೃದ್ಧಿ ಬೇಕು, ಬದುಕಿನ‌ ಗುಣಮಟ್ಟ ಸುಧಾರಿಸಬೇಕು, ಸಿಗಬೇಕಾದ ಸೌಲಭ್ಯಗಳು ಸಿಗಬೇಕು. ಆದರೆ, ಇವುಗಳೊಟ್ಟಿಗೆ ನಮ್ಮೆಲ್ಲರ ಮುಗ್ಧತೆ, ಸಹಜತೆ ಕೂಡಾ ನಿಧಾ‌ನಕ್ಕೆ ಮರೆಯಾಗುತ್ತಿರುವುದು ನಮ್ಮ ಪರಿಗಣನೆಯ ಪಟ್ಟಿಯಲ್ಲೆಲ್ಲೂ ಕಾಣುತ್ತಿಲ್ಲ. ಊರಿನ ವಾತಾವರಣವನ್ನು ಅಸ್ತವ್ಯಸ್ತ‌ ಮಾಡದೇ ಇರುವ ಸೂಕ್ಷ್ಮ ಪ್ರಜ್ಞೆಯೊಂದಿಗೆ ಆಧುನಿಕತೆ ಊರಿಗೆ ಬಂದರೆ ಅದರ ಸೌಂದರ್ಯವೇ ಬೇರೆ; ಆದರೆ ಅದು ಸಾಧ್ಯವಾ?

ಚಿತ್ರದ ನಿರ್ದೇಶಕರ ಹೆಸರು ಸಾಂಗೆ ದೋರ್ಜೀ ಥೋಂಗ್ಡೋಕ್. ಈ ಚಿತ್ರದಲ್ಲಿರುವ ಮುಖ್ಯ ಪಾತ್ರಧಾರಿಗಳಲ್ಲಿ ಒಬ್ಬರು ನಿರ್ದೇಶಕರ ಸ್ನೇಹಿತ‌ ಫುಂಟ್ಸು ಖ್ರಿಮೆ ( Phuntsu Khrime ) ಹಾಗೂ ಇನ್ನೊಬ್ಬರು ಅಂಶು ಜಮ್ಸೆಂಪಾ ( Anshu Jamsenpa ) . ಐದು ದಿನದಲ್ಲಿ ಎರಡು ಸಲ‌ ಹಾಗೂ ೫ ಬಾರಿ ಒಟ್ಟಾರೆಯಾಗಿ ಮೌಂಟ್ ಎವರೆಸ್ಟ್ ಏರಿ ದಾಖಲೆ‌ ನಿರ್ಮಿಸಿದ ಮಹಿಳೆ ಇವರು. ಒಟ್ಟಿನಲ್ಲಿ ಹೇಳುವುದಾದರೆ ನೆನಪುಗಳಿಗೆ ತೀರಾ ಹತ್ತಿರವೆನಿಸುವ ಒಂದು ಚಿತ್ರ ಕ್ರಾಸಿಂಗ್ ಬ್ರಿಡ್ಜಸ್..