ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪಟಾಕಿಗಳ ಔಚಿತ್ಯ

ಚಂದಕಚರ್ಲ ರಮೇಶ ಬಾಬು
ಇತ್ತೀಚಿನ ಬರಹಗಳು: ಚಂದಕಚರ್ಲ ರಮೇಶ ಬಾಬು (ಎಲ್ಲವನ್ನು ಓದಿ)

ಸ್ನೇಹಿತರೆಲ್ಲರಿಗೂ ದೀಪಾವಳಿ ಹಬ್ಬಗಳ ಶುಭಾಶಯಗಳು.

ನಮ್ಮೆಲ್ಲರಿಗೂ ಸಂಭ್ರಮ ತುಂಬುವ ಹಬ್ಬವೆಂದರೆ ದೀಪಾವಳಿ. ಮನಸ್ಸಿಗೆ ಆಹ್ಲಾದ ತುಂಬುವ ಶರದೃತುವಿನಲ್ಲಿ ಬರುವ ದೊಡ್ಡ ಹಬ್ಬಗಳಲ್ಲಿ ನವರಾತ್ರಿ ಅಥವಾ ದಸರಾ ಮೊದಲಿನದಾದರೇ ಅದರ ಬೆನ್ನಿಗೇ ಬರುವ ಮತ್ತೊಂದು ಹಬ್ಬ ಅಥವಾ ಹಬ್ಬಗಳ ಸರಣಿ ಎನ್ನಬಹುದು, ಅದು ದೀಪಾವಳಿ. ನವರಾತ್ರಿ ಬಹುಶಃ ಧಾರ್ಮಿಕ ಆಚರಣೆಗೆ ಹೆಸರಾಗಿದ್ದು ಆ ದಿನಗಳಲ್ಲಿ ಮುಖ್ಯವಾಗಿ ದೇವೀ ಪೂಜೆ, ಉಪವಾಸ, ಅಖಂಡ ದೀಪ, ಘಟ ಸ್ಥಾಪನೆ ಮುಂತಾದ ಧಾರ್ಮಿಕ ಆಚರಣೆಗಳಲ್ಲಿ ಜನ ಮುಳುಗಿದ್ದು ಸಂಭ್ರಮದ ಅಂಶ ಕಮ್ಮಿ. ಆದರೆ ದೀಪಾವಳಿ ಹಾಗಲ್ಲ. ಆನಂದ, ಸಂತೋಷ, ಸಂಭ್ರಮಗಳ ಹೊನಲು, ಹೊಳೆ. ಹೊಸದಾಗಿ ಮದುವೆಯಾದ ಮನೆಗಳಲ್ಲಿ ಇದರ ಆನಂದ ಹೇಳತೀರದು. ಮಗನದ್ದಾದರೆ ಬೀಗತನಕ್ಕಾಗಿ ಬೀಗರ ಮನೆಗೆ ಹೋಗುವ ಸಂಭ್ರಮ, ಮಗಳ ಮದುವೆಯಾದರೆ ಬೀಗರನ್ನು ಉಪಚರಿಸುವ ಗಡಿಬಿಡಿ, ಆತಂಕಗಳ ನಡುವೆಯಲ್ಲೇ ಅವರೆಲ್ಲರ ಜೊತೆಯ ಆನಂದ. ಇದೆಲ್ಲದರ ಸಂಭ್ರಮಕ್ಕ ಪುಟ ಕೊಡುವ ಮತ್ತೊಂದು ಆಚರಣೆ ಪಟಾಕಿ ಹಚ್ಚುವುದು ಅಥವಾ ಸುಡುವುದು.

ನಮಗೆಲ್ಲರಿಗೂ ನರಕ ಚತುರ್ದಶಿಯ, ದೀಪಾವಳಿ ಅಮಾವಸ್ಯೆಯ ಮತ್ತು ಇತರೆ ದಿನಗಳ ಪ್ರಾಧಾನ್ಯತೆ ಗೊತ್ತೇ ಇದೆ. ಇಲ್ಲೂ ಸಹ ರಾಕ್ಷಸತ್ವದ ಮೇಲೆ ದೈವತ್ವದ ಗೆಲುವೇ ಆದರೂ ಇದರಲ್ಲಿ ದೀಪಗಳನ್ನು ಬೆಳಗುವುದು ಪ್ರಧಾನ ಆಚರಣೆಯಾಗಿದೆ. ಇದಕ್ಕೆ ಈ ಋತುವಿನಲ್ಲಿ ಮುತ್ತಿಕೊಳ್ಳುವ ದಟ್ಟ ಕತ್ತಲಿನ ಕಾರಣವಿರ ಬಹುದು. ವಿದ್ಯುತ್ ದೀಪಗಳಿರದ ಕಾಲದಲ್ಲಿ ಹಬ್ಬಗಳಲ್ಲಿ ಮತ್ತಷ್ಟು ದೀಪಗಳನ್ನು ಬೆಳಗುತ್ತ ಹಬ್ಬವನ್ನಾಚರಿಸುವುದು ವಾಡಿಕೆ ಅಥವಾ ಆಚರಣೆಗೆ ಬಂದಿರಬಹುದು. ಹಾಗೇ ವಿಜಯದ ಪ್ರತೀಕವಾಗಿ ಪಟಾಕಿಗಳನ್ನು ಬಿಡುವ ಕ್ರಮವೂ ಸೇರಿರಬಹುದು. ಒಟ್ಟಾರೆ ಬೆಳಗಿನ ಜಾವ ಅಭ್ಯಂಜನ ಸ್ನಾನ, ಸಾಲು ದೀಪಗಳೊಂದಿಗೆ ಮನೆಗೆ ಅಲಂಕಾರ, ಪಟಾಕಿಗಳ ಸ್ಫೋಟ ದೀಪಾವಳಿಯ ಆಚರಣೆ. ಅಮಾವಸ್ಯೆಯ ದಿನ ಮಹಾಲಕ್ಷೀ ಪೂಜೆ. ಮನೆಗಳಲ್ಲಿ ಸಣ್ಣ ಸ್ತರದಲ್ಲಿ, ವ್ಯಾಪಾರೀ ಸ್ಥಳಗಳಲ್ಲಿ ದೊಡ್ಡ ಸ್ತರದಲ್ಲಿ ನಡೆಯುತ್ತದೆ. ಮತ್ತೆ ಬರುವುವು ಬಲಿ ಪಾಡ್ಯ, ಯಮ ದ್ವಿತೀಯ ಮತ್ತು ಭಗಿನೀ ತೃತೀಯ. ಮೊದಲನೆಯದು ವರ್ಷಕೊಮ್ಮೆ ಧರೆಗೆ ಬರುವ ಬಲಿಯನ್ನು ಮತ್ತು ಅವನ ದಾನಶೀಲತೆಯನ್ನು ನೆನೆಯುವುದಾದರೆ, ಮತ್ತೆರಡು ದಿನ ಸೋದರಿಯರ ಮತ್ತು ಸೋದರರ ಮನೆಗಳಿಗೆ ಭೇಟಿ ಕೊಟ್ಟು ಅವರ ಮನೆಗಳಲ್ಲಿ ಊಟ ಮಾಡಿ ಆನಂದವನ್ನು ಹಂಚಿಕೊಳ್ಳುವ ಹಬ್ಬಗಳು. ಈ ಐದೂ ದಿನಗಳಲ್ಲಿಯೂ ಪಟಾಕಿಗಳ ಸದ್ದು ಕಿವಿಗಳಿಗೆ ಬಡಿಯುತ್ತಲೇ ಇರುತ್ತದೆ. ಮಕ್ಕಳಿಗಂತೂ ಒಂದು ತಿಂಗಳ ಮುಂಚಿನಿಂದಲೇ ಪ್ರಾರಂಭವಾಗಿರುತ್ತದೆ. ಕರ್ನಾಟಕದಲ್ಲಂತೂ ಎಲ್ಲ ಶಾಲೆಗಳಿಗೂ ಒಂದು ತಿಂಗಳ ದಸರಾ, ದೀಪಾವಳಿ ರಜೆಗಳು. ಅವರ ಸಂಭ್ರಮ ಹೇಳ ತೀರದು.

ಇತ್ತೀಚಿನ ದಿನಗಳಲ್ಲಿ ಅದೂ ಸಾಮಾಜಿಕ ಜಾಲತಾಣಗಳು ತುಂಬಾ ಚುರುಕಾದ ಮೇಲೆ ದೀಪಾವಳಿಯ ದಿನಗಳಲ್ಲಿ ಪಟಾಕಿ ಬಿಡುವುದರ ಬಗ್ಗೆ ತುಂಬಾ ವಿಮರ್ಶೆ ಕೇಳಿಬರುತ್ತಿದೆ. ಪರಸರ ಮಾಲಿನ್ಯ, ಶಬ್ದ ಮಾಲಿನ್ಯ, ಹಿರಿಯರ ಆರೋಗ್ಯ, ಕಿಡಿಗೇಡಿಗಳ ಕಿತಾಪತಿ, ಸಾಕು ಪ್ರಾಣಿಗಳಿಗಾಗುವ ಕಿರಿಕಿರಿ ಇವೆಲ್ಲವನ್ನೂ ಎತ್ತಿ ತೋರುತ್ತ ಪಟಾಕಿಗಳ ಬಳಕೆಯನ್ನು ಪೂರಾ ನಿಷೇಧಿಸಬೇಕೆನ್ನುವ ಒತ್ತಾಯ ಕಾಣಬರುತ್ತಿದೆ. ಆರೋಗ್ಯದ ದೃಷ್ಟಿಯಿಂದ ನೋಡಿದಾಗ ಇದು ಹೌದು. ಆದರೆ ಪಟಾಕಿಗಳನ್ನು ಯಾವುದೇ ಸಂದರ್ಭಕ್ಕೆ ಸಿಡಿಸಿದಾಗಲೂ ಈ ಆರೋಗ್ಯದ ಮೇಲೆ ಪರಿಣಾಮ ಕಾಣುತ್ತದೆ. ಅಂದರೆ ಪಟಾಕಿಗಳನ್ನು ನಿಷೇಧಿಸುವುದಾದರೆ ಯಾವ ಕಾರಣಕ್ಕೂ ಸಿಡಿಸ ಬಾರದೆಂದು ನಿರ್ಣಯಿಸಿ ನಿಷೇಧಿಸ ಬೇಕೇ ವಿನಃ ಬರೀ ದೀಪಾವಳಿ ಹಬ್ಬ ಬಂದಾಗ ಮಾತ್ರ ಇದರ ಬಗ್ಗೆ ಗುಲ್ಲೆಬ್ಬಿಸಿ ಅದರ ಬಗ್ಗೆ ತಪ್ಪಿತಸ್ಥ ಭಾವನೆ ತರಬಾರದು. ಮತ್ತೆ ಇದು ಒಂದು ಧರ್ಮದ ಸಮುದಾಯದ ಹಬ್ಬ ಮತ್ತು ಆಚರಣೆ ಎಂದಾಗ ಈ ತರದ ನಿಷೇಧ ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರದೆ ಇರದು. ಕೆಲ ಇತರೆ ಧರ್ಮಗಳ ಆಚರಣೆಗಳು ಸಹ ಪರಿಸರಕ್ಕೆ ಧಕ್ಕೆ ಯಾಗುತ್ತಿವೆ. ಸರಕಾರ ಎಲ್ಲ ತರದ ಪರಿಸರ ಮಾಲಿನ್ಯ ಹರಡುವ ಕ್ರಮಗಳನ್ನೂ ಸೇರಿಸಿ ನಿಷೇಧವನ್ನು ಹೇರಿದಲ್ಲಿ ಅದು ಸಮದೃಷ್ಟಿಯಾಗುತ್ತದೆ. ಇತರೆ ದೇಶಗಳಲ್ಲೂ ಸಹ ಸಿಡಿಮದ್ದು ಸಿಡಿಸಿ ಸಂಭ್ರಮವನ್ನಾಚರಿಸುವ ಕ್ರಮವಿದೆ. ನಮ್ಮ ದೇಶದಲ್ಲೇ ಆಂಗ್ಲ ಹೊಸ ವರ್ಷಕ್ಕೆ ಸಿಡಿಮದ್ದನ್ನು ಸುಡುವುದು ನಡೆದು ಬಂದಿದೆ. ಹಾಗಾಗಿ ಪಟಾಕಿಗಳ ಬಗ್ಗೆ ವೈಚಾರಿಕತೆಯ ನೆಪದಲ್ಲಿ ಹೇಳುತ್ತಿರುವುದು ಬರೀ ಸೋಗು ಎನಿಸುತ್ತದೆ. ಮಾಲಿನ್ಯ ಹರಡುವುದೆಂದರೆ ಎಲ್ಲ ಕಾರಣಕ್ಕೆ ಸಿಡಿಸುವ ಮದ್ದು ಮಾಲಿನ್ಯ ಹರಡುತ್ತದಲ್ಲವೇ? ಬರೀ ದೀಪಾವಳಿಯನ್ನು ಮಾತ್ರ ಹೊರತುಪಡಿಸುವುದೇಕೆ ? ಹೀಗೆ ಎಲ್ಲ ಹಬ್ಬಗಳ ಆಚರಣೆಗಳಲ್ಲೂ ಏನೋ ಒಂದು ಕೊಂಕು ತೆಗೆದು ಅವುಗಳ ಬಗ್ಗೆ ನ್ಯಾಯಾಲಯಗಳು ಬರೀ ತಾರ್ಕಿಕ ತಳಹದಿಯ ಮೇಲೆ ತೀರ್ಪು ಕೊಡುತ್ತ ಹೋದಲ್ಲಿ ಆಚರಣೆ ಮತ್ತು ಸಂಭ್ರಮಗಳು ಬರೀ ಬಿಸಿಲ್ಗುದುರೆಗಳಾಗುತ್ತವೆ.

ಹಾಗಾಗಿ ಸರಕಾರ ಮತ್ತು ನ್ಯಾಯಾಲಯಗಳು ಧಾರ್ಮಿಕ ಭಾವನೆಗಳನ್ನು, ಸಮುದಾಯದ ಸಂವೇದನೆಗಳನ್ನು ಸಹ ದೃಷ್ಟಿಯಲ್ಲಿಟ್ಟುಕೊಂಡು ಎಲ್ಲರಿಗೂ ಸಮರಾಗಿ ಪರಿಗಣಿಸುತ್ತಾ ಕೆಲ ಕಾನೂನು ಮಾಡಿ ಅಚರಣೆಗೆ ತರತಕ್ಕದ್ದು.