ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪುಟ್ಟ ಬೊಗಸೆಯಲ್ಲಿನ ದೊಡ್ಡ ನಕ್ಷತ್ರ

ಶ್ರೀ ತಲಗೇರಿ
ಇತ್ತೀಚಿನ ಬರಹಗಳು: ಶ್ರೀ ತಲಗೇರಿ (ಎಲ್ಲವನ್ನು ಓದಿ)

ಬೆಚ್ಚನೆಯ ಮರದ‌ ಮನೆ, ಚಳಿಗಾಲದಲ್ಲಿ ಹೊದೆಯುವುದಕ್ಕೆ ಬೇಕಾದ ವಸ್ತ್ರಗಳು, ಹಬ್ಬ ಮಾಡುವುದಕ್ಕೆ ಬೇಕಾದ ಸಾಮಗ್ರಿಗಳು, ಬೇಜಾರು ಕಳೆಯುವುದಕ್ಕೆ ಮತ್ತು ಮನೆ ತುಂಬಾ ಓಡಾಡುವುದಕ್ಕೆ ಅಕ್ಕ‌ತಂಗಿಯರು, ಚೂರು ಹೆಚ್ಚು ಕಷ್ಟಪಟ್ಟರೆ ಹಾಗೂ ಹೀಗೂ ಹೊಂದಿಸಿಕೊಂಡು ಹೋಗಬಹುದಾದ ಆರ್ಥಿಕ ಸ್ಥಿತಿ ಇದ್ದರೆ ಅದೊಂದು ಸಹಜ ಒದ್ದಾಟಗಳ ನಡುವೆಯೂ ಸುಖದ ಅಂಚಿನಲ್ಲಿ ಆಚೆ ಈಚೆ ಓಲಾಡುವ ಕೆಳ ಮಧ್ಯಮ ವರ್ಗದ ಕುಟುಂಬವೆಂದು ಹೇಳಬಹುದೇನೋ..

ಆದರೆ, ಕನಸುಗಳಿಗೆ ಬೇರೆ ಬ್ಯಾಂಕಿನ ಖಾತೆ. ಕನಸುಗಳು ಒಮ್ಮೊಮ್ಮೆ ವರ್ತಮಾನವನ್ನು ಅವಲಂಬಿಸಿ ರೂಪುಗೊಂಡರೂ, ಅವರವರ ಅನುಭವಗಳ ಆಧಾರದ ಮೇಲೆ‌ ತನ್ನ ಅಸ್ತಿತ್ವವನ್ನು ಪಡೆದುಕೊಂಡರೂ, ಕನಸುಗಳ ಹರವು ದೊಡ್ಡದು. ಎಲ್ಲರೂ ಕನಸು ಕಾಣುತ್ತಾರೆ, ಕನಸಿಗೆ ಯಾವ ಭೇದಗಳೂ ಇಲ್ಲ, ಕನಸು ಕಾಣುವುದಕ್ಕೆ ಯಾವ ಮುಜುಗರವೂ ಇಲ್ಲ. ಕೆಲವಷ್ಟು ಹಗಲುಗನಸುಗಳೂ ಆಗಿರಬಹುದು, ಇನ್ನು ಕೆಲವು ಭವಿಷ್ಯದ ಬೀಜವನ್ನು ಬಿತ್ತಬಹುದಾದ, ಫಸಲಿನ ಹಂಬಲದ ಕನಸುಗಳಾಗಿರಬಹುದು. ಅದರಲ್ಲೂ ಪುಟ್ಟ ಪುಟ್ಟ ಕನಸುಗಳ, ಬಯಕೆಗಳ ತುಡಿತಗಳು ಅತೀ ಆಪ್ತವಾದದ್ದು, ಅವುಗಳಿಗೆ ಮಹತ್ತರವಾದದ್ದೇನನ್ನೋ ಸಾಧಿಸುವ ಇರಾದೆಯೇನೂ ಇರದಿದ್ದರೂ, ಸಣ್ಣ ಸಂಗತಿಗಳು ಸಣ್ಣವೇ ಆಗಬೇಕಿಲ್ಲ ಅನ್ನುವುದನ್ನು ಒತ್ತಿ ಹೇಳುವ ಗಟ್ಟಿತನವಿರುತ್ತವೆ. ದೊಡ್ಡ ಕನಸುಗಳಿಗೆ ರಿಯಾಯಿತಿ ಜಾಸ್ತಿ, ನೆಪಗಳು ಜಾಸ್ತಿ, ಬದಲಾಗುವ ಪರಿಸರಗಳ, ಒತ್ತಡಗಳ‌ ಮೇಲೆ ಅದು ಬೇರೆ ಬೇರೆ ರೂಪಗಳನ್ನು ಪಡೆಯಬಹುದು. ಹಾಗೆಯೇ ಕನಸು ಕಂಡವರೆಲ್ಲರೂ ಎಲ್ಲವುಗಳನ್ನೂ ಸಾಕಾರಗೊಳಿಸಿಕೊಳ್ಳುವಲ್ಲಿ ಸಫಲರಾಗಬೇಕಂತೇನೂ ಇಲ್ಲವಲ್ಲ; ಹಲವಾರು ಕನಸುಗಳು ಅರ್ಧಾಯುಷ್ಯದವುಗಳು.

ಸಾಮಾಜಿಕ ಮತ್ತು ಸಾಂಸಾರಿಕ ಬದ್ಧತೆ ಹಾಗೂ ಇತಿಮಿತಿಗಳಿಂದಾಗಿ ಮೊಟಕಾಗುವ ಕನಸುಗಳ ಲೆಕ್ಕ ಇಟ್ಟವರಿಲ್ಲ. ಅದರಲ್ಲೂ ಹೆಣ್ಣಿನ ಕನಸುಗಳಿಗೆ ನಿಬಂಧನೆಗಳು ತುಸು ಜಾಸ್ತಿಯೇ ಅಂತಂದರೆ ಕ್ಲೀಷೆ ಅಂತೆಲ್ಲಾ ಆಗಲಾರದು ಅನಿಸುತ್ತದೆ. ಇಂಥ ಹಲವು ಕನಸುಗಳ ಕುರಿತಾಗಿ ಹೇಳುತ್ತಾ, ಅದರಲ್ಲೂ ಮುಖ್ಯವಾಗಿ ಹೆಣ್ಣಿನ ಬದುಕಿನ ಮಗ್ಗುಲುಗಳನ್ನು ಪರಿಚಯಿಸುವುದಕ್ಕೆ ಪ್ರಯತ್ನಿಸುವ, ನಾಲ್ಕು ಹೆಣ್ಣುಮಕ್ಕಳನ್ನು ಮುಖ್ಯಭೂಮಿಕೆಯಲ್ಲಿಟ್ಟುಕೊಂಡು ಬಡತನ, ಮಮತೆ, ಬಾಲ್ಯ, ವಿರಹ, ಪ್ರೇಮ, ಮತ್ಸರ, ದ್ವೇಷ,‌ ಕೋಪ, ನಿರ್ಲಿಪ್ತತೆ, ಒಂಟಿತನ, ಹತಾಶೆ, ಹಿಂಜರಿಕೆ, ಸಂಭ್ರಮ‌, ಸ್ನೇಹ, ಕಾರುಣ್ಯ, ತ್ಯಾಗ, ಹೋರಾಟ ಇತ್ಯಾದಿಗಳೆಲ್ಲವನ್ನೂ ಎಳೆಎಳೆಯಾಗಿ ಯಾವುದೇ ನಾಟಕೀಯತೆ ಇಲ್ಲದೆಯೇ ತೆರೆದಿಡುವ ಸಿನೆಮಾ ‘ಲಿಟ್ಲ್ ವುಮೆನ್’ ( Little Women ).

ಈ ಸಿನೆಮಾ ಬೇರೆ ದೇಶದ‌ ಕೌಟುಂಬಿಕ ಕತೆಯಾದರೂ ಮನುಷ್ಯಲೋಕ ಎಲ್ಲಾ ಕಡೆಯೂ ಒಂದೇ. ಎಲ್ಲಾ ಕುಟುಂಬಗಳಲ್ಲಿ ಒಡಹುಟ್ಟಿದವರ ನಡುವೆ ನಡೆವ ಬಾಲ್ಯದ ಜಗಳಗಳು, ಹೊಡೆದಾಟಗಳು ಇಲ್ಲಿವೆ. ಬಾಲ್ಯ ಕಳೆದೇಹೋಯಿತು ಅನ್ನುವ ಕೊರಗಿದೆ, ಅಕ್ಕತಂಗಿಯರು ಒಬ್ಬರನ್ನೊಬ್ಬರು ಅಗಲುವಾಗಿ‌ನ ನೋವಿದೆ, ತಾನೇನನ್ನೋ ಮಹತ್ತರವಾದುದನ್ನು ಸಾಧಿಸುತ್ತೇನೆಂದು ಮನೆಯಿಂದ ದೂರ ಇದ್ದು, ಕಾರಣಾಂತರಗಳಿಂದ ಮನೆಗೆ ವಾಪಸ್ಸಾಗಬೇಕಾದ ಸಂದರ್ಭಗಳಿವೆ. ಆದರೆ, ಅವೆಲ್ಲಕ್ಕಿಂತ ಮುಖ್ಯವಾಗಿ ‘ಹೆಣ್ಣು ಶ್ರೀಮಂತನೊಬ್ಬನನ್ನು ಮದುವೆಯಾಗುವ ಕನಸು’ ಕಾಣುವುದನ್ನು ಬಿಟ್ಟು ಬೇರೇನನ್ನೂ ಕಾಣಬಾರದಾ ಅನ್ನುವ ಒಂದು ಪ್ರಶ್ನೆಯಿದೆ. ಈಗ ಹಲವು ದೇಶಗಳಲ್ಲಿ ಪರಿಸ್ಥಿತಿ ಬೇರೆಯೇ ಇರಬಹುದು.‌ ಆದರೆ, ಇನ್ನೂ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದರೊಳಗಾಗಿ ಮದುವೆಯಾಗಿ, ಗಂಡನ ಮನೆಗೆ ತಕ್ಕ ಸೊಸೆಯಾಗಿ, ಸಾಂಸಾರಿಕ ಬದುಕನ್ನೇ ಸರ್ವಸ್ವವೆಂದುಕೊಂಡು ಹೆಣಗುವ, ಗೊಣಗುವ, ಖುಷಿಪಡುವವರೇನು ಕಡಿಮೆಯಿಲ್ಲವಲ್ಲ! ಬದುಕಿನ ಅಗತ್ಯಗಳು ಕಾಲಕಾಲಕ್ಕೆ ಬದಲಾಗುತ್ತವೆ, ಹಾಗೆಯೇ ಬದುಕಿನ ಆಯ್ಕೆಗಳೂ ಬದಲಾಗುತ್ತವೆ. ಇದನ್ನು ಸರಿತಪ್ಪುಗಳ ದೃಷ್ಟಿಯಲ್ಲಿ ನೋಡುವುದಕ್ಕಿಂತ ವಸ್ತುನಿಷ್ಠವಾಗಿ, ಇರುವಂತೆಯೇ, ಯಾವ ಭಾವ ವಿಕಾರವಿಲ್ಲದೆಯೇ ನೋಡುವುದೇ ಹೆಚ್ಚು ಸಮಂಜಸವೆನಿಸುತ್ತದೆ. ಯಾರ ಆಯ್ಕೆಯನ್ನೂ ಕೀಳಾಗಿ ನೋಡಬೇಕಾದ ಅಥವಾ ಅನುಕಂಪದಿಂದ ಕಾಣಬೇಕಾದ ಅಗತ್ಯವಿಲ್ಲ ಅಂದರೂ ತಪ್ಪಾಗಲಾರದೇನೋ..

ಬಾಲ್ಯವೆಂಬುದೊಂದು ಇರದೇ ಹೋಗಿದ್ದರೆ‌ ಈ ಭೂಮಿ ಇಷ್ಟು ಸುಂದರವಾಗಿರುತ್ತಿರಲಿಲ್ಲ ಎನ್ನುವಂಥ ಮಾತುಗಳು ಸಿನೆಮಾದಲ್ಲಿವೆ. ಜವಾಬ್ದಾರಿಗಳು ಹೆಚ್ಚಾದಂತೆಲ್ಲಾ ಬಾಲ್ಯದಲ್ಲಿ ಹಂಬಲಿಸಿದ್ದ ಯೌವನ ಒಂದು ಹೊರೆಯಂತೆ ಕಾಣುವುದಕ್ಕೆ ಶುರುವಾದಾಗಲೆಲ್ಲಾ ಬಾಲ್ಯ ತೀವ್ರವಾಗಿ ಕಾಡುತ್ತದೆ. ಕಳೆದೇಹೋಯಿತಾ ಆಯುಷ್ಯದ ಇಷ್ಟು ಭಾಗ, ಯಾವುದೇ ತಲೆಬಿಸಿ ಇಲ್ಲದೆಯೇ ಆ ಕ್ಷಣದ ಭಾವವನ್ನು ಆ ಕ್ಷಣವೇ ವ್ಯಕ್ತಪಡಿಸುತ್ತಾ ಅವರವರದೇ ಪುಟ್ಟ ಪುಟ್ಟ ಲೋಕದಲ್ಲಿ ಸಂಭ್ರಮದಿಂದ ಬದುಕುತ್ತಿದ್ದ ಕಾಲ ಮುಗಿದುಹೋಯಿತಾ ಅನ್ನುವ ವಿಷಣ್ಣತೆಯೊಂದು ಮನಸ್ಸಿನ ಮೇಲೆ ಒಂದು ಪದರವಾಗಿ ಉಳಿದುಹೋಗುತ್ತದೆ. ಕೆಲವೊಮ್ಮೆ ಹಿಂದೆ ತೆಗೆದುಕೊಂಡ ನಿರ್ಧಾರಗಳು ಪ್ರೌಢವಾಗಿರಲಿಲ್ಲವೆಂದೂ, ಆಯ್ಕೆ ಬೇರೆಯಾಗಿದ್ದರೆ ಬದುಕು ಬೇರೆಯಾಗಿರುತ್ತಿತ್ತೆಂದೂ ಕೊರಗುವುದುಂಟು, ಆದರೆ ಆ ಕ್ಷಣಕ್ಕೆ ಅದೇ ಸರಿಯಾದ ನಿರ್ಧಾರ ಅಂತ ಅನಿಸಿತ್ತಲ್ಲವಾ, ಹಾಗಾಗಿ ಈ ಎಲ್ಲಾ ಜಂಜಡಗಳ ಮಧ್ಯೆಯೂ ಬದುಕಿನ ಹರಿವಿನಲ್ಲಿ ಹರಿವಾಗುವುದೇ ಹೆಚ್ಚು ಸಹಜವೆನಿಸುತ್ತದೆ ಅಲ್ಲವಾ?

ಈ ಸಿನೆಮಾದಲ್ಲಿನ ಮುಖ್ಯಪಾತ್ರಗಳಲ್ಲೊಬ್ಬರು ಬರೆಹಗಾರ್ತಿ. ಮೊದಮೊದಲಿಗೆ ಯಾವ್ಯಾವುದೋ ಹೆಸರಿನಲ್ಲಿ ಬರೆದು, ಅದು ತನ್ನ ಗೆಳತಿ ಬರೆದಿದ್ದೆಂದು ಪ್ರಕಾಶಕರ ಹತ್ತಿರ ಹೇಳುವಾಗ ಹೊಸ ಬರೆಹಗಾರರಿಗೆ ಇದ್ದ ಹಿಂಜರಿಕೆ, ಅವಮಾನದ ಭಯ, ಕೀಳಾಗಿ ನೋಡಬಹುದೆಂಬ ಸಂಕೋಚ ಇತ್ಯಾದಿಗಳೆಲ್ಲವೂ ವ್ಯಕ್ತವಾಗಿದೆ. ಅದೇ ಬರೆಹ ಸ್ವೀಕೃತವಾದಾಗ ರಸ್ತೆಯಲ್ಲಿ ಅಪರಿಚಿತರ ಮಧ್ಯೆ ಓಡುವಾಗಿನ ಖುಷಿ ಬಹುಶಃ ಎಲ್ಲ ಹೊಸ ಬರೆಹಗಾರರ ಸಂತಸದ ಅಭಿವ್ಯಕ್ತಿಯ ಗುರುತಾಗುತ್ತದೆ. ನಮ್ಮದೇ ಬದುಕಿನ ಕತೆಗಳನ್ನು ಯಾರು ಓದುತ್ತಾರೆ, ಬರೆಹದಲ್ಲೂ ಹೆಣ್ಣನ್ನು ಸ್ವತಂತ್ರವಾಗಿ ನೋಡುವುದಕ್ಕೆ ಬಿಡುವುದಿಲ್ಲವಾ ಎಂಬಿತ್ಯಾದಿ ಪ್ರಶ್ನೆಗಳು ಈ ಸಾಮಾಜಿಕ ವ್ಯವಸ್ಥೆಯನ್ನೂ, ರಂಜನೀಯ ಸಾಹಿತ್ಯದಿಂದಾಚೆ ನಿಂತು ಬರೆಯುವ ಬರೆಹಗಾರರ ಬರೆಹಗಳನ್ನೂ ಬಿಚ್ಚಿಡುತ್ತವೆ. ಹಿಂದೊಮ್ಮೆ ಬಹುಶಃ ಎಲ್ಲಾ ಕತೆಗಳು ಸುಖಾಂತ್ಯವೇ ಆಗಬೇಕೆಂಬ ಅಲಿಖಿತ ನಿಯಮವಿತ್ತು ಅನಿಸುತ್ತದೆ, ಇಲ್ಲದೇ‌ ಹೋದಲ್ಲಿ ಅದನ್ನು ಓದುಗ ಸ್ವೀಕರಿಸುವುದಿಲ್ಲ ಅನ್ನುವ ಭಯ ಪ್ರಕಾಶಕರಲ್ಲಿತ್ತು, ಈಗಲೂ ಸಿನೆಮಾಗಳ ವಿಷಯದಲ್ಲಿ ಇಂಥದ್ದೊಂದು ಮನಸ್ಥಿತಿ ಇದ್ದರೂ ಸಿನೆಮಾ ಮಾಧ್ಯಮ ಮತ್ತು ಪ್ರೇಕ್ಷಕ ವರ್ಗ ಇದರಿಂದ ಹೊರಬರುವುದಕ್ಕೆ ಹೆಣಗಾಡುತ್ತಲೇ ಇವೆ, ಕೆಲವು ಪ್ರಯತ್ನಗಳು ಯಶಸ್ವಿಯಾಗಿವೆ ಕೂಡಾ. ಆದರೂ ದೀರ್ಘವಾದ ಹಾದಿಯೊಂದನ್ನು ಇನ್ನೂ ನಡೆಯಬೇಕಿದೆ.

ಹಬ್ಬಗಳೆಂದರೆ ಸಂಭ್ರಮದ ಆಚರಣೆಗಳೆಂಬುದು ಸಾಮಾನ್ಯ ಸಂಗತಿಯಾದರೂ, ಕೆಲವೊಮ್ಮೆ ನಮ್ಮ ಅಕ್ಕಪಕ್ಕದಲ್ಲೇ‌ ಮೂಲ‌ ಅಗತ್ಯಗಳಿಂದ ವಂಚಿತರಾದವರೂ ಇರಬಹುದು, ಅವರ ಕುರಿತಾಗಿಯೂ ನಾವು ಗಮನಹರಿಸಬೇಕಾಗಬಹುದು ಅನ್ನುತ್ತಾ, ಹಬ್ಬಗಳೆಂದರೆ ತ್ಯಾಗದ ಪ್ರತೀಕವೂ ಹೌದು, ಹಂಚಿಕೊಳ್ಳುವುದರಿಂದ ಖುಷಿ ಹೆಚ್ಚುತ್ತದೆ ಅನ್ನುವ ಹಲವು ಸಣ್ಣ ಸಣ್ಣ ಸಂಗತಿಗಳೂ ಇಲ್ಲಿವೆ. ದೊಡ್ಡ ‌ದೊಡ್ಡ ಕೊಡುಗೆ ಕೊಡಬೇಕಿಲ್ಲ, ಒಂದು ಹೊತ್ತಿನ ತಿಂಡಿಯೂ ಕೂಡಾ ಅದೂ ಇಲ್ಲದವರಿಗೆ ಹಬ್ಬದ ಉಡುಗೊರೆಯೇ ಆದೀತು ಅನ್ನುವ ಸಂಗತಿ ಹಬ್ಬವೆಂದರೆ ಎಲ್ಲರನ್ನೂ ಒಳಗೊಳ್ಳುವುದು ಅನ್ನುವುದನ್ನೂ ಹೇಳುತ್ತದೆ.

ಅಮೇರಿಕಾದ ಬರೆಹಗಾರ್ತಿ ಲೂಯಿಸಾ ಮೇ ಆಲ್ಕೋಟ್ ಅವರು ಬರೆದ ‘ಲಿಟ್ಲ್ ವುಮೆನ್’ ಅನ್ನೋ ಕಾದಂಬರಿಯನ್ನೇ ಇಲ್ಲಿ‌ ಸಿನೆಮಾವನ್ನಾಗಿ ಅಳವಡಿಸಿಕೊಳ್ಳಲಾಗಿದೆ. ಈ ಎಲ್ಲಾ ಪಾತ್ರಗಳು ಲೂಯಿಸಾ ಅವರ ಕುಟುಂಬ ಮತ್ತು ಸ್ನೇಹವಲಯದಿಂದಲೇ ಹುಟ್ಟಿದಂಥವುಗಳು. ಈ ಕಾದಂಬರಿ ಒಂದು ಹೊಸ ಸಾಂಸಾರಿಕ ಬರೆಹದ ಪರಂಪರೆಯನ್ನೇ ಪ್ರಾರಂಭಿಸಿತು ಅಂತಲೂ ಹೇಳಲಾಗುತ್ತದೆ. ಜೊತೆಗೆ ಈ ಕಾದಂಬರಿ ಹಲವು ಸಿನೆಮಾಗಳಿಗೂ ಸ್ಫೂರ್ತಿಯಾಗಿದೆ. ಅದರಲ್ಲಿ ೨೦೧೯ರ ಗ್ರೇಟಾ ಗರ್ವಿಗ್ ( Greta Gerwig) ಅವರ ಈ ಸಿನೆಮಾ ಕೂಡಾ ಒಂದು. ಅಮೇರಿಕನ್ ಫಿಲ್ಮ್ ಇನ್ಸ್ಟಿಟ್ಯೂಟ್ ( American Film Institute ), ೨೦೧೯ರ ಅದರ ಹತ್ತು ಅತ್ಯುತ್ತಮ ಚಲನಚಿತ್ರಗಳ ಯಾದಿಯಲ್ಲಿ ಈ ಚಿತ್ರವನ್ನೂ ಪಟ್ಟಿಮಾಡಿದೆ.

ಬಹುಶಃ ಚಲನಚಿತ್ರಗಳು ಜಾಗತಿಕವಾಗುವುದು ಮನುಷ್ಯ ಲೋಕದ ಬದುಕಿನ ಮೂಲ‌ ಕತೆಯನ್ನು ಹೇಳಿದಾಗಲೇ ಅಂತನಿಸುತ್ತದೆ. ಅಂಥದ್ದೊಂದು ಆಪ್ತ ಅನುಭವದ, ದೇಶ‌ ಕಾಲ‌ ಭಾಷೆ ಸಂಸ್ಕೃತಿಗಳನ್ನೂ ಮೀರಿ ನಿಲ್ಲಬಲ್ಲ ಕೆಲವು ಚಿತ್ರಗಳಲ್ಲಿ ಇದೂ ಒಂದು ಅಂತನ್ನುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲವೆಂದರೆ ಅದು ಈ ಸಿನೆಮಾದ‌ ಘನತೆಗೆ ತಕ್ಕದ್ದೇ ಆದೀತು!