ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪ್ರೊ.ಸಿದ್ದು ಯಾಪಲಪರವಿ

ವೈಯಕ್ತಿಕ ಮತ್ತು ಸಾರ್ವಜನಿಕ ಜೀವನದಲ್ಲಿ ಅನೇಕ ಬಾರಿ ನಮ್ಮನ್ನು ನಾವು ಕೇಳಿಕೊಳ್ಳುವ ಪ್ರಶ್ನೆ ಇದು. ಹೀಗೆ ಒಮ್ಮೆ ತುಂಬಾ ಬೇಕಾದವರು ಕೇಳಿದಾಗ ತಬ್ಬಿಬ್ಬಾದೆ.

‘ಯಾರು ಯಾರಿಗೆ ಕೊಡಬೇಕು?’

“ಎಲ್ಲರೂ ಎಲ್ಲರಿಗೆ ಕೊಡಬೇಕು.”

ಹೌದಾ! ತುಂಬಾ ಪ್ರೀತಿಸುವ ವ್ಯಕ್ತಿ ಆ ಸ್ವಾತಂತ್ರ್ಯ ಕೊಡಲು ಹಿಂದೇಟು ಹಾಕಿದರೆ ಏನಂತಾರೆ? ಪ್ರೀತಿ ಎಂಬ ಮಾಯಾ ಲೋಕದ ಮಹಿಮೆಯನ್ನು ಅರ್ಥ ಮಾಡಿಕೊಳ್ಳುವುದು ಕಡು ಕಷ್ಟ. ಪ್ರೀತಿ ಮತ್ತು ವ್ಯಾಮೋಹದ ಮಧ್ಯೆ ಇರುವ ಅಂತರ ಅರ್ಥ ಮಾಡಿಕೊಳ್ಳಲು ಸೋ ಕಾಲ್ಡ್ ಪ್ರೇಮಿಗಳು ವಿಲಿ ವಿಲಿ ಒದ್ದಾಡುತ್ತಾರೆ.

ವೈಯಕ್ತಿಕವಾಗಿ ಒಂದು ಕಾಲದಲ್ಲಿ ಪ್ರೇಮಿಯಾದಾಗ ಈ ತಲ್ಲಣವನ್ನು ಅನುಭವಿಸಿದ ನನಗೆ ಯುವಕರು ಇಂತಹ ಪ್ರಶ್ನೆ ಕೇಳಿದಾಗ ಗಾಬರಿಯಾಗುವುದು ಸಹಜ.

‘ನಾಲ್ಕು ವರ್ಷದಿಂದ ನನ್ನ ಒಬ್ಬ ವ್ಯಕ್ತಿ ತುಂಬಾ ತುಂಬಾ ಪ್ರೀತಿಸುತ್ತಾನೆ, ನಿರಂತರ ತನ್ನ ಪ್ರೀತಿ ಪಂಜರದ ಬಂಧನದಲ್ಲಿ ಕಟ್ಟಿ ಹಾಕ ಬಯಸುವುತ್ತಾನೆ.

“ಹೌದಾ? ಹಾಗಾದರೆ ಅವನಿಗೆ ವಿಶ್ವಾಸ ಇಲ್ಲವೋ, ಪ್ರೀತಿಸುವ ಮನಸ್ಥಿತಿ ಇಲ್ಲವೊ?”

‘ಅಯ್ಯೋ ಸರ್ ದಯವಿಟ್ಟು ಹಾಗೆ ಹೇಳಬೇಡಿ, ನಾಲ್ಕು ವರ್ಷದಲ್ಲಿ ಅವನು ಕೊಟ್ಟ ಮುತ್ತುಗಳಿಗೆ ಲೆಕ್ಕ ಇಡಲಾಗುತ್ತಿಲ್ಲ, ಕೇವಲ ಮೈ ಮರೆಯುವುದಷ್ಟೇ ಕೆಲಸ.
ಮೈ ಮರೆಯುವದ ಮರೆತು ವಾಸ್ತವ ಲೋಕಕ್ಕೆ ಬಂದ ಕೂಡಲೇ ಅವನು ದೈಹಿಕವಾಗಿ ದೂರಾದಾಗ ಮತ್ತೆ ನನ್ನ ಪ್ರೀತಿಯ ಬಂಧನದಲ್ಲಿ ಕಟ್ಟಿ ಹಾಕಿ ಗೋಳು ಹೊಯ್ಕೊಳ್ತಾನೆ.
ಅದೆಂತಹ ಪ್ರೀತಿ ಸರ್ ನಾನು ತಗೋ ಉಸಿರಾಟದ ಮೇಲೂ ನಿಯಂತ್ರಣ ಮಾಡೋ ಧಾವಂತ.’

“ಅಯ್ಯೋ ಹಾಗಾದರೆ ಅವನು ತಿಕ್ಕಲಾ? ಹುಚ್ಚಾನಾ?”

‘ಖಂಡಿತ ಅಲ್ಲ, ಮಹಾ ಜ್ಞಾನಿ, ಸಹನಶೀಲ ಸಹೃದಯಿ, ಸೂಕ್ಷ್ಮ ಸಂವೇದನೆಯ ಒಲವ ಜೀವ, ಸದಾ ಇತರರ ಒಳಿತಿಗಾಗಿ ಹೋರಾಡುತ್ತಾನೆ, ನಾನೆಂದರೆ ಅಪರಿಮಿತ ಹುಚ್ಚು. ಪ್ರತಿಯೊಂದು ಸಂಗತಿ ಮೇಲೂ ನಿಗಾ ಇಟ್ಟಿರುತ್ತಾನೆ. ನಾನು ಖುಷಿಯಾಗಿರಲಿ ಎಂಬ ಕಾರಣದಿಂದ ಏನನ್ನಾದರೂ ಮಾಡಬಲ್ಲ. ಉಡುಗೆ, ತೊಡುಗೆ, ವಿನ್ಯಾಸ ಹೀಗೆ ಪ್ರತಿಯೊಂದು ಖಾಸಗಿ ವಸ್ತುಗಳ ಕುರಿತು ಮುತುವರ್ಜಿ ವಹಿಸುತ್ತಾನೆ. ಹೇಳಿದರೆ ಅತಿರೇಕ ಅನಿಸಿ ನಿಮಗೆ ಕೇಳೋಕೆ ಸಂಕೋಚವಾಗಬಹುದು.

ಅವನ ಒಲವ ಒತ್ತಡ ವಿವರಿಸಿದರೆ ನೀವೇ ಅಸೂಯೆ ಪಡುತ್ತೀರಿ. ಕೊಂಚವೂ ಮೈಮರೆತು ಉಸಿರಾಡಲು ಬಿಡದ ಹಾಗೆ ಪ್ರತಿ ಕ್ಷಣ ಗಮನಿಸುವ ವಿಚಿತ್ರ ಜಾಯಮಾನ. ಹಾಗಂತ ನನ್ನ ಮೇಲೆ ಸಂಶಯ ಇಲ್ಲ. ನನಗೆ ಕೆಲವೊಮ್ಮೆ ನನ್ನ ಸ್ನೇಹಿತರ ಎಲ್ಲೋ ಹೋಗಬೇಕು ಎನಿಸಿ ಹೊರಟರೆ ಸಾಕು ಲೈವ್ ಕಾಮೆಂಟರಿ ಶುರುವಾಗುತ್ತದೆ.
ಇತರ ವ್ಯಕ್ತಿಗಳ ಜೊತೆಗೆ, ಇತರ ಕೆಲಸಗಳಲ್ಲಿ ಇದ್ದರೆ ಸಾಕು ಎಲ್ಲಿ ಕಳೆದು ಹೋಗುತ್ತೇನೆಯೋ ಎಂಬಂತೆ ಜಡಪಡಿಸುತ್ತಾನೆ.’

‘ನೀನು ಅಷ್ಟೊಂದು ಬಿಜಿ ಇದ್ದರೆ ವಾಷ್ ರೂಮಿಗೆ ಹೋದಾಗ ಮಾತಾಡು’ ಅಂತಾನೆ ಸರ್.
ಮಾತು, ಮಾತು ಮತ್ತು ಮಾತು ಮಾತಿನ ಮತ್ತಿನಲಿ ನಾನಿದ್ದರೆ ಮಾತ್ರ ಅವನ ನೆನಪಿನಲ್ಲಿ ಇರುತ್ತೇನೆ ಎಂಬ ಭ್ರಾಂತು’
ಪ್ರೀತಿ ಅಂದರೆ ಅಷ್ಟೊಂದು ದೊಡ್ಡ ಬಂಧನವಾ ಸರ್?’
ಹೀಗೆ ಅವಳು ಕೇಳುವ ನೂರಾರು ಪ್ರಶ್ನೆಗಳಲ್ಲಿ ನಾನು ಕಳೆದು ಹೋದೆ.

ಈಗ ಇಂತಹ ಪ್ರಶ್ನೆಗಳನ್ನು ಸಾವಿರಾರು ಜನ ಕೇಳುತ್ತಾರೆ.
ಸಮರ್ಪಕ ಉತ್ತರಗಳನ್ನು ಅಷ್ಟೇ ಸೂಕ್ತವಾಗಿ ನೀಡಿ ಸಮಾಧಾನ ಪಡಿಸುತ್ತೇನೆ.
ಮೂರು ದಶಕಗಳ ಹಿಂದೆ ನನ್ನೊಳಗಿದ್ದ ತುಂಟ ಹುಡುಗನ ಪೊಸೆಸ್ಸಿವ್ ನೆಸ್ ಕುರಿತು ಇವಳು ಈಗ ಅಣಕಿಸುತ್ತಿದ್ದಾಳೆ ಎಂಬ ಭಯ ಕಾಡಲಾರಂಭಿಸಿತು.
“ಮುಂದಿನ ವಾರ ನಿನ್ನ ಸಮಸ್ಯೆಗೆ ಉತ್ತರ ಹೇಳುವೆ” ಎಂದು ಹೇಳಿ ಜಾರಿಕೊಂಡೆ.
ಪ್ರೀತಿ-ಸ್ವಾತಂತ್ರ್ಯ ಹೀಗೆಂದರೇನು?

ಪ್ರೊ.ಸಿದ್ದು ಯಾಪಲಪರವಿ