ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬಿಕ್ಕಟ್ಟಿನ ಸಮಯದ ಸೂಕ್ತ ಆಯ್ಕೆ: ಬೊಮ್ಮಾಯಿ

ಪ್ರೊ.ಸಿದ್ದು ಯಾಪಲಪರವಿ

ಹುಬ್ಬಳ್ಳಿ ಹುಡುಗ, ಎಂಜಿನಿಯರಿಂಗ್ ಪದವೀಧರ, ಮಾಜಿ ಮುಖ್ಯಮಂತ್ರಿಗಳ ಮಗ, ಅಪ್ಪನ ಕಿರು ಬೆರಳು ಹಿಡಿದು ವಿಧಾನಸೌಧ ಸುತ್ತುತ್ತಿದ್ದ ಬಸವರಾಜ ಬೊಮ್ಮಾಯಿ ಅನಿರೀಕ್ಷಿತವಾಗಿ ರಾಜ್ಯದ ಮೂವತ್ತನೇ ಮುಖ್ಯಮಂತ್ರಿಯಾಗಿದ್ದಾರೆ. ಕರ್ನಾಟಕ ರಾಜಕಾರಣದಲ್ಲಿ ಅವರ ತಂದೆ ಎಸ್.ಆರ್.ಬೊಮ್ಮಾಯಿ ಇದೇ ರೀತಿಯ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳಾಗಿದ್ದರು. ಈಗ ಅವರ ಮಗನಿಗೂ ಅದೇ ರೀತಿಯ ಅದೃಷ್ಟ ಒಲಿದು ಬಂದಿದೆ.

ಕಳೆದ ತಿಂಗಳಿನಿಂದ ಸಾಗಿದ್ದ ಅಸಹ್ಯಕರ ಪ್ರಹಸನಕ್ಕೆ ಹೈ ಕಮಾಂಡ್ ತೆರೆ ಎಳೆದಿದೆ. ಸಿ.ಡಿ. ಹೆಸರಿನಲ್ಲಿ ಕೆಟ್ಟ ಭಾಷೆ ಬಳಸಿ ಮಾತನಾಡುವ ಕೆಲವು ರಾಜಕಾರಣಿಗಳ ಮಾತು ಕೇಳಿ ಓಕರಿಕೆ ಬಂದಿತ್ತು. ಹದ್ದು ಮೀರಿ ಆಡುವ ಮಾತುಗಳು ಮತ್ತು ದೆಹಲಿ ಓಡಾಟ ರೇಜಿಗೆ ಹುಟ್ಟಿಸಿತ್ತು. ಜಾತಿ, ಧರ್ಮದ ಹೆಸರಿನಲ್ಲಿ ಯಡಿಯೂರಪ್ಪ ಅವರನ್ನು ಹೀಯಾಳಿಸಿ, ಅಧಿಕಾರ ಹಿಡಿಯಲು ಪ್ರಯತ್ನ ಮಾಡಿದವರಿಗೆ ಹೈ ಕಮಾಂಡ್ ಸರಿಯಾದ ಶಿಕ್ಷೆ ವಿಧಿಸಿದೆ. ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳಲು ಕಾರಣರಾದ ಕೆಲವರಿಗೆ ಈ ಆಯ್ಕೆ ಆಘಾತ ತಂದಿದೆ. ಅವರೀಗ ವಿಚಿತ್ರ ಸಂಕಟ ಎದುರಿಸುವಂತಾಗಿದೆ.

ಹೈ ಕಮಾಂಡ್ ಕರ್ನಾಟಕದ ರಾಜಕೀಯ ನಾಡಿ ಮಿಡಿತವನ್ನು ಸಮರ್ಪಕವಾಗಿ ಗ್ರಹಿಸಿದ್ದಾರೆ. ತನ್ಮೂಲಕ ವಿವಾದಗಳಿಲ್ಲದ, ನಿರಹಂಕಾರಿ ಗುಣ ಧರ್ಮದ ಬಸವರಾಜ ಬೊಮ್ಮಾಯಿ ಅವರಿಗೆ ಅದೃಷ್ಟ ಒಲಿದಿದೆ. ಕೇಂದ್ರ ಬಿಜೆಪಿ ತನ್ನ ನಿಲುವನ್ನು ನಿಧಾನವಾಗಿ ಪ್ರಕಟಿಸಿದ್ದು ಖಂಡಿತವಾಗಿ ಅಭಿನಂದನೀಯ. ಹತ್ತಾರು ಹೆಸರುಗಳನ್ನು ತೇಲಿ ಬಿಟ್ಟು, ಅನೇಕರಿಗೆ ಆಸೆ ಹುಟ್ಟಿಸಿ, ಕೊನೆಗೆ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಿದೆ. ಬೊಮ್ಮಾಯಿ, ಯಡಿಯೂರಪ್ಪ ಅವರ ಹಾಗೆ ಮಾಸ್ ಲೀಡರ್ ಅಲ್ಲ, ಈಗ ಕೇಳಿ ಬರುತ್ತಿದ್ದ ಹೆಸರುಗಳಲ್ಲಿ ಸಮೂಹ ನಾಯಕತ್ವ ಗುಣ ಹೊಂದಿದವರು ಇರಲಿಲ್ಲ.

ಮೋದಿ ಅವರ ಪ್ರಭಾವದಡಿಯಲ್ಲಿ ಹೊಸ ನಾಯಕನನ್ನು ಸೃಷ್ಟಿ ಮಾಡುವ ಉದ್ದೇಶವನ್ನು ಹೈ ಕಮಾಂಡ್ ಹೊಂದಿತ್ತು. ಆದರೆ ಕರ್ನಾಟಕದಲ್ಲಿ ಯಡಿಯೂರಪ್ಪ, ಸಿದ್ರಾಮಯ್ಯ ಮತ್ತು ದೇವೆಗೌಡರನ್ನು ಬಿಟ್ಟರೆ ಜನಾಕರ್ಷಕ ನಾಯಕರೇ ಇಲ್ಲ. ಆದರೆ ಎಷ್ಟು ದಿನ ಯಡಿಯೂರಪ್ಪ ಅವರನ್ನು ನೆಚ್ಚಿಕೊಂಡು ಇರಬೇಕು ಎಂಬ ಆತಂಕ ಬಿಜೆಪಿಗೆ ಇತ್ತು. ಹಾಗಂತ ಜನ ನಾಯಕರನ್ನು ಯಾರೂ ಸೃಷ್ಟಿ ಮಾಡಲಾಗದು. ಜನ ನಾಯಕರಾದವರು ತಮ್ಮ ವ್ಯಕ್ತಿತ್ವವನ್ನು ತಾವೇ ರೂಪಿಸಿಕೊಳ್ಳಬೇಕು.‌ ಈ ಹಿನ್ನೆಲೆಯಲ್ಲಿ ಒಳ್ಳೆಯ ಆಡಳಿತ ನೀಡುವ ಸಾಮರ್ಥ್ಯ ಅನೇಕರಿಗೆ ಇರಬಹುದು. ಆದರೆ ಮಾಸ್ ನಾಯಕರ ಕೊರತೆಯನ್ನು ರಾಜ್ಯ ಎದುರಿಸುತ್ತದೆ.
ಅದರಲ್ಲೂ ಅಳೆದು ತೂಗಿ ಕೊನೆಗೆ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಲಾಗಿದೆ. ಬಹುಸಂಖ್ಯಾತ ಲಿಂಗಾಯತರು ಪಕ್ಷದಿಂದ ದೂರ ಸರಿಯಬಾರದು ಎಂಬ ಎಚ್ಚರಿಕೆಯ ಹೆಜ್ಜೆ ಇಡಲಾಗಿದೆ. ಇತರ ಕೋಮಿನವರಿಗೆ ಅಧಿಕಾರ ನೀಡುವ ಅತಿಯಾದ ರಿಸ್ಕ್ ತೆಗೆದುಕೊಳ್ಳುವ ದೈರ್ಯ ತೋರಲಿಲ್ಲ.

ಸಂಭಾವಿತ ಮತ್ತು ಯಾವುದೇ ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳದ ಯಡಿಯೂರಪ್ಪ ಅವರಿಗೆ ನಿಷ್ಠರಾಗಿದ್ದ ಬೊಮ್ಮಾಯಿ ಉಳಿದ ನಾಯಕರ ಹಾಗೆ ಲಾಬಿ ಮಾಡಿರಲಿಲ್ಲ. ದೆಹಲಿ ದಂಡ ಯಾತ್ರೆ ಮಾಡಿರಲಿಲ್ಲ, ಉಳಿದ ನಾಯಕರ ಹಾಗೆ ಕೀಳಾಗಿ, ಹಗುರವಾಗಿ ಘನತೆ ಬಿಟ್ಟು ಮಾತಾಡಿರಲಿಲ್ಲ. ಸಾವಿರಾರು ಕೋಟಿ ಹಣದ ಆಮಿಷ ಒಡ್ಡಿರಲಿಲ್ಲ, ಯಾವುದೇ ರೀತಿಯ ಜಾತಿಯ ಬಲ ಪ್ರದರ್ಶನ ಮಾಡಿರಲಿಲ್ಲ. ಮೌನವಾಗಿ ಇದ್ದರು. ಸಾದ ಲಿಂಗಾಯತ ಕೋಮಿನ ಬೊಮ್ಮಾಯಿ ಜಾತಿ ವಾದಿಯಲ್ಲ, ಕೊಟ್ಟ ಖಾತೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಕ್ರಿಯಾಶೀಲ ಸಚಿವ. ಅತಿಯಾದ ಮಹತ್ವಾಕಾಂಕ್ಷೆ ಇರದ ಸರಳ ಸ್ವಭಾವ. ಬರುವುದಿದ್ದರೆ, ಬರುವುದು ಬಂದೇ ಬರುತ್ತದೆ ಎಂಬ ಗುಣಧರ್ಮ. ಜನ ಮೆಚ್ಚುವಂತೆ ಮಾತನಾಡುವ ಶೈಲಿಯೂ ಅವರದಲ್ಲ, ತಮ್ಮ ಪಾಡಿಗೆ ತಾವು ಲೋ ಪ್ರೋಫೈಲ್ ಇಟ್ಟುಕೊಂಡು ಕೆಲಸ ಗಿಟ್ಟಿಸಿಕೊಳ್ಳುವ ಜಾಣ್ಮೆ. ಯಡಿಯೂರಪ್ಪ ಅವರ ಜೊತೆಯಲ್ಲಿ ಆಪ್ತ ಒಡನಾಟ, ಹೀಗೆ ಹಿಂದೆ ಒಡನಾಟ ಇಟ್ಟುಕೊಂಡು ಲಾಭ ಪಡೆದ ಕೆಲವರು ಮುಖ್ಯಮಂತ್ರಿಯಾಗುವ ಕನಸು ಕಂಡು ಯಡಿಯೂರಪ್ಪ ಅವರ ನಿಷ್ಠೆ ಬದಲಿಸಿ ಹೈ ಕಮಾಂಡ್ ನಿಷ್ಠೆಯನ್ನು ಜಪಿಸಲಾರಂಭಿಸಿ,ಯಡಿಯೂರಪ್ಪ ಅವರಿಂದ ಅಷ್ಟೇ ವೇಗವಾಗಿ ದೂರ ಸರಿದು ದೆಹಲಿ ಅಂಗಳದಲ್ಲಿ ಬೀಡು ಬಿಟ್ಟಿದ್ದರು.
ಯಡಿಯೂರಪ್ಪ ರಾಜಿನಾಮೆ ನೀಡುವ ಭಾವನಾತ್ಮಕ ಸನ್ನಿವೇಶದಲ್ಲಿ ಮುಖ್ಯಮಂತ್ರಿಯಾಗುವ ಸಂತಸದಲ್ಲಿ ಮೆರೆದದ್ದು ಅಷ್ಟೇ ವಿಪರ್ಯಾಸ‌.

ಯಡಿಯೂರಪ್ಪ ಅವರು ಅಪಾರವಾಗಿ ನಂಬಿದ್ದ ಅನೇಕರು ಮುಖ್ಯಮಂತ್ರಿಯಾಗುವ ಕನಸಿನ ಭರವಸೆಯಲ್ಲಿ ಕಳೆದು ಹೋಗಿದ್ದರು. ರಾಜಕಾರಣದಲ್ಲಿ ಯಾರೂ, ಯಾವುದೂ ಶಾಶ್ವತ ಅಲ್ಲ ಎಂಬುದನ್ನು ಕೆಲವರು ಮತ್ತೆ ಮತ್ತೆ ಸಾಬೀತು ಮಾಡಿ ಬಿಟ್ಟರು. ಆದರೆ ಬೊಮ್ಮಾಯಿ ಕೆ.ಜೆ.ಪಿ. ಸೇರಿರಲಿಲ್ಲ ಎಂಬುದನ್ನು ಬಿಟ್ಟರೆ, ಅಪ್ಪಟ ಯಡಿಯೂರಪ್ಪ ನಿಷ್ಟರು. ಅದೇನೇ ಇರಲಿ ಉತ್ತಮ, ಕಳಂಕ ರಹಿತ ಆಡಳಿತ ನೀಡಲಿ ಎಂದು ಬಹು ಸಂಖ್ಯಾತ ಪ್ರಜ್ಞಾವಂತರ ಆಶಯವಾಗಿದೆ.
ಸೌಮ್ಯ ಸ್ವಭಾವ ಮತ್ತು ಉತ್ತಮ ಆಡಳಿತ ಅನುಭವ ಇರುವ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸುತ್ತೇನೆ. ‌

ಸಿದ್ದು ಯಾಪಲಪರವಿ ಕಾರಟಗಿ.