ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬ್ಯಾಂಕಿಂಗ್ ಓಂಬಡ್‍ಸ್‍ಮನ್ ಎಂಬ ನಿಮ್ಮ ಗೆಳೆಯ

ಕೋವಿದ್-೧೯ ನಂತರವಂತೂ ಒನ್ಲೈನ್ ವ್ಯವಹಾರ ಹೆಚ್ವುತ್ತಿರುವಾಗಲೆ ನಿಮ್ಮ ಬ್ಯಾಂಕಿಂಗ್ ವಹಿವಾಟುಗಳ ಸುರಕ್ಷತೆಯ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಲೇ ಬೇಕಾದ ಮಾಹಿತಿ ಇಲ್ಲಿದೆ.
ತಳುಕು ಶ್ರೀನಿವಾಸ
ಇತ್ತೀಚಿನ ಬರಹಗಳು: ತಳುಕು ಶ್ರೀನಿವಾಸ (ಎಲ್ಲವನ್ನು ಓದಿ)

ಒಂದು ದಿನ ಬ್ಯಾಂಕಿನಿಂದ ಕರೆ ಬಂತು. ’ಸರ್, ನಿಮ್ಮ ಖಾತೆಯಲ್ಲಿ ಹಣವಿಲ್ಲ, ತಕ್ಷಣ ತುಂಬಿಸಿ, ಇಲ್ಲದಿದ್ದರೆ ದಂಡ ವಿಧಿಸಬೇಕಾಗಬಹುದು’.

ಮುಂದೆ ಓದಿ…

ಕೃಷ್ಣನ್, ಒಂದು ಪ್ರತಿಷ್ಟಿತ ಬ್ಯಾಂಕಿನಲ್ಲಿ ಉಳಿತಾಯ ಖಾತೆಯೊಂದನ್ನು ಹೊಂದಿದ್ದಾನೆ. ಆ ಬ್ಯಾಂಕಿನ ಕ್ರೆಡಿಟ್ ಕಾರ್ಡನ್ನೂ ಹೊಂದಿದ್ದಾನೆ. ಬ್ಯಾಂಕಿನ ಮೇಲೆ ಸಂಪೂರ್ಣ ವಿಶ್ವಾಸವಿರುವ ಅವನು ತನ್ನ ಖಾತೆಯಲ್ಲಿ ಎಷ್ಟು ಹಣ ಇದೆ, ಎಲ್ಲೆಲ್ಲಿ ಕ್ರೆಡಿಟ್ ಕಾರ್ಡನ್ನು ಉಪಯೋಗಿಸಿದ್ದೇನೆ, ಎಲ್ಲಿಂದ ತನ್ನ ಖಾತೆಗೆ ಹಣ ಬಂದು ಜಮೆ ಆಗಿದೆ, ಎಂಬುದರ ಬಗ್ಗೆ ಸ್ವಲ್ಪವೂ ಮಾಹಿತಿ ಇಟ್ಟುಕೊಂಡಿಲ್ಲ. ಒಂದು ದಿನ ಬ್ಯಾಂಕಿನಿಂದ ಕರೆ ಬಂತು.

’ಸರ್, ನಿಮ್ಮ ಖಾತೆಯಲ್ಲಿ ಹಣವಿಲ್ಲ, ತಕ್ಷಣ ತುಂಬಿಸಿ, ಇಲ್ಲದಿದ್ದರೆ ದಂಡ ವಿಧಿಸಬೇಕಾಗಬಹುದು’. ಈತನಿಗೆ ಬಹಳ ಆಶ್ಚರ್ಯವಾಯಿತು. ಅರೇ! ತನ್ನ ಖರ್ಚುಗಳಿಗಿಂತ ಜಮೆಯೇ ಹೆಚ್ಚಾಗಿರುವಾಗ, ತನ್ನ ಖಾತೆಯಲ್ಲಿ ಹಣ ಇಲ್ಲದಾಗುವುದು ಹೇಗೆ? ತಕ್ಷಣ ತನ್ನ ಖಾತೆಯಿರುವ ಬ್ಯಾಂಕಿಗೆ ಹೋದನು. ಅಲ್ಲಿಯ ಮ್ಯಾನೇಜರ್ ಅವರೊಂದಿಗೆ ವಿಚಾರಿಸಿದಾಗ, ಕ್ರೆಡಿಟ್ ಕಾರ್ಡ್‍ನಿಂದ ಒಂದು ಲಕ್ಷ ರೂಪಾಯಿಯ ಒಂದು ವ್ಯವಹಾರವಾಗಿದೆಯೆಂದೂ, ಅದರ ಬಗ್ಗೆ ಓಟಿಪಿ ತನ್ನ ಮೊಬೈಲ್‍ಗೆ ಕಳುಹಿಸಿದ್ದಾರೆಂದೂ ಮತ್ತು ಅದರ ಬಗ್ಗೆ ಏನೂ ಮನಸ್ತಾಪದ ಬಗ್ಗೆ ದೂರು ಬಂದಿಲ್ಲವೆಂದೂ ತಿಳಿಯಿತು. ಅರೇ! ತಾನು ತನ್ನ ಮೊಬೈಲ್ ಅನ್ನು ರಿಪೇರಿಗೆಂದು ನಾಲ್ಕು ದಿನಗಳ ಹಿಂದೆ ಅಂಗಡಿಗೆ ಕೊಟ್ಟಿರುವೆ. ಅದು ಹೇಗೆ ಓಟಿಪಿ ಬಗ್ಗೆ ಅಂಗಡಿಯವನು ತನಗೆ ತಿಳಿಸಿಲ್ಲ ಎಂದುಕೊಂಡು, ಮೊಬೈಲ್ ಅಂಗಡಿಗೆ ಹೋದನು.

ಮೊಬೈಲ್ ಅಂಗಡಿ ಮಾಲೀಕ ಜಾಗದಲ್ಲಿರಲಿಲ್ಲ. ಅಲ್ಲಿದ್ದ ಒಬ್ಬ ಹುಡುಗ, ಸಾರ್ ಸಂಜೆಗೆ ಬರ್ತಾರೆ, ನಿಮ್ಮ ಮೊಬೈಲ್ ರೆಡಿಯಾಗಿದೆ ತೆಗೆದುಕೊಳ್ಳಿ ಅಂತ ಕೊಟ್ಟ. ಆಗ ಅಲ್ಲಿದ್ದ ಮೆಸೇಜುಗಳನ್ನು ನೋಡಿದಾಗ ಗೊತ್ತಾಯ್ತು, ಈ ಲಕ್ಷ ರೂಪಾಯಿಯ ವ್ಯವಹಾರದ ಬಗ್ಗೆ ಓಟಿಪಿ ಬಂದದ್ದು. ತಕ್ಷಣ ಬ್ಯಾಂಕ್ ಮ್ಯಾನೇಜರ್ ಅವರಿಗೆ ಫೋನಾಯಿಸಿ ವಿಷಯ ತಿಳಿಸಿದಾಗ, ಅವರು ನಮ್ಮಲ್ಲಿ ಲಿಖಿತ ದೂರು ಕೊಡಿ, ಹಾಗೆಯೇ ಸೈಬರ್ ಪೊಲೀಸರಿಗೂ ದೂರು ಕೊಡಿ ಎಂದು ತಿಳಿಸಿದರು. ಬ್ಯಾಂಕಿಗೆ ದೂರು ಕೊಟ್ಟು ಮ್ಯಾನೇಜರ್ ಜೊತೆ ಮಾತನಾಡುತ್ತಿದ್ದಾಗ ತಿಳಿದದ್ದೇನೆಂದರೆ, ಕ್ರೆಡಿಟ್ ಕಾರ್ಡಿನ ಎಲ್ಲ ವಿವರಗಳನ್ನೂ ಮೊಬೈಲ್‍ನಲ್ಲಿ ಶೇಖರಿಸಿಟ್ಟಿದ್ದೂ, ಮೊಬೈಲ್ ರಿಪೇರಿಗೆ ಕೊಟ್ಟಾಗ, ಆ ಅಂಗಡಿಯವನು ರಿಪೇರಿ ಮಾಡುವ ಸಮಯದಲ್ಲಿ ಇದೆಲವೂ ಅವನಿಗೆ ತಿಳಿದು, ಒಂದು ಲಕ್ಷ ರೂಪಾಯಿಗಳ ವ್ಯವಹಾರವನ್ನು ಮಾಡಿದ್ದ. ಹಾಗೆ ಮಾಡುವಾಗ, ಆ ಮೊಬೈಲಿಗೆ ಓಟಿಪಿ ಬಂದಿದ್ದು, ಅದನ್ನು ಉಪಯೋಗಿಸಿ ವ್ಯವಹಾರವನ್ನು ಕೊನೆ ಮಾಡಿದ್ದ. ಇದೊಂದು ಸತ್ಯ ಸಂಗತಿ. ಹೀಗೆ ಮಾಡುವುದು ಸರಿಯಲ್ಲ. ಸೈಬರ್ ಪೊಲೀಸರು ಇದರ ಬಗ್ಗೆ ತನಿಖೆ ನಡೆಸಿ ನ್ಯಾಯವನ್ನು ಒದಗಿಸುತ್ತಾರೆ. ಹಾಗೆಯೇ, ಬ್ಯಾಂಕಿನವರದ್ದೇನಾದರೂ ತಪ್ಪಿದ್ದಲ್ಲಿ, ಬ್ಯಾಂಕಿಂಗ್ ಒಂಬಡ್‍ಸ್‍ಮನ್ ಅವರಿಗೆ ದೂರು ಕೊಟ್ಟರೆ ಅವರು ನ್ಯಾಯ ಒದಗಿಸಿಕೊಡುತ್ತಾರೆ.

ಸಾಮಾನ್ಯವಾಗಿ ಎಲ್ಲರೂ ಬ್ಯಾಂಕುಗಳಲ್ಲಿ ಅಥವಾ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಲ್ಲಿ ಖಾತೆಯನ್ನು ತೆಗೆದಿರುತ್ತಾರೆ. ಅದು ಉಳಿತಾಯದ ಖಾತೆ ಇರಬಹುದು, ಡಿ-ಮ್ಯಾಟ್ ಖಾತೆ, ಪಿಪಿಎಫ್ ಖಾತೆ, ಕ್ರೆಡಿಟ್ ಕಾರ್ಡ್ ಅಥವಾ ಸಾಲದ ಖಾತೆ, ಇನ್ಯಾವುದೇ ತರಹದ ಖಾತೆಗಳು ಇರಬಹುದು. ಹಾಗೆ ಖಾತೆ ತೆರೆಯುವಾಗ ನೀವು ಬ್ಯಾಂಕಿನೊಂದಿಗೆ ಕರಾರು ಮಾಡಿಕೊಳ್ಳುತ್ತಿದ್ದೀರಿ. ಖಾತೆ ತೆರೆಯುವಾಗ ಅರ್ಜಿಯಲ್ಲಿ ಕೆಲವು ಕಡೆ ಸಹಿ ಮಾಡಬೇಕಾಗುವುದು. ಆಗ ಎಲ್ಲ ನಿಯಮಾವಳಿಗಳನ್ನೊಮ್ಮೆ ಓದಿ ಅರ್ಥ ಮಾಡಿಕೊಂಡು ಸಹಿ ಮಾಡಿದರೆ ಒಳಿತು. ಕೆಲವು ಸಲ ಸಾಲ ಕೊಡುವಾಗ ವಿಮೆ ತೆಗೆದುಕೊಳ್ಳುವಂತೆ ಹೇಳುವರು, ಅದು ತಪ್ಪು. ವಿಮೆ ತೆಗೆದುಕೊಂಡಾಗ ಅದರ ಪ್ರೀಮಿಯಂ ಭರಿಸಬೇಕಾಗುವುದು. ನಮಗೆ ಸಾಲವೇ ವಿನಃ, ವಿಮೆಯಲ್ಲ. ಏಕೆಂದರೆ ಮುಂದೆ ಆ ಬ್ಯಾಂಕಿನೊಂದಿಗಿನ ವ್ಯವಹಾರಗಳಿಗೆ ತಾವು ಬಾಧ್ಯರಾಗುವರು. ಏನೆಲ್ಲಾ ವ್ಯವಹಾರಗಳು, ಎಂತೆಲ್ಲಾ ಸಮಯದೊಳಗೆ ಮಾಡಿಕೊಡಬೇಕೆಂಬ ಬಗ್ಗೆ ನಿಯಮಾವಳಿಗಳನ್ನು ಬಿ.ಸಿ.ಎಸ್.ಬಿ.ಐ ಅಂದರೆ ಬ್ಯಾಂಕಿಂಗ್ ಕೋಡ್ಸ್ ಅಂಡ್ ಸ್ಟ್ಯಾಂಡರ್ಡ್ ಬೋರ್ಡ್ ಆಫ್ ಇಂಡಿಯಾದವರು ಮಾಡಿದ್ದಾರೆ. ಹೌದು ಇದನ್ನೆಲ್ಲಾ ಜನ ಸಾಮಾನ್ಯರು ತಿಳಿದಿರಬೇಕಾಗಿಲ್ಲ. ಬ್ಯಾಂಕು ಮತ್ತು ಬ್ಯಾಂಕೇತರ ಸಿಬ್ಬಂದಿ ಇದನ್ನು ತಿಳಿದಿರಬೇಕು ಮತ್ತು ಅದರಂತೆ ಜನಗಳೊಂದಿಗೆ ವ್ಯವಹಾರ ಮಾಡಬೇಕು. ಅದಕ್ಕೆ ವಿರುದ್ಧವಾಗಿ ನಡೆದರೆ ಬ್ಯಾಂಕಿಂಗ್ ಓಂಬಡ್‍ಸ್‍ಮನ್ ಅವರಲ್ಲಿಗೆ ದೂರು ನೀಡಬಹುದು.

ಯಾವುದೇ ಸೇವೆಗಳಿರಲಿ, ಪಾಸ್‍ಬುಕ್ ಎಂಟ್ರಿ ಮಾಡೋದು, ಡಿಡಿ ಪಡೆಯುವುದು, ಕ್ರೆಡಿಟ್ ಕಾರ್ಡ್ ಯಾ ಡೆಬಿಟ್ ಕಾರ್ಡ್ ಪಡೆಯುವುದು, ಅವುಗಳ ನಂತರದ ಸೇವೆಗಳು, ಸಾಲದ ಅರ್ಜಿಯನ್ನು ಪರಿಷ್ಕರಣೆ, ಸಾಲದ ಬಡ್ಡಿ, ಅಸಲು ಪಾವತಿ, ನಿಯಮಿತದ ಮುನ್ನವೇ ಸಾಲವನ್ನು ಮರುಪಾವತಿಸುವ ಬಗ್ಗೆ, ಹೆಚ್ಚಿನ ಬಡ್ಡಿ ಹೇರುವುದು, ಠೇವಣಿಗಳಿಗೆ ಸರಿಯಾದ ಬಡ್ಡಿ ನೀಡದಿರುವುದು, ಡಿಜಿಟಲ್ ವ್ಯವಹಾರಗಳು, ಪಿಂಚಣಿಯನ್ನು ಸರಿಯಾಗಿ ಪಾವತಿಸದಿರುವುದು, ಪಿಂಚಣಿ ಹೆಚ್ಚಾದಾಗ ಬಾಕಿಯನ್ನು ಖಾತೆಗೆ ಜಮಾ ಮಾಡದಿರುವುದು, ಕೇಂದ್ರ ಅಥವಾ ರಾಜ್ಯ ಸರಕಾರಗಳ ತೆರಿಗೆಗಳನ್ನು ಕಟ್ಟಿಸಿಕೊಳ್ಳದಿರುವುದು, ಇತ್ಯಾದಿ ಎಷ್ಟೋ ಸೇವೆಗಳ ಬಗ್ಗೆ ಜನ ಸಾಮಾನ್ಯರು ಬ್ಯಾಂಕ್ ಅಥವಾ ಬ್ಯಾಂಕಿಂಗೇತರ ಸಂಸ್ಥೆಗಳಿಂದ ತೊಂದರೆಗೆ ಒಳಗಾಗಬಹುದು. ಇದನ್ನು ಬಗೆಹರಿಸಲು, ಭಾರತೀಯ ರಿಜರ್ವ್ ಬ್ಯಾಂಕ್ 1995ರಲ್ಲಿ ಬ್ಯಾಂಕಿಂಗ್ ಓಂಬಡ್‍ಸ್‍ಮನ್ ಯೋಜನೆಯನ್ನು ಜಾರಿಗೆ ತಂದಿತು. ಮತ್ತೆ 2006ರಲ್ಲಿ ಮತ್ತು ಈಗ ಚಾಲ್ತಿಯಲ್ಲಿರುವ 2017ರ ಪರಿಷ್ಕೃತ ಯೋಜನೆ ಜಾರಿಯಲ್ಲಿದೆ.

ಇದೊಂದು ಅರೆ ನ್ಯಾಯಾಂಗ ಸಂಸ್ಥೆ (ಕ್ವಾಸಿ ಜುಡಿಶಿಯಲ್ ಬಾಡಿ). ಈ ವ್ಯವಸ್ಥೆ, ಜನಸಾಮಾನ್ಯರಿಗೆ ಇರುವಂತಹದ್ದು. ದೊಡ್ಡ ಸಂಸ್ಥೆಗಳಿಗಲ್ಲ. ಪರಿಹಾರ ಕೋರುವ ಮಿತಿ 20 ಲಕ್ಷ ರೂಪಾಯಿಗಳಿಗೆ ಸೀಮಿತವಾಗಿರುವುದು. ಇದಕ್ಕೆ ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಅತಿ ಕಡಿಮೆ ಸಮಯದಲ್ಲಿ ಪುಕ್ಕಟೆಯಾಗಿ ನ್ಯಾಯ ದೊರೆಯುವಂತಹದ್ದು. ವಕೀಲರ ಮೂಲಕ ದೂರುಗಳನ್ನು ಸ್ವೀಕರಿಸುವುದಿಲ್ಲ.
ದೂರುಗಳನ್ನು ದಾಖಲಿಸುವುದೂ ಬಹಳ ಸುಲಭ. ಆನ್‍ಲೈನ್‍ನಲ್ಲಿ, ಪೋಸ್ಟ್ ಮೂಲಕ ಅಥವಾ ಖುದ್ದಾಗಿ ಬ್ಯಾಂಕಿಂಗ್ ಓಂಬಡ್‍ಸ್‍ಮನ್ ಕಛೇರಿಗೆ ಭೇಟಿ ನೀಡಿ ದೂರನ್ನು ದಾಖಲಿಸಬಹುದು. ಹಾಗೆ ದೂರನ್ನು ದಾಖಲಿಸಿದಾಗ ಒಂದು ಸಂಖ್ಯೆಯು ದೊರೆಯುವುದು. ಅದರ ಸಹಾಯದಿಂದ ತಮ್ಮ ದೂರು ಯಾವ ಸ್ಥಿತಿಯಲ್ಲಿದೆ ಎಂದು ಕಾಲ ಕಾಲಕ್ಕೆ ತಿಳಿದುಕೊಳ್ಳಬಹುದು. ಒಂದು ವರುಷಕ್ಕೂ ಹಳೆಯದಾದ ವ್ಯವಹಾರಗಳನ್ನು ತಿರಸ್ಕರಿಸಲಾಗುವುದು. ಒಮ್ಮೆ ಪರಿಷ್ಕರಿಸಿದ ದೂರನ್ನು ಮತ್ತೊಮ್ಮೆ ಸ್ವೀಕರಿಸುವುದಿಲ್ಲ. ನಿರಾಧಾರಿತ ದೂರುಗಳನ್ನೂ ಸ್ವೀಕರಿಸುವುದಿಲ್ಲ.

ಈ ಯೋಜನೆಯಂತೆ ಗ್ರಾಹಕರು ತಮ್ಮ ದೂರನ್ನು ಮೊದಲಿಗೆ ಯಾವ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದಾರೋ ಅವರಿಗೆ ಸಲ್ಲಿಸಬೇಕು. ಆ ದೂರನ್ನು ಸರಿಪಡಿಸಲು ಒಂದು ತಿಂಗಳ ಗಡುವು ಇರುತ್ತದೆ. ಒಂದು ತಿಂಗಳೊಳಗೆ ಉತ್ತರ ಬರದಿದ್ದರೆ, ಅಸರ್ಮಪಕ ಉತ್ತರ ನೀಡಿದ್ದರೆ ಅಥವಾ ದೂರನ್ನು ತಿರಸ್ಕರಿಸಿದರೆ, ಬ್ಯಾಂಕಿಂಗ್ ಓಂಬಡ್‍ಸ್‍ಮನ್ ಅವರಿಗೆ ದೂರನ್ನು ನೀಡಬಹುದು. ಬ್ಯಾಂಕಿಗೆ ದೂರು ಕೊಟ್ಟು, ಒಂದು ತಿಂಗಳ ಮೊದಲೇ ಓಂಬಡ್‍ಸ್‍ಮನ್ನಿಗೆ ದೂರು ಕೊಟ್ಟರೆ, ಅದು ತಿರಸ್ಕೃತವಾಗುವುದು. ಇದರ ಬಗ್ಗೆ ಗಮನವಿರಲಿ. ತಿರುಸ್ಕೃತವಾದ ದೂರನ್ನು ಮತ್ತೆ ಕೊಟ್ಟರೂ, ಅದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ದೂರನ್ನು ಕ್ಷೇತ್ರಗಳಲ್ಲೇ ದಾಖಲಿಸಬೇಕು. ಅಕಸ್ಮಾತ್ ಬೇರೆ ಕ್ಷೇತ್ರದ ಕಛೇರಿಯಲ್ಲಿ ದಾಖಲಿಸಿದರೂ, ಸರಿಯಾದ ಕ್ಷೇತ್ರಕ್ಕೆ ವರ್ಗಾಯಿತವಾಗುವುದು. ದೂರುಗಳಲ್ಲಿ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಅನ್ನು ದಾಖಲಿಸಬೇಕು. ಏನಾದರೂ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ನಿಮ್ಮನ್ನು ಸುಲಭದಲ್ಲಿ ಸಂಪರ್ಕಿಸಲು ಅನುಕೂಲವಾಗುವುದು.

ಓಂಬಡ್‍ಸ್‍ಮನ್ ಕಛೇರಿಯ ತೀರ್ಪು ದೂರುದಾರರಿಗೆ ಸಮರ್ಪಕ ಅನಿಸದಿದ್ದರೆ, ಅದರ ವಿರುದ್ಧ ಭಾರತೀಯ ರಿಜರ್ವ್ ಬ್ಯಾಂಕಿನ ಡೆಪ್ಯುಟಿ ಗವರ್ನರ್ ಅವರಿಗೆ ಅಪೀಲು ಮಾಡಬಹುದು. ಅಲ್ಲಿಯೂ ಅವರಿಗೆ ಸಮಾಧಾನಕರ ಉತ್ತರ ಸಿಗದಿದ್ದರೆ, ಕನ್‍ಸ್ಯೂಮರ್ ಫೋರಂ ಅಥವಾ ಕೋರ್ಟುಗಳಿಗೆ ಹೋಗಬಹುದು. ಆದರೊಂದು ನೆನಪಿನಲ್ಲಿಟ್ಟುಕೊಳ್ಳಬೇಕು, ಅದೆಂದರೆ ಫೋರಂ ಅಥವಾ ಕೋರ್ಟುಗಳಲ್ಲಿ ಪುಕ್ಕಟೆಯಾಗಿ ಪರಿಹಾರ ಸಿಗುವುದಿಲ್ಲ. ಆದ್ದರಿಂದ ಜನ ಸಾಮಾನ್ಯರಿಗೆ ಇದೊಂದು ಉತ್ತಮ ವೇದಿಕೆ.

ಹೆಚ್ಚಿನ ಮಾಹಿತಿಗಳಿಗೆ ಸಂಪರ್ಕ ಸಂಖ್ಯೆ: 080 22277660/ 080 22180221
ಫ್ಯಾಕ್ಸ್ 080 22276114
ಇ-ಮೇಲ್ : cms.bobengaluru@rbi.org.in