ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬ್ಯಾಂಕ್ ಮುಷ್ಕರ-ಮುಂದುವರೆದ ಗೊಂದಲಗಳ ನಡುವೆ

ನಾ ದಿವಾಕರ

ಮತ್ತೊಂದು ಬ್ಯಾಂಕ್ ಮುಷ್ಕರ ಮುಗಿದಿದೆ. ಹತ್ತು ಲಕ್ಷ ಬ್ಯಾಂಕ್ ನೌಕರರು ತಮ್ಮ ಸಾಂಸ್ಥಿಕ ಉಳಿವಿಗಾಗಿ ಎರಡು ದಿನದ ಮುಷ್ಕರ ಹೂಡಿ ತಮ್ಮ ಕಾರ್ಯಕ್ಷೇತ್ರಕ್ಕೆ ಹಿಂದಿರುಗಿದ್ದಾರೆ. ಬ್ಯಾಂಕ್ ನೌಕರರ ಸಂಘಟನೆಯ ಇತಿಹಾಸವನ್ನು ಕೆದಕುತ್ತಾ ಹೋದರೆ ನಾವು 1947ಕ್ಕೂ ಹಿಂದಿನ ದಿನಗಳಿಗೆ ಮರಳಬೇಕಾಗುತ್ತದೆ. ಸ್ವತಂತ್ರ ಭಾರತದಷ್ಟೇ ಸುದೀರ್ಘ ಇತಿಹಾಸ ಹೊಂದಿರುವ ಬ್ಯಾಂಕ್ ನೌಕರರ ಸಂಘಟನೆಗೆ ಮುಷ್ಕರ ಎನ್ನುವುದು ಹೋರಾಟದ ಒಂದು ಹಾದಿ. ನೂರಾರು ಮುಷ್ಕರಗಳ ಮೂಲಕವೇ ತಮ್ಮ ಸವಲತ್ತು, ಸೌಲಭ್ಯಗಳನ್ನು ಗಳಿಸಿರುವ ಬ್ಯಾಂಕ್ ನೌಕರರ ಹೋರಾಟಗಳನ್ನು ಈ ಸ್ವಹಿತಾಸಕ್ತಿಯ ಚೌಕಟ್ಟಿಗಷ್ಟೇ ಸೀಮಿತಗೊಳಿಸುವುದೂ ತಪ್ಪಾಗುತ್ತದೆ. ಏಕೆಂದರೆ ಬ್ಯಾಂಕ್ ನೌಕರರ ಸತತ ಹೋರಾಟಗಳು ಬ್ಯಾಂಕ್ ರಾಷ್ಟ್ರೀಕರಣಕ್ಕೂ ಕಾರಣವಾಗಿವೆ ಎನ್ನುವುದು ಚಾರಿತ್ರಿಕ ಸತ್ಯ.

ಆದರೆ ದೇಶದ ಸಾಮಾಜಿಕ-ರಾಜಕೀಯ ಸ್ವರೂಪಗಳು ಬದಲಾಗುತ್ತಿರುವಂತೆಯೇ ಔದ್ಯಮಿಕ ಕ್ಷೇತ್ರದ ವಾಸ್ತವಗಳೂ ಬದಲಾಗುತ್ತಲೇ ಹೋಗುತ್ತವೆ. ಐದು ದಶಕಗಳ ಹಿಂದೆ ಫಲಪ್ರದವಾಗಬಹುದಾಗಿದ್ದ ಹೋರಾಟದ ಮಾರ್ಗಗಳು ಇಂದು ನಿಷ್ಫಲವಾಗುವ ಸಾಧ್ಯತೆಗಳೇ ಹೆಚ್ಚು. ಭಾರತದ ಸಂದರ್ಭದಲ್ಲಿ ಈ ಸಮಸ್ಯೆಯನ್ನು ಎದುರಿಸುತ್ತಲೇ ಇದ್ದೇವೆ. ಬೆಲೆ ಏರಿಕೆಗಳಿಂದ ಹಿಡಿದು ಸಾಂಸ್ಥಿಕ ಪಲ್ಲಟಗಳವರೆಗಿನ ಹೋರಾಟಗಳಲ್ಲಿ ಜನಾಂದೋಲನಗಳು ಹಿನ್ನಡೆ ಕಾಣುತ್ತಿದ್ದರೆ ಅದಕ್ಕೆ ಕಾರಣ ಹೋರಾಟದ ಸ್ವರೂಪಗಳಲ್ಲಿ ಬದಲಾವಣೆ ಕಾಣದಿರುವುದೇ ಆಗಿದೆ. ಬ್ಯಾಂಕ್ ನೌಕರ ಸಂಘಟನೆಗಳು ಈ ಸೂಕ್ಷ್ಮವನ್ನು ಗ್ರಹಿಸಲು ವಿಫಲವಾಗಿರುವುದನ್ನು ಕಳೆದ ಮೂರು ದಶಕಗಳಲ್ಲಿ ಕಾಣುತ್ತಲೇ ಬಂದಿದ್ದೇವೆ.

ಇತ್ತೀಚಿನ ಬ್ಯಾಂಕ್ ಮುಷ್ಕರ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ವಾದ ವಿವಾದಗಳನ್ನು ಹುಟ್ಟುಹಾಕಿದೆ. ಬ್ಯಾಂಕ್ ನೌಕರರ ಸಾಮಾಜಿಕ-ಸಾರ್ವಜನಿಕ ಬದ್ಧತೆಯಿಂದ ಮೊದಲುಗೊಂಡು ಒಟ್ಟಾರೆ ಕಾರ್ಮಿಕ ಹಿತಾಸಕ್ತಿಯ ರಕ್ಷಣೆಯವರೆಗೆ ಅಭಿಪ್ರಾಯಗಳು ವ್ಯಕ್ತವಾಗಿವೆ. ಕಳೆದ ಏಳು ವರ್ಷಗಳಲ್ಲಿ ದೇಶದಲ್ಲಿ ಸೃಷ್ಟಿಯಾಗಿರುವ ರಾಜಕೀಯ ಸಮೂಹ ಸನ್ನಿ ಮತ್ತು ಸಾಂಸ್ಕೃತಿಕ ಅತಿಕ್ರಮಣ ಸುಶಿಕ್ಷಿತ ಬ್ಯಾಂಕ್ ನೌಕರರನ್ನೂ ಆಕ್ರಮಿಸಿದ್ದರೆ ಅಚ್ಚರಿಯೇನಿಲ್ಲ. ಏಕೆಂದರೆ ಮೂಲತಃ ಬ್ಯಾಂಕ್ ನೌಕರರು ಹಿತವಲಯದ ಪ್ರತಿನಿಧಿಗಳು. ಈ ಹೊತ್ತಿನ ಭಾರತದ ಆಡಳಿತ ವ್ಯವಸ್ಥೆಯೂ ಈ ಹಿತವಲಯದ ಪರವಾಗಿಯೇ ಕಾರ್ಯನಿರ್ವಹಿಸುತ್ತಿದೆ.

ರಾಜಕೀಯ ಪ್ರಜ್ಞೆ, ಸಾಮಾಜಿಕ ಸಂವೇದನೆ ಮತ್ತು ಸಾರ್ವಜನಿಕ ಸೂಕ್ಷ್ಮತೆ ಇವೆಲ್ಲವೂ ಒಂದು ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಅಗತ್ಯವಾದ ಅಡಿಗಲ್ಲುಗಳು. ಈ ಪರಿಕರಗಳು ಮೂಲತಃ ಇರಬೇಕಾದುದು ದೇಶದ ಸುಶಿಕ್ಷಿತ ಜನರಲ್ಲಿ, ಸ್ಥಿರ-ಸುಭದ್ರ ಜೀವನ ನಡೆಸುವವರಲ್ಲಿ ಮತ್ತು ನಾಳಿನ ಚಿಂತೆ ಇಲ್ಲದವರಲ್ಲಿ. ಬಂಡವಾಳ ವ್ಯವಸ್ಥೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲೆಂದೇ ಒಂದು ಮಧ್ಯಮ ವರ್ಗವನ್ನು ಸೃಷ್ಟಿಸಿ, ಇಡೀ ವರ್ಗವನ್ನು ಸದಾ ಹಿತವಲಯದಲ್ಲಿರಿಸಲು ಅಗತ್ಯವಾದ ಎಲ್ಲ ಪರಿಕರಗಳನ್ನೂ ಒದಗಿಸುತ್ತದೆ. ಭಾರತದಲ್ಲಿ ಅನುಸರಿಸಲಾದ ಅರೆ ಸಮಾಜವಾದಿ ಆರ್ಥಿಕ ನೀತಿಗಳೂ ಸಹ ಇದೇ ಮಧ್ಯಮವರ್ಗವನ್ನು ಸೃಷ್ಟಿಸಿದೆ. ನವ ಉದಾರವಾದ, ಜಾಗತೀಕರಣ ಮತ್ತು ಡಿಜಿಟಲ್ ಜಗತ್ತು ಈ ವರ್ಗವನ್ನು ‘ ಹಿತವಲಯ ’ ದಿಂದ ‘ ಸುಖವಲಯಕ್ಕೆ ’ ಕೊಂಡೊಯ್ಯುವ ಮೂಲಕ ತಳಮಟ್ಟದ ಸಮಾಜದಿಂದ ವಿಮುಖವಾಗುವಂತೆ ಮಾಡಿದೆ.

ಈ ಮೇಲ್‍ಚಲನೆಗೆ ಒಳಗಾಗಿರುವವರಲ್ಲಿ ಬ್ಯಾಂಕಿಂಗ್, ವಿಮೆ, ಸಾರಿಗೆ ಮತ್ತಿತರ ಸಾರ್ವಜನಿಕ ಉದ್ದಿಮೆಗಳ ನೌಕರರೇ ಹೆಚ್ಚಿನ ಸಂಖ್ಯೆಯಲ್ಲಿರುವುದನ್ನು ಕಳೆದ ಮೂರು ದಶಕಗಳಲ್ಲಿ ಕಾಣುತ್ತಿದ್ದೇವೆ. ತನುಮನಧನಗಳನ್ನರ್ಪಿಸಿ ಸಮಾಜ ಪರಿವರ್ತನೆಗೆ, ಸಮ ಸಮಾಜಕ್ಕೆ ಹೋರಾಡಬೇಕಾದವರು ಹಿತವಲಯದಲ್ಲಿದ್ದರೂ, ಬೌದ್ಧಿಕವಾಗಿ ತಮ್ಮ ಸುತ್ತಲಿನ ಶೋಷಿತರ, ನೊಂದವರ, ಅವಕಾಶವಂಚಿತರ ಮತ್ತು ಸಂತ್ರಸ್ತರ ಬವಣೆಯನ್ನು ಅರ್ಥಮಾಡಿಕೊಳ್ಳುವಷ್ಟು ನಾಗರಿಕ ಪ್ರಜ್ಞೆಯನ್ನು ಹೊಂದಿರಬೇಕು. ಈ ನಿರೀಕ್ಷೆಯೇ ಅತಿಯಾಯಿತು ಎನಿಸಿದರೂ ತಪ್ಪೇನಿಲ್ಲ. ಈ ವರ್ಗದವರ ನಡುವೆ ಇಂತಹ ಒಂದು ನಾಗರಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಎಡಪಕ್ಷಗಳ, ಎಡಪಂಥೀಯ ಕಾರ್ಮಿಕ ಸಂಘಟನೆಗಳ ಪಾತ್ರ ಮಹತ್ವ ಪಡೆಯುತ್ತದೆ.

ನಾವು ಎಡವಿರುವುದು ಇಲ್ಲಿಯೇ ಎನಿಸುತ್ತದೆ. ನಿಜ, ಬ್ಯಾಂಕ್ ನೌಕರರು ಕೆಂಬಾವುಟದಡಿಯೇ ಹೋರಾಡಿದರೂ ಅದು ಕೇವಲ ಹತ್ತೊಕ್ಕಾಯದ ಲಾಂಛನವಾಗಿತ್ತೇ ಹೊರತು, ಜ್ಞಾನ ವಿಸ್ತರಣೆಯ ಅಥವಾ ಬೌದ್ಧಿಕ ಕಸರತ್ತಿನ ಭೂಮಿಕೆಯಾಗಿರಲಿಲ್ಲ. ಬಹುಸಂಖ್ಯೆಯ ಬ್ಯಾಂಕ್ ನೌಕರರನ್ನು ಪ್ರತಿನಿಧಿಸುವ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘಟನೆ (ಎಐಬಿಇಎ) ಮತ್ತು ಭಾರತೀಯ ಬ್ಯಾಂಕ್ ನೌಕರರ ಒಕ್ಕೂಟ (ಬಿಇಎಫ್‍ಐ), ಎರಡೂ ಸಂಘಟನೆಗಳು ಎಡಪಕ್ಷಗಳೊಡನೆ ಗುರುತಿಸಿಕೊಂಡಿದ್ದರೂ, ಈ ಸಂಘಟನೆಗಳ ನಾಯಕತ್ವ ಎಡಪಂಥೀಯ ಹೋರಾಟ ಸಮಿತಿಗಳಲ್ಲಿ ಗುರುತಿಸಿಕೊಂಡು, ಪಕ್ಷಗಳೊಡನೆಯೂ ನಿಕಟ ಸಂಪರ್ಕ ಹೊಂದಿದ್ದರೂ, ಈ ಮಧ್ಯಮ ವರ್ಗದ ನೌಕರರಲ್ಲಿ ಎಡಪಂಥೀಯ ಬೌದ್ಧಿಕ ಚಿಂತನೆಗಳು, ವೈಚಾರಿಕತೆ, ವೈಜ್ಞಾನಿಕ ಮನೋಭಾವ, ಸಮ ಸಮಾಜದ ಪರಿಕಲ್ಪನೆ ಮತ್ತು ಶೋಷಣೆಯ ವಿರುದ್ಧ ಹೋರಾಡುವ ಮನೋಭಾವವನ್ನು ಮೂಡಿಸುವ ಪ್ರಯತ್ನಗಳು ನಡೆದೇ ಇಲ್ಲ ಎನ್ನುವುದು ವಾಸ್ತವ.

ಏಕೆಂದರೆ ಮೂಲತಃ ಕಾರ್ಮಿಕ ಸಂಘಟನೆಗಳು ಕಾರ್ಮಿಕರ ಆರ್ಥಿಕ ಹಿತಾಸಕ್ತಿ ಮತ್ತು ಸೇವಾ ಕ್ಷೇತ್ರದ ಸುಭದ್ರತೆಯತ್ತ ಹೆಚ್ಚಿನ ಗಮನ ನೀಡುತ್ತವೆ. ಬೌದ್ಧಿಕ ಚಿಂತನೆ ಮತ್ತು ಸೈದ್ಧಾಂತಿಕ ಪರಿಕಲ್ಪನೆಗಳು ಮೇಲ್ಪದರದಲ್ಲೇ ಸೀಮಿತವಾಗಿಬಿಡುತ್ತವೆ. ಸಂಘಟನೆಯ ಎಲ್ಲ ಸದಸ್ಯರನ್ನೂ ಎಡಪಂಥೀಯರನ್ನಾಗಿ ಅಥವಾ ಮಾರ್ಕ್ಸ್ ವಾದಿಗಳನ್ನಾಗಿ ಮಾಡಬೇಕು ಎಂದು ಅಪೇಕ್ಷಿಸುವುದು ಒಪ್ಪುವಂತಹುದಲ್ಲ. ಆದರೆ ದುಡಿಯುವ ವರ್ಗಗಳ ಹೋರಾಟದಲ್ಲಿ ಮುಂಚೂಣಿ ನಾಯಕತ್ವ ವಹಿಸುವ ಒಂದು ಗುರುತರ ಹೊಣೆಗಾರಿಕೆ ಈ ಸುಶಿಕ್ಷಿತ, ಹಿತವಲಯದ ಕಾರ್ಮಿಕರ ಮೇಲೆ ಇರುತ್ತದೆ. ಈ ಹೊಣೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ಕಾರ್ಮಿಕರ ನಡುವೆ ಸಮಾಜಮುಖಿ ಚಿಂತನೆಗಳನ್ನು ಬಿತ್ತುವ ಕಾರ್ಯ ವ್ಯವಸ್ಥಿತವಾಗಿ ನಡೆಯಬೇಕು. ಬ್ಯಾಂಕ್ ನೌಕರರ ನಡುವೆ ಇದು ಸಾಧ್ಯವಾಗಲೇ ಇಲ್ಲ. ವ್ಯಕ್ತಿಗತವಾಗಿ ಕೆಲವರು ರೂಢಿಸಿಕೊಂಡ ಚಿಂತನಾ ಕ್ರಮಗಳನ್ನು ಹೊರತುಪಡಿಸಿದರೆ ಒಂದು ಸಂಘಟನಾತ್ಮಕ ಕಾರ್ಯಸೂಚಿಯಾಗಿ ಇದು ಸಾಕಾರಗೊಳ್ಳಲಿಲ್ಲ.

ಇದಕ್ಕೆ ವ್ಯತಿರಿಕ್ತವಾಗಿ, ಅಲ್ಪಸಂಖ್ಯೆಯಲ್ಲಿದ್ದರೂ ವ್ಯವಸ್ಥಿತವಾಗಿ ಹಲವು ಬ್ಯಾಂಕುಗಳಲ್ಲಿ ಸಂಘಟನಾ ಸಾಮರ್ಥ್ಯವನ್ನು ಹೊಂದಿರುವ, ಜನಸಂಘ-ಸಂಘಪರಿವಾರದೊಡನೆ ಗುರುತಿಸಿಕೊಂಡಿರುವ ರಾಷ್ಟ್ರೀಯ ಬ್ಯಾಂಕ್ ನೌಕರರ ಸಂಘಟನೆ (ಎನ್‍ಒಬಿಡಬ್ಲ್ಯೂ) ತನ್ನದೇ ಆದ ಕಾರ್ಯಸೂಚಿಯನ್ನು ಜಾರಿಗೊಳಿಸುತ್ತಲೇ ಬಂದಿರುವುದನ್ನು ಗಮನಿಸಬಹುದು. ಇಂದಿಗೂ ಸಹ ಈ ಸಂಘಟನೆಯ ಸದಸ್ಯತ್ವ ನಗಣ್ಯವೇ ಆದರೆ ಇದರ ಚಿಂತನಾ ಕ್ರಮ, ಬೌದ್ಧಿಕ ನೆಲೆ ಮತ್ತು ಸೈದ್ಧಾಂತಿಕ ನಿಲುಮೆ ಬಹುಪಾಲು ಎಐಬಿಇಎ-ಬಿಇಎಫ್‍ಐ ಸದಸ್ಯರನ್ನು ಆವರಿಸಿರುವುದು ಸ್ಪಷ್ಟ. ಸದಾ ಬ್ಯಾಂಕಿನ ಆಡಳಿತ ವ್ಯವಸ್ಥೆಯ ಮೇಲ್ಪದರದೊಂದಿಗೆ ಹೊಂದಾಣಿಕೆಯನ್ನು ಸಾಧಿಸುತ್ತಲೇ ಮೇಲಧಿಕಾರಿಗಳೊಂದಿಗೆ ಸ್ನೇಹ ಸಂಪಾದಿಸುತ್ತಾ ಬಂದಿರುವ ಈ ಸಂಘಟನೆಯ ಪ್ರಭಾವವನ್ನು ಇಂದು ಪ್ರತಿಯೊಂದು ಬ್ಯಾಂಕಿನ ಶಾಖೆ/ಕಚೇರಿಗಳಲ್ಲೂ ನಡೆಯುವ ಗಣಹೋಮ, ಸತ್ಯನಾರಾಯಣ ಪೂಜೆ, ಶುಕ್ರವಾರದ ಲಕ್ಷ್ಮಿಪೂಜೆ ಮತ್ತಿತರ ಆಚರಣೆಗಳಲ್ಲಿ ಕಾಣಬಹುದು. ಈ ಆಚರಣೆಗಳಲ್ಲಿ ಎಐಬಿಇಎ ಸ್ಥಳೀಯ ನಾಯಕರೂ ಸಕ್ರಿಯವಾಗಿ ಭಾಗವಹಿಸುವುದೂ ಇದೆ, ದುರಂತ ಆದರೂ ಸತ್ಯ.

ಎನ್‍ಒಬಿಡಬ್ಲ್ಯು ಸಂಘಟನೆ ಕಾರ್ಮಿಕ ಹಿತಾಸಕ್ತಿಯನ್ನು ಸಾಂಸ್ಥಿಕ ನಿಷ್ಠೆಯೊಂದಿಗೆ ಮುಖಾಮುಖಿಯಾಗಿಸುವ ಮೂಲಕ, ಹಲವಾರು ಸಂದರ್ಭಗಳಲ್ಲಿ ಬ್ಯಾಂಕ್ ನೌಕರರ ನ್ಯಾಯಯುತ ಮುಷ್ಕರಗಳನ್ನೂ ವಿರೋಧಿಸಿರುವುದನ್ನು ಇತಿಹಾಸದ ಪುಟಗಳಲ್ಲಿ ಗುರುತಿಸಬಹುದು. ಎಡಪಂಥೀಯ ಕಾರ್ಮಿಕ ಸಂಘಟನೆಗಳು ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳಲೆಂದೇ ರಾಷ್ಟ್ರೀಕರಣವನ್ನು ಬಯಸುತ್ತವೆ ಎನ್ನುವ ಬಾಲಿಶ ಅಭಿಪ್ರಾಯಗಳೂ ಈ ಸಂಘಟನೆಯಿಂದ ಹಲವಾರು ಸಂದರ್ಭಗಳಲ್ಲಿ ವ್ಯಕ್ತವಾಗಿವೆ. ಬ್ಯಾಂಕ್ ನೌಕರರ ವೇತನ, ಭತ್ಯೆ ಮತ್ತು ಸೇವಾ ನಿಯಮಗಳಿಗಾಗಿ ನಡೆಯುವ ಮುಷ್ಕರಗಳನ್ನೂ ಈ ಸಂಘಟನೆ ವಿರೋಧಿಸಿದ್ದೂ ಇದೆ. ಇದು ಬಲಪಂಥೀಯ ಸಂಘಟನೆಯೊಂದರ ಸೈದ್ಧಾಂತಿಕ ಸಿದ್ಧತೆ ಮತ್ತು ಬೌದ್ಧಿಕ ಪ್ರಸರಣದ ಮಾದರಿ ಎಂದು ಹೇಳಬಹುದು.

ಇದಕ್ಕೆ ಪ್ರತಿಯಾಗಿ ಎಡಪಕ್ಷಗಳೊಡನೆ ಗುರುತಿಸಿಕೊಂಡಿದ್ದ ಎಐಬಿಇಎ ಮತ್ತು ಬಿಇಎಫ್‍ಐ ತಮ್ಮಲ್ಲಿದ್ದ ಮಾನವ ಮತ್ತು ಹಣಕಾಸು ಸಂಪನ್ಮೂಲಗಳ ಹೊರತಾಗಿಯೂ ತಳಮಟ್ಟದಿಂದ ಬೌದ್ಧಿಕ ಚಿಂತನೆಗೆ ಅನುಕೂಲವಾಗುವಂತಹ ವಾತಾವರಣವನ್ನು ಸೃಷ್ಟಿಸಲಿಲ್ಲ. ಎರಡೂ ಸಂಘಟನೆಗಳ ನಡುವೆ ಇದ್ದ ಶೀತಲ ಸಮರ ಮತ್ತು ಅಸ್ತಿತ್ವದ ಸಂಘರ್ಷ ಒಂದು ರೀತಿಯಲ್ಲಿ ಕಾರ್ಮಿಕ ಐಕ್ಯತೆಗೆ ಘಾಸಿ ಉಂಟುಮಾಡಿರುವುದೇ ಹೆಚ್ಚು. ಬ್ಯಾಂಕ್ ನೌಕರ ವರ್ಗದಲ್ಲಿ ಸಾಮಾಜಿಕ ಕಳಕಳಿ, ಸಮಸಮಾಜ ನಿರ್ಮಾಣದ ಬದ್ಧತೆ, ಶೋಷಣೆಯ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ, ತಾಲ್ಲೂಕು ಮಟ್ಟದಲ್ಲಿ ವಿಚಾರ ಮಂಥನಕ್ಕೆ ಅವಕಾಶ ಮಾಡಿಕೊಡುವಷ್ಟು ಸಂಪನ್ಮೂಲಗಳನ್ನು ಹೊಂದಿದ್ದರೂ ಎರಡೂ ಸಂಘಟನೆಗಳು, ವಾಸ್ತವ ಸನ್ನಿವೇಶಗಳಿಗೆ ವಿಮುಖವಾದದ್ದು ದುರಂತ ಸತ್ಯ. ಇದರ ಫಲವನ್ನು ಇಂದು ಕಾಣುತ್ತಿದ್ದೇವೆ.

ಕೆಳಮಧ್ಯಮ ವರ್ಗದ ಕಾರ್ಮಿಕರನ್ನು ಹಿತವಲಯದಲ್ಲಿರಿಸುವ ಮೂಲಕ ಮಧ್ಯಮ ವರ್ಗಕ್ಕೆ , ಕೆಲವೊಮ್ಮೆ ಮೇಲ್ ಮಧ್ಯಮ ವರ್ಗಕ್ಕೆ ಮುನ್ನಡೆಸುವಲ್ಲಿ ಬ್ಯಾಂಕ್ ನೌಕರ ಸಂಘಟನೆಗಳ ಯಶಸ್ಸು ಅಪಾರ. ಇದು ಒಂದು ಕಾರ್ಮಿಕ ಸಂಘಟನೆಯ ಹೆಗ್ಗಳಿಕೆಯೂ ಹೌದು. ಆದರೆ ಈ ಸೌಲಭ್ಯ, ಸವಲತ್ತುಗಳನ್ನು ಗಳಿಸಲು ನಾವು ಬಳಸಿದ ಕೆಂಬಾವುಟದ ಧ್ಯೇಯ ಇದನ್ನೂ ಮೀರಿದ್ದಾಗಿತ್ತು ಎನ್ನುವ ಪ್ರಜ್ಞೆ ಸಂಘಟನೆಗಳಲ್ಲಿ ಇರಬೇಕಿತ್ತು. ನಮ್ಮ ಸುತ್ತಲಿನ ಸಮಾಜದಲ್ಲಿ ಸಾಂವಿಧಾನಿಕ ಹಕ್ಕುಗಳಿಗಾಗಿ, ಬದುಕುವ ಹಕ್ಕುಗಳಿಗಾಗಿ, ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಾ ನಿರಂತರ ಹೋರಾಟದಲ್ಲಿ ತೊಡಗಿರಬಹುದಾದ ಕೃಷಿ ಕಾರ್ಮಿಕರು, ಭೂರಹಿತ ರೈತರು, ಗ್ರಾಮೀಣ ಬಡಜನತೆ, ನಗರವಾಸಿ ಬಡ ಜನತೆ, ಕಾರ್ಖಾನೆಗಳ ಕಾರ್ಮಿಕರು ಮತ್ತು ಹೆಚ್ಚಿನ ಶಿಕ್ಷಣವಿಲ್ಲದೆ ಸಾರ್ವಜನಿಕ ಉದ್ದಿಮೆಗಳಲ್ಲಿ ದುಡಿಯುವ ಲಕ್ಷಾಂತರ ದುಡಿಯುವ ಕೈಗಳಿಗೆ ಮುಂಚೂಣಿ ನಾಯಕತ್ವ ವಹಿಸುವ ನೈತಿಕ ಹೊಣೆ ಈ ಸಂಘಟನೆಗಳಲ್ಲಿ ಇರಬಹುದಾಗಿತ್ತು.

ಎಡಪಕ್ಷಗಳೂ ಸಹ ತಮ್ಮ ಕಾರ್ಮಿಕ ಸಂಘಟನೆಗಳನ್ನು ರಾಜಕೀಯ ಹೋರಾಟಗಳಲ್ಲಿ ತೊಡಗುವಂತೆ ಪ್ರಚೋದಿಸಿದ್ದರೂ, ಸಮಾಜದ ವಿಭಿನ್ನ ಸ್ತರಗಳಲ್ಲಿ ಕಣ್ಣಿಗೆ ರಾಚುವಂತಿದ್ದ ಅನ್ಯ ಜನಸಮುದಾಯಗಳ ಬದುಕು ಕಟ್ಟಿಕೊಳ್ಳುವ ಹೋರಾಟಗಳಿಗೆ ಸ್ಪಂದಿಸುವಂತಹ ಒಂದು ವಾತಾವರಣವನ್ನಾಗಲೀ, ಬೌದ್ಧಿಕ ಚಿಂತನೆಯ ನೆಲೆಯನ್ನಾಗಲೀ ರೂಪಿಸಲು ವಿಫಲವಾಗಿವೆ. ಪ್ರತಿಷ್ಠಿತ ಸಾರ್ವಜನಿಕ ಉದ್ದಿಮೆಗಳಲ್ಲಿ ಸಕ್ರಿಯವಾಗಿರುವ ಕಾರ್ಮಿಕ ಸಂಘಟನೆಗಳೂ ಸಹ ಕೆಂಬಾವುಟವನ್ನು ತಮ್ಮ ನಾಲ್ಕು ಗೋಡೆಗಳ ನಡುವಿನ ಅಸ್ತಿತ್ವದ ಆಶ್ರಯ ತಾಣದಂತೆಯೇ ಭಾವಿಸಿರುವುದು ಸ್ಪಷ್ಟ. ವರ್ಷಕ್ಕೊಮ್ಮೆ ನಡೆಯುವ ಸಾರ್ವತ್ರಿಕ ಹೋರಾಟವನ್ನು ಹೊರತುಪಡಿಸಿ, ಎಲ್ಲ ಶ್ರಮಿಕ ವರ್ಗಗಳನ್ನೂ ಒಂದುಗೂಡಿಸಿ ಹೋರಾಟದ ಮಾರ್ಗದಲ್ಲಿ ಮುನ್ನಡೆಸುವಂತಹ ಚಿಂತನೆ ಈ ಸಂಘಟನೆಗಳಲ್ಲಿ ಮೂಡಿಯೇ ಇಲ್ಲ ಎನ್ನಬಹುದು. ಹಾಗಾಗಿ ಶ್ರಮಜೀವಿಗಳ ಐಕಮತ್ಯ ಹಲವಾರು ಸಂದರ್ಭಗಳಲ್ಲಿ ಕಾಣಿಸಿಕೊಂಡರೂ, ಐಕ್ಯತೆ ಇಂದಿಗೂ ಮರೀಚಿಕೆಯಾಗಿಯೇ ಉಳಿದಿದೆ. ಹಿತಾಸಕ್ತಿಯ ಸಂಘರ್ಷ ಮತ್ತು ನಾಯಕತ್ವದ ಪ್ರತಿಷ್ಠೆಗಳು ಇಲ್ಲಿ ಪ್ರಧಾನವಾಗಿ ಕಂಡುಬರುವುದು ಸಹಜ.

1991ರ ಜಾಗತೀಕರಣ ಮತ್ತು ನವ ಉದಾರವಾದದ ನಂತರದಲ್ಲಾದರೂ ಈ ಪರಿಸ್ಥಿತಿ ಬದಲಾಗಬೇಕಿತ್ತು. ನವ ಉದಾರವಾದಿ ನೀತಿಗಳು ಮಧ್ಯಮ ವರ್ಗಗಳಲ್ಲಿ ಸೃಷ್ಟಿಸಿದ ಭ್ರಮೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಹಲವು ರೀತಿಯ ಚಿಂತನ-ಮಂಥನಗಳು ನಡೆಯಬಹುದಿತ್ತು. ಕಾಲಕಾಲಕ್ಕೆ ನಡೆಯವ ಕಾರ್ಮಿಕ ಮಹಾಧಿವೇಶನಗಳನ್ನು ವೈಭವಯುತ ಜಾತ್ರೆಗಳಂತೆ ನಡೆಸುವ ವಿಕೃತಿಗೆ ಬಲಿಯಾದ ಬ್ಯಾಂಕ್ ನೌಕರರ ಸಂಘಟನೆಗಳು ಇಂತಹ ಅಧಿವೇಶನಗಳ ಮೂಲಕವೇ ತಳಮಟ್ಟದವರೆಗೂ ಜಾಗೃತಿ ಸಮಾವೇಶಗಳನ್ನು ನಡೆಸಿದ್ದಲ್ಲಿ ಇಂದು ಬ್ಯಾಂಕ್ ಉದ್ಯೋಗಿಗಳೊಂದಿಗೆ ಕಿರಾಣಿ ವರ್ತಕರು, ಬೀದಿ ಬದಿ ವ್ಯಾಪಾರಿಗಳು, ತಳ್ಳುಗಾಡಿ ವ್ಯಾಪಾರಿಗಳು, ಕೃಷಿ ಕಾರ್ಮಿಕರು, ಅಸಂಘಟಿತ ಕಟ್ಟಡ ಕಾರ್ಮಿಕರು ಹೆಗಲಿಗೆ ಹೆಗಲು ನೀಡುವ ಸಾಧ್ಯತೆಗಳಿದ್ದವು.

ಅಪಾರ ಧನಸಂಪನ್ಮೂಲ ಹೊಂದಿರುವ ಮಧ್ಯಮ ವರ್ಗದ ಕಾರ್ಮಿಕ ಸಂಘಟನೆಗಳು ತಮ್ಮ ಬಳಿ ಇರುವ ಧನ ಸಂಪತ್ತನ್ನು ಸದ್ವಿನಿಯೋಗ ಮಾಡುವುದೆಂದರೆ ಭವನಗಳನ್ನು ನಿರ್ಮಿಸುವುದಲ್ಲ, ಐಷಾರಾಮಿ ಕಚೇರಿಗಳನ್ನು ರೂಪಿಸುವುದಲ್ಲ. ಇದು ಕೆಂಬಾವುಟದ ಪರಿಕಲ್ಪನೆಗೆ ಹೊರತಾದದ್ದು. ಮೂಲತಃ ಈ ಸಂಪನ್ಮೂಲಗಳನ್ನು ಬಳಸಿಕೊಂಡು, ಮಾನವ ಸಂಪನ್ಮೂಲಗಳನ್ನು ಸಮರ್ಪಕವಾಗಿ ತೊಡಗಿಸುವ ಮೂಲಕ ಶೋಷಿತ, ದಮನಿತ, ಅವಕಾಶವಂಚಿತ ಜನಸಮುದಾಯಗಳ ಬಳಿ ಹೋಗಬಹುದಿತ್ತು. ಗ್ರಾಮೀಣ ಬ್ಯಾಂಕ್ ಶಾಖೆಗಳ ಸಂಪರ್ಕವನ್ನೇ ಬಳಸಿಕೊಂಡು ಕೃಷಿಕರ ಮತ್ತು ಕೃಷಿ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಯತ್ನಗಳನ್ನು ಬ್ಯಾಂಕ್ ನೌಕರರ ಸಂಘಟನೆಗಳು ಮಾಡಬಹುದಿತ್ತು. ಈ ನಿಟ್ಟಿನಲ್ಲಿ ಸಣ್ಣ ಪ್ರಯತ್ನ ನಡೆದಿದ್ದರೂ ಇಂದು ಅಲ್ಪಸಂಖ್ಯೆಯ ಬ್ಯಾಂಕ್ ನೌಕರರಾದರೂ ಮೋದಿ ಸರ್ಕಾರದ ಖಾಸಗೀಕರಣದ ವಿರುದ್ಧ ರಾಜಕೀಯ ಪ್ರತಿರೋಧ ವ್ಯಕ್ತಪಡಿಸುತ್ತಿದ್ದರು.

ಏಳೆಂಟು ದಶಕಗಳ ಇತಿಹಾಸ ಇರುವ ಯಾವುದೇ ಸಂಘಟನೆಗೆ ಇದು ಕಷ್ಟಸಾಧ್ಯವೇನಲ್ಲ. ನಾಯಕತ್ವದಲ್ಲಿನ ಇಚ್ಚಾಶಕ್ತಿಯ ಕೊರತೆ ಇಲ್ಲಿ ಎದ್ದು ಕಾಣುತ್ತದೆ. ಕಳೆದ ಮೂರು ನಾಲ್ಕು ದಶಕಗಳಿಂದ ನಿರಂತರವಾಗಿ ಬ್ಯಾಂಕ್ ಖಾಸಗೀಕರಣದ ವಿರುದ್ಧ ಹೋರಾಡುತ್ತಲೇ ಇದ್ದೇವೆ ( ಕೇವಲ ಮುಷ್ಕರಗಳ ಮೂಲಕ) ಎಂದು ಬೆನ್ನು ತಟ್ಟಿಕೊಳ್ಳುವ ಮುನ್ನ, ಬ್ಯಾಂಕ್ ನೌಕರರ ಮುಷ್ಕರಗಳಿಗೆ ಸಮಾಜದ ಇತರ ದುಡಿಯುವ ವರ್ಗಗಳ ಮತ್ತು ಸಾರ್ವಜನಿಕರ ತಾತ್ವಿಕ ಬೆಂಬಲ, ಅನುಕಂಪ ಅಥವಾ ಐಕಮತ್ಯ ಏಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿಕೊಂಡರೆ, ಕೊಂಚಮಟ್ಟಿಗೆ ಆತ್ಮಾವಲೋಕನ ಸಾಧ್ಯ. ಜೀವವಿಮಾ ನೌಕರರ ಸಂಘಟನೆಯೂ ಸಹ ಈ ದಿಕ್ಕಿನಲ್ಲಿ ಯೋಚಿಸಬೇಕಿದೆ. ಕಾರ್ಮಿಕರ ಐಕ್ಯತೆಯನ್ನು ಭಂಗಗೊಳಿಸಲು ಸಣ್ಣ ಪುಟ್ಟ ಸಂಘಟನೆಗಳನ್ನು ಹುಟ್ಟುಹಾಕುವ ಆಡಳಿತ ವ್ಯವಸ್ಥೆಯ ಕುತಂತ್ರಕ್ಕೆ ಬಲಿಯಾದ ಪ್ರಸಂಗಗಳನ್ನೂ ಈ ಸಂದರ್ಭದಲ್ಲಿ ಸ್ಮರಿಸುವುದು ವಿವೇಕಯುತ ಎನಿಸುತ್ತದೆ.

ತಾಲ್ಲೂಕು ಮಟ್ಟದಿಂದ ರಾಜ್ಯಮಟ್ಟದವರೆಗೆ, ರಾಷ್ಟ್ರಮಟ್ಟದವರೆಗೆ ನೌಕರ ಸಂಘಟನೆಗಳನ್ನು ನಿರ್ವಹಿಸುವ ಹೊಣೆಗಾರಿಕೆಯನ್ನು ನಿಗದಿಪಡಿಸುವ ಮುನ್ನ, ಕೆಂಬಾವುಟ ಮತ್ತು ಅದರ ಹಿಂದಿನ ಇತಿಹಾಸ ಅಪೇಕ್ಷಿಸುವ ಸೈದ್ಧಾಂತದ ಬಗ್ಗೆ ಇರುವ ಬದ್ಧತೆಯನ್ನೂ ಪರಾಮರ್ಶಿಸುವ ಒಂದು ಪರಂಪರೆ ವ್ಯವಸ್ಥಿತವಾಗಿ ಬೆಳೆದುಬರಬೇಕಿತ್ತು. ಹಾಗಾಗಿದ್ದಲ್ಲಿ ರಾಜ್ಯಮಟ್ಟದ ನಾಯಕರಾದರೂ ನಿವೃತ್ತಿಯ ನಂತರ ಸಂಘಟನೆಯ ಪೀಠಾಧಿಪತ್ಯಕ್ಕೆ ಅಂಟಿಕೊಳ್ಳದೆ ಸಾಮಾಜಿಕವಾಗಿ ಸಕ್ರಿಯರಾಗಿರುತ್ತಿದ್ದರು. ಕನಿಷ್ಟ ಪಕ್ಷ ಮತಧಾರ್ಮಿಕ ಸಂಸ್ಥೆಗಳ ಕಾರ್ಯಕರ್ತರಾಗುತ್ತಿರಲಿಲ್ಲ. ಒಂದು ಸುಶಿಕ್ಷಿತ, ಹಿತವಲಯದ ನೌಕರ ಸಮೂಹವನ್ನು ಪ್ರತಿನಿಧಿಸುವ ಸಂಘಟನೆಗೆ ಈ ಚಿಂತನಾವಾಹಿನಿಯ ಅವಶ್ಯಕತೆ ಇತ್ತು. ಆದರೆ ನಾಲ್ಕು ದಶಕಗಳ ಹಿಂದೆ ಕೊಂಚಮಟ್ಟಿಗಾದರೂ ಕಾಣಬಹುದಾಗಿದ್ದ ಇಂತಹ ಚಿಂತನೆಯ ನೆಲೆಗಳು ಕಳೆದ ಮೂರು ದಶಕಗಳಲ್ಲಿ ನಿಶ್ಶೇಷವಾಗಿರುವುದನ್ನು ಕಹಿ ಸತ್ಯ ಎಂದಾದರೂ ಒಪ್ಪಿಕೊಳ್ಳಲೇಬೇಕು.

ಕಳೆದ ಮೂರು ದಶಕಗಳಲ್ಲಿ ಹುಟ್ಟಿಕೊಂಡ ಎಸ್‍ಸಿ-ಎಸ್‍ಟಿ ನೌಕರರ ಸಂಘಟನೆಗಳೂ ಈ ನಿಟ್ಟಿನಲ್ಲಿ ಭಿನ್ನವಾಗೇನೂ ಕಾಣುವುದಿಲ್ಲ. ಪ್ರಮುಖ ಕಾರ್ಮಿಕ ಸಂಘಟನೆಗಳು ದಲಿತ ನೌಕರರ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ವಿಫಲವಾಗುತ್ತಿವೆ ಎಂಬ ಕಾರಣಕ್ಕೆ ಹುಟ್ಟಿಕೊಂಡ ಈ ಸಂಘಟನೆಗಳು ತಮ್ಮ ಧ್ಯೇಯಸಾಧನೆಯಲ್ಲಿ ಯಶಸ್ವಿಯಾಗಿರುವುದು ಸತ್ಯ. ಹಾಗೆಯೇ ಅದಕ್ಕೂ ಮುನ್ನ ತಾರತಮ್ಯ ಎದುರಿಸಿದ್ದೂ ಅಷ್ಟೇ ಸತ್ಯ. ಆದರೆ ಈ ಸಂಘಟನೆಗಳಲ್ಲೂ ಸಹ ಸಮಾಜದಲ್ಲಿ ಇಂದಿಗೂ ತಾರತಮ್ಯ, ದೌರ್ಜನ್ಯ, ಸಾಂಸ್ಕೃತಿಕ ದಮನ ಎದುರಿಸುತ್ತಿರುವ ದಲಿತ ಸಮುದಾಯಗಳ ಬಗ್ಗೆ ಕಾಳಜಿ ಮೂಡಿಸುವ ಪ್ರಯತ್ನಗಳು ನಡೆದಿಲ್ಲ. ಬ್ಯಾಂಕಿಂಗ್ ಕ್ಷೇತ್ರ ಖಾಸಗೀಕರಣಕ್ಕೆ ಜಾರುತ್ತಿರುವುದರಿಂದ, ಮೀಸಲಾತಿ ವಂಚಿತ ಸಮುದಾಯಗಳ ಮೇಲೆ ಉಂಟಾಗಬಹುದಾದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳೂ ಸಹ ನಡೆದಂತೆ ತೋರುವುದಿಲ್ಲ.

ಡಾ ಬಿ ಆರ್ ಅಂಬೇಡ್ಕರ್ ಅವರ ಚಿಂತನೆಗಳು, ಸಂವಿಧಾನದ ಅರಿವು, ಪ್ರಜಾತಂತ್ರ ಮೌಲ್ಯಗಳ ರಕ್ಷಣೆ, ಅಂಬೇಡ್ಕರ್ ಕನಸಿನ ಸಮ ಸಮಾಜದ ನಿರ್ಮಾಣ ಮುಂತಾದ ವಿಚಾರಗಳಲ್ಲಿ ಜ್ಞಾನಪ್ರಸರಣ ಮತ್ತು ಬೌದ್ಧಿಕ ಚಿಂತನ ಮಂಥನ ಪ್ರಕ್ರಿಯೆಗೆ ಈ ಸಂಘಟನೆಗಳು ಮುಂದಾಗಲಿಲ್ಲ ಎನ್ನುವುದು ವಾಸ್ತವ. ದೇಶದಲ್ಲಿ ದಲಿತರ ಮೇಲೆ ನಡೆದ ಅನೇಕಾನೇಕ ದೌರ್ಜನ್ಯಗಳ ಬಗ್ಗೆ ದಿವ್ಯ ಮೌನ ವಹಿಸುವ ಮೂಲಕ ಈ ಸಂಘಟನೆಗಳೂ ಸಹ ತಮ್ಮ ಬೌದ್ಧಿಕ ದಾರಿದ್ರ್ಯವನ್ನು ಪ್ರದರ್ಶಿಸುತ್ತಲೇ ಬಂದಿವೆ. ಇಲ್ಲಿ ಪುನಃ ಮುಖ್ಯವಾಹಿನಿಯ ನೌಕರ ಸಂಘಟನೆಗಳಂತೆಯೇ ಕೇವಲ ಸವಲತ್ತು, ಸೌಲಭ್ಯ, ಸೇವಾ ನಿಯಮಗಳಿಗಷ್ಟೇ ಸೀಮಿತವಾದ ಬೆಳವಣಿಗೆಯನ್ನು ಗಮನಿಸಬಹುದು.

ಇಂದು #ಆತ್ಮನಿರ್ಭರ ಭಾರತ ತನ್ನೆಲ್ಲಾ ಸಂಪತ್ತನ್ನು ಖಾಸಗಿಯವರಿಗೆ ಮಾರಾಟ ಮಾಡಲು ಸಜ್ಜಾಗುತ್ತಿದೆ. ಬ್ಯಾಂಕಿಂಗ್, ವಿಮೆ, ರೈಲ್ವೆ, ವಿಮಾನಯಾನ, ರಸ್ತೆ ಸಾರಿಗೆ, ಕಡಲ ಸಾರಿಗೆ, ಬಂದರು, ಸಾರ್ವಜನಿಕ ಕೈಗಾರಿಕೋದ್ಯಮಗಳು ಹೀಗೆ ಎಲ್ಲವೂ ಮತ್ತೊಮ್ಮೆ ವಸಾಹತು ಕಾಲದಂತೆ ಖಾಸಗೀ ಒಡೆತನಕ್ಕೆ ಒಳಪಡುತ್ತವೆ. ದುಡಿಯುವ ವರ್ಗಗಳ ಮುಷ್ಕರ, ಹೋರಾಟ, ಧರಣಿ ಮುಂತಾದ ಪ್ರಜಾಸತ್ತಾತ್ಮಕ ಸಂಘರ್ಷಗಳತ್ತ ಕಣ್ಣೆತ್ತಿಯೂ ನೋಡದಂತಹ ಒಂದು ಕ್ರೂರ ಆಡಳಿತ ವ್ಯವಸ್ಥೆಯನ್ನು ಆಧುನಿಕ ಭಾರತ ಕಾಣುತ್ತಿದೆ. ರೈತ ಮುಷ್ಕರ ಕಣ್ಣೆದುರಿನ ನಿದರ್ಶನ. ಆದರೆ ಜನಾಂದೋಲನಗಳು ತಕ್ಷಣದ ಪ್ರತಿಫಲ ನಿರೀಕ್ಷಿಸುವುದಿಲ್ಲ ಎನ್ನುವುದನ್ನು ಇತಿಹಾಸ ನಿರೂಪಿಸಿದೆ.

ಈ ಇತಿಹಾಸದಿಂದ ಪಾಠ ಕಲಿಯುವುದರೊಂದಿಗೆ, ಸಮಕಾಲೀನ ಇತಿಹಾಸದಿಂದಲೂ ನಾವು ಪಾಠ ಕಲಿಯುವುದಾದರೆ ನಾವು ಎಲ್ಲಿ ಎಡವಿದ್ದೇವೆ ಎಂದು ಪರಾಮರ್ಶಿಸುವುದೂ ಒಳಿತು. ಎಡಪಕ್ಷಗಳ ಐಕ್ಯತೆಯೊಂದೇ ಸಾಲದು, ಎಡಪಕ್ಷಗಳು ಒಂದಾಗಬೇಕು ಎನ್ನುವ ಕೂಗು ದಶಕಗಳಷ್ಟು ಹಳೆಯದು. ವಾಸ್ತವ ಎಂದರೆ ಇದಕ್ಕೆ ಅಡ್ಡಿಯಾಗಿರುವ ಹಲವಾರು ಅಂಶಗಳ ಪೈಕಿ ಕಾರ್ಮಿಕ ಸಂಘಟನೆಗಳ ಅಸ್ತಿತ್ವದ ಪ್ರಶ್ನೆಯೂ ಒಂದು. ಬ್ಯಾಂಕ್ ನೌಕರರ ಸಂಘಟನೆಗಳು ತಮ್ಮ ಅವಕಾಶಗಳನ್ನು ಕೈಚೆಲ್ಲಿ ಕುಳಿತಿವೆ. ಇಂದು ಪರಿಸ್ಥಿತಿ ಕೈಮೀರಿದೆ. ತಾವು ಎತ್ತಿಹಿಡಿಯುವ ಕೆಂಬಾವುಟ ನೌಕರರಿಗೆ ತಮ್ಮ ಆರ್ಥಿಕ ಸವಲತ್ತಿನ ಕವಲುದಾರಿಯಂತೆ ಕಾಣುತ್ತಿದ್ದರೆ ಅದಕ್ಕೆ ಮೂಲ ಕಾರಣ ಇರುವುದು ಸಂಘಟನೆಯ ವೈಫಲ್ಯದಲ್ಲಿ ಎನ್ನುವುದನ್ನು ಇನ್ನಾದರೂ ಅರ್ಥಮಾಡಿಕೊಳ್ಳಬೇಕಿದೆ. ಹಾಗಾದಲ್ಲಿ ಮುಂದಿನ ಹಾದಿಯಲ್ಲಿ ಕವಲುಗಳು ಕಾಣಲು ಸಾಧ್ಯ. ಇಲ್ಲವಾದಲ್ಲಿ ಕಂದಕಗಳಷ್ಟೇ ಕಾಣಬೇಕಾಗಬಹುದು.