ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪ್ರೊ.ಸಿದ್ದು ಯಾಪಲಪರವಿ

ಮನೆಯ ಮೊದಲ ಪಾಠಶಾಲೆ ಮತ್ತು ಪಾಕಶಾಲೆಯೂ ಹೌದು.
ಜನನಿ,ಅವ್ವ,ಅಮ್ಮ,ಮಮ್ಮಿ ಹೀಗೆ ತಾಯಿಯನ್ನು ಹತ್ತಾರು ಬಗೆಯಲ್ಲಿ ಕರೆದು ಹರ್ಷಿಸುವುದು ಸಹಜ.

ಅನೇಕ ಸಂದರ್ಭಗಳಲ್ಲಿ ವ್ಯಕ್ತಿಯ ಮನಸ್ಥಿತಿ ಅಧ್ಯಯನ ಮಾಡುವಾಗ ಆ ವ್ಯಕ್ತಿಯ ಗುಣ ಸ್ವಭಾವದಲ್ಲಿ ಏನೇ ಅಪರೂಪದ ಸಂಗತಿಗಳು ಗೋಚರಿಸಿದರೂ ಅದಕ್ಕೆ ಅವನ ಬಾಲ್ಯವೇ ಕಾರಣ.
ಬಾಲ್ಯದಿಂದ ಅವನು ಪಡೆದುಕೊಂಡ ಸಂಸ್ಕಾರ ಅವನ ವ್ಯಕ್ತಿತ್ವದ ಮೇಲೆ ದಟ್ಟ ಪ್ರಭಾವ ಬೀರಿರುತ್ತದೆ.

ಮುಖ್ಯವಾಗಿ ತಾಯಿ ಕಲಿಸಿದ ಪಾಠಗಳ ಮೇಲೆ ಅವನ ಬದುಕು ರೂಪಿತವಾಗುತ್ತದೆ.
ಬಹುಪಾಲು ತಾಯಂದಿರು ಮಕ್ಕಳನ್ನು ತುಂಬ ಪ್ರೀತಿ ಮತ್ತು ಅಕ್ಕರೆಯಿಂದ ಬೆಳೆಸುವ ಭರದಲ್ಲಿ ಆದರ್ಶಗಳ ಬಿತ್ತುವುದನ್ನು ಮರೆತು ಬಿಡುತ್ತಾರೆ.
ಮಗ ಚನ್ನಾಗಿ ಊಟ ಮಾಡಲಿ,’ಮಗ ಉಂಡರೆ ಕೇಡಲ್ಲ, ಮಳೆ ಬಂದರೂ ಕೇಡಲ್ಲ’ ಎಂಬ ಗಾದೆ ಮಾತು ಅತಿವೃಷ್ಟಿ ಕೆಟ್ಟದ್ದು ಎಂಬುದನ್ನು ಮರೆಸಿ ಬಿಡುತ್ತದೆ.

ತಾಯಿಯ ಪ್ರೀತಿ, ಕಾಳಜಿ ವ್ಯಾಮೋಹವಾದಾಗ ಮಗ ಕೆಟ್ಟು ಹಾಳಾಗಿ ಹೋಗಿರುತ್ತಾನೆ.
ನಮ್ಮ ಬಾಲ್ಯದ ದಿನಗಳಲ್ಲಿ ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಎಲ್ಲ ಮಕ್ಕಳನ್ನು ಸಮಾನವಾಗಿ ಬೆಳೆಸಲಾಗುತ್ತಿತ್ತು.
ಮಗು ಅವಿಭಕ್ತ ಕುಟುಂಬದಲ್ಲಿ ಇರದಿದ್ದರೆ ಇನ್ನೂ ಚನ್ನಾಗಿ ತಿನ್ನಬಹುದಿತ್ತು ಎಂದು ಬಯಸುವ ತಾಯಿಯ ಪ್ರೀತಿಯ ಆಸೆಯಿಂದ ಕುಟುಂಬ ವಿಭಜನೆ ಆದ ಅನೇಕ ಘಟನೆಗಳನ್ನು ಸ್ವತಃ ನೋಡಿದ್ದೇನೆ.

ಅಪರೂಪದ ನಿಸ್ವಾರ್ಥ ತಾಯಂದಿರು ಮಾತ್ರ ಮೇಧಾವಿಗಳನ್ನು ಸೃಷ್ಟಿ ಮಾಡಬಲ್ಲರು.
ಇತಿಹಾಸದ ಪುಟಗಳನ್ನು ನೋಡುವುದಾದರೆ, ಕುಂತಿ ಜಗತ್ತಿನ ಅಪರೂಪದ ಆದರ್ಶ ತಾಯಿ ಎನಿಸಿಕೊಳ್ಳಲು ಅವಳ ಸಹನೆ ಮತ್ತು ಉದಾರ ನಿಲುವು ಕಾರಣ.

ತನ್ನ ಮಕ್ಕಳು ಸದಾ ಒಗ್ಗಟ್ಟಾಗಿ ಕೂಡಿ ಬಾಳುವ ಮಹತ್ವವನ್ನು ಕುಂತಿ ಪದೇ ಪದೇ ಪಡೆ.
ಅದರ ಉತ್ಕಟ ಪರಿಣಾಮದಿಂದಾಗಿ ದ್ರೌಪದಿಯನ್ನು ಹಂಚುವ ಮಟ್ಟದಲ್ಲಿ ಕತೆ ತನ್ನ ತಿರುವು ಪಡೆದುಕೊಳ್ಳುತ್ತದೆ.
ಮಹಾಕಾವ್ಯ ಮಹಾಭಾರತ ಒಂದು ಕತೆ ಅಂದುಕೊಂಡರೂ ಕೆಲವು ಪಾತ್ರಗಳು ನಮ್ಮ ಮನಸಿನ ಪ್ರತಿಫಲನಗಳಾಗಿವೆ.

ಧರ್ಮ ಪರಿಪಾಲನೆ ಮತ್ತು ನಂಬಿದ ಪ್ರಜೆಗಳ ರಕ್ಷಣೆ ಮುಖ್ಯ ಎಂಬ ಕಾರಣದಿಂದ ಪಾಂಡವರು ತುಂಬಾ ಕಷ್ಟಪಡುತ್ತಾರೆ.
ನಿರಂತರ ನೋವು,ತೊಂದರೆ ಅನುಭವಿಸಿದರು ಅಧರ್ಮದ ಮಾರ್ಗ ತುಳಿಯದಿರಲು ತಾಯಿ ನೀಡಿದ ಸಂಸ್ಕಾರವೇ ಮುಖ್ಯ ಕಾರಣ.

ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಗುವಿನ ಬೆಳವಣಿಗೆಗೆ ತನ್ನ ನೇರ ಪಾತ್ರವೇನು ಇರುವುದಿಲ್ಲ ಎಂಬುದನ್ನು ಪ್ರತಿಯೊಬ್ಬ ತಂದೆ ಒಪ್ಪಿಕೊಳ್ಳಬೇಕು.
ಮಗುವಿಗೆ ತಾಯಿ ಕೊಡುವ ಪ್ರೀತಿಯಲ್ಲಿ ಒಲವ ಒರತೆ ಉಕ್ಕಿ ಹರಿಯುತ್ತದೆ.
ತಂದೆ ಪ್ರೀತಿಯಲ್ಲಿ ಕೊಂಚ ದರ್ಪ ಮತ್ತು ಗಡುಸುತನವಿರುತ್ತದೆ.
ಆದ್ದರಿಂದ ಮಗು ಸದಾ ತಾಯಿಯ ಪ್ರೀತಿಯನ್ನು ಬಯಸುವುದು ಸಹಜ.

ಅನೇಕ ಹಟಮಾರಿ ಮತ್ತು ಉಂಡಾಡಿ ಯುವಕರ ವರ್ತನೆಯನ್ನು ಅಧ್ಯಯನ ಮಾಡಿದಾಗ ಗೊತ್ತಾಗುವ ಸಂಗತಿ ಎಂದರೆ ತಾಯಿ ಪ್ರೀತಿ ಮತ್ತು ಮಾರ್ಗದರ್ಶನ ದೊರೆಯದ ಮಕ್ಕಳು ಹಾದಿ ತಪ್ಪಿದ ಮಕ್ಕಳಾಗುತ್ತಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

‘ನೂಲಿನಂತೆ ಸೀರೆ,ತಾಯಿಯಂತೆ ಮಗಳು’ ಎಂಬ ಗಾದೆ ಮಾತಿನಂತೆ ತಾಯಿಯ ಇಚ್ಛೆಯಂತೆ ಮಗ ಎಂಬುದನ್ನು ಸೇರಿಸಬೇಕು.
ಹೆಣ್ಣುಮಕ್ಕಳೊಂದಿಗೆ ಅನುಚಿತವಾಗಿ ನಡೆದುಕೊಳ್ಳುವ ಯುವಕರ ಹಿನ್ನೆಲೆಯನ್ನು ಅಧ್ಯಯನ ಮಾಡಿದಾಗ ತಾಯಿ ಪ್ರೀತಿಯ ಕೊರೆತೆ ಎದ್ದು ಕಾಣುತ್ತದೆ.

ದೈನಂದಿನ ಶಿಸ್ತು,ಆಹಾರ ಕ್ರಮ,ನಿಯಮಿತ ವ್ಯಾಯಾಮ, ಹಿರಿಯರ ಗೌರವ, ಹೆಣ್ಣಿನ ಮಾನ ಇತ್ಯಾದಿ ಮಹತ್ವದ ಸಂಗತಿಗಳ ಕುರಿತು ತಾಯಿ ಗಂಭೀರವಾಗಿ ವಿವರಿಸುವ ಅಗತ್ಯವಿದೆ.
ಅಪ್ಪನ ವರ್ತನೆಯನ್ನು ಮಾತ್ರ ಗಂಡು ಮಕ್ಕಳು ಅನುಕರಿಸುತ್ತಾರೆ ಆದರೆ ತಾಯಿ ಮಾತನ್ನು ಆಲಿಸುತ್ತಾರೆ.

ಕೌಟುಂಬಿಕ ಭಿನ್ನಾಭಿಪ್ರಾಯಗಳ ಮರೆಮಾಚಿ ತಮ್ಮ ಆತ್ಮವಿಶ್ವಾಸದ ಬಲದಿಂದ ಮರು ಮದುವೆಯಾಗದೆ ಆದರ್ಶ ಮಕ್ಕಳನ್ನು ಬೆಳೆಸಿದ ‘ಸಿಂಗಲ್‌ ಪೇರೆಂಟ್’ ಪರಿಕಲ್ಪನೆ ಹೊರ ದೇಶಗಳಲ್ಲಿ ತುಂಬಾ ಸಾಮಾನ್ಯ.

ನಮ್ಮ ಗ್ರಾಮೀಣ ಪರಿಸರದಲ್ಲಿ ಅನೇಕ ವಿಧವೆ ತಾಯಂದಿರು ತಮ್ಮ ಇಡೀ ಬದುಕನ್ನು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಸವೆಸುತ್ತಾರೆ.

ಆದರೆ ಇಂದು ಆಧುನಿಕ ಸಮಾಜದ ಮಧ್ಯಮ ಚಿಂತನೆಯ ಮಹಿಳೆಯರು ಕಾನ್ವೆಂಟ್ ಮತ್ತು ವಿದೇಶಿ ಸಂಸ್ಕೃತಿಯ ಪ್ರಭಾವದಿಂದಾಗಿ ಮಕ್ಕಳನ್ನು ಅಲಕ್ಷಿಸಿ, ಸ್ವಾತಂತ್ರ್ಯದ ನೆಪದಲ್ಲಿ, ಕೇಳಿದ ಐಷಾರಾಮಿ ಸೌಲಭ್ಯಗಳನ್ನು ಕಲ್ಪಿಸುವುದು ‘ಮಹಾ ಪ್ರೀತಿ’ ಎಂದು ಭಾವಿಸಿದ್ದಾರೆ.

ಪ್ರೀತಿ ಮತ್ತು ಅನಗತ್ಯ ಸೌಲಭ್ಯಗಳ ಸೂಕ್ಷ್ಮ ಅಂತರವನ್ನು ಅರ್ಥ ಮಾಡಿಕೊಳ್ಳಲು ವಿಫಲರಾಗಿದ್ದಾರೆ.
ತಾಯಂದಿರು ಬಯಸುವ ಇತರ ಮಕ್ಕಳೊಂದಿಗೆ ಅನಾರೊಗ್ಯಕರ ಪೈಪೋಟಿ, ಶಿಕ್ಷಣ ವ್ಯವಸ್ಥೆಯ ರ‌್ಯಾಂಕ್ ನಿರೀಕ್ಷೆಗಳು ಮಕ್ಕಳ ಪ್ರತಿಭೆ ಮತ್ತು ಆತ್ಮವಿಶ್ವಾಸ ಕುಗ್ಗಿಸುತ್ತವೆ.

ಇತರರೊಂದಿಗೆ ಹೋಲಿಸಿ ಮಾತನಾಡುವ ಅಪ್ರಬುದ್ಧ ನಿಲುವಿನಿಂದಾಗಿ ಮಕ್ಕಳು ಮಾನಸಿಕ ಕ್ಷೋಭೆಗೆ ಒಳಗಾಗುತ್ತಾರೆ.
ಭಯ ಭೀತರಾಗಿ ದುಶ್ಚಟಗಳ ದಾಸರಾಗುತ್ತಾರೆ.
ಮಕ್ಕಳು ಡಿಪ್ರೆಶನ್ ಹಂತ ತಲುಪಲು ಪಾಲಕರ ದಿವ್ಯ ಅಲಕ್ಷವೇ ಕಾರಣ ಅದರಲ್ಲೂ ವಿಶೇಷವಾಗಿ ತಾಯಿಯ ಅಸಮರ್ಪಕ ನಿರ್ವಹಣೆಯಿಂದ ಮಕ್ಕಳು ಸಮಾಜ ಕಂಟಕರಾಗುತ್ತಾರೆ.

ಮಕ್ಕಳು ಪ್ರಬುದ್ಧರಾಗಿ ಪದವಿ ಪೂರೈಸುವವರೆಗೆ ತಾಯಿ ಪ್ರತಿಯೊಂದು ಸಂಗತಿಗಳನ್ನು ಮಗುವಿನೊಂದಿಗೆ ಹಂಚಿಕೊಂಡು,ಮಕ್ಕಳ ಭಾವನೆಗಳಿಗೆ ಸ್ಪಂದಿಸುವ ಮುಕ್ತತೆ ಬೆಳೆಸಿಕೊಳ್ಳಬೇಕು.

ಮಕ್ಕಳ ಗುಪ್ತಾಂಗ ಸ್ವಚ್ಛತೆ ಮತ್ತು ಹದಿ ಹರೆಯದ ತಲ್ಲಣಗಳ‌ ಪರಿಣಾಮದ ಕುರಿತು ಸೂಕ್ತ ಮಾಹಿತಿ ನೀಡಿ ಮಕ್ಕಳ ಸಂಕೋಚ ದೂರ ಮಾಡಬೇಕು.
ವಾತ್ಸಲ್ಯ ಮತ್ತು ಕರುಣೆಯಿಂದ ಕಣ್ಣಲ್ಲಿ ಕಣ್ಣಿಟ್ಟು ತಾಯಿ ಹೇಳಿದರೆ ಮಕ್ಕಳು ಪ್ರೀತಿಯಿಂದ ಆಲಿಸಿ, ಕಾಮ ಭಾವನೆಗಳ ನಿಗ್ರಹ ಕಲಿಯುತ್ತಾರೆ

ವಯೋಮಾನ ಸಹಜ ಕಾಮ ಕುತೂಹಲ ಅನಾರೋಗ್ಯಕರ ಹಾದಿ ಹಿಡಿಯದಂತೆ ಮಕ್ಕಳ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸಿ,ಅನುಮಾನ ಬಂದರೆ ತಕ್ಷಣ ಎಚ್ಚರಿಸಬೇಕು. ಎಚ್ಚರಿಕೆಯ ಮಾತುಗಳಲ್ಲಿ ಪ್ರೀತಿ ಮತ್ತು ಕಾಳಜಿ ತುಂಬಿರಬೇಕು. ಆತಂಕ ಮತ್ತು ಭಯ ಅಲ್ಲ.

ತಾಯಿಯ ಮಾತುಕತೆ, ಬಿಗಿ ಅಪ್ಪುಗೆಯ ಸಾಂತ್ವನದ ಕೊರತೆಯಿಂದಾಗಿ ಆಧುನಿಕ ಸೋಷಿಯಲ್ ಮೀಡಿಯಾ ದಾಸರಾಗಿರುವ ಯುವಕರು ಬೇಗ ಅಡ್ಡದಾರಿ ಹಿಡಿಯುತ್ತಾರೆ.
ಯುವಕರಿಗೆ ತಾಯಿಯ ಸಮರ್ಪಕ ಮಾರ್ಗದರ್ಶನ ದೊರೆತರೆ ಮಾನಭಂಗ ಮತ್ತು ಆತ್ಮಹತ್ಯೆಯಂತಹ ಘಟನೆಗಳು ಸಂಭವಿಸುವುದಿಲ್ಲ.

ಹೀಗೊಂದು ಪ್ರಕರಣ-

ಒಬ್ಬ ಒಳ್ಳೆಯ ವ್ಯಕ್ತಿ ಸುಶಿಕ್ಷಿತ, ಉನ್ನತ ಸ್ಥಾನದಲ್ಲಿ ಇದ್ದರೂ ಮನಸಿನ ತುಂಬ ಕಳವಳ. ಪ್ರತಿಯೊಬ್ಬ ಹೆಣ್ಣನ್ನು ನೋಡಿದಾಗ ಕಾಮೋದ್ರೇಕಗೊಳ್ಳುವ ವಿಕಾರ ಭಾವ. ಹತ್ತಿರದ ಸಂಬಂಧಿಕರು ಮತ್ತು ಚಿರಪರಿಚಿತ ಮಹಿಳೆಯರು ಇವನ ವಿಕಾರ ಚಿತ್ರಕ್ಕೆ ಮಾನಸಿಕ ಬಲಿ.

ದೈಹಿಕವಾಗಿ ಆ ಭಾವನೆಗಳು ವ್ಯಕ್ತವಾಗದಿದ್ದರೂ ಆಂತರಿಕ ವಿಕೃತ ಭಾವನೆಗಳಿಂದ ವ್ಯಕ್ತಿ ನಿತ್ಯ ನರಳುತ್ತಿದ್ದನು.
ಒಮ್ಮೆ ಕೌನ್ಸಿಲಿಂಗ್ ಸಂದರ್ಭದಲ್ಲಿ ತನ್ನ ಭಾವನೆಗಳನ್ನು ಹಂಚಿಕೊಂಡಾಗ,ಬಾಲ್ಯದಲ್ಲಿ ತಾಯಿ ಪ್ರೀತಿಯಿಂದ ವಂಚಿತನಾದ ಸಂಗತಿ ಬಯಲಾದಾಗ ನನಗೂ ಆಘಾತವಾಯಿತು.

ಕೇವಲ ನನ್ನ ಮೌಖಿಕ ಕೌನ್ಸಿಲಿಂಗ್ ಮೂಲಕ ಸದರಿ ಸಮಸ್ಯೆ ಬಗೆಹರಿಸಲು ಅಸಾಧ್ಯ ಅನಿಸಿತು.
ಸೂಕ್ತ ಚಿಕಿತ್ಸೆಗಾಗಿ ಮನೋವೈದ್ಯರ ಸಲಹೆ ಮೇರೆಗೆ “ನಾರ್ಕೋ ಎನಲೈಸಿಸ್” ಸಂದೇಶದ ಮೂಲಕ ಸುಪ್ತ ಮನಸನ್ನು ಗಟ್ಟಿಗೊಳಿಸಲಾಯಿತು.
ಈಗ ವಿಕೃತ ಭಾವ ದೂರಾಗಿ,ಮನಸು ಪ್ರಫುಲ್ಲವಾಗಿ ತನ್ನ ನಿಜ ಒಳ್ಳೆಯತನ ಇಮ್ಮಡಿಸಿಕೊಂಡು ಸುಖೀ ಸಂಸಾರಿಯಾಗಿದ್ದಾನೆ.

ಹೀಗೆ ಅವ್ವ ಬರೀ ಅವ್ವ ಅಲ್ಲ ಮನುಷ್ಯನ ಜೀವಚೈತನ್ಯ.
ವೈದ್ಯೆ,ಶಿಕ್ಷಕಿ,ಹಿತಚಿಂತಕಿ ಮತ್ತು ಮಾರ್ಗದರ್ಶಕಿ.
ಅಪ್ಪ ಕೇವಲ ಸೌಲಭ್ಯದಾತ /ಫೆಸಿಲಿಟೇಟರ್.