ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪ್ರಜ್ಞಾ ಮತ್ತಿಹಳ್ಳಿ
ಇತ್ತೀಚಿನ ಬರಹಗಳು: ಪ್ರಜ್ಞಾ ಮತ್ತಿಹಳ್ಳಿ (ಎಲ್ಲವನ್ನು ಓದಿ)

೧೬೬೦ರ ಡಿಸೆಂಬರ ೮ರಂದು ನಾಟಕ ಕಂಪನಿಯಾದ ಕಿಂಗ್ಸ ಕಂಪನಿ ಒಥೆಲೊ ನಾಟಕದ ಪ್ರದರ್ಶನಕ್ಕೆ ಸಿದ್ಧವಾಗುತ್ತಿತ್ತು. ಆದರೆ ಎಂದಿನಂತಲ್ಲದೇ ಇಂದು ಅದು ಬೇರೆಯದೇ ಆದ ರೀತಿಯಲ್ಲಿ ಸಜ್ಜಾಗುತ್ತಿತ್ತು. ಅದಕ್ಕಾಗಿಯೇ ವಿಶೇಷ ರೀತಿಯಲ್ಲಿ ಕವಿ ಥಾಮಸ್‌ ಜೊರ್ಡಾನ್‌ ಒಂದು ಕಾವ್ಯರೂಪದ ಸಂಭಾಷಣೆ ರಚಿಸಿದ್ದ. ನಟನೊಬ್ಬ ರಂಗದ ಮೇಲೆ ಬಂದು ಉದ್ವೇಗದಿಂದ ಈ ಸಂಭಾಷಣೆಯನ್ನು ಹೇಳುತ್ತಿದ್ದ.” ಯಾರಿಗೂತಿಳಿಯದ ಸಂಗತಿಯೊಂದನ್ನು ಹೇಳಲು ಬಂದಿದ್ದೇನೆ, ವೇಷ ತೊಟ್ಟ ಮಹಿಳೆಯೊಬ್ಬಳನ್ನು ಕಂಡಿದ್ದೇನೆ. ತಪ್ಪು ತಿಳಿಯಬೇಡಿ ಸ್ವಾಮಿ ಲಂಗ ಧರಿಸಿದ ಗಂಡಸಲ್ಲ ಮಹಿಳೆಯೇ ನಟಿಸುವ ಪಾತ್ರವಿದೆಯಿಂದು”.

ಡೆಸ್ಟಮೊನಾಳ ಪಾತ್ರವನ್ನು ಲಾಗಾಯ್ತಿನಿಂದ ಗಂಡಸರೇ ಮಾಡುತ್ತಿದ್ದರು. ಹೆಣ್ಣು ಪಾತ್ರವನ್ನು ಹೆಂಗಸರೇ ಮಾಡುವುದು ನಂಬಲು ಸಾಧ್ಯವಿಲ್ಲದ ಸಂಗತಿಯಾಗಿತ್ತು. ಭೂಮಿಯ ಮೇಲೆ ಮನುಷ್ಯ ಸಂತತಿಯ ಹುಟ್ಟಿನಷ್ಟೇ ಪ್ರಾಚೀನ ಇತಿಹಾಸ ರಂಗಭೂಮಿ ಚಟುವಟಿಕೆಗಳಿಗೂ ಇದೆ.

ಕ್ರಿಸ್ತಪೂರ್ವ ೫೩೨ರ ಸುಮಾರಿನಲ್ಲಿ ಗ್ರೀಕ್‌ ರಂಗಭೂಮಿ ಚಟುವಟಿಕೆಗಳು ಕ್ರಿಯಾಶೀಲವಾಗಿದ್ದವು. ಆದರೆ ಅಲ್ಲಿ ಮಹಿಳೆಯ ಹೆಜ್ಜೆ ಗುರುತು ಮೂಡುವುದು ಸುಲಭವಿರಲಿಲ್ಲ. ಇದಕ್ಕೆ ಕಾರಣವೇನೆಂದರೆ ಮಹಿಳೆಯ ಪಾಲ್ಗೊಳ್ಳುವಿಕೆಯನ್ನು ಅಪಾಯಕಾರಿ ಎಂದು ಪುರುಷರು ಬಲವಾಗಿ ನಂಬಿದ್ದರು. ಆ ಸಮಯದಲ್ಲಿ ಮಹಿಳೆ ಸಮಾಜದಲ್ಲಿ ಪುರುಷರಿಗಿಂತ ಬಹಳ ಕೆಳಸ್ತರದಲ್ಲಿ ಗುರುತಿಸಲ್ಪಟ್ಟಿದ್ದಳು. ೧೬೬೦ರಲ್ಲಿ ಪುನರುತ್ಥಾನ ಪ್ರಕ್ರಿಯೆ ಆರಂಭವಾದಾಗ ರಾಜಾಡಳಿತದ ಸಮ್ಮತಿಯೊಂದಿಗೆ ಮಹಿಳೆಯರು ರಂಗಭೂಮಿಗೆ ಪಾದಾರ್ಪಣೆ ಮಾಡಬೇಕಾಯಿತು. ಯುರೋಪಿನಲ್ಲಿ ೧೬೨೦ರಲ್ಲಿಯೇ ಮಹಿಳೆಯರು ರಂಗಪ್ರವೇಶ ಮಾಡಿದರೂ ಕೂಡ ಅವರಿಗೆ ಗೌರವದ ಸ್ಥಾನಮಾನವಿರಲಿಲ್ಲ. ಅತ್ಯಂತ ಕೀಳುದರ್ಜೆಯ ಭಾವನೆಯನ್ನು ಹೊಂದಲಾಗಿತ್ತು.

ಹದಿನೇಳನೇ ಶತಮಾನದಲ್ಲಿ ಸಂಗೀತ ರಂಗಭೂಮಿಯಾದ ಒಪೆರಾ ಶುರುವಾದಾಗ ಅಲ್ಲಿ ಮಹಿಳಾ ಗಾಯಕಿಯರು ಪಾಲ್ಗೊಂಡರು.ಮಾಗರೆಟ್‌ ಹ್ಯೂಸ್‌ ಜಗತ್ತಿನ ಮೊದಲ ವೃತ್ತಿ ನಟಿ ಎಂದು ಗುರುತಿಸಲ್ಪಟ್ಟಿದ್ದಾಳೆ.

ಮಾಗರೆಟ್‌

ಜಪಾನಿನಲ್ಲಿ ಒಕುನಿ ಎಂಬ ಮಹಿಳೆ ಕಬುಕಿ ಎಂಬ ರಂಗಪ್ರಕಾರವೊಂದನ್ನು ಹುಟ್ಟುಹಾಕಿದ್ದಳು. ಅವಳು ತನ್ನ ತಂಡದಲ್ಲಿ ಸಂಪೂಣವಾಗಿ ಮಹಿಳೆಯರನ್ನೇ ಸೇರಿಸಿಕೊಂಡು ಪ್ರದರ್ಶನ ನೀಡುತ್ತಿದ್ದಳು. ಥೈಲಾಂಡ್‌ ದಲ್ಲಿ ರಾಜಮನೆತನದವರು ಅಭಿನಯಿಸುತ್ತಿದ್ದ ಮಹಿಳಾ ರಂಗತಂಡವೊಂದು ಅಸ್ತಿತ್ವದಲ್ಲಿತ್ತು. ಅದರ ಹೆಸರು ಲಾಖೊನ್‌ ನೈ. ಅಮೇರಿಕೆಯ ನ್ಯೂಯಾರ್ಕ ಪಟ್ಟಣದಲ್ಲಿ ಜುಡಿತ್‌ ಮಲಿನಾ ಎಂಬಾಕೆ ತನ್ನ ಪತಿ ಜುಲಿಯನ್‌ ಬೆಕ್‌ ಜೊತೆ ಸೇರಿಕೊಂಡು ದಿ ಲಿವಿಂಗ್‌ ಥಿಯೆಟರ್‌ ಎಂಬ ನಾಟಕ ಸಂಸ್ಥೆಯನ್ನು ಕಟ್ಟಿದಳು.

ಜುಡಿತ್‌ ಮಲಿನಾ ಮತ್ತು ಜುಲಿಯನ್‌ ಬೆಕ್

೧೯೧೦ರ ವೇಳೆಗೆ ಕೆನೆಡಿಯನ್‌ ನಟಿಯಾದ ಫ್ಲಾರೆನ್ಸ ಲಾರೆನ್ಸ ಎಂಬಾಕೆ ಆ ಕಾಲದಲ್ಲಿಯೇ ಸುಮಾರು ೩೦೦ ಸಿನಿಮಾಗಳಲ್ಲಿ ನಟಿಸಿದ್ದಳು ಎಂಬ ಸಂಗತಿ ಅಚ್ಚರಿಯೊಂದಿಗೆ ಮೆಚ್ಚುಗೆಯನ್ನು ಮೂಡಿಸುತ್ತದೆ.
ಭಾರತದಲ್ಲಿ ಪ್ರಾಚೀನ ಕಾಲದಲ್ಲಿಯೇ ರಂಗಚಟುವಟಿಕೆಗಳು ಅಸ್ತಿತ್ವದಲ್ಲಿ ಇದ್ದರೂ ಸಹ ಮಹಿಳೆಯರ ಪ್ರವೇಶಕ್ಕೆ ಸಮಾಜ ಮುಕ್ತವಾಗಿರಲಿಲ್ಲ. ವೆಶ್ಯಾಸ್ತ್ರೀಯರು ಮಾತ್ರ ಇವುಗಳಲ್ಲಿ ತೊಡಗಿಕೊಳ್ಳುತ್ತಾರೆ ಎಂಬ ಭಾವನೆ ಪ್ರಚಲಿತವಿತ್ತು. ಕೌಟಿಲ್ಯನ ಅಥಶಾಸ್ತ್ರದಲ್ಲಿ ಕೆಲವು ಅಂಶಗಳು ಈ ಕುರಿತು ತಿಳಿಸುತ್ತವೆ.

ನಾಟಕಮಂದಿರಗಳಲ್ಲಿ ಪ್ರೇಕ್ಷಕರಿಗೆ ಪ್ರತ್ಯೇಕ ವ್ಯವಸ್ಥೆಯಿದ್ದು ಪುರುಷಪ್ರೇಕ್ಷಾ ಮತ್ತು ಸ್ತ್ರೀಪ್ರೇಕ್ಷಾಗಳಿದ್ದವು. ಮಹಿಳೆಯರು ನಾಟಕ ನೋಡುವುದಕ್ಕೆ ಅವರ ಗಂಡನ ಒಪ್ಪಿಗೆ ಪಡೆದಿರಬೇಕಿತ್ತು. ಇಲ್ಲದಿದ್ದರೆ ೬ ಪಣ ದಂಡ ಕಟ್ಟಬೇಕಿತ್ತು. ರಾತ್ರಿಯ ವೇಳೆ ನಾಟಕ ನೋಡುವುದಿದ್ದರೆ ಗಂಡನ ಜೊತೆಯಲ್ಲಿಯೇ ಬರಬೇಕಿತ್ತು. ಈ ಸಂಗತಿಗಳಿಂದ ಆ ಕಾಲದಲ್ಲಿ ಸ್ತ್ರೀಯರಿಗೆ ರಂಗದ ಮೇಲೆ ನಟಿಯರಾಗಿ ಭಾಗವಹಿಸುವ ಮಾತು ಎಷ್ಟು ದೂರದ ಸಂಗತಿಯಾಗಿತ್ತು ಎಂದು ಅರ್ಥವಾಗುತ್ತದೆ.

೧೯೩೦ರ ವೇಳೆಗೆ ಗುಲಾಬ ಬಾಯಿ ಎಂಬ ನಟಿ ನೌಟಂಕಿಗಳಲ್ಲಿ ಭಾಗವಹಿಸುತ್ತಿದ್ದಳು. ಆಗ ಅವಳ ಸಂಭಾವನೆ ಪುರುಷ ಕಲಾವಿದರಿಗಿಂತಲೂ ಹೆಚ್ಚಿತ್ತು. ಆಕೆ ಲೈಲಾ ಮಜನೂದಲ್ಲಿ ಲೈಲಾ ಪಾತ್ರವನ್ನೂ, ಹರಿಶ್ಚಂದ್ರದಲ್ಲಿ ತಾರಾಮತಿ ಪಾತ್ರವನ್ನು, ಶಿರಿನ್‌ ಫರ್ಶಾದ ಒಳಗೆ ಶಿರಿನ್‌ ಪಾತ್ರವನ್ನು ನಿಭಾಯಿಸುತ್ತಿದ್ದಳು.

೧೯ನೇ ಶತಮಾನದಲ್ಲಿ ಪಾರಸಿ ರಂಗಭೂಮಿಯಲ್ಲಿ ಮಹಿಳೆ ಪಾಲ್ಗೊಂಡ ಸಂಗತಿ ಅರಿವಿಗೆ ಬರುತ್ತದೆ.ರಾಸಲೀಲ, ರಾಮಲೀಲ, ಜಾತ್ರಾ, ಕುಟಿಯಾಟ್ಟಂ,ಅಯ್ಯಪ್ಪಂ ಮೊದಲಾದ ಜಾನಪದ ರಂಗಪ್ರಕಾರಗಳಲ್ಲಿ ಹೆಣ್ಣು ಮಕ್ಕಳು ತೊಡಗಿಕೊಂದಿದ್ದರು. ೧೯೦೦ರಲ್ಲಿ ದುರ್ಗಾಬಾಯಿ ಕಾಮತ ಎಂಬ ಮಹಿಳೆ ಮರಾಠಿ ಸಿನಿಮಾಗಳಲ್ಲಿ ನಟಿಸಿದಳು. ಅವಳನ್ನು ದೇಶದ ಮೊದಲ ನಟಿ ಎಂದು ಗುರುತಿಸುತ್ತಾರೆ. ದಾದಾಸಾಹೆಬ್‌ ಫಾಲ್ಕೆಯವರ ಎರಡನೆಯ ಸಿನಿಮಾ ಭಸ್ಮಾಸುರ ಮೋಹಿನಿಯಲ್ಲಿ ಆಕೆ ಪಾರ್ವತಿಯ ಪಾತ್ರವನ್ನು ನಿರ್ವಹಿಸಿದ್ದಾಳೆ. ಮಹಿಳೆಯರ ಒಳ ತುಡಿತಗಳನ್ನು,ತಲ್ಲಣಗಳನ್ನು ರಂಗದ ಮೇಲೆ ತರುವ ಪ್ರಯತ್ನವಂತೂ ಬಹಳ ಕಾಲ ನಡೆದಿರಲೇ ಇಲ್ಲವೆನ್ನಬಹುದು.

ದುರ್ಗಾಬಾಯಿ ಕಾಮತ

೧೯೭೯ರಲ್ಲಿ ಸಫ್ದರ್‌ ಹಶ್ಮಿ ಜನ ನಾಟ್ಯ ಮಂಚ್‌ ಎನ್ನುವ ತಂಡವನ್ನು ಕಟ್ಟಿಕೊಂಡು ಬೀದಿ ನಾಟಕಗಳನ್ನು ಆಡಿಸುವಾಗ ಸತಿ ಪದ್ಧತಿ ಮತ್ತು ವರದಕ್ಷಿಣೆ ವಿಚಾರಗಳನ್ನು ಔರತ್‌ ಎನ್ನುವ ನಾಟಕದ ಮೂಲಕ ರಂಗದ ಮೇಲೆ ತಂದಾಗ ಇದೊಂದು ಕ್ರಾಂತಿಕಾರಕ ಬೆಳವಣಿಗೆಯೆಂದು ಗುರುತಿಸಲಾಯಿತು. ಸಾಯಿ ಪರಾಂಜಪೆ ಮೇಲ್ವರ್ಗದ ಮಹಿಳೆಯ ಪ್ರೀತಿರಹಿತ ವೈವಾಹಿಕ ಸಂಬಂಧದ ಒಳತಲ್ಲಣಗಳನ್ನು ನಾಟಕವಾಗಿ ಚಿತ್ರಿಸಿದಾಗ ಇದೊಂದು ಅದ್ಭುತ ಅನುಭವವನ್ನು ನೀಡುವುದರ ಜೊತೆಗೆ ಬೆಚ್ಚಿಬೀಳಿಸುವ ತಿರುವನ್ನೂ ಪಡೆದುಕೊಂಡಿತು.

ಕಮಲಾದೇವಿ ಚಟ್ಟೋಪಾಧ್ಯಾಯ

ಈ ಸಂದರ್ಭದಲ್ಲಿ ಹೆಸರಿಸಲೇಬೇಕಾದ ವ್ಯಕ್ತಿಯೆಂದರೆ ರಾಷ್ಟ್ರೀಯ ನಾಟಕ ಶಾಲೆ ಮತ್ತು ಸಂಗೀತ ನಾಟಕ ಅಕಾಡೆಮಿಗಳನ್ನು ಹುಟ್ಟು ಹಾಕಿದ ಹಾಗೂ ಸ್ವತ: ನಟಿಯಾಗಿ ಸಿನಿಮಾಗಳಲ್ಲಿ ಅಭಿನಯಿಸಿದ ದಿಟ್ಟ ನಿಲುವಿನ ಕಮಲಾದೇವಿ ಚಟ್ಟೋಪಾಧ್ಯಾಯ. ನ್ಹೊರಾ ರಿಚರ್ಡ್ಸ ಎನ್ನುವ ಐರಿಶ್‌ ಮಹಿಳೆ ಪತಿಯೊಂದಿಗೆ ೧೯೦೮ರಲ್ಲಿ ಪಂಜಾಬಿಗೆ ಬಂದಿದ್ದಳು. ಅಲ್ಲಿನ ವಿದ್ಯಾರ್ಥಿಗಳಿಗೆ ನಾಟಕವಾಡಲು ಪ್ರೋತ್ಸಾಹಿಸಿದಳಲ್ಲದೇ ಪಂಜಾಬಿನ ಕತೆಗಳನ್ನು ಇಂಗ್ಲೀಷಿನಲ್ಲಿ ನಾಟಕವಾಗಿ ಬರೆದು ಆಡಿಸಿದಳು. ಕ್ರಮೇಣ ನಾಟಕ ಶಾಲೆಯನ್ನೇ ತೆರೆದಳು. ಅನೇಕ ಪ್ರಸಿದ್ಧ ರಂಗಕರ್ಮಿಗಳನ್ನು ಆ ಶಾಲೆ ತಯಾರು ಮಾಡಿತು.

ಬಹುರೂಪಿ-ತೃಪ್ತಿ ಮತ್ತು ಶೊಂಭು ಮಿತ್ರ

ತೃಪ್ತಿ ಬಹಾದುರಿ ಎಂಬ ನಟಿ ಬೆಂಗಾಲಿಯ ಶೊಂಭು ಮಿತ್ರಾ ಅವರನ್ನು ವರಿಸಿದಳು ಹಾಗೂ ಅವರಿಬ್ಬರೂ ಸೇರಿ ಬಹರೂಪಿ ತಂಡವನ್ನು ಕಟ್ಟಿ ಅನೇಕ ನಾಟಕಗಳನ್ನು ಪ್ರದರ್ಶಿಸಿ ಜನಮನ ಗೆದ್ದರು.ಉಷಾ ಗಂಗೂಲಿ ಕೊಲ್ಕತ್ತಾದಲ್ಲಿ ಹಿಂದಿ ನಾಟಕಗಳನ್ನು ಮಾಡಿಸುವುದಕ್ಕಾಗಿ ೧೯೭೬ರಲ್ಲಿ ರಂಗಕರ್ಮಿ ತಂಡವನ್ನು ಕಟ್ಟಿದ್ದರು. ರುಡಾಲಿ, ಕೊರ್ಟ ಮಾರ್ಶಲ್‌, ಮಹಾಭೋಜ, ಅಂತರ್‌ ಯಾತ್ರಾ ನಾಟಕಗಳು ಬಹಳ ಪ್ರಸಿದ್ಧಿ ಪಡೆದಿವೆ.

ಕರ್ನಾಟಕದಲ್ಲಿ ಪಾರಿಜಾತದಲ್ಲಿ ನಟಿಸುತ್ತಿದ್ದ ಕೌಜಲಗಿ ನಿಂಗಮ್ಮನನ್ನು ಮೊದಲ ರಂಗಕಲಾವಿದೆಯೆಂದು ಹೆಸರಿಸಬಹುದು. ಆಗಿನ ದಾಸರಾಟದಲ್ಲಿ ಸಂಪೂರ್ಣವಾಗಿ ಎಲ್ಲ ಕಲಾವಿದರೂ ಮಹಿಳೆಯರೇ ಆಗಿದ್ದರೆಂದು ಉಲ್ಲೇಖಿಸಲಾಗುತ್ತದೆ.ಮೆಟಗುಡ್ಡ ಕಮಲವ್ವ, ಬಡಾಕುಂದ್ರಿ ಗಂಗವ್ವ, ದಲಗುಣವಾಡ ಯಮನವ್ವ, ನಾವಲಗಟ್ಟಿ ಶಾಂತವ್ವ, ಹುಡೇದ ಶಾರವ್ವ ಇವರನ್ನೆಲ್ಲ ಚಿಮಣಾಗಳು ಎಂದು ಕರೆಯಲಾಗುತ್ತಿತ್ತು. ೧೮೮೯ರಲ್ಲಿ ನಟಿಸುತ್ತಿದ್ದ ಯಲ್ಲೂಬಾಯಿ ಗುಳೇದಗುಡ್ಡ ಇವರನ್ನು ಮೊದಲ ವೃತ್ತಿ ರಂಗಭೂಮಿಯ ನಟಿಯೆಂದು ಗುರುತಿಸುತ್ತಾರೆ.

ಲಕ್ಷ್ಮೇಶ್ವರದ ಬಚ್ಚಾಸಾನಿ, ಮೈಸೂರಿನ ನಂಜಾಸಾನಿಯರನ್ನೂ ಇಲ್ಲಿ ಹೆಸರಿಸಬಹುದು. ೧೯೧೬ರಲ್ಲಿ ಲಕ್ಷ್ಮೇಶ್ವರದಲ್ಲಿ ಮೊದಲ ಸ್ತ್ರೀ ನಾಟಕ ಮಂಡಳಿ ಜನ್ಮ ತಾಳಿತ್ತು. ಬೆಂಗಳೂರಿನ ಆರ್‌ ನಾಗರತ್ನಮ್ಮ ಸ್ತ್ರೀ ನಾಟಕ ಮಂಡಳಿಯನ್ನು ಸ್ಥಾಪಿಸಿ ಪುರುಷರನ್ನೂ ಮೀರಿಸುವಂತಹ ಕಂಸ, ರಾವಣ, ದುರ್ಯೋಧನ, ಕೃಷ್ಣ ಮುಂತಾದ ಪಾತ್ರಗಳನ್ನು ನಟಿಸಿ ಅಚ್ಚರಿ ಮೂಡಿಸಿದ್ದಾರೆ. ಕ್ರಮೇಣ ಜನರ ಮನೋಭಿಪ್ರಾಯಗಳು ಬದಲಾಗಿ ನಾಟಕದ ಕುರಿತು ಸದಭಿರುಚಿ ಬೆಳೆದಂತೆ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚುತ್ತ ಹೋಯಿತು.

ಬೆಂಗಳೂರಿನ ಆರ್‌ ನಾಗರತ್ನಮ್ಮ

ಡಿ.ವಿ.ಜಿ.ಯವರು ಹೇಳುತ್ತಾರೆ-“ನಾಟಕವ ನೋಡು ಬ್ರಹ್ಮಾಂಡ ರಂಗಸ್ಥಳದಿ
ಕೋಟಿ ನಟರಾಂತಿಹರು ಚಿತ್ರಪಾತ್ರಗಳ
ಆಟಕ್ಕೆ ಕಥೆಯಿಲ್ಲ ಮೊದಲಿಲ್ಲ ಕಡೆಯಿಲ್ಲ
ನೋಟಕರು ಮಾಟಕರೆ-ಮಂಕುತಿಮ್ಮ

ಒಮ್ಮ ಹಿಂತಿರುಗಿ ನೋಡಿದಾಗ ಇಷ್ಟೆಲ್ಲ ವರ್ಷಗಳಲ್ಲಿ ರಂಗದ ಝಗಮಗ ಬೆಳಕಿನಲ್ಲಿ ಅಮೋಘ ಅಭಿನಯ ನೀಡುವ ಬಣ್ಣ ಹಚ್ಚಿದ ಸಾವಿರಾರು ಮುಖಗಳು ಹೊಳೆಯುತ್ತವೆ. ಆದರೆ ಜನಮಾನಸದಲ್ಲಿ ಉಲ್ಲೇಖವೇ ಇಲ್ಲದೇ ಅದೆಷ್ಟು ಹೆಣ್ಣು ಜೀವಗಳು ಸಮಾಜದ ನಿಂದನೆ-ಕುಹಕಗಳಿಂದ ನಲುಗಿ ಮಣ್ಣಾಗಿವೆಯೋ ಗೊತ್ತಿಲ್ಲ. ಆ ಎಲ್ಲ ಸ್ತ್ರೀ ಹೆಜ್ಜೆಗಳ ಪ್ರಯತ್ನದಿಂದ ಈಗಿನ ಬೆಳಕಿನ ಬಾಳು ನಮ್ಮದಾಗಿದೆ. ವಿಶ್ವರಂಗಭೂಮಿಯ ದಿನಾಚರಣೆಯಂದು ಆ ಎಲ್ಲ ನಾರಿಮಣಿಗಳನ್ನೂ ಗೌರವದಿಂದ ನೆನೆಯೋಣ.