ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪ್ರೊ.ಸಿದ್ದು ಯಾಪಲಪರವಿ

ಪತ್ರಕರ್ತ, ಕವಿ,ಕತೆಗಾರ, ಅನುವಾದಕ,ವಿವಾದಾತ್ಮಕ ಬರಹಗಾರ ರವಿ ಬೆಳಗೆರೆ ನಿರೀಕ್ಷಿತವಾಗಿ ದೈಹಿಕವಾಗಿ ಹೋಗಿದ್ದಾರೆ.
ಕುಡಿತ,ಸಿಗರೇಟ್, ರಸಿಕತೆ ರವಿಯನ್ನು ಬಲಿ ತೆಗೆದುಕೊಂಡಿದೆ.
ಯಾವತ್ತಾದರೂ ಒಂದು ದಿನ ಸಾಯೋದೇ,ಹ್ಯಾಗ ಬದುಕಿದರೆ ಏನು? ಎಂಬ ಉಡಾಫೆಯೂ ಇತ್ತಲ್ಲ!

ಆದರೆ ರವಿ very very colourful ಕನಸುಗಾರ.
ಬದುಕಿನ ರಹಸ್ಯಗಳನ್ನು ಬಿಚ್ಚಿಟ್ಟ ಎದೆಗಾರ.
ತುಂಬಾ ಕಾಡಿ ಕನಲಿದ ಹುಟ್ಟಿನ ರಹಸ್ಯ ಬಿಚ್ಚಿಟ್ಟು ನಿರಾಳವಾದ ಹೊತ್ತಲ್ಲಿ ಜೀವ ಬಿಟ್ಟ ಜಾದೂಗಾರ.

ಹೌದು ರವಿ unethical ಆಗಿ ಹಣ ಗಳಿಸಿರಬಹುದು.
ಆದರೆ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದೂ ಅಷ್ಟೇ ನಿಜ.
ಸೆಕ್ಸಿ ಇದ್ದಿರಬಹುದು ಬರಹವೂ ಕೂಡ ಅಷ್ಟೇ ಸೆಕ್ಸಿ.
ಕಂಡ ಕನಸುಗಳನ್ನು ನನಸಾಗಿಸಿದ ಧೀರ.
ನಾವೆಲ್ಲರೂ hypocrisy, comfort zone ನಲ್ಲಿ ಒದ್ದಾಡಿ ಸತ್ತು ಹೋಗುತ್ತೇವೆ.
ಜೀವಂತ ಹೆಣದ ಹಾಗೆ.

‘ರವಿ ಕುಡುಕ,ಸ್ಮೋಕರ್ ವ್ಯಭಿಚಾರಿ’ ಎಂದು ಅಣಕಿಸುವ ನಾವೇನು ಸಾಚಾಗಳಾ! ನಮ್ಮದು ಬರೀ ಮಾನಸಿಕ ಹಾದರ ಮತ್ತು ಕೊಳಕು ಮುಖಕ್ಕೆ ಸುಂದರ ಮುಖವಾಡ ಆದರೆ ರವಿ ಹಾಗಲ್ಲ.

ಖಾಸಗಿ ಸಂಗತಿಗಳನ್ನು ಹೇಳಿಯೂ ಇಮೇಜ್ ಉಳಿಸಿಕೊಂಡ ಸಾತ್ವಿಕ ಭಂಡ.
ಅವನ ಫ್ಯಾನುಗಳಿಗೆ ಅದ್ಯಾವುದೂ ಲೆಕ್ಕಕ್ಕೆ ಬರಲೇ ಇಲ್ಲ.

‘ಬೀಚಿ is my biological father’ ಎಂಬ ಹೇಳಿಕೆ ನಮ್ಮ ನಿದ್ದೆಗೆಡಿಸಿತು.

ಭಾವುಕ ಜೀವಿಗಳು ತುಂಬಾ ಅವಾಸ್ತವ ಕನಸಿನ ಲೋಕದಲ್ಲಿ ಬದುಕಿ ಸಾಯುತ್ತಾರೆ ಆದರೆ ರವಿಗೆ ಭೌತಿಕ ವಾಸ್ತವ ಗೊತ್ತಿದ್ದರಿಂದ ಕೋಟಿಗಟ್ಟಲೆ ಹಣವನ್ನು ಕೂಡಿಟ್ಟ.
ಕಟ್ಟಿದ ಪ್ರಾರ್ಥನಾ ಶಾಲೆ,ಬಿಟ್ಟು ಹೋದ ನೂರಾರು ಪುಸ್ತಕಗಳು ಅವನ ಕುಟುಂಬದ ಆಸ್ತಿ.

ದೇಶ ಸುತ್ತಿ,ಕೋಶ ಓದಿ,ಜೀವನದ ಪ್ರತಿ ಕ್ಷಣಗಳನ್ನು ಅನುಭವಿಸಿದ ಜೀವನ ಪ್ರೇಮಿ.
ಬದುಕಬೇಕು ಎಂಬ ಕಡು ವ್ಯಾಮೋಹಕ್ಕೆ ತಕ್ಕಂತೆ ಕೀರ್ತಿ, ಹಣ,ಸಮಯ ದಕ್ಕಿಸಿಕೊಂಡ ಜಾದೂಗಾರ.

ವಿವಾದ,ಜಗಳ ಕೇವಲ ಜನಪ್ರಿಯತೆ ರೋಗ.
ಆದರೆ ಒಳಗೊಳಗೆ ಅದಮ್ಯ ಪ್ರೀತಿ.
ಅಕ್ಷರ,ಧ್ವನಿ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಏಕ ಕಾಲಕ್ಕೆ ಸಮರ್ಥವಾಗಿ ಬಳಸಿಕೊಂಡ ಜಾಣಾತಿ ಜಾಣ.
ಎಲ್ಲವನ್ನೂ ‘ಎನ್ ಕ್ಯಾಶ್’ ಮಾಡಿಕೊಳ್ಳುವ ಚಿಕಿತ್ಸಕ ಬುದ್ಧಿ.

ಸರಿ ತಪ್ಪು ಎಲ್ಲ ಗೊತ್ತಿದ್ದರೂ ಅಷ್ಟೇ conscious ಆಗಿ ತಪ್ಪು ಮಾಡಿ ದಕ್ಕಿಸಿಕೊಳ್ಳುವ ಧೈರ್ಯ.

ಪೋಲಿಸರು, ರೌಡಿಗಳು,ಬರಹಗಾರರು, ಸಿನೆಮಾ ನಟರು,ಆಟೋ ಚಾಲಕರು, ಮುದುಕರು,ಯುವಕರು ಹೀಗೆ ಸಮಾಜದ ಎಲ್ಲಾ ಸ್ತರದ ಜನರಿಗೆ ತಲುಪಿದ ಹೆಗ್ಗಳಿಕೆ.

ಕಾರು,ಬಂಗಲೆ,ಐಷಾರಾಮಿ ಜೀವನಶೈಲಿಯನ್ನು ಸೇಡಿನಂತೆ ಅನುಭವಿಸಲು ಬಲವಾದ ಕಾರಣವೂ ಇದೆ.
ಜೇಬಿನಲ್ಲಿ ಒಂದು ರೂಪಾಯಿ ಇಲ್ಲದೆ ಅಲೆದ ದಿನಗಳು ಕಾಡಿದ್ದು ಸಹಜ.
ಹಣದ ಬಗ್ಗೆ ಮಾತನಾಡುವ ಗೀಳು ಇತರರನ್ನು ಅಣಕಿಸಲು ಮಾತ್ರ ತನ್ನ ಖುಷಿಗಾಗಿ ಅಲ್ಲವೇ ಅಲ್ಲ ಎಂಬುದು ಗೊತ್ತಾಗುತ್ತಿತ್ತು.

ಯುವಕನಾಗಿದ್ದಾಗ ತನಗಿಂತ ಹತ್ತು ವರ್ಷ ದೊಡ್ಡವಳನ್ನು ಮದುವೆಯಾಗಿ, ಇಳಿ ವಯಸ್ಸಿನಲ್ಲಿ ತನಗಿಂತ ತುಂಬಾ ಚಿಕ್ಕವಳನ್ನು ಮದುವೆಯಾದ ವಿಕ್ಷಿಪ್ತ ವಿಚಿತ್ರ ತಿಕ್ಕಲು ಮನಸ್ಥಿತಿ.
ಆದರೆ ಅದನ್ನು ಹೇಳುವ ಎದೆಗಾರಿಕೆ ಯಾರಿಗಿದೆ ಹೇಳಿ?

ತನಗೆ ಸರಿ ಕಂಡಂತೆ ಬದುಕಿ,ಬರೆದು ಟೀಕೆ ಟಿಪ್ಪಣಿಗಳನ್ನು ಎದುರಿಸಿದ ಜೀವನೋತ್ಸಾಹ ನಮಗೆ ಆದರ್ಶ ಅಲ್ಲವಾದರೂ, ಹೇಗೆ ಬದುಕಬಾರದೆಂದು ಹೇಳಿ ಕೊಟ್ಟ ಪೋಲಿ ಗುರು.

ಅವರ ಹಾಗೆ ಉಪನ್ಯಾಸಕರಾದ,ಬರಹಗಾರರಾದ ನಮ್ಮಂತವರು comfort zone ,ಇಮೇಜ್ ಭಯದಲ್ಲಿ ಸತ್ತು ಹೋಗುತ್ತೇವೆ.

ಹಾಯ್ ಏಜೆನ್ಸಿಯ ಕಾಲದಲ್ಲಿ ಗದುಗಿನ ಮನೆಯ ಭೇಟಿ, ಅವರ ಒಡನಾಟ ಹಸಿರಾಗಿದೆ.

ಬರೆಯುವ,ಬೆರೆಯುವ,ಗಳಿಸುವ ಮಾರ್ಗ ಹೇಳಿಕೊಟ್ಟಿದ್ದಾನೆ ಆದರೂ ನಮಗೆ ಹಾಗೆ ಬೆಳೆಯುವ ದೈರ್ಯ ಇಲ್ಲದ ಹೊತ್ತಿನಲ್ಲಿ ವಿದಾಯ ಹೇಳುತ್ತೇನೆ.

ಹೋಗಿ ಬಾ ಅಣ್ಣ ಎನ್ನಲು ಮನಸು ಭಾರವಾಗಿದೆ.