ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಿನಾಯಕ ಅರಳಸುರಳಿ
ಇತ್ತೀಚಿನ ಬರಹಗಳು: ವಿನಾಯಕ ಅರಳಸುರಳಿ (ಎಲ್ಲವನ್ನು ಓದಿ)

“ಇದು ಫೋನ್ ಮಾತ್ರ ಅಲ್ಲ, ಇಲ್ನೋಡಿ ಇದ್ರಲ್ಲಿ ಟಾರ್ಚ್ ಕೂಡಾ ಇದೆ. ಅಲರಾಂ ಕೂಡಾ ಇಡಬಹುದು. ಪ್ರತೀ ವರ್ಷ ಈ ದಿನ ನಮ್ಮ ಅಜ್ಜನ ತಿಥಿ ಎಂದು ಸೆಟ್ ಮಾಡಿಟ್ಟರೆ ಸಾಕು, ಒಂದು ದಿನ ಮೊದಲೇ ಅದೇ ನಿಮಗೆ ನೆನಪು ಮಾಡ್ತದೆ!”

ನಮ್ಮ ದೂರದ ಸಂಬಂಧಿಯಾಗಿದ್ದ ಅವರು ಬಿಡಿಸಿ ಬಿಡಿಸಿ ಹೇಳುತ್ತಿದ್ದರೆ ನಂಬಲಸದಳ ಗುಣಲಕ್ಷಣಗಳಿರುವ ಆ ಅದ್ಭುತ ವಸ್ತುವನ್ನು ನಾನು, ತಮ್ಮ, ಅಪ್ಪ, ಅಮ್ಮ ಅಚ್ಚರಿಯಿಂದ ಆಚೆ ಬಂದ ಕಣ್ಣುಗಳಿಂದ ನೋಡತೊಡಗಿದೆವು. ಅಂಗೈಗಿಂತಲೂ ಸಣ್ಣಕ್ಕಿದ್ದ, ಕಿವಿಯೊಂದನ್ನು ಜೋಡಿಸಿದರೆ ಪೋಲೀಸರು ಬಳಸುವ ವಾಕೀಟಾಕೀಯ ದೂರದ ಸಂಬಂಧಿಯಂತೆ ಕಾಣುವ ಆ ಪುಟಾಣಿ ಆಯತ ನಮ್ಮನ್ನು ನೋಡಿದ್ದೇ ತನ್ನ ಪರದೆಯಲ್ಲಿ ಹಳದಿ ಬೆಳಕನ್ನು ಬೆಳಗಿಸುತ್ತಾ ಹೀ ಎಂದು ನಕ್ಕಿತು.

ಅದು ನಾನು ಜೀವನದಲ್ಲಿ ನೋಡಿದ ಮೊಟ್ಟಮೊದಲ ಮೊಬೈಲ್. ಅಂದು ನಮ್ಮನೆಗೆ ರಾತ್ರೆ ಉಳಿಯಲು ಬಂದಿದ್ದ, ಎಲ್ಲೈಸಿ ಏಜೆಂಟರೂ ಆಗಿದ್ದ ದೂರದ ಸಂಬಂಧಿಯೊಬ್ಬರು ತಮ್ಮ ಅಂಗಿಯ ಕಿಸೆಯಿಂದ ಆ ಮಾಯಕದ ಆಯತವನ್ನು ಆಚೆತೆಗೆದಿದ್ದರು. ಫೋನೆಂದರೆ ಎರೆಡೆರೆಡು ಭಾಗಗಳು. ಡಯಲ್ ಮಾಡುವುದೇ ಬೇರೆ, ಕಿವಿಗಿಡುವುದೇ ಬೇರೆ ಎಂಬೆಲ್ಲ ನಮ್ಮ ನಂಬಿಕೆಗಳನ್ನು ತಲೆಕೆಳಗು ಮಾಡುತ್ತಾ ಆ ಪುಟಾಣಿ ಯಂತ್ರ ಅವರ ಕೈಯಲ್ಲಿ ನಗುತ್ತಾ ಕುಳಿತಿತ್ತು!

ಅದನ್ನು ನೋಡುತ್ತಿದ್ದಂತೆಯೇ ನನಗೂ, ತಮ್ಮನಿಗೂ ಅದರ ಮೇಲೆ ಮನಸ್ಸಾಗಿಯಾಗಿತ್ತು. ಆದರೆ ನಮಗೆ ಅಷ್ಟೇನೂ ಆಪ್ತರಲ್ಲದ ಅವರ ಬಳಿ ಅದನ್ನು ಕೇಳುವುದು ನಮ್ಮಿಂದ ಸಾಧ್ಯವಿರಲಿಲ್ಲ. ಸಾಲದ್ದಕ್ಕೆ ಅವರಾದರೂ ಅದನ್ನು ನಮ್ಮ ಅಪ್ಪನ ಕೈಗೂ ನೋಡಲಿಕ್ಕೆ ಕೊಟ್ಟಿರಲಿಲ್ಲ. ತಮ್ಮ ಕೈಯಲ್ಲೇ ಹಿಡಿದು ಅದರ ಅಮೋಘ ಗುಂಡಿಗಳನ್ನು ಒತ್ತುತ್ತಾ ಅದರಲ್ಲಿ ಘಟಿಸುತ್ತಿದ್ದ ಪವಾಡ ಸದೃಶ ಬದಲಾವಣೆಗಳನ್ನು ನಮ್ಮ ಗಾಂಪ ಮುಖಗಳೆದುರು ಹಿಡಿದು ವರ್ಣಿಸುತ್ತಿದ್ದರು. ನಮ್ಮನ್ನು ಎಲ್ಲದಕ್ಕಿಂತ ಹೆಚ್ಚಾಗಿ ಕಾಡಿದ್ದೆಂದರೆ ಅದರಲ್ಲಿದ್ದ ಸ್ನೇಕ್ ಗೇಮ್! ಇದುವರೆಗೆ ನಾವು ಸಾಮಾನ್ಯವಾಗಿ ಆಡುತ್ತಿದ್ದ ಬ್ರಿಕ್ ಗೇಮ್ ನಲ್ಲಷ್ಟೇ ಇದ್ದ ಸ್ನೇಕ್ ಗೇಮ್ ನ ಹಾವು ಈ ಪುಟಾಣಿ ಪೆಟ್ಟಿಗೆಯೊಳಗೆ ಸೇರಿಕೊಂಡಿದ್ದಾದರೂ ಹೇಗೆಂದೇ ನಮಗೆ ತಿಳಿಯಲಿಲ್ಲ.

ಇಂತಿಪ್ಪ ಮೊಬೈಲನ್ನು ಮತ್ತೆ ತಮ್ಮ ಅಂಗಿ ಕಿಸೆಗೆ ಮರಳಿಸಿಕೊಂಡ ಅವರು ಊಟ ಮಾಡಲಿಕ್ಕೆ ಕುಳಿತರು. ಊಟ ಸಾಗುತ್ತಿರುವಾಗಲೇ ಇದ್ದಕ್ಕಿದ್ದಂತೆ ಅದು ಅವರ ಜೇಬಿನೊಳಗಿನಿಂದಲೇ ಸೀಟಿ ಹೊಡೆಯತೊಡಗಿತು! ನೋಡಿದರೆ ‘ಸಾರೇ ಜಹಾಂಸೆ ಅಚ್ಛಾ’ ಹಾಡನ್ನು ಕೀಂಕೀಂ ಭಾಷೆಗೆ ಬದಲಾಯಿಸಿಕೊಂಡು ವಿಭಿನ್ನವಾಗಿ ಸೀಟಿ ಹೊಡೆದಂತೆ ಹಾಡುತ್ತಿತ್ತು! ಅವರು ಅದನ್ನು ಸ್ಟೈಲಾಗಿ ಆಚೆ ತೆಗೆದು ಕಿವಿಗಿಟ್ಟುಕೊಂಡು ಹಲೋ ಎಂದು ಸಂಭಾಷಿಸತೊಡಗಿದರೆ ನಾವು ಬಾಯಲ್ಲಿರುವ ತುತ್ತನ್ನು ಜಗಿಯುವುದನ್ನೂ ಮರೆತು ಅವರನ್ನೇ ನೋಡತೊಡಗಿದೆವು. ಯಾವ ವಯರ್, ಕಂಬಿಗಳೂ ಇಲ್ಲದೇ ಸುತ್ತಲಿರುವ ಗಾಳಿಯನ್ನೇ ಮಾತಾಗಿ ಪರಿವರ್ತಿಸಿ ಕೇಳಿಸುತ್ತಿದ್ದ ಈ ಇಂದ್ರಜಾಲ ಏನೆನ್ನುವುದು ನನಗಂತೂ ಅರ್ಥವೇ ಆಗಲಿಲ್ಲ. ಊಟ ಮುಗಿಸಿ ಎದ್ದ ಅವರು ‘ಇಲ್ಲಿ ನೆಟ್ವರ್ಕ್ ಸರಿ ತಾಕ್ತಿಲ್ಲೆ’ ಎನ್ನುತ್ತಾ ಕೈತೊಳೆದು ಅಂಗಳದ ತುದಿಗೆ ಹೋಗಿ ನಿಂತು ದೊಡ್ಡ ದನಿಯಲ್ಲಿ ಮಾತನಾಡತೊಡಗಿದರು‌. ಏನೂ ಇಲ್ಲದಿರುವಲ್ಲಿ ತಾಕುವುದಾದರೂ ಏನೆಂಬುದು ನಮಗ್ಯಾರಿಗೂ ತಿಳಿಯಲೇ ಇಲ್ಲ. ಕೊನೆಗೆ ಅವರೇ ಮರಳಿಬಂದು ‘ನಿಮ್ಮ ರೇಡಿಯೋ ಇಲ್ವಾ? ಇದೂ ಹಾಗೇನೇ’ ಎಂದು ಇದ್ದಿದ್ದರಲ್ಲೇ ಸ್ವಲ್ಪ ಅರ್ಥವಾಗುವ ವಿವರಣೆಯನ್ನು ನೀಡಿ ನಮ್ಮನ್ನು ಕೃತಾರ್ಥರನ್ನಾಗಿಸಿದರು.

ಮಲಗುವ ಮುನ್ನ ಗೋಡೆಯ ಮೊಳಗೆ ನೇತುಹಾಕಿದ್ದ ಆ ಮೊಬೈಲ್ ಆಗೊಮ್ಮೆ ಈಗೊಮ್ಮೆ ಬೀಪ್ ಬೀಪ್ ಎಂದು ಶಕ್ತಿಮಾನ್ ಧಾರಾವಾಹಿಯಲ್ಲಿ ಬರುವ ಮಾಯಾಗೋಲದಂತೆ ಶಬ್ದ ಮಾಡುತ್ತಿತ್ತು. ಆಗೆಲ್ಲ ಅವರು ಅದನ್ನು ಕೈಗೆತ್ತಿಕೊಂಡು ತಾಳೆಗರಿಯನ್ನು ಓದುವ ಇತಿಹಾಸಕಾರನಂತೆ ಗಂಭೀರವಾಗಿ ಓದಿ ಮತ್ತದನ್ನು ಅದರ ಜಾಗಕ್ಕೆ ಮರಳಿಸುತ್ತಿದ್ದರು‌. ಬೆಳಗ್ಗೆಯಂತೂ ಅದು ಸರಿಯಾದ ಸಮಯಕ್ಕೆ ಟ್ರಿಣ್ ಟ್ರಿಣ್ ಎಂದು ದೊಡ್ಡದಾಗಿ ಅಲರಾಂ ಬಾರಿಸಿ ಅವರ ಮಾತನ್ನು ಸತ್ಯಮಾಡಿತು. ಹೀಗೆ ಲ್ಯಾಂಡ್ ಲೈನ್ ಸಹಾ ಇಲ್ಲದ ನಮ್ಮ ಮನೆಗೆ ಮೊಟ್ಟಮೊದಲ ಬಾರಿಗೆ ಅಡಿ ಇಟ್ಟ ಮೊಬೈಲ್, ದೂರವಾಣಿ ಲೋಕದಲ್ಲಿ ಮುಂದೆ ಬರಲಿರುವ ಅದ್ಭುತ ಕ್ರಾಂತಿಯ ಮೊದಲ ಝಲಕನ್ನು ನಮ್ಮೆದುರು ಪ್ರದರ್ಶಿಸಿತ್ತು.

*********

ಫೋನೆಂಬುದು ಸಾವುಕಾರರ ಮನೆಯ ಟೇಬಲ್ ಗಳ ಮೇಲಷ್ಟೇ ಕಾಣಸಿಗುತ್ತಿದ್ದ ಕಾಲವದು. ಪ್ರತಿಯೊಂದು ಮಗುವೂ ತನ್ನ ಕೈಯಲ್ಲಿ ಅಂಗೈಯಗಲದ ಆಯತಕಾರದ್ದೇನನ್ನೋ ಸಾಕ್ಷಾತ್ ಫೋನೆಂಬಂತೆ ಹಿಡಿದು’ಹಲೋ’ ಎಂದು ಆಡಿ ಸಂಭ್ರಮಿಸುವಷ್ಟರ ಮಟ್ಟಿಗೆ ಫೋನೆನ್ನುವುದು ಸಾಮಾನ್ಯರೆಲ್ಲರ ಬದುಕಿನಿಂದ ದೂರವಿತ್ತು. ನಾವಂತೂ ಸ್ವಲ್ಪ ಮಟ್ಟಿಗೆ ಫೋನಿನ ಆಕಾರವನ್ನು ಹೊಂದಿರುವ ಯಾವ ವಸ್ತು ಸಿಕ್ಕರೂ ಅದನ್ನೇ ಫೋನೆಂದು ಒಪ್ಪಿಕೊಂಡು ಕಿವಿಗಿಟ್ಟುಕೊಳ್ಳುತ್ತಿದ್ದೆವು. ದಪ್ಪದ ರಟ್ಟನ್ನು ಕತ್ತರಿಸಿ, ಅದರ ಮೇಲೆ ಒತ್ತುಗುಂಡಿಗಳ ಚಿತ್ರ ಬರೆದು, ವಯರನ್ನು ತಗುಲಿಸಿ ದೂರವಾಣಿಯ ಆತ್ಮವನ್ನು ಆ ರಚನೆಗೆ ಆವಾಹಿಸಿಬಿಡುತ್ತಿದ್ದೆವು. ಹೀಗೆ ಮೂರೂವರೆ ಆಣೆಯ ಹಾಳೆ, ಹಗ್ಗಗಳಿಂದಾದ ರಟ್ಟಿನ ರಚನೆಯನ್ನೇ ಬಳಸಿಕೊಂಡು ನಾವು ಭೂಮಿಯಿಂದ ಹಿಡಿದು ಮಂಗಳಗ್ರಹದ ತನಕ ಸಕಲ ಲೋಕಗಳಿಗೂ ಫೋನಾಯಿಸುತ್ತಿದ್ದರೆ ಅಲ್ಲೆಲ್ಲೋ ಸ್ವರ್ಗದಲ್ಲಿ ಕುಳಿತಿರುವ ಗ್ರಹಂಬೆಲ್ ನ ಆತ್ಮ ತಲೆತಲೆ ಚಚ್ಚಿಕೊಳ್ಳುತ್ತಿತ್ತೇನೋ?

ಆಗೆಲ್ಲಾ ನಾವು ಯಾರದೋ ಮನೆಗೆ ಹೋದಾಗ ಅಲ್ಲಿ ಅರೆ ತೆರೆದ ಕಿಟಕಿಯಿಂದ ಹೌದೋ ಅಲ್ಲವೋ ಎಂಬಂತೆ ಕಾಣುತ್ತಿದ್ದ ಫೋನುಗಳು ತಮಗೆ ಹೊದಿಸಿದ ಬಟ್ಟೆಯ ಅಡಿಯಿಂದಲೇ ಟ್ರಿಣ್ ಟ್ರಿಣ್ಣೆಂದು ಕೂಗಿ ಮನೆಯೊಡೆಯನನ್ನು ‘ನನ್ನನ್ನು ಎತ್ತಿಕೋ’ ಎಂದು ಕರೆಯುತ್ತಿದ್ದರೆ ಆಚೆ ನಿಂತ ನನ್ನ ಕಣ್ಣು ತಾನೇ ತಾನಾಗಿ ಮನೆಯೊಳಗೊಂದು ಇಣುಕುಹಾಕುತ್ತಿತ್ತು. ನಮ್ಮೂರಿನ ಡಾಕ್ಟರ ಶಾಪಿಗೆ ಹೋದಾಗ ಅವರ ಟೇಬಲ್ ಮೇಲೆ ಒಪ್ಪವಾಗಿ ಕುಳಿತಿರುತ್ತಿದ್ದ ಫೋನಿನ ತಿರುಗಣೆಯನ್ನೊಮ್ಮೆ ತಿರುಗಿಸಿ ನೋಡಬೇಕೆಂಬ ನನ್ನ ಆಸೆಯನ್ನು ಆಮೇಲೆ ಡಾಕ್ಟರು ಚುಚ್ಚಬಹುದಾದ ಇಂಜಕ್ಷನ್ ನ ಭಯ ನುಂಗಿಬಿಡುತ್ತಿತ್ತು. ಇನ್ನು ಸ್ವಲ್ಪ ಸಮಯದ ನಂತರ ಊರಿನ ಕಿಣಿಭಟ್ಟರ ಅಂಗಡಿಗೆ ಫೋನು ಬಂದು ಅಮ್ಮನೂ, ಅಕ್ಕನೂ ತುಮಕೂರಿನಲ್ಲಿರುವ ಚಿಕ್ಕಮ್ಮನಿಗೆ ಕರೆಮಾಡಲೆಂದು ವಾರಕ್ಕೊಮ್ಮೆ ಅಲ್ಲಿಗೆ ಹೋಗುತ್ತಿದ್ದರಾದರೂ ಅಲ್ಲೂ ಸಹಾ ಚಿಕ್ಕವನಾದ ನನ್ನ ಪಾಲಿಗೆ ಫೋನು ಬಳಕೆ ನಿಶಿದ್ಧವಾಗಿಯೇ ಉಳಿಯಿತು.

ಹೀಗಿದ್ದಾಗ ಶಿವಮೊಗ್ಗದಲ್ಲಿದ್ದ ನನ್ನ ಮಾವನ ಮನೆಗೆ ಫೋನು ಬಂತು. ಬೇಸಿಗೆ ರಜೆಗೆಂದು ಅವರ ಮನೆಯೊಳಗೆ ಕಾಲಿಟ್ಟ ನನ್ನ ಕಣ್ಣಿನೆದುರು ನೀಲಿಬಣ್ಣದ ಡಯಲ್ ಫೋನ್! ನಿಂತಲ್ಲೇ ಸುಮ್ಮನೆ ಆರೆಂಟು ಗುಂಡಿಗಳ ಒತ್ತಿದರೆ ದೂರದಲ್ಲಿರುವ ಯಾರದೋ ಧ್ವನಿಯನ್ನು ಕೇಳಿಸುವ, ಅವರ ನಗು, ಅಳು, ಕೋಪ, ಭಯ, ತಮಾಷೆ ಎಲ್ಲವನ್ನೂ ಹಾಗ್ಹಾಗೇ ಕಿವಿಗೆ ಸೋಕಿಸುವ ಮಾಯಾವೀ ಯಂತ್ರ! ಅಂದು ಮಧ್ಯಾಹ್ನ ದೊಡ್ಡವರೆಲ್ಲರೂ ಊಟ ಮಾಡಿ ಪವಡಿಸುತ್ತಿದ್ದಂತೆಯೇ ನನ್ನ ಪ್ರಯೋಗ ಆರಂಭವಾಯಿತು. ರಿಸೀವರನ್ನು ಕಿವಿಗಿಟ್ಟುಕೊಂಡು ಕೈಗೆ ಸಿಕ್ಕ ನಂಬರನ್ನೆಲ್ಲಾ ಒತ್ತುವುದು, ಆಚೆ ಕಡೆಯಿಂದ ಕೇಳಿಸುವ ಯಾವುದೋ ಅಪರಿಚಿತರ ‘ಹಲೋ’ಗಾಗಿ ಕಾಯುವುದು… ಆದರೆ ಹಾಗೆ ಪೆದ್ದು ಪೆದ್ದಾಗಿ ಡಯಲ್ ಮಾಡಿದ ಯಾವ ನಂಬರ್ರೂ ಇನ್ನೊಬ್ಬರ ಫೋನನ್ನು ಹೋಗಿ ತಲುಪುತ್ತಿರಲಿಲ್ಲ. ಆದರೂ ನನ್ನ ಪ್ರಯತ್ನ ನಿಲ್ಲುತ್ತಿರಲಿಲ್ಲ. ಹಾಗೇ ಡಯಲ್ ಮಾಡೀ ಮಾಡೀ ಕೊನೆಗೂ ಒಮ್ಮೆ ಯಾರದೋ ಮನೆಯ ಫೋನೊಂದು ರಿಂಗಣಿಸಿಯೇಬಿಟ್ಟಿತು! ಅತ್ತಕಡೆಯಿಂದ ದನಿಯೊಂದು ‘ಹಲೋ.. ಯಾರ್ರೀ ನೀವು? ನಿಮಗ್ಯಾರು ಬೇಕ್ರೀ? ಮಾತಾಡ್ರೀ..’ ಎಂದು ಬಾಯ್ಬಡಿದುಕೊಳ್ಳುತ್ತಿದ್ದರೆ ನಾನಿಲ್ಲಿ ಸಾಕ್ಷಾತ್ ಕಿನ್ನರ- ಕಿಂಪುರುಷರ್ಯಾರೊಂದಿಗೋ ಮಾತನಾಡಿದ ಸಂಭ್ರಮವನ್ನನುಭವಿಸಿದ್ದೆ.

ಚಿಕ್ಕವರು ಮಾತ್ರವಲ್ಲ, ದೊಡ್ಡವರ ಪಾಲಿಗೂ ಫೋನೊಂದು ಸಂಭ್ರಮವೇ ಆಗಿತ್ತು. ಸಂಜೆ ಡ್ಯೂಟಿ ಮುಗಿಸಿ ಬರುತ್ತಿದ್ದ ಚಿಕ್ಕಮ್ಮ, ಮಾವ ಎಲ್ಲರೂ ಒಬ್ಬೊಬ್ಬರಾಗಿ ಫೋನಿನ ತೆಕ್ಕೆಗೆ ಬೀಳುತ್ತಿದ್ದರು. ದೂರದಲ್ಲೆಲ್ಲೋ ಇರುವ ಮಿತ್ರರೊಂದಿಗೆ ಸಂಭಾಷಿಸುತ್ತಾ ಟೇಬಲ್ ನ ಮೇಲೆ ಹೊರಳ್ಯಾಡಿ ನಗುತ್ತಿದ್ದರು. ಫೋನಿಟ್ಟಮೇಲೂ ‘ನಮ್ಮ ತೇಕೋಜೀ ಎಷ್ಟು ತಮಾಷೆಮಾಡ್ತಾನಪ್ಪಾ’ ಎಂದು ಆಡಿ ಮುಗಿದ ಮಾತುಗಳನ್ನು ಮತ್ತೆ ನೆನೆಯುತ್ತಿದ್ದರು. ಅವರ ವರ್ಣನೆಯನ್ನು ಕೇಳಿಸಿಕೊಂಡ ನಾನು ನೋಡಿಯೇ ಇರದ ಆ ತೇಕೋಜೀ ಎಂಬ ಹಾಸ್ಯಗಾರನ ಚಹರೆಯನ್ನು ಹೇಗ್ಹೇಗೋ ಕಲ್ಪಿಸಿಕೊಳ್ಳುತ್ತಿದ್ದೆ.

*********

ತಂತ್ರಜ್ಞಾನ ಬೆಳೆಯುತ್ತಾ ಹೋದಂತೆ ಫೋನು ಚಿಕ್ಕದಾಗುತ್ತಾ ಹೋಯಿತು‌. ಒಂದೇ ಜಾಗಕ್ಕೆ ಬಂಧಿತವಾಗಿರುವ ಸ್ಥಿತಿಯಿಂದ ಹಂತಹಂತವಾಗಿ ಸ್ವತಂತ್ರವಾಗುತ್ತಾ ಹೋಯಿತು. ಮೊದಲಿಗೆ ಡಯಲ್ ಪೆಟ್ಟಿಗೆಗೆ ಕಟ್ಟಿಹಾಕುವ ಸುರುಳಿಯಿಂದ ಬಿಡಿಸಿಕೊಂಡು ಸ್ವಲ್ಪದೂರದ ತನಕ ಒಯ್ಯುವಂತಾದದ್ದು ಕೊನೆಗೆ ಸಮಸ್ತ ಗುಂಡಿ ಸಮೂಹವನ್ನೂ ತನ್ನ ಎದೆಗೇ ಅಂಟಿಸಿಕೊಂಡು ಮನುಷ್ಯನಿಗೆ ಮತ್ತಷ್ಟು ಹತ್ತಿರವಾಗಿ, ನೇರ ಅವನ ಜೇಬನ್ನೇ ಸೇರಿಕೊಂಡುಬಿಟ್ಟಿತು. ೧೯೮೪ರಲ್ಲೇ ಕಂಡುಹಿಡಿಯಲ್ಪಟ್ಟ ಮೊಬೈಲು ಭಾರತವನ್ನು ಪ್ರವೇಶಿಸಿದ್ದು  ೧೯೯೬ರಲ್ಲಿ. ಅದರಲ್ಲೂ ಸಾಮಾನ್ಯ ಮನುಷ್ಯನ ಕಿಸೆ ಹೊಕ್ಕಿದ್ದು ೨೦೦೬-೦೭ರ ನಂತರವೇ. ಇತ್ತೀಚೆಗಂತೂ ಅದು ಎಷ್ಟರ ಮಟ್ಟಿಗೆ ಮನುಷ್ಯನ ಕೈಯ ಅವಿಭಾಜ್ಯ ಅಂಗವಾಗಿದೆಯೆಂದರೆ ನಮ್ಮ ಮುಂದಿನ ತಲೆಮಾರಿನವರ ಕೈಗಳು ದೊಡ್ಡ ದೊಡ್ಡ ಮೊಬೈಲ್ ಗಳ‌ ಬಳಕೆಗೆಂದೇ ಇನ್ನಷ್ಟು ಅಗಲವಾಗಿ, ಉದ್ದುದ್ದದ ಬೆರಳುಗಳೊಂದಿಗೆ ರೂಪುಗೊಂಡರೂ ಆಶ್ಚರ್ಯವಿಲ್ಲ!

ನಾನು ಮೊದಲ ಬಾರಿಗೆ ಮೊಬೈಲನ್ನು ನೋಡಿದ್ದು ಹೈಸ್ಕೂಲಿನ ಆರಂಭದ ದಿನಗಳಲ್ಲಾದರೂ ಅದನ್ನು ಉಪಯೋಗಿಸಿದ್ದು ಹೈಸ್ಕೂಲಿನ ಕೊನೆಯ ದಿನಗಳಲ್ಲಿದ್ದಾಗ. ಅಪರೂಪಕ್ಕೆ ಬೆಂಗಳೂರಿನ ಮಾವನೋ, ಅತ್ತೆಯೋ ಮತ್ಯಾರೋ ಮನೆಗೆ ಬರುತ್ತಿದ್ದಂತೆಯೇ ಅವರ ಮೊಬೈಲನ್ನು ಸೆಳೆದುಕೊಂಡು ನೇರ ಮನೆಯೆದುರಿನ ಅಡಿಕೆ ಚಪ್ಪರ ಹತ್ತುತ್ತಿದ್ದೆ. ಅಲ್ಲಿ ಎತ್ತರದಲ್ಲಿ ಒಂದೋ ಎರೆಡೋ ನೆಟ್ವರ್ಕಿನ ಕಡ್ಡಿಗಳು ಮೂಡುತ್ತಿದ್ದಂತೆಯೇ ಅದರಲ್ಲೊಂದು ಮೆಸೇಜು ಬರೆದು ಕೆಳಗೆ ನಮ್ಮ ಮನೆಯೊಳಗಿದ್ದ ಹೊಚ್ಚಹೊಸ ಟಾಟಾ ಇಂಡಿಕಾಂನ ಸಿಡಿಎಂಎ ಫೋನಿಗೆ ಕಳಿಸುವುದು. ನಾನೇ ಬರೆದು, ನಾನೇ ಕಳಿಸಿದ ಅದೇ ಸಂದೇಶವನ್ನು ಅಲ್ಲಿ ಓದುವುದು. ಅದಕ್ಕೊಂದು ‘ರಿಪ್ಲೈ’ ಕೊಟ್ಟು ಅದನ್ನು ಓದಲಿಕ್ಕೆ ಮತ್ತೆ ಚಪ್ಪರ ಹತ್ತುವುದು! ಬಹುಷಃ ಮೊಬೈಲ್ಲೆಂಬ ಮಾಣಿಕ್ಯವನ್ನು ಕೈಯಲ್ಲಿ ಹಿಡಿದ ಆ ವಯಸ್ಸಿನ ಅದೆಷ್ಟೋ ಮಂಗಗಳು ಆಡುತ್ತಿದ್ದುದು ಇದೇ ಆಟವನ್ನು. ಹೀಗೆ ಒಂದೇ ಚಪ್ಪರದ ಮೆಲು-ಕೆಳಗುಗಳಲ್ಲಿ ನಿಂತ ಎರೆಡು ಫೋನುಗಳಿಂದಲೇ ಮೊಬೈಲು ಕಂಪನಿಗಳು ಅದೆಷ್ಟು ಲಾಭಗಳಿಸುತ್ತಿದ್ದವೋ ಏನೋ. ಸಾಲದ್ದಕ್ಕೆ ನಾನು ಮಾಡಿದ್ದೆಲ್ಲವನ್ನೂ ಚಾಚೂ ತಪ್ಪದೆ ಅನುಕರಿಸುವ ತಮ್ಮನೆನ್ನುವ ‘ಕಾಪಿ ಕ್ಯಾಟ್’ ಕೂಡಾ ಮನೆಯಲ್ಲಿದ್ದುದರಿಂದ ಅಲ್ಲಿ ಬಿರುಸಿನ ಸ್ಪರ್ಧೆಯೇರ್ಪಡುತ್ತಿತ್ತು. ಬಂದಿರುವ ಅತಿಥಿಗಳ ಮೊಬೈಲ್ ಗಾಗಿ ನಾವಿಬ್ಬರೂ ಭಲ್ಲೂಕ ವೀರರಂತೆ ಕಾದಾಡುತ್ತಿದ್ದರೆ ಅವರು ಮಾತ್ರ ಈ ಮಾರಾಮಾರಿಯಲ್ಲಿ ತಮ್ಮ ಮೊಬೈಲಿನ ಗತಿಯೇನಾಗುತ್ತದೋ ಎಂದು ಭಯಭೀತರಾಗಿ ನೋಡುತ್ತಿದ್ದರು.

ಎಸೆಸೆಲ್ಸಿಯಲ್ಲಿದ್ದಾಗ ನನ್ನ ಸಹಪಾಠಿಯೊಬ್ಬ ತನ್ನ ತಂದೆಯ ಕಲರ್ ಹ್ಯಾಂಡ್ಸೆಟ್ಟನ್ನು ಆಗಾಗ ಶಾಲೆಗೆ ತರುತ್ತಿದ್ದ. ಬೇರೆಯ ಕಪ್ಪು-ಬಿಳುಪು ಮೊಬೈಲುಗಳಂತಿಲ್ಲದ ಅದರ ಇನ್ನೊಂದು ವಿಶೇಷವೇನೆಂದರೆ, ಅದು ಸಂದೇಶ, ಕರೆಗಳು ಮಾತ್ರವಲ್ಲದೇ ಹಾಡು, ವೀಡಿಯೋಗಳನ್ನೂ ಬಿತ್ತರಿಸುತ್ತಿತ್ತು! ಹುಲಿ ಜಿಂಕೆಯನ್ನು ಕೊಲ್ಲುತ್ತಿರುವುದು, ಚಿಂಪಾಂಜಿ ಪಲ್ಟಿ ಹೊಡೆಯುತ್ತಿರುವುದರಿಂದ ಹಿಡಿದು ಭಯೋತ್ಪಾದಕನೊಬ್ಬ ಯಾರದೋ ಕತ್ತು ಕತ್ತರಿಸುತ್ತಿರುವ ತನಕ ಬೇಕಾದ, ಬೇಡದ ಎಲ್ಲವೂ ಅದರಲ್ಲಿದ್ದವು. ಅದರ ನೆತ್ತಿಯ ಮೇಲಿದ್ದ ತೂತಿಗೆ ಇಯರ್ ಫೋನನ್ನು ಸಿಕ್ಕಿಸಿಕೊಂಡ ಅವನು ನಮಗೆ ತಲೆಕೆಳಗಾಗಿ ನಿಂತರೂ ಅರ್ಥವಾಗದ ಇಂಗ್ಲೀಷ್ ಹಾಡುಗಳನ್ನು ಕೇಳುತ್ತಾ ತಲೆಯನ್ನು ಡಿಂಗ್ ಡಿಂಗೆಂದು ಕುಣಿಸುತ್ತಾ ನಮಗೆಲ್ಲಾ ಹೊಟ್ಟೆಕಿಚ್ಚು ತರಿಸುತ್ತಿದ್ದ. ಅವನು ಹಾಗೂ ಮೊಬೈಲುಗಳ ವಿಷಯದಲ್ಲಿ ಅವನಷ್ಟೇ ಬುದ್ಧಿವಂತನಾದ ಇನ್ನೊಬ್ಬನು ಸೇರಿಕೊಂಡು ಇಂಟರ್ನಲ್ ಮೆಮೋರಿ, ಮೆಮೋರಿ ಕಾರ್ಡ್, ಬ್ಲ್ಯೂಟೂತ್ ಎಂದೆಲ್ಲಾ ಚರ್ಚಿಸುತ್ತಿದ್ದರೆ ನಾವು  ನೆಫ್ಚೂನ್ ಗ್ರಹದ ಏಲಿಯನ್ ಸಂಗತಿಗಳನ್ನು ಕೇಳಿಸಿಕೊಳ್ಳುತ್ತಿರುವಂತೆ ಇಷ್ಟಗಲಕ್ಕೆ ಬಾಯ್ತೆರೆದು ಕುಳಿತುಕೊಳ್ಳುತ್ತಿದ್ದೆವು. 

ಹೀಗೆ ಅವತರಿಸಿದ ಮೊಬೈಲ್ ನ ಅತಿಹೆಚ್ಚು ಲಾಭ ಪಡೆದುಕೊಂಡವರೆಂದರೆ  ಪ್ರೇಮಿಗಳು ಹಾಗೂ ಮದುವೆ ಫಿಕ್ಸ್ ಆದ ಜೋಡಿಗಳು. ಅದರಲ್ಲೂ ಈ ಭಾವೀ ಮದುಮಕ್ಕಳಿರುತ್ತರಲ್ಲಾ, ನಿಶ್ಚಿತಾರ್ಥವಾದ ಮೇಲೆ ಅವರು ಈ ಲೋಕದವರೇ ಆಗಿರುವುದಿಲ್ಲ. ನಿಂತರೂ ಅವನದೇ ಹೆಸರು. ಕುಳಿತರೂ ಅವಳದೇ ಧ್ಯಾನ. ಬಿಂದಿಯಲ್ಲೂ ಅವನೇ, ನೆಲ ಒರೆಸುವ ಬಟ್ಟೆಯಲ್ಲೂ ಅವನೇ. ಬಾವಿಯಲ್ಲೂ ಅವಳೇ, ಬಕೆಟ್ ನಲ್ಲೂ ಅವಳೇ.. ಹೀಗೆ ತೀವ್ರ ಪ್ರೇಮದಿಂದ ತತ್ತರಿಸಿ ಹೋಗುವವರ ನೆರವಿಗೆ ಬಂದದ್ದು ಮತ್ತದೇ ಮೊಬೈಲ್. ನಿಶ್ಚಿತಾರ್ಥದಲ್ಲಿ ಹುಡುಗಿಯ ಕೈಗೆ ಉಂಗುರ ತೊಡಿಸುವಂತೆಯೇ ನಂತರ ಅವಳಿಗೊಂದು ಮೊಬೈಲ್ ಕೊಡಿಸಿ, ಅದಕ್ಕೊಂದಿಷ್ಟು ಕರೆನ್ಸಿ ಹಾಕಿಸಿ, ಅವಳ ಕರೆಗಾಗಿ ಕಾಯುವುದೂ ಸಹಾ ಪಾಲಿಸಲೇಬೇಕಾದ ಒಂದು ಸಂಪ್ರದಾಯದಂತೆ ವ್ಯಾಪಕವಾಗತೊಡಗಿತು. ಒಂದು ಕಡೆ ಮೊಬೈಲು ಬಳಸುವ ಖುಷಿ. ಇನ್ನೊಂದು ಕಡೆ ಭಾವೀ ಪತಿ/ಪತ್ನಿಯೊಂದಿಗೆ ಹರಟುವ ಸಂಭ್ರಮ. ಹೀಗೆ ಒಂದರ ಜೊತೆಗೆ ಇನ್ನೊಂದು ಸಿಕ್ಕ ಬಹುಮಾನದಂತೆ  ಮದುಮಕ್ಕಳ ಬದುಕು ಮತ್ತಷ್ಟು ರಂಗೇರತೊಡಗಿತು.

ಒಮ್ಮೆ ಹೀಗೇ ಮದುವೆ ನಿಶ್ಚಯವಾಗಿದ್ದ ನನ್ನ ಸಂಬಂಧಿಯೊಬ್ಬಳು ನಮ್ಮನೆಗೆ ಬಂದಿದ್ದಳು. ಎಲ್ಲರಂತೆಯೇ ಅವಳ ಭಾವೀ ಪತಿ ಅವಳಿಗೊಂದು ಚಂದದ ಮೊಬೈಲ್ ಕೊಡಿಸಿದ್ದರು. ಗುಲಾಬಿ ಬಣ್ಣದ್ದಾಗಿದ್ದ ಅದು ಎಂತಹವರಿಗಾದರೂ ಮೋಹವಾಗುವಷ್ಟು ಮುದ್ದಾಗಿತ್ತು. ಅವಳಂತೂ ಅದು ಸಾಕ್ಷಾತ್ ತನ್ನ ಹುಡುಗನೇ ಎಂಬಷ್ಟು ಅಕ್ಕರೆಯಿಂದ ಅದನ್ನು ಸದಾ ತನ್ನ ಕೈಯಲ್ಲೇ ಮುಚ್ಚಿಟ್ಟುಕೊಂಡಿರುತ್ತಿದ್ದಳು. ಆದರೆ ಈಗಾಗಲೇ ಅದಕ್ಕೆ ಮನಸೋತಿದ್ದ ನಾನು ಹಾಗೂ ನನ್ನ ತಮ್ಮ ಹೇಗಾದರೂ ಅದನ್ನೊಮ್ಮೆ ಬಳಸಲೇಬೇಕೆಂದು ನಾನಾ ಉಪಾಯಗಳನ್ನು ಹೆಣೆಯತೊಡಗಿದ್ದೆವು. ಬಹಳ ಕಾದ ನಂತರ ಅಂಥಾದ್ದೊಂದು ಸಂದರ್ಭ ಕೊನೆಗೂ ಒದಗಿಬಂತು. ತನ್ನ ಮುದ್ದಿನ ಮೊಬೈಲನ್ನು ಚಾರ್ಜಿಗೆ ಹಾಕಿದ್ದ ಅವಳು ಎಲ್ಲರೊಂದಿಗೆ ಕುಳಿತು ಊಟಮಾಡುತ್ತಿದ್ದಳು. ಇದೇ ಸರಿಯಾದ ಸಮಯವೆಂದು ಕಣ್ಣಲ್ಲಿಯೇ ಮಾತನಾಡಿಕೊಂಡ ನಾನು ಹಾಗೂ ತಮ್ಮ ಬೇಗ ಬೇಗ ಊಟ ಮುಗಿಸಿ ಮೊಬೈಲಿದ್ದ ಕೋಣೆಗೆ ನುಗ್ಗಿದೆವು. ಅಲ್ಲಿ ಸೊಂಟಕ್ಕೆ ಚಾರ್ಜರ್ ಸಿಕ್ಕಿಸಿಕೊಂಡು ಚಾರ್ಜಾಗುತ್ತಾ ನಿದ್ರಿಸುತ್ತಿದ್ದ ತಿಳಿಗುಲಾಬಿ ಬಣ್ಣದ ಸುಂದರ ಮೊಬೈಲನ್ನು ನಾನು ನಿಶ್ಯಬ್ದವಾಗಿ ಕೈಗೆತ್ತಿಕೊಂಡೆ. ಇರುವ ಸ್ವಲ್ಪವೇ ಸ್ವಲ್ಪ ಸಮಯದಲ್ಲಿ ಅದನ್ನು ಅತೀಹೆಚ್ಚು ಬಳಸಬೇಕೆಂಬ ಗಡಿಬಿಡಿಯಲ್ಲಿ ಅದರ ಬಟನ್ ಗಳನ್ನು ಒತ್ತತೊಡಗಿದೆ. ಅಷ್ಟೇ! ಹಠಾತ್ತನೆ ಆ ಮೊಬೈಲು ಕತ್ತೆಕಿರುಬನ ಕೈಗೆ ಸಿಕ್ಕ ಮೊಲದಂತೆ ಕಿಲಿಕಿಲಿಕಿಲಿಕ್ ಎಂದು ಅರಚಿಕೊಂಡುಬಿಟ್ಟಿತು. ಅದರ ಮೊರೆತ ಮುಗಿಯುವುದರೊಳಗೇ ಒಳಗೆ ಊಟಕ್ಕೆ ಕುಳಿತಿದ್ದ ಅಕ್ಕನ ಕೂಗು ಆರಂಭವಾಯಿತು. ‘ಏಯ್ ಮುಟ್ಬೇಡ್ರೋ ಅದನ್ನಾ’ ಎಂದು ಕಿರುಚಿದವಳೇ ಕಿಂಕಿಣಿಯಂತೆ ನೆಗೆದೆದ್ದು ಓಡಿಬಂದಳು. ಕಿರಾತಕರ ಕೈಯಿಂದ ಸಾಕ್ಷಾತ್ ತನ್ನ ಗಂಡನನ್ನೇ ಬಿಡಿಸಿಕೊಳ್ಳುವಂತೆ ನಮ್ಮ ಕೈಯಿಂದ ಮೊಬೈಲನ್ನು ಸೆಳೆದುಕೊಂಡು ಧಢಧಡ ನಡೆದೇಬಿಟ್ಟಳು! 

ಮೊಬೈಲೆಂಬುದು, ಅದರಲ್ಲೂ ಪ್ರೇಮಿಗಳ ಮೊಬೈಲೆಂಬುದು ಎಷ್ಟೊಂದು ಖಾಸಗೀ ವಸ್ತುವೆಂಬುದು ಅರಿವಿಲ್ಲದ ನಾವು ಮಿಕಮಿಕನೆ ಕಣ್ಕಣ್ಣುಬಿಟ್ಟು ನೋಡುತ್ತಾ ನಿಂತೆವು.

*********

ಮೊಟ್ಟ ಮೊದಲ, ನನ್ನದೇ ಮೊಬೈಲನ್ನು ಖರೀದಿಸುವಾಗ ನಾನು ದ್ವಿತೀಯ ವರ್ಷದ ಪದವಿಯ ಹೊಸಿಲಿನಲ್ಲಿದ್ದೆ. ಅದೂ ಯಾರೋ ಬಳಸಿ ಸವೆದಿದ್ದ ಸಕೆಂಡ್ ಹ್ಯಾಂಡ್ ಮೊಬೈಲ್. ಎಲ್ಲೋ ಕುಳಿತ ಗೆಳೆಯರಿಗೆ ಇಲ್ಲಿಂದಲೇ ಮೊದಲ ಬಾರಿಗೆ ಹಾಯ್ ಹಲೋ ಹೇಳುವಾಗ ಆಗಿದ್ದ ಸಂಭ್ರಮವನ್ನು ವರ್ಣಿಸುವಂಥಹಾ ಪದಗಳು ಬಹುಷಃ ಯಾವ ಭಾಷೆಯಲ್ಲೂ ಇಲ್ಲ. ಅದರಲ್ಲೂ ಶಾಲಾ ದಿನಗಳ ಗೆಳತಿಯೊಬ್ಬಳು ಮೊದಲ ಬಾರಿಗೆ ಹಾಯ್ ಎಂದು ಮೆಸೇಜ್ ಕಳಿಸಿದಾಗ ಹೃದಯ ಹೇಗೆ ಹೊಡೆದುಕೊಂಡಿತ್ತೆಂಬುದು ಅದಕ್ಕೆ ಮಾತ್ರ ಗೊತ್ತು! ಎದುರು ಬದುರಾದಾಗಲೇ ಮಾತನಾಡದ ಹುಡುಗಿ ಅಲ್ಲಿ ತನ್ನ ಮನೆಯಲ್ಲಿ ಕುಳಿತು ಕಳಿಸಿದ ಗುಡ್ನೈಟ್ ಮೆಸೇಜನ್ನು ಓದಿದ  ನಂತರ ಆವರಿಸಿದ್ದ ನಿದ್ರೆಯಲ್ಲಿ ಬೀಳುತ್ತಿದ್ದ ಕನಸುಗಳ ಸೊಗಸೇ ಬೇರೆ. ಇನ್ನು ಮೊಟ್ಟ ಮೊದಲ ಆಡಿಯೋ-ವೀಡಿಯೋ ಮೊಬೈಲನ್ನು ಕೊಂಡು, ಅಲ್ಲೆಲ್ಲೋ ಡೌನ್ ಲೋಡ್ ಸೆಂಟರ್ ನಲ್ಲಿ ಹಾಡುಗಳನ್ನು ಹಾಕಿಸಿಕೊಂಡುಬಂದ ದಿನವಂತೂ ಮೊಬೈಲ್ನೊಳಗೆ ಕುಳಿತ ಎಸ್ಪೀಬಿ, ಸೋನು ನಿಗಮ್ ಗಳಿಗೆ ಸುಸ್ತಾಗಿಹೋಗುವಷ್ಟು ಹಾಡು ಕೇಳಿದ್ದೆವು. 

ದೂರವಿದ್ದಷ್ಟೂ ನಕ್ಷತ್ರದ ಅಂದ ಜಾಸ್ತಿಯಂತೆ. ಪಕ್ಕದ ಮನೆಯಲ್ಲಿದ್ದಾಗ ಯಕ್ಷಲೋಕದ ಮಾಯಾಗೋಲದಂತೆ ಭಾಸವಾಗುತ್ತಿದ್ದ, ಮರದ ಕೊರಡಿನಲ್ಲಿ ಕೆತ್ತಿ ಆಡುವಂತೆ ಪ್ರೇರೇಪಿಸಿದ್ದ ಮೊಬೈಲು ತನ್ನದೇ ಅಂಗೈಗೆ ಬಂದ ಕೆಲವೇ ದಿನಗಳಲ್ಲಿ ಮರದ ಕೊರಡಿನಷ್ಟೇ ಸಾಮಾನ್ಯ ಸಂಗತಿಯಾಗಿಹೋಯಿತು. ಅದರಲ್ಲಿ ಬರುತ್ತಿದ್ದ ಮೆಸೇಜ್, ಕಾಲ್ ಗಳ ಜೊತೆ ಆಚೆ ಬದಿಯಿಂದ ಅವನ್ನು ಕಳಿಸುತ್ತಿದ್ದ ವ್ಯಕ್ತಿಗಳೂ ಹಳಸಿಹೋಗಿದ್ದರಿಂದ ಮೊಬೈಲು ಹಳೆಯ ಹೆಂಡತಿ/ಹಳೆಯ ಗಂಡನಂತೆ ತನ್ನಲ್ಲಿನ ಹೊಸತನವನ್ನು ಕಳೆದುಕೊಂಡುಬಿಟ್ಟಿತು. ರಿಂಗ್ ಆದೊಡನೆ, ಮೆಸೇಜು ಬಂದೊಡನೆ ಎಲ್ಲೇ ಇದ್ದರೂ ಛಂಗನೆ ಓಡಿಬರುವ ಸೆಳೆತ ಅದರಲ್ಲೀಗ ಇಲ್ಲ. 

ಮೊಬೈಲನ್ನು ಕೈಯ ಆರನೇ ಬೆರಳೆಂಬಷ್ಟು ಸಲೀಸಾಗಿ, ಸ್ವಾಭಾವಿಕವಾಗಿ ಪಡೆದುಕೊಳ್ಳುವ ಈಗಿನ ಚಿಕ್ಕ ಮಕ್ಕಳಿಗೆ ಅದರ ಬಗ್ಗೆ ಕನವರಿಸಿ, ಹಂಬಲಿಸಿ, ಹಂತಹಂತವಾಗಿ ಸಮೀಪಿಸಿ, ಕೊನೆಯಲ್ಲಿ ಅದನ್ನು ಪಡೆದುಕೊಂಡ ನಮ್ಮ ಪೀಳಿಗೆಯವರು ಅನುಭವಿಸಿದ ಖುಷಿಯೇನೆಂದು ಅರ್ಥವಾಗುವುದು ಸಾಧ್ಯವಿಲ್ಲ. ಶಾಲಾ ಪಾಠಗಳೂ ಮೊಬೈಲಿನಲ್ಲೇ ನಡೆಯುತ್ತಿರುವ ಈಗಿನ ಕಾಲದಲ್ಲಿ ಅದನ್ನು ಕಷ್ಟಪಟ್ಟು ಪಡೆದುಕೊಳ್ಳುಬೇಕಾಗಿಲ್ಲವಾದ್ದರಿಂದ ಅದರ ಮೆಸೇಜು, ಕಾಲ್ ಗಳು ಅವರನ್ನು ನಮ್ಮಷ್ಟು ರೋಮಾಂಚನಗೊಳಿಸಲಾರವೇನೋ? ಅದೆಲ್ಲಾ ಏನೇ ಆದರೂ ಮಾನವ ಜೀವನದ ರೀತಿನೀತಿಯನ್ನೇ ಬದಲಾಯಿಸಿದ ಹೆ(ಕು)ಗ್ಗಳಿಕೆಯಿರುವ ಮೊಬೈಲನ್ನು ಸ್ವಾಗತಿಸಿದ ಮೊದಲ ತಲೆಮಾರಿನವರೆನ್ನುವ ಹೆಮ್ಮೆ ನಮ್ಮದು.