ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಲಿಂಗ ಪ್ರಬೇಧಗಳನ್ನು ಮೀರಿ ಹೆಣ್ಣು ಗಂಡು

ಪ್ರೊ.ಸಿದ್ದು ಯಾಪಲಪರವಿ

ಸಮಾಜ ಆಲೋಚನೆ ಮಾಡುವ ರೀತಿ ಭಿನ್ನವಾಗಿ ಇರುತ್ತದೆ.
ಅನೇಕ ತರತಮಗಳ ಮಧ್ಯೆ ಮನಸು ನರಳುತ್ತಿರುತ್ತದೆ.
ಮನು ಹೇಳಿರಬಹುದಾದ ಲಿಂಗ ತಾರತಮ್ಯದ ಕುರಿತ ಮಾತುಗಳ ಬಗ್ಗೆ ತಮ್ಮ ಆತಂಕ ಹಂಚಿಕೊಂಡಿದ್ದಾರೆ.
ಈ ತರತಮವೇ ಹೀಗೆ ಹತ್ತು ಹಲವು ಬಗೆಯದು.
ವರ್ಗ-ವರ್ಣ-ಲಿಂಗ-ಧರ್ಮ-ಜಾತಿ…
ತರತಮಗಳ ಪಟ್ಟಿ ಬೆಳೆಯುತ್ತಲೇ ಸಾಗಿರುವುದು ದುರಂತ.

ನಮ್ಮ ಅಕ್ಷರ,ಅರಿವು ನಮ್ಮ ಪ್ರಯೋಜನಕ್ಕೆ ಬಾರದ ರೀತಿಯಲ್ಲಿ ನಮ್ಮ ಮಾತುಕತೆ ಸಾಗಿರುತ್ತದೆ.
ಬಸವಾದಿ ಶರಣರು ತಮ್ಮ ಅನುಭವ ಮಂಟಪದ ಮೂಲಕ ಎಲ್ಲಾ ತರತಮಗಳ ಅಳಿಸಿ ಹಾಕಲು ಯಶಸ್ವಿಯಾದರು.
ಆದರೆ ಆಧುನಿಕ ದಿನಗಳಲ್ಲಿ ನಮ್ಮ ಆಲೋಚನಾ ಕ್ರಮ ಅದರಾಚೆಗೆ ಸಾಗದಿರುವುದು ವಿಷಾದನೀಯ.
ವಿದ್ಯಾವಂತರು,ಹೆಚ್ಚು ಪ್ರಜ್ಞಾವಂತರೆನಿಸಿಕೊಂಡವರು ಈ ತಾರತಮ್ಯವನ್ನು ಪಾಲಿಸುತ್ತಿರುವುದು ಬೇಸರದ ಸಂಗತಿ.
ಐಟಿಬಿಟಿ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿರುವ ಯುವಕರು ಅಸ್ಮಿತೆಯ ಹುಡುಕಾಟದ ತಲ್ಲಣದಲಿ ಕಳೆದು ಹೋಗಿದ್ದಾರೆ.
ಅತಿ ಹೆಚ್ಚು ಡಿಪ್ರೆಶನ್ ಕೇಸುಗಳು ಮತ್ತು ಫ್ಯಾಮಿಲಿ ಕೋರ್ಟ್ ಮೂಲಕ ವಿಚ್ಛೇದನಕ್ಕೆ ಮುಂದಾಗಿರುವುದು ಸಮಾಜದ ಸ್ವ್ಯಾಸ್ಥ್ಯ ಹಾಳು ಮಾಡುತ್ತದೆ.
ಮಾಹಿತಿ ತಂತ್ರಜ್ಞಾನದ ವೇಗ ನಮ್ಮ ಅಂತರವನ್ನು ಕಡಿಮೆ ಮಾಡಬೇಕಿತ್ತು.
ದೈಹಿಕ ಅಂತರ ಕಡಿಮೆಯಾದರೆ ಸಾಲದು, ಮಾನಸಿಕ ಅಂತರವೂ ಕಡಿಮೆ ಆಗಬೇಕಿತ್ತು.
ಈ ಎಲ್ಲ ಗೊಂದಲಗಳನ್ನು ಗಮನಿಸಿದ ಮೂಲಭೂತವಾದಿ ಮನಸುಗಳು ‘ಮನು ವಾದ’ ಈಗ ಅರ್ಥಪೂರ್ಣ ಎಂದು ವಾದಿಸುತ್ತಿರುವುದು ಸಾಮಾಜಿಕ ಅಪಾಯವಾಗಿದೆ.
ಮಹಿಳೆಯರು ಕೇವಲ ಗೃಹಿಣಿಯಾಗಿ ಸಮಾಜದ ಹಿತ ಕಾಪಾಡಬೇಕು ಎಂಬ ವಾದ ತೇಲಿ ಬಿಟ್ಟಿದ್ದಾರೆ.
ಹನ್ನೆರಡನೇ ಶತಮಾನದಲ್ಲಿ ನೂರಾರು ಶರಣೆಯರು ಸಾಮಾಜಿಕ ಮತ್ತು ಧಾರ್ಮಿಕ ಸ್ವಾತಂತ್ರ್ಯ ಅನುಭವಿಸಿ ಸಾವಿರಾರು ವಚನಗಳ ಬರೆದು ನಮ್ಮ ಕಣ್ಣು ತೆರೆಸಿದ್ದಾರೆ.

ಆದರೆ ಇಪ್ಪತ್ತೊಂದನೇ ಶತಮಾನದಲ್ಲಿ ನಮ್ಮ ಆಲೋಚನಾ ಕ್ರಮ ಇನ್ನೂ ಮುಂದುವರೆಯ ಬೇಕಾಗಿತ್ತು; ಅದರ ಬದಲಾಗಿ ಹಿಂದೆ ಸಾಗುತ್ತಿರುವುದು ನಮ್ಮ ಬೌದ್ಧಿಕ ದಾರಿದ್ರ್ಯವನ್ನು ನಿವೇದಿಸುತ್ತದೆ.
ಗಂಡು ಹೆಣ್ಣು ಸಂಬಂಧಗಳ ನಿರ್ವಹಣೆ ಇಷ್ಟೊಂದು ದೊಡ್ಡ ಬಿಕ್ಕಟ್ಟಾಗಬಾರದಿತ್ತು.
ಗಂಡು ಹೆಣ್ಣು ಒಟ್ಟಾಗಿ ಬದುಕಬೇಕು, ಕೇವಲ ವೃತ್ತಿ ಕಾರಣದಿಂದ ಅಲ್ಲ.
ವೈಯಕ್ತಿಕ ಬದುಕಿನಲ್ಲಿ ತಾಯಿ,ಸೋದರಿಯರು, ಅತ್ತೆ,ಬಂಧು ಬಳಗದಲ್ಲಿ ಬೆಳೆದಿರುತ್ತೇವೆ.
ನಮ್ಮ ವೈವಾಹಿಕ ಬದುಕಿನಲ್ಲಿ ಪ್ರವೇಶ ಮಾಡುವ ಬಾಳ ಸಂಗಾತಿ ವಿಷಯದಲ್ಲಿ ಈ ಸಂಕೋಚ ಯಾಕೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
ಸಲಿಗೆ,ಪ್ರೀತಿ, ವಿಶ್ವಾಸ ಗಾಢವಾಗುತ್ತ ಹೋಗಬೇಕು. ದುಡಿಯುವ ಮಹಿಳೆಯರ ಕುರಿತು ಅಪಸ್ವರ ಕುಟುಂಬದ ಸದಸ್ಯರಿಂದ ಏಳಬಾರದು.
ಅದರಲ್ಲೂ ವಿಶೇಷವಾಗಿ ಕೈ ಹಿಡಿದ ಗಂಡು ನಿಸ್ಸಂಕೋಚವಾಗಿ ಆಲೋಚನೆ ಮಾಡಬೇಕು.
ಹಣದ ಆದಾಯಕ್ಕೆ ಸಂಗಾತಿ ದುಡಿದು ಗಳಿಸಲಿ ಆದರೆ ಸಾಮಾಜಿಕವಾಗಿ ತನ್ನ ಮೂಗಿನ ನೇರದ ಆಲೋಚನೆಯಂತೆ ವರ್ತಿಸಲಿ ಎಂದು ಬಯಸುವುದು ಯಾವ ನ್ಯಾಯ?


ಹೆಣ್ಣು ಮನೆಯ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾದರೆ ಮಾತ್ರ ಒಳ್ಳೆಯವಳಾಗಿ ಉಳಿಯುತ್ತಾಳೆ, ಗಂಡು ತನ್ನ ದರ್ಪದ ಮೂಲಕ ಅವಳನ್ನು ನಿಯಂತ್ರಣ ಮಾಡಬಹುದು ಎಂಬ ವಿಕಾರ ಆಲೋಚನೆ ಕೂಡ ಅಷ್ಟೇ ಅಪಾಯಕಾರಿ.
ಪರಸ್ಪರ ಪ್ರೀತಿ ವಿಶ್ವಾಸ ಹೆಚ್ಚಿಸಿಕೊಂಡು ಸಮರಸದಿ ಬಾಳಿದರೆ ವಿವಾದ,ವಿಷಾದವೂ ಇರುವುದಿಲ್ಲ.

ಹೆಣ್ಣು ಮಾತ್ರ ಪರಿಶುದ್ಧವಾಗಿರಲಿ ತಾನು ಮಾತ್ರ ಬೇಕಾ ಬಿಟ್ಟಿಯಾಗಿ ವರ್ತಿಸಬಹುದು ಎಂಬ ಪುರುಷ ಪ್ರಧಾನ ಆಲೋಚನೆಯಲ್ಲಿ ಮನು ನರ್ತನವಿದೆ.
ಮನು ವಿಚಾರಧಾರೆಗಳು ಆ ಕಾಲಕ್ಕೆ ಯೋಗ್ಯ ಎಂಬ ವಾದ ಕೂಡ ಅಷ್ಟೇ ಪೇಲವ.
ಹೆಣ್ಣನ್ನು ಕೀಳಾಗಿ ಕಾಣುವ ಧೋರಣೆ ಯಾವ ಕಾಲಕ್ಕೂ ಒಪ್ಪಿಗೆಯಾಗುವಂತಹದಲ್ಲ.