ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವೈಫಲ್ಯತೆಯ ಮಜಲೂ ತಿಳಿದಿರಲಿ…!

ಧೋನಿ ಹಾಗೂ ಮೋದಿ ನಡುವಿನ ಸಾಮ್ಯತೆಯೊಂದಿಗೆ ಅವರ ವೈಫಲ್ಯತೆಯ ಇನ್ನೊಂದು ಮಜಲಿನ ಬಗ್ಗೆ ಅಂಕಣಕಾರರು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.
ವಿವೇಕಾನಂದ ಎಚ್.ಕೆ.
ಇತ್ತೀಚಿನ ಬರಹಗಳು: ವಿವೇಕಾನಂದ ಎಚ್.ಕೆ. (ಎಲ್ಲವನ್ನು ಓದಿ)

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ. ಹೆಚ್.ಕೆ.

ಮಹೇಂದ್ರ ಸಿಂಗ್ ಧೋನಿ – ಕ್ರಿಕೆಟ್ – ಕೀಪಿಂಗ್ – ಬ್ಯಾಟಿಂಗ್, ನರೇಂದ್ರ ದಾಮೋದರ ಮೋದಿ – ರಾಜಕೀಯ – ಆಡಳಿತ – ಅಭಿವೃದ್ಧಿ…

ವಿಶ್ವದ ಕೆಲವೇ ಅತ್ಯುತ್ತಮ ಕ್ರಿಕೆಟ್ ನಾಯಕರಲ್ಲಿ ಭಾರತದ ಮಹೇಂದ್ರ ಸಿಂಗ್ ಧೋನಿ ಸಹ ಒಬ್ಬರು. ಕ್ರಿಕೆಟ್ ಆಟದ ಎಲ್ಲಾ ಸೂಕ್ಷ್ಮಗಳನ್ನು, ಪಿಚ್ ಗಳ ಮರ್ಮವನ್ನು, ಆಟಗಾರರ ಸಾಮರ್ಥ್ಯವನ್ನು, ಸಮಯ ಪ್ರಜ್ಞೆಯನ್ನು, ತಾಳ್ಮೆಯನ್ನು, ಹೊಸ ಪ್ರಯೋಗಗಳನ್ನು ಅಳವಡಿಸಿಕೊಂಡಿದ್ದ ಧೋನಿ ಆ ಆಟದಲ್ಲಿ ಸಾಕಷ್ಟು ಯಶಸ್ಸನ್ನು ಕಂಡವರು. ಭಾರತಕ್ಕೆ ಸಾಕಷ್ಟು ಕೀರ್ತಿ ತಂದವರು.

ಆದರೂ ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಕ್ರಮೇಣ ಹಿಡಿತ ಕಳೆದುಕೊಳ್ಳ ತೊಡಗಿದರು. ಎಷ್ಟೇ ಪ್ರಯತ್ನ – ಪ್ರಯೋಗ ನಡೆಸಿದರು ಅವರ ಯಾವ ಯೋಜನೆಗಳು ಯಶಸ್ವಿಯಾಗಲಿಲ್ಲ. ಸಾಕಷ್ಟು ಸೋಲುಗಳು ಅವರಿಗೆ ಎದುರಾದವು. ಆಸ್ಟ್ರೇಲಿಯಾದ ಪ್ರವಾಸದಲ್ಲಿ ಇರುವಾಗ ಒಂದು ಮ್ಯಾಚ್ ಸೋಲಿನಿಂದ ಆತ್ಮಾವಲೋಕನ ಮಾಡಿಕೊಂಡು ದಿಡೀರನೆ ಟೆಸ್ಟ್ ಕ್ರಿಕೆಟ್ ನಾಯಕತ್ವಕ್ಕೆ ರಾಜೀನಾಮೆ ನೀಡಿ ದೇಶಕ್ಕೆ ಮಾದರಿಯಾದರು. ಎಷ್ಟೇ ಯಶಸ್ವಿ ಮತ್ತು ಬುದ್ದಿವಂತ ನಾಯಕನಾಗಿದ್ದರೂ ದೇಶದ ಮತ್ತು ಆಟದ ಫಲಿತಾಂಶಗಳನ್ನು ಸ್ವಯಂ ವಿಮರ್ಶಿಸಿಕೊಂಡು ಹೊಸ ನಾಯಕತ್ವಕ್ಕೆ ದಾರಿ ಮಾಡಿಕೊಟ್ಟರು. ದೇಶ ಮುಖ್ಯ ವ್ಯಕ್ತಿಯಲ್ಲ ಎಂಬ ಧೋರಣೆ ಪ್ರದರ್ಶಿಸಿದರು.

ಅದೇ ರೀತಿ ಆಕ್ರಮಣಕಾರಿ ಆಡಳಿತದಿಂದ ದೇಶವನ್ನು ವಿಶ್ವಮಟ್ಟದ ಸ್ಪರ್ಧೆಗೆ ಏರಿಸಲು ಅತ್ಯುತ್ಸಾಹದಿಂದ ನೋಟ್ ಬ್ಯಾನ್, ಜಿಎಸ್ಟಿ, ಸೈನ್ಯದ ಆಧುನೀಕರಣ, ವಿದೇಶಗಳ ಯಾತ್ರೆ, ಸಿಎಎ ಮುಂತಾದ ಅನೇಕ ಕ್ರಮಗಳನ್ನು ಕೈಗೊಂಡವರು ಈಗಿನ ಪ್ರಧಾನಿ ನರೇಂದ್ರ ಮೋದಿ. ಅದರ ಪರಿಣಾಮ ಎರಡನೆಯ ಬಾರಿ ದಾಖಲೆಯೊಂದಿಗೆ ಮತ್ತೊಮ್ಮೆ ಚುನಾಯಿತರಾದರು. ಹೊಸ ಹೊಸ ಪ್ರಯೋಗಗಳಿಗೆ ದೇಶವನ್ನು ಒಳಪಡಿಸಿದರು. ಡಿಜಟಲೀಕರಣ, ಸ್ಮಾರ್ಟ್ ಸಿಡಿ, ಸ್ಮಾರ್ಟ್ ವಿಲೇಜ್, ಬುಲೆಟ್ ಟ್ರೈನ್, ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಎಲ್ಲವೂ ಯಶಸ್ವಿನತ್ತ ಸಾಗುತ್ತಿರುವಂತೆ ಭಾಸವಾಗುತ್ತಿತ್ತು. ಮೋದಿ ಆಧುನಿಕ ಭಾರತವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ಅಭಿಪ್ರಾಯ ಮೂಡತೊಡಗಿತು. ಬಹುತೇಕ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ವಾತಾವರಣ ಸೃಷ್ಟಿಸಲಾಯಿತು.

ಆದರೆ ವಾಸ್ತವವಾಗಿ ಪ್ರಾರಂಭದಲ್ಲಿ ಅವರ ಯೋಜನೆಗಳು ಯಶಸ್ವಿಯಾದಂತೆ ಕಂಡರು ನಿಧಾನವಾಗಿ ದೇಶ ಕೆಳಮಟ್ಟಕ್ಕೆ ಕುಸಿಯತೊಡಗಿತು. ಅದರಲ್ಲೂ ಮುಖ್ಯವಾಗಿ ದೇಶದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿತು. ಜನರ ಜೀವನಮಟ್ಟ ಕೆಳಕ್ಕೆ ಜಾರಿತು. ಅದನ್ನು ಉತ್ತಮ ಪಡಿಸಲು ಈ ವರ್ಷದ ಕೇಂದ್ರ ಬಜೆಟ್ ನಲ್ಲಿ ಸಾಕಷ್ಟು ಸರ್ಕಸ್ ಮಾಡಲಾಗಿತ್ತು. ಪ್ರತಿಫಲ ನಿರೀಕ್ಷಿಸಲಾಗಿತ್ತು.

ದುರಾದೃಷ್ಟವಶಾತ್ ಅದೇ ಸಮಯಕ್ಕೆ ಸರಿಯಾಗಿ ಕೊರೋನಾ ವೈರಸ್ ಇಡೀ
ವಿಶ್ವಕ್ಕೆ ದಾಳಿಯಿಟ್ಟಿತು. ಕೆಲವು ದಿನಗಳು ಮಾತ್ರ ಎಂದು ಭಾವಿಸಲಾಗಿದ್ದ ಈ ರೋಗ ತುಂಬಾ ದೀರ್ಘಕಾಲ ಕಾಡುವ ಸಾಧ್ಯತೆ ಇದೆ. ಇದರ ನಿಯಂತ್ರಣಕ್ಕಾಗಿ ಮಾಡಿದ ಸುಮಾರು 60/70 ದಿನಗಳ ಲಾಕ್ ಡೌನ್ ದೇಶದ ಜನಜೀವನ ಮತ್ತು ಆರ್ಥಿಕತೆಯನ್ನೇ ಬುಡಮೇಲು ಮಾಡಿದೆ.

ದೇಶದಲ್ಲಿ ಹರಡುತ್ತಿರುವ ಕೊರೋನಾ ಹಾವಳಿ ಮತ್ತು ಅದರಿಂದಾಗಿ ಹದಗೆಡುತ್ತಿರುವ ಆರ್ಥಿಕ ಪರಿಸ್ಥಿತಿಯನ್ನು ನಿಗ್ರಹಿಸಲು ಮತ್ತು ನಿರ್ವಹಿಸಲು ಮೋದಿಯವರು ಹಲವಾರು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತಿದ್ದಾರೆ ಎಂಬುದು ನಿಜ. ಆದರೆ ಯಾವುದು ಪರಿಣಾಮಕಾರಿಯಾಗುತ್ತಿಲ್ಲ.

ಕ್ರಿಕೆಟ್ ಭಾಷೆಯಲ್ಲಿ ಹೇಳಬೇಕೆಂದರೆ, ಪ್ರಾರಂಭದಲ್ಲಿ ವೇಗದ ಬೌಲರ್ ಗಳಿಗೆ ಅನುಕೂಲಕರವಾಗಿದ್ದ ಪಿಚ್ ನಿಧಾನವಾಗಿ ತನ್ನ ಗುಣ ಬದಲಾಯಿಸಿಕೊಳ್ಳುತ್ತಿದೆ. ಬಹುಶಃ ಸ್ಪಿನ್ ಬೌಲರ್‌ಗಳಿಗೆ ಹೆಚ್ಚು ಅನುಕೂಲಕವಾಗಬಹುದು.

ಆದರೆ ಸ್ವಲ್ಪ ವ್ಯಕ್ತಿ ಕೇಂದ್ರಿತ, ತನ್ನ ಮೇಲೆ ಅತಿಯಾದ ಆತ್ಮವಿಶ್ವಾಸ ಇರುವ ಗುಣದ ಮೋದಿಯವರು ಇದನ್ನು ಗ್ರಹಿಸಲು ವಿಫಲರಾಗುತ್ತಿದ್ದಾರೆ. ಒಳ್ಳೆಯ ಬ್ಯಾಟಿಂಗ್ ನಂತರ ಪಿಚ್ ಮರ್ಮ ಅರಿಯದೆ ಬೌಲರ್ ಗಳ ಬದಲಾವಣೆಯಲ್ಲಿ ಎಡುವುತ್ತಿದ್ದಾರೆ. ಇದು ದೇಶದ ಹಿತದೃಷ್ಟಿಯಿಂದ ತುಂಬಾ ಆಘಾತಕಾರಿ ವಿಷಯ.

ಈ ಹಂತದಲ್ಲಿ ನಾಯಕತ್ವ ಬಿಡುವುದು ಸರಿಯಲ್ಲದೇ ಇರಬಹುದು, ಆದರೆ ತಂಡದಲ್ಲಿ ಬದಲಾವಣೆ ಮಾಡಲು ಮತ್ತು ತನ್ನ ನೀತಿಗಳನ್ನು ಮಾರ್ಪಡಿಸಿ ಕೊಳ್ಳಲು ಇದು ಅತ್ಯಂತ ಸೂಕ್ತ ಮತ್ತು ಎಚ್ಚರಿಕೆಯ ಸಮಯ.

ಇಲ್ಲಿಯವರೆಗೂ ಆರ್ಥಿಕ ಅಭಿವೃದ್ಧಿ ಎನ್ನುವ ಅವರ ಪಕ್ಷದ ಮತ್ತು ಅವರ ವೈಯಕ್ತಿಕ ಚಿಂತನೆಯ ದಾರಿಗಳು ಒಂದು ರೀತಿಯಾಗಿದ್ದವು. ಬಂಡವಾಳ ಶಾಹಿ ಮತ್ತು ವ್ಯಾಪಾರಿ ಮನೋಭಾವ ಅದರಲ್ಲಿ ಅಡಕವಾಗಿತ್ತು. ಎಲ್ಲವೂ ಸರಿ ಇದ್ದಾಗ ಅದು ಯಶಸ್ವಿಯಾಗಬಹುದಿತ್ತೇನೋ…

ಕೊರೋನಾ ನಂತರದಲ್ಲಿ ಅದು ಖಂಡಿತ ಸಾಧ್ಯವಿಲ್ಲ. ಪರಿಸ್ಥಿತಿ ತೀರಾ ಭಿನ್ನವಾಗಿದೆ. ಈಗ ಸಂಪೂರ್ಣ ವಿರುದ್ಧ ದಿಕ್ಕಿನ ಆರ್ಥಿಕ ನೀತಿಗಳನ್ನು ರೂಪಿಸಬೇಕಿದೆ. ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ತುಂಬಾ ತುಂಬಾ ಆಳವಾದ, ಭಾರತೀಯ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆ ಬಗ್ಗೆ ನುರಿತ ತಜ್ಞರನ್ನು ಇದಕ್ಕಾಗಿ ಹುಡುಕಿ ತರಬೇಕಿದೆ. ವಿಶ್ವವೇ ಕೊರೋನಾ ವ್ಯಾಧಿಯಿಂದ ನಲುಗಿರುವಾಗ ಆಮದು ರಫ್ತು ನೀತಿಗಳಲ್ಲಿ ಗಣನೀಯ ಬದಲಾವಣೆ ಮಾಡಬೇಕಾಗಿದೆ. ಸ್ವಾವಲಂಬನೆಯ ಭಾರತ ಎಂಬ ಘೋಷಣೆಯನ್ನು ಇತರ ಘೋಷಣೆಗಳಂತೆ ಪ್ರಚಾರಕ್ಕಾಗಿ ಮಾಡದೆ ಅದರ ಪ್ರಾಯೋಗಿಕ ಅನುಷ್ಠಾನಕ್ಕೆ ಯೋಗ್ಯವಾದ ವಾತಾವರಣ ನಿರ್ಮಿಸಬೇಕಿದೆ. ಜನರೇ ಅದಕ್ಕೆ ಆಕರ್ಷಿತರಾಗಿ ಸ್ವಯಂ ಪ್ರೇರಣೆಯಿಂದ ಮುನ್ನುಗ್ಗಲು ರಾಜಕೀಯೇತರ ಚಳವಳಿ ಹುಟ್ಟುಹಾಕಬೇಕಿದೆ.

ಅದಕ್ಕೆ ಈಗಿರುವ ತಂಡ ಮತ್ತು ನೀತಿಗಳಿಂದ ಸಾಧ್ಯವಿಲ್ಲ. ಅವರುಗಳು ಈಗಾಗಲೇ ಸ್ಥಾಪಿತ ವ್ಯವಸ್ಥೆಗೆ ಒಗ್ಗಿ ಹೋಗಿದ್ದಾರೆ. ಅದಕ್ಕೆ ಬದಲಾಗಿ ಕ್ರಾಂತಿಕಾರಕ ಹೆಜ್ಜೆ ಇಡುವ ಪ್ರತಿಭಾವಂತರನ್ನು ಮುನ್ನಲೆಗೆ ತರಬೇಕಿದೆ. ಪ್ರತಿಷ್ಟೆ ಬಿಟ್ಟು ಹೊಸ ಹೊಸ ಪ್ರಯೋಗಗಳಿಗೆ ಕೈಹಾಕಬೇಕಿದೆ.

ಮೋದಿಯವರು ಆರ್ಥಿಕ ಪ್ರಗತಿಯ ಒತ್ತಡದಲ್ಲಿ ಮತ್ತೆ ಮತ್ತೆ ಎಡವುತ್ತಿರುವುದಕ್ಕೆ ತತ್‌ಕ್ಷಣದ ಉದಾಹರಣೆ, ಈಗಷ್ಟೇ ಕಾನೂನು ತಿದ್ದುಪಡಿ ಮಾಡಿದ ಪರಿಸರ ಇಲಾಖೆಗೆ ಸಂಬಂಧಿಸಿದ ಅನುಮತಿ ನಿಯಮಗಳು. ಇಡೀ ವಿಶ್ವವೇ ಪರಿಸರ ನಾಶದ ವಿಷಯದಲ್ಲಿ ತುಂಬಾ ಗಂಭೀರವಾಗಿ ಅತ್ಯಂತ ಕಠಿಣ ಕಾನೂನುಗಳನ್ನು ಜಾರಿಗೆ ತಂದಿವೆ. ಭಾರತವೂ ಸಹ ಪರಿಸರ ಮಾಲಿನ್ಯ ತಡೆಯಲು ಅನೇಕ ಕಾನೂನನ್ನು ಜಾರಿಗೊಳಿಸಿದೆ.

ಆದರೆ ಮೋದಿಯವರು ಕೈಗಾರಿಕೆಗಳಿಗೆ ಪ್ರೋತ್ಸಾಹ ಮತ್ತು ಅನುಕೂಲ ಮಾಡಿಕೊಡಲು ಸರಳ ಮತ್ತು ದಕ್ಷ ಆಡಳಿತ ನೀಡುವ ಬದಲು ಸುಮಾರು 60 ರೀತಿಯ ಕೈಗಾರಿಕೆ ಸ್ಥಾಪಿಸಲು ಪರಿಸರ ಇಲಾಖೆಯ ಅನುಮತಿಯೇ ಬೇಡ ಎಂಬ ತಿದ್ದುಪಡಿ ಮಾಡಿದ್ದಾರೆ. ಇದು ಎಷ್ಟೊಂದು ಅಪಾಯಕಾರಿ ಎಂದರೆ, ಈಗಾಗಲೇ ಮಾಲಿನ್ಯದ ಸುಳಿಗೆ ಸಿಲುಕಿರುವ ಭಾರತದ ನದಿ, ಕೆರೆ, ಜಲಾಶಯ, ಕಾಡು, ಗಾಳಿ, ಆಹಾರ ಮತ್ತಷ್ಟು ವಿಷಕಾರಿಯಾಗುವುದು ನಿಶ್ಚಿತ. ಕಾನೂನು ಕೈ ತೋರಿಸಿದರೆ ಉದ್ದಿಮೆದಾರರು ಹಸ್ತವನ್ನೇ ನುಂಗುತ್ತಾರೆ. ಕೊನೆಗೆ ಅಭಿವೃದ್ಧಿ ಎಂದರೆ ವಿನಾಶ ಎಂದೇ ಅರ್ಥ ಬರುತ್ತದೆ. ಈ ರೀತಿಯ ಅನೇಕ ತಪ್ಪುಗಳು ನಡೆಯುತ್ತಿವೆ.

ಇದು ಮೋದಿಯವರ ಪರವಾದ ಅಥವಾ ವಿರುದ್ಧವಾದ ಅಭಿಪ್ರಾಯವಲ್ಲ. ಈಗಿನ ಪರಿಸ್ಥಿತಿಯಲ್ಲಿ ಭಾರತದ ಹಿತಾಸಕ್ತಿಯ ಬಗ್ಗೆ ಚಿಂತನೆ ಮಾತ್ರ. ಕನ್ಯಾಕುಮಾರಿಯಿಂದ ಹಿಮಾಲಯದವರೆಗೂ ರಸ್ತೆಗಳಲ್ಲಿ ಜನ ಸಾಯುತ್ತಿದ್ದಾರೆ, ಅಂಗಡಿ – ಮನೆಗಳು ಬಾಡಿಗೆಗೆ ಇದೆ ಎಂಬ ಫಲಕಗಳು ರಾರಾಜಿಸುತ್ತಿವೆ, ಮಧ್ಯಮ ವರ್ಗ ದಿಕ್ಕು ಕಾಣದಂತಾಗಿದೆ ಜೊತೆಗೆ ಕೊರೋನಾ ಇನ್ನೂ ಮುಂದುವರಿಯುತ್ತಿದೆ. ಅದರ ಬಗ್ಗೆ ವಾಸ್ತವಕ್ಕಿಂತ ಹೆಚ್ಚು ಆತಂಕ ಸೃಷ್ಟಿಸಲಾಗಿದೆ.

ನೆನಪಿಡಿ, ಅತಿಯಾದ ಆತ್ಮವಿಶ್ವಾಸ ಮತ್ತು ತಾನೇ ಎಲ್ಲವನ್ನೂ ನಿರ್ವಹಿಸುವ ಮಹತ್ವಾಕಾಂಕ್ಷೆ ಇರುವ ವ್ಯಕ್ತಿ ಯಶಸ್ಸಿನಲ್ಲಿ ಇರುವಾಗ ಅತ್ಯುತ್ಸಾಹದಿಂದಲೂ, ವಿಫಲತೆಯ ಸಂದರ್ಭದಲ್ಲಿ ವಿಚಲಿತನಾಗಿ ತಪ್ಪು ಒಪ್ಪಿಕೊಳ್ಳದೆ ತನ್ನ ಅಹಂ ನಿಯಂತ್ರಿಸಲಾಗದೆ ಮೇಲ್ನೋಟಕ್ಕೆ ಧೈರ್ಯವಾಗಿ ತೋರಿದರು ಒಳಗೊಳಗೆ ಮಾನಸಿಕವಾಗಿ ಕುಸಿದು ಸೂಕ್ತವಲ್ಲದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚು. ಅದನ್ನು ಸೂಕ್ಷ್ಮವಾಗಿ ಗಮನಿಸಬೇಕು.

ವೈಯಕ್ತಿಕ ಮಟ್ಟದಲ್ಲಿ ಇದನ್ನು ಸಹಿಸಬಹುದು. ಆದರೆ ಇದು ಒಂದು ದೇಶದ ಪ್ರಶ್ನೆ‌. 135 ಕೋಟಿ ಜನರ ಭವಿಷ್ಯದ ಚಿಂತೆ‌. ಪಾಕಿಸ್ತಾನ ಚೀನಾ ವಿರುದ್ಧದ ಹೋರಾಟ ಮಾತ್ರವಲ್ಲ ಇಲ್ಲಿನ ಜನರ ಜೀವನವೂ ಅತಿಮುಖ್ಯ.
ಆರ್ಥಿಕ ಸ್ವಾತಂತ್ರ್ಯ ಇಲ್ಲದ ಎಲ್ಲಾ ಸ್ವಾತಂತ್ರ್ಯಗಳು ನಿಷ್ಪಲ ಎಂಬುದು ಇತಿಹಾಸ ಗುರುತಿಸಿದೆ.

ಟಿವಿ ಮಾಧ್ಯಮಗಳ ಮುಖಾಂತರ ಏಕ ವ್ಯಕ್ತಿ ಆಡಳಿತ ಸಾವಿರಾರು ವರ್ಷಗಳ ದೇಶದ ಭವಿಷ್ಯಕ್ಕೆ ಮಾರಕವಾಗಬಹುದು. ಸಚಿವ ಸಂಪುಟದ ಸದಸ್ಯರ ನಿರ್ಲಕ್ಷ್ಯ ಇನ್ನೂ ಆಘಾತಕಾರಿಯಾಗಿ ಪರಿಣಮಿಸಬಹುದು. ಯಾರನ್ನೂ ನಂಬದ ವ್ಯಕ್ತಿತ್ವ ಅಪಾಯಕಾರಿಯಾಗಬಹುದು. ಜನಜೀವನ ಅಸ್ತವ್ಯಸ್ತವಾಗಬಹುದು. ವ್ಯವಸ್ಥೆ ನಿಯಂತ್ರಣ ಕಳೆದುಕೊಳ್ಳಬಹುದು. ದಯವಿಟ್ಟು ಈ ಬಗ್ಗೆ ನಿಮ್ಮ ಅಭಿಪ್ರಾಯ ರೂಪಿಸಿಕೊಳ್ಳುವ ಮುನ್ನ ಮತ್ತೊಮ್ಮೆ ಯೋಚಿಸಿ. ಪ್ರಧಾನಿಯವರು ತಮ್ಮ ನೀತಿ ಬದಲಿಸಿಕೊಳ್ಳಲು ಸಾರ್ವಜನಿಕ ಒತ್ತಡ ಹೇರುವ ಸಂದರ್ಭ ಬಂದಿದೆ.

ಆದರೂ ನನ್ನ ಅಭಿಪ್ರಾಯ ಮತ್ತು ಆತಂಕ ತಪ್ಪಾಗಿ, ಸುಳ್ಳಾಗಿ ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರ ನೀತಿಗಳು ಯಶಸ್ವಿಯಾಗಲಿ, ಭಾರತ ವಿಶ್ವಗುರುವಾಗಲಿ ಎಂದು ಆಶಿಸುತ್ತಾ…… ‌