ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶಿವಗಂಗಾ ಬೆಟ್ಟದ ನೆತ್ತಿಯನೇರಿ….

ಅನುಸೂಯ ಯತೀಶ್

ಪ್ರವಾಸ ಕಥನ
ಪ್ರವಾಸಿ ಸ್ಥಳ :ದಕ್ಷಿಣ ಕಾಶಿ ಶಿವಗಂಗೆ ಬೆಟ್ಟ

ಪ್ರವಾಸ ಹೋಗುವ ಉತ್ಸಾಹದಲ್ಲಿ ಮಲಗಿದ್ದ ಮಕ್ಕಳಿಗೆ ನಿದ್ದೆ ಹತ್ತುವುದಾದರೂ ಹೇಗೆ ? ಇಡಿ ರಾತ್ರಿ ಅದನ್ನೆ ಕನವರಿಸುತ್ತ ಕೋಳಿ ಕೂಗುವ ವೇಳೆಗೆ ಮುಂಜಾನೆಯೆ ಹೇಳಿ, ಎದ್ದೇಳಿ, ಸಮಯವಾಯಿತು ಎಂದು ಹಾತೊರೆಯುತ್ತ ಮಲಗಿದ್ದ ಎಲ್ಲರನ್ನೂ ಎಬ್ಬಿಸಿದರು. ಮಕ್ಕಳಿಗೆ ಬೇಗನೇ ಸಿದ್ಧವಾಗಿ ಹೊರಡುವ ಹುಮ್ಮಸ್ಸು. ಅಂತೆಯೆ ನಾವೆಲ್ಲ ಎದ್ದು ದಿನನಿತ್ಯದ ಶುಚಿ ಕಾರ್ಯಗಳನ್ನೆಲ್ಲ ಮುಗಿಸಿ ಬೆಳಗ್ಗೆ ಸರಿ ಸುಮಾರು ಆರು ಗಂಟೆಗೆ ಕಾರು ಏರಿದೆವು. ಕೌಟುಂಬಿಕ ಪ್ರವಾಸ ಎಂದ ಮೇಲೆ ಒಂದೇ ಕುಟುಂಬ ಹೋದರೆ ಬರುವ ಮಜವಾದರು ಏನು ? ಹಾಗಾಗಿ ನಮ್ಮ ಅಕ್ಕ ಭಾವ ಅವರಿಬ್ಬರ ಮಕ್ಕಳು ನಮ್ಮ ಜೊತೆಯಾದರು. ಎರಡು ಕಾರುಗಳಲ್ಲಿ ಬೆಂಗಳೂರಿನಿಂದ ದಕ್ಷಿಣ ಕಾಶಿಯೆಂದೆ ಪ್ರಸಿದ್ದವಾದ ಐತಿಹಾಸಿಕ ಹಿನ್ನೆಲೆ ಹೊಂದಿರುವ, ಹೊಯ್ಸಳ ದೊರೆ ವಿಷ್ಣುವರ್ಧನನ ರಾಣಿ ಶಾಂತಲೆಯ ಮರಣದೊಂದಿಗೆ ಬೆಸೆದುಕೊಂಡಿರುವ ಇತಿಹಾಸ ಪ್ರಸಿದ್ಧ “ಶಿವಗಂಗೆ ಬೆಟ್ಟ” ನೋಡಲು ಹೊರಟೆವು.

ಶಿವಗಂಗೆಯನ್ನು ಬೆಂಗಳೂರಿನ ಹೆಬ್ಬಾಗಿಲು ಎಂದೇ ಗುರುತಿಸಲಾಗುತ್ತದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಗಡಿಭಾಗದಲ್ಲಿ ಪ್ರಖ್ಯಾತ ಗಿರಿ ಶಿಖರವಿದೆ. ಬೆಂಗಳೂರಿನಿಂದ 58 ಕಿಲೋಮೀಟರ್ ದೂರವಿರುವ ಸ್ಥಳ ಇದಾಗಿದೆ. ಇದನ್ನು ತಲುಪಲು ಬೆಂಗಳೂರು ತುಮಕೂರು ಮಾರ್ಗವಾಗಿ ನೆಲಮಂಗಲದ ಮೇಲೆ ಹಾದು ಡಾಬಸ್ಪೇಟೆ ತಲುಪಿ ಅಲ್ಲಿಂದ ಎಡಕ್ಕೆ ತಿರುಗಿ ಸುಂದರವಾದ ಹಸಿರಿನ ಸಿರಿಯಲ್ಲಿ ಹತ್ತು ಕಿಲೋಮೀಟರ್ ಮುಂದೆ ಸಾಗಿ ನಾವು ಶಿವಗಂಗೆಯನ್ನು ತಲುಪಿದೆವು. ಇದು ತುಮಕೂರಿನಿಂದ 26 ಕಿಲೋಮೀಟರ್ ಅಂತರದಲ್ಲಿದೆ.
ಇಲ್ಲಿಗೆ ತಲುಪಲು ಬೆಂಗಳೂರು, ತುಮಕೂರು,ರಾಮನಗರ ಮೂರು ಕಡೆಗಳಿಂದ ಸರ್ಕಾರಿ ಹಾಗೂ ಖಾಸಗಿ ಬಸ್ ಗಳ ಸೌಲಭ್ಯವಿದೆ.

ಸಮುದ್ರಮಟ್ಟದಿಂದ 1380 ಮೀಟರ್ ಅಂದರೆ 4542 ಅಡಿ ಎತ್ತರವಿರುವ ಶಿವಗಂಗೆ ಬೆಂಗಳೂರಿನಿಂದ ಪಶ್ಚಿಮ, ತುಮಕೂರಿನಿಂದ ಪೂರ್ವದಿಕ್ಕಿಗೆ ಇದೆ. ಶಿವಗಂಗೆ ಬೆಟ್ಟ ದೂರದಿಂದ ನೋಡಲು ಶಂಖಾಕೃತಿಯ ಬೆಟ್ಟವಾಗಿದ್ದು , ಪೂರ್ವ ದಿಕ್ಕಿನಿಂದ ನೋಡಿದರೆ “ವೃಷಭಾಕೃತಿ” , ಪಶ್ಚಿಮದಿಂದ “ಗಣೇಶ” ಉತ್ತರದಿಂದ “ಲಿಂಗಾಕೃತಿ” ದಕ್ಷಿಣದಿಂದ “ಸರ್ಪದ ಆಕಾರ” ದಲ್ಲಿ ಕಾಣುತ್ತದೆ. ಇದು ಸರಿ ಸುಮಾರು 1500 ವರ್ಷಗಳಷ್ಟು ಪುರಾತನವಾದುದು. “ಶಿವಲಿಂಗ”ದ ಆಕಾರದಲ್ಲಿದ್ದು ಅದರ ಸಮೀಪದಲ್ಲೇ “ಗಂಗೆ ಎಂಬ ಚಿಲುಮೆ” ಇದೆ ಇವೆರಡರ ಸಂಗಮದಿಂದ “ಶಿವಗಂಗೆ” ಆಗಿದೆ ಎಂಬ ಪ್ರತೀತಿ ಇದೆ. ಮತ್ತೊಂದು ಐತಿಹ್ಯದ ಪ್ರಕಾರ “ಕಣಾದ” ಎಂಬ ಋಷಿ ಏಕಪಾದದಲ್ಲಿ ನಿಂತು ನೀರಿಗಾಗಿ ತಪಸ್ಸು ಮಾಡಿದ. ಅವನ ತಪೋಶಕ್ತಿಯಿಂದ ಶಿವನ ಜಟೆಯಲ್ಲಿದ್ದ ನೀರು ಭೂಮಿಗೆ ಹರಿದುಬಂತು. ಅದನ್ನು ಕಂಡ ಮುನಿಗಳು “ಶಿವಗಂಗಾ” ಎಂದು ಕರೆದರು .ಮುಂದೆ ಅದೇ ಶಿವಗಂಗೆ ಆಯಿತೆಂದು ಹೇಳಲಾಗುತ್ತದೆ .

ನಾವೆಲ್ಲರೂ ಬೆಳಗ್ಗೆ ಏಳು ಗಂಟೆಯ ವೇಳೆಗೆ ಶಿವಗಂಗೆಯನ್ನು ತಲುಪಿದೆವು. ಬೆಟ್ಟದ ತಪ್ಪಲು ಅದರಿಂದ ಮೈಕೊರೆಯುವ ಚಳಿ ತನು ಮನಗಳನ್ನು ಆವರಿಸಿತ್ತು. ಎಲ್ಲರೂ ಕಾರಿನಿಂದ ಇಳಿದು ಕಲ್ಯಾಣಿಯ ಪಕ್ಕದಲ್ಲಿ ನಿರ್ಮಿಸಲಾಗಿರುವ ಪಾರ್ಕಿಂಗ್ ನಲ್ಲಿ ಕಾರುಗಳನ್ನು ಪಾರ್ಕ್ ಮಾಡಿ ಬೆಟ್ಟದ ಕಡೆಗೆ ಹೆಜ್ಜೆ ಹಾಕಿದೆವು. ಬೆಟ್ಟದ ಹೆಬ್ಬಾಗಿಲಿಗೆ ಹೋಗುತ್ತಿದ್ದಂತೆ ದ್ವಾರದಲ್ಲಿ ನಿರ್ಮಿಸಲಾಗಿರುವ “ಶಿವನ ಗೋಪುರ” ಎಲ್ಲರ ಕಣ್ಮನ ಸೆಳೆಯಿತು ಒಳ ಪ್ರವೇಶಿಸುತ್ತಿದ್ದಂತೆ ನಮಗೆ ಎದುರಾದುದು “ಗವಿಗಂಗಾಧರೇಶ್ವರ ದೇವಾಲಯ” ಇಲ್ಲಿ ಪೂಜೆ ನೆರವೇರಿಸಿ ದೇವರನ್ನು ಪ್ರಾರ್ಥಿಸಲಾಯಿತು. ನಂತರ ನಮಗೆ ಆಶ್ಚರ್ಯವೊಂದು ಕಾದಿತ್ತು ಅಲ್ಲಿ ಶಿವಲಿಂಗದ ಮೇಲೆ ತುಪ್ಪವನ್ನು ಸವರಿದರೆ ಬೆಣ್ಣೆಯಾಗುತ್ತದೆ. ವಿಸ್ಮಯವೆನಿಸಿದರು ವಿಜ್ಞಾನ ಲೋಕಕ್ಕೆ ಒಂದು ದೊಡ್ಡ ಸವಾಲಾಗಿದೆ. ಇದರ ನಿಗೂಢತೆಯನ್ನು ಭೇದಿಸಲು ಸಾಧ್ಯವಾಗಿಲ್ಲ ಎನ್ನುತ ಈ
ದೇವಾಲಯದ ಅರ್ಚಕರು ತುಪ್ಪದ ಮಹಿಮೆಯನ್ನು ಸಾರಿದರು. ಆ ದೇವಾಲಯದಲ್ಲಿ ಎಲ್ಲರಿಗೂ ಮತ್ತೊಂದು ಆಶ್ಚರ್ಯ ಕಾದಿತ್ತು. ಅದೇನೆಂದರೆ ಅಲ್ಲಿದ್ದಂತಹ ಒಂದು ದೊಡ್ಡದಾದ ಸುರಂಗಮಾರ್ಗ. ಅದು ಶ್ರೀರಂಗಪಟ್ಟಣಕ್ಕೆ ಹೋಗುತ್ತದೆ ಎಂದು ಮಾಹಿತಿ ನೀಡಿದಾಗ ನಮಗೆಲ್ಲಾ ಕುತೂಹಲ ಮೂಡಿ, ಅದು ಕಾಣುವವರೆಗೂ ಅದನ್ನು ನೋಡಿ ಖುಷಿ ಪಟ್ಟೆವು. ಮಕ್ಕಳು ಅವಳ ಹೋಗಲು ಪ್ರಯತ್ನಿಸಿದರು ಆದರೆ ಅಲ್ಲಿ ಯಾರಿಗೂ ಪ್ರವೇಶವಿಲ್ಲ ವೆಂದು ಅಲ್ಲಿರುವ ಸಿಬ್ಬಂದಿ ಅದನ್ನು ತಡೆದರು .ಆ ದೇವಾಲಯದ ಎದುರು ನಂದಿ ವಿಗ್ರಹವಿದೆ ಸ್ವಲ್ಪ ದೂರದಲ್ಲಿ ಸುಂದರ ಕೆತ್ತನೆಯ ಏಕಶಿಲಾಸ್ತಂಭದಿಂದ ನಿರ್ಮಾಣವಾದ ನಾಡಪ್ರಭು ಕೆಂಪೇಗೌಡರ ಹಜಾರ , ಕಲ್ಯಾಣಮಂಟಪ ಸಪ್ತಮಾತೃಕೆ, ನವಗ್ರಹ ವಿಗ್ರಹಗಳ ಅಮೋಘ ಕೆತ್ತನೆ ಎಲ್ಲರ ಮನಸೂರೆಗೊಂಡಿತು.

ಆ ದೇವಾಲಯದ ವಿಶೇಷತೆಯನ್ನು ಮೆಲುಕುಹಾಕುತ್ತಾ ಮೇಲೇರಿದ ನಮಗೆ ಭವ್ಯವಾಗಿ ಸ್ವಾಗತಿಸಿದ್ದು “ಅಂತರಗಂಗೆ” ಇದನ್ನು ಆಡುಭಾಷೆಯಲ್ಲಿ “ಒಳಕಲ್ಲು ತೀರ್ಥ” ಎಂದು ಸಹ ಕರೆಯುತ್ತಾರೆ. ಇದು ಹಿರಿದಾದ ಬಂಡೆಯನ್ನು ಕೊರೆದು ನಿರ್ಮಿಸಲಾಗಿದೆ. ಕಿರಿದಾಗಿರುವ ಜಾಗದಲ್ಲಿ ತಲೆಬಗ್ಗಿಸಿ ಒಳಪ್ರವೇಶಿಸಿದರೆ ಉದ್ಭವ ತೀರ್ಥವಿದೆ. ಇದನ್ನು ಶ್ರೀಕ್ಷೇತ್ರ ಯಡಿಯೂರಿನ ಶ್ರೀ ಸಿದ್ದಲಿಂಗೇಶ್ವರರ ಗುರುಗಳಾದ ರೇವಣಸಿದ್ದೇಶ್ವರರು ತಪವಗೈದು, ಅಗಸ್ತ್ಯರಿಗೆ ದೀಕ್ಷೆ ನೀಡಲು ಜಲಪ್ರೋಕ್ಷಣೆಯ ಅಗತ್ಯ ಬಂದಾಗ ತಮ್ಮ ಕೈಯಲ್ಲಿದ್ದ ದಡದಿಂದ ಕಲ್ಲನ್ನು ಗುದ್ಧಿದರಂತೆ ಅಂದಿನಿಂದ ಅಲ್ಲಿ ನೀರಿನ ಬುಗ್ಗೆಯು ಸದಾ ಚಿಮ್ಮುತಿರುತ್ತದೆ. ವರ್ಷದ 365 ದಿನಗಳಲ್ಲಿ ಗಂಗೆ ಹರಿಯುತ್ತಿರುತ್ತಾಳೆ. ಇದನ್ನು ಪವಿತ್ರ ತೀರ್ಥ ಎಂದು ಕರೆಯಲಾಗುತ್ತದೆ ಎಂದು ನಮಗೆ ಮಾಹಿತಿಯನ್ನು ನೀಡಿದವರು ಅಲ್ಲಿದ್ದ ಸಿಬ್ಬಂದಿ. ಇದು ಪವಿತ್ರ ಗಂಗೆಯ ಉಪಶಾಖೆಯ ಬಗ್ಗೆಯಾಗಿದೆ. ಒಳಕಲ್ಲಿನ ಆಕಾರದ ಅಂತರಗಂಗೆಗೆ ನಾವು ಕೈಚಾಚಿದರೆ ಅದೃಷ್ಟವಂತರಿಗೆ ನೀರು ಸಿಗುತ್ತದೆ ದುರದೃಷ್ಟವಂತರಿಗೆ ನೀರು ಸಿಗುವುದಿಲ್ಲ ಎಂಬ ಪ್ರತೀತಿ ಇದೆ ಎಂದು ಕೇಳಿ ತಿಳಿದೆವು ಅರ್ಚಕರಿಂದ. ನಂತರ ಮಕ್ಕಳೆಲ್ಲರೂ ಕುತೂಹಲಭರಿತರಾಗಿ ಪೈಪೋಟಿಯ ಮೇಲೆ ನಾ ಮೊದಲು ತಾ ಮೊದಲು ಎಂದು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾದರು. ನಮಗಿಂತ ಮೊದಲ ಸಾಲಿನಲ್ಲಿ ನಿಂತಿದ್ದವರು ಕೈಹಾಕಿ ತೀರ್ಥ ಮೊಗೆದು ಕುಡಿದರೆ ಮತ್ತೆ ಕೆಲವರು ತೀರ್ಥ ಸಿಗಲಿಲ್ಲವೆಂದು ಪೆಚ್ಚುಮೋರೆ ಹಾಕಿ ಮುನ್ನಡೆದರು. ನಾವೆಲ್ಲರೂ ಕೈ ಹಾಕುತ್ತಿದ್ದಂತೆ ನೀರು ಸಿಕ್ಕಿತು. ಕಡಿದಾದ ಬೆಟ್ಟವನ್ನು ಏರಲು ಪ್ರಾರಂಭಿಸಿದೆವು.

ಆವೇಳೆಗಾಗಲೇ ಸಮಯ ಒಂಬತ್ತು ಆಗಿತ್ತು. ಬೆಟ್ಟವನ್ನು ಏರಿದ್ದರಿಂದ ಹಸಿವು ಹೆಚ್ಚಾಗಿತ್ತು. ಆಯಾಸವಾಗಿತ್ತು. ಇನ್ನೇನು ಉಪಹಾರಕೆ ಕೂರಬೇಕು ಎನ್ನುವಷ್ಟರಲ್ಲಿ ಅದರಲ್ಲಿದ್ದ ವಾನರ ಸೇನೆ ನಮ್ಮ ಜೊತೆಗೆ ಪಂಕ್ತಿಯಲ್ಲಿ ಕೂತರು.ಅವುಗಳಿಗೂ ಸ್ವಲ್ಪ ನೀಡಿ ನಾವು ಬುತ್ತಿ ತಂದಿದ್ದ ಇಡ್ಲಿ ವಡೆ ತಿಂದು ನೀರು ಕುಡಿದು ವಿರಮಿಸಿದೆವು. ಅಲ್ಲಿನ ಆಹಾರದ ಬೆಳೆಗಳ ಬಗ್ಗೆ ಸಹ ಪ್ರವಾಸಿಗರಿಂದ ಕೇಳಿ ತಿಳಿದುಕೊಂಡೆವು . ರಾಗಿ,ಅಕ್ಕಿ,ಜೋಳ, ಧಾನ್ಯಗಳ, ತರಕಾರಿಗಳನ್ನು ವಿಶೇಷವಾಗಿ ಬೆಳೆಯುತ್ತಾರಂತೆ . ಅವೆಲ್ಲವನ್ನು ಮೀರಿದ ಸಂಗತಿಯೆಂದರೆ ಶಿವಗಂಗೆಯ ಸುತ್ತ ಮುತ್ತ ಯಾವ ಹಳ್ಳಿಗೂ ಬರಗಾಲ ಬಂದಿಲ್ಲ .ಶಿವನ ಕೃಪೆಯಿಂದ ಸಮೃದ್ದ ಫಸಲು ರೈತನ ಮೊಗದಲ್ಲಿ ಸದಾ ಕಳೆ ತುಂಬುವುದು. ಹಾಗೂ ಚೇಳು ಕಚ್ಚಿದರೆ ವಿಷ ಏರುವುದಿಲ್ಲ ಎಂಬ ವಿಷಯವು ಸೋಜಿಗವೆನಿಸಿತು.

ಈ ಬೆಟ್ಟದ ಮೇಲಿನ ಭವ್ಯವಾದ ಕೆತ್ತನೆಯ ಮೆಟ್ಟಿಲುಗಳನ್ನು ಇಳಿಯುತ್ತ ಹೋದರೆ “ಕುಂಬವತಿ ತೀರ್ಥ” ಅಥವಾ “ಪಾತಾಳಗಂಗೆ” ಎಂಬ ಜಲಧಾರೆಯು ಸಿಗುತ್ತದೆ. ಮಕ್ಕಳಿಲ್ಲದ ಹೆಣ್ಣು ಮಕ್ಕಳು ಇಲ್ಲಿ ಗಂಗೆಯನ್ನು ಪೂಜಿಸಿದರೆ ಸಂತಾನ ಭಾಗ್ಯ ದೊರೆಯುತ್ತದೆ ಎಂಬ ಪ್ರತೀತಿ ಇದ್ದು ಮಂಗಳವಾರ ಹಾಗೂ ಶುಕ್ರವಾರ ಸುಮಂಗಲಿಯರು ಇಲ್ಲಿ ವಿಶೇಷವಾಗಿ ಗಂಗಾಪೂಜೆ ನೆರವೇರಿಸುತ್ತಾರೆ. ಇಲ್ಲಿ ಉದ್ಭವವಾಗುವ ನೀರನ್ನು ದೇವರ ತೀರ್ಥ ಎಂದು ಕರೆಯುತ್ತಾರೆ. ಇದಕ್ಕೆ ರೋಗ ರುಜಿನಗಳನ್ನು ವಾಸಿಮಾಡುವ ಮಹಿಮೆ ಇದೆ ಎಂಬುದು ಭಕ್ತರ ಬಲವಾದ ನಂಬಿಕೆಯಾಗಿದೆ. ಅಂತರಗಂಗೆಯ ಕಾವಲಿಗೆ 9 ಅಡಿ ಎತ್ತರದ “ವೀರಭದ್ರನ ವಿಗ್ರಹವಿದೆ”. ಇದನ್ನು 12ನೇ ಶತಮಾನದಲ್ಲಿ ಹೊಯ್ಸಳ ದೊರೆ “ವಿಷ್ಣುವರ್ಧನನ” ಕಾಲದಲ್ಲಿ ಕೆತ್ತಲಾಗಿದೆ. ಅದರ ಪಕ್ಕದಲ್ಲಿ ಶಿವನ ಮಾವ ದಕ್ಷಬ್ರಹ್ಮನ ಶಿಲ್ಪವೂ ಇದೆ ಎಂಬ ವಿಚಾರಗಳನ್ನು ಕೇಳಿ ನಿಗೂಢ ಜಗತ್ತಿನಲ್ಲಿ ಸುತ್ತಿಬಂದ ಅನುಭವ ನಮಗೆ ದೊರೆಯಿತು.

ಬೆಟ್ಟದ ಮೇಲಕ್ಕೆ ಏರುತ್ತ ಹೋದಂತೆ ಅಂಗಡಿ ಮಳಿಗೆಗಳು ನೋಡುಗರ ಗಮನವನ್ನು ಸೆಳೆಯುತ್ತವೆ. ಊಟ, ಉಪಹಾರ, ಹಣ್ಣು, ಕುರುಕಲು ತಿಂಡಿಗಳು, ಸೇರಿದಂತೆ ಐಸ್ಕ್ರೀಮ್ ಎಲ್ಲವೂ ಇಲ್ಲಿ ದೊರೆಯುತ್ತದೆ. ಇಲ್ಲಿ ಅಚ್ಚರಿ ಮೂಡಿಸಿದ ಮತ್ತೊಂದು ಸಂಗತಿಯೆಂದರೆ ಬರಿಗೈಯಿಂದ ಬೆಟ್ಟ ಏರಲು ಪ್ರಯಾಣಿಕರು ಪ್ರಯಾಸ ಪಡುತ್ತಿದ್ದರೆ ಅಷ್ಟೆತ್ತರದ ಅಂಗಡಿಗಳಿಗೆ ವ್ಯಾಪಾರಕ್ಕೆ ಬೇಕಾದ ವಸ್ತುಗಳನ್ನು ತಲೆಯಮೇಲೆ ಹೊತ್ತು ಸಾಗಿ ಹೋಗುವ ವ್ಯಾಪಾರಿಗಳ ಉತ್ಸಾಹ ಹಾಗೂ ಸಾಮರ್ಥ್ಯ ನೋಡಿದ ನಮಗೆ ಮನದೊಳಗೆ ಅವರಿಗೊಂದು ಬಿಗ್ ಸೆಲ್ಯೂಟ್ ಹೊಡೆಯದೆ ಇರಲಾಗಲಿಲ್ಲ. ಅವರೊಂದಿಗೆ ಹೆಜ್ಜೆ ಹಾಕುತ್ತ ಮಾತಿಗಿಳಿದ ನಾವು ನಿಮಗೆ ಇದು ಹೇಗೆ ಸಾಧ್ಯ ಎಂದಾಗ ಆ ದೇವರ ಕೃಪೆ ಹೊಟ್ಟೆಪಾಡು ನಮಗೆ ಯಾವುದೇ ತೊಂದರೆ ಎನಿಸಿಲ್ಲ ಎಂಬ ಮಾತು ಕೇಳಿ ಆಶ್ಚರ್ಯ ಪಡುತ್ತಿದ್ದ ನಮಗೆ ನಮ್ಮ ಹಿಂದೆ ನಡೆದು ಬರುತ್ತಿದ್ದ ಸಹಪ್ರಯಾಣಿಕರು ಇವರ ಸಾಧನೆಗೆ ಚಪ್ಪಾಳೆತಟ್ಟಿ ಹರ್ಷ ವ್ಯಕ್ತಪಡಿಸಿದರು . ಆ ವ್ಯಾಪಾರಿಯಿಂದ ಶಿವಗಂಗೆಗೆ ಸಂಬಂಧಿಸಿದ ಇತಿಹಾಸದ ಒಂದು ಪುಸ್ತಕವನ್ನು ಖರೀದಿಸಿ ಓದುತ್ತಾ ಸಾಗಿದ ನಮಗೆ ದೊರೆತ ಮತ್ತೊಂದು ಮಾಹಿತಿಯೆಂದರೆ ಶಿವಗಂಗೆಯಲ್ಲಿ ಜಲಧಾರೆಗಳು ಇದ್ದು ಒಟ್ಟು ಹತ್ತು ತೀರ್ಥಗಳಿವೆ ಎಂಬುದು.
ಅಚ್ಚರಿಯಿಂದ ಕಣ್ಣಾಡಿಸಿದರೆ ನಮಗೆ ಸಿಕ್ಕಿದ್ದು ಅಗಸ್ತ್ಯತೀರ್ಥ, ಶಂಕರತೀರ್ಥ, ಕಣ್ವತೀರ್ಥ, ಕದಂಬ ತೀರ್ಥ, ಮತ್ಲಾ ತೀರ್ಥ, ಅಂತರಗಂಗೆ, ಕುಂಬಾವತಿ ತೀರ್ಥ, ಕಪಿಲತೀರ್ಥ.

ಅಂದು ಭಾನುವಾರ ರಜಾ ದಿನವಾದ್ದರಿಂದ ಪ್ರವಾಸಿಗರ ಸಂಖ್ಯೆ ಬಹಳ ಅಧಿಕವಾಗಿತ್ತು .ಇಲ್ಲಿಗೆ ದೂರ ದೂರಗಳಿಂದ ಪ್ರವಾಸಿಗರು ಬರುವರು. ವಿಶೇಷವಾಗಿ ಚಾರಣಕ್ಕೆಂದು ಬರುವವರಲ್ಲಿ ಯುವಕ ಯುವತಿಯರೇ ಹೆಚ್ಚು. ಅವರಿಗೆಲ್ಲ ಚಾರಣ ಮಾಡುವುದೆ ಒಂದು ಚಾಲೆಂಜಿಂಗ್ ಹಾಗೂ ತ್ರಿಲ್ಲಿಂಗ್ ಆಗಿರುತ್ತದೆ. ನಿಸರ್ಗದ ರಮಣೀಯ ತಾಣವಾಗಿ ಹಸಿರು ಬೆಟ್ಟಗಳ ಪಕ್ಕ ನಿಂತು ಫೋಟೋ ಕ್ಲಿಕ್ಕಿಸುವುದು ಅದ್ಭುತ ಅನುಭವವೇ ಸರಿ. ನಾವೆಲ್ಲ ಮಕ್ಕಳೊಂದಿಗೆ ಸೇರಿ ವಿಭಿನ್ನ ಪೋಟೋಗಳನ್ನು ತೆಗೆದುಕೊಂಡೆವು.

ಬೆಟ್ಟದ ಮೆಟ್ಟಿಲುಗಳನ್ನು ಏರುತ್ತಿದ್ದರೆ ಎದುರಾಗುವ ಸೂರ್ಯ ರಶ್ಮಿಗೆ ನಮ್ಮ ಮೈಮೇಲೆ ಬೆವರ ಹನಿಗಳು ಮುತ್ತಿಕ್ಕುತಿದ್ದರೆ, ಮಕ್ಕಳಿಗೆ ಅದಾವುದರ ಪರಿವೆಯೂ ಇಲ್ಲದೆ ಪಟಪಟನೆ ಮೆಟ್ಟಿಲು ಹತ್ತುತ್ತಿರುವುದನ್ನು ಕಂಡು ನಾವು ಸ್ವಲ್ಪ ಚಿಕ್ಕವರಾದಂತೆ ಭಾಸವಾಯಿತು. ಕಿರಿದಾದ ಮೆಟ್ಟಿಲುಗಳು ಹಾಗೂ ಸರಾಗವಾಗಿ ಹತ್ತಲು ನಿರ್ಮಿಸಿರುವ ಕಬ್ಬಿಣದ ಸರಳುಗಳನ್ನು ಹಿಡಿದು ಒಬ್ಬರ ಹಿಂದೆ ಒಬ್ಬರು ಹತ್ತುತ್ತಿರುವ ದೃಶ್ಯ ನಯನ ಮನೋಹರ. ಇನ್ನೂ ಕೆಳಗೆ ಬೆಟ್ಟ ಹತ್ತುವವರಿಗೆ ಇರುವೆ ಸಾಲಿನಂತೆ ಅದು ಕಾಣಿಸುತ್ತದೆ. ಬೆಟ್ಟ ಏರುತ್ತಿದ್ದಾಗ ಆಯಾಸ ಹಾಗೂ ದಣಿವಾದುದರಿಂದ ಹಸಿವಿಗೆ ಬೇಗನೆ ಆಹ್ವಾನ ನೀಡಿತ್ತು. ಅಲ್ಲೇ ಬೆಟ್ಟದ ಮೇಲೆ ಇದ್ದ ಹೋಟೆಲೊಂದರಲ್ಲಿ ಚಿತ್ರಾನ್ನ ಮತ್ತು ಮೊಸರನ್ನ ತಿಂದು ನಮ್ಮ ಪ್ರಯಾಣವನ್ನು ಮುಂದುವರಿಸಿದೆವು.

ಅಲ್ಲಿದ್ದ ಗೈಡ್ ನಮಗೆ “ಶಾಂತಲಾ ಡ್ರಾಪ್” ನ ಬಳಿ ಕರೆದುಕೊಂಡು ಹೋದರು. ಹೊಯ್ಸಳ ಸಾಮ್ರಾಜ್ಯದ ಪ್ರಖ್ಯಾತ ದೊರೆ ವಿಷ್ಣುವರ್ಧನನ ಪಟ್ಟದರಸಿ “ನಾಟ್ಯರಾಣಿ ಶಾಂತಲೆ” ತನಗೆ ಮಕ್ಕಳಾಗುವುದಿಲ್ಲ ಎಂದು ಬಹಳ ಮನನೊಂದು ಶಿವಗಂಗೆ ಬೆಟ್ಟಕ್ಕೆ ಬಂದು ಮೇಲಿನಿಂದ ಕೆಳಗೆ ಹಾರಿ ಪ್ರಾಣ ತ್ಯಾಗ ಮಾಡಿದಳೆಂಬ ಇತಿಹಾಸವಿದೆ. ಇವರು ಬಿದ್ದ ಈ ಜಾಗವನ್ನು “ಶಾಂತಲಾ ಡ್ರಾಪ್” ಎಂದು ಕರೆಯಲಾಗುತ್ತದೆ. ಬೆಟ್ಟದ ಮೇಲೆಯೆ ವಿಶಾಲ ಬಯಲಿನ ಪಕ್ಕದಲ್ಲಿ ಇದು ಇದೆ ಎಂದು ತಿಳಿಸಿಕೊಟ್ಟರು. ನಾವು ಮೇಲಿನಿಂದ ಕೆಳಗೆ ನೋಡಿದರೆ ಅಷ್ಟು ಎತ್ತರದ ಸ್ಥಳವದು. ಹೊಯ್ಸಳ ರಾಣಿಯ ವಿಷಯ ಕೇಳಿ ಎಲ್ಲರ ಕಂಗಳು ತೇವಗೊಂಡವು.

ಶಿವಗಂಗೆಯ ಮತ್ತೊಂದು ವಿಶೇಷತೆಯೆಂದರೆ ಪ್ರತಿವರ್ಷ “ಸಂಕ್ರಾಂತಿ ಹಬ್ಬದ” ದಿನ “ಗವಿಗಂಗಾಧರೇಶ್ವರ” ಮತ್ತು ಇಲ್ಲಿಯೇ ನೆಲೆಸಿರುವ “ಹೊನ್ನಾದೇವಿ”ಗೆ ವಿವಾಹ ಮಹೋತ್ಸವ ಅತಿ ವಿಜೃಂಭಣೆಯಿಂದ ನಡೆಯುತ್ತದೆ . ಸಂಕ್ರಾಂತಿ ಹಬ್ಬದ ಮುಂಜಾನೆ ಬೆಟ್ಟದ ಮೇಲಿನ ಕಲ್ಲಿನಿಂದ ಗಂಗಾ ಜಲ ಹೊಮ್ಮುತ್ತದೆ. ಅದೇ ಜಲವನ್ನು ವಾದ್ಯಗೋಷ್ಠಿಯ ಸಹಿತ ದೇವರ ಸನ್ನಿಧಾನಕ್ಕೆ ತರಲಾಗುತ್ತದೆ ನಂತರ ಹೊನ್ನಾದೇವಿ ಯನ್ನು ಶ್ರೀ ಗಂಗಾಧರೇಶ್ವರನಿಗೆ ಧಾರೆ ಎರೆದು ಕೊಡಲಾಗುತ್ತದೆ. ಇಂತಹ ಅಪರೂಪದ ಉತ್ಸವವನ್ನು ನೋಡಲು ದೇಶದ ನಾನಾ ಮೂಲೆಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಎಂಬ ವಿಷಯ ತಿಳಿದು ನಾವು ಮುಂದಿನ ಸಂಕ್ರಾಂತಿಗೆ ಇಲ್ಲಿಗೆ ಬಂದು ವೈಭವೋಪೇತ ವಿವಾಹ ಮಹೋತ್ಸವವನ್ನು ಕಣ್ತುಂಬಿ ಕೊಳ್ಳಬೇಕೆಂಬ ಆಸೆ ಆಯಿತು. ಇವೆಲ್ಲಕ್ಕಿಂತ ಅಚ್ಚರಿಯಾದ ಸಂಗತಿಯೆಂದರೆ “ಸಂಕ್ರಮಣ”ದಂದು ಸೂರ್ಯರಶ್ಮಿಯು ದೇವಾಲಯದ ಒಳಗೆ ಇರುವ ಶಿವಲಿಂಗದ ಮೇಲೆ ಬಿದ್ದು ಎಲ್ಲರಿಗೂ ಬೆರಗು ಮೂಡಿಸುತ್ತದೆ. ಜೊತೆಗೆ ಅಂದು ಅದ್ದೂರಿಯಾಗಿ “ಗವಿಗಂಗಾಧರೇಶ್ವರ ಜಾತ್ರೆ” ಮಹೋತ್ಸವ ನಡೆಯುತ್ತದೆ.

ಶಿವಗಂಗೆ ಬೆಟ್ಟವನ್ನು ಹತ್ತುವುದು ಅಷ್ಟು ಸುಲಭದ ಮಾತಲ್ಲ. ನಾವೆಲ್ಲ ತುಂಬಾ ಪ್ರಯಾಸಪಟ್ಟು ಬೆಟ್ಟವನ್ನು ಹೇರಿದ್ದಾಯಿತು ಬೆಟ್ಟದ ಮೇಲೆ ಹೋಗಲು ಯಾವುದೇ ವಾಹನ, ರಸ್ತೆಗಳಿಲ್ಲ, ವ್ಯವಸ್ಥಿತವಾದ ಮೆಟ್ಟಿಲುಗಳಿಲ್ಲ ,ಕಡಿದಾದ ಮಾರ್ಗದಲ್ಲಿ ಕಷ್ಟಪಟ್ಟು ಸಾಗಿದರೆ ನಾವು ಈ ಕೌತುಕಗಳನ್ನು ನೋಡಬಹುದು ಎನ್ನುವುದಂತೂ ಸತ್ಯ.

ಅಲ್ಲಿದ್ದ ನಂದಿಯ ಪ್ರದಕ್ಷಿಣೆ ಹಾಕಿದರೆ ವಿಶ್ವಪರ್ಯಟನೆ ಮಾಡಿದ ಸಾಹಸ ಗಾಥೆಯಿದು. ಈ ಬೆಟ್ಟದ ತುದಿಯಲ್ಲಿ ನಂದಿಯ ವಿಗ್ರಹ ಕಾಣುತ್ತದೆ . ಇದನ್ನು “ಕೋಡುಗಲ್ಲ ಬಸಪ್ಪ” “ಗಿರಿ ಬಸಪ್ಪ” ಮತ್ತು “ಸುತ್ತುವ ಬಸವಣ್ಣ”ಎನ್ನುವ ಹೆಸರುಗಳಿಂದಲೂ ಕರೆಯಲಾಗುತ್ತದೆ .ಇದರ ಪ್ರದಕ್ಷಿಣೆ ಹಾಕಿದರೆ ನಮ್ಮೆಲ್ಲ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಇದೆ .ಆದುದರಿಂದ ಭಕ್ತಾದಿಗಳು ತಮಗೆ ಎಷ್ಟೇ ಕಷ್ಟವಾದರೂ ಕೂಡ ಈ ಬೆಟ್ಟವನ್ನು ಹತ್ತಿ ಅಲ್ಲಿನ ಬಸವಣ್ಣನನ್ನು ಸುತ್ತಿ ಬರುತ್ತಾರೆ ಎಂಬ ಮಾಹಿತಿ ತಿಳಿದ ಮೇಲಂತೂ ನಾವು ಒಮ್ಮೆ ನಂದಿಯನ್ನು ಪ್ರದಕ್ಷಿಣೆ ಹಾಕಲೇಬೇಕೆಂದು ತಿರ್ಮಾನಿಸಿದರು. ಇಲ್ಲಿ ಮಕ್ಕಳೇನು ನಿರ್ಭೀತಿಯಿಂದ ಬಹಳ ಉತ್ಸಾಹದಿಂದ ಬಸವಣ್ಣನ್ನು ಜಾಗರೂಕತೆಯಿಂದ ಪ್ರದಕ್ಷಿಣೆ ಹಾಕಿ ಬಂದರು. ಆದರೆ ನನ್ನಿಂದ ಎತ್ತರದ ಸ್ಥಳದಲ್ಲಿರುವ ಅತಿ ಕಿರಿದಾದ ಜಾಗದಲ್ಲಿ ನಿಧಾನವಾಗಿ ಹೆಜ್ಜೆ ಇಡುತ್ತ ಬಸವಣ್ಣನನ್ನು ಸುತ್ತಿ ಬರುವ ಧೈರ್ಯ ಸಾಲಲಿಲ್ಲ .ನನ್ನಿಂದ ಸಾಧ್ಯವಿಲ್ಲ ನಾನು ಬರಲಾರೆ ಎಂದು ಸುಮ್ಮನೆ ಕೂತುಬಿಟ್ಟೆ .ಆದರೆ ನಮ್ಮ ಅಕ್ಕ ಮತ್ತು ಯತೀಶನ ಬಲವಂತದಿಂದ ನಾನು ನಂದಿ ಸುತ್ತಲೂ ಒಪ್ಪಿಕೊಳ್ಳಲೇಬೇಕಾಯಿತು. ನನ್ನ ಪತಿ ಯತೀಶ್ ನನ್ನ ಕೈ ಹಿಡಿದು ನಿಧಾನವಾಗಿ ನಂದಿಯನ್ನು ಒಮ್ಮೆ ಪ್ರದಕ್ಷಿಣೆ ಹಾಕಿಸಿದರು. ಅದು ಮುಗಿದು ನಾನು ಕೆಳಗಿಳಿದಾಗ ಹೋದ ಜೀವ ಮತ್ತೆ ಬಂದಂತಾಯಿತು. ಅಷ್ಟು ಎತ್ತರದ ಸ್ಥಳದಿಂದ ಕೆಳಗೆ ನೋಡಿದರೆ ಭಯಾನಕ ಎನಿಸದಿರದು.

ಈ ಬೆಟ್ಟದ ಮೇಲೆ ಮತ್ತೊಂದು ದೊಡ್ಡ ಸ್ಥಂಭವಿದೆ .ಅದನ್ನು ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತದೆ .ಅದರ ವಿಶೇಷ ಎಂದರೆ ಅದನ್ನು ಯಾವುದೆ ಆಧಾರಿಲ್ಲದೆ ನಿಲ್ಲಿಸಲಾಗಿದೆ. ಅದರ ತಳದಲ್ಲಿ ಒಂದು ಕಡೆಯಿಂದ ಸಣ್ಣ ಕಡ್ಡಿಯನ್ನು ತೋರಿಸಿ ಮತ್ತೊಂದು ಕಡೆಯಿಂದ ಅದನ್ನು ಹೊರಗೆ ತೆಗೆಯಬಹುದು ಇದು ಹೇಗೆ ಸಾಧ್ಯ ಎಂಬ ಕುತೂಹಲ ಮಾತ್ರ ಎಲ್ಲರಿಗೂ ಬಿಡಿಸಲಾಗದ ಒಗಟಾಗಿದೆ. ಮಕ್ಕಳೆಲ್ಲರೂ ಬಹಳ ಕುತೂಹಲದಿಂದ ಒಂದು ಕಡೆಯಿಂದ ಕಡ್ಡಿಯನ್ನು ತೂರಿಸಿ ಆ ಕಡೆಯಿಂದ ಕಡ್ಡಿಯನ್ನು ಎಳೆದು ಕೊಳ್ಳುವ ಆಟವನ್ನು ಆಡಿದರು. ನಂತರ ಎಲ್ಲರೂ ದಣಿದಿದ್ದೆವು. ಭಾವ ಹಾಗೂ ಅಕ್ಕನ ಮಗ ನಮಗೆಲ್ಲರಿಗೂ ಸೌತೆಕಾಯಿ, ಚುರುಮುರಿ, ಐಸ್ಕ್ರೀಂ ತಂದರು . ನಾವೆಲ್ಲರೂ ಅದನ್ನು ಸವಿದು ಮತ್ತೆ ಪ್ರಯಾಣ ಬೆಳೆಸಿದೆವು. ಬೆಟ್ಟವನ್ನು ಮೇಲೇರಿದಂತು ಆಯಿತು ಈಗ ಬೆಟ್ಟದಿಂದ ಕೆಳಗೆ ಇಳಿಯುವ ಸರದಿ. ಬೆಟ್ಟದ ಮೇಲಿನಿಂದ ಕೆಳಗೆ ನೋಡಿದರೆ ಹಸಿರಿನ ಹಂದರ, ದೊಡ್ಡ ಕಟ್ಟಡಗಳೆಲ್ಲ ಪುಟ್ಟ ಪುಟ್ಟ ಪಟ್ಟಣಗಳಂತೆ ಕಾಣುತ್ತಿದ್ದವು .ಅಲ್ಲಲ್ಲಿ ನೀರಿನ ಆಸರೆಗಳು ಪ್ರಕೃತಿಯ ಸುಂದರವಾದ ನೋಟವಾಗಿತ್ತು. ಅದೊಂದು ಮರೆಯಲಾಗದ ಅವಿಸ್ಮರಣೀಯ ತಾಣವಾಗಿತ್ತು. ಮಕ್ಕಳಿಗೆ ಬೆಟ್ಟ ಹಿಡಿಯುವ ಮನಸ್ಸಿಲ್ಲದಿದ್ದರೂ ಕೂಡ ಸಂಜೆಯಾಗುತ್ತಿದ್ದರಿಂದ ಅನಿವಾರ್ಯವಾಗಿ ಬೆಟ್ಟವನ್ನು ಇಳಿಯಲು ಪ್ರಾರಂಭಿಸಿದೆವು.

ಬೆಂಗಳೂರಿನ ನಿರ್ಮಾತೃ ಕೆಂಪೇಗೌಡ ಶಾಲಿವಾಹನ ಶಕ 1550 ರಲ್ಲಿ ಶಿವಗಂಗೆ ನೂತನ ಸುಪರ್ದಿಗೆ ತೆಗೆದುಕೊಂಡು ಹಲವಾರು ಧಾರ್ಮಿಕ ಕಾರ್ಯಗಳನ್ನು ಅಭಿವೃದ್ಧಿಪಡಿಸಿದರೆ ಬೆಟ್ಟಕ್ಕೆ ಸಲೀಸಾಗಿ ಹತ್ತಲು ಕಲ್ಲಿನ ಮೆಟ್ಟಿಲುಗಳನ್ನು ನಿರ್ಮಿಸಿದ್ದರೆಂದು ಪ್ರತೀತಿ ಇದೆ .ಇಲ್ಲಿ ಕೆಂಪೇಗೌಡರ ಒಂದು ಪ್ರತಿಮೆಯನ್ನು ಕೂಡ ನಾವು ಕಾಣಬಹುದು ಶಿವಗಂಗೆಗೆ ಸಂಬಂಧಿಸಿದಂತೆ ಅಧಿಕೃತವಾಗಿ ಮೂರು ಶಾಸನಗಳು ಸಿಕ್ಕಿದೆಯಂತೆ.

ಇಲ್ಲಿ ಕುಮುದ್ವತಿ ಅನ್ನುವ ನೀರಿನ ಮೂಲವಿದ್ದು ಕಾವೇರಿ ನದಿಯ ಉಪನದಿಯಾಗಿದೆ. ಶಿವಗಂಗೆ ಬೆಟ್ಟ ನಮ್ಮ ಕರ್ನಾಟಕದ ಒಂದು ವಿಸ್ಮಯಕಾರಿ ಬೆಟ್ಟವಾಗಿದೆ. ಇಲ್ಲಿನ ರಹಸ್ಯಗಳನ್ನು ಭೇದಿಸಲು ಇದುವರೆಗೆ ವಿಜ್ಞಾನಕ್ಕೆ ಸಾಧ್ಯವಾಗಿಲ್ಲ ನಾವೆಲ್ಲ ಬೆಟ್ಟದ ಕೆಳಗಿಳಿದು ಬಿಸಿಬಿಸಿ ಕಾಫಿ ಹೀರಿ ಅಂಗಡಿಯವನಿಗೆ ಹಣ ನೀಡಿ ನಮ್ಮ ಕಾರುಗಳ ಬಳಿ ಬಂದೆವು. ನಂತರ ಅಲ್ಲಿ ನೋಡಿದೆ ವಿಚಾರಗಳನ್ನು ಮೆಲುಕು ಹಾಕುತ್ತ ಮನೆಯ ಕಡೆಗೆ ಪ್ರಯಾಣ ಬೆಳೆಸಿ 8:00 ಗಂಟೆಗೆ ನಾವೆಲ್ಲರೂ ಮನೆಯನ್ನು ತಲುಪಿದೆವು.

ಅನುಸೂಯ ಯತೀಶ್
ಶಿಕ್ಷಕಿ ಹಾಗೂ ಕವಯಿತ್ರಿ
ಮಾಗಡಿ