ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪ್ರೊ.ಸಿದ್ದು ಯಾಪಲಪರವಿ

ಇಂದು ಪ್ರಕೃತಿ ತನ್ನ ದಿಕ್ಕನ್ನು ಬದಲಿಸುವ ಸಂಕ್ರಮಣ ಕಾಲ.
ಇದು ಪ್ರತಿ ವರ್ಷದ ಪ್ರಕ್ರಿಯೆ. ಮನುಷ್ಯ ಮಾತ್ರ ಬದಲಾಗಲಾರ ಎಂಬ ಹಳಹಳಿ. ಪ್ರಕೃತಿಗೆ ಇರುವ ನಿಯತ್ತು ಮನುಷ್ಯನಿಗೆ ಇಲ್ಲ ಎಂಬ ಕೊರಗಿನ ಮಧ್ಯೆ ಮನಸು ಕನಲುತ್ತಲೇ ಅರಳುತ್ತದೆ.

ಪ್ರೀತಿ-ಪ್ರೇಮ-ವಿಶ್ವಾಸ ಹುಡುಕಿಕೊಂಡು ಹೋದಾಗಲೂ ಆಗುವ ಧೋಕಾ ಕೊಡುವ ನೋವು ಅಷ್ಟಿಷ್ಟಲ್ಲ.

ಏಕೆ ಹೀಗೆ? ಉತ್ತರ ಹುಡುಕುವುದು ಬೇಡ. ಬದುಕೇ ಹೀಗೆ…
ನಾವು ಬದುಕಿ ಬಾಳುವುದು ಮಾನವರ ಜೊತೆಗೆ. ಮನುಷ್ಯ ಮೂಲಭೂತವಾಗಿ ಸ್ವಾರ್ಥಿ; ತನ್ನ ಮೂಗಿನ ನೇರಕ್ಕೆ ಆಲೋಚನೆ ಮಾಡುತ್ತಾನೆ.

ಹಾಗೆ ಆಲೋಚನೆ ಮಾಡುವ ಭರದಲ್ಲಿ ಇತರರನ್ನು ನೋಯಿಸುತ್ತಲೇ ಹೋಗುತ್ತಾನೆ. ‘ನೊಂದವರ ನೋವ ನೋಯದವರೆತ್ತ ಬಲ್ಲರು’ ಎಂಬ ಅಕ್ಕ ಹೇಳಿದ್ದು ಎಷ್ಟೊಂದು ಖರೆ ಅನಿಸುತ್ತದೆ.

ಅಂಟಿಕೊಂಡು ಅಂಟಿಕೊಳ್ಳದಂತೆ, ‘ಅಟ್ಯಾಚ್ಮೆಂಟ್ ವಿತ್ ಡಿಟ್ಯಾಚ್ಮೆಂಟ್’ ಸೂತ್ರ ಹಿಡಿದುಕೊಂಡು ಸಾಗುವುದು ಅನಿವಾರ್ಯ.
ವಿನಾಕಾರಣ ಕೊರಗುವ ಕಾರಣಕ್ಕಾಗಿ ನಾವು ಹುಟ್ಟಿಲ್ಲ. ನಾವು ಖುಷಿ ಇದ್ದು, ಇತರರನ್ನು ಖುಷಿಪಡಿಸಲಿಕ್ಕಾಗಿ ಹುಟ್ಟಿದ್ದೇವೆ ಎಂಬುದನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳೋಣ.

ನಾವು ತುಂಬಾ ಪ್ರೀತಿಸುವ ವ್ಯಕ್ತಿಗಳನ್ನು ನಮಗೆ ಅರಿವಿಲ್ಲದಂತೆ ಜೀವ ಹಿಂಡುತ್ತೇವೆ.‌ ನಾವು ಕೂಡ ಅಷ್ಟೇ ನಮಗೆ ಅರಿವಿಲ್ಲದಂತೆ ಇತರರ ಕಿರುಕುಳಕ್ಕೆ ಬಲಿಯಾಗುತ್ತೇವೆ.

ಮರೆವು ಆವರಿಸಿ ಬಿಟ್ಟಿರುತ್ತದೆ.

ಗೆಳೆಯರೊಬ್ಬರೊಂದಿಗೆ ಮಾತನಾಡುವಾಗ ಜೋರಾಗಿ ಕೂಗಿ ಬಿಟ್ಟೆ.
‘ನೀನು ಅನಾವಶ್ಯಕವಾಗಿ ಹೆದರುವುದಾದರೆ ನನ್ನೊಂದಿಗೆ ಮಾತನಾಡಬೇಡ, ಸಲಹೆಗಳನ್ನು ಕೇಳಬೇಡ.’

ಬದುಕಿನ ವಾಸ್ತವ ಅರ್ಥ ಮಾಡಿಕೊಳ್ಳುವುದರ ಒಳಗೆ ಕೂದಲು ನೆರೆತು ಹೋಗಿರುತ್ತವೆ.

ಪಾಪ! ನನ್ನ ಒರಟು ಮಾತಿಗೆ ಬೆಚ್ಚಿ ಬಿದ್ದು ಅಳಲಾರಂಭಿಸಿದಾಗ ಸಮಾಧಾನ ಮಾಡಲು ಅಸಹಾಯಕನಾಗಿಬಿಟ್ಟೆ. ನಾನೂ ಹೀಗೆ ಎಷ್ಟೋ ಬಾರಿ ಅಸಹಾಯಕನಾಗಿ ಮೋಸ ಹೋದದ್ದು ನೆನಪಾಗಿ ಕಣ್ಣು ಮಂಜಾದವು.

ಬದುಕನ್ನು ನಮಗೆ ಸರಿ ಕಂಡಂತೆ ಅನುಭವಿಸಿ ಒದ್ದಾಡುತ್ತೇವೆ.
ಯಾರನ್ನು, ಯಾವುದನ್ನು ಎಷ್ಟು,ಹೇಗೆ ಹಿಡಿದುಕೊಳ್ಳಬೇಕೆಂಬ ಲೆಕ್ಕಾಚಾರ ಸಿಗುವುದಿಲ್ಲ.

ಧ್ಯಾನಸ್ಥರಾಗಿ ಕಾಣದ ಕೈಗೆ ಮೊರೆ ಹೋದಾಗ ಆತ ಖಂಡಿತವಾಗಿ ದಾರಿ ತೋರಿಸುತ್ತಾನೆ.

ನಾವು ಬಲವಾಗಿ ನಂಬಿದ ಅದೃಶ್ಯ ಶಕ್ತಿ ನಮ್ಮ ಕೈ ಬಿಡುವುದಿಲ್ಲ.
ಬದುಕಿನಲ್ಲಿ ಸಂತೃಪ್ತಿ ಪಡೆದುಕೊಳ್ಳುವ ಅವಕಾಶ ಕಲ್ಪಿಸುತ್ತಾನೆ.
ಹಾಗೆ ಅವಕಾಶ ಸಿಕ್ಕಾಗ ದುರಾಸೆಗೆ ಬೀಳದೆ ನಿಧಾನವಾಗಿ ಖುಷಿಯನ್ನು ತರ್ಕಕ್ಕೆ ಒಡ್ಡದೆ ಸುಮ್ಮನೇ ಅನುಭವಿಸುತ್ತಾ ಸಾಗೋಣ.
ನಾವು ನಮಗರಿವಿಲ್ಲದಂತೆ ತಪ್ಪು ಮಾಡಿದರೂ ಆ ತಪ್ಪಿಗೆ ನಾವೇ ಕಾರಣ ಅಂದುಕೊಳ್ಳುವುದೂ ಬೇಡ.

ಸುಖ ನೀಡಬೇಕು ಎಂದು ನಿರ್ಧರಿಸಿದ ವಿಧಿ ನಮ್ಮಿಂದ ತಪ್ಪು ಮಾಡಿಸಿರಬಹುದು. ಅದಕ್ಕೆ ಕೊರಗದೇ ‘ತಪ್ಪು ಮಾಡೋಣ ಬಾ ಸುಖವಾಗಿ ಇರುವುದಾದರೆ’ ಎಂಬ ಸಲಹೆಯನ್ನು ಮನಸಿಗೆ ನೀಡಿ ಮುಂದೆ ಸಾಗಿದಾಗ ಯಾವ ಪಾಪ ಪ್ರಜ್ಞೆಯೂ ಕಾಡುವುದಿಲ್ಲ.
ಪಾಪ ಪ್ರಜ್ಞೆ ಹುಟ್ಟಿಸುವುದು ಕೂಡ ಆ ದೇವರ ಉದ್ದೇಶ ಅಲ್ಲ.
ಪಾಪ ಪುಣ್ಯ ಬರೀ ಅನರ್ಥ ತರ್ಕ.

ಕೊಳೆಯಾದ ಬಟ್ಟೆಗಳನ್ನು ಕಳಚಿ ಶುದ್ಧಗೊಳಿಸುವಂತೆ ಮನಸು ಮತ್ತು ಮನುಷ್ಯ ಸಂಬಂಧಗಳನ್ನು ಶುಚಿ ಮಾಡಿಕೊಂಡು ಸಾಗುವುದೇ ಸಂಕ್ರಮಣ, ಉಗಾದಿ ಮತ್ತು ದೀಪಾವಳಿ. ಇಲ್ಲದೇ ಹೋದರೆ ಬದುಕು ಬರೀ ಹೋಳಿಯಾದೀತು.