ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

99099

ಯಮುನಾ ಕಂಬಾರ
ಇತ್ತೀಚಿನ ಬರಹಗಳು: ಯಮುನಾ ಕಂಬಾರ (ಎಲ್ಲವನ್ನು ಓದಿ)

(ಸಣ್ಣ ಕತೆ)

ಅಯ್ಯೋ…!ಅಲ್ಲೇನೂ ಇಲ್ಲ…!! ಬರೀ ಮಟ ಮಟ ಮಧ್ಯಾಹ್ನ…….ಒಂದು ಅಕ್ಷರವಾಗಲಿ ಇಲ್ಲವೆ ಭಾವನೆ ತಿಳಿಸುವ ಯಾವುದೇ ಒಂದು ಚಿನ್ಹೆ ಸಹ ಅಲ್ಲಿರಲಿಲ್ಲ. ಅವಿರತಳು ಅಲ್ಲಿಗೆ ಆ ನಂಬರಿನ ವಿಷಯ ಬಿಟ್ಟು ಬಿಡಲಿಲ್ಲ. ಅದು ಹೇಗೆ ತಾನೆ ಬಿಟ್ಟಾಳು…..! ಅವಳು ಅದೇ ತಾನೆ ಅರಳುತ್ತಿರುವ ಅಕ್ಷರ ಕುಸುಮ. ಸಲ್ಪು ಗಾಳಿ ಬೀಸಿದರ ಸಾಕು ತನ್ನ ಮೈಯನ್ನು ತಾನೇ ಒಡ್ಡಿಕೊಂಡು ಓಲಾಡುವ ಪುಷ್ಪ. 9909 ಯಾರದಿರಬಹುದು ಇದು..??

ಅಂದು ಮಧ್ಯ ರಾತ್ರಿ ಸಮೀಪಿಸುತ್ತಿತ್ತು, ಮನೆಯ ಅಕ್ಕ ಪಕ್ಕಗಳೆಲ್ಲವೂ ಸ್ತಬ್ದವಾಗಿದ್ದವು.ಹೊರಗೆ ಬಯಲು ಕಪ್ಪು ಕತ್ತಲ ಸೆರಗಿನಲ್ಲಿ ಮೋಹಕವಾಗಿತ್ತು.
ಅವಿರತಳಿಗೆ ಹಗಲು ಹರಿದ ಹುರುಪು. ಲೇಖಕಿಯರ ಸಂಘದ ಸದಸ್ಯಳಾಗಿದ್ದ ಅವಳಿಗೆ ಸಂಘದಿಂದ ಮೆಸ್ಸೇಜುಗಳು ಬರುತ್ತಿದ್ದವು.ದಿನವಿಡಿ ಮಕ್ಕಳಿಗೆ ಅಡುಗೆ, ತೊಳೆ ಬಳೆ ಕೆಲಸಗಳಲ್ಲಿ ಅವಳಿಗೆ ಮೆಸ್ಸೇಜು ನೋಡುವುದು ಆಗಿರಲಿಲ್ಲ. ಊಟ ಮುಗಿಸಿ ಅಡುಗೆ ಮನೆ ಸ್ವಚ್ಚಗೊಳಿಸಿವುದರಲ್ಲಿ ಕಾಲ ಕಳೆದ ಅವಳು ಪೋನನ್ನು ಕಾತುರದಿಂದ ತೆಗೆದುಕೊಂಡು ಸಂಘದವರು ಏನೇನು ಮೆಸ್ಸೇಜು ಕಳಿಸಿರುವರೆಂದು ಟೆಕ್ಸ ತೆಗೆದು ವ್ಯಾಟ್ಸಾಪ ಮೆಸ್ಸೇಜುಗಳನ್ನು ಒಂದೊಂದಾಗಿ ಓದತೊಡಗಿದಳು ದಿ: 8-9-19 ರಂದು ದತ್ತಿ ನಿಧಿ ಕಾರ್ಯಕ್ರಮ ಜಯದೇವಿ,ಅವರದು. ದಿ: 10-9-ರಂದು ನೆರೆ ಸಂತ್ರಸ್ತರಿಗೆ ಅನ್ನ ,ಔಷಧಿ ಪರಿಹಾರ ಕಾರ್ಯಕ್ರಮ.ದಿ: 20-9-ರಂದು ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಹೊಲಿಗೆ ತರಬೇತಿ ಕಾರ್ಯಕ್ರಮ…….ಹೀಗೆ ಓದುತ್ತಾ ಓದುತ್ತಾ ಹೋದ ಅವಳಿಗೆ ಕೊನೆಗೆ ಅಪರಿಚಿತ ನಂಬರೊಂದು ಅವಳ ಮೊಬೈಲಿಗೆ ಅಪಲೋಡ ಆಗಿದ್ದು ಕಂಡು ಬಂತು.ಅವಳು ಅದನ್ನು ನೋಡುತ್ತಿದ್ದಂತೆ ಭಯ, ಆಶ್ಚರ್ಯ,ಮತ್ತು ಕುತೂಹಲ ಆಯಿತು. “ ಅರೇ ಯಾರದ ನಂಬರ ಇದು..? ಹೊಸ ನಂಬರ ಇದ್ದಂಗ ಐತೆ ಅಲ್ಲ. ಹೌದು ಇದು ಯಾರದೋ ಹೊಸ ನಂಬರ. ಈ ನಂಬರ ನನಗ ಯ್ಯಾಕ ಬಂತು..? ಅವರು ಯ್ಯಾರ ? ಯ್ಯಾಕ ನನ್ನ ನಂಬರ ತಗೊಂಡರು ? ನನ್ನ ನಂಬರ ಅವ್ರು ತಗೋಬೇಕಾದ್ರ ನಾನ ಅವರಿಗೆ ಬೇಕಾದವಳ ಆಗಿರಬೇಕು. ನಾನು ಯಾರಿಗೆ ಬೇಕಾಗೇನಿ ? ಯ್ಯಾರಿಗ್ಯಾರ ಆಪತ್ತ ಕಾಲದಾಗ ರೊಕ್ಕ ಕೊಟ್ಟ ಅವರ ನೋವಿಗೆ ಹೆಗಲಾಗೇನಿ….ಏನ… ? ಇಲ್ಲ. ಯ್ಯಾರಿಗೂ ರೊಕ್ಕ ಕೊಟ್ಟಲ್ಲ.ಯ್ಯಾರೀಗೂ ಹೆಗಲ ಆಗಿಲ್ಲ. ಹಂಗಾದರ ಇವರ್ಯಾಕ ನನ್ನ ನಂಬರಿಗೆ ತಮ್ಮ ನಂಬರ ಅಪಲೋಡ ಮಾಡ್ಯಾರ ? ನನ್ನ ಅವರು ಬಹುಷ ಎಲ್ಲೋ ನೋಡ್ಯಾರ. ಯಾವುದೋ ಪಂಕ್ಷನ್ನನಾಗ ಭಾಷಣ ಮಾಡುದ ನೋಡಿರಬೇಕ . ನನ್ನ ಮಾತನಾಡುವ ರೀತಿ, ಮಾತನಾಡುವ ಶೈಲಿಯಲ್ಲಿ ವ್ಯಕ್ತವಾಗುವ ನನ್ನ ಗುಣಗಳು :…. ಸತ್ಯವಂತಿಕೆ…. ನಿಷ್ಟಾವಂತಿಕೆ…….!! ಅಯ್ಯೋ ಈ ಗುಣಗಳನ್ನು ಅವ್ರು …..ಮೆಚ್ಚಿಕೊಂಡರಾ…? ….ದೇವರೇ ಅವು ಯ್ಯಾರಿಗೆ ಬೇಕಾಗ್ಯಾವ ಇವತ್ತಿನ ಈ ಕಾಲದಾಗ…..!! ?? ಯ್ಯಾರ ಈ ಗುಣ ತಗೊಂಡ ಎದಿಗೊತ್ತಿಗೊಂಡ ಪೂಜೇ ಮಾಡತ್ತಾರ? ಸುಳ್ಳು, ತಗಲಬಾಜಿ, ಮಾತಿನಾಗ ಮಾತ ಇಲ್ಲದವರ….ಜಾಣರೆಂದು ತಿಳಿದಿದೆ ಈ ಕಾಲ. ,ಅಲ್ಲದೆ ದುಡ್ಡಿಗೆ, ಶ್ರೀಮಂತಿಕೆಗೆ ಬಾಯಿ ಬಿಟ್ಟು ; ಹಣ..ಹಣ..ಹಣ ಗಳಿಸುದಕ್ಕಾಗಿ ಹಸಿದು ; ಬೆಕ್ಕಿನಂಗ ಮುದುಡಿ ಮೌನವಾಗಿ ಕಾಯುತ್ತಿರುವ ಈ ಕಾಲದಾಗ ನಾ ಯ್ಯಾರಿಗ ಬೇಕಾದನ್ನಿ..! ? ಯ್ಯಾರಿಗೂ ಬೇಕಾಗದ ಇದ್ದರ ಈ ನಂಬರ ನನ್ನ ಮೊಬೈಲಿಗೆ ಯ್ಯಾಕ ಬಂದೈತಿ !! ” ಎಂದೆಲ್ಲ ವಿಚಾರಿಸುತಲಿದ್ದ ಅವಿರತಳ ಮೈಯಲ್ಲಿ ಭಯದೊಂದಿಗೆ ಕಾವು ಸಣ್ಣಗೆ ಹರಿದಾಡತೊಡಗಿತು. ಜೊತೆಗೆ ಅವಳ ಉಸಿರಾಟದ ವೇಗವೂ ಹೆಚ್ಚಾಗತೊಡಗಿತು. ಹೊರಗೆ ಕತ್ತಲು ಬೆಳೆಯುತ್ತಲಿತ್ತು. ಗಾಳಿಯ ಸುಳಿವು ಇರಲಿಲ್ಲ. ಕತ್ತಲ ಬಾನು ದಾಟಿ ಆಗಸದಲ್ಲಿ ಚುಕ್ಕೆಗಳು ಅದೇನೋ ಸರಪ ಸಲ್ಲಾಪದಲ್ಲಿ ಮೈ ಮರೆತಂತೆ ಮಿಂಚುತ್ತಿದ್ದವು. ಅತ್ತ ಲಕ್ಷ್ಯಹಾಕದ ಅವಿರತ ಅಪರಿಚಿತ ನಂಬರಿನತ್ತ ತಲೆಯಾದಳು.

ಅವಳು ದುಗುಡ ತುಂಬಿದ ಮನಸ್ಸಿನಿಂದ ಯೋಚಿಸತೊಡಗಿದಳು. ಹೌದು ಹೌದು.. ನಾನು ಈಗೀಗ ಕತೆ ಕವನಗಳನ್ನು ಪತ್ರಿಕೆಗೆ ಕಳುಹಿಸಿರುತ್ತೇನೆ. ನನ್ನ ನಂಬರ ಏನಾದರೂ ಕದ್ದು ; ನನ್ನ ಕತೆ ಕವನ ಮೆಚ್ಚಿ ; ನನ್ನ ನಂಬರ ಯ್ಯಾರಾದರೂ ಅಭಿಮಾನಿಗಳು ತೆಗೆದುಕೊಂಡರಾ….? ಅದಕ್ಕಾಗಿ ತಮ್ಮ ನಂಬರ ಅಪಲೋಡ ಮಾಡಿದ್ರಾ….? ಆ ಟೆಕ್ಸಿನಲ್ಲಿ ತಮ್ಮ ಅಮೂಲ್ಯ ಮಾತುಗಳನ್ನು ತಿಳಿಸಿದರಾ…?
ಅದು ನನಗೆ ಈ ಹೊತ್ತಿನಲ್ಲಿ…!
ರಾತ್ರಿ ಹನ್ನೆರಡು ಬೆಳೆಯುತ್ತಿರುವ ಈ ಸಮಯದಲ್ಲಿ…ಯ್ಯಾಕೆ..?’ ಏನ್ನುತ್ತಿದ್ದಂತೆ ಅವಳ ಮೈಯಲ್ಲಿ ಬಿಸಿ ಮತ್ತಷ್ಟು ಹೆಚ್ಚಾಗುತ್ತಲಿತ್ತು. ಉಸಿರಾಟದ ವೇಗ ಮತ್ತೂ ಹೆಚ್ಚಿತು.
ನಾನೇನ ಅಂತಹ ದೊಡ್ಡ ಲೇಖಕಿ ಇನ್ನೂ ಆಗಿಲ್ಲ. ಅದಕ್ಕೆ ಬಹಳ ಶ್ರಮ ಐತಿ.
ಆದರೂ ನನ್ನ ಮೊಬೈಲಿಗೆ ನಂಬರ ಬಂದಿದೆಯಲ್ಲ.
ನನ್ನ ಕತೆ ಕವನ ಜನರಿಗೆ ಇಷ್ಟ ಬೇಗ ಅಷ್ಟ ಹಿಡಿಸಿ ಬಿಟ್ಟೂವಾ ಈಗಲೇ …ಅರೇ ವಾರೇ…..ವಾವ್..
ಇದು ನನ್ನ ಅಭಿಮಾನಿಗಳದ್ದೇ…? ಇರ್ಲಿ.!
ಆದ್ರೇ…..! ಈ ಅಪರಾತ್ರ್ಯಾಗ ಯ್ಯಾಕಪ್ಪ ಈ ಸುದ್ದಿ.
ಅವಿರತಾ ಭಯ ಭೀತಳಾಗತೊಡಗಿದಳು.
ಇನ್ನೂ ನನ್ನ ಓರಗೆಯವರು ಯ್ಯಾರು ಮ್ಯಾಲ ಬಂದಿಲ್ಲ ಅವರ್ನ ಬಿಟ್ಟ ನಾ ಮ್ಯಾಲ ಬಂದಂಗಾತ ಏನ?
ಹೌದ. ಇರಬೇಕ. ನಾ ಶ್ಯಾನಾಕಿ ಇಲ್ಲೇನ..? ಅದೇನಿ. ನನ್ನ ಬರವಣಿಗೆ ಅಂದರ ಪುಷ್ಟವಾದದ್ದು. ಯ್ಯಾರರಾ ಮೆಚ್ಚಿಕೊಂಡಿರಬೇಕ
ಎನ್ನುತ್ತಿದ್ದ ಅವಿರತಳು ಒಂದು ಕ್ಷಣ ಫುಲಕಿತಗೊಂಡಳು.ತಾನು ಎಷ್ಟು ಬೇಗ ಜನ ಗುರುತಿಸುವಷ್ಟು ದೊಡ್ಡ ಕತೆಗಾರಳಾಗಿ ಬಿಟ್ಟೆನಲ್ಲಾ.ವಾವ್…! ಕತಿ ಅಂದರ ಹಂಗ ಏನ…ಬೇಕ ಅದಕೂ ತಾಕತ್ತು ಎಂದ ಅವಳು ತನ್ನದೇ ಆ ಮೊಬೈಲ ಟೆಕ್ಸ ನೋಡಿ ಸಂತಸ ಪಟ್ಟಳು. ಅಭಿಮಾನಿ ತನ್ನ ಕುರಿತು ಏನೇನು ಮೆಸ್ಸೇಜು ಕಳಿಸಿರಬಹುದು’ ಎಂದು ಕಾತರಿಸುತ್ತಾ ಅಪಲೋಡ ಟೆಕ್ಸಟ್ ಓಪನ್ ಮಾಡಿ ನೋಡತೊಡಗಿದಳು.

ಅಯ್ಯೋ…!ಅಲ್ಲೇನೂ ಇಲ್ಲ…!! ಬರೀ ಮಟ ಮಟ ಮಧ್ಯಾಹ್ನ…….ಒಂದು ಅಕ್ಷರವಾಗಲಿ ಇಲ್ಲವೆ ಭಾವನೆ ತಿಳಿಸುವ ಯಾವುದೇ ಒಂದು ಚಿನ್ಹೆ ಸಹ ಅಲ್ಲಿರಲಿಲ್ಲ. ಅವಿರತಳು ಅಲ್ಲಿಗೆ ಆ ನಂಬರಿನ ವಿಷಯ ಬಿಟ್ಟು ಬಿಡಲಿಲ್ಲ. ಅದು ಹೇಗೆ ತಾನೆ ಬಿಟ್ಟಾಳು…..! ಅವಳು ಅದೇ ತಾನೆ ಅರಳುತ್ತಿರುವ ಅಕ್ಷರ ಕುಸುಮ. ಸಲ್ಪು ಗಾಳಿ ಬೀಸಿದರ ಸಾಕು ತನ್ನ ಮೈಯನ್ನು ತಾನೇ ಒಡ್ಡಿಕೊಂಡು ಓಲಾಡುವ ಪುಷ್ಪ. 9909 ಯಾರದಿರಬಹುದು ಇದು..?? ಅಕ್ಕನದೇ……? ಅಲ್ಲ, ಮಾವನದೇ….? ಛೇ…ಛೇ…ಅವನದೂ ಅಲ್ಲದೆ ಅಕ್ಕ ಮಾವ ಸಂಬಂಧ ಕಳೆದು ಕೊಂಡು ಬಹಳ ದಿನಗಳೇ ಆದವು. ಚಿಕ್ಕ ವಿಷಯಕ್ಕೇ ಅಕ್ಕ ರಕ್ತ ಸಂಬಂಧವನ್ನೇ ಕಳೆದುಕೊಳ್ಳುವಷ್ಟು ಕ್ರೂರಿಯ್ಯಾಗಿಬಿಟ್ಟಿದ್ದಳು. ಮತ್ತೆಂದೂ ಮುಖ ತೋರದೇ ದೂರಾಗಿದ್ದಾಳೆ ಎಂದುಕೊಳ್ಳುತ್ತಿದ್ದಂತೆ ಅವಳ ಕಣ್ಣು ಪಸೆ ಜಿನುಗಿತು.ಎದೆ ಭಾರವಾಯಿತು. ಮೈಯಲ್ಲ ತಣ್ಣಗಾಯಿತು.ಒಂದು ಕ್ಷಣ ಕಟ್ಟುಸಿರನೊಂದು ಬಿಟ್ಟಳು. ಇರ್ಲಿ ಎನ್ನುತ್ತಾ ಅವಳು ಆ ನೋವನ್ನು ದೂರ ಸರಿಸುತ್ತಾ ಮತ್ತೆ ವಾಸ್ತವಕ್ಕೆ ಬಂದಳು. ಗೆಳತಿ ನಂಬಿತಾಳದೇನಾದರೂ ಇರಬಹುದೇ…? ಇಲ್ಲ….ಇಲ್ಲ…
ಅವಳು ನನ್ನ ಕತೆ ಕವಿತೆಗಳೇನಾದರು ಓದಿದರೆ ಸ್ವತಃ ಫೋನ ಕಾಲ ಮಾಡಿ ಪ್ರೀತಿ ಹಂಚಿಕೊತಾಳ…. ಪೇಡೆ ಕೊಡ್ಲೇ , ಪಾರ್ಟಿ ಕೊಡಲೇ ಎಂದು ಪೀಡಿಸತಾಳ ಫೋನಿನಾಗ ತಾಸೊತ್ತಾನ ಮಾತಾಡತಾಳ. ಮತ್ತೆ ಮತ್ತೆ ತನಗೆ ತಿಳಿದ, ಸಾಹಿತ್ಯ ಕುರಿತು ತನಗೆ ಅನಿಸಿದ ಮಾತುಗಳನ್ನು ಹೇಳುತ್ತಾಳೆ.ಅವು ನನಗೆ ಹಿಡಿಸುತ್ತವೆ.ಅಂದ ಹಾಗೆ ಈ ನಂಬರ ಅವಳದು ಅಲ್ಲಾ ಅಂತ ಸ್ಪಷ್ಟ ಆಯಿತು. ಅಂದಂಗ ಮತ್ತ ಇದ್ಯಾವರದು ಇದ್ದೀತು..? “:ಅವರು ಯಾರಿರಬಹುದೆಂದು”ಅವಳು ಶೋಧನೆಯ ಮಾರ್ಗ ತುಳಿಯತೊಡಗಿದಳು.

‘ ಹೂ………’ ಎಂಬ ಮೆಸ್ಸೇಜ ಒಂದನ್ನು ಟೆಕ್ಸಿನಲ್ಲಿ ಹರಿಬಿಟ್ಟಳು. ಅವಳು ಆ ಕೂಡಲೇ. ಕಣ್ಣು ಎವೆ ಒಂದು ಸಲವಾದರೂ ಪಿಳುಕಿಸಿದ್ದಳೋ ಇಲ್ಲವೋ…
‘ ಆಯ್..ಅಮೀನುದ್ದೀನ’
ಧೀಡೀರ ಎಂದು ಬಂದು ಕುಳಿತಿತು ಒಂದು ಪದಪುಂಜ ಆ ಟೆಕ್ಸಿನಲ್ಲಿ.
‘ಅಮೀನುದ್ದೀನ….., ಅರೇ…..ಯಾರು ಈತ.?
ನಾನು ಈತನನ್ನು ಒಮ್ಮೆಯೂ ನೋಡಿಲ್ಲ. ಎಲ್ಲಿಯೂ ಭೇಟಿಯೂ ಆಗಿಲ್ಲ.
ಪರಿಚಯವಿಲ್ಲದ ನನಗೆ ಈತ ನಂಬರ ಅಪಲೋಡ ಮಾಡಿದ್ದು ಯ್ಯಾಕೆ.
ಅವಳ ಕೈ ಕಾಲುಗಳು ಕಂಪಿಸಿದವು.ಎದೆ ಢವಢವ ಎಂದು ಹೊಡೆದುಕೊಳ್ಳಲಾರಂಭಿಸಿತು.ಮಧ್ಯರಾತ್ರಿ ಬೇರೆ. ಹೊರಗೆ ದಟ್ಟ ಕತ್ತಲು. ಯಾವ ಒಂದು ನಾಯಿ ಇಲ್ಲವೇ ಜೀರುಂಡೆಯೂ ಸಹ ಸಪ್ಪಳ ಮಾಡುತ್ತಿಲ್ಲ. ಆ ನಿಶ್ಯಬ್ಧತೆ ಅವಳ ಭಯಕ್ಕೆ ತಾಳ ಹಾಕಿದಂತಿತ್ತು. ಅವಳಿಗೆ ಏನೊಂದೂ ತಿಳಿಯದಾಯಿತು. ತನ್ನ ಜೀವಮಾನದಲ್ಲೇ ಗೊತ್ತ್ತಿಲ್ಲದ ಹೆಸರು.ಈತ ತನಗೇಕೆ ಈ ಹೊತ್ತಿನಲ್ಲಿ ಟೆಕ್ಸಟ ಕಳಿಸಿದ್ದು..?? ನಾನೇನು ಈತನಿಗೆ ಫೋನು ಮಾಡಿಲ್ಲ.ಫೋನ ನಂಬರೂ ಕೊಟ್ಟಿಲ್ಲ. ಅವಳ ಗಂಟಲು ಪಸೆ ಆರತೊಡಗಿತು. ಆತನ ಕುಲಗೋತ್ರಗಳೇನು ಒಂದೂ ತಿಳಿಯದ ಅವಳು ಒದ್ದಾಡಿದಳು. ಅವಳ ಕಣ್ಣುಗಳು ಮಂಜು ಮಂಜಾದವು. ಅವಳು ಮತ್ತೆ ಅವನಾರೆಂದು ತಿಳಿದುಕೊಳ್ಳಲು –ಯಾವೂರು ಏನು ಕೆಲಸ ಮಾಡತಾನ ನನ್ನ ನಂಬರ ಆತನಿಗೆ ಹೇಗೆ ಸಿಕ್ಕಿತು ಇತ್ಯದಿ ತಿಳಿದುಕೊಳ್ಳಲೇ….ಛೇ.. ಭಯಪಟ್ಟಳು
ಯ್ಯಾವೂರಾವ ಆದರೂ ಆಗವಲ್ಲನ್ಯಾಕ ಅದನ್ನ ತಗೊಂಡು ನಾನೇನ ಮಾಡಲಿ. ಅವನ ವಯಕ್ತಿಕ ನನಗ್ಯಾಕ ಬೇಕ ಹಾದಿಗೆ ಹೋಗು ಜಗಳ ಮೈಮ್ಯಾಲ ಹಾಕ್ಕೊಳ್ಳುದು ಬೇಕಾಗೇತೇನ. ಪೀಡಾ, ಹತ್ತಬಾರದ ಹತ್ತಿದರ ಏಳು ಜನ್ಮ ಆದರೂ ಪೀಡಾ ಬೆನ್ನು ಬಿಡುದಿಲ್ಲ. ಆದರೂ ಪೀಡಾ ನನ್ನ ಬೆನ್ನಿಗೆ ಯಾಕ ಬಿದ್ದೈತಿ ಹಂಗ ಬಿಟ್ಟರ ಸ್ವಾತಿ ಮಳಿ ಆಕ್ಕೈತಿ ನನ್ನ ಬೆನ್ನು ಬಿಡಿಸಿಗೊಬೇಕು ಎಂದು ಅವಳು ಮತ್ತೆ :
‘ಹೂ…. ಯು…?? ಎಂಬ ಪದವೊಂದನ್ನು ಕಳುಹಿಸಿದಳು.

‘ಆಯ್ ಯ್ಯಾಮ ಅಮೀನುದ್ದೀನ , ಯುವರ ನೇಮ..??’ ಅತ್ತಿಂದ ಮರು ಉತ್ತರ.
ಅದನ್ನು ಓದಿದ ಅವಿರತಳಿಗೆ ಮತ್ತೆ ಭಯ ಮೈಯಲ್ಲಾ ಹರಿದಾಡಿತು. ಎಲ್ಲ ಸಹಜ ಶಬ್ದಗಳನ್ನು ಬಿಟ್ಟು ಬೇರೊಂದು ಪದವೇ ಬಂದು ಬಿಟ್ಟಿದೆಯಲ್ಲ – ‘ನೇಮ’…..! ನನ್ನ ನೇಮ ಇವನಿಗ್ಯಾಕ ಬೇಕಪ್ಪ.!! ನಾನೇನು ಆತನ ಬಂಧೂವೋ…ಬಳಗವೋ…. ಇಲ್ಲಾ ಪರಿಚಿತಳೋ….ಇಲ್ಲಾ ಇವನೇನು ನನ್ನ ಸಂಘದ ಸದಸ್ಯನೋ….! ಇಲ್ಲ. ಯಾವುದೂ ಇಲ್ಲವಲ್ಲ…?? !! ಅಷ್ಟಾಗಿ ಹೆಸರು ಯ್ಯಾಕ ಬೇಕ ಇವನಿಗೆ.?
ಅವಳ ಉಸಿರಾಟ ಮತ್ತೆ ಹೆಚ್ಚಾಯಿತು. ಶೋಧನೆ ಮುಂದುವರೆದಂತೆ
ವಿಷಯ ಮತ್ತೆ ಮತ್ತಷ್ಟು ಜಠಿಲವಾಯಿತು.
ಮಾತುಗಳು ಸರಳ ರೇಖೆಯ ಮುಖ ಬಿಟ್ಟಂತೆ ಚಲಿಸುತ್ತಿವೆಯಲ್ಲಾ…! ಆನಂದನಿಗೆ ಗೊತ್ತಾದರೆ …..ಮುಗಿತು ಕತೆ.
ಅಯ್ಯೋ ದೇವರೇ …ನಾನು ಫೋನೇ ಕೊಳ್ಳಬಾರದಿತ್ತು. ಸುಮ್ಮನೇ ಕೊಂಡುಕೊಂಡೆ.ಮನೆ ಕೆಲಸ. ಮನೆಯ ಇತರೇ ವ್ಯವಹಾಗಳಿಗಾಗಿ ಕೊಂಡಿದೆ. ಇದು ಎಷ್ಟೊಂದು ಕೆಲಸಾ ಮಾಡತೈತಿ. ಊರಿಗೆ ಹೋಗಬೇಕಾದರ ಎಷ್ಟ ರಗಳಿ ಹಣಗಲ..! ನೀಬಾ…..ನಾಬಾ……ಸಂತೆಯ ಕಂತಿ. ಬಸ್ಸು …..ಟ್ಯಾಕ್ಸಿ……ಹೈರಾಣ.
ಆದರ ಮೋಬೈಲನಿಂದ ಒಂದ ಕಾಲ ಮಾಡಿದರ ಸಾಕ. ಒಂದ ಕ್ಷಣದಾಗ ನಾವ ಅಲ್ಲೇ……!
ಅಲ್ಲದೇ…ಧಾರವಾಡ ,ಹುಬ್ಬಳ್ಳಿ, ಬೆಳಗಾವಿಯ ಅಂಗಡಿಗಳಿಂದ ಶೀರೆ, ವಾಚು, ಶೂಜ ಒಂದೇ..ಎರಡೇ..ತರಿಸಿಕೊಂಡಿದ್ದು, ನಮಗೆ ಬೇಕಾದ ನವ ನವೀನ ಬಟ್ಟೆಗಳನ್ನು ಇದ ಮೊಬೈಲಿನಲ್ಲಿಯಲ್ಲಿಯೇ ನಾವು ಹುಡುಕಿಕೊಂಡದ್ದು, ಸೆಲೆಕ್ಟ ಮಾಡಿ ಆರ್ಡರ ಹಾಕಿದ್ದು, ಮೋಬೈಲ ಸೋರೂಮ ಆಗೇತಿ, ಸಾಮಾನು ಕೊಳ್ಳುವ ಮೋರ ಆಗೇತಿ.
ಮಗಳ ನಿಶ್ಚಯ ಕಾರಣಕ್ಕೆ, ಮುತ್ತೈದೆಯರಿಗೆ ಉಡಿತುಂಬು ಕಾರಣಕ್ಕೆ ಬೀಗರಿಗೆ ಬರ ಹೇಳುವ ಕೆಲಸ ಮಾಡುವ ಆಳು ಆಗೇತಿ.
ಇದರಿಂದ ರೊಕ್ಕ ಉಳಿತಾಯ, ಸಮಯ ಉಳಿತಾಯ, ಶ್ರಮ ಇಲ್ಲ. ಇದರ ಉಪಕಾರವನ್ನು ಮರೆಯಲಾದೀತೇ..!
ಈತನಿಗೆ ಇವನಂತವರಿಗೆ ಹೆದರಿ ಮೊಬೈಲ ಕೊಳ್ಳುದ ಬಿಡಬೇಕಾ….?
ನಮ್ಮ ಮನಿ ಕೆಲಸ ಇಂತವರಿಗೆ ಅಂಜಿ ಬಿಟ್ಟ ಕುಂದರಬೇಕಾ…ಹಾದಿ ಹೋಕ. ಬೂಮಿಗೆ ನಾ ಬಂದಿದ್ದು ನಿನಗೆ ಅಂಜಾಕಾ..? ಅಲ್ಲಾ ಇವನಂತವರಿಗೆ ಅಂಜಾಕಾ…?
ಯಾವನಪ್ಪ ನೀನು…?
ನೀ ಗಂಡಸಾಗಿರಬಹುದು ನಾ ಹೆಂಗಸಾಗಿರಬಹುದು ಅಷ್ಟ ಫರಕ ಬಾರೋ ನಾನು ತಾಯಿ ಎದೆ ಹಾಲು ಕುಡಿದೇನಿ ನನ್ನ ರಟ್ಟೆಯಲ್ಲಿ ತಾಯಿಯ ಶಕ್ತಿ ಐತೋ….!
ಅವಿರತ ಗುಡುಗಿದಳು.
ಆದರೆ ವಿಚಾರ ಮಾಡಿದಷ್ಟು ವಾಸ್ತವದಲ್ಲಿ ಸಾಧ್ಯವಿಲ್ಲ.ಎಂಬ ವಿಚಾರ ಮೂಡುತ್ತಿದ್ದಂತೆ ಅವಳ ರಟ್ಟೆಯ ಶಕ್ತಿ ಇಳಿಯತೊಡಗಿತು.

ಸಿಂಧು ತಾಯಿ ಸಕ್ಪಾಳ ಗಂಡುವನ್ನು ಎದುರು ಹಾಕಿಕೊಂಡು ಏನಾದಳು. ಗಂಡನ್ನ ಕಳಕೊಂಡಳು. ದನದಕೊಟ್ಟಿಗೆ ಬಾನಂತಿಯ ಹೊರಸಾಯಿತು. ಇದ್ದ ಗಂಡು ಮಕ್ಕಳನ್ನ ಕಳಕೊಂಡು ಬೀದಿಪಾಲಾದಳು. ತುತ್ತು ಅನ್ನ ಇಲ್ಲದಂತಾಯಿತು. ಬೀದಿ ಭಿಕಾರಿಯಾದಳು ಕೊನೆಗೆ ಸುಡುಗಾಡ ಮನೆಯಾಗಿ ಬಂತು. ಇವು ಸರಳ ಸಹಜ ಪದಗಳಲ್ಲ. ನೋವು ಯಾತನೆ ತುಂಬಿದ ಪದಗಳು. ಯಾರಿಂದ ಈ ನರಕ ಅವಳಿಗೆ ಆಯ್ತು…ಇಂತಹ ವಿಲನಗಳಿಂದ ಯಾವುದಕ್ಕೂ ಹೇಸದ ವಿಲನ್ನಗಳು. ಅಷ್ಟೇ ಏಕೆ ಇಡೀ ಜೀವನವನ್ನೇ ಇಂತಹ ವಿಲನಗಾರಿಕೆಗೆ ತೆಗೆದಿಟ್ಟಂತವರು. ಅನ್ನ ಉಂಡು ಹಗಲು ರಾತ್ರಿ ಇಂತಹ ಸಮಯಗಳನ್ನು ಎದುರು ನೋಡುತ್ತಿರುವಂತವರು. ಮಾನ ಹೋದರೂ ಸರಿ ಮರ್ವಾದೆ ಹೋದರೂ ಸರಿ ಅಂತೆಲ್ಲ ಬಂದ ಕಷ್ಟಗಳನ್ನು ವಿಲನಗಾರಿಕೆ ಮುಡುಪಾಗಿಟ್ಟಿರುತ್ತಾರೆ ಈ ವಿಲನ್ನಗಳು. ಇಂತಹ ವ್ಯಕ್ತಿಗಳ ಜೊತೆ ಕುಸ್ತಿ ಹಿಡಿಯಬೇಕಾದರೆ ಬಹಳಷ್ಟು ಎಚ್ಚರವಹಿಸಬೇಕು. ನನ್ನ ಮಾನ ಪ್ರಾಣ ನನ್ನ ಕೈಯಲ್ಲಿಟ್ಟುಕೊಂಡಿರಬೇಕು. ಮಾನಕ್ಕೆ ನಷ್ಟ ಆದರ ಪ್ರಾಣ ನಿಲ್ಲದ ಹೊರಟು ಹೋಗತ್ತೈತಿ ಎಚ್ಚರಿಕೆ ಮುಖ್ಯ ಐತಿ ಎನ್ನುತ್ತಿದ್ದ ಅವಿರತಳ ನಾಲಿಗೆ ಒಣಗುತಲಿತ್ತು. ಅವಳ ಕಣ್ಣುಗಳು ದೀನವಾಗಿದ್ದವು.
ಹಾಲಿನಲ್ಲಿ ಲೈಟ ಉರಿಯುತ್ತಿತ್ತು. ಹೊರಗೆ ಕತ್ತಲು ಮತ್ತೆ ಮತ್ತೆ ದಟ್ಟವಾಗುತ್ತಲಿತ್ತು.

ಗಂಡ ಅನಂದ ಹಾಸಿಗೆಯಲ್ಲಿ ನಿಶ್ಚಿಂತೆಯಿಂದ ಮಲಗಿದ್ದಾನೆ ಗೊರ್ರ….ಗೊರ್ರ….ಗೊರಕೆಗಳು ಆತನ ಗಾಢ ನಿದ್ರೆಯ ಕುರುಹುಗಳು ಲಯಬದ್ದವಾಗಿದ್ದವು.
ವಿಷಯ ಗಂಡನಿಗೆ ಗೊತ್ತಾದರೆ…..!! ? ಅವಿರತ ಮತ್ತಷ್ಟು ಕಂಪಿಸಿದಳು.
ಈಟ ಗೊತ್ತಾದರ ಅವಗ…..! ಏನ ತಿಳದೈತಿ ಅನ್ನುದು ಒಟ್ಟ ಪತ್ತ ಹಚ್ಚಿಗೊಡುದಿಲ್ಲ. ಅದು ಎಷ್ಟ ಕೆಟ್ಟದ್ದ…….ಇಲಿಇಲಿ ಒದ್ದಾಡಿದರೂ ಅದನ್ನ ನೋಡಾಕ ಬಿಡುದಿಲ್ಲ…… ಪರಮಾತ್ಮ..!
ದೇವರ,……!! , ಅಲ್ಲದ ಅವನ ಹೊಟ್ಟ್ಯಾಗ ತಲಿಯ್ಯಾಗ ಏನ ಹುಟ್ಟತಾವ. ಅವು ಯಾವ ರೀತಿ ಯಾವ ರೂಪ ರೂಪ ತಾಳಿ ನನ್ನ ಆಟಾ ಆಡಿಸ್ತಾವ ಅನ್ನುದೂ ಗೊತ್ತಿಲ್ಲ. ಅಷ್ಟ ಅಲ್ಲ ಕೊನಿತನಕ ಯಾವುವು ಉಳಕೊಂಡು ನನ್ನ ಜೀವ ಹಿಚಗತಾವ ಅನ್ನುದು ಗೊತ್ತಿಲ್ಲ ಎಂದುಕೊಂಡ ಅವಳಿಗೆ ಅಂದು ರಾತ್ರಿ ಗಂಡನಿಗೆ ತಾನು ಹೇಳುತ್ತಿದ್ದ ಮಾತುಗಳು ನೆನಪಾಗಿ ಕಾಲು ಸೋತಂತಾದವು.

“ರೀ….ನಾನು ಸಂಘದ ಅಧ್ಯಕ್ಷ ಆಗಿದೇನಿ.ಎಷ್ಟ ಚಲೋರಿ ಅಧ್ಯಕ್ಷ ಆಗೋದು . ಎಲ್ಲರೂ ಕಿಮ್ಮತ್ತ ಕೊಡತಾರ. ನಮಸಾರ ಹೇಳತಾರ. ಯಾವದ ಒಂದ ಕಾರ್ಯಕ್ರಮ ಮಾಡಬೇಕಾದರ ಮೊದಲ ನನ್ನ ಮುಂದ ಇಟಗೊಂಡ ವಿಚಾರ ಮಾಡತಾರ . ಅಲ್ಲದ ಕಾರ್ಯಕ್ರಮ ವೇದಿಕೆಯ ಮೇಲೆ ನಾನಿಲ್ಲದ ಇದ್ದರ ಅಪೂರ್ಣ ಕಾರ್ಯಕ್ರಮ ಅಷ್ಟ ಅಲ್ಲ ಅದು ಸಿಂಧುತ್ವ ಇಲ್ಲದ್ದೂ ಕೂಡಾ . ನನಗ ಮಾನ ಸನ್ಮಾನಗಳೇನ್ರೀ.. ಎಷ್ಟು ಹೂವಿನ ಹಾರ ಹಾಕತ್ತಾರಿ. ಅದಕ ನೋಡ್ರಿ ಎಲ್ಲಾರೂ ಅಧಿಕಾರ ಹಿಡಿಯಾಕ ಬಡಕೋತಿರೋದು. ಇಡೀ ಸಂಘ ನನ್ನ ಕೈಯಲ್ಲೇ ಸರಕಾರ ವರ್ಷಕ್ಕೆ ಲಕ್ಷಗಟ್ಟಲೆ ದುಡ್ಡುಕೊಡತೈತಿ. ಅದೆಲ್ಲಾ ನನ್ನ ಕೈಯಲ್ಲೇ ರಿ. ರೀ ಏನು ಅಂದರ ಆ ದುಡ್ಡಿನಾಗ 1/4 ದುಡ್ಡ ನಾ ತಗೊಂಡು, 1/4 ಕಡಿಮೆ ಆಯ್ತೂ ರಿ 1/2 ತುಗೊಂಡು 1/2 ಸಂಘಕ್ಕೆ ಉಪಯೋಗ ಮಾಡುದ.ಒಂದಕ್ಕ ಎರಡ ಬೆಲೆ ಹಚ್ಚಿ ರಶೀತಿ ತೋರಸ್ಸುದು. ಆಂ ಹೆಂಗ ಐತಿರಿ ನನ್ನ ಐಡಿಯಾ.!.ಎನ್ನುತ್ತಾ ಕಿಲಕಿಲನೇ ನಗುತ್ತಾ ಗಂಡನ ಭುಜದ ಮೇಲೆ ಒರಗಿ ಹೇಳಿದ್ದಳು. ಅದೇ ದುಡ್ಡಿನಾಗ ಒಂದ ಪ್ಲಾಟ ಖರೀದಿ ಮಾಡಬಹುದು ಅಲ್ಲೇನ್ರೀ..ಎನ್ನುತ್ತಾ ಅವಳು ಗಂಡನ ಮುಖ ನೊಡತೊಡಗಿದ್ದಳು. ಗಂಡನನ್ನು ಮೀರಿ ಬೆಳೆದ ಭಾವದ ಕಣ್ಣುಗಳನ್ನು ಆನಂದನೆಡೆಗೆ ಹರಿಸಿದ್ದಳು.

ನಿನಗ ಯಾರ ಆಗ ಅಂದ್ರ ಸುಮ್ಮನ ಮನಿಯಾಗ ಇರು ಅಂತೇನಿ ಆದರೂ ಕೇಳ ವಲ್ಲಿ. ಯಾ ಪಂಕ್ಷನ್ನು ಬ್ಯಾಡ ಅಧ್ಯಕ್ಷಗಿರಿಯೂ ಬ್ಯಾಡ” ಆನಂದ ಕಡ್ಡಿ ತುಂಡು ಮಾಡಿದಂತೆ ನುಡಿದಿದ್ದ.
“ ನಿಮಗ ನಾ ಮುಂದ ಬರುದು ಇಷ್ಟ ಇಲ್ಲ. ನಾ ದೊಡ್ಡವಳಾಗುದೂ ಇಷ್ಟ ಇಲ್ಲ. ಒಟ್ಟಗೇ ನಾ ಬೆಳಿವುದು ನಿಮಗ ಬೇಕಾಗಿಲ್ಲ ರೀ …..ಬರೀ ಮನಿಯಾಗ ಇರಬೇಕು ಹಗಲಿನಹನ್ನೆರಡ ತಾಸ ನಿಮ್ಮ ಸೇವಾ ನಿಮ್ಮ ಮಕ್ಕಳ ಸೇವಾ ಮಾಡಕೋತ ಇರಬೇಕ ನೋಡ್ರೀ ಅದು ನಿಮಗ ಇಷ್ಟ ಆಕೈತಿ” ಎಂದು ಅಳುತ್ತಾ ವಾದಿಸಿದ್ದಳು. ರೋಧಿಸಿದ್ದಳು. ಕಣ್ಣು ಕೆಂಪಗೆ ಮಾಡಿ ಆನಂದನನ್ನು ನೋಡಿದ್ದಳೂ ಕೂಡಾ.
ಅವಿರತಾ ಇನ್ನೂ ನೀ ಜಗತ್ತ ನೋಡಿಲ್ಲ ಬಿಡ ಅದನ್ನ ಏನ ಮಾಡತಿ” ಎಂದು ಮುಂದೆ ಮಾತನಾಡದೇ ಹಾರಿಕೆ ಉತ್ತರ ಕೊಟ್ಟಿದ್ದನು. ಬಹುಷ್ಯಾ ಇಂತಾ ಸಮಸ್ಯ ಬರತಾವಂತ ಅವರ ಉದ್ದೇಶ ಇರಬೇಕು. ಎಷ್ಟೊಂದು ಖರೇವ ಯೋಚನಾ ಮಾಡಿದ್ರಲ್ಲ ಅವ್ರು ಎಂದು ಯೋಚಿಸುತಲಿದ್ದಳು.
ಎಡರು ತೊಡರು ಬರ್ತಾವಂತ ಜೀವಿಸದೇ ಇರಲಿಕ್ಕೆ ಆಗುತ್ತಾ.
ಜೀವನ ಅಂದರ ಒಳ್ಳೆಯದು ಕೆಟ್ಟದ್ದು ಇದ್ದದೇ. ಒಳ್ಳೆದು ಇಟ್ಟಗೊಂಡು ಕೆಟ್ಟದ್ದು ಬ್ಯಾಡ ಅಂದರ ನಡದೀತೇ…? ಬಂದ ಸಮಸ್ಯಗಳನ್ನೆದುರಿಸಿ ಮುನ್ನುಗುವುದೇ ಬದುಕು ಅಲ್ಲೇನು..?
ಬರ್ಲಿ ಏನ ಬರತೈತೋ ಅದನ್ನ ಎದುರಿಸಿದರಾತು ಎಂದು ಧೈರ್ಯ ತಾಳಿದಳು.
ಮೊಬೈಲ ನೋಡುತ್ತಾ ಕುಳಿತ ಅವಳು ಮತ್ತೊಮ್ಮೆ ಕಂಪಿಸಿದಳು.. ಧೈರ್ಯ ಸಾಲದೇ. ಹಂಗಾದರ ಈ ಸಮಸ್ಯಯನ್ನು ಬೇರು ಸಹಿತ ಕಿತ್ತೆಸೆಯಲು ಏನು ಉಪಾಯ.
ನಂಬರ ತೆಗೆದು ಹಾಕಲೇ.. ಛೇ…ಎಂದು ವಿಚಾರಿಸಿದಳು. ಆದರೆ ಮನಸ್ಸು ಒಪ್ಪಲಿಲ್ಲ.
ಈತನಿಗೆ ಹೆದರಿ ನಂಬರ ತೆಗಿಬೇಕಾ?
ಉಂ ಹುಂ ಇಲ್ಲಪ್ಪ ಇಲ್ಲ.
ಇಲ್ಲದೇ ಇದ್ದರ ಈ ರಗಳಿ ತಪ್ಪಿದ್ದಲ್ಲ
ಅಯ್ಯೋ…. ರಗಳೆಯೇ….? ಹೌದ ಅಲ್ಲ… ಏನು ಮಾಡುವುದು
ಸರಿ ಸರಿ ನಂಬರ ತೆಗೆವುದೇ ಒಳ್ಳೆ ದಾರಿ.
ಅಂದರ ಎಲ್ಲಾ ತಣ್ಣಗಾಗತೈತಿ. ನಿಶ್ಚಿಂತಿ. ಅಕೈತಿ.
ಡಿಲೀಟ ಮಾಡಬೇಕು. ಅದೇನೋ ಖರೇ.
ಆದರ ತುಂಬಿದ ಮನೆಯಲ್ಲಿ ಬಿದ್ದ ಸಣ್ಣ ಬೆಂಕಿ ಕಿಡಿ, ವೈರಿ,ಮತ್ತು ಆನೆಕಟ್ಟಿನ ಕಟ್ಟಡದಲ್ಲಿ ಬಿಟ್ಟ ಸಣ್ಣ ಬಿರುಕುಗಳನ್ನು ನಿರ್ಲಕ್ಷಿಸಬಾರದಲ್ಲ. ಅವುಗಳನ್ನ ಬುಡ ಸಹಿತ ಹುಡುಕಿ ಬೇರು ಕಿತ್ತೆಸೆಯಬೇಕು. ಇಲ್ಲದ ಇದ್ದರ…..!!!! ಅಪಾಯ ತಪ್ಪಿದ್ದಲ್ಲ.
ಈ ಅಮೀನುದ್ದೀನ ಯಾರು ನನಗ ಗೊತ್ತಿಲ್ಲ. ಸರಿಯಾಗಿ ವಿಚಾರಿಸಿ ನಿರುಮ್ಮಳವಾಗಬೇಕು. ಈತ ಮತ್ತೆ ಮತ್ತೆ ಇದೇ ರೀತಿ ಮೆಸ್ಸೇಜ ಹಾಕ್ಕೋಂತ ನಡದರ ನನ್ನ ಗತಿ ಗಂಗವ್ವನಕೂಡೀತ……ಇದನ್ನ ಬಗೀಹರೀಸಿಕೋ ಬೇಕು ಅಂದರ ಅವಗ ಅಂಜಿಕಿ ಹಾಕಬೇಕ. ಬರೇ ಅಂಜಿಕಿ ಅಲ್ಲ. ಇನ್ನೊಮ್ಮೆ ನನ್ನ ಉಸಾಬರಿಗೆ ಬರದಂಗ ಬೆದರಿಕಿ ಹಾಕಬೇಕು ಎಂದಳು.
“ನೇಮ, ನೇಮ್’,… ಅಂತ ನೇಮ ಕೇಳಾಕ ಹತ್ಯಾನಲ್ಲ.
ನನ್ನ ನೇಮ ತಗೊಂಡು ಈತ ಏನ ಮಾಡತ್ತಾನೆ. ಒಂದಕ್ಕೊಂದು ಸಂಬಂಧ ಇಲ್ಲದ್ದು. ಮಕ್ಕಳ ಪಠ್ಯೆದಲ್ಲಿಯ ಗುಂಪಿಗೆ ಸೇರದ ಪದದಂತೆ ಹೊರಗುಳಿ ಶಬ್ದ. ಆ ರಾತ್ರಿಯಲ್ಲಿ ಆ ಅಕ್ಷರಗಳು ಅಸಂಭದ್ದವಾಗಿ ಕಂಡವು.ಅವುಗಳನ್ನು ಜೋಡಿಸಲಾರದ ಅವಳು ಯೋಚಿಸುತ್ತಿದ್ದಂತೆ ಏನೋ ತಿಳಿದಂತೆ ಗೆಲುವಾದಳು.
‘ಆಯ್ ಯ್ಯಾಮ ಎಸ್ಪಿ.’ ಉತ್ತರಿಸಿದಳು.ಎಸ್.ಪಿ ಎಂದರೆ ಆತ ನಡುಗಿ ಹೋಗುತ್ತಾನೆ ಎಂದೂ ತನ್ನ ಉಸಾಬರಿಗೆ ಆತ ಬರುದಿಲ್ಲ ಅಂತ ಅವಳು ತಿಳಿದುಕೊಂಡಿದ್ದಳು.
ಆದರೆ
ಮತ್ತೆ ಅದೇ ಟೆಕ್ಸಿನಲ್ಲಿ ‘ಎಸ್.ಪಿ…..?’ ಎಂದು ಪ್ರಶ್ನಿಸಿತು ಮರುತ್ತರವಾಗಿ.ಆ ದನಿಯಲ್ಲಿ ಯಾವುದೇ ಭಯ ಭೀತಿ ಇರಲಿಲ್ಲ. ಮೇಲಾಗಿ ತಡಮಾಡದೇ ಆ ಶಬ್ದ ಓಡಿಬಂದಿತ್ತು.
ಅವನ ಮರು ಪ್ರಶ್ನೆ ಓದಿದ ಅವಳು ಕಂಗಾಲಾಗಿ ಹೋದಳು.
ಯಾವುದೇ ಅಂಜಿಕೆಯಿಲ್ಲದೇ ಅದೇನ ದೊಡ್ಡಮಾತ ಅನ್ನುವ ರೀತಿಯಲ್ಲಿ ಪ್ರಶ್ನಿಸುತ್ತದೆಯಲ್ಲ – ಈ ಶಬ್ದ.
ಎಸ.ಪಿ. ಅಂದರೆ ಹುಡುಗಾಟಿಕೆನಾ……ಇವನಿಗೆ !?
ಅವಳ ಬತ್ತಳಿಕೆಯಲ್ಲಿ ಇದ್ದದ್ದೇ ಅದೇ ಒಂದು ಅಸ್ತ್ರ. ಅದೇ ದೊಡ್ಡದು. ಅದೇ ಘನವಾದದ್ದು ಆಗಿತ್ತು ಅವಳಿಗೆ ಅದನ್ನು ಒಮ್ಮೆಲೆ ವೀರಾವೇಶದಿಂದ ಎಸೆದು ಬೀಗಿದ್ದಳು. ವಾವ್..ವಾವ..ಎಂದು ತನ್ನ ಕಾಲರನ್ನು ತಾನೇ ತೀಡಿಕೊಂಡಿದ್ದಳು. ಈಗ ಅದೇ ‘ಟುಸ್ಸ’ ಆಗಿತ್ತು. ಮುಂದ ಮಾಡುವುದು ಏನು ? ನಾರುವ ಈ ಹೆಣವನ್ನ ಸಾಗಿಸುವುದೆಂತು. ಇದನ್ನ ಇಟಗೊಳ್ಳಾಕ ಬರಂಗಿಲ್ಲ ಸಾಗಿಸ್ಸೇನಿನಂದರ ಗಟ್ಯಾಗಿ ನೆಲಹಿಡಿದೈತಿ..? ದೇವರ ನೀನ ದಾರಿ ತೋರೋ..! ಎಂದು ದೇವರಲ್ಲಿ ಮೊರೆಯಿಟ್ಟಳು.
ತಾನು ಪೋನಾಯಿಸಿದ್ದು ಎಸ್.ಪಿಗೆ ಎಂಬ ಭಯವೇ ಇಲ್ಲವಲ್ಲ ಈತನಿಗೆ ಆತನ ಮೊಂಡುತನ ಅವಳಲ್ಲಿ ಕಹಿಯನ್ನು ಹುಟ್ಟಿಸಿತು. ಥೂ ಗಂಡಸಾ… ಎನ್ನುತ್ತ್ತಿದ್ದ ಅವಳು ಮತ್ತೆ ತನ್ನ ಹುದ್ದೆಯನ್ನು ಸಮರ್ಥಿಸಿಕೊಳ್ಳಲು
‘ಎಸ್’ ಎಂದಳು.
‘ಯುವರ್ ನೇಮ’ ಮತ್ತೆ ಅತ್ತಿಂದ ಅದೇಪ್ರಶ್ನೆ.ಅವಿರತ ಅವನ ಹುಡುಗಾಟಿಕೆಗೆ ಕಂಗಾಲಾದಳು.
ಅಕ್ಷರಷಹ ಈಗ ಅವಳು ಸೋತಳು.
ಅವಳು ಕೈ ಕಾಲುಗಳು ಥರಥರ ಎನ್ನತೊಡಗಿದವು. ಹಣಿಯ ಮೇಲೆ ಬೆವರ ಹನಿಗಳು ಇನುಕಿದವು. ಅವಳು ಮೈ ಮೇಲೆ ಹಿಡಿತ ತಪ್ಪಿದಂತಾದಳು.
“ ಹಾವಿಗೆ ಏಟು ಕೊಟ್ಟಷ್ಟೂ ಮೇಲಕ್ಕೆ ಬುಷ್ ಬುಷ್…ಎಂದು ಪುಟಿವ ದೃಶ್ಯ ಅವಳ ಕಣ್ಮುಂದೆ ಬಂದಂತೆ ಅವಳು ಮತ್ತಷ್ಟೂ ಸುಸ್ತಾದಳು. ‘ಉಸ್’ ಎಂದು ಕುರ್ಚಿಯ ಮೇಲೆ ಕುಸಿದಳು. ತಡ ರಾತ್ರಿಯ ಕಾರಣಗಳಿಂದ ಅವಳ ಕಣ್ಣುಗಳು ಧಣಿದು ಸುಸ್ತಾಗಿ ಮುಚ್ಚಿಕ್ಕೊಳತೊಡಗಿದವು. ಹಾಲಿನಲ್ಲಿ ವಿದ್ಯುತ ದೀಪ ಉರಿಯುತ್ತಿತ್ತು. ಗಂಡ ಆನಂದದ್ರಿಸುತ್ತಿದ್ದವ ಮಗ್ಗುಲನ್ನು ಬದಲಿಸಿ ತನ್ನ ಕೈಯನ್ನು ಅವಿರತಳ ಮೇಲೆ ಚೆಲ್ಲಿದ. ಆದರೆ ಅವಿರತಳಿಲ್ಲದ ಆ ಕೈ ನೆಲಕ್ಕೆ ಅಪ್ಪಳಿಸಿ ನೋವಾಯಿತು. ಆನಂದ ನಿದ್ರೆಯಲ್ಲಿದ್ದವನು ಕಣ್ಣು ತರೆದು ನೋಡಿದ.ಅವಿರತಳು ಕುರ್ಚಿಯಲ್ಲಿ ಒರಗಿದ್ದಳು.ಅವಳನ್ನು ನೋಡಿ ಸಿಡಿಮಿಡಿಗೊಳ್ಳುತ್ತಾ
‘ ಇಕಿಗೆ ಓದಾಕ ಬರಿಯಾಕ ಹೊತ್ತು ವ್ಯಾಳೆ ಗೊತ್ತಿಲ್ಲ.ರಾತ್ರ್ಯಾಗನೂ ಓದಾಕ ಕೂಡತಾಳ.’ ಎನ್ನುತ್ತಾ ರಗ್ಗನ್ನು ಹಿಡಿದು ಜಗ್ಗುತ್ತಿದ್ದವನಿಗೆ ಮೊಬೈಲನಲ್ಲಿ ಟೆಕ್ಸಟ ಹೊಳೆವುದು ಕಂಡಿತು.
‘ಅಲಾ…. ಇವ್ನ….!,ಮೊಬೈಲ ಬ್ಯಾರೆ ಚಾರ್ಜಗೆ ಹಚ್ಯಾಳ…! ಚಾರ್ಜ ಫುಲ್ ಆದ್ರ ಏನ ಗತಿ…!?
ಏನ್ ಹೆನ್ಮಗಳೋ ಏನೋ….ಮಾರಾಯ್ರಾ….!! ಹೆದರಕಿನ ಇಲ್ಲ ಇಕಿಗೆ.” ಎಂದು ಗೊಣಗಿಕೊಳ್ಳುತ್ತಾ ಕೈಯಲ್ಲಿಯ ರಗ್ಗ ಜಾಡಿಸಿ ಒಗೆಯುತ್ತಾ ಮೊಬೈಲನತ್ತ ಬಂದ ಆನಂದ. ಚಾರ್ಜರ ಆಫ್ ಮಾಡಿ ಮೊಬೈಲನಿಂದ ಚಾರ್ಜರನ್ನು ಬಿಡಿಸುತ್ತಿದ್ದಂತೆ ಮೆಸ್ಸೇಜೊಂದು ಮತ್ತೆ ಮಿಂಚಿ ಮಾಯವಾಯಿತು. ಆ ಮೆಸ್ಸೆಜನ್ನು ಬೆನ್ನಟ್ಟಿದ ಆನಂದ ಟೆಕ್ಸ ತೆಗೆದು ಓದತೊಡಗಿದ.
ಆನಂದನ ಮುಖದಲ್ಲಿ ಪ್ರಶ್ನೆಗಳ ಗೆರೆಗಳು ಎದ್ದವು.ಯಾವಾತ ಈತ. ಆಂ….ಏನಿದು ವಿಸ್ಯ….! ಆತನಿಗೆ ಈಕಿ ನಂಬರ ಹೆಂಗ ಸಿಕ್ಕಿತು.ಅವ್ವಿ ಕೊಟ್ಟಳಾ…! ಅಲಾ ಇವ್ನ .. ಮೈಯಲ್ಲಿ ಕಿಚ್ಚು ಹೊತ್ತಿಕೊಂಡಿತೋ. ಅವಿರತಳತ್ತ ನೋಡಿದ ಆತನ ಕಣ್ಣುಗಳಲ್ಲಿ ಕಣ್ಣು ಸುಟ್ಟು ಹೋಗೋ ಹಾಗೆ ಬೆಂಕಿ.
ಏನಿದು ಶಬ್ದಗಳ ಚೆಲ್ಲಾಟ….!!??
ಏನರ ಕಣ್ಮುಚ್ಚಾಲಿ ಆಟ ನಡಿಯಾಕ ಹತ್ತೇತೇನು.? ಆತನ ಮೈಯಲ್ಲಿ ಆವೇಶ ಒಮ್ಮೆಲೆ ಬಂದು ಕೈಯಲ್ಲಿ ಹತಾರ ಹಿಡಿಯಲೇ…ಎಂದು ಆಕ್ರಂಧಿಸಿ ತನ್ನ ಬಲಗಾಲಿನಿಂದ ನೆಲ ಒದ್ದ. ಅವಿರತಳನ್ನು ನೋಡಿದ.
ಅವಳ ಮುಖ ಮುಗ್ದವಾಗಿ ಕಂಡಿತು. ಹೌದು ಹೌದು ಆಕಳ ಮಾರ್ರ್ಯಾಕಿ..? ಅಲ್ಲ ಅಲ್ಲ. ವ್ಯಾಘ್ರನ ಮಾರ್ರ್ಯಾಕಿ. ಶೋಗ ಹಾಕ್ತಿ…? ನನ್ನ ಮುಂದ ನಡಿವುದಿಲ್ಲ. ನಿನ್ನ ಸೋಗು. ಹತಾರ ….ಹತಾರ ಎಲ್ಲಿ ಐತಿ…..??
ಅಯೋ ಹತಾರಕ್ಕ ಒಂದ ನಿಮಿಷ. ಆಮೇಲ ನಾ ಎನ ಮಾಡಿದರೂಣೂ ಅವ್ವಿ ತುಂಡು ದೇಹ ಕೂಡಸಾಕ ಬರುದಿಲ್ಲ.
ಒಮ್ಮೆ ಮನಸಿಗೆ ಬಂದದ್ದನ್ನ ಹತ್ತಾರು ಸಲ ಯೋಚನ ಮಾಡಿ ಮುಂದ ಹೆಜ್ಜಿ ಇಡಬೇಕು ಅಂತ ಗೆಳೆಯ ಹೇಳಿದ ಮಾತು ನೆನಪಿಗೆ ಬಂದು ಅನಂದ ಸ್ವಲ್ಪು ನಿಧಾನಕ್ಕ ಇಳಿದನು.
ಇವಳು ಸಂಭಾವಿತಳೆಂದು ತಿಳಿದಿದ್ದೆ ನಾನು.ಇವಳು ಹೀಗೂ ಇರುವಳಾ….ಅಯ್ಯೋ…….ನಾನೇ ನಂಬಿ ಕೆಟ್ಟನೇನೋ……? ಎಂದು ಪ್ರಲಾಪಿಸಿದ. ಹೆಂಗಸರನ್ನು ನಂಬಲೇ ಬಾರದು ಮಾರಾಯಾ. ಹಿರಿಯರು ಹೇಳಿದ್ದು ಸುಳ್ಳಾಗಲಿಲ್ಲ ನೋಡು. ಕುದುರೆ ನೆಲೆ ಗೊತ್ತಾಗೊಲ್ಲ………!! ?? ಆದರ…..ಅವಿರತ
ಅವಳ ಮಾತು …ಅವಳ ಪ್ರೀತಿ, ಅವಳ ನಡತೆ… ನಾನು ಸ್ವತಹ ನನ್ನ ತಂಗಿಯರಲ್ಲೂ ಕಾಣಲಾರೆ. ಮೊನ್ನೆ ದವಾಕಾನೆಯಲ್ಲಿದ್ದಾಗ……ಯ್ಯಾಕ್ಸಿಡೆಂಟಿನಾಗ ರಕ್ತ ಹರಿದು ಹೋದ ನನಗ ರಕ್ತ ಎಲ್ಲಿಯೂ ಸಿಗಲಿಲ್ಲ. ತಮ್ಮ ಓ ಪೊಜಿಟಿವ ಇದ್ದರೂ ಕೊಡಲಿಲ್ಲ. ಕೊನೆಗೆ ಕೊಟ್ಟವಳು,ಅವಿರತ . ಇದೇನಿದು ಒಂದಕ್ಕೊಂದು ತಾಳ ಹೊಂದವಲ್ಲದಲ್ಲ. ಇದೆಲ್ಲಾ ಸುಳ್ಳೇ…. ಇವಳ ಕೈತುತ್ತು ಅದೂ ಸುಳ್ಳಾ ?? ಇವಳು ತೀಡುವ ಬೆನ್ನ ನೇವರಿಕೆಗಳು, ನನ್ನ ತಲೆಗೂದಲು ಮುದ್ದಿಸುವ ಪ್ರೀತಿ….ಇದೂ ಸುಳ್ಳಾ…..!!
ಅವಳಿಗೆ ಇಂತಹದೊಂದು ಮುಖ ಐತೇನ…?
……………..,
ನಾನು ಕಂಡಿರಲಿಲ್ಲ.
ಎಂದು ತಲೆ ಹಿಡಿದುಕೊಂಡು ನಿಂತನು. ಒಂದೆರಡು ಕ್ಷಣಗಳು ಮೌನದಲ್ಲಿ ಜಾರಿದವು. ಆತನು ಕಣ್ಣು ಪಿಳಿಕಿಸಿದನು. ಏನೋ ಹೊಳೆದಂತಾಯಿತು. ಆನಂದ ಸಮಾಧಾನ ತಂದುಕೊಳ್ಳುತ್ತಾ- ‘ಹೆಸರು ಹೇಳತೇನಿ ಸ್ವಲ್ಪು ನಿಲ್ಲು….!!’ ಎನ್ನುತ್ತಾ ಆ ಅಪ್ಲೋಡ ನಂಬರನ್ನು ಹುಡುಕಿ ಕಾಲ ಮಾಡಿದನು.
‘ಹಲೋ…..ಹಲೋ……’ಆನಂದ ಕೂಗಿದ.
ಆತನ ಹೆಣ್ಣು ದನಿ ಕೇಳಿ ಅಮೀನುದ್ದೀನ ಹುಚ್ಚಾದನೋ…..!!??
‘ಹಲೋ..ಹಲೋ……ನಾನು ಅಮೀನುದ್ದೀನ’ ಅತ್ತಿಂದ ಕಾತರದ ದನಿ.
‘ರೀ …ಏನು ಅಂದ್ರೆ….ನಿಮಗೆ ನನ್ನ ಹೆಸರು ಬೇಕು ತಾನೆ…??’ ಆನಂದನ ಮಾತಿನಲ್ಲಿ ನಾಚಿಕೆ ತುಂಬಿತ್ತು.
“ ಹಾಂ……ಪ್ಲೀಜ….” ಅತ್ತಿಂದ ಅದೇ ಬೇಡಿಕೆಯ ಮಾತು.
“ಏನೂ ಅಂದ್ರೆ ……ಹೇಳ್ಳಾ…………??
ಏನೂ….ಅಂದ್ರೆ……ಹೇಳ್ಳಾ…………??’ ಆನಂದ ವೈಯ್ಯಾರದಿಂದ ಕೇಳಿದ.
“ ಹೆಸರೇ ಇಷ್ಟು ತಡವಾದರೆ ….ಮುಂದೆ ಹೆಂಗ ಗತಿ..??” ಅಮೀನುದ್ದೀನ ಚಡಪಡಿಸುತ್ತಲಿದ್ದ.
‘ಸೈ…….ನಾಜ. ಮತ್ತೆ ಇನ್ನೇನು ಬೇಕುರಿ ನಾನೀಗಲೇ ರೆಡಿ.’ ಆನಂದ ಸಂಭಾಷಣೆಯಲ್ಲಿ ಮಗ್ನನಾಗಿದ್ದ.
‘ನಾನು …ನಾಳೆ ಹೇಳ್ತೆನಿ ಇಂದು ಇಷ್ಟು ಸಾಕು.” ಅಮೀನುದ್ದೀನ ಕುರಿಗೆ ಬಲೆ ಹಾಕಿದ ತೃಪ್ತಿಯಲ್ಲಿ ಬೀಗಿದ.
“ ಛಿ ಹೋಗಿಯಪ್ಪ, ನಿಮ್ಮ ದನಿ ಎಷ್ಟು ಸಿಹಿಯಾಗಿದೆ.
ನಾನೊಮ್ಮೆ…….!ಎಂದನು ಆನಂದ.
ಹೌದಾ,…! ? ಈಗ ಸಾಧ್ಯಾನಾ…?, ಅಯ್ಯೋ…. ಅಲ್ಲಾ…..ಅದೆಷ್ಟು ಬೇಗ ಪ್ರತ್ಯಕ್ಷನಾಗಿಬಿಟ್ಟಿಯೊ…!…..ನಿನ್ನ ಮಹಿಮೆ ಅಪಾರವಾದದ್ದು….ನಿನಗ ಅಲ್ಲಾಬ್ಬಕ್ಕ ಬೆಳ್ಳಿ ಕುದುರಿ ತಪ್ಪದ ಮಾಡಿಸಿ ಕೊಡತೇನಿ.’ ಅತ್ತ ಅಮೀನುದ್ದೀನ ಒದ್ದಾಡುತಲಿದ್ದ.
‘ಪ್ಲೇಸ ಹೇಳಿ……’ ಆನಂದ ಮುನ್ನುಗ್ಗಿದ.
‘ಸರ್ಕಾರಿ ದವಾಖಾನಿ ಸರ್ಕಲ ಆಗಬಹುದಾ…..?’ ಅಮೀನುದ್ದೀನ ಭಯದಿಂದ ನುಡಿದ.
‘ಯಸ್, …ಭಯ ಬೇಡ ಒಂದು ನಿಮಿಷದಲ್ಲಿ, ಎನ್ನುತ್ತಾ
ಅವಿರತಳ ಕಡೆಗೆ ನೋಡಿದ.ಅವಳು ದಣಿದಂತೆ ಗಾಢನಿದ್ರೆಯಲ್ಲಿದ್ದಂತೆ ಕಂಡಳು. ಗೋಡೆಯಲ್ಲಿ ಗಡಿಯಾರ ಒಂದನ್ನು ದಾಟುತಲಿತ್ತು. ಆನಂದ ಆ ರಾತ್ರಿಯಲ್ಲಿ ಹೊರ ನಡೆದ.

ಆನಂದ ಮುಖಕೆ ಮುಚ್ಚಿದ ಬುರ್ಖಾತೆಗೆದಾಗ ಆನಂದನ ಕಾಲ ಕೆಳಗೆ ಅಮೀನುದ್ದೀನನ ಕೈ ಒದ್ದಾಡುತಲಿತ್ತು. ಅಮೀನುದ್ದೀನ ಕೈಯನ್ನು ಬಿಡಿಸಿಕೊಳ್ಳಲು ಜಗ್ಗಿಕೊಂಡಷ್ಟು ಆನಂದ ಕಾಲನ್ನು ಬಾರವಾಗಿ ಒತ್ತುತ್ತಿದ್ದ. ಕೆಳಗೆ ಡಾಂಬರಿನ ಕಪ್ಪು ಕಡಿ ಕೈಗೆ ಚುಚ್ಚಿ ಚುಚ್ಚಿ ಅಂಗೈ ಹರಿದು ರಕ್ತ ಚಿಮ್ಮತೊಡಗಿತು. ಅಯ್ಯೋ…..ರಕ್ತ ಕೈ ಉರಿತಾ ಇದೆ ಸರ್ಕಲ ದೀಪದಲ್ಲಿ ದವಾಖಾನ ಮುಂದೆ ಬೆಳೆದ ನಿಂತ ಹೆಮ್ಮರ ಮಬ್ಬು ಬೆಳಕಿನಲ್ಲಿ ಮುಸುಕು ಹಾಕಿದಂತೆ ‘ಇದು ನಿನಗೆ ಬೇಕಾಗಿತ್ತಾ….!!’ ಎಂದು ನುಡಿದಂತೆ ಅವನಿಗೆ ಭಾಸವಾಯಿಂತು.
ತಾನೇನು ಮಾಡಿದೆ.. ಆಡಾಡತ ಹಾಳ ಬಾವಿ ಬಿದ್ದಂಗ ಆತಲ್ಲ. ಆದದ್ದೂ ಅಲ್ಲಾ….ಹೋದದ್ದೂ ಅಲ್ಲಾ. ಸುಮ್ಮನ ಕುಂದರಲಿಲ್ಲಲ್ಲಾ ಅಲ್ಲಾ…… …?’ಎಂದು ದಿಕ್ಕು ದಿಕ್ಕಿಗೆ ಕಣ್ಣು ಬಿಡುತ್ತಿದ್ದ. ಆಗಸದಲ್ಲಿ ಚುಕ್ಕೆಗಳು ಅದೇನನ್ನೋ ತಮ್ಮ ತಮ್ಮಲ್ಲೇ ಮಾತನಾಡಿಕ್ಕೊಳ್ಳುತ್ತಿದ್ದಂತೆ ಅಮೀನುದ್ದೀನನ ನೋಡಿ ನಕ್ಕಂತೆ ಆತನಿಗೆ ಭಾಸವಾಯಿತು.
‘ಸಾಕಲ್ಲವೇ..ಹೆಸರು.’ ಆನಂದ ಪುನರುಚ್ಚರಿಸಿ ನಿರಾಳನಾದ.